ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಂಬಿದ ಮನೆಯಲ್ಲಿ ಕಾಮತರ ಅಕ್ಕರೆಯ ಬಾಲ್ಯ

By Staff
|
Google Oneindia Kannada News

M.V.Kamathಖ್ಯಾತ ಪತ್ರಕರ್ತ, ಕನ್ನಡಿಗ ಎಂ.ವಿ.ಕಾಮತ್ ಅವರ ಆತ್ಮಚರಿತ್ರೆ 'ಎ ರಿಪೋರ್ಟರ್ ಎಟ್ ಲಾರ್ಜ್' ಕನ್ನಡ ಸಂಗ್ರಹಾನುವಾದದ ಎರಡನೇ ಭಾಗ ಇಲ್ಲಿದೆ. ಕ್ರಿಶ್ಚಿಯನ್ನರೊಡನೆಯ ಕಾಮತ್ ಅವರ ಒಡನಾಟ, ತುಂಬಿದ ಮನೆಯಲ್ಲಿನ ಚೆಂದದ ಬಾಲ್ಯ, ಕೊಂಕಣಿ ಮೇಲಿನ ಭಾಷಾಪ್ರೇಮ, ಮೀನಿನ ಮೇಲಿನ ಪ್ರೀತಿ ಮುಂತಾದ ವಿವರಗಳನ್ನು ಲೇಖಕರು ಅನಾವರಣಗೊಳಿಸಿದ್ದಾರೆ.

ಸಂಗ್ರಹಾನುವಾದ : ಡಾ| 'ಜೀವಿ' ಕುಲಕರ್ಣಿ, ಮುಂಬೈ

ಕೆನರಾದಲ್ಲಿ ವಾಸವಾಗಿದ್ದ ರೋಮನ್ ಕೆಥೊಲಿಕ್ ಜನಾಂಗದ ಬಗ್ಗೆ ವಿವರವಾಗಿ ಕಾಮತರು ಬರೆಯುತ್ತಾರೆ. 1768ರಲ್ಲಿ, ಹೈದರಲಿ ಮತ್ತು ಬ್ರಿಟಿಶರ ನಡುವೆ ನಡೆದ ಕಾಳಗದಲ್ಲಿ, ಕೆಥೊಲಿಕ್ ಜನಾಂಗದವರು ಇಂಗ್ಲಿಷರಿಗೆ ಬೆಂಬಲ ನೀಡಿದ್ದರಿಂದ ಹೈದರಲಿಯು ಅವರ ಬಗ್ಗೆ ಬಹಳ ಕುಪಿತನಾಗಿದ್ದ. ಮುಂದೆ ಅರಸನಾದ ಟೀಪು ಅದೇ ಕೋಪ ಮುಂದುವರಿಸಿದ್ದ. ಇದರ ಬಗ್ಗೆ ಕ್ರಾಂತಿ ಪೆರಿಯಾಸ್ ಬರೆಯುತ್ತಾರೆ, ಅವನು(ಟೀಪು) ರಾಜ್ಯವಾಳಿದ ಕಾಲ (1784-1799) ಕೆನರಾದ ಕ್ರಿಶ್ಚನ್ ಸಮಾಜಕ್ಕೆ ಕರಾಳ ದಿನಗಳಾಗಿದ್ದವು. ಸುಮಾರು 60 ಸಾವಿರ ಕ್ರಿಶ್ಚನ್ ಸ್ತ್ರೀಪುರುಷರನ್ನು ಬಂದಿಮಾಡಿ ಶ್ರೀರಂಗಪಟ್ಟಣದಲ್ಲಿ ಇಟ್ಟಿದ್ದ. ಟೀಪುನ ಅವಸಾನದ ನಂತರ ಅವರು ಮುಕ್ತರಾದರು. ಬೇಸಾಯ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದರು.' ಎಂದು.

ರಾಷ್ಟ್ರೀಯ ಮನೋಭಾವವುಳ್ಳ ಕ್ರಿಶ್ಚನ್ನರ ಬಗ್ಗೆ ಕಾಮತರು ಬರೆಯುತ್ತಾರೆ. ಮುಂಬೈಯ ಸೇಂಟ್ ಝೇವಿಯರ್ಸ್ ಕಾಲೇಜಿನಲ್ಲಿ ಬೇರೆ ಮತದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿರಲಿಲ್ಲ. ಭಿನ್ನ ಮತೀಯರಿಗೂ ಮುಕ್ತ ಪ್ರವೇಶವನ್ನಿ ನೀಡಬೇಕು ಎಂಬ ಗೊತ್ತುವಳಿಯನ್ನು ಕೆಥೋಲಿಕ್ ಸ್ಟೂಡೆಂಟ್ಸ್ ಅಸೋಸಿಯೇಶನ್'ನಲ್ಲಿ ಪಾಸುಮಾಡಿಸಿದ ಜೋಕಿಂ ಆಳ್ವಾ ಅವರನ್ನು ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಧುರ್ ಅವರು ಕಾಲೇಜಿನಿಂದ ಹೊರಗೆಹಾಕಿದ್ದರಂತೆ. ಕಾಮತರು ಮಂಗಳೂರಿನ ಗವ್ಹರ್ನಮೆಂಟ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಆ ಕಾಲದಲ್ಲಿ ಒಬ್ಬ ಕ್ರಿಶ್ಚನ್ ವಿದ್ಯಾರ್ಥಿಯೂ ಗಾಂಧೀ ಟೋಪಿ ಧರಿಸುವ ಧೈರ್ಯ ಮಾಡುತ್ತಿರಲಿಲ್ಲವಂತೆ. ಸೇಂಟ್ ಎಲೋಶಿಯಸ್ ಕಾಲೇಜಿನ ಅಧಿಕಾರಿಗಳು ತಮ್ಮಲ್ಲಿರುವ ಕ್ರಿಶ್ಚನ್ ವಿದ್ಯಾರ್ಥಿಗಳಿಗೆ ತಮ್ಮ ಹಿಂದೂ ಮಿತ್ರರನ್ನು ಅನುಕರಣೆ ಮಾಡದಿರಲು ತಾಕೀತುಮಾಡುತ್ತಿದ್ದರಂತೆ.

