ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮತರಿಗೆ ವರದಾನವಾದ ಯೌವನದ ಸಂಸ್ಕಾರ

By Staff
|
Google Oneindia Kannada News

m v kamathಖ್ಯಾತ ಪತ್ರಕರ್ತ, ಕನ್ನಡಿಗ ಎಂ.ವಿ.ಕಾಮತ್ ಅವರ ಆತ್ಮಚರಿತ್ರೆ 'ಎ ರಿಪೋರ್ಟರ್ ಎಟ್ ಲಾರ್ಜ್' ಕನ್ನಡ ಸಂಗ್ರಹಾನುವಾದದ ಮೂರನೇ ಭಾಗ ಇಲ್ಲಿದೆ. ಹದಿವಯದ ಹುಡುಗ ಕಾಮತ್ ಅವರ ಸಂಸ್ಕಾರ, ಸಂಸ್ಕೃತ ಕಲಿಕೆ , ಕ್ರಿಕೆಟ್ ಮೋಡಿ, ಪತ್ರಕರ್ತರ ಜಗತ್ತಿನ ಅನಾವರಣ, ಆದರ್ಶಗಳ ಪಾಲನೆ ನಿಮ್ಮ ಮುಂದೆ ...

ಸಂಗ್ರಹಾನುವಾದ : ಡಾ| 'ಜೀವಿ' ಕುಲಕರ್ಣಿ, ಮುಂಬೈ

ಹದಿವಯದ ಹುಡುಗನ ಜೀವನದಲ್ಲಿಯ ಒಂದು ಮಹತ್ವದ ಸಂಸ್ಕಾರವೆಂದರೆ ಯಜ್ಞೋಪವೀತ' ಧಾರಣ. ಮಾಧವರ ಮುಂಜಿ ಆದಾಗ ಕುಟುಂಬದ ಸದಸ್ಯರೆಲ್ಲ ನೆರೆದಿದ್ದರು. ವೈದಿಕ ಸಂಪ್ರದಾಯದ ಪ್ರಕಾರ ಈ ಸಂಸ್ಕಾರದೊಂದಿಗೆ ವಟುವಿಗೆ ದ್ವಿಜತ್ವ ಪ್ರಾಪ್ತವಾಗುತ್ತದೆ. ಈ ವಯಕ್ಕೆ ಹಿಂದಿನ ಕಾಲದಲ್ಲಿ ಬಾಲಕನು ಗುರುಕುಲ ಸೇರುತ್ತಿದ್ದನು. ಆಗ ಗುರುವೇ ಅವನ ಎರಡನೆಯ ತಾಯಿಯಾಗಿ ವಿದ್ಯೆಯನ್ನು ನೀಡಿ ಪಾಲನೆ ಮಾಡುತ್ತಿದ್ದ. ಬಾಲಕ ಮರುಹುಟ್ಟು ಪಡೆಯುವುದರಿಂದ ದ್ವಿಜ' ಎಂದು ಕರೆಯಲ್ಪಡುತ್ತಿದ್ದ. ಕಾಮತರು ಈ ಸಂಸ್ಕಾರ ಪಡೆದ ಮೇಲೆ ಪ್ರತಿದಿನ ಸಂಧ್ಯಾವಂದನೆ ಮಾಡಲು ಪ್ರಾರಂಭಿಸಿದರಂತೆ. ದಿನಕ್ಕೆ ಮೂರು ಸಲ ಸಂಧ್ಯಾವಂದನೆ ಮಾಡಬೇಕು. ಪ್ರಾತಃಸಂಧ್ಯಾ, ಮಧ್ಯಾಹ್ನ ಸಂಧ್ಯಾ ಹಾಗೂ ಸಾಯಂಸಂಧ್ಯಾ. ಶುಕ್ಲಾಂಬರಧರಂ ವಿಷ್ಣುಂ ಶಶಿವರರ್ಣಂ ಚತುರ್‌ಭುಜಂ | ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ' ಮಂತ್ರದಿಂದ ಪ್ರಾರಂಭ.

