ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರಕವಿ ಬೇಂದ್ರೆಯವರ ಅಮರಕೃತಿ ಕನ್ನಡ ಮೇಘದೂತ'-1

By Staff
|
Google Oneindia Kannada News

ಬೇಂದ್ರೆ ಜನ್ಮದಿನಾಚರಣೆಯ ಅಂಗವಾಗಿ ವರಕವಿಯ ಕನ್ನಡ ಮೇಘದೂತ'ದ ಎಂಟನೆಯ ಮುದ್ರಣ ಹೊರಬಂದಿದೆ. ಈ ಖಂಡಕಾವ್ಯ 48 ಪುಟಗಳ ಅನುವಾದ. ಹೊಸ ಮುದ್ರಣದ ವೈಶಿಷ್ಟ್ಯವೆಂದರೆ 49 ಪುಟಗಳ ಬೇಂದ್ರೆಯವರ ಮೂಲ ಹಸ್ತಪ್ರತಿಯನ್ನು ಜೊತೆಗೆ ಪ್ರಕಟಿಸಿದ್ದು. ಇದು ಕನ್ನಡ ಪ್ರಕಾಶನದಲ್ಲಿಯ ಒಂದು ವಿನೂತನ ಪ್ರಯೋಗ.

ಡಾ| 'ಜೀವಿ' ಕುಲಕರ್ಣಿ, ಮುಂಬೈ

ವರಕವಿ ದ.ರಾ. ಬೇಂದ್ರೆಯವರು ಜನಮಾನಸದ ಕವಿ. ಕನ್ನಡ ಕಾವ್ಯದ ಸಾವಿರ ವರ್ಷಗಳ ಇತಿಹಾಸದಲ್ಲಿ ಕನ್ನಡದ ಸತ್ವವನ್ನು ಸಮರ್ಥವಾಗಿ ಬಳಸಿದ ಮೂರು ಕವಿಗಳೆಂದರೆ ಆದಿಕವಿ ಪಂಪ, ರೂಪಕಚಕ್ರವರ್ತಿ ಕುಮಾರವ್ಯಾಸ ಮತ್ತು ಶ್ರಾವಣಕವಿ ದ.ರಾ.ಬೇಂದ್ರೆ- ಎಂದು ಹೇಳಿದವರು ಕನ್ನಡದ ಹಿರಿಯ ಕವಿ-ವಿಮರ್ಶಕ ಗೋಪಾಲಕೃಷ್ಣ ಅಡಿಗರು.

ಜನೆವರಿ 31, ಬೇಂದ್ರೆಯವರು ಹುಟ್ಟಿದ ದಿನ. ಬೇಂದ್ರೆಯವರ112ನೆಯ ಹುಟ್ಟು ಹಬ್ಬವನ್ನು ಧಾರವಾಡದ ಬೇಂದ್ರೆಭವನದಲ್ಲಿ ಆಚರಿಸಲಾಯ್ತು. ಬೇಂದ್ರೆಯವರ ಸಪ್ತಸ್ಮಾರಕಗಳಿರುವ ಹುಬ್ಬಳ್ಳಿಯ ಬೇಂದ್ರೆ ಕುಟೀರ'ದಲ್ಲಿ ಬೇಂದ್ರೆಯವರ ಹುಟ್ಟು ಹಬ್ಬವನ್ನು ಭಾರತೀಯ ಪಾಂಚಾಂಗದ ಪ್ರಕಾರ ಭಾರತ ಹುಣ್ಣಿಮೆಯ ಮರುದಿನ, ಗುರುಪ್ರತಿಪ್ರದೆಯಂದು, ಆಚರಿಸಲಾಗುವುದು. (22 ಫೆಬ್ರವರಿ). ಧಾರವಾಡದ ಧಾರಕ್ಕೆ ಹುಬ್ಬಳ್ಳಿಯ ಹೂಬಳ್ಳಿ ಸೇರಿದೆ. ಇವೆರಡು ಅವಳಿಪಟ್ಟಣಗಳಲ್ಲಿ ಬೇಂದ್ರೆಯವರ ಜನ್ಮದಿನದ ವಾತಾವರಣ ಒಂದು ತಿಂಗಳಕಾಲ ಹಬ್ಬಿರುವುದು ಒಂದು ವಿಶೇಷತೆಯೇ ಆಗಿದೆ.

