• search
For Quick Alerts
ALLOW NOTIFICATIONS  
For Daily Alerts

  ಕಿರಿಯ ಗೆಳೆಯ ವಿಕ್ರಮ್ ಬರೆದ ಬೃಹತ್ ಗ್ರಂಥ

  By Super
  |
  ಕಳೆದ ಸೆಪ್ಟೆಂಬರ್‌ನಲ್ಲಿ ಶಿಕಾಗೋದಲ್ಲಿ ನಡೆದ ಐದನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸರ್ವರ ಪ್ರಶಂಸೆಗೆ ಪಾತ್ರವಾಗಿದ್ದ ಮತ್ತು ಎಸ್ಎಲ್ ಭೈರಪ್ಪ ಅವರಿಂದ ಬಿಡುಗಡೆಯಾಗಿದ್ದ 28ರ ತರುಣ ವಿಕ್ರಮ್ ಸಂಪತ್ ಅವರು ಬರೆದಿರುವ The Splendours of Royal Mysore: The Untold Story of the Wodeyars ಪುಸ್ತಕವನ್ನು ಡಾ. 'ಜೀವಿ' ಕುಲಕರ್ಣಿ ಇಲ್ಲಿ ಪರಿಚಯಿಸಿದ್ದಾರೆ.

  ***

  ಶಿಕಾಗೋ ಸಮ್ಮೇಲನ ಮುಗಿಯಿತು. ಅದರ ನೆನಪುಗಳು ಮುಗಿಯಲಿಲ್ಲ. ಅಲ್ಲಿ ನಾ ಕಂಡ ಹಳೆಯ ಗೆಳೆಯರು ಇನ್ನಷ್ಟು ಸಮೀಪ ಬಂದರು, ಹೊಸ ಗೆಳೆಯರು, ಕೆಳೆಯರು, ಎಳೆಯರು ಹೊಸಕ್ಷಿತಿಜ ತೋರಿಸಿದರು. ಹೊಸ ಮಿತ್ರರಲ್ಲಿ ನನಗೆ ಹೆಚ್ಚು ಪ್ರೀತಿಗೆ ಪಾತ್ರನಾದವನೆಂದರೆ 28 ವರ್ಷದ ತರುಣ ಲೇಖಕ ವಿಕ್ರಮ ಸಂಪತ್. ನನ್ನ ಕಿರಿಯ ಮಗನಿಗಿಂತ ಏಳು ವರ್ಷ ಚಿಕ್ಕವ. ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ನಾವಿಬ್ಬರೂ ಸಂಧಿಸಿದೆವು. ನನ್ನ ಎಲ್ಲ ಗ್ರಂಥಗಳನ್ನು ಅವನಿಗೆ ಕಾಣಿಕೆಯಾಗಿ ಕೊಟ್ಟೆ. ತಾನು ಕೂಡ ತನ್ನ ಭಾರವತ್ತಾದ ಗ್ರಂಥ ನನಗೆ ಕೊಟ್ಟು, ಓದಿರಿ, ಪತ್ರ ಬರೆಯಿರಿ. ಅಂದ. ನಾನು ಬಹುವಚನದಲ್ಲಿ ಸಂಬೋಧಿಸಿದಾಗ, ಸರ್, ನೀವು ನನ್ನನ್ನು ಏಕವಚನದಲ್ಲೇ ಕರೆಯಿರಿ ಎಂದ ಸೌಜನ್ಯದಿಂದ ನುಡಿದ.