ಕಾಮತರು ತಾವು ಬಾಲ್ಯದಲ್ಲಿ ಪಠಿಸುತ್ತಿದ್ದ ಹಲವಾರು ಮಂತ್ರಗಳನ್ನು ಉದ್ಧರಿಸಿ ಅವುಗಳ ಇಂಗ್ಲಿಷ್ ಅನುವಾದ ಕೊಡುತ್ತಾರೆ. ಕಾಲೇ ವರ್ಷತು ಪರ್ಜನ್ಯ ಪೃಥಿವೀ ಸಸ್ಯಶಾಲಿನೀ | ದೇಶೋಯಂ ಕ್ಷೋಭರಹಿತಾ ಸಜ್ಜನಾ ಸಂತು ನಿರ್ಭಯಾ'. ಎಂತಹ ಉದಾತ್ತ ವಿಚಾರ ಇಲ್ಲಿ ಅಡಗಿದೆ ಎನ್ನುತ್ತಾರೆ. ಸರ್ವೇಪಿ ಸುಖಿನಸ್ಸಂತು ಸರ್ವೇ ಸಂತು ನಿರಾಮಯಾಃ | ಸರ್ವೇ ಭದ್ರಾಣಿ ಪಶ್ಯಂತು ಮಾಕಶ್ಚಿತ್ ದುಃಖಾಮಾಪ್ನುಯಾತ್'. ಇವುಗಳ ಜೊತೆಗೆ ಗಾಯತ್ರೀ ಮಂತ್ರದ ಪಠನ.

ಮುಂಜಾನೆ ಹೋಮ್‌ವರ್ಕನ ಗಡಬಡಿ, ಮಧ್ಯಾಹ್ನ ಬಿಡುವಿಲ್ಲದ ಕೆಲಸ, ಸಂಜೆ ಆಟದಲ್ಲಿ ಆಸಕ್ತಿ, ಇವುಗಳಿಂದಾಗಿ ತ್ರಿಕಾಲ ಸಂಧ್ಯಾ ಸಾಧಿಸುತ್ತಿರಲಿಲ್ಲ ಎನ್ನುತ್ತಾರೆ. ಅಜ್ಜಿಯ ಲಕ್ಷ್ಯ ಇವರ ಸಂಧ್ಯಾವಂದನೆಯ ಕಡೆಗೆ ಇರುತ್ತಿದ್ದರಿಂದ ಪೂರ್ತಿ ತಪ್ಪಿಸುವುದು ಸುಲಭವಾಗಿರಲಿಲ್ಲ. ಉಡುಪಿ ಬಿಟ್ಟು ಕಾಲೇಜು ಶಿಕ್ಷಣಕ್ಕಾಗಿ ಮಂಗಳೂರು ಸೇರಿದ ಮೇಲೆ ಈ ಸಂಧ್ಯಾವಂದನೆ ನಿಂತಿತು ಎನ್ನುತ್ತಾರೆ.

ಇವರಿಗೆ ಓದುವ ಗೀಳು ಬಾಲ್ಯದಿಂದಲೇ ಪ್ರಾರಂಭವಾಗಿತ್ತು. ಉಡುಪಿಯಲ್ಲಿ ಮಧ್ವ ಸಿದ್ಧಾಂತ ಗ್ರಂಥ ಮಾಲೆಯವರು ನಿಯಮಿತವಾಗಿ ಪುಸ್ತಕ ಪ್ರಕಟಿಸುತ್ತಿದ್ದರು. ತಂದೆ ಪುಸ್ತಕ ತರಿಸುತ್ತಿದ್ದರು. ಇವರು ಓದುತ್ತಿದ್ದರು. ಇದರಿಂದ ನನ್ನ ತಲೆಯಲ್ಲಿ ಅಧ್ಯಾತ್ಮಿಕತೆ ಜಾಗ್ರತವಾಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ನನ್ನ ತಲೆ ವಿಚಾರಗಳಿಂದ ತುಂಬಿತ್ತು.' ಎನ್ನುತ್ತಾರೆ. ಬಾಲ್ಯದ ದಿನಗಳು ಕಳೆದವು ಆದರೆ ಹಳೆಯ ಪರಿಚಿತ ಮುಖಗಳನ್ನು' (Old familiar faces) ಅವರಿಗೆ ಮರೆಯಲು ಸಾಧ್ಯವಾಗಲಿಲ್ಲ.

