• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವರಕವಿ ಬೇಂದ್ರೆಯವರ ಅಮರಕೃತಿ ಕನ್ನಡ ಮೇಘದೂತ'-2

By Staff
|

Da.Ra. Bendreಕಾಳಿದಾಸನ ಮೇಘದೂತದ ಕನ್ನಡ ಅವತರಣಿಕೆಯನ್ನು ಬೇಂದ್ರೆಯವರು ಭಾಷಾಂತರ ಎಂದು ಒಪ್ಪುವುದಿಲ್ಲ. ಮೇಘದೂತದಲ್ಲಿನ ಪ್ರಕೃತಿ, ಪ್ರೀತಿಯನ್ನು, ತಾವೇ ಓದುವಾಗಿ ಅನುಭವಿಸಿದ ಆನಂದವನ್ನು ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿಯ ಕುರಿತು ಕನ್ನಡದ ಅನೇಕ ಸಾಹಿತಿಗಳು ಅನುಬಂಧವನ್ನು ಬರೆದಿದ್ದಾರೆ. ಕೆಲ ತುಣುಕುಗಳು ಇಲ್ಲಿವೆ.

ಡಾ| 'ಜೀವಿ' ಕುಲಕರ್ಣಿ, ಮುಂಬೈ

ಕಾಳಿದಾಸನ ನಾಟಕಗಳಾದ ಶಾಕುಂತಲ', ವಿಕ್ರಮೋರ್ವಶೀಯ' ಹಾಗೂ ಅವನ ಖಂಡಕಾವ್ಯವಾದ ಮೇಘದೂತ' - ಇವುಗಳಲ್ಲಿ ಪ್ರೇಮ-ಕಾಮಗಳ ತೊಳಲಾಟವಿದೆ' ಎಂಬುದು ಪಾಶ್ಚಿಮಾತ್ಯರ ದೃಷ್ಟಿ. ಬೇಂದ್ರೆಯವರು ಇದಕ್ಕೆ ಹೊಸ ದೃಷ್ಟಿ ನೀಡುತ್ತಾರೆ. ವಿರಹವೆಂಬುದು ಕಾಮದ ಹುಚ್ಚಾಟವಲ್ಲ, ವಿರಹಾವಸ್ಥೆಯಲ್ಲಿ ತಾಳಿ ಬಾಳುವ ಕಾಮ-ಧರ್ಮ' ಎನ್ನುತ್ತಾರೆ. ಚತುರ್ವಿಧ ಪುರುಷಾರ್ಥಗಳಲ್ಲಿ (ಧರ್ಮ, ಅರ್ಥ, ಕಾಮ, ಮೋಕ್ಷ) ಕಾಮವೂ ಒಂದಾಗಿರುವುದನ್ನು ಇಲ್ಲಿ ಗಮನಿಸಬೇಕು. ಮೇಘದೂತದ ವಿರಹ-ಕಾಮದಲ್ಲಿ ಅನಾದಿಕಾಮ, ಜೀವಲೋಕದಕಾಮ, ಭೂಮಿಯಕಾಮ - ಇವುಗಳ ಬಗ್ಗೆ ಬೇಂದ್ರೆಯವರು ಪೀಠಿಕೆಯ ಪದ್ಯಗಳಲ್ಲಿ ಬರೆಯುತ್ತಾರೆ. ಜಗದ ತಂದೆ-ತಾಯಿಯರ ಕಂದ ಅವತರಿಸಿ ಜೀವನಾಗಿ | ಬಂತು ಪೂರ್ವದಲಿ ದೇವಕಾಮವೇ ಕಾಮದೇವನಾಗಿ'' ಎನ್ನುತ್ತಾರೆ ಬೇಂದ್ರೆ.

