• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕವಿ ಚೆನ್ನವೀರ ಕಣವಿಯವರಿಗೆ ಎಂಬತ್ತೊಂದು

|

ಕನ್ನಡದ ಅತ್ಯಂತ ಜನಪ್ರಿಯ ಕವಿಗಳಲ್ಲಿ ಒಬ್ಬರಾದ ಚೆನ್ನವೀರ ಕಣವಿಯವರಿಗೆ ಈಗ 81. ಈ ಸಂದರ್ಭಕ್ಕೆ ತಕ್ಕದಾದ ಒಂದು ಸಾಹಿತ್ಯಾಭಿನಂದನೆಯ ಕಾರ್ಯಕ್ರಮ ಕರ್ನಾಟಕದಲ್ಲಿ (ಧಾರವಾಡದಲ್ಲಿ) ನಡೆಯಿತು (6.7.2008). ಅವರ ಮಧುರಚೆನ್ನರ ನೆನಪಿಗೆ' ಎಂಬ ಪದ್ಯದ ಬಗ್ಗೆ ಇಲ್ಲಿ ರಸವಿಮರ್ಶೆಯ ಮಾಡಿ ನಾನು ಒಂದು ರೀತಿಯಿಂದ ನುಡಿ ನಮನ ಸಲ್ಲಿಸುತ್ತಿರುವೆ. - ಜೀವಿ.

ಅಂಕಣಕಾರ : ಡಾ| 'ಜೀವಿ' ಕುಲಕರ್ಣಿ, ಮುಂಬೈ

ಕವಿ ಚೆನ್ನವೀರ ಕಣವಿಯವರು ನವೋದಯಕಾಲದ ಮೂರನೆಯ ತಲೆಮಾರಿನ ಮಹತ್ವದ ಕನ್ನಡ ಕವಿಗಳು. ಕಳೆದ ಆರು ದಶಕಗಳಿಂದ ಅವರು ಕನ್ನಡ ಸಾಹಿತ್ಯ ಸೇವೆಯಲ್ಲಿ, ವಿಶೇಷವಾಗಿ ಕಾವ್ಯಾರಾಧನೆಯಲ್ಲಿ, ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದಾರೆ. ಬೇಂದ್ರೆಯವರು ಅಧುನಿಕ ಕನ್ನಡ ಕಾವ್ಯ ಪರಂಪರೆಯಲ್ಲಿ ಅರಳಿದ ಮೈಸೂರು-ಧಾರವಾಡದ ಎರಡನೆಯ, ಮೂರನೆಯ ಮತ್ತು ನಾಲ್ಕನೆಯ ತಲೆಮಾರಿನ ಪ್ರಮುಖ ಕವಿಜೋಡಿಗಳನ್ನು ಗುರುತಿಸುತ್ತ ಅಡಿಗ-ಗೋಕಾಕ, ಶಿವರುದ್ರಪ್ಪ-ಕಣವಿ, ನಿಸಾರ್-ಕಂಬಾರರ ಹೆಸರನ್ನು ಗುರುತಿಸಿದ್ದಾರೆ. ಶಿವರುದ್ರಪ್ಪನವರು ಇಂದು ರಾಷ್ಟ್ರಕವಿಗಳಾಗಿದ್ದಾರೆ. ಆ ಮಟ್ಟಕ್ಕೆ ಬೆಳೆದುನಿಂತ ಕಣವಿಯವರು ಧಾರವಾಡ ಸೀಮೆಯ ಸೊಗಡು, ಸಿರಿವಂತಿಕೆಯನ್ನು ಪ್ರತಿಧಿಸುವ ಹಿರಿಯ ಕವಿಗಳಾಗಿದ್ದಾರೆ.

ಚೆನ್ನವೀರ ಕಣವಿಯವರು ನವೋದಯ, ನವ್ಯ, ನವ್ಯೋತ್ತರ ಕಾವ್ಯಮಾರ್ಗಗಳನ್ನು ಸಮರ್ಥವಾಗಿ ಪ್ರಯೋಗಿಸಿದರು. ತಮ್ಮ ಕಾವ್ಯದಲ್ಲಿ ಅನನ್ಯ ಅಭಿವ್ಯಕ್ತಿ ನೀಡಿದರು. ಎಲ್ಲ ಸಮಕಾಲೀನ ಸಾಹಿತ್ಯ ಚಳವಳಿಗಳಿಗೆ ಪ್ರತಿಸ್ಪಂದಿಸಿಯೂ ಯಾವುದಕ್ಕೂ ತಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಳ್ಳದೆ ಇರುವುದು' ಅವರ ಕಾವ್ಯಜೀವನದಲ್ಲಿ ಎದ್ದುಕಾಣುವ ವೈಶಿಷ್ಟ್ಯವೆಂದು ವಿಮರ್ಶಕ ಡಾ| ಜಿ.ಎಸ್.ಆಮೂರ್ ಗುರುತಿಸಿದ್ದಾರೆ.