ಕಾಮತರು ತಮ್ಮ ಎಳಮೆಯಲ್ಲಿ ನಡೆದ ಅಕ್ಷರಾಭ್ಯಾಸದ ಕಾರ್ಯಕ್ರಮ ನೆನೆಯುತ್ತಾರೆ. ಬೆಳ್ಳಿಯ ತಟ್ಟೆಯಲ್ಲಿ ಅಕ್ಕಿ ಹಾಕಿ ಅದರಲ್ಲಿ ದೇವನಾಗರಿ ಲಿಪಿಯಲ್ಲಿ ಓಂ' ಬರೆಸಿದರಂತೆ. ತಂದೆತಾಯಿ ಮತ್ತೆ ಸಂಬಂಧಿಕರಿಗೆಲ್ಲ ಅದು ಹರ್ಷ ತಂದ ಸಂಭ್ರಮದ ದಿನ. ಶಾಲೆಯಲ್ಲಿ ಎ, ಬಿ, ಸಿ, ಡಿ...' ಬರೆಯಲು ಕಲಿತರು. ಇವರು ಸೇರಿದ್ದು ಕಾನ್ವೆಂಟ್ ಶಾಲೆ. ಜ್ಯಾಕ್ ಅಂಡ್ ಜಿಲ್..', ಬಾ ಬಾ ಬ್ಲ್ಯಾಕ್ ಶೀಪ್....' ಪದ್ಯ ಸಾಭಿನಯವಾಗಿ ಹಾಡಲು ಕಲಿಸಿದ ದಿನ ನೆನೆಯುತ್ತಾರೆ. ಕನ್ನಡ ಲಿಪಿಯನ್ನು ಮನೆಯಲ್ಲಿ ಕಲಿತರಂತೆ. ಇಂಗ್ಲೀಷು ಬಲ್ಲವನೇ ಕಲಿತವ ಎಂದು ಭಾವಿಸಿದ ಕಾಲ ಅದಾಗಿತ್ತು. ಕಿಂಡರ್ಗಾರ್ಟನ್, ಕಾನ್ವೆಂಟ್ ಮುಗಿಸಿ ಹೈಸ್ಕೂಲಿನ ನಾಲ್ಕನೆಯ ತರಗತಿ ಸೇರಿದಾಗ ಅಲ್ಲಿ ಶಿಕ್ಷಣ ಕನ್ನಡ ಮಾಧ್ಯಮದಲ್ಲಿತ್ತು. ಇವರಿಗೆ ಕನ್ನಡ ಮಾಧ್ಯಮದಲ್ಲಿ ಕಲಿಯುವುದು ಕಷ್ಟಕರವಾಯ್ತು. ನಂತರ ಇವರು ಕ್ರಿಶ್ಚನ್ ಹೈಸ್ಕೂಲ್ ಸೇರಿದರು. ಅಲ್ಲಿ ಬೈಬಲ್ ಕ್ಲಾಸು ಕಡ್ಡಾಯವಾಗಿತ್ತು. ಬೈಬಲ್ ಕತೆಗಳನ್ನು ಹೇಳಲಾಗುತ್ತಿತ್ತು. ಕನ್ನಡ ಭಾಷೆಯಲ್ಲಿ ಬೈಬಲ್ ಕತೆ ಕೇಳಲು ಇವರಿಗೆ ಇಷ್ಟವಾಗುತ್ತಿರಲಿಲ್ಲ. ನಂತರ ಇವರು ಕಿಂಗ್ ಜೇಮ್ಸರ ಬೈಬಲ್ ಬಹಳ ಪ್ರೀತಿಯಿಂದ ಓದಿದರಂತೆ. ಶಾಲೆಯಲ್ಲಿ ಇವರಿಗೆ ನ್ಯೂ ಟೆಸ್ಟಮೆಂಟ್' ಮಾತ್ರ ಕಲಿಸುತ್ತಿದ್ದರು. ಇವರಿಗೆ ಓಲ್ಡ ಟೆಸ್ಟಮೆಂಟ್'ನ ಕತೆಗಳು ಬಹಳ ರುಚಿಸಿದವು. ಉದಾಹರಣೆಗೆ ನೋವಾಜ್ ಆರ್ಕ' ಕತೆಯ ಬಗ್ಗೆ ಬರೆಯುತ್ತಾರೆ.