ಕೆನರಾ ಜಿಲ್ಲೆಯಲ್ಲಿ ನಡೆಯುತ್ತಿದ್ದ ಮತಾಂತರಗಳ ಬಗ್ಗೆ ಬರೆಯುತ್ತಾರೆ. ಮತಾಂತರಗೊಂಡವರಲ್ಲಿ ಹೆಚ್ಚಿನ ಜನ ಬಡವರು, ಶೂದ್ರರು ಆಗಿರುತ್ತಿದ್ದರಂತೆ. ಕ್ರಿಶ್ಚನ್ ಮಿಶನರಿಗಳು ಮಾಡಿದ ವಿದ್ಯಾಪ್ರಸಾರದ ಬಗ್ಗೆ ಬರೆಯುತ್ತಾರೆ. ರೆವರೆಂಡ್ ಹರ್‌ಮನ್ ಮೊಗ್ಲಿಂಗರು 1836ರಲ್ಲಿ ಮಂಗಳೂರು ಸಮಾಚಾರ' ಪತ್ರಿಕೆ ಪ್ರಾರಂಭಿಸಿದರು. ರೆವೆರೆಂಡ್ ಗಾಡ್ ಪ್ರೈ ವೈಗ್ಲೆ 1839ರಲ್ಲಿ ಕ್ರಿಸ್ತಗೀತಗಳನ್ನು ಕನ್ನಡದಲ್ಲಿ ಬರೆದರು. ರೆವೆರೆಂಡ್ ಕಿಟೆಲ್ ಅವರು 1853ರಲ್ಲಿ ಕನ್ನಡ-ಇಂಗ್ಲಿಷು ನಿಘಂಟು ಪ್ರಕಟಿಸಿದರು.'

ಬಾಸೆಲ್ ಮಿಶನ್ 1913ರಲ್ಲಿ ಬಹುದೊಡ್ಡ ಉದ್ಯಮ ಪ್ರಾರಂಭಿಸಿತ್ತು. 20 ಸಾವಿರ ಜನ ಕೆಲಸಮಾಡುತ್ತಿದ್ದರು. ಅವರು 1923ರಲ್ಲಿ ಆಸ್ಪತ್ರೆ ಪ್ರಾರಂಭಿಸಿದರು. ಉಡುಪಿಯ ಪ್ರಥಮ ಮಹಿಳಾ ವೈದ್ಯ, ಡಾಕ್ಟರ್ ಲೊಂಬಾರ್ಡ್ ಎಂಬವಳು ಒಂದು ದಂತಕತೆಯಾಗಿದ್ದಳಂತೆ. ಬ್ರಾಹ್ಮಣಳಾಗಿದ್ದ ಕಮಲಾ ಎಂಬ ಮಿಡ್‌ವೈಫ್(ಸೂಲಗಿತ್ತಿ) ಆಗ ಬಹಳ ಪ್ರಸಿದ್ಧಳಾಗಿದ್ದಳಂತೆ. ಕಾಮತ ಪರಿವಾರದ ಹೆಚ್ಚಿನ ಮಕ್ಕಳ ಹೆರಿಗೆ ಅವಳೇ ಮಾಡಿಸಿದ್ದಳಂತೆ. ಉಡುಪಿ ಹಾಗೂ ಮಂಗಳೂರು ವಿಭಾಗದಲ್ಲಿ ಡಾ. ಟಿ.ಎಂ.ಎ.ಪೈ ಫೌಂಡೇಶನ್ ಅಸ್ತಿತ್ವಕ್ಕೆ ಬಂದ ಮೇಲೆ ಇತರ ವಿದ್ಯಾ ಸಂಸ್ಥೆಗಳು ತಮ್ಮ ಮಹತ್ವ(ಆದ್ಯತೆ) ಕಳೆದುಕೊಂಡವು ಎನ್ನುತ್ತಾರೆ.