ಈ ಸಂದರ್ಭಕ್ಕೆ ಪೀಠಿಕೆಯಂತೆ ವರಕವಿ ಬೇಂದ್ರೆಯವರ ಕನ್ನಡ ಮೇಘದೂತ'ದ ಎಂಟನೆಯ ಮುದ್ರಣ ಹೊರಬಂದಿದೆ. ಈ ಖಂಡಕಾವ್ಯ 48 ಪುಟಗಳ ಅನುವಾದ. ಹೊಸ ಮುದ್ರಣದ ವೈಶಿಷ್ಟ್ಯವೆಂದರೆ 49 ಪುಟಗಳ ಬೇಂದ್ರೆಯವರ ಮೂಲ ಹಸ್ತಪ್ರತಿಯನ್ನು ಜೊತೆಗೆ ಪ್ರಕಟಿಸಿದ್ದು. ಇದು ಕನ್ನಡ ಪ್ರಕಾಶನದಲ್ಲಿಯ ಒಂದು ವಿನೂತನ ಪ್ರಯೋಗ. ಹಸ್ತಪ್ರತಿಯಲ್ಲಿ ಬೇಂದ್ರೆಯವರು ಮಾಡಿದ ತಿದ್ದುಪಡಿಗಳು ವಿಶಿಷ್ಟವಾಗಿವೆ. ಮುದ್ರಣದಲ್ಲಿ ಕರಡು ತಿದ್ದುವಾಗ ಬೇಂದ್ರೆಯವರೇ ಹೆಚ್ಚಿನ ಬದಲಾವಣೆಗಳನ್ನು ಮಾಡಿದ್ದಾರೆ. ಹಿಂದೆ ಬ್ರಿಟಿಶ್ ಕೌನ್ಸಿಲ್ ಲೈಬ್ರರಿಯಲ್ಲಿ ಒಂದು ಪುಸ್ತಕ ನೋಡಿದ ನೆನಪು. ಕೀಟ್ಸ ಕವಿಯ ಪ್ರಸಿದ್ಧಸಾಲು ''A thing of beauty is joy for ever'' ಇದನ್ನು ಅವನು ನಾಲ್ಕಾರು ರೀತಿಯಿಂದ ತಿದ್ದಿದ್ದನ್ನು ಅವನ ಹಸ್ತಾಕ್ಷರಗಳಲ್ಲು ಪ್ರಕಟಿಸಿದ್ದರು. ಕವಿಯ ರಚನೆಯ ಬಗ್ಗೆ ಕೆಲವು ಹೊಸ ವಿಷಯಗಳನ್ನು ಅವರ ಹಸ್ತಪ್ರತಿಗಳು ತಿಳಿಸುತ್ತವೆ. ಈ ಮುದ್ರಣದಲ್ಲಿ ಇನ್ನೂ ಹಲವಾರು ಉಪಯುಕ್ತ ಬರಹಗಳು ಸೇರಿರುವುದರಿಂದ ಈ ಹೊತ್ತಿಗೆ 208 ಪುಟಗಳಷ್ಟು ಬೃಹತ್ತನ್ನು ಪಡೆದಿದೆ. ಎನ್.ಸಿ. ದೇಸಾಯಿ ಅವರ ವರ್ಣಚಿತ್ರಗಳು ಮತ್ತು ರೇಖಾಚಿತ್ರಗಳು ಇವೆ. ಬೇಂದ್ರೆ ಕಲಾವಿದರೆಂದೇ ಪ್ರಸಿದ್ಧರಾದ ಸುರೇಶ ಕುಲಕರ್ಣಿಯವರ ರೇಖಾಚಿತ್ರಗಳೂ ಹೊತ್ತಿಗೆಯ ಅಂದವನ್ನು ಹೆಚ್ಚಿಸಿವೆ.