ಕ್ರಿಶ್ಚನ್ ಹೈಸ್ಕೂಲಿನಲ್ಲಿ ಇವರು ಕ್ರಿಕೆಟ್ ಆಡಲು ಕಲಿತರು. ಆ ಶಾಲೆಗೆ ನೂರು ವರ್ಷ ಆದಾಗ ಇವರನ್ನು ಅತಿಥಿಯಾಗಿ ಶಾಲೆಯ ಶತಮಾನೋತ್ಸವ ಸಮಿತಿಯವರು ಆಮಂತ್ರಿಸಿದ್ದರಂತೆ. ತಾವು 1929ರಲ್ಲಿ ಶಾಲೆಯ ವಿದ್ಯಾರ್ಥಿಯಾಗಿದ್ದಾಗಿನ ಅಪೂರ್ವ ನೆನಪು ದಾಖಲಿಸುತ್ತಾರೆ. ಅವರು ಶಾಲೆಯಲ್ಲಿದ್ದಾಗಿನ ಅಟೆಂಡೆನ್ಸ್ ರಜಿಸ್ಟರ್' ನೋಡಲು ಸಿಕ್ಕಿತ್ತು. ಅದರಲ್ಲಿ ತಮ್ಮ ಹೆಸರನ್ನು ನೋಡಿ ಹರ್ಷಪುಲಕಿತರಾದರು.

ಎಂಟನೆಯ ಕ್ಲಾಸಿನಿಂದ ಹನ್ನೊಂದನೆಯ ಕ್ಲಾಸಿನ ವರೆಗೆ ಇವರ ಶಿಕ್ಷಣ ಬೋರ್ಡ್ ಹೈಸ್ಕೂಲಿನಲ್ಲಾಯಿತಂತೆ. (ಆ ಕಾಲದಲ್ಲಿ ಹನ್ನೊಂದನೆಯ ಕ್ಲಾಸು ಮೆಟ್ರಿಕ್ ಆಗಿತ್ತು, ಈಗಿನ ಎಸ್.ಎಸ್.ಸಿ. ಹತ್ತನೆಯ ಕ್ಲಾಸು). ಕ್ರಿಶ್ಚನ್‌ರಲ್ಲಿ ರೋಮನ್ ಕೆಥೊಲಿಕ್ ಹಾಗೂ ಪ್ರೊಟೆಸ್ಟಂಟ್ ಎಂಬ ಪಂಗಡಗಳಿವೆ. ಅವರಲ್ಲಿ ಇದ್ದ ವೈಷಮ್ಯವನ್ನು ಲೇಖಕರು ಮೊದಲಿಗೆ ಕಂಡರು. ಕೆಥೊಲಿಕ್ ಮಕ್ಕಳು ಪ್ರೊಟೆಸ್ಟಂಟ್ ಚರ್ಚುಗಳಲ್ಲಿ, ಪ್ರೊಟೆಸ್ಟಂಟ್ ಮಕ್ಕಳು ಕೆಥೊಲಿಕ್ ಚರ್ಚುಗಳಲ್ಲಿ ಆಟವಾಡುವುದು ನಿಷಿದ್ಧವಾಗಿತ್ತು. ಹಿಂದುಗಳಲ್ಲಿ ಬಡವರು, ದಲಿತರು ಆದವರು ಮತಾಂತರ ಹೊಂದುತ್ತಿರುವ ಕಾಲವದು. ಕ್ರಿಶ್ಚನ್ ವಿದ್ಯಾರ್ಥಿಗಳೂ ಬಡವರಾಗಿರುವುದನ್ನು ಕಂಡು ಇವರಿಗೆ ಅಚ್ಚರಿಯಾಗಿತ್ತು. ಇವರ ಸಹಪಾಠಿಯೊಬ್ಬ ಚಾರ್ಲಸ್ ಎಂಬ ಹುಡುಗ ವರ್ಷವಿಡೀ ಒಂದೇ ಶರ್ಟು, ಒಂದೇ ಜಾಕೀಟು ಹಾಕಿಕೊಳ್ಳುತ್ತಿದ್ದನಂತೆ.

