• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯೋಗಾಸನ ವಿಶಾರದ ಕೆ. ಪಟ್ಟಾಭಿ ಜೋಯಿಸ್

By Staff
|

Yoga expert K. Pattabhi Joisಭಾರತದ ಅತಿ ಉತ್ಕೃಷ್ಟ ಯೋಗಶಿಕ್ಷಕರಲ್ಲೊಬ್ಬರಾದ ಮೈಸೂರಿನ ಪಟ್ಟಾಭಿ ಜೋಯಿಸ್ ಅವರನ್ನು 'ಜೀವಿ' ಕುಲಕರ್ಣಿಯವರು ಇಲ್ಲಿ ಪರಿಚಯಿಸಿದ್ದಾರೆ. ಆಯುರ್ವೇದ ಮತ್ತು ಆಧುನಿಕ ವೈದ್ಯಶಾಸ್ತ್ರಜ್ಞರಿಗೆ ಆಕರ ಗ್ರಂಥವಾಗಿರುವ ಪಟ್ಟಾಭಿ ಅವರು ಬರೆದಿರುವ ಪುಸ್ತಕವನ್ನು ಜೀವಿಯವರು ಮುಂದೆ ಪರಿಚಯಿಸಲಿದ್ದಾರೆ.

***

20ನೆಯ ಶತಮಾನದಲ್ಲಿ ಕರ್ನಾಟಕ ಕಂಡ ಇಬ್ಬರು ಮಹಾನ್ ಯೋಗಪಿತಾಮಹರೆಂದರೆ ಮೈಸೂರಿನ ತಿರುಮಲೆ ಕೃಷ್ಣಮಾಚಾರ್ಯರು ಮತ್ತು ಮಲ್ಲಾಡಿಹಳ್ಳಿಯ ಆಯುರ್ವೇದ-ಯೋಗಗಳ ಸವ್ಯಸಾಚಿ ರಾಘವೇಂದ್ರಸ್ವಾಮಿಗಳು. ಕೃಷ್ಣಮಾಚಾರ್ಯರ ಶಿಷ್ಯರು ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದಿದ್ದಾರೆ. ಮೀಮಾಂಸಾತೀರ್ಥ, ವೇದಾಂತವಾಗೀಶ, ಸಾಂಖ್ಯಯೋಗ ಶಿಖಾಮಣಿ ಇತ್ಯಾದಿ ಬಿರುದಾಂಕಿತ ತಿರುಮಲೆ ಕೃಷ್ಣಮಾಚಾರ್ಯರು ಜಗತ್ತನ್ನೇ ಬೆರಗುಗೊಳಿಸಿದ ನಾಲ್ಕು ಯೋಗಶಿಕ್ಷಕರನ್ನು ತಯಾರಿಸಿದ ಪುಣ್ಯಭಾಜನರಾಗಿದ್ದಾರೆ. ಅವರ ಶಿಷ್ಯರು- ಬಿ.ಕೆ.ಎಸ್.ಅಯ್ಯಂಗಾರ್(ಅವರ ಭಾವ ಮೈದುನ), ಪಟ್ಟಾಭಿ ಜೋಯಿಸ್(ಆಪ್ತ ಶಿಷ್ಯ), ದೇಶಿಕಾಚಾರ್ಯ(ಪುತ್ರ) ಹಾಗೂ ದೇವಿ(ಆಂಗ್ಲ ಶಿಷ್ಯೆ, ಯೋಗಶಿಕ್ಷಕಿ).