ಕಣವಿಯವರು ಭಾವಜೀವಿ'ಯಾಗಿರುವಂತೆ ಸ್ನೇಹಜೀವಿಗಳೂ ಆಗಿದ್ದಾರೆ. ಧಾರವಾಡದ ಗೆಳೆಯರ ಗುಂಪು' ಸ್ಥಾಪಿಸಿದ ಬೇಂದ್ರೆಯವರಿಗೆ ಸ್ನೇಹವೂ ಒಂದು ಯೋಗವಾಗಿತ್ತು. ವ್ಯಕ್ತಿಗಳ ಮೇಲೆ ಅವರು ಬರೆದಷ್ಟು ಕವಿತೆಗಳನ್ನು (ಸುಮಾರು ನೂರೈವತ್ತು) ಇನ್ನೊಬ್ಬ ಕನ್ನಡ ಕವಿ ಬರೆದಿಲ್ಲ. ಗುರುಹಿರಿಯರು, ಸಮಾನವಯಸ್ಕರು, ಶಿಷ್ಯರು, ಕಿರಿಯರು ಕೂಡ ಅವರ ಕಾವ್ಯಕ್ಕೆ ವಿಷಯವಾಗುತ್ತಾರೆ. ಧಾರವಾಡದ ಕವಿ ಕಣವಿಯವರಿಗೆ ಕೂಡ ಸ್ನೇಹ ಒಂದು ಯೋಗವಾದಂತೆ ತೋರುತ್ತದೆ. ಸುಮಾರು ಐವತ್ತು ವ್ಯಕ್ತಿಗಳ ಬಗ್ಗೆ ಕವನ ಬರೆದಿದ್ದಾರೆ. ಅವುಗಳಲ್ಲಿ ಒಂದು ಕವಿತೆ ಮಧುರಚೆನ್ನರ ನೆನಪಿಗೆ' ಎಂಬುದು. ಒಂದರಂತೆ ಇನ್ನೊಂದು ಕವಿತೆ ಇಲ್ಲ, ಒಂದೊಂದಕ್ಕೂ ಅವರದ್ದೇ ಆದ ಅಂದವಿದೆ. ವಿಶೇಷವಾಗಿ ಸುನೀತದಲ್ಲಿ ವ್ಯಕ್ತಿಗಳ ಮೇಲೆ ಕವಿತೆ ಬರೆದಾಗ, ಬೇಂದ್ರೆಯವರಂತೆ, ಇವರ ಪ್ರತಿಭೆಯೂ ಗರಿಗೆದರುತ್ತದೆ, ಸೂಕ್ಷ್ಮವಾಗಿ ಹೆಚ್ಚಿನ ಕುಸುರಿನ ಕೆಲಸ ಮಾಡುತ್ತದೆ. ವ್ಯಕ್ತಿಯ ನೈಜ ಚಿತ್ರವನ್ನು ಇವರು ಶಬ್ದಗಳಲ್ಲಿ ಮೂಡಿಸುವುದೇ ಒಂದು ವಿಸ್ಮಯ.

Madhurachennaಮಧುರಚೆನ್ನರು (ಹಲಸಂಗಿಯ ಚೆನ್ನಮಲ್ಲಪ್ಪ ಗಲಗಲಿ) ಬೇಂದ್ರೆಯವರ ಗೆಳೆಯರ ಗುಂಪಿನ ಪ್ರಮುಖ ಸದಸ್ಯರು. ಕಾವ್ಯಸಿಂಹಾಸನದ ಪಟ್ಟದ ಮರಿ. ಅಣ್ಣ ಬೇಂದ್ರೆಯವರಿಂದ ತಮ್ಮ ಎಂದು ಕರೆಸಿಕೊಂಡವರು, ಪಡೆದಪ್ಪನಾಗು' ಎಂದು ಹರಸಿಕೊಂಡವರು. ಗೆಳೆಯರ ಗುಂಪಿನ ಇನ್ನೊಬ್ಬ ಪ್ರಮುಖ ಸದಸ್ಯ ಗೋಕಾಕರು ಮಧುರಚೆನ್ನರ ಮೇಲೆ ಒಂದು ದೀರ್ಘ ಕವನವನ್ನು ಬರೆದಿದ್ದಾರೆ. ಅಲ್ಲಿಯ ಒಂದು ಮಹತ್ವದ ನುಡಿ ಹೀಗಿದೆ:

ನಮ್ಮ ಕೆಳೆ ತ್ರಿಮೂರ್ತಿಯಂತೆ

ಮಧ್ಯಮುಖವೆ ನಮ್ಮ ಪ್ರಾಣ

ಎಡಬಲದಲಿ ನನ್ನ ನಿನ್ನ ವಾಣಿ ನುಡಿದವು.

ನನ್ನ ಕೈಯಲಿತ್ತು ಕೊಳಲು

ನಿನ್ನ ಕರದಿ ನಾಗಸ್ವರ

ನಡುಗೈಗಳು ಶಂಖಚಕ್ರಗಳನು ಹಿಡಿದವು.''

(ಕವಿ-ಅನುಭಾವಿ, ಬಾಳದೇಗುಲದಲ್ಲಿ'', ಪುಟ 41)

ಇಲ್ಲಿ ಬೇಂದ್ರೆ-ಗೋಕಾಕ-ಮಧುರಚೆನ್ನರು ತ್ರಿಮೂರ್ತಿಗಳೆಂಬ ಚಿತ್ರಣವಿದೆ.

ಬೇಂದ್ರೆಯವರು ಮಧುರಚೆನ್ನರ ಬಗ್ಗೆ ಐದು ಪದ್ಯಗಳನ್ನು ಬರೆದಿದ್ದಾರೆ. ಇದರಿಂದ ಬೇಂದ್ರೆಯವರ ಹೃದಯದಲ್ಲಿ ಮಧುರಚೆನ್ನರಿಗೆ ಎಂತಹ ಸ್ಥಾನ ಇದ್ದಿತೆಂಬುದು ಸ್ಪಷ್ಟವಾಗುತ್ತದೆ. ಮಧುರಚೆನ್ನರು ಸಮಾಧಿಸ್ಥರಾದಾಗ ಮೊದಲ ಹಿಡಿಮಣ್ಣು ಹಾಕಿದವರು ಅಣ್ಣ ಬೇಂದ್ರೆ. ಅವರು ಚೆನ್ನ ಎಂಬ ಪದ್ಯದಲ್ಲಿ ಹೀಗೆ ಬರೆಯುತ್ತಾರೆ:

ನನ್ನ ನಿನ್ನ ಬೆನ್ನ ಬಳಿ ವಿಶಾಲ ವೃಕ್ಷ ಬೆಳೆದಿದೆ

ಮುಗಿಲ ತುಂಬಿ ಉಳಿದಿದೆ

ಗಾಳಿಯಂತೆ ಸುಳಿದಿದೆ

ನನ್ನ ನಿನ್ನ ನೋಟ ಮಾತ್ರ ಎಂಟು ದಿಕ್ಕಿಗೆಳೆದಿದೆ

ಬೇರೆ ದಾರಿ ತುಳಿದಿದೆ.''

(ಚೆನ್ನ, ನಾದಲೀಲೆ'' ಪುಟ 18)

ಬೇಂದ್ರೆ-ಮಧುರಚೆನ್ನರ ಹಿಂದೆ ಬೆಳೆದ ವಿಶಾಲ ವೃಕ್ಷ ಎಂದರೆ ಅವರ ಗುರು ಶ್ರೀ ಅರವಿಂದರು. ಇವರಿಬ್ಬರ ನೋಟ ಎರಡು ದಿಕ್ಕಿಗೆ ಎಳೆದದ್ದು ಕಾವ್ಯ ಮತ್ತು ಅನುಭಾವ. ಬೇಂದ್ರೆಯವರು ಕಾವ್ಯ ಮಾರ್ಗದಿಂದ ಅನುಭಾವದ ಕಡೆಗೆ ಮರಳಿದರು. ಮಧುರಚೆನ್ನರು ಅನುಭಾವ ಮಾರ್ಗದಿಂದ ಕಾವ್ಯದೆಡೆಗೆ ಹೊರಳಿದರು. ಮಧರಚೆನ್ನರ ಅನುಭಾವ ಅವರ ಕಾವ್ಯದ ಪರಮೋಚ್ಚ ಸಾಫಲ್ಯ. ಇದು ಅವರ ಕವಿತೆ ನನ್ನ ನಲ್ಲ' ಕವಿತೆಯಲ್ಲಿ ಪ್ರತಿಬಿಂಬಿತವಾಗಿದೆ.