ಮಳೆಯಿರಲಿ, ಚಳಿಯಿರಲಿ, ಬಿಸಿಲಿರಲಿ ಅವನು ಅದೇ ಜಾಕೀಟು ಧರಿಸುತ್ತಿದ್ದ. ಒಮ್ಮೆ ಚಾರ್ಲಸ್ ಕ್ರಿಕೆಟ್ ಆಡುವಾಗ ಜಾಕೀಟು ಹಾಕಿಕೊಂಡೆ ಕಷ್ಟವಾದರೂ ಬಾಲಿಂಗ್ ಮಾಡುತ್ತಿದ್ದ. ಮಿತ್ರರೆಲ್ಲ ಅವನಿಗೆ ಜಾಕೀಟು ತೆಗೆದು ಬಾಲ್ ಮಾಡಲು ಹೇಳಿದರೂ ಅವನು ಕೇಳದಿರಲು ಮಿತ್ರರು ಅವನ ಜಾಕೀಟನ್ನು ಬಲವಂತವಾಗಿ ತೆಗೆದುಬಿಟ್ಟರಂತೆ. ಅವನ ಒಂದೇ ಶರ್ಟು ಹರಿದಿತ್ತು, ಹಿಂಭಾದ ಪೂರ್ತಿ ಹರಿದು ಬೆನ್ನು ಕಾಣುತ್ತಿತ್ತು. ಆ ಹುಡುಗ ಅಳತೊಡಗಿದ. ಮಿತ್ರರಿಗೆ ಅವನ ಬಡತನ ಕಂಡು ಕಣ್ಣಲ್ಲಿ ನೀರು ಬಂತಂತೆ.

ಇತರ ಸಹಪಾಠಿಗಳನ್ನು ನೆನೆದಾಗ ಕಾಮತರು ತಮ್ಮನು ತಾವೇ ಸುದೈವಿ ಎಂದು ಕರೆದುಕೊಳ್ಳುತ್ತಾರೆ. ಇವರ ತಂದೆ ಉಡುಪಿ ತಾಲೂಕ ಬೋರ್ಡಿನ ಅಧ್ಯಕ್ಷರಾಗಿದ್ದರು. ಒಂದು ಲೈಬ್ರರಿ ಸ್ಥಾಪಿಸಿದ್ದರು. ಮದ್ರಾಸಿನಿಂದ ದಿ ಹಿಂದೂ' ಪತ್ರಿಕೆ ತರಿಸುತ್ತಿದ್ದರು. ಕಾಮತರು ಇಂಗ್ಲಿಷ್ ಪತ್ರಿಕೆಯಲ್ಲದೆ ಅಂದಿನ ಕನ್ನಡ ವಾರ ಪತ್ರಿಕೆಗಳಾಗಿದ್ದ ರಾಷ್ಟ್ರ ಬಂಧು', ಸ್ವದೇಶಾಭಿಮಾನಿ', ನವಭಾರತ'ಗಳನ್ನು ಆಸಕ್ತಿಯಿಂದ ಓದುತ್ತಿದ್ದರು. ವಿದ್ಯಾರ್ಥಿಗಳಲ್ಲಿ ಸಿರಿವಂತ ಬಡವ ಎಂಬ ಭೇದವಿರಲಿಲ್ಲ. ಅಭ್ಯಾಸ ಹಾಗೂ ಆಟದಲ್ಲಿ ಮುಂದಾದವರಿಗೆ ಹೆಚ್ಚಿನ ಮರ್ಯಾದೆ ಇತ್ತು. ಕಾಮತರು ಗಣಿತ ಹಾಗೂ ಕನ್ನಡ ವಿಷಯಗಳಲ್ಲಿ ವೀಕ್'(ಅಶಕ್ತ)ರಾಗಿದ್ದರು. ಆದರೆ ಇಂಗ್ಲೀಷ್, ಭೂಗೋಲ, ಇತಿಹಾಸ ಮತ್ತು ವಿಜ್ಞಾನ ವಿಷಯಲ್ಲಿ ಹೆಚ್ಚಿನ ಪ್ರಗತಿ ತೋರಿ ಕೊರತೆಯನ್ನು ಪೂರೈಸಿಕೊಳ್ಳುತ್ತಿದ್ದರು.