ಆ ಕಾಲದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ಮೊದಮೊದಲು ಬ್ರಾಹ್ಮಣರದೆ ಮೇಲುಗೈ ಇತ್ತಂತೆ. ಇವರ ಮಾತಾಮಹ(ತಾಯಿಯ ತಂದೆ) ಓದು, ಬರೆಹ, ಗಣಿತದಲ್ಲಿ ನಿಷ್ಣಾತರಾಗಿದ್ದರು. ಪರ್ಶಿಯನ್ ಕೂಡ ಕಲಿತಿದ್ದರು. ಆ ಕಾಲದಲ್ಲಿ ಐಗಳ ಶಾಲೆ ಪ್ರಸಿದ್ಧವಾಗಿದ್ದವು. ಆಗ ಮಂಗಳೂರಿನ ಜನರು ಹೆಚ್ಚಿನ ಶಿಕ್ಷಣ್ಕಾಗಿ ಮದ್ರಾಸಿಗೆ ತೆರಳುತ್ತಿದ್ದರು. 1900ರಲ್ಲಿ ಮಂಗಳೂರು ಮಲಬಾರಿನ ಕಾಲಿಕತ್ ಜಿಲ್ಲೆಗೆ ಸೇರಿತ್ತು ಆದ್ದರಿಂದ ಮದ್ರಾಸಿನ ಸಂಬಂಧ ಹೆಚ್ಚಾಗಿತ್ತು. ಆ ಕಾಲದಲ್ಲಿ ಎತ್ತಿನ ಗಾಡಿ, ಕುದುರೆ ಜಟಕಾ ಸಾಮಾನ್ಯವಾಗಿದ್ದವು. ರಾತ್ರಿಪ್ರಯಾಣ ಪ್ರಸಿದ್ಧವಾಗಿತ್ತು. ಬಸ್ 20ರ ದಶಕದಲ್ಲಿ ಬಂತು ಎಂದು ಬರೆಯುತ್ತಾರೆ.

ಮಾಧವ ಕಾಮತರ ಜನನ ಉಡುಪಿಯಲ್ಲಾಯಿತು (7, ಸೆಪ್ಟೆಂಬರ್ 1921). ತಮ್ಮ ನೆಚ್ಚಿನ ಉಡುಪಿಯ ಬಗ್ಗೆ ವಿವರವಾಗಿ ಬರೆಯುತ್ತಾರೆ. ಉಡುಪಿ'ಯನ್ನು ಬ್ರಿಟಿಶರು ತಪ್ಪು ಉಚ್ಚರಿಸಿ ಉಡಿಪಿ' ಎಂದರಂತೆ. ಉಡು' ಎಂದರೆ ನಕ್ಷತ್ರ. ಪ' ಎಂದರೆ ಒಡೆಯ. ಉಡುಪಿಯಲ್ಲಿ ಚಂದ್ರಮೌಳೇಶ್ವರ ದೇವಸ್ಥಾನವಿದೆ. ಉಡುಪಂ' ಎಂದರೆ ನೌಕೆ. ದ್ವಾರಕೆಯಿಂದ ಕೃಷ್ಣನ ಮೂರ್ತಿ ಒಂದು ನೌಕೆಯಲ್ಲಿ ಉಡುಪಿಗೆ ಬಂತು. ಶ್ರೀ ಮಧ್ವಾಚಾರ್ಯರು ಅದನ್ನು ಸ್ಥಾಪಿಸಿ ಕೃಷ್ಣ ಮಂದಿರದ ಅಸ್ತಿತ್ವಕ್ಕೆ ಕಾರಣರಾದರು. ಅದರ ಹಿಂದಿನ ಕತೆ ಹೀಗಿದೆ. ಗೋಪೀಚಂದನದ ಬಂಡೆಯಲ್ಲಿ ಶ್ರೀ ಕೃಷ್ಣನ ಮೂರ್ತಿ ಇತ್ತು. ಅದನ್ನು ಹೊತ್ತು ತಂದ ಪಂಡಿ'(ನೌಕೆ) ಬಿರುಗಾಳಿಗೆ ಸಿಲುಕಿತ್ತು. ಶ್ರೀ ಮಧ್ವರು ತಮ್ಮ ಅಂಗವಸ್ತ್ರ ಬೀಸಿ ನೌಕೆ ನಡೆಸುವವನಿಗೆ ದಾರಿ ತೋರಿದರು, ರಕ್ಷಿಸಿದರು. ಗೋಪೀಚಂದನದ ಬಂಡೆಯಲ್ಲಿ ಶ್ರೀ ಕೃಷ್ಣನ ವಿಗ್ರಹ ಅಡಗಿದ್ದು ಶ್ರೀ ಮಧ್ವರಿಗೆ ಮಾತ್ರ ತಿಳಿದಿತ್ತು. ಅದನ್ನು ಕಾಣಿಕೆಯಾಗಿ ಪಡೆದರು. ಶ್ರೀ ಕೃಷ್ಣದೇವಾಲಯದ ಬಗ್ಗೆ ಇದ್ದ ಹಲವಾರು ಕತೆಗಳಲ್ಲಿ ಇದು ನಂಬಲರ್ಹವಾಗಿದೆ ಎನ್ನುತ್ತಾರೆ.