ಪೀಠಿಕೆಯಲ್ಲಿ ಬರುವ 24 ಪದ್ಯಗಳು ಕನ್ನಡ ಕಾವ್ಯಕ್ಕೆ ವಿಶಿಷ್ಟ ಕೊಡುಗೆಗಳಾಗಿವೆ. ಕವಿಯ ಮೇಘ' ಎಂಬುದನ್ನು ಇಲ್ಲಿ ನೊಡಬಹುದು:

ಮಾತು ಜ್ಯೋತಿ, ಆ ಹುರುಳು-ಧೂಮ, ರಸ ಸಲಿಲ, ಭಾವ ಗಾಳಿ

ಕವಿಯೊಳಾಗಿ ಕಟ್ಟಿತ್ತು ಕಾವ್ಯ ನವಮೇಘರೂಪ ತಾಳಿ |

ಸ್ಥಾಯಿ ಅಲ್ಲಿ ಸಂಚಾರದಲ್ಲಿ ರಸಪಾಕವಾಗಿ ಬಂತು

ಮೆರೆವ ಹಾಗೆ ಆ ಸುಟ್ಟ ಕಾಮ ಪ್ರದ್ಯುಮ್ನನಾಗಿ ನಿಂತು ||'

ಮೇಘದೂತವನ್ನು ಅನುಸರಿಸಿ ಅನೇಕ ದೂತಕಾವ್ಯಗಳು ಹುಟ್ಟಿಕೊಂಡವಂತೆ. ಅವು ಗರುಡನ ಮುಂದೆ ಇರುವ ಗುಬ್ಬಿಯಂತೆ ಅಲ್ಪವಾಗಿದ್ದವು. ಈ ವಿಚಾರವನ್ನು ಟೀಕಿಸಿ ಬೇಂದ್ರೆ ಹೀಗೆ ಒಂದು ಪದ್ಯ ರಚಿಸಿದ್ದಾರೆ:

ನಿನ್ನ ದೂತ-ಪಾದಗಳ ಮುಟ್ಟಿ ಕಟ್ಟಿದರು ಕಬ್ಬವೊಂದು

ನಿನ್ನ ಭಾವ ಬೆನ್ನಟ್ಟಿ ಕಂಡರೋ ಯಾರೊ ಹಬ್ಬವೆಂದು |

ನಿನ್ನ ದೂತಗರಿ ಗರುಡನಿದಿರು ಕಳುಹುವರೆ ಗುಬ್ಬಿಯೊಂದು

*ಅಂಚೆ ಕೊಂಚೆ ಶುಕ ಕಾಕ ಕೋಕ ಬಕ ಕೇಕಿ ಭೇಕಿ ಎಂದು ||'

ಈ ಎಂಟನೆಯ ಸಂಸ್ಕರಣದ ಇನ್ನೊಂದು ವೈಶಿಷ್ಟ್ಯವೆಂದರೆ ಡಾ| ವಾಮನ ಬೇಂದ್ರೆಯವರು ಒದಗಿಸಿದ ಶಬ್ದಾರ್ಥ ಮತ್ತು ಟಿಪ್ಪಣಿಗಳು. (*ಹಂಸ, ಕ್ರೌಂಚ, ಬಕ, ಕಾಗೆ, ಚಕ್ರವಾಕ, ನವಿಲು, ಕಪ್ಪೆ.)

ಕನ್ನಡ ಮೇಘದೂತವನ್ನು ತಮ್ಮ ಬಾಳಸಖಿಗೆ ಅರ್ಪಿಸುತ್ತ ಬೇಂದ್ರೆಯವರು ಹೀಗೆ ಬರೆಯುತ್ತಾರೆ,

ನನ್ನ ಸೌಭಾಗ್ಯಲಕ್ಷ್ಮಿಗೆ

ಕಾಳಿದಾಸನ ಕಡಲ

ಮುತ್ತು ಮಾಲೆಯನಿತ್ತೆ.

ಮುಡುಪನೊಪ್ಪಿದೆಯೆಂದು ಮುಕ್ತಳಾಗು ||

ಓ ಯಕ್ಷಿ, ಚೈತ್ಯಾಕ್ಷಿ,

ಚೆನ್ನೆ, ಹೃದಯದ ಸಾಕ್ಷಿ,

ನನ್ನ ಕಲ್ಯಾಣಕ್ಕೆ ಯುಕ್ತಳಾಗು ||''

ಇದಕ್ಕೊಂದು ಹಿನ್ನೆಲೆ ಇದೆ. ಬೇಂದ್ರೆಯವರ ಮಡದಿ ಒಮ್ಮೆ ಪತಿಗೆ ಮುತ್ತಿನ ಹಾರ ಕೊಡಿಸಲು ಬೇಡಿದರಂತೆ. ಅವರಿಗೆ ಹಾರ ಕೊಡಿಸುವುದಾಗಲಿಲ್ಲ. ಮುತ್ತು ಮಾಲೆ ಎಂದು ಈ ಅನುವಾದ ಕಾವ್ಯ ಅರ್ಪಿಸಿದರು.

