ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಚಕರಲ್ಲಿ ಅಂಕಣಕಾರರ ಅರಿಕೆ-ಮನೋಗತ!

By Super
|
Google Oneindia Kannada News

Dr.G.V. Kulakarni
ಎಪ್ಪತ್ತರ ಹರೆಯದಲ್ಲಿರುವ ಜೀವಿ ಕುಲಕರ್ಣಿಯವರ ಬರೆಯುವ ಉತ್ಸಾಹ ಇಪ್ಪತ್ತರ ಯುವಕರನ್ನೂ ನಾಚಿಸುವಂಥದ್ದು. ದಟ್ಸ್ ಕನ್ನಡಕ್ಕಾಗಿ ಕಳೆದ ಮೂರು ವರುಷಗಳಿಂದ ಅಂಕಣಕಾರರಾಗಿ ಸಾಹಿತ್ಯದೌತಣವನ್ನು ಉಣಬಡಿಸುತ್ತಿರುವ ಜೀವಿಯವರು ಕಳೆದ ಹದಿಮೂರು ವರ್ಷಗಳಿಂದ ಪತ್ರಿಕಾರಂಗದಲ್ಲಿ ತಾವು ನಡೆದುಬಂದ ಹಾದಿಯ ಬಗ್ಗೆ ಓದುಗರಿಗೆ ಇಲ್ಲಿ ಅರಿಕೆ ಮಾಡಿಕೊಂಡಿದ್ದಾರೆ. ಹಾಗೆಯೇ ಓದುಗರ ನಾಡಿಮಿಡಿತವನ್ನು ಅರಿಯುವ ಪ್ರಯತ್ನವನ್ನೂ ಮಾಡಿದ್ದಾರೆ.

ಅಂಕಣಕಾರ : ಡಾ|'ಜೀವಿ' ಕುಲಕರ್ಣಿ, ಮುಂಬೈ

ಶಿಕಾಗೋ ಅಕ್ಕ ಸಮ್ಮೇಳನ ಕುರಿತಂತೆ ಕಳೆದ ವಾರ ನಾನು ಬರೆದ ಲೇಖನಕ್ಕೆ ವಾಚಕರು ಪತ್ರಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ನನ್ನಿಂದ ಎರಡು ತಪ್ಪುಗಳಾಗಿವೆ. ಮೊದಲನೆಯದಾಗಿ ನಾನು ಪ್ರವಾಸದಲ್ಲಿ ಇದ್ದುದರಿಂದ ನನಗೆ 'ದಟ್ಸ್ ಕನ್ನಡ'ದಲ್ಲಿ ಪ್ರಕಟವಾದ ಐದನೆಯ ವಿಶ್ವಕನ್ನಡ ಸಮ್ಮೇಳನದ ವರದಿ, ವಿಶ್ಲೇಷಣೆಗಳನ್ನು ಓದಲು ಸಾಧ್ಯವಾಗಿರಲಿಲ್ಲ. ಎರಡನೆಯದಾಗಿ ನಾನು ಮುಂಬೈ ಕನ್ನಡ ದಿನ ಪತ್ರಿಕೆ 'ಕರ್ನಾಟಕ ಮಲ್ಲ'ದಲ್ಲಿ ಬರೆಯುತ್ತಿರುವ ಅಂಕಣ ಲೇಖನವನ್ನೇ ನನ್ನ ಜೀವನ ಮತ್ತು ಸಾಹಿತ್ಯ ಅಂಕಣಕ್ಕೆ ರವಾನಿಸಿಬಿಟ್ಟೆ. ಕರ್ನಾಟಕ ಮಲ್ಲದಲ್ಲಿ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಏನೂ ಸುದ್ದಿ ಪ್ರಕಟವಾಗುತ್ತಿಲ್ಲ. ಹೀಗಾಗಿ ಆ ಪತ್ರಿಕೆಗೆ ವಿವರವಾಗಿ ಬರೆಯುತ್ತೇನೆ. ಅಲ್ಲಿ ಬರೆದದ್ದು ಇಲ್ಲಿ ಬರೆಯುವುದು ಕೆಲಸಲ ಅಪ್ರಸ್ತುತವಾದೀತು ಎಂದು ನನಗೆ ಯಾಕೋ ಹೊಳೆಯಲಿಲ್ಲ.