ನಮಸ್ತೇ ಶಾರದಾ ದೇವಿ ಕಾಶ್ಮೀರಪುರವಾಸಿನೀ' ಎನ್ನುತ್ತ, ತಾವು ಸಾರಸ್ವತ ಬ್ರಾಹ್ಮಣ ಮನೆತನಕ್ಕೆ ಸೇರಿದವರು ಎಂದು ಬರೆಯುತ್ತಾರೆ. ಜವಾಹರಲಾಲ ನೆಹರು ಅವರು ಕಾಶ್ಮೀರಿ ಬ್ರಾಹ್ಮಣರು. ಹಾಗೆ ನೋಡಿದರೆ ಸಾರಸ್ವತರು ಮೂಲತಃ ಕಾಶ್ಮೀರದವರು. ಸ್ಕಂದ ಪುರಾಣದ ಸಹ್ಯಾದ್ರಿ ಖಂಡದ ಪ್ರಕಾರ ಸಾರಸ್ವತ ಬ್ರಾಹ್ಮಣರು ಗೌಡದೇಶದವರು, ಬಂಗಾಲದವರು. ಸಾರಸ್ವತರ ಮೂಲ ಸರಸ್ವತೀ ನದೀತೀರದಲ್ಲಿತ್ತು. ಇಂದು ಆ ನದಿ ಇಲ್ಲ. ಅದು ಗುಪ್ತವಾಗಿದೆ (ಲುಪ್ತವಾಗಿದೆ). ಸರಸ್ವತೀ ನದಿ ಗುಪ್ತವಾದ ಮೇಲೆ ಸಾರಸ್ವತರು ಭಾರತದಲ್ಲಿ ಎಲ್ಲೆಡೆ ಹರಡಿದರು. ಸಾರಸ್ವತರಿಗೆ ಮೀನು ಬಹಳ ಪ್ರೀತಿಯ ಆಹಾರ. ಅದರ ಬಗ್ಗೆ ಅನೇಕ ಕತೆ-ಉಪಕತೆಗಳನ್ನು ಹೇಳುತ್ತಾರೆ. ಒಂದು ಕತೆ ಹೀಗಿದೆ. ಗೋವೆಯ ಒಬ್ಬ ಸಾರಸ್ವತ ಬ್ರಾಹ್ಮಣನಿಗೆ ಯಮಧರ್ಮ ಸಂಜೆಯೊಳಗಾಗಿ ಈ ಭೂಮಿಯನ್ನು ತೊರೆಯಲು ಸಿದ್ಧನಾಗು ಎಂದು ಹೇಳುತ್ತಾನೆ. ಅಡಿಗೆಯ ಮನೆಯಿಂದ ಆಗ ಮೀನಬೇಯಿಸುವ ವಾಸನೆ ಬಂತಂತೆ. ಅವನು ಯಮನಿಗೆ ಮೂರು ತಾಸು ಅವಕಾಶ ನೀಡಲು ಕೇಳುತ್ತಾನಂತೆ. ಕಾರಣ ಈ ಲೋಕ ಬಿಡುವ ಮುನ್ನ ತೃಪ್ತಿಯಾಗುವಂತೆ ಫಿಶ್-ಕರಿ' ಅವನಿಗೆ ತಿನ್ನುವ ಕೊನೆಯ ಆಸೆಯಾಯಾಗಿತ್ತು. ಇಂಥ ಕತೆ ನಂಬಲು ಯೋಗ್ಯವಾಗಿದೆ ಎಂದು ಕಾಮತರು ಬರೆಯುತ್ತಾರೆ.

ಕಾಮತರು ತಮ್ಮ ಮನೆತನದ ವಿವರ ನೀಡುತ್ತಾರೆ. ಅವರ ತಂದೆ ಮೀನು ತಿನ್ನುತ್ತಿರಲಿಲ್ಲವಂತೆ. ಆದರೆ ಅವರ ಮಾತಾಮಹ(ತಾಯಿಯ ತಂದೆ) ಮೀನು ತಿನ್ನುತ್ತಿದ್ದರಂತೆ. ಕಾಮತರ ಅಜ್ಜಿ ಮನೆಯಲ್ಲಿ ಮೀನು ಬೇಯಿಸಲು ಬಿಡುತ್ತಿರಲಿಲ್ಲವಂತೆ. ಆ ಕೆಲಸಕ್ಕೆ ಮನೆಯ ಪಾತ್ರೆಗಳನ್ನು ಬಳಸುವಂತಿರಲಿಲ್ಲ. ಮೀನು ತಿನ್ನಲು ಮನೆಯ ಸದಸ್ಯರು ಬಯಸಿದರೆ ಮನೆಯ ಹೊರಗೆ ಇರುವ ಕೋಣೆಯಲ್ಲಿ, ಮಣ್ಣಿನ ಮಡಕೆ ಬಳಸಿ ಬೇಯಿಸಲು ಅನುಮತಿ ನೀಡುತ್ತಿದ್ದರು. ಆಳುಗಳು ವಾಸಿಸುವ ಸ್ಥಳದಲ್ಲಿ ಹೋಗಿ ತಿನ್ನಲು ಬಿಡುತ್ತಿದ್ದರು.