ಇಲ್ಲಿಯ ಅನುಬಂಧದಲ್ಲಿ ಪ್ರೊ.ಆರ್.ಜಿ.ಕುಲಕರ್ಣಿಯವರ ಕನ್ನಡ ಮೇಘದೂತದ ರಸಸೃಷ್ಟಿ' ಎಂಬ ಲೇಖನ ಇದೆ. ಅದರಲ್ಲಿ ಆರ್.ಜಿ'ಯವರು ಕೆಲವು ಮಹತ್ವದ ಮಾತುಗಳನ್ನು ಹೇಳುತ್ತಾರೆ. ಬೇಂದ್ರೆಯವರ ಕನ್ನಡ ಮೇಘದೂತವು ಕೇವಲ ಭಾಷಾಂತರವಲ್ಲ, ಬರಿ ಭಾವಾನುವಾದವೂ ಅಲ್ಲ. ಇಲ್ಲಿ ಈರ್ವರು ಮಹಾಕವಿಗಳ (ಅಂದರೆ ಕಾಳಿದಾಸ, ಬೇಂದ್ರೆಯವರ) ಶೃಂಗಾರದರ್ಶನದ ಸಮನ್ವಯವಿದೆ.'' ಎನ್ನುತ್ತಾರೆ. ಮೇಘದೂತದಲ್ಲಿಯ ಕಾಮವು ಸತ್ಯಕಾಗಿ ನೀರಡಿಸಿ ನಿಂತ ಸೌಂದರ್ಯದಂತೆ ದಿವ್ಯ' ಆಗಿದ್ದರೆ, ಶಾಕುಂತಲದ ಕಾಮವು ಪ್ರೌಢರತಿಯ ಕೈಗೂಸು ಆಗಿ ಬೆಳೆದಿಹುದು ಕಾಮ ಶಿಶುವು' ಆಗಿದೆ'' ಎಂದು ಹೇಳುತ್ತಾರೆ. ಮೇಘದೂತದಲ್ಲಿ ಕಾಮಿಯಕ್ಷ ವಿರಹದಿಂದ ಕವಿಯಾಗುವನು. ಅವನ ಕಣ್ಣು ಚೆಲುವಿಗೆ ಕಣ್ಣಾಗುವುದು. ಅವನ ಹೃದಯ ರಸಕ್ಕೆ ನೆಲೆಯಾಗುವುದು. ಕಾಳಿದಾಸನ ಮನಃಪರಿಪಾಕವನ್ನು ಬಹು ರಮ್ಯವಾಗಿ ಧ್ವನಿಪೂರ್ಣವಾಗಿ ಚಿತ್ರಿಸಿದ್ದಾರೆ. ಆದರೆ, ಶಾಕುಂತಲದಲ್ಲಿ ಈ ಮನಃಪರಿಪಾಕವು ಆ ಸುಟ್ಟ ಕಾಮ ಪ್ರದ್ಯುಮ್ನನಾಗಿ ನಿಂತು ಮೆರೆವ ಹಾಗೆ ನವಚೇತನ ರೂಪದಿಂದ ವಾತ್ಸಲ್ಯಭಾವವನ್ನು ತಾಳುತ್ತದೆ... ಮೇಘದೂತವು ಕಾಳಿದಾಸನ ರಸಸೃಷ್ಟಿಯಾದರೆ, ಶಾಕುಂತಲವು ಅವನ ಪ್ರದ್ಯುಮ್ನಸೃಷ್ಟಿಯಾಗಿದೆ.'' ಎನ್ನುತ್ತಾರೆ ಆರ್.ಜಿ.'

