ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಡ್ಗರ್ ಕೇಸೀಯ ಅತೀಂದ್ರೀಯ ಶಕ್ತಿ

By Staff
|
Google Oneindia Kannada News

Edgar Cayce (1877-1945)ಜೀವನದಲ್ಲಿ ಎಲ್ಲಿಯೋ ಲೆಕ್ಕ ತಪ್ಪುತ್ತಿದೆ' ಎಂದು ಎನಿಸುತ್ತಿದೆ. ಆಯವ್ಯಯದ ಪಟ್ಟಿ ಮಾಡಿದಾಗ ಲಾಭನಷ್ಟದ ಕೋಷ್ಟಕ ಹೊಂದುತ್ತಿಲ್ಲ. ಜೀವನದ ಲೆಕ್ಕಕ್ಕೆ ಸರಿಯಾದ ಉತ್ತರ ಪಡೆಯಲು ನಂಬಿಕೆ ಮುಖ್ಯ. ಕರ್ಮಸಿದ್ಧಾಂತ ನಂಬಿದರೆ, ಇಂದಿನ ಸ್ಥಿತಿಯೆ ಪೂರ್ವಕರ್ಮದ ಫಲವು. ಇಂದಿನ ಸತ್ಕರ್ಮ ನಾಳೆ ಬರಲಿರುವ ಜನ್ಮಕ್ಕೆ ನಾವೆ ಕಟ್ಟಿಟ್ಟ ಬುತ್ತಿಯು.

ಸಾರಸಂಗ್ರಹ: ಡಾ| 'ಜೀವಿ' ಕುಲಕರ್ಣಿ

ಅಧ್ಯಾಯ ಆರು : ಬಿತ್ತಿದಂತೆ ಬೆಳೆ ಸುಳ್ಳಲ್ಲ

ನಾವು ಸದ್ಯ ಏನಾಗಿರುವೆವೋ ಅದು ನಮ್ಮ ಯೋಚನೆಯ ಫಲ. ಯೋಚನೆಗಳೇ ಈಗಿನ ನಮ್ಮ ಸ್ಥಿತಿಗೆ ತಳಹದಿ. ನಡೆನುಡಿಗಳಲ್ಲಿ ನಮ್ಮ ಯೋಚನೆ ಒಳ್ಳೆಯದಾಗಿದ್ದರೆ ನೆರಳಿನಂತೆ ಸುಖವು ಹಿಂಬಾಲಿಸುತ್ತದೆ; ನಮ್ಮ ಯೋಚನೆ ಕೆಟ್ಟದ್ದಾಗಿದ್ದರೆ ದುಃಖವು ಬೆಂಬತ್ತಿ ಬರುತ್ತದೆ.'' -ಗೌತಮ ಬುದ್ಧ

ಪ್ರತಿಯೊಂದು ಕಾರ್ಯಕ್ಕೂ ಕಾರಣವಿರುವಂತೆ, ನಮ್ಮ ಸದ್ಯದ ಸ್ಥಿತಿಗೆ ನಮ್ಮ ಹಿಂದಿನ ಕರ್ಮಗಳೇ ಕಾರಣವಾದರೆ, ನಮ್ಮ ಇಂದಿನ ಕರ್ಮಗಳೇ ನಾಳಿನ ಸ್ಥಿತಿಯ ರೂವಾರಿಗಳು. ರೇಶ್ಮೆ ಹುಳು ತಾನೇ ತನ್ನ ಸುತ್ತ ಕೋಶವನ್ನು ನಿರ್ಮಿಸಿಕೊಂಡು ಬಂಧಿಯಾದಂತೆ, ನಮ್ಮ ಸಂಸ್ಕಾರಗಳ ಜಾಲವನ್ನು ನಾವೇ ನಮ್ಮ ಸುತ್ತ ಹೆಣೆದು ಅದರಿಂದ ಪಾರಾಗಲು ಸಾಧ್ಯವಾಗದೆ ಹೆಣಗಾಡುತ್ತಿದ್ದೇವೆ. ಕರ್ಮದ ಚಕ್ರ ಚಾಲನೆ ಮಾಡಿದ ನಾವೇ ಅದರಡಿ ಬಿದ್ದು ವಿಲಿವಿಲಿ ಒದ್ದಾಡುತ್ತಿದ್ದೇವೆ. ಆದರೆ ಒಂದು ಮಾತು - ನಮ್ಮ ಅಧೋಗತಿ ಮಾತ್ರವಲ್ಲ, ಉನ್ನತಿಯೂ ಕರ್ಮದಿಂದಲೇ ಸಾಧ್ಯ. ಮಾನವ ಸ್ವಾತಂತ್ರ್ಯದ ಅಭಿವ್ಯಕ್ತಿಯೇ ಕರ್ಮ.'' -ಸ್ವಾಮಿ ವಿವೇಕಾನಂದ