ಸಾರಸ್ವತರು ಹೆಚ್ಚಾಗಿ ವಾಸಿಸಿರುವ ಪ್ರದೇಶ ಕೊಂಕಣಪಟ್ಟಿ, ಅದುವೆ ಪರಶುರಾಮ ಕ್ಷೇತ್ರ. ಅದರ ಬಗ್ಗೆ ಬರೆಯುತ್ತಾರೆ. ಸಾರಸ್ವತರು ಸೀಖರಂತೆ, ಸಿಂಧಿಗಳಂತೆ ಜಗತ್ತಿನ ಎಲ್ಲ ಭಾಗಗಳಲ್ಲಿ ಹೇಗೆ ಹರಡಿದ್ದಾರೆಂಬ ಬಗ್ಗೆ ಬರೆಯುತ್ತಾರೆ. ಸಾರಸ್ವತರಲ್ಲಿ ಊರ ಹೆಸರುಗಳನ್ನು ಬಳಸುತ್ತಾರೆ. ಕಾರ್ನಾಡ, ಪೇಜಾವರ, ಬೆನಗಲ್ ಮೊದಲಾದ ಉದಾಹರಣೆ ಕೊಡುತ್ತಾರೆ. ವಿದೇಶದಲ್ಲಿ ಒಬ್ಬ ಮೂಡುಬಿದ್ರಿ ಎಂಬವರನ್ನು ಕಂಡಿದ್ದರಂತೆ. ಅವರು ಸಾರಸ್ವತರೆಂದು ತಿಳಿದಾಗ ತಮಗಾದ ಆನಂದವನ್ನು ಬಣ್ಣಿಸುತ್ತಾರೆ.

ಕಾಮತರು ಬರೆಯುವಾಗ ಕೆಲಸಲ ಕವಿತ್ವಕ್ಕೆ ಮಾರುಹೋಗುತ್ತಾರೆ. ತಮ್ಮ ಮನೆಯ ಬಗ್ಗೆ ಬರೆವಾಗ ಥಾಮಸ್ ಹುಡ್ ಅವರ ಮನೆ ಮನೆ ನನ್ನ ಮನೆ | ನಾನು ಹುಟ್ಟಿ ಬೆಳೆದ ಮನೆ' ನೆನೆಯುತ್ತಾರೆ. ಇಡೀ ಇಂಗ್ಲಿಷ್ ಪದ್ಯವನ್ನು ಉದ್ಧರಿಸುತ್ತಾರೆ. ಕಾಮತರ ಅಜ್ಜ ವ್ಯಾಪಾರ ಮಾಡುತ್ತಿದ್ದರು. ಅಮ್ಮೆಂಬಳದಲ್ಲಿ ತಮ್ಮ ಪೂರ್ವಜರ ಮನೆಯಲ್ಲಿ ವಾಸಿಸುತ್ತಿದ್ದರು. ಅವರಿಗೆ ಎಂಟು ಮಕ್ಕಳು. (ಏಳು ಗಂಡು ಒಂದು ಹೆಣ್ಣು). ಅವರ ತಂದೆ ಐದನೆಯ ಮಗ. 1882ರಲ್ಲಿ ಜನಿಸಿದ್ದ ತಂದೆಯವರು ರಾಷ್ಟ್ರಕವಿ ಗೋವಿಂದ ಪೈ ಅವರ ಸಹಪಾಠಿಯಾಗಿದ್ದರಂತೆ. ಇವರು 1900ರಲ್ಲಿ ಮೆಟ್ರಿಕ್ಯುಲೇಶನ್ ಪಾಸಾದಾಗ ಕನ್ನಡ ವಿಷಯದಲ್ಲಿ ಅತ್ಯಧಿಕ ಗುಣ ಪಡೆದಿದ್ದರು. ಸಹಪಾಠಿ ಪೈಗಳಿಗಿಂತ ಹೆಚ್ಚು. ಮುಂದೆ ಇವರು ವಕೀಲಿ ವೃತ್ತಿಯಲ್ಲಿ ಪ್ರಸಿದ್ಧಿ ಪಡೆದರೆ, ಪೈ ಹಿರಿಯ ಲೇಖಕರಾದರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇವರ ತಂದೆ ಮದ್ರಾಸಿನ ಕ್ರಿಶ್ಚನ್ ಕಾಲೇಜು ಸೇರಿದರು. ಕಾಮತರ ತಾಯಿ ಉಡುಪಿಯ ಶ್ರೀಮಂತ ಜಮೀನುದಾರರ ಏಕಮಾತ್ರ ಪುತ್ರಿಯಾಗಿದ್ದರು. ಕಾಮತರ ತಂದೆ ವಕೀಲಿ ವೃತ್ತಿಯನ್ನು ಉಡುಪಿಯಲ್ಲಿ ಪ್ರಾರಂಭಿಸಿದರು. ಯಶಸ್ಸು ಪಡೆದರು. ಆ ಕಾಲದಲ್ಲಿ ಇವರು ಕಟ್ಟಿಸಿದ ಮನೆ ಉಡುಪಿಯಲ್ಲಿಯೇ ಅತಿ ದೊಡ್ಡದಾಗಿತ್ತಂತೆ. ಬಾವಿಯಿಂದ ನೀರು ಸೇದುವುದು ಮಹಿಳೆಯರಿಗೆ ಸಾಹಸದ ಕೆಲಸವಾಗಿತ್ತಂತೆ. ಮೂವತ್ತು ಫೂಟು ಆಳದಿಂದ ನೀರು ಸೇದಿ ಕೊಡಗಳನ್ನು ಹೊತ್ತು ಒಯ್ಯುವ ದೃಶ್ಯ ಆಕರ್ಷಕವಾಗಿರುತ್ತಿತ್ತು. ನೀರು ಸೇದುವುದರಿಂದಾಗಿ ಸ್ತ್ರೀಯರು ತೆಳ್ಳಗಾಗಿ ಆಕರ್ಷಕರಾಗಿ ಕಾಣುತ್ತಿದ್ದರಂತೆ, ಕೊಬ್ಬಿಲ್ಲದ ದೇಹ ಸೌಷ್ಠವ ಪಡೆಯುತ್ತಿದ್ದರಂತೆ. ಎಲ್ಲ ನೆನಪುಗಳನ್ನು ಕಾಮತರು ದಾಖಲಿಸುತ್ತ ಚಿತ್ರವತ್ತಾಗಿ ಬಣ್ಣಿಸುತ್ತ ಹೋಗುತ್ತಾರೆ.