ಕೃಷ್ಣಮಾಚಾರ್ಯರ ಬಗ್ಗೆ ಯೋಗ್ಯವಾದ ಗ್ರಂಥ ಇನ್ನೂವರೆಗೆ ಬಂದಿಲ್ಲ. ಅವರ ಜೀವನ ಮತ್ತು ಸಾಧನೆಯ ಬಗ್ಗೆ ಒಂದು ಸುದೀರ್ಘವಾದ ಲೇಖನ ಅಮೇರಿಕೆಯಲ್ಲಿ ಪ್ರಕಟವಾಗುವ ಯೋಗ ಜರ್ನಲ್‌ದಲ್ಲಿ ಬಂದಿತ್ತು. ಅದನ್ನು ಬರೆದವರು ಫರ್ನಾಂಡೋ ಪೇಜಿಸ್ ರುಯಿಝ್ (Fernando Pages Ruiz). ಅದರಲ್ಲಿ ಅಪರೂಪದ ಛಾಯಾಚಿತ್ರಗಳಿದ್ದವು. ನಾನು ಎರಡನೆಯ ಸಲ ಅಮೇರಿಕೆಗೆ ತೆರಳಿದ್ದಾಗ ಕ್ಯಾಲಿಫೋರ್ನಿಯಾದ ಯೋಗ ಪತ್ರಿಕೆಯ ಕಚೇರಿಗೆ ದೂರವಾಣಿಯ ಮೂಲಕ ಸಂಪರ್ಕ ಬೆಳಸಿದ್ದೆ. ಅವರನ್ನು ಸಂಪರ್ಕಿಸಿದ್ದೆ. ಫರ್ನಾಂಡೋ ಅವರಿಗೆ ಒಂದು ಇ-ಮೇಲ್ ಕಳಿಸಿದ್ದೆ. ನಂತರ ಅವರು ಸುದೀರ್ಘವಾಗಿ ನನ್ನೊಡನೆ ದೂರವಾಣಿಯಲ್ಲಿ ಮಾತನಾಡಿದ್ದರು. ಕೃಷ್ಣಮಾಚಾರ್ಯರ ಬಗ್ಗೆ ಮಾಹಿತಿಯನ್ನು ಅವರ ಮಗ ದೇಶಿಕಾಚಾರ್ಯರು ಅಮೇರಿಕೆಯಲ್ಲಿದ್ದಾಗ ಅವರನ್ನು ಸಂಪರ್ಕಿಸಿ ಪಡೆದಿದ್ದರಂತೆ. ಪಾಟ್ಟಾಭಿಯವರನ್ನೂ ಅಮೇರಿಕೆಯಲ್ಲೇ ಸಂದರ್ಶಿಸಿದ್ದರಂತೆ. ಪುಣೆಯಲ್ಲಿದ್ದ ಅಯ್ಯಂಗಾರರೊಂದಿಗೆ ಫೋನಿನಲ್ಲಿ ಸಂಭಾಷಣೆ ನಡೆಸಿದ್ದರಂತೆ. ಅವರು ಅಂದಿದ್ದರು, ಪಟ್ಟಾಭಿಯವರು ಹೆಚ್ಚಾಗಿ ಕನ್ನಡದಲ್ಲೇ ಮಾತನಾಡಿದರು. ಅವರ ಸಹವರ್ತಿಗಳು ಕೆಲಭಾಗ ಅನುವಾದಿಸಿ ಹೇಳಿದರು. ನಿಮಗೆ ಟೇಪು ಕಳಿಸುವೆ, ಅದರಲ್ಲಿ ಹೆಚ್ಚಿನ ಸಂಭಾಷಣೆ ಕನ್ನಡದಲ್ಲಿದೆ. ನೀವು ಕೇಳಿ ವಿವರವಾದ ಟಿಪ್ಪಣಿ ಕಳಿಸಿರಿ. ಮೂವರೂ ಪ್ರಮುಖ ಶಿಷ್ಯರು ಭಾರತದಲ್ಲಿದ್ದಾರೆ.(ದೇಸಿಕಾಚಾರ್ಯರು ಮದ್ರಾಸಿನಲ್ಲಿ,ಅಯ್ಯಂಗಾರರು ಪುಣೆಯಲ್ಲಿ, ಪಟ್ಟಾಭಿಯವರು ಮೈಸೂರಲ್ಲಿ). ನೀವು ಇನ್ನಷ್ಟು ಮಾಹಿತಿ ಅವರಿಂದ ಸಂಗ್ರಹಿಸಲು ಸಿದ್ಧರಿದ್ದರೆ ನಾವಿಬ್ಬರೂ ಸೇರಿ ದೊಡ್ಡ ಗ್ರಂಥ ರಚಿಸಬಹುದು.'' ಎಂದಿದ್ದರು.