ನನ್ನ ಎರಡನೆಯ ಲೇಖನದಲ್ಲಿ ಮುಖ್ಯಮಂತ್ರಿಗಳ ಭಾಷಣದ ಸಾರಾಂಶ ಬರೆದಿದ್ದೆ. ಆದರೆ ಆ ಭಾಷಣ, ದಟ್ಸ್ ಕನ್ನಡದಲ್ಲಿ ಅಂದೇ ಪ್ರಕಟವಾಗಿತ್ತು ಎಂಬುದೂ ನನಗೆ ತಿಳಿದಿರಲಿಲ್ಲ. ಮಿತ್ರ ಶ್ರೀವತ್ಸ ಜೋಶಿಯವರು ವಾಚಕರ ಗೊಂದಲವನ್ನು ಬಗೆಹರಿಸಲು ನಾನು ಮಲ್ಲ ಪತ್ರಿಕೆಗೆ ಬರೆಯುತ್ತಿರುವ ಅಂಕಣದ ಪ್ರಸ್ತಾಪ ಮಾಡಿದರು. ಅವರು ನನಗೇಕೆ ನೇರವಾಗಿ ಬರೆಯದೆ ಕಾಮೆಂಟ್ಸ್ ವಿಭಾಗದಲ್ಲಿ ಬರೆದುದು ನನಗೆ ಬೇಸರವಾದರೂ, ನಂತರ ಅವರು ಬರೆದದ್ದು ಸರಿ ಎನ್ನಿಸಿತು.

ವಾಚಕರಿಗೆ ನನ್ನ ಅಂಕಣ ಲೇಖನದ ಹಿನ್ನೆಲೆ ಬಗ್ಗೆ ಸ್ವಲ್ಪದಲ್ಲಿ ಬರೆದು ತಿಳಿಸುವುದು ಅವಶ್ಯವೆನಿಸುತ್ತದೆ. ಮುಂಬೈ ಕನ್ನಡ ದಿನಪತ್ರಿಕೆ 'ಕರ್ನಾಟಕ ಮಲ್ಲ' ಸಂಸ್ಥಾಪಕ ಸಂಪಾದಕರಾಗಿದ್ದ ಮಲ್ಲಿಕಾರ್ಜುನಯ್ಯನವರು 1995ರಲ್ಲಿ ಒಂದು ಅಂಕಣ ಪ್ರಾರಂಭಿಸಲು ನನ್ನನ್ನು ಕೇಳಿಕೊಂಡರು. ನಾನು ಒಪ್ಪಿದೆ. ಮುಂಬೈಗೆ ಬಂದು ಪ್ರಾಧ್ಯಾಪಕ ಕೆಲಸ ಪ್ರಾರಂಭಿಸುವ ಮೊದಲು, ನಾನು ಧಾರವಾಡದಲ್ಲಿ ಜನತಾ ಲಾ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಎರಡು ವರ್ಷ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಧಾರವಾಡ ಪ್ರತಿನಿಧಿಯಾಗಿ ಕೆಲಸ ಮಾಡಿದ್ದೆ. ಮಂಬೈಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಇಪ್ಪತ್ತು ವರ್ಷ ಆ ಪತ್ರಿಕೆಗೆ 'ಮುಂಬೈ ಪತ್ರ' ಅಂಕಣ ಬರೆದೆ. ಮುಂಬೈ ದಿನಪತ್ರಿಕೆಗೆ ಬರೆಯುವ ನನ್ನ ಹೊಸ ಅಂಕಣ ಎಲ್ಲ ವಿಷಯ ಒಳಗೊಂಡಿರಬೇಕು ಎಂದು ಬಯಸಿ 'ಜೀವನ ಮತ್ತು ಸಾಹಿತ್ಯ' ಎಂಬ ಹೆಸರು ಕೊಟ್ಟೆ. ಬೇಂದ್ರೆಯವರಿಗೆ ಈ ಹೆಸರು ಪ್ರಿಯವಾಗಿತ್ತು. ಹಿಂದೆ, ಟೈಮ್ಸ್ ಪತ್ರಿಕೆಯಲ್ಲಿ 'ಪ್ರೇಮ್ ಅದಿಬ್'ಎಂಬ ಹೆಸರಿನಲ್ಲಿ ಸಂಪಾದಕ ಶಾಮಲಾಲ್ ಬೆರೆಯುತ್ತಿದ್ದ 'ಲೈಫ್ ಅಂಡ್ ಲೆಟರ್‍ಸ್' ಅಂಕಣವನ್ನು ಬೇಂದ್ರೆ ಯವರು ಬಹಳ ಮೆಚ್ಚುತ್ತಿದ್ದರು. "ಹೀಗೆ ಬರೆಯಬೇಕು" ಎಂದು ನಮಗೆ ಹೇಳುತ್ತಿದ್ದರು. ಅದಕ್ಕೆಂದೇ 'ಜೀವನ ಮತ್ತು ಸಾಹಿತ್ಯ' ಶೀರ್ಷಿಕೆ ಆರಿಸಿಕೊಂಡೆ.