ಅವರ ದೊಡ್ಡಮನೆ ಯಾವಾಗಲೂ ಜನರಿಂದ ತುಂಬಿ ತುಳುಕುತ್ತಿತ್ತು. ತಾಯಿಯ ತಂದೆ ಮತ್ತು ತಾಯಿ, ನನ್ನ ತಾಯಿ ಹಾಗೂ ತಂದೆ, ವಿಧವೆಯಾದ ಸೋದರಿಯೊಬ್ಬಳು, ಇಬ್ಬರು ಅಣ್ಣಂದಿರು, ಒಬ್ಬ ಹಿರಿಯ ಅಕ್ಕ, ನಾಲ್ವರು ತಂದೆಯ ಸೋದರರ ಸಂತಾನ, ನಾನು, ಇಬ್ಬರು ತಾಯಿಯ ಕಡೆಯ ಸೋದರರ ಮಕ್ಕಳು (ವಿದ್ಯಾಭ್ಯಾಸಕ್ಕಾಗಿ ಉಡುಪಿಗೆ ಬಂದು ಸೇರಿದವರು), ಒಬ್ಬಿಬ್ಬರು ದೂರದ ಸಂಬಂಧಿಗಳು, ಒಬ್ಬ ಅಡಿಗೆಯವಳು, (ಕುಟುಂಬದ ಒಬ್ಬ ಸದಸ್ಯಳಂತೆ ಇದ್ದ, ಮಕ್ಕಳನ್ನು ಆಗಾಗ ಗದರಿಸುವ ಮತ್ತು ತಿದ್ದುವ ಜವಾಬ್ದಾರಿ ಹೊತ್ತ ಸಾರಸ್ವತ ಸಮಾಜದ ಒಬ್ಬ ವಿಧವೆ), ಮೇಲಿನ ಕೆಲಸದ ಆಳು - ಹೀಗೆ ಯಾವುದೇ ದಿನಕ್ಕೆ ಇಪ್ಪತ್ತಕ್ಕೆ ಮೀರಿದ ಸಂಖ್ಯೆಯಲ್ಲಿ ಜನರು ಮನೆಯಲ್ಲಿ ಇರುತ್ತಿದ್ದರು'' ಎಂದು ಕಾಮತರು ಬರೆಯುತ್ತಾರೆ.

ಆ ಕಾಲದಲ್ಲಿ ಸ್ತ್ರೀಯರು ಬೇಗನೆ ಎದ್ದು ಹೇಗೆ ಮನೆಗೆಲಸದಲ್ಲಿ ತೊಡಗುತ್ತಿದ್ದರು ಎಂಬ ವಿವರ ಕೊಡುತ್ತಾರೆ. ಆಕಳು ಎಮ್ಮೆಗಳಿಂದ ಹಾಲು ಕರೆಯುವುದು. ಮನೆಯ ಪರಿವಾರಕ್ಕೆ ಮೂರು ಸಲ ಆಹಾರ ಒದಗಿಸುವುದು ಹೆಂಗಳೆಯರಿಗೆ ಇಡೀ ದಿನದ ಕೆಲಸವಾಗಿ ಬಿಡುತ್ತಿತ್ತು. ಆ ಕಾಲದಲ್ಲಿ ಎರಡು ರೂಪಾಯಿ ನಾಲ್ಕಾಣೆಗೆ 40 ಸೇರು ಅಕ್ಕಿ ದೊರೆಯುತ್ತಿತ್ತು. ಆಳಿನ ತಿಂಗಳ ಸಂಬಳ ಎರಡು ರೂಪಾಯಿ. ಆ ಕಾಲದಲ್ಲಿ ರೇಡಿಯೋ, ಟೆಲಿವಿಜನ್ ಇರಲಿಲ್ಲ. ಸಿನೇಮಾ ನಾಟಕಗೃಹ ಇರಲಿಲ್ಲ. ಓದಲು ಪತ್ರಿಕೆ, ಪುಸ್ತಕ ಇರಲಿಲ್ಲ. ಇಡೀ ದಿನ ದುಡಿದ ಮೇಲೆ ಸಂಜೆ ಗುಡಿಗೆ ಹೋಗುವದೇ ಮನರಂಜನೆ ಪಡೆಯುವ ಸಮಯವಾಗಿತ್ತು.