ಇವರು ಕಲಿಯುವಾಗ ಸಂಸ್ಕೃತಕ್ಕೆ ಮೃತ ಭಾಷೆ' (ಡೆಡ್ ಲ್ಯಾಂಗ್ವೇಜ್) ಎಂಬ ಹಣೆಪಟ್ಟಿ ಹಚ್ಚಿದ್ದರಿಂದ, ಇವರು ಒಂದು ವರ್ಷ ಮಾತ್ರ ಸಂಸ್ಕೃತ ಕಲಿತರಂತೆ. ನಂತರ ತಾವು ಸಂಸ್ಕೃತ ಏಕೆ ಕಲಿಯಲಿಲ್ಲ ಎಂದು ಪಶ್ಯಾತ್ತಾಪ ಪಟ್ಟಿದ್ದಾರೆ.

ಇವರ ಸಹಪಾಠಿಗಳಲ್ಲಿ ಶ್ರೀಮಂತರೂ ಇದ್ದರು. ಕೆ.ಕೆ.ಪೈ ಇವರ ಸಹಪಾಠಿಯಗಿದ್ದರು. ಮುಂದೆ ಇವರು ಸಿಂಡಿಕೇಟ್ ಬ್ಯಾಂಕಿನ ಚೇರಮನ್ನರಾದರು. ಟಿ.ಎ.ಪೈ ಅವರು ಒಂದು ವರ್ಷ ಜ್ಯೂನಿಯರ್ ಆಗಿದ್ದರು. ಮುಂದೆ ಇವರು ಇಂದಿರಾ ಗಾಂಧಿಯವರ ಮಂತ್ರಿಮಂಡಲದಲ್ಲಿ ಕ್ಯಾಬಿನೆಟ್ ರ್‍ಯಾಂಕ್ ಪಡೆದ ಮಂತ್ರಿಯಾದರು. ಇವರ ಹೆಡ್ ಮಾಸ್ಟರರಾಗಿದ್ದ ರೊಕ್ಯು ಫರ್ನಾಂಡಿಸ್ ಎಂಬವರು ವಿಧ್ಯಾರ್ಥಿಗಳಿಗೆ ಐ.ಸಿ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪ್ರೋತ್ಸಾಹಿಸುತ್ತಿದ್ದರು. ಸ್ವಾತಂತ್ರ್ಯ ಬಂದ ಮೇಲೆ ಕಾಮತರ ಸೋದರನೋರ್ವ (ಮೋಹನ ಪೈ) ಐ.ಎ.ಎಸ್. ಪರೀಕ್ಷೆ ಪಾಸಾದಾಗ ಶಾಲೆಯಲ್ಲಿ ಹೀರೋ'ನ ಸನ್ಮಾನ ದೊರೆತಿತ್ತಂತೆ.