ಇತರ ಧರ್ಮೀಯರು ಈ ಕರ್ಮನಿಯಮ'ವನ್ನು ಒಪ್ಪುವುದಿಲ್ಲ. ಅವರ ಪ್ರಕಾರ ಮನುಷ್ಯನ ಹುಟ್ಟುಸಾವುಗಳ ನಡುವಣ ಈ ಬದುಕು ಪೂರ್ವನಿಯೋಜಿತವಲ್ಲ. ಕೇವಲ ಆಕಸ್ಮಿಕ. ಪುನರ್ಜನ್ಮವನ್ನು ಒಪ್ಪದ ಕ್ರೈಸ್ತ ಧರ್ಮದಲ್ಲಿ ಜನಿಸಿ, ಜನ್ಮಜನ್ಮಾಂತರದ ಹಿನ್ನೆಲೆಯ ವಿವರಗಳನ್ನೆಲ್ಲ ಬಿತ್ತರಿಸಿದ, ಇದೇ ವಿಜ್ಞಾನ ಯುಗದಲ್ಲಿ ಬಾಳಿಬದಿಕಿದ ಎಡ್ಗರ್ ಕೇಸೀಯ ಜೀವನದ ಕೆಲವು ಘಟನೆಗಳ ಬಗ್ಗೆ ಬರೆಯುತ್ತಾರೆ. ಎಕ್ಸ್-ರೇ ದೃಷ್ಟಿಯ ಎಡ್ಗರ್ ಕೇಸೀ ಅತೀಂದ್ರಿಯ ಅನುಭವಗಳ ಅದ್ಭುತ ದಾಖಲೆಗಳನ್ನು' ನಿರ್ಮಿಸಿದ.

ಅತೀಂದ್ರ್ಯಾನುಭವಗಳ ಅದ್ಭುತ ದಾಖಲೆಗಳು!"
ಎಕ್ಸ್-ರೇ ದೃಷ್ಟಿಯ ಎಡ್ಗರ್‌ಕೇಸೀ"
ಸಂಸ್ಕೃತ ಭಾಷೆಯನ್ನು ಕೇಳಿಯೇ ಅರಿಯದ ವ್ಯಕ್ತಿ ಸುಪ್ತನಿದ್ರೆಯಲ್ಲಿ ಸಂಸ್ಕೃತ ಶಬ್ದವನ್ನು ಉಪಯೋಗಿಸಿದ!"
ಜನ್ಮಾಂತರ ಮತ್ತು ಕರ್ಮಗಳನ್ನು ಕುರಿತು ಪಶ್ಚಿಮದ ಕ್ರೈಸ್ತ ದೃಷ್ಟಾರನ ಅಭೂತಪೂರ್ವ ಅನುಭವಗಳು!"

ಮೇಲಿನ ವಿವಿಧ ಹೇಳಿಕೆಗಳು ಎಡ್ಗರ್ ಕೇಸೀಯ ಅತೀಂದ್ರಿಯ ಶಕ್ತಿಯನ್ನು ಪರಿಚಯ ಮಾಡಿಕೊಡಲು ಅಮೇರಿಕದ ವಿವಿಧ ನಿಯತಕಾಲಿಕೆಗಳಲ್ಲಿ ಆಗಿಂದಾಗ್ಗೆ ಪ್ರಕಟವಾದ ಕೆಲವು ಲೇಖನಗಳ ಶಿರೋನಾಮೆಗಳು.