ಹಬ್ಬಹರಿದಿನಗಳಿಗೆ ಕೊರತೆ ಇರಲಿಲ್ಲ. ಯಾರಾದರೂ ಹಬ್ಬಗಳ ಪಟ್ಟಿ ಕೇಳಿದರೆ ಕಾಮತರ ಬಾಯಿಯಿಂದ ಒಂದು ಪಟ್ಟಿ ಬಂದುಬಿಡುತ್ತಿತ್ತು. ಗಣೇಶ ಚತುರ್ಥಿ, ನಾಗಪಂಚಮಿ, ಸುಬ್ರಹ್ಮಣ್ಯ ಷಷ್ಟಿ, ರಥಸಪ್ತಮಿ, ಗೋಕುಲಾಷ್ಟಮಿ, ರಾಮ ನವಮಿ, ವಿಜಯದಶಿಮಿ, (ಆಷಾಢ) ಏಕಾದಶಿ...ಕಾಮತರ ಅಜ್ಜಿಗೆ ಗ್ರೆಗೋರಿಯನ್ ಕೆಲೆಂಡರ್ ಮಹತ್ವದ್ದಾಗಿರಲಿಲ್ಲ. ಅವಳಿಗೆ ಸಂವತ್ಸರ, ಮಾಸ (ಚೈತ್ರ, ವೈಶಾಖ, ಜೇಷ್ಠ...), ದಿನ (ಪಾಡ್ಯ, ಬಿದಗಿ, ತದಗಿ,..), ನಕ್ಷತ್ರ (ಅಶ್ವಿನಿ, ಭರಣಿ, ಕೃತ್ತಿಕಾ..) ಮುಖೋದ್ಗತವಾಗಿದ್ದವಂತೆ. ಅವರ ಅಜ್ಜಿ ನಿರಕ್ಷರಿಯಾಗಿದ್ದರೂ ಆದರೆ ಅವರ ಜ್ಞಾನ ಅಗಾಧವಾಗಿತ್ತು. ಅವರಿಗೆ ಜಾತಕ ಹಾಕಲು ಬರುತ್ತಿರಲಿಲ್ಲ ಆದರೆ ಜಾತಕ ಕೂಡುತ್ತದೆಯೋ ಇಲ್ಲವೋ ತಿಳಿಯುತ್ತಿತ್ತು. ರಾಮಾಯಣ, ಮಹಾಭಾರತ, ಭಾಗವತ ಕತೆಗಳೆಲ್ಲ ಗೊತ್ತಿದ್ದವು. ಅಜ್ಜಿ ಹಾಲು ಕರೆವಾಗ, ಮೊಸರು ಕಡೆವಾಗ ಕತೆ ಹೇಳುತ್ತಿದ್ದರು. 3 ವರ್ಷಕ್ಕೆ ಅಜ್ಜಿಯ ಪಾಠ ಪ್ರಾರಂಭವಾಗುತ್ತಿತ್ತಂತೆ. ಇಂದಿನ ಸುಶಿಕ್ಷಿತ ಸಾಕ್ಷರಿ' ತಾಯಂದಿರನ್ನು ಹೋಲಿಸಿದರೆ ನಮ್ಮ ಅಜ್ಜಿ ಹೆಚ್ಚು ಸಾಕ್ಷರಿಯಾಗಿದ್ದರು' ಎಂದು ಕಾಮತರು ಉದ್ಗಾರ ತೆಗೆಯುತ್ತಾರೆ.

ಮನೆಯಲ್ಲಿ ಅಜ್ಜಿಯನ್ನು ಯಾರೂ ಅಜ್ಜಿ' ಎಂದು ಕರೆಯುತ್ತಿರಲಿಲ್ಲವಂತೆ. ಎಲ್ಲರಿಗೂ ಅವರು ಅಕ್ಕ' ಆಗಿದ್ದರು. ಅವರ ತಂಗಿಯೊಬ್ಬಳು ಅವರನ್ನು ಅಕ್ಕ ಎಂದು ಕರೆಯುತ್ತಿದ್ದಳು. ಅದೇ ಎಲ್ಲರಿಗೂ ರೂಢಿಯಾಯಿತು. ಅಜ್ಜಿ ಮಡಿ-ಮೈಲಿಗೆ ಬಹಳ ಪಾಲಿಸುತ್ತಿದ್ದರು. ಅವರನ್ನು ಸ್ನಾನ ಮಾಡದೆ ಯಾರೂ ಸ್ಪರ್ಶಿಸುವಂತಿರಲಿಲ್ಲ. ಮನೆಯಲ್ಲಿ ಸ್ತ್ರೀಯರು ಋತುಮತಿಯರಾದಾಗ ಅವರನ್ನು ಅಸ್ಪೃಶ್ಯರಂತೆ ದೂರ ಇಡಲಾಗುತ್ತಿತ್ತು. ನಾಲ್ಕುದಿನ ನೀರು ಕುಡಿಯಲು ಕೂಡ ಅವರ ಬೇರೆ ಪಾತ್ರೆ ಬಳಸಬೇಕಾಗುತ್ತಿತ್ತು. ಅವರಿಗೆ ಯಾವ ಕೆಲಸ ಇರಲಿಲ್ಲ. ಪಲ್ಲೆಕಾಯಿ ಹೆಚ್ಚುವುದು, ನೀರು ಸೇದುವುದು ಕೂಡ ನಿಷಿದ್ಧವಾಗಿತ್ತು. ಈ ಸಂದರ್ಭದಲ್ಲಿ ಕಾಮತರು ಬರೆಯುತ್ತಾರೆ, ಹವ್ಯಕ ಬ್ರಾಹ್ಮಣರಿಗಿಂತ ಸಾರಸ್ವತರು ಸ್ವಲ್ಪ ಮುಂದುವರಿದವರಾಗಿದ್ದರು.' ಎಂದು. ಬ್ರಾಹ್ಮಣ ವಿಧವೆಯರು ಚಿಕ್ಕ ಪ್ರಾಯದಲ್ಲಿ ಕೂಡ ತಲೆ ಬೋಳಿಸಿಕೊಂಡು ಕೆಂಪು ಸೀರೆ ಉಡಬೇಕಾಗುತ್ತಿತ್ತು. ಆದರೆ ಕಾಮತರ ತಂದೆ ವಿಧವೆಯಾದ ತಮ್ಮ ಮಗಳಿಗೆ ಕೂದಲು ಇಟ್ಟುಕೊಂಡಿರಲು ಅನುಮತಿ ನೀಡಿದ್ದರು. ಅವಳಿಗೆ ಬೇಕಾದ ಬಣ್ಣದ ಬಟ್ಟೆ ಉಡಲೂ ಹೇಳಿದ್ದರಂತೆ. ಆ ಕಾಲದಲ್ಲಿ ವಿಧವೆಯರಿಗೆ ಪುನರ್ ವಿವಾಹ ಇರಲಿಲ್ಲ.