ವರಕವಿ ಬೇಂದ್ರೆಯವರು ಪ್ರಥಮ ಮುದ್ರಣದ ಮುನ್ನುಡಿಯಲ್ಲಿ (22-12-1943) ಹೀಗೆ ಬರೆದಿದ್ದಾರೆ:
ಕರ್ನಾಟಕದಲ್ಲಿ ಕಾಲಿದಾಸನಿಗಿದ್ದಷ್ಟು ಮಾನ, ಭರತಖಂಡದಲ್ಲಿ ಬೇರೆ ಯಾವ ಪ್ರಾಂತದಲ್ಲಿ ಇದೆಯೋ ನನಗೆ ಗೊತ್ತಿಲ್ಲ. ...ಪ್ರಖ್ಯಾತ ಪುಲಕೇಶಿಯ ಮಹತ್ವದ ಶಾಸನವನ್ನು ಬರೆದ ಐಹೊಳೆಯ ಕವಿ ರವಿಕೀರ್ತಿ, ತಾನು ಕಾಲಿದಾಸನ ಸಮಾನನಾಗಿರಬೇಕೆಂದು ಹವಣಿಸುತ್ತಿರುವುದಾಗಿ ನಮಗೆ ಗೊತ್ತಿದೆ. ನೃಪತುಂಗನ ಕವಿರಾಜಮಾರ್ಗದಲ್ಲಿ ಕಾಲಿದಾಸನು ಕನ್ನಡ ಕವಿಗಳ ಆದರ್ಶ ಪಂಕ್ತಿಗೆ ಸೇರಿದ್ದಾನೆ. ವೀರಕವಿ ರನ್ನ ಕಾಲಿದಾಸನಿಗೆ ನಮಿಸದೆ ಹೋಗಿಲ್ಲ. ಇಷ್ಟಿದ್ದರೂ, ಸಂಸ್ಕೃತ ಪ್ರಾಕೃತ ಗದ್ಯಪದ್ಯ ಕಾವ್ಯಗಳು ಕನ್ನಡಕ್ಕೆ ಬರುವದು ಪಂಪನಿಗಿಂತಲೂ ಪ್ರಾಚೀನವಾಗಿದ್ದರೂ, ಕನ್ನಡದಲ್ಲಿ ಶಾಕುಂತಲ, ಮೇಘದೂತಗಳು ಒಡಮೂಡಬೇಕಾದರೆ ಕ್ರಿ.ಶ. 19ನೆಯ ಶತಮಾನದ ವರೆಗೆ ಕಾಯಬೇಕಾಯಿತು.''

ತಾವು ಮಾಡಿದ ಭಾಷಾಂತರದ ಬಗ್ಗೆ ಬೇಂದ್ರೆಯವರು ಹೀಗೆ ಹೇಳುತ್ತಾರೆ:
ನನ್ನ ಕನ್ನಡ ಮೇಘದೂತ, ಭಾಷಾಂತರ ಎಂದು ನಾನು ಹೇಳಿಕೊಳ್ಳಲಾರೆ. ಆ ಗುಣ ಇದಕ್ಕಿಲ್ಲ. ಆದರೆ, ಮೇಘದೂತದ ಪ್ರತಿಪದ್ಯ ಓದಿ, ನನಗಾದ ಆನಂದವನ್ನು, ನಾನು ಕಂಡ ಚೆಲುವನ್ನು ಈ ಕನ್ನಡ ಪದ್ಯಗಳಲ್ಲಿ ಕಟ್ಟಿದ್ದೇನೆ, ರಚಿಸಿದ್ದೇನೆ. ಮಂದಾಕ್ರಾಂತ ವೃತ್ತದ ಬದಲು |3.3.2| ಇಂತಹ ಮೂರು ಗಣಗಳುಳ್ಳ ಎಂಟು ಮಾತ್ರೆಯ ಗಣ ಮೂರು, ಕೊನೆಗೊಂದು ಗುರು. ಅಂತೂ 26 ಮಾತ್ರೆಯ, ಮೂರು ನಾಲ್ಕು ಕಿಂಚಿತ್ ಯತಿಗಳುಳ್ಳ ಕೊನೆಯ ಪ್ರಾಸದ ಚತುಷ್ಪಾದದ ಒಂದು ಹೊಸ ರಗಳೆ'ಯ ಜಾತಿಯನ್ನು ಇಲ್ಲಿ ರಚಿಸಿ ಬಳಸಿದ್ದೇನೆ. ಕಾಲಿದಾಸನ ಸಂಸ್ಕೃತವನ್ನರಿಯದ, ಹೆಣ್ಣುಗಂಡು ಇದನ್ನೋದಿಕೊಂಡು, ಒಂದು ಚಿತ್ತಪರಿಣಾಮವನ್ನು ಪಡೆಯಲೆಂದು, ಪಡೆಯುವರೆಂದು ನಾನು ಕೋರಿದ್ದೇನೆ.''