1910 ಅಕ್ಟೋಬರ್ 19ರ ನ್ಯೂಯಾರ್ಕ ಟೈಮ್ಸ್" ತನ್ನ ಭಾನುವಾರದ ಸಾಹಿತ್ಯ ವಿಭಾಗದಲ್ಲಿ ಒಂದು ವಿಸ್ಮಯಕಾರಿ ವರದಿಯನ್ನು ಪ್ರಕಟಿಸಿತು-
ಸುಪ್ತನಿದ್ರೆಗೆ ಒಳಪಟ್ಟಾಗ ಡಾಕ್ಟರ್ ಆಗುವ ಕೇಸೀಯ ಸಾಮರ್ಥ್ಯ, ದೇಶದ ವೈದ್ಯರುಗಳನ್ನು ವಿಸ್ಮಯಗೊಳಿಸಿದ ಅಪೂರ್ವಶಕ್ತಿ." ಮುಂದಿನ ವಿವರಣೆ ಹೀಗಿತ್ತು: ದೇಶದ ಪ್ರಖ್ಯಾತ ಡಾಕ್ಟರುಗಳು ಎಡ್ಗರ್ ಕೇಸೀಗೆ ಸಿದ್ಧಿಸಿದೆ ಎಂದು ಹೇಳಲಾದ ಅದ್ಭುತ ಶಕ್ತಿಯ ಬಗೆಗೆ ಆಸಕ್ತರಾಗಿದ್ದಾರೆ. ವೈದ್ಯಕೀಯ ಶಾಸ್ತ್ರದ ಅಲ್ಪ ಸ್ವಲ್ಪ ತಿಳಿವಳಿಕೆ ಇಲ್ಲದಿದ್ದರೂ, ಸುಪ್ತನಿದ್ರಾಸ್ಥಿತಿಯಲ್ಲಿ ಆತ ಅತ್ಯಂತ ಭೀಕರ ಮಾರಕ ರೋಗಗಳ ಕಾರಣವನ್ನೂ ಕಂಡುಹಿಡಿದು ಔಷಧಿಗಳನ್ನು ಸೂಚಿಸುತ್ತಿದ್ದಾನೆ!"

ವ್ಯಕ್ತಿಯ ಹೆಸರು, ಊರು, ವಿಳಾಸ ಕೊಟ್ಟರೆ ಸಾಕು; ಸಂಬಂಧಪಟ್ಟ ವ್ಯಕ್ತಿ ನೆರೆಯ ಕೋಣೆಯಲ್ಲೇ ಇರಬಹುದು ಅಥವಾ ಸಹಸ್ರಾರು ಮೈಲು ದೂರದ ರಾಷ್ಟ್ರದಲ್ಲಿರಬಹುದು- ಸುಪ್ತನಿದ್ರೆಯ ಆಳದ ಸ್ತರಗಳಿಂದ ಕೇಸೀಯ ಅತೀಂದ್ರಿಯ ದೃಷ್ಟಿಗೆ ಎಲ್ಲವೂ ಗೋಚರವಾಗುತ್ತಿತ್ತು. ಸುಪ್ತನಿದ್ರೆಯಲ್ಲಿದ್ದುಕೊಂಡೇ ಆತ ಮಾತನಾಡಲು ತೊಡಗುತ್ತಿದ್ದ. ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದ. ತಾನು ಕೇಳಿ ಕಂಡರಿಯದ ಊರಿನ ಪ್ರಾಕೃತಿಕ ಸೌಂದರ್ಯ, ತತ್ಕಾಲದ ಹವೆ, ಸೂಚಿಸಲ್ಪಟ್ಟ ವ್ಯಕ್ತಿಯ ವೇಷಭೂಷಣ, ಒಳಹೊರಗುಗಳನ್ನು ಪ್ರತ್ಯಕ್ಷವಾಗಿ ಕಂಡಂತೆ ವಿವರಿಸುತ್ತಿದ್ದ.