1990ರಲ್ಲಿ ಒಬ್ಬ ಜಸ್ಯುಯಿಟ್ ವಿದ್ವಾಂಸ ಫಾದರ್ ಸಿ.ಸಿ.ಎ. ಪೈ ಎಂಬವರು ಕೊಂಕಣಿ ಕಲ್ಚರ್ ಆಫ್ ಕರ್ನಾಟಕ' ಎಂಬ ಪ್ರಬಂಧವನ್ನು ಕಾಮತರಿಗೆ ಕಳಿಸಿದ್ದರಂತೆ. ಅದನ್ನು ಓದಿದ ಮೇಲೆ ಕಾಮತರಿಗೆ ತಮ್ಮ ಸಂಸ್ಕೃತಿಯ ಬಗ್ಗೆ ಎಷ್ಟು ಕಡಿಮೆ ತಿಳಿದಿದೆ ಎಂಬುದರ ಅರಿವಾಯಿತಂತೆ. ಅದರಲ್ಲಿ ಸಾರಸ್ವತ ಬ್ರಾಹ್ಮಣರ ಹಾಗೂ ರೋಮನ್ ಕೆಥೊಲಿಕ್‌ರ ಸಾಂಸ್ಕೃತಿಕ ಸಾಮ್ಯವನ್ನು ಲೇಖಕರು ಚಿತ್ರಿಸಿದ್ದಾರಂತೆ. ಫಾದರರು ತಮ್ಮ ಪ್ರಬಂಧದಲ್ಲಿ 30 ಕೊಂಕಣಿ ಜಾನಪದ ಗೀತೆಗಳನ್ನು ಉದ್ಧರಿಸಿದ್ದಾರಂತೆ. ತೊಟ್ಟಿಲು ತೂಗುವಾಗಿನ ಹಾಡಿನಿಂದ ಹಿಡಿದು ಮದುವೆಯ ಹಾಡಿನವರೆಗೆ ಹಾಡುಗಳಿವೆ. ಈ ಹಾಡುಗಳು ಗೋವೆಯಲ್ಲಿವೆ, ಆದರೆ ಕೆನರಾಕ್ಕೆ ಬರಲಿಲ್ಲ ಎಂದು ಕಾಮತರು ವಿಷಾದಿಸುತ್ತಾರೆ. ಇಲ್ಲಿ ಕಾಮತರ ಕವಿ ಮನ ಕುಣಿದಾಡುತ್ತದೆ. ಒಂದು ಹಾಡಿನ ಆಂಗ್ಲ ಅನುವಾದವನ್ನೂ ಕೊಡುತ್ತಾರೆ. ಆ ಹಾಡಿನಲ್ಲಿ ಮಲ್ಲಿಗೆ ದಂಡೆ' ಪ್ರೀತಿಯ ಸಂಕೇತವಾಗಿ ಮೂಡಿಬರುತ್ತದೆ. ಅಂದು ಮಲ್ಲಿಗೆ ದಂಡೆ ತಲೆಯಲ್ಲಿ ಮುಡಿದುಕೊಳ್ಳುವುದೇ ಒಂದು ಹಬ್ಬವಾಗಿತ್ತು. ಇಂದು ಮಲ್ಲಿಗೆ ಮುಡಿಯುವ ದಿನಗಳು ಎಲ್ಲಿ ಹೋದವು ಎನ್ನುತ್ತಾರೆ.

'ಎ ರಿಪೋರ್ಟರ್ ಎಟ್ ಲಾರ್ಜ್' ಭಾಗ 1

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X