ಮಧುರಚೆನ್ನರ ಕಾವ್ಯ ಹಾಗೂ ಜೀವನದಿಂದ ಕವಿ ಕಣವಿಯವರು ಆಕರ್ಷಿತರಾಗಿದ್ದರು. ಮಧುರಚೆನ್ನರ ನೆನಪಿಗೆ' ಎಂಬ ಅವರ ಪದ್ಯ ಈ ಮಾತಿಗೆ ಸಾಕ್ಷಿಯಾಗಿದೆ. ಕಣವಿಯವರ ಈ ಕವಿತೆಯ ಪ್ರಾರಂಭದ ನುಡಿ ಹೀಗಿದೆ:

ಜಾನಪದ ಜೀವನದ ಸಂಗೀತಕೆದೆಯೋತು

ಹೂವು ಹೂವಿನ ತೊಳೆಯ ಬಿಡಿಸಿ,

ಹೊಸ ಬೆಳೆಯ ಕಸುವಾಗಿ ಸ್ನೇಹರಸದೊಳು ಮಾಗಿ

ಸುಗ್ಗಿ ಮಾಡಿದಿರಂದು ನಾಡ ನಲಿಸಿ!''

ಮಧುರಚೆನ್ನರ ಜೀವನ ಜಾನಪದ ಸಂಗೀತದೊಂದಿಗೆ ಓತಪ್ರೋತವಾಗಿತ್ತು ಎಂಬುದು ಅವರ ಚರಿತ್ರೆಯಿಂದ ತಿಳಿಯುತ್ತದೆ. ಅವರು ಹಲಸಂಗಿ ಎಂಬ ಹಳ್ಳಿಯಲ್ಲಿ ಬೇಸಾಯ ಮಾಡಿಕೊಂಡೇ ಜೀವನ ಸಾಗಿಸಿದರು. ಅವರು ಜಾನಪದ ಹಾಡುಗಳ ಸಂಗ್ರಹಕಾರ್ಯದಲ್ಲಿ ತೊಡಗಿದ್ದರು. ಮಧುಕರನಂತೆ ಸುತ್ತಲೂ ಅರಳಿದ ಹೂವುಗಳಿಂದ ಜೇನು ಶೇಖರಿಸಿದರು. ಒಂದೆಡೆ ಧಾರವಾಡದ ಗೆಳೆಯರ ಗುಂಪು ಇವರಲ್ಲಿ ಸಾಹಿತ್ಯಾಸಕ್ತಿಯನ್ನು ಕುದುರಿಸಿದ್ದರೆ, ಇನ್ನೊಂದೆಡೆ ಹಲಸಂಗಿಯ ಗೆಳೆಯರ ಬಳಗ ಸಾಹಿತ್ಯದೊಂದಿಗೆ ಜಾನಪದ ಕಲೆಯಲ್ಲಿ, ಸಂಸ್ಕೃತಿಯಲ್ಲಿ ಇವರನ್ನು ತೊಡಗಿಸಿತ್ತು. ಹಲಸಂಗಿಯ ಗೆಳೆಯರು ಕಾರಂತರಂತಹರನ್ನೂ ಆಕರ್ಷಿಸಿದ್ದರು. ಹಲಸಂಗಿಯ ಹಳ್ಳಿಯ ಮುಗ್ಧರನ್ನು ಹೊಲಸಂಗಿಯವರೆಂದು ಕರೆದ ಕಾರಂತರು, ಅವರ ಕಲೆಯನ್ನು ಮುಕ್ತಕಂಠದಿಂದ ಹೊಗಳದೆ ಇರಲಿಲ್ಲ.

ಕಣವಿಯವರ ಪದ್ಯದ ಕೆಲವು ಮಹತ್ವದ ಅಂಶಗಳನ್ನು ವಿಶ್ಲೇಷಿಸೋಣ.

ಅಂದಿನಿಂದೆನ್ನೆದೆಗೆ ಮೂಡಿಹುದು ಮಳೆಬಿಲ್ಲು

ಆಡಿಹವು ನಿಮ್ಮೂರ ನವಿಲ ಹೆಜ್ಜೆ!