ಈ ಕೃತಿಯನ್ನು ಸಂಪಾದಿಸುವಲ್ಲಿ ಡಾ. ವಾಮನ ಬೇಂದ್ರೆಯವರು ಸಾಕಷ್ಟು ಪರಿಶ್ರಮ ವಹಿಸಿದ್ದಾರೆ. ಸಂಪಾದಕನ ಭೂಮಿಕೆಯಲ್ಲಿ ಕವಿಯ ಮನೋಭೂಮಿಕೆಯ ಬಗ್ಗೆ ಬರೆಯುತ್ತಾರೆ. ಇದು ಪ್ರಕಟಗೊಂಡಾಗ ರಸಿಕರ ವಿಮರ್ಶಕರ ಗಮನ ಸೆಳೆದಿತ್ತು. ಬಿ.ಎಚ್.ಶ್ರೀಧರ, ಪಂಡರೀನಾಥಾಚಾರ್ಯ ಗಲಗಲಿ, ಆರ್.ಜಿ.ಕುಲಕ್ರಣಿ, ಬಿ.ಬಿ.ರಾಜಪುರೋಹಿತ ಬರೆದ ಲೇಖನಗಳನ್ನು ಸಂಗ್ರಹಿಸಿದ್ದಾರೆ. ಬೇಂದ್ರೆಯವರ ಅವಸಾನದ ನಂತರ ನಡೆದ ಪುನರ್ ವಿಮರ್ಸ್ಜೆಯಲ್ಲಿ ಪ್ರಮುಖರಾದ ಎಚ್.ಎಸ್.ವೆಂಕಟೇಶಮೂರ್ತಿ, ಡಿ.ಆರ್.ನಾಗರಾಜ, ಜಿ.ಎಸ್.ಆಮೂರರ ರಸವಿಮರ್ಶೆಗಳ ಸಾರಾಂಶ ಒದಗಿಸಿದ್ದಾರೆ. ಇಲ್ಲಿಯ ಅನುವಾದದಲ್ಲಿ ಅಡಗಿರುವ ಬೇಂದ್ರೆಯವರ ಕಾವ್ಯಸಿದ್ಧಾಂತದ ನಿಲವನ್ನು ವಿವೇಚಿಸಿದ್ದಾರೆ.

ಪ್ರಕಾಶನ ಮಾಡಿದ ಕೆ.ಎಸ್.ಶರ್ಮಾ ಅವರು, ಹಿಂದಾಗಲಿಲ್ಲ ಮುಂದಾಗಲಾರೆ | ಕವಿ ಕಾಲಿದಾಸ ನೀನು' ಎಂಬ ಬೇಂದ್ರೆಯವರ ಸಾಲು ಅವರಿಗೂ ಅನ್ವಯಿಸಿತ್ತದೆ ಅನ್ನುತ್ತಾರೆ. ಹಿಂದಾಗಲಿಲ್ಲ ಮುಂದಾಗಲಾರೆ | ಅಂಬಿಕಾತನಯ ನೀನು' ಎಂದು ನಾವು ಹೇಳಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X