Kalidasaಜಡಪ್ರಕೃತಿಯಲ್ಲಿ ಚೈತನ್ಯವನ್ನು ಗುರುತಿಸಿ ಮಾನವ ಪ್ರಕೃತಿಯೊಡನಿರುವ ಅದರ ಸಾಮರಸ್ಯದ ರಸಸೃಷ್ಟಿಯನ್ನು ನಿರ್ಮಿಸಿದವರಲ್ಲಿ ಕಾಳಿದಾಸನನ್ನು ಸರಿದೂಗುವವರು ಅತಿ ವಿರಳ. ಒಬ್ಬ ಆಂಗ್ಲ ವಿಮರ್ಶಕ ಹೀಗೆ ಹೇಳುತ್ತಾನೆ, (Kalidasa understood what Europe did not learn until the 19th century that the world was not made for man that man reaches his full stature only as he realises the dignity and worth at life that is not human...) ಇಡೀ ಪ್ರಪಂಚವು ಮಾನವನಿಗಾಗಿ ಮಾತ್ರ ಮೀಸಲಾಗಿಲ್ಲ. ಮನುಷ್ಯನನ್ನು ಬಿಟ್ಟುಳಿದ ಇತರ ಪ್ರಪಂಚದ ಘನತೆ, ಯೋಗ್ಯತೆಗಳನ್ನು ಅರಿತುಕೊಳ್ಳುವುದರಲ್ಲಿಯೇ ಅವನ ಪರಿಪೂರ್ಣತೆ ಇದೆ. ಈ ಮಾತನ್ನು ಯುರೋಪವು 19ನೆಯ ಶತಮಾನದವರೆಗೆ ಅರಿತಿರಲಿಲ್ಲ.'ಎಂದು. ಆದರೆ ಕಾಳಿದಾಸ ಒಂದು ಸಾವಿರ ವರ್ಷಗಳ ಪೂರ್ವದಲ್ಲೇ ಅರಿತಿದ್ದ. ಜಡಚೇತನ ಪ್ರಕೃತಿಯಲ್ಲಿ ಕಾಳಿದಾಸ ಕಂಡುಕೊಂಡ ಸಾಮರಸ್ಯವನ್ನು ಶೇಕ್ಸಪಿಯರನಲ್ಲಿಯೂ ಕಾಣುವುದು ದುರ್ಲಭ. ಬರಿ ಮೇಘದೂತವನ್ನೇ ಗಮನಿಸಿದರೆ ಅಲ್ಲಿ ಕಾಣುವ ವೈವಿಧ್ಯಪೂರ್ಣ ಪ್ರಕೃತಿಯು ಯಾರಿಗಾದರೂ ಅಚ್ಚರಿಗೊಳಿಸುತ್ತದೆ. ಕಾಳಿದಾಸನ ಪ್ರಪಂಚದಲ್ಲೂ ಕಮಲ, ಕನೈದಿಲೆ, ಕುಂದ, ಕದಂಬ, ಶಿರೀಷ, ಲೋಧ್ರ ಪುಷ್ಪಗಳಲ್ಲದೆ, ಕಲ್ಬಾಳೆ, ನೀಪ, ಮಲ್ಲಿಗೆ, ಜಾಜಿ, ಒಂದೇ ಎರಡೇ! ಸಾವಿರ ಕಣ್ಣು ಸಾಲವು ಅವುಗಳನ್ನು ನೋಡಲಿಕ್ಕೆ! ಅವುಗಳಲ್ಲದೆ ಕಬ್ಬು, ಬಾಳೆ, ಜಂಬುನೇರಿಲ, ಮಾವು, ತೆಂಗು, ಕೌಂಗು ತಮ್ಮ ಹರ್ಷನಿರ್ಭರ ಹಸಿರು, ಬಾಹುಗಳನ್ನು ಚಾಚಿ ನಿಂತಿರುತ್ತವೆ. ರೇವಾ, ವಿಂಧ್ಯಾ, ಗಂಗಾ, ಗಂಭೀರಾ, ನೇತ್ರಾವತಿ ಇನ್ನೂ ಸಮಸ್ತ ಭಾರತೀಯ ನದಿಗಳ ಆನಂದವಾಹಿನಿಯೇ ಹರಿಯುತ್ತದೆ. ಆ ಪಾವನ ಜಲತರಂಗದ ಹರ್ಷೋಲ್ಲಾಸದ ರಂಗಮಂಟಪವೇ ನಿರ್ಮಾಣವಾಗುತ್ತದೆ.''