ಅಮೇರಿಕೆಯಲ್ಲಿದ್ದಾಗ ಕೆಲವು ಪುಸ್ತಕ ಅಂಗಡಿಗಳಲ್ಲಿ ಪಟ್ಟಾಭಿಯವರ ಪುಸ್ತಕಗಳನ್ನು ನೋಡಿದ್ದೆ. ಅವರ ಅಮೇರಿಕನ್ ಎಡಿಶನ್ ಪುಸ್ತಕಗಳು ಆಕರ್ಷಕವಾಗಿದ್ದವು, ದುಬಾರಿಯಾಗಿದ್ದವು. ಅಮೇರಿಕೆಯಲ್ಲಿ ಪುಸ್ತಕ ಅಂಗಡಿಗಳ ಒಂದು ವೈಶಿಷ್ಟ್ಯವೆಂದರೆ ಅವು ಲೈಬ್ರರಿಯಂತೆ ಕೆಲಸ ಮಾಡುತ್ತವೆ. ನಿಮಗೆ ಇಷ್ಟವಾದ ಪುಸ್ತಕವನ್ನು ನೀವು ಅಲ್ಲಿ ಕುಳಿತು ಓದಬಹುದು, ಟಿಪ್ಪಣಿ ಕೂಡ ಮಾಡಿಕೊಳ್ಳಬಹುದು. ಅವರ ಪುಸ್ತಕವನ್ನೆಲ್ಲ ಓದಿಬಿಟ್ಟಿದ್ದೆ, ಟಿಪ್ಪಣಿ ಕೂಡ ಮಾಡಿಕೊಂಡಿದ್ದೆ. ಪಟ್ಟಾಭಿಯವರನ್ನು ಕಾಣಬೇಕೆಂಬ ಆಸೆ ನನಗೆ ಮೂಡಿದ್ದು ನಾನು ಅಮೇರಿಕೆಯಲ್ಲಿದ್ದಾಗ. ಇದು ವಿಚಿತ್ರ, ಆದರೂ ಸತ್ಯ.

ನನ್ನ ಯೋಗ ಗುರುಗಳಲ್ಲಿ ಒಬ್ಬರಾದ ಬಿ.ಕೆ.ಎಸ್. ಅಯ್ಯಂಗಾರರನ್ನು ಹಲವಾರು ಬಾರಿ ನಾನು ಪುಣೆಗೆ ಹೋದಾಗ ಕಂಡಿದ್ದೇನೆ. ಅವರು ಮುಂಬೈಗೆ ಬಂದಾಗ ನಡೆದ ಒಂದು ಘಟನೆ ನೆಪಾಗುತ್ತದೆ. ದಶಕದ ಹಿಂದೆ ಅಯ್ಯಂಗಾರರು ಇಂಗ್ಲಂಡಿನಲ್ಲಿ ಒಂದು ಮೆಗಾ ಶೋ ಮಾಡಿದ್ದರು. ಸ್ಟೇಜಿನ ಮೇಲೆ ಅಯ್ಯಂಗಾರರು ತಮ್ಮ ನೂರು ಶಿಷ್ಯರೊಡನೆ ಸಾಮೂಹಿಕವಾಗಿ ಯೋಗಾಸನ ಹಾಕಿ ತೋರಿಸಿದ್ದರು. ಅವರ ಮುಂಬೈ ಶಿಷ್ಯರೆಲ್ಲ ಸೇರಿ ಅಂಥದೊಂದು ಮೆಗಾ ಶೋ ಮುಂಬೈಯಲ್ಲಿ ಆಯೋಜಿಸಿದ್ದರು. ಸ್ಥಳ ಮಾಟುಂಗಾದ ಡಾನ್ ಬಾಸ್ಕೋ ಸ್ಕೂಲಿನ ಮೈದಾನ. ಪತ್ರಿಕೆಯಲ್ಲಿ ಅದರ ಸುದ್ದಿ ಓದಿ ನಾನೂ ನೋಡಲು ಹೋದೆ. ನೂರು ರೂಪಾಯಿ ಕೊಟ್ಟರೆ ಎಂಟ್ರಿ ಪಾಸ್ ದೊರೆಯುತ್ತಿತ್ತು. ನಾನು ತಲುಪಿದಾಗ ಎಲ್ಲ ಪಾಸು ಮುಗಿದಿದ್ದವು. ಏನು ಮಾಡಬೇಕೆಂದು ತೋಚದೆ ಗೇಟಿ ಬಳಿ ನಿಂತಿದ್ದಾಗ ಖುದ್ದು ಅಯ್ಯಂಗಾರರು ನನ್ನನ್ನು ನೋಡಿ ಒಳಗೆ ಕರೆದುಕೊಂಡು ಹೋಗಿದ್ದರು.