ಅಂಕಣ ಪ್ರಾರಂಭಿಸಿದ ಕೆಲವೇ ತಿಂಗಳಲ್ಲಿ ವರ್ಷ 1996 ಬಂತು. ಅದು ಬೇಂದ್ರೆಯವರ ಜನ್ಮಶತಾಬ್ದಿ ವರುಷ. ಅವರ ಸಮೀಪದ ಶಿಷ್ಯನಾಗಿಯೂ ನಾನು ಅವರ ಬಗ್ಗೆ ವಿಶೇಷ ಬರೆದಿರಲಿಲ್ಲ. ನನ್ನ ಅಂಕಣದಲ್ಲಿ ನಾಲ್ಕು ಲೇಖನ ಬರೆದೆ. ಮಿತ್ರರಿಗೆ ಅದರ ಪ್ರತಿ ಕಳಿಸಿದೆ. ಅವರೆಲ್ಲ ಮೆಚ್ಚಿದರು. 'ಪ್ರತಿ ಪರ್ವ ರಸೋದಯಃ -ಎಂಬಂತಿವೆ ನಿನ್ನ ಲೇಖನಗಳು, ವರ್ಷ ಮುಗಿಯುವವರೆಗೆ ಮುಂದುವರಿಸಬಹುದು' ಎಂದು ಸಲಹೆ ನೀಡಿದರು ಮಿತ್ರ ವಾಮನ ಬೇಂದ್ರೆ. ನಲವತ್ತು ವಾರ ಮುಂದುವರಿಸಿದೆ. ಬರೆಯುವಾಗ ನನ್ನ ನೆನಪು, ಜೊತೆಗೆ ನನ್ನ ಡೈರಿಯಲ್ಲಿಯ ಟಿಪ್ಪಣಿ, ಬಳಸಿದ್ದೆ. ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಡಾಕ್ಟರ್ ವಾಸು ಪುತ್ರನ್ ಅವರಿಗೆ 'ನಾಕು ತಂತಿ' ಹಿಂದಿಯಲ್ಲಿ ಅನುವಾದಿಸಲು ಜ್ಞಾನಪೀಠ ಸಮಿತಿಯಿಂದ ಆಮಂತ್ರಣ ಬಂದಿತ್ತು. ಅನುವಾದ ಕಾರ್ಯಕ್ಕೆ ನನ್ನ ಸಹಾಯ ಬಯಸಿದರು, ನನ್ನನ್ನು ಸಹ ಅನುವಾದಕನನ್ನು ಮಾಡಲು ಅಪ್ಪಣೆ ಪಡೆದರು.

ಕೆಲವು ಕವಿತೆಗಳು ನನಗೂ ಅರ್ಥವಾಗಲಿಲ್ಲ. ನಾವು ಧಾರವಾಡಕ್ಕೆ ಹೋದೆವು, ಮೂರು ದಿನ ಬೇಂದ್ರೆಯವರ ಸಾನ್ನಿಧ್ಯದಲ್ಲಿದ್ದು ಅವರ ಸಲಹೆ ಪಡೆದು ಅನುವಾದಿಸಿದೆವು. ಕೆಲವು ಕವಿತೆಗಳ ವಿವರಣೆ ಟಿಪ್ಪಣಿ ಮಾಡಿಕೊಂಡೆವು, ಅವರ ಅನುಮತಿ ಪಡೆದು ರೆಕಾರ್ಡ್ ಮಾಡಿಕೊಂಡೆವು. ಅವನ್ನೆಲ್ಲ ಪ್ರಥಮಸಲ ಬಳಸಿ ಲೇಖನಗಳನ್ನು ಬರೆದೆ. 'ಒಂದೇ ಕರ್ನಾಟಕ' ಪದ್ಯದ ಬಗ್ಗೆ ಲೇಖನ ಬರೆಯುವಾಗ ನೆನಪಷ್ಟೇ ಸಾಕಾಗಲಿಲ್ಲ. ಧಾರವಾಡಕ್ಕೆ ಹೋಗಿ 'ಜಯಂತಿ' ಪತ್ರಿಕೆಯಲ್ಲಿ (ಜುಲೈ 1938) ಪ್ರಕಟವಾದ ಕಾರಂತರ ಲೇಖನ 'ಕರ್ನಾಟಕದಲ್ಲಿ ಹಿಟ್ಲರ್'ಓದಿದೆ. ಅದರಿಂದ ಸ್ಫೂರ್ತರಾಗಿ ಬೇಂದ್ರೆಯವರು 'ಹರ್ ಬಂಡರ್' ಎಂಬ ಕಾವ್ಯನಾಮದಿಂದ ಕರ್ನಾಟಕ ಗೀತ ಬರೆದಿದ್ದನ್ನು ನನಗೆ ಹೇಳಿದ್ದರು.