ಈ ಎಲ್ಲ ಪ್ರಕೃತಿಯ ವಸ್ತುನಿಚಯವು ಕವಿಯು ಕಂಡ ಚೆಲುವಿನ ಹೊರೆಯಲ್ಲ, ಸುಸಂಸ್ಕೃತ ಹೃದಯಗಳನ್ನು ಅರಳಿಸುವ ಪ್ರಪಂಚವದು. (ಇಲ್ಲಿವೆ) ರಸಿಕರ ರಸಸರೋವರಗಳು. ಅಂತೆಯೇ ಅವನು ಚಿತ್ರಿಸಿದ ಯಕ್ಷಿಣಿಯರ ಕೈಗೊಂದು ತಾವರೆ, ಕೆನ್ನೆಗೊಂದು ನೈದಿಲೆ, ಕರ್ಣಗಳಿಗೊಂದು ಶಿರೀಷಿಗಳಾದರೆ; ಅವರ ಚೆಲುವಾದ ಮುಖಕ್ಕೆ ಲೋಧ್ರ ಪುಷ್ಪದ ಹುಡಿ ಕಂಪಿಡಿಸುತ್ತದೆ. ಹೆಳಲಿನಲ್ಲಿ ಕುರುವಕ ಹೂವಿದ್ದರೆ, ಬೈತಲಲ್ಲಿ ಕದಂಬ ಪುಷ್ಪವಿದೆ. ಇದೇತರಹದ ಸೌಂದರ್ಯಾನುಭೂತಿಯನ್ನು ಅವನ ಪಕ್ಷಿ ಪ್ರಪಂಚದಲ್ಲಿಯೂ ಕಾಣುತ್ತೇವೆ. ಯಕ್ಷಪತ್ನಿಯು ನೀಲರತ್ನದ ನೆಲಗಟ್ಟಿನ ಮೇಲೆ, ಬಿಳಿ ಹಾಸುಗಲ್ಲ ಮೇಲೆ ಕೆಂಪು ಅಶೋಕವೃಕ್ಷದ ಸ್ನಿಗ್ಧಛಾಯೆಯಲ್ಲಿ ಕುಳಿತು ಅರಗಿಳಿಯೊಡನೆ, ನವಿಲಿನೊಡನೆ ಆಡುವ ಸುಂದರ ದೃಶ್ಯವನ್ನು ಯಾರು ಮರೆತಾರು? ಅಲ್ಲಿ ನವಿಲು ಗೊರವಂಕ, ಗಿಳಿ, ರಾಜಹಂಸ, ಕೋಕಿಲಗಳಿಗೆ ತಮ್ಮದೇ ಆಗ ಪ್ರಪಂಚವಿದೆ.'' ಎಂದು ಆರ್.ಜಿ' ಬರೆಯುತ್ತಾರೆ. ಇಂಥ ವಿಮರ್ಶೆಯನ್ನು ಬರೆದ ಆರ್.ಜಿ' ಆ ಪ್ರಬಂಧವನ್ನು ಬರೆದಾಗ ಇನ್ನೂ ಇಂಟರ್ ಆರ್ಟ್ಸ್, ಅದರೆ ಇಂದಿನ ಪಿ.ಯು.ಸಿ. ಎರಡರ ವಿದ್ಯಾರ್ಥಿಯಾಗಿದ್ದರು ಎಂಬುದನ್ನು ತಿಳಿದಾಗ ಅವರ ಪ್ರತಿಭೆಯ ಬಗ್ಗೆ ಅಚ್ಚರಿಯಾಗುತ್ತದೆ. (ಅದೇ ವೇಳೆಗೆ ಅವರು ಬರೆದ ಮಾಸ್ತಿಯವರ ಯಶೋಧರಾ ನಾಟಕದ ವಿಮರ್ಶೆಯನ್ನು ಅವರ ಪ್ರಾಧ್ಯಾಪಕರು ಮೆಚ್ಚಿ ಅದನ್ನು ಮಾಸ್ತಿಯವರಿಗೆ ತೋರಿಸಿದಾಗ, ಮಾಸ್ತಿಯವರು ಅದನ್ನು ತಮ್ಮ ನಾಟಕದ ಪುನರ್ ಮುದ್ರಣದಲ್ಲಿ ಹಿನ್ನುಡಿಯಾಗಿ ಪ್ರಕಟಿಸಿದರು ಎಂಬುದು ಇತಿಹಾಸ. ಅಂತಹ ಆರ್.ಜಿ. ನನ್ನ ಸಹಪಾಠಿಯಾಗಿದ್ದರು, ಧಾರವಾಡದ ವಿದ್ಯಾರ್ಥಿ ನಿಲಯದ ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದೆವು ಎಂಬುದನ್ನು ನೆನೆದಾಗ ಅಭಿಮಾನವೆನಿಸುವುದು.)