ಸಂಯುಕ್ತ ಸಂಸ್ಥಾನದ ಕೆಂಟಕಿಯ ಹಾಫ್‌ಕಿನ್ಸ್‌ವಿಲ್ಲೆಯಲ್ಲಿ 1877ರಲ್ಲಿ ಜನಿಸಿದ ಕೇಸೀಯ ತಂದೆತಾಯಿಗಳು ನಿರಕ್ಷರಿಗಳಾದ ರೈತರು. ಹಳ್ಳಿಯ ಶಾಲೆಯಲ್ಲಿ 9ನೆಯ ತರಗತಿಯ ವರೆಗೆ ಓದಿದ ಕೇಸೀ ಏಸುಭಕ್ತ. ತಾನೊಬ್ಬ ಧರ್ಮೋಪದೇಶಕನಾಗಬೇಕೆಂದು, ರೋಗಗಳಿಂದ ಸಂತ್ರಸ್ತರ ಸೇವೆಯನ್ನು ಮಾಡಬೇಕೆಂದು ಬಯಕೆ ಹೊಂದಿದ ಇವನು ಹೆಚ್ಚು ಓದಲು ಆಗದೆ, ಹಳ್ಳಿಯಲ್ಲಿಯ ಕೆಲಸಕ್ಕೆ ಒಗ್ಗದೇ ಪಟ್ಟಣ ಸೇರಿ ಅಲ್ಲಿ ಒಂದು ಪುಸ್ತಕದ ಅಂಗಡಿಯಲ್ಲಿ ಕೆಲಸಗಾರನಾಗಿ ಸೇರಿದ. ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಅವನ ಜೀವನದ ದಿಕ್ಕೇ ಬದಲಾಯಿತು. ಲೆರಿಂಜೈಟಿಸ್ ಎಂಬ ಗಂಟಲು ಬೇನೆಗೆ ತುತ್ತಾಗಿ ತನ್ನ ಧ್ವನಿಯನ್ನೇ ಕಳೆದುಕೊಂಡು ಒಂದು ವರ್ಷ ಕೆಲಸ ಹುಡುಕುತ್ತ ಕಳೆದು, ಗಂಟಲಿನ ಕೆಲಸವಿಲ್ಲದ ಒಬ್ಬ ಫೋಟೋಗ್ರಾಫರ್ ಆಗಲು ನಿಶ್ಚಯಿಸಿದ. ಆದರೆ ಆದದ್ದೇ ಬೇರೆ.

ಒಮ್ಮೆ ಹಾರ್ಟ್ ಎಂಬ ಯಕ್ಷಿಣಿಗಾರ ಕೇಸೀಯನ್ನು ಸುಪ್ತನಿದ್ರೆಗೆ ಒಳಪಡಿಸಿದ. ಆಶ್ಚರ್ಯವೇ ಕಾದಿತ್ತು. ಸುಪ್ತನಿದ್ರೆಯಲ್ಲಿರುವಾಗ ಕೇಸೀ ಮಾತಾಡಿದ. ಎಚ್ಚತ್ತ ಮೇಲೆ ಯಥಾಸ್ಥಿತಿ ಮೂಕನಾದ. ಮುಂದೆ ಲೈನ್ ಎಂಬ ಅಸ್ಟಿಯೋಪಥಿಜ್ಞ ಸಮ್ಮೋಹಿನಿ ವಿದ್ಯೆ ಬಳಸಿ ಕೇಸಿಯ ರೋಗವನ್ನು ನಿವಾರಿಸಿದ. ಕೇಸೀ ಸುಪ್ತಾವಸ್ಥೆಯಲ್ಲಿದ್ದಾಗ ಲೈನ್ ಸೂಚನೆ ನೀಡಿದಂತೆ ಮಾತಾಡಿದ. ದೈಹಿಕ ದೌರ್ಬಲ್ಯದಿಂದಾಗಿ ಕೇಸೀಯ ಧ್ವನಿತಂತುಗಳ ಸ್ನಾಯುಗಳು ತೀರಾ ಶಕ್ತಿಹೀನವಾಗಿದ್ದವು. ಆದ್ದರಿಂದ ಅವನಿಗೆ ಮಾತಾಡಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ. ತನ್ನ ದೇಹದ ಒಳ ಪ್ರವೇಶಿಸಿ ತೊಂದರೆಗೊಳಗಾದ ದೇಹಭಾಗಕ್ಕೆ ರಕ್ತಪ್ರವಾಹ ಹೆಚ್ಚುವಂತೆ ಸೂಚನೆ ಕೊಡಲು' ಕೇಸೀ ಹೇಳಿದ. ಅದರಂತೆ ಲೈನ್ ಸೂಚನೆಯನ್ನೂ ಕೊಟ್ಟ. ರಕ್ತವು ಕೇಸೀಯ ದೇಹದ ಮೇಲ್ಭಾಗದಲ್ಲಿ ಪ್ರವಹಿಸಿತೊಡಗಿತು. ಈ ಪ್ರಯೋಗದಿಂದ ಕೇಸೀ ಮೊದಲಿನಂತೆ ಮಾತಾಡತೊಡಗಿದ.