ಇವರ ಸಹಪಾಠಿಯ ತಂದೆ ಒಂದು ಸ್ಪೋರ್ಟ್ಸ್ ಶಾಪ್ ಇಟ್ಟಿದ್ದರು. ಅವರು ನ್ಯಾಶನಲ್ ಜಾಗರ್‌ಫಿಕ್' ಮ್ಯಾಗಜಿನ್ ತರಿಸುತ್ತಿದ್ದರಂತೆ. ಅದನ್ನು ಓದುವ ಲಾಭ ಇವರಿಗೆ ದೊರೆತಿತ್ತು. ಇನ್ನೂ ಶಾಲೆಯಲ್ಲಿ ಕಲಿಯುವಾಗಲೇ ಒಂದು ಪ್ರೈವೇಟ್ ಲೈಬ್ರರಿಯಿಂದ ಕಾಮತರು ಸೆಕ್ಸ್‌ಟನ್ ಬ್ಲೇಕ್, ಎಡ್‌ಗರ್ ವ್ಯಾಲೇಸ್, ಆರ್ಥರ್ ಕೊನನ್ ಡಾಯಿಲ್ ಮುಂತಾದವರ ಹೆಚ್ಚಿನ ಕಾದಂಬರಿಗಳನ್ನು ಓದಿ ಮುಗಿಸಿದ್ದರಂತೆ. ಸ್ಕೂಲ್ ಲೈಬ್ರರಿಯಿಂದ ತಂದ ಜೇನ್ ಆಸ್ಟಿನ್, ಥ್ಯಾಕರೆ, ಚಾರ್ಲಸ್ ಡಿಕನ್ಸ್ ಮುಂತಾದವರ ಕಾದಂಬರಿಗಳನ್ನು ಓದಿದ್ದರಂತೆ. ಡಿಕನ್ಸ್‌ರ ಆಲಿವ್ಹರ್ ಟ್ವಿಸ್ಟ್' ಕಾದಂಬರಿಯನ್ನು ವಿವರವಾಗಿ ಉದ್ಧರಿಸಲು ಶಕ್ತರಾಗಿದ್ದರು. ಆಗ ಗದ್ಯ ಮತ್ತು ಪದ್ಯವೆಂಬ ಭೇದವಿಲ್ಲದಲೇ ಓದಿ ಆನಂದಿಸುತ್ತಿದ್ದರು. ಅಂತರ್‌ರಾಷ್ಟೀಯ ಖ್ಯಾತಿವೆತ್ತ ಚಿತ್ರ ಕಲಾವಿದ ಕೆ.ಕೆ.ಹೆಬ್ಬಾರರು ಇವರಿಗಿಂತ 9 ವರ್ಷ ದೊಡ್ಡವರಾಗಿದ್ದರು. ಶಾಲೆಯ ಆವರಣದಲ್ಲಿ ಚಿತ್ರಬಿಡಿಸುತ್ತ ಕುಳಿತುಕೊಂಡಿರುವ ಹೆಬ್ಬಾರರ ಚಿತ್ರ ಹಚ್ಚಗೆ ಕಾಮತರ ನೆನಪಿನಲ್ಲಿದೆ. ಮುಂದೆ 1960ರ ದಶಕದಲ್ಲಿ ಹೆಬ್ಬಾರರ ಒಂದು ಪ್ರದರ್ಶನದಲ್ಲಿ ಅವರ ಒಂದು ಚಿತ್ರವನ್ನು ಇವರ ಹೆಂಡತಿ ಬಹುವಾಗಿ ಮೆಚ್ಚಿ ಕೊಂಡುಕೊಂಡ ಘಟನೆಯನ್ನು ನೆನೆಯುತ್ತಾರೆ.

ಬಾಲ್ಯದ ಸ್ಮೃತಿಗಳಲ್ಲಿ ನಾಯಿಯ ಚಿತ್ರವಿರುವ ಹಿಸ್ ಮಾಸ್ಟರ್ಸ್ ವಾಯಿಸ್' ಕಂಪನಿಯ ಗ್ರಾಮೋಫೋನ್ ರೆಕಾರ್ಡ ಕೇಳಿದ್ದು ನೆನೆಯುತ್ತಾರೆ. ಕ್ರಿಕೆಟ್ ಜಗದ ಅಂದಿನ ತಾರೆಗಳಾದ ಬ್ರ್ಯಾಡ್‌ಮನ್, ಸಿ.ಕೆ.ನಾಯಡು ಬಗ್ಗೆ ಬರೆಯುತ್ತಾರೆ. 1928 ರಲ್ಲಿ ಮೂಕಿಚಿತ್ರ ನೋಡಿದ್ದರು. ಚಿತ್ರದ ಹೆಸರು ಸ್ಟ್ರೀಟ್ ಗರ್ಲ್'(ಬೀದಿಯ ಹುಡುಗಿ). ಅದೊಂದು ಮ್ಯಾಟಿನಿ ಶೋ. ಸಿನೇಮಾ ಹಾಲ್‌ನಲ್ಲಿ ಚಿತ್ರ ಶುರು ಆಗುವದಕ್ಕೆ ಮೊದಲು ಬ್ಯಾಂಡು ಬಾರಿಸುತ್ತಿದ್ದರು. ಮೂಕ ಚಿತ್ರದ ಜೊತೆಗ ಇಂಗ್ಲೀಷಿನಲ್ಲಿ ಕ್ಯಾಪ್ಶನ್ ಇರುತ್ತಿದ್ದವು. ನಂತರ ಟಾಕೀ ಚಿತ್ರಗಳು ಬಂದವು. ಅಂದಿನ ತಾರೆಗಳಾದ ಸುಲೋಚನ, ದೇವಿಕಾರಾಣಿ ಅವರ ಬಗ್ಗೆ ಬರೆಯುತ್ತಾರೆ.