ಅನುಬಂಧದಲ್ಲಿ ಎರಡನೆಯ ಲೇಖನ ಮಿತ್ರ ಡಾ| ಬಿ.ಬಿ.ರಾಜಪುರೋಹಿತ ಬರೆದ ಕನ್ನಡ ಮೇಘದೂತದ ಪೀಠಿಕೆ ಹಾಗೂ ಛಂದಸ್ಸು ಕುರಿತು ಒಂದು ಸಮೀಕ್ಷೆ'. ಬೇಂದ್ರೆಯವರು ಸಖೀಗೀತದಲ್ಲಿ ಹೇಳಿದಂತೆ ಪಟ್ಟಪಾಡೆಲ್ಲವೂ ಹುಟ್ಟು ಹಾಡಾಗುತ ಹೊಸವಾಗಿ ರಸವಾಗಿ ಹರಿಯುತಿವೆ' ಎಂಬಂತೆ ಯಕ್ಷನ ವಿರಹದಲ್ಲಿ, ಅವನು ಹಾಡುವ ಪ್ರೀತಿಗೀತಕ್ಕೆ ಮೋಡವೇ ಸಾಕ್ಷಿ, ಸುತ್ತಲಿನ ಪ್ರಕೃತಿಯೇ ಮೇಳಗೀತ' ಹೇಗೆ ಒದಗಿಸುತ್ತದೆ ಎನ್ನುವುದನ್ನೂ, ಬೇಂದ್ರೆಯವರು ರಗಳೆ ಮಾದರಿಯ ಒಂದು ಹೊಸ ಛಂದಸ್ಸಿನ ಪ್ರಯೋಗ ಮಾಡಿದ್ದನ್ನೂ ವಿಶ್ಲೇಷಿಸುತ್ತಾರೆ.

ಮೂರನೆಯ ಲೇಖನ ಪಂ.ಪಂಢರಿನಾಥಾಚಾರ್ಯ ಗಲಗಲಿಯವರದು, ಮೇಘದೂತ- ತುಲನಾತ್ಮಕ ಸಮೀಕ್ಷೆ'. ಪಂ.ಗಲಗಲಿಯವರು ವೇದಪಾರಂಗತರು,ಸಂಸ್ಕೃತ ವಿದ್ವಾಂಸರು ಮತ್ತು ಸಂಸ್ಕೃತ ಕವಿಗಳು. ಮೂಲ ಸಂಸ್ಕೃತಕ್ಕಿಂತ ಕನ್ನಡ ಅನುವಾದ ಉತ್ತಮಿಕೆ ಸಾಧಿಸಿದ್ದನ್ನು ಸೋದಾಹರಣವಾಗಿ ವಿಶ್ಲೇಷಿಸುತ್ತಾರೆ. ಒಂದು ಉದಾಹರಣೆ ಹೀಗಿದೆ:

ಎಷ್ಟೋ ಕಡೆಗೆ ಮೂಲ ಕಾಲಿದಾಸನಿಗೆ ಹೊಳೆಯದ ಭಾವ ಚಮತ್ಕಾರಗಳು ಅನುವಾದಕರಿಗೆ ಸ್ಫುರಿಸಿ, ಅನುವಾದಗೊಂಡಾಗ ಸುಂದರ ಮೂರ್ತಿಗೆ ಹೊಂದೊಡವೆ ಇಡಿಸಿದಂತೆ, ಇನ್ನೂ ಅಂದವಾಗಿ ಕಾಣುವುದು. ಅದಕ್ಕೆ ಒಂದೆರಡು ಉದಾಹರಣೆಗಳನ್ನು ಇಲ್ಲಿ ಕಾಣಿಸಬಹುದು.