  ಅವನ ಪುಸ್ತಕ ಓದಿ ನಾನು ಪತ್ರ ಬರೆದಿದ್ದೆ: "ನೀನು ಎಳೆಯನಾಗಿದ್ದಾಗ ಟಿಪ್ಪುನ ಬಗ್ಗೆ ಇದ್ದ ಟಿ.ವಿ.ಧಾರವಾಹಿ ನೋಡಿ, ಅದರಲ್ಲಿ ಚಿತ್ರಿಸಿದ ಮೈಸೂರು ಅರಸರ ಹೀನಾಯವಾದ ಚಿತ್ರಣ ಕಂಡು ಬೇಸತ್ತು, 15 ವರ್ಷಗಳವರೆಗೆ ಮೈಸೂರು ಒಡೆಯರ ಇತಿಹಾಸ ಅಭ್ಯಾಸಮಾಡಿ, ಸಂಶೋಧಿಸಿ, ಒಂದು ಪುಸ್ತಕ ಬರೆದಿರುವುದಾಗಿ ಹೇಳಿರುವೆ. ನಿನ್ನ ಪುಸ್ತಕ ನೋಡಿದಾಗ ನನಗೆ ಮಹರ್ಷಿ ಶ್ರೀಅರವಿಂದರ ನೆನಪಾಯಿತು. ಅರವಿಂದರು ಸ್ವಾತಂತ್ರ್ಯ ಸೇನಾನಿಯಾಗಿ ದುಡಿದು, ಕ್ರಾಂತಿಕಾರಿಗಳಾಗಿ, ಮುಂದೆ ಪಾಂಡಿಚೇರಿಗೆ ತೆರಳಿದರು. ಅಲ್ಲಿ ಅವರು ಮಿರಾ ರಚರ್ಡ್ಸ್ ಅವರ ಸಹಕಾರದಿಂದ 1914ರಲ್ಲಿ ಆರ್ಯ ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. (ಅದು ಆರುವರೆ ವರ್ಷ ನಡೆಯಿತು). ಅದರಲ್ಲಿ ಅವರು ಏಕಕಾಲಕ್ಕೆ ಎಂಟು ಅಂಕಣ ಪ್ರಾರಂಭಿಸಿದ್ದರು. ಅವು ಪ್ರತ್ಯೇಕ ಪುಸ್ತಕಗಳಾಗಿ ನಂತರ ಪ್ರಕಟಗೊಂಡವು. ಅದರಲ್ಲಿ ಲೈಫ್ ಡಿವೈನ್(ದಿವ್ಯ ಜೀವನ), ಸಿಂಥೆಸಿಸ್ ಆಫ್ ಯೋಗ(ಯೋಗಸಮನ್ವಯ), ದಿ ಫ್ಯೂಚರ್ ಆಫ್ ಪೋಯಟ್ರಿ(ಭವಿಷತ್ ಕಾವ್ಯ), ಎಸ್ಸೇಜ್ ಆನ್ ಗೀತಾ (ಗೀತಾ ವ್ಯಾಖ್ಯಾನ) ಮೊದಲಾದವು ಇದ್ದವು. ಅದರಲ್ಲಿ ಒಂದು ಫೌಂಡೇಶನ್ ಆಫ್ ಇಂಡಿಯನ್ ಕಲ್ಚರ್(ಭಾರತೀಯ ಸಂಸ್ಕೃತಿಯ ಬುನಾದಿ) ಎಂಬುದೂ ಇತ್ತು. ಈ ಪುಸ್ತಕ ಬರೆಯಲು ಕಾರಣ ಏನಿತ್ತು ಗೊತ್ತೇ? ಇಂಗ್ಲಂಡ್‌ನಲ್ಲಿ ಡ್ರಾಮಾ ಕ್ರಿಟಿಕ್(ನಾಟಕಗಳ ವಿಮರ್ಶಕ) ಎಂಬ ಹೆಸರು ಪಡೆದ ವಿಲಿಯಂ ಆರ್ಚರ್ ಬರೆದ ಒಂದು ಲೇಖನ. ಅದರಲ್ಲಿ ಅವನು ಭಾರತೀಯರಿಗೆ ಒಂದು ಸಂಸ್ಕೃತಿ ಇಲ್ಲ, ಅವರು ಬಾರ್ಬೇರಿಯನ್ನರು(ಅನಾಗರೀಕರು) ಎಂದು ಬರೆದಿದ್ದ. ಅವನಿಗೆ ಉತ್ತರಿಸಲು ಶ್ರೀಅರವಿಂದರು ಲೇಖನಗಳ ಮಾಲೆಯನ್ನೇ ಬರೆದರು. ಮುಂದೆ ಅದು 500 ಪುಟಗಳ ಬೃಹತ್ ಗ್ರಂಥವಾಯಿತು. ವಿಲಿಯಂ ಆರ್ಚರ್ ಎಡಿನ್‌ಬರೋ ವಿಶ್ವವಿದ್ಯಾಲದದ ಎಂ.ಎ. ಪದವೀಧರ. ಇಬ್ಸೆನ್‌ನ ನಾಟಕ ದಿ ಪಿಲ್ಲರ್ಸ್ ಆಫ್ ಸೊಸೈಟಿ ಇಂಗೀಷಿಗೆ ಅನುವಾದಿಸಿದ್ದ. ಪತ್ರಕರ್ತನಾಗಿದ್ದ, ಬರ್ನಾರ್ಡ ಷಾನ ಮಿತ್ರನಾಗಿದ್ದ. ಒಳ್ಳೆಯ ನಾಟಕ ವಿಮರ್ಶಕನೆಂದು ಹೆಸರು ಗಳಿಸಿದ್ದ. ಅವನು ಭಾರತೀಯರನ್ನು ಟೀಕಿಸಿ ಬರೆದದ್ದು ಶ್ರೀಅರವಿಂದರ ಕೋಪಕ್ಕೆ ಕಾರಣವಾಗಿತ್ತು. ನೀನು ಕೂಡ ನಿನ್ನ ಕೋಪವನ್ನು ಸಕಾರಾತ್ಮಕವಾಗಿ ಬಳಸಿ ಒಂದು ಬೃಹತ್ ಗ್ರಂಥವನ್ನೇ ರಚಿಸಿರುವೆ. ನಿನಗೆ ಅಭಿನಂದನೆ" ಎಂದಿದ್ದೆ.