ಕಾಳರಾತ್ರಿಯ ಬೆಳಗು ಬೈಗುಗಳ ದೂಡಿದವು

ಕಂಡೆ ನಾ ನಿಸ್ಸೀಮ ನಯದ ಓಜೆ!''

ಮಧುರಚೆನ್ನರ ಕಾವ್ಯದ ಪ್ರಭಾವ ಧಾರವಾಡದಲ್ಲಿ ಅರಳುತ್ತಿರುವ ತರುಣ ಕವಿ ಕಣವಿಯವರ ಮೇಲೆ ಆದುದರಲ್ಲಿ ಅಚ್ಚರಿಯಿಲ್ಲ. ಹಲಸಂಗಿಯ ಒಂದು ವಿಶೇಷ ಆಕರ್ಷಣೆಯೆಂದರೆ ಅಲ್ಲಿ ನಲಿಯುತ್ತಿದ್ದ ನವಿಲುಗಳ ಕುಣಿತ. ಅದು ಕಾರಂತರನ್ನೂ ಆಕರ್ಷಿಸಿತ್ತು. ಇಂದು ಆ ನವಿಲುಗಳು ಎಲ್ಲಿ ಹೋಗಿವೆ ಗೊತ್ತಿಲ್ಲ. ಅಂದು ಅಲ್ಲಿ ನವಿಲುಗಳ ಜಾತ್ರೆಯೇ ಇತ್ತು. ನವಿಲು ಕುಣಿಯುವುದು ಮೋಡಗಳನ್ನು ಕಂಡಾಗ. ಮೋಡಗಳಲ್ಲಿ ಕವಿ ಮಳೆಬಿಲ್ಲು ಕಾಣುತ್ತಾರೆ. ಮಳೆಬಿಲ್ಲಿನ ಸಪ್ತವರ್ಣ ನವಿಲಗರಿಯಲ್ಲೂ ಅಡಗಿದೆ. ಮಧುರಚೆನ್ನ ಎಂದೊಡನೆ ಕವಿಯ ಹೃದಯದಲ್ಲಿ ಮಳೆಬಿಲ್ಲು(ಕಾಮನಬಿಲ್ಲು) ಮೂಡುತ್ತದೆ, ಮಧುರಚೆನ್ನರ ಮಾತಿನ ನವಿಲುಗಳ ಕುಣಿತ ನೆನಪಾಗುತ್ತದೆ. ಮಧುರಚೆನ್ನರು ತಮ್ಮ ಅಧ್ಯಾತ್ಮದ ದಾರಿಯಲ್ಲಿ ಕಾಳರಾತ್ರಿ'ಯ ಅನುಭವವನ್ನು ಪಡೆದವರು. ಬೈಗುಬೆಳಗುಗಳನ್ನು ದಾಟಿದಾಗ ಅವರ ನಿಸ್ಸೀಮ ನಯದ ಓಜೆ'ಯೂ ಸಾರ್ಥಕವೆನಿಸುತ್ತದೆ.

ದೇಹ ಮೋಂಬತ್ತಿಯೊಲು ಮುಡಿದ ಬೆಳಕಿನ ಕುಡಿಗೆ

ಕರಗಿ ಮಿದುವಾಗಿತ್ತು ಅಂತರಂಗ;

ಬೆಳ್ಮುಗಿಲ ಕನಸುಗಳು ಸಚ್ಚಿದಾಕಾಶದಲಿ

ದೇವತಾ ಪೃಥಿವಿ ಮೈದಡವಿದಾಗ!''

ಮಧುರಚೆನ್ನರ ಜೀವನವೇ ಒಂದು ಅಧ್ಯಾತ್ಮದ ತಪೋಭೂಮಿಯಾಗಿತ್ತು. ಮಧುರಚೆನ್ನರದು ಬೆಳಕಿನ ದಾರಿ. ದೇಹವೇ ಮೋಂಬತ್ತಿಯಾಗಿತ್ತು, ಕರಗಿ ಮಿದುವಾಗಿತ್ತು. ಅವರ ಕನಸುಗಳು ಬೆಳ್ಮುಗಿಲುಗಳಾಗಿದ್ದವು. ಈಗ ಅವರ ಮನದಲ್ಲಿದ್ದ ಕಾರ್ಮೋಡಗಳು ಚೆದುರಿದ್ದವು. ದೇವತಾ ಪೃಥಿವಿ' ಮೈದಡವಿದ ಪ್ರಸಂಗವದು.

(ಮುಂದುವರಿಯಲಿದೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more