ಸಂಪಾದಕ ಬೆಟಗೇರಿ ಕೃಷ್ಣಶರ್ಮರು ಜರ್ಮನ್ ವೇಷದಲ್ಲಿ ಬೇಂದ್ರೆಯವರ ವ್ಯಂಗಚಿತ್ರ ಬರೆಸಿ ಆ ಪದ್ಯದೊಡನೆ ಪ್ರಕಟಿಸಿದ್ದರು. (ಸೆಪ್ಟೆಂಬರ್, 1938). ಇವೆಲ್ಲವನ್ನು ಫೋಟೋಕಾಪಿ ಮಾಡಿಕೊಂಡು ಮುಂಬೈಗೆ ಮರಳಿ ಬಂದು ಆ ಲೇಖನ ಬರೆದಾಗ ಬೇಂದ್ರೆ ಕಾವ್ಯ ವಿಮರ್ಶಕರೆಲ್ಲ ಅಚ್ಚರಿ ವ್ಯಕ್ತಪಡಿಸಿದ್ದರು. ವಾಮನ ಬೇಂದ್ರೆಯವರು ಇದು ತಮಗೂ ಗೊತ್ತಿರಲಿಲ್ಲ ಎಂದು ಉದ್ಗಾರ ತೆಗೆದರು. ಈ ಲೇಖನಗಳನ್ನೆಲ್ಲ ಒಟ್ಟುಗೂಡಿಸಿ, ಮಿತ್ರ ಕೆ.ಎಸ್.ಶರ್ಮಾ ಅವರ ಸಲಹೆಯ ಮೇರೆಗೆ ಪೀಠಿಕೆಯ ಅಧ್ಯಾಯವನ್ನು ಬರೆದು (ಬೇಂದ್ರೆ ಜೀವನ ದರ್ಶನ), ಉಪಸಂಹಾರ ಸೇರಿಸಿ (ಬೇಂದ್ರೆ ಸಿದ್ಧಾಂತ, ಸಂದೇಶ) ನಂತರ ಹರ್ಷವರ್ಧನ ಪ್ರಕಾಶನದಿಂದ ಮಿತ್ರ ಸುರೇಶ ಕುಲಕರ್ಣಿಯವರ ಅಪೂರ್ವ ರೇಖಾ ಚಿತ್ರಗಳನ್ನು ಬಳಸಿ, 'ನಾ ಕಂಡ ಬೇಂದ್ರೆ- ಜೀವನ ಮತ್ತು ಸಾಹಿತ್ಯ' ಎಂಬ ಪುಸ್ತಕ ಪ್ರಕಟಿಸಿದೆ. ಅದನ್ನು ಓದಿ ಡಾ| ಹಾಮಾ.ನಾಯಕ, 'ಒಬ್ಬ ಶಿಷ್ಯ (ತನ್ನ ಗುರುವಿಗೆ) ಇದಕ್ಕಿಂತ ಉತ್ತಮ ಕಾಣಿಕೆ ಕೊಡಲಾರ' ಎಂದು ಬರೆದರು.