ವಕ್ರಃ ಪಂಥಾ ಯದಪಿ ಭವತಃ ಪ್ರಸ್ಥಿತಸ್ತೋತ್ತರಾಶಾಂ

ಸೌಧೋತ್ಸಂಗ ಪ್ರಣಯ ವಿಮುಖೋ ಮಾ ಸ್ಮ ಭೂರುಜ್ಜಯಿನ್ಯಾಃ

ವಿದ್ಯುದ್ದಾಮ ಸ್ಫುರಿತ ಚಕಿತೈರ್ಯತ್ರಪೌರಾಂಗನಾನಾಂ

ಲೋಪಾಂಗೈರ್ಯದಿ ನ ರಮಸೇ ಲೋಚನೈರ್ವಂಚಿತೋಸಿ. ||'

ಇದರ ಬೇಂದ್ರೆಕೃತ ಅನುವಾದ:

ಉತ್ತರಕ್ಕೆ ಹೊರಟವಗೆ ಉಜ್ಜಯನಿ ಅಡ್ಡವಾದರೇನು?

ಅಲ್ಲಿ ಮೇಲು ಮಾಳಿಗೆಯ ಭೋಗ ಕಳಕೊಳ್ಳಬೇಡ ನೀನು

ಆ ಊರ ಹೆಂಗಸರ ಕಣ್ಣ ಬಳಿ ಮಿಂಚೆ ಮಿಣುಕು ಎನ್ನು

ಅವರ ಕಣ್ಣ-ಕುಡಿ-ಲಲ್ಲೆಯೊಲ್ಲೆಯಾ? ವ್ಯರ್ಥ ಇದ್ದು ಕಣ್ಣು.||'

ಮೂಲದಲ್ಲಿ ಕವಿ ಮೋಡ ಬಂದಾಗ ಹೊಳೆಯುವ ಮಂಜಿನಿಂದ ಚಕಿತರಾದ ಆ ಉಜ್ಜೈನಿಯ ಚೆಲುವಿಯರ ಚಂಚಲಗಣ್ಣಿನ ಕುಡಿನೋಟದ ವಿಲಾಸವನ್ನು ನೋಡಿ ಆನಂದಪಡದಿದ್ದರೆ ನಿನ್ನ ಕಣ್ಣು ಇದ್ದೂ ವ್ಯರ್ಥ.' ಎಂದು ಮೇಘಕ್ಕೆ ಹೇಳಿದ್ದಾನೆ. ಅನುವಾದದಲ್ಲಿ ಈ ಆಶಯವನ್ನು ಇನ್ನೂ ಸ್ವಾರಸ್ಯವಾಗಿ ಉಜ್ಜೈನಿಯ ಹೆಂಗಳೆಯರ ಕಣ್ಣಿನ ಮುಂದೆ ಮಿಂಚು ಮಿಣುಮಿಣುಕು.'' ಎಂದು ಬರೆಯುತ್ತಾರೆ.

ಯಕ್ಷನ ವಿರಹದಿಂದ ಬೆಂದ ಯಕ್ಷಿಯ ಚಿತ್ರವನ್ನು ಕಾಲಿದಾಸನು ಕರುಣಾಜನಕವಾಗಿ ಬಿಡಿಸಿದ್ದರೆ ಅದನ್ನೇ ಮತ್ತೆ ಬೇಂದ್ರೆಯವರು ಕನ್ನಡ ಭಿತ್ತಿಯಲ್ಲಿ ಹೇಗೆ ಕೆತ್ತಿ ಕುಸುರಿನ ಕೆಲಸ ತೋರಿದ್ದಾರೆ ಎನ್ನುವುದಕ್ಕೆ ಈ ಉದಾಹರಣೆ ಕೊಡುತ್ತಾರೆ.

ಅತ್ತು ಅತ್ತು ಮತ್ತತ್ತು ಕೆದರಿಕೊಂಡಿಹುದು ಕಣ್ಣ ಪೊಗರು

ಬೆಚ್ಚನುಸುರನುಂಡುಂಡು ಸೊಪ್ಪೆಯಾಗಿಹುದು ತುಟಿಯ ಚಿಗುರು

ಗಲ್ಲದಲ್ಲಿ ಕೈ, ಓರೆ ಮೋರೆ, ನಿಡಿಗೂದಲುದ್ದ ಚಿಂತೆ

ಮೋಡ ಮುಸುಕಲಿರೆ ಮಂಕುಕವಿದ ಆ ದೀನ ಚಂದ್ರನಂತೆ ||'

ಬೇಂದ್ರೆಯವರ ಅಮರಕೃತಿ ಕನ್ನಡ ಮೇಘದೂತ'-1

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more