  Vikram Sampathವಿಕ್ರಂ ಸಂಪತ್ ಅವರು ಬಿಟ್ಸ್ ಪಿಲಾನಿ ವಿದ್ಯಾರ್ಥಿ. ಅಲ್ಲಿ ಬಿ.ಇ.ಇಲೆಕ್ಟ್ರಾನಿಕ್ಸ್ ಪದವಿ ಗಳಿಸಿ ನಂತರ ಗಣಿತದಲ್ಲಿ ಮಾಸ್ಟರ್ಸ್ ಡಿಗ್ರಿ ಗಳಿಸಿದರು. ಮಂಬೈಯ ಎಸ್.ಪಿ.ಜೈನ್ ಇನ್‌ಸ್ಟಿಟ್ಯೂಟ್‌ನಿಂದ ಎಂಬಿಎ ಪಡೆದರು. ಅವರ ವಿಶೇಷ ಪರಿಣತಿ ಫೈನಾನ್ಸ್(ಹಣಕಾಸು) ವಿಷಯ. ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಬ್ಯಾಂಕೊಂದರಲ್ಲಿ ಕೆಲಸ. ಅವರ ವೃತ್ತಿ ದಕ್ಷಿಣ ಧ್ರುವ, ಆದರೆ ಪ್ರವೃತ್ತಿ ಉತ್ತರ ಧ್ರುವ, ಸಂಗೀತ, ಸಾಹಿತ್ಯ. ಸಂಗೀತದಲ್ಲಿ ಕಚೇರಿ ನಡೆಸುವಷ್ಟು ತರಬೇತಿ, ಶಾರೀರ ಪಡೆದಿದ್ದಾರೆ. ಲೇಖನಗಳನ್ನೂ ಬರೆಯುತ್ತಿದ್ದರು. ಹನ್ನೆರಡು ವರ್ಷದ ಬಾಲಕನಾಗಿದ್ದಾಗ ಟಿ.ವಿ.ಯಲ್ಲಿ ಆಗ ಬರುತ್ತಿದ್ದ, ಭಗವಾನ್ ಎಸ್.ಗಿಡ್ವಾನಿಯವರ ಕಾದಂಬರಿಯ ಮೇಲೆ ಆಧಾರಿತವಾದ The Sword of Tippu Sulatan ಧಾರಾವಾಹಿ ನೋಡುತ್ತಿದ್ದರು. ಅದರಲ್ಲಿ ಮೈಸೂರೊಡೆಯರನ್ನು ವಿದೂಷಕರಂತೆ ಚಿತ್ರಿಸಿದ್ದನ್ನು ಕಂಡು ಬೇಸರಗೊಂಡು ಮೈಸೂರು ಇತಿಹಾಸದ ಅಧ್ಯಯನದಲ್ಲಿ ತೊಡಗಿದರು. ಸಂಬಂಧಿಸಿದ ಇತಿಹಾಸ ಗ್ರಂಥಗಳನ್ನು ಪರಿಶೀಲಿಸಿ, ಅರಮನೆ, ವಸ್ತುಸಂಗ್ರಹಾಲಯ ಸಂದರ್ಶಿಸಿ, ವಿದ್ವಾಂಸರನ್ನು ಸಂಪರ್ಕಿಸಿ, ಅನ್ಯ ಆಕರ ಗ್ರಂಥಗಳನ್ನು ಓದಿ ಬೃಹತ್ ಗ್ರಂಥವನ್ನೇ ರಚಿಸಿದರು. ಪುಟಗಳು: 17+728+ 82 (199 ಅಪೂರ್ವ ಕಪ್ಪು-ಬಿಳಿ ಹಾಗೂ ವರ್ಣ ಛಾಯಾಚಿತ್ರಗಳು). ಗ್ರಂಥದ ಹೆಸರು: The Splendours of Royal Mysore: The Untold Story of the Wodeyars ಇದನ್ನು ದೆಹಲಿಯ ರೂಪಾ ಅಂಡ್ ಕಂಪನಿಯವರು ಪ್ರಕಾಶನಗೊಳಿಸಿದ್ದಾರೆ.