ನಂತರ ನನ್ನ ಇನ್ನೊಬ್ಬ ಗುರು ವಿನಾಯಕ ಕೃಷ್ಣ ಗೋಕಾಕರ ಮೇಲೆ ಯೋಜನಾಬದ್ಧವಾಗಿ 66 ಲೇಖನಗಳನ್ನು ಬರೆದೆ. ಅದೇ 'ನಾಕಂಡ ಗೋಕಾಕ- ಜೀವನ ಮತ್ತು ಸಾಹಿತ್ಯ'. (ಈ ಪುಸ್ತಕದ ಬಗ್ಗೆ ಹಾಮಾನಾ ಎರಡು ಪುಟಗಳ ಲೇಖನವನ್ನೇ ಸುಧಾ ಪತ್ರಿಕೆಯಲ್ಲಿ ಬರೆದರು. ಲೇಖನದ ಕೊನೆಗೆ 'ಇಂಥದೊಂದು ಪುಸ್ತಕ ಬರೆದ 'ಜೀವಿ' ಯವರೂ, ಬರೆಸಿಕೊಂಡ ವಿನಾಯಕರೂ ಧನ್ಯರು! ' ಎಂಬ ಉದ್ಗಾರ ತೆಗೆದರು. ಕಳೆದ ಹದಿಮೂರು ವರ್ಷಗಳಲ್ಲಿ 650ರಷ್ಟು ಲೇಖನಗಳನ್ನು ಬರೆದಿದ್ದೇನೆ, ಪ್ರಕಾಶನಕ್ಕೆ ಹತ್ತಾರು ಪುಸ್ತಕಗಳಿಗೆ ಸಾಮಗ್ರಿ ಒದಗಿಸಿದೆ. 'ಬೇಂದ್ರೆ ದರ್ಶನ ಸಂದರ್ಶನ', 'ಬೇಂದ್ರೆ ಸಮಗ್ರ ಕಾವ್ಯ ದರ್ಶನ' ಎಂಬ ಪುಸ್ತಕಗಳು ಅಚ್ಚಿನಲ್ಲಿವೆ. ನನ್ನ ಪ್ರವಾಸ ಲೇಖನಗಳು, ಯೋಗ ಮತ್ತೂ ನಿಸರ್ಗ ಚಿಕಿತ್ಸೆಯ ಬಗ್ಗೆ ಬರೆದ ಲೇಖನಗಳು ಪುಸ್ತಕದ ರೂಪ ತಾಳಿವೆ.

2002ರಲ್ಲಿ ಡೆಟ್ರಾಯಿಟ್‌ನಲ್ಲಿ ನಡೆದ ಎರಡನೆಯ ವಿಶ್ವ ಕನ್ನಡ ಸಮ್ಮೇಳನದಲ್ಲಿ ದಟ್ಸ್ ಕನ್ನಡದ ಸಂಪಾದಕ ಎಸ್ಕೆ.ಶಾಮಸುಂದರ ಅವರ ಪರಿಚಯವಾಯಿತು. ಸಮ್ಮೇಳನದ ಬಗ್ಗೆ ನಾನು ಬರೆದ ಏಳು ಲೇಖನಗಳನ್ನು ಅವರು ಪ್ರಕಟಿಸಿದರು. ಆಗಾಗ ಬರೆಯಲು ಶುರುಮಾಡಿದೆ. ಈಗ ಮೂರು ನಾಲ್ಕು ವರ್ಷಗಳಿಂದ ನಿಯಮಿತವಾಗಿ ಅಂಕಣ ಬರೆಯುತ್ತಿರುವೆ. ಕೆಲಸಲ ಪತ್ರಿಕೆಗಾಗಿ ಬರೆದ ಲೇಖನಗಳನ್ನು ವೆಬ್ ಸೈಟಿಗಾಗಿ ಬಳಸಿದ್ದುಂಟು. ಹೆಚ್ಚಾಗಿ ಪ್ರತ್ಯೇಕವಾಗಿಯೇ ಬರೆದಿರುವೆ. ಇಲ್ಲಿ ಬರೆದದ್ದೆಲ್ಲ ಅಲ್ಲಿ ಬಳಸಬಹುದು, ಆದರೆ ಅಲ್ಲಿ ಬರೆದದ್ದೆಲ್ಲ ಇಲ್ಲಿ ಸರಿಹೊಂದುವುದಿಲ್ಲ. ದಟ್ಸ್ ಕನ್ನಡ ವಾಚಕ ವರ್ಗ ಖಂಡಾಂತರಗಳನ್ನು ವ್ಯಾಪಿಸಿದ್ದು ಅವರ ನಿರೀಕ್ಷೆಗಳೇನು ಎಂಬ ಅರಿವು ನನಗಿದೆ.

ಆಗಾಗ ಮೆಚ್ಚಿ ಪತ್ರ ಬರೆದ, ಕೆಲಸಲ ತಿದ್ದಿಕೊಳ್ಳಲು ಸಲಹೆ ನೀಡಿದ, ವಾಚಕ ವೃಂದಕ್ಕೆ ನಾನು ಸದಾ ಋಣಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X