ಪಟ್ಟಾಭಿಯವರು ಅಯ್ಯಂಗಾರರ ಗುರುಬಂಧುಗಳು. ವಯಸ್ಸಿನಲ್ಲಿ ಅಯ್ಯಂಗಾರರಿಗಿಂತ ಎರಡು ವರ್ಷ ಹಿರಿಯರು. ಮೈಸೂರಲ್ಲಿ ಪಟ್ಟಾಭಿ ಜೋಯಿಸರನ್ನು ಕಾಣುವುದು ಸುಲಭದ ಕೆಲಸವಾಗಿರಲಿಲ್ಲ. ಈಗ ಅವರ ವಿದೇಶ ಪ್ರಯಾಣಗಳು ಕಡಿಮೆಯಾಗಿವೆ. ಅವರಿಗೆ ತೊಂಭತ್ತರ ಮೇಲೆ ವಯಸ್ಸಾಗಿದೆ. ಆದರೂ ಅವರು ಅರವತ್ತರಂತೆ ಕಾಣುತ್ತಾರೆ. ಒಳ್ಳೆಯ ಆರೋಗ್ಯ ಕಾಪಾಡಿಕೊಂಡಿದ್ದಾರೆ. ಅವರ ಮೊಮ್ಮಗ ಒಳ್ಳೆಯ ಯೋಗಶಿಕ್ಷಕನಾಗಿ ತಯಾರಾಗಿದ್ದಾನೆ. ಶಿಷ್ಯರ ಬಳಗವೂ ಅಪಾರ. ವಿದೇಶದಿಂದ ಬಂದ ವಿದ್ಯಾರ್ಥಿಗಳೇ ಹೆಚ್ಚು. ಇವರ ಯೋಗ ಶಾಲೆಯ ಬದಿಯಲ್ಲಿ ಒಂದು ವಿದೇಶೀಯ ವಿದ್ಯಾರ್ಥಿಗಳಿಗೆ ತಂಗಲು ವಸತಿಗೃಹವಿದೆ. ವಿದೇಶದಿಂದ ಬಂದವರು 2-3 ತಿಂಗಳು ಮೈಸೂರಲ್ಲಿದ್ದು ಇವರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡುತ್ತಾರೆ. ಸ್ಥಳೀಯರಿಗಾಗಿ ಬೇರೆ ಕ್ಲಾಸುಗಳು ಪ್ರತ್ಯೇಕವಾಗಿ ಇವೆ. ಪಟ್ಟಾಭಿಯವರನ್ನು ಕಾಣಲು ನಮಗೆ ಸಹಕರಿಸಿದವರು ಮೈಸೂರಿನ ಗಾನ ವಿದುಷಿ ಮತ್ತು ಸಂಸ್ಕೃತ ಪ್ರಾಧ್ಯಾಪಕಿ ಡಾ| ಜಯಶ್ರೀಯವರು. ಅವರು ನಾನು ಅನುವಾದಿಸಿದ ಶ್ರೀನೃಸಿಂಹಸ್ತುತಿಯನ್ನು ರಾಗಮಾಲಿಕೆಯಲ್ಲಿ ಸ್ವರಸಂಯೋಜನೆ ಮಾಡಿದ್ದಾರೆ. ಅದನ್ನು ನಾಯಣಾಮೃತ ಫೌಂಡೇಶನ್ದವರು ಪ್ರಾಯೋಜಿಸಿದ್ದಾರೆ. ಪಟ್ಟಾಭಿಯವರ ವಿದೇಶೀಯ ಯೋಗ ವಿದ್ಯಾರ್ಥಿಗಳು ಸಂಸ್ಕೃತ ಕಲಿಯುವ ಒಲವು ತೋರಿದಾಗ ಅವರನ್ನು ಡಾ| ಜಯಶ್ರೀಯವರ ಮಾರ್ಗದರ್ಶನಕ್ಕೆ ಪಟ್ಟಾಭಿಯವರು ಕಳಿಸುತ್ತಾರೆ. ಪಟ್ಟಾಭಿಯವರನ್ನು ಕಂಡಾಗ ನನಗಾದ ಸಂತಸಕ್ಕೆ ಮೇರೆ ಇರಲಿಲ್ಲ.