1949-50ರಲ್ಲಿ ಇವರು ಮುಂಬೈಯ ಸಂಜೆಪತ್ರಿಕೆ ಫ್ರೀ ಪ್ರೆಸ್ ಜರ್ನಲ್'ದ ಸಂಪಾದಕರಾದಾಗ ಸಿನೇಮಾ ಪುಟದ ಸಂಪಾದಕರಾದ ಅಜಿತ್ ಮರ್ಚಂಟರಿಗೆ ಹೇಳಿದ್ದರಂತೆ, ಹಳೆಯ ಸಿನೇಮಾ ತಾರೆಯರ ಬಗ್ಗೆ ಒಂದು ಫೀಚರ್ ಯಾಕೆ ಪ್ರಾರಂಭಿಸಬಾರದು?' ಎಂದು. ಯಾರಿಂದ ಶುರು ಮಾಡೋಣ' ಎಂದು ಅಜಿತ್ ಕೇಳಿದಾಗ, ಕಾಮತರು ಅಂದರಂತೆ, ಸುಲೋಚನಾಳಿಂದ ಶುರು ಮಾಡೋಣ' ಎಂದು. ಕಾಮತರು ಹದಿನಾಲ್ಕು ವರ್ಷದ ಹುಡುಗನಾಗಿದ್ದಾಗ ಸುಲೋಚನಾಳ ಸೌಂದರ್ಯಕ್ಕೆ ಮನಸೋತಿದ್ದರಂತೆ, ಅವಳನ್ನು ಪ್ರೀತಿಸತೊಡಗಿದ್ದರಂತೆ. ಅವಳನ್ನು ಸಂದರ್ಶಿಸುವಾಗ ಅಜಿತ್ ಈ ವಿಷಯ ಸುಲೋಚನಾಳಿಗೆ ಹೇಳಿದಾಗ ಅವಳಿಗಾದ ಆನಂದಕ್ಕೆ ಪಾರವಿರಲಿಲ್ಲವಂತೆ. ಅವಳು ಇವರನ್ನು ಚಹಾಕ್ಕೆ ಕರೆದಳು. ಅವಳ ವಾಸಸ್ಥಾನವು ಕೆಂಪ್ಸ್ ಕಾರ್ನರಿನ ಒಂದು ಹಾಳುಬಿದ್ದ ಮನೆ. ಅವಳ ಸ್ಥಿತಿ ಕಂಡು ಕಾಮತರು ಮಮ್ಮಲ ಮರುಗಿದರು.

ಬಾಲ್ಯದಲ್ಲಿ ಇವರ ಮೇಲೆ ಬಹಳ ಪ್ರಭಾವ ಬೀರಿದ ವ್ಯಕ್ತಿ ಎಂದರೆ ವಿವೇಕಾನಂದರು. ವಿವೇಕಾನಂದ, ರಾಮಕೃಷ್ಣ ಪರಮಹಂಸ, ಮಾತೆ ಶಾರದಾದೇವಿ- ಇವರುಗಳ ಬೃಹತ್ ಭಾವಚಿತ್ರಗಳು ಇವರ ಮನೆಯಲ್ಲಿದ್ದವಂತೆ. ಕಠೋಪನಿಷತ್ತಿನ ವಾಕ್ಯ, ಉತ್ತಿಷ್ಠ, ಜಾಗ್ರತ, ಪ್ರಾಪ್ಯವರಾನಿಬೋಧತ' (ಎದ್ದೇಳು, ಎಚ್ಚರರಾಗು, ಗುರಿ ತಲುಪುವ ವರೆಗೆ ನಿಲ್ಲಬೇಡ.) (Arise, Awake, and stop not till the goal is reached.) ಇದನ್ನು ವಿವೇಕಾನಂದರು ಬಹಳ ಪ್ರಚುರಗೊಳಿಸಿದರು. ತರುಣರನ್ನು ಎದ್ದೇಳಿಸುವ ಮಹಾ ಮಂತ್ರವಾಗಿ ಬಳಸಿದರು.
ಈ ಹಿಂದಿನ ಭಾಗಗಳು:
ಕಾಮತರ ಅಕ್ಕರೆಯ ಬಾಲ್ಯ
ಕಾಮತ್ ಆತ್ಮಚರಿತ್ರೆ-ಭಾಗ 1
ಪತ್ರಕರ್ತ ಎಮ್.ವಿ.ಕಾಮತರ ಆತ್ಮಚರಿತ್ರೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X