  ಈ ಗ್ರಂಥದಲ್ಲಿ ಮೈಸೂರಿನ 600 ವರ್ಷಗಳ ಇತಿಹಾಸವಿದೆ. 1339ರಲ್ಲಿ ಪ್ರಾರಂಭಗೊಂಡ ಈ ಒಡೆಯರ ಕಥನ, ಮಧ್ಯೆ ಸುಮಾರು 40 ವರ್ಷಗಳ ಕಾಲ ಹೈದರ ಹಾಗೂ ಟೀಪು ಸುಲ್ತಾನರಿಂದ ರಾಜ್ಯ ಕಳೆದುಕೊಂಡಿದ್ದರೂ, ಮತ್ತೆ ಬ್ರಿಟಿಶರಿಂದ ಮರಳಿ ಪಡೆಯಿತು. ಈ ಮನೆತನದ ಸಾಧನೆ ಹಾಗೂ ಸಿದ್ಧಿಗಳನ್ನಿಲ್ಲಿ ಚಿತ್ರಿಸಲಾಗಿದೆ. ಕರ್ನಾಟಕ ರಾಜ್ಯದ ಸ್ವರ್ಣಮಹೋತ್ಸವದ ವರ್ಷ ಈ ಪುಸ್ತಕ ಬೆಳಕು ಕಂಡಿತು. ಸುವರ್ಣ ಕರ್ನಾಟಕದ ಸವಿ ನೆನಪಿಗೆ ತಮ್ಮದೊಂದು ವಿನಮ್ರ ಕಾಣಿಕೆ ಇದು ಎಂದು ಲೇಖಕರು ಹೇಳಿಕೊಂಡಿದ್ದಾರೆ. ಇದಕ್ಕೆ ಆಗ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಮುನ್ನುಡಿ ಬರೆದಿದ್ದಾರೆ. ಪ್ರಸಿದ್ಧ ಇತಿಹಾಸಜ್ಞರಾದ, ಕರ್ನಾಟಕ ಗಝೆಟಿಯರ್‌ನ ಸಂಪಾದಕರಾಗಿದ್ದ ಡಾ| ಸೂರ್ಯನಾಥ ಕಾಮತ ಅವರು ಪ್ರಸ್ತಾವನೆ ಬರೆದಿದ್ದಾರೆ. ಇತಿಹಾಸ ಸಂಶೋಧನೆಯಲ್ಲಿ ವಿಶೇಷ ಅನುಭವ ಹಾಗೂ ಪರಿಣತಿ ಇಲ್ಲದಿದ್ದರೂ ವಿಷಯದ ಮೇಲಿನ ಪ್ರೀತಿಯಿಂದ ಶ್ರಮವಹಿಸಿ ದೊಡ್ಡ ಸಾಧನೆ ಮಾಡಿದ ಯುವಪ್ರತಿಭೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಸಂಪತ್ ಅವರ ಶ್ರಮಕ್ಕೆ ಪ್ರಶಸ್ತಿಯನ್ನೇ ನೀಡಿದ್ದಾರೆ. ಅವರು ಬರೆಯುತ್ತಾರೆ : Vikram Sampath has done some fresh churning, taken pains, collected unknown or not so known facts on various aspects of Mysore's history. His presentation is lucid and smooth. His love for the dynasty has not prevented him from telling us about the not-so-bright aspects, wherever necessary. His straying off from his regular professional path is welcome, and I congratulate him for this mammoth effort!