ಪಟ್ಟಾಭಿಯವರು ತಮ್ಮ ಗುರುಗಳ ಬಗ್ಗೆ ಹೇಳಿದರು. ಅಯ್ಯಂಗಾರರ ಬಗ್ಗೆ ಕೂಡ ಹೇಳಿದರು. ಅವರು ಪ್ರಥಮತಃ ಸಂಸ್ಕೃತ ವಿದ್ವಾಂಸರು. ಸಂಸ್ಕೃತ ಕಾಲೇಜಿನಲ್ಲಿ ಪಾಠಮಾಡುತ್ತಿದ್ದರು. ಕೃಷ್ಣಮಾಚಾರ್ಯರ ಸಂಪರ್ಕದಿಂದ ಯೋಗಾಭ್ಯಾಸದಲ್ಲಿ ದೀಕ್ಷೆ ಪಡೆದರು, ಪರಿಣತಿ ಪಡೆದರು. ಇಂದು ಭಾರತದ ದೇಶದ ಅತ್ಯಂತ ಪ್ರಸಿದ್ಧ ಯೋಗಶಿಕ್ಷಕರಲ್ಲಿ ಒಬ್ಬರಾಗಿದ್ದಾರೆ. ಅವರೊಂದಿಗೆ ನಾನು ಮತ್ತು ನನ್ನ ಮುಂಬೈ ಸ್ನೇಹಿತರಾದ ಎನ್.ಆರ್.ರಾವ್ ಕಳೆದ ಸಮಯ ಅವಿಸ್ಮರಣೀಯವಾಗಿತ್ತು. ಅವರು ತಮ್ಮ ಎರಡು ಪುಸ್ತಕಗಳನ್ನು ನಮಗೆ ಕೊಟ್ಟರು. ಆ ಪುಸ್ತಕಗಳ ಕಿರು ಪರಿಚಯ ಮಾಡಿದರೆ ಅವರ ಪರಿಚಯವನ್ನು ನಿಜವಾದ ಅರ್ಥದಲ್ಲಿ ಮಾಡಿದಂತಾಗುತ್ತದೆ. 'Touch the book, you touch the author.' ಎನ್ನುತ್ತಾರೆ. ಅವರ ಪುಸ್ತಕದಲ್ಲಿ ಅವರ ವಿಚಾರಗಳು ಹಾಗೂ ಅನುಭವ ಪರಿಪಾಕಗೊಂಡಿವೆ.

ಯೋಗಮಾಲಾ'' ಎಂಬ ಪುಸ್ತಕ ಮೊದಲು 1962ರಲ್ಲಿ ಪ್ರಕಟವಾಯ್ತು. 2005ರಲ್ಲಿ ಅದರ ಎರಡನೆಯ ಮುದ್ರಣ ಹೊರಬಂದಿದೆ. ಈ ಪುಸ್ತಕವನ್ನು ಅವರು ತಮ್ಮ ಗುರುಗಳಾದ ತಿರುಮಲೆ ಕೃಷ್ಣಮಾಚಾರ್ಯರಿಗೆ ಅರ್ಪಿಸಿದ್ದಾರೆ. ಈ ಪುಸ್ತಕಕ್ಕೆ ಆಗ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದ ಎನ್.ಎ.ನಿಕಂ ಅವರು ಮುನ್ನುಡಿ ಬರೆದಿದ್ದಾರೆ. ಅವರು ಹೇಳುತ್ತಾರೆ: "I recommend this little book which is an introduction to the elements of Yoga. Vidvan Pattabhi Jois has explained in simple language the philosophy and discipline of the astanga yoga, based on authentic Sanskrit texts. The Yoga is India's greatest contribution to humanity. The Yoga is an ethics, discipline, and path of spiritual life. Its aim is the purification of the body and mind. It is a perfect way of life."

ಮೈಸೂರು ವಿಶ್ವವಿದ್ಯಾಲಯದ ತತ್ತ್ವಜ್ಞಾನದ ಪ್ರಾಧ್ಯಾಪಕರಾಗಿದ್ದ ಪ್ರೊ. ಎಂ ಯಾಮುನಾಚಾರ್ಯರು ಈ ಪುಸ್ತಕದ ಬಗ್ಗೆ ಬರೆಯುತ್ತಾರೆ: ಈ ಗ್ರಂಥದಿಂದ ಎಲ್ಲರೂ ಪ್ರಯೋಜನವನ್ನು ಹೊಂದಲೆಂದು ಹಾರೈಸುತ್ತೇನೆ. ಇದು ಮುಖ್ಯವಾಗಿ ಆಯುರ್ವೇದ ವಿದ್ಯಾರ್ಥಿಗಳಿಗೆ ಬೇಕಾದುದೆಂದು ವಿಶೇಷವಾಗಿ ಹೇಳಬೇಕಾದುದಿಲ್ಲ. ಮನೋರೋಗ ಚಿಕಿತ್ಸಾ ವಿಧಾನವನ್ನು ವ್ಯಾಸಂಗ ಮಾಡುವ ಆಧುನಿಕ ವೈದ್ಯಶಾಸ್ತ್ರಜ್ಞರಿಗೂ ಈ ಗ್ರಂಥ ಉಪಯೋಗವಾಗಲಿದೆ ಎನ್ನಲು ಅಡ್ಡಿಯಿಲ್ಲ.'' ಈ ಪುಸ್ತಕದ ಮಹತ್ವದ ಅಂಶಗಳನ್ನು ಮುಂದೆ ಪರಿಚಯಿಸುವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more