  ಈ ಗ್ರಂಥದ ಬಿಡುಗಡೆ ಕಳೆದ ವರ್ಷ ರಾಜಭವನದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ನೆರವೇರಿಸಿದರು. ಮಹಾರಾಜಕುಮಾರಿ ಮೀನಾಕ್ಷೀದೇವಿಯವರು ಅತಿಥಿಗಳಾಗಿ ಆಗಮಿಸಿದ್ದರು. ಈ ಪುಸ್ತಕದ ವಾಚನ, ಪರಿಚಯ ಮುಂತಾದ ಕಾರ್ಯಕ್ರಮಗಳು ಮೈಸೂರು, ಹೈದ್ರಾಬಾದ, ಕೊಲ್ಕತ್ತ, ದೆಹಲಿ ಮುಂತಾದೆಡೆ ನಡೆದವು. ಇಂಗ್ಲೆಂಡಿನಲ್ಲಿ ನಡೆದ ಕನ್ನಡ ಬಳಗದ ರಜತ ಮಹೋತ್ಸವದಲ್ಲಿ, ಶಿಕಾಗೋದಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಲನದಲ್ಲಿ ಈ ಗ್ರಂಥದ ಅಂತಾರಾಷ್ಟ್ರೀಯ ಬಿಡುಗಡೆ ಸಮಾರಂಭ ನಡೆಯಿತು.

  ಸೆಪ್ಟೆಂಬರ್‌ನಲ್ಲಿ ಮುಂಬಯಿಯಲ್ಲಿ ಈ ಗ್ರಂಥವನ್ನು ಲಾಂಛ್ಮಾಡುತ್ತಿದ್ದಾರೆ, ನೀವು ಅಮೇರಿಕೆಯಿಂದ ಮರಳಿ ಬರುತ್ತೀರಾ? ಎಂದು ಕೇಳಿ ಸಂಪತ್ ನನಗೆ ಬರೆದಿದ್ದರು. ನಾನು ಅಕ್ಟೋಬರ್ 21ಕ್ಕೆ ಮಂಬೈಗೆ ಮರಳುತ್ತೇನೆಂದು ತಿಳಿಸಿದ್ದೆ. ಕಾರಣಾಂತರಗಳಿಂದ ಆ ಕಾರ್ಯಕ್ರಮ ವಿಳಂಬಗೊಂಡಿತು. ಈ ತರುಣ ಮಿತ್ರನ ಪುಸ್ತಕ ಮಂಬೈ ಮಹಾನಗರದಲ್ಲಿ ಲಾಂಛ್ ಆಗುತ್ತಿರುವಾಗ ಪಾಲುಗೊಳ್ಳುವ ಅವಕಾಶ ನನಗೆ ದೊರೆಯುತ್ತಿದೆ ಎಂಬ ಸಂತೋಷ ನನಗೆ.

  ಸ್ಥಳ : ಕ್ರಾಸ್‌ವರ್ಡ್ ಬುಕ್ ಸ್ಟೋರ್, ಮೊಹಮ್ಮದ್ ಭಾಯಿ ಮ್ಯಾನ್ಶನ್,
  ಕೆಂಪ್ಸ್ ಕಾರ್ನರ್ (ಫೈಓವರ್ ಕೆಳಗೆ) ಎನ್.ಎಸ್.ಪಿ.ಮಾರ್ಗ ಮುಂಬಯಿ-26
  ದಿನ : ಶುಕ್ರವಾರ, 24, ಅಕ್ಟೋಬರ್, 2008.
  ಸಮಯ : ಸಂಜೆ 6.30
  ಅಧ್ಯಕ್ಷತೆ : ಜಸ್ಟಿಸ್ ಬಿ.ಎನ್.ಶ್ರೀಕೃಷ್ಣ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  G.V. Kulkarni talks about Vikram Sampath's The Splendours of Royal Mysore: The Untold Story of the Wodeyars, which was released in Chicago Convention.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more