ಕೇಸೀ ಸುಪ್ತನಿದ್ರೆಯಲ್ಲಿ ತನ್ನ ದೇಹವನ್ನು ತಾನೇ ಕಂಡು ಅದರ ಸ್ಥಿತಿಯನ್ನು ಸ್ಪಷ್ಟವಾಗಿ ಹೇಳಬಲ್ಲವನಾಗಿದ್ದರೆ, ಇತರರ ದೇಹಗಳ ಬಗ್ಗೆ ಕೂಡ ಹೇಳಬಹುದಲ್ಲ ಎಂಬ ವಿಚಾರ ಲೈನ್‌ಗೆ ಬಂತು. ತನ್ನ ದೇಹದ ರಚನೆ ಒಳಹೊಕ್ಕು ತನಗಾಗುತ್ತಿರುವ ಬಾಧೆಗಳ ಬಗ್ಗೆ ತಿಳಿಸಲು ಕೇಳಿಕೊಂಡ. ಹಿಂದೆ ಯಾವ ವೈದ್ಯನೂ ಹೇಳದ ಔಷಧಿ, ಆಹಾರ ಹಾಗೂ ಚಿಕಿತ್ಸಾ ವಿಧಾನವನ್ನು ಸುಪ್ತನಿದ್ರೆಯಲ್ಲಿದ್ದ ಕೇಸೀ, ಲೈನ್‌ಗೆ ವಿವರಿಸಿದನಂತೆ. ಅದನ್ನು ಅನುಸರಿಸಿದಾಗ ಲೈನ್‌ನ ಆರೋಗ್ಯ ಸುಧಾರಿಸಿತಂತೆ. ಈ ಘಟನೆಯಿಂದಾಗಿ ರೋಗ ನಿವಾರಣೆಯ ಬಗ್ಗೆ ಇರುವ ಕೇಸೀಯ ಅದ್ಭುತ ಶಕ್ತಿ ಬೆಳಕಿಗೆ ಬರುವಂತಾಯಿತು.

ಕೇಸೀಗೆ ವೈದ್ಯಕೀಯ ಶಾಸ್ತ್ರದ ಗಂಧಗಾಳಿ ಇಲ್ಲದಿದ್ದರೂ ಸುಪ್ತನಿದ್ರೆಯಲ್ಲಿದ್ದಾಗ ಆತ ವೈದ್ಯಕೀಯ ಭಾಷೆಯಲ್ಲೆ ಸುಲಲಿತವಾಗಿ ಮಾತಾಡುತ್ತಿದ್ದನಂತೆ. ಕೇಸೀ 43 ವರ್ಷ ಕಾಲ ಅಸಂಖ್ಯ ಜನರಿಗೆ ತನ್ನ ಅತೀಂದ್ರೀಯ ಶಕ್ತಿಯ ನೆರವಿನಿಂದ ಸಲಹೆ ನೀಡಿದನಂತೆ. ಸುಮಾರು 30 ಸಾವಿರ ಸಲಹೆಗಳನ್ನು ಸಂಗ್ರಹಿಸಲಾಗಿದೆಯಂತೆ. ಗೀನಾ ಸೆರ್ಮಿನಾರಾ ಎಂಬ ಪ್ರಸಿದ್ಧ ಮನೋವೈಜ್ಞಾನಿಯೊಬ್ಬರು ಇವನ ಮೇಲೆ ಮೂರು ಪುಸ್ತಕ ಬರೆದಿದ್ದಾರಂತೆ. ಕೇಸೀಯ ಹಿಂದಿನ ಅಸ್ತಿತ್ವದ ಬಗ್ಗೆ ಸುಪ್ತಸ್ಥಿತಿಯಲ್ಲಿ ಪ್ರಶ್ನಿಸಲಾಗಿತ್ತಂತೆ. ಹಿಂದೆ ಅವನು ಈಜಿಪ್ಟನಲ್ಲಿ ಧರ್ಮೋಪದೇಶಕನಾಗಿದ್ದನಂತೆ. ಆಗ ಕೆಲವೊಂದು ಸಿದ್ಧಿ ಪಡೆದಿದ್ದನಂತೆ. ಇನ್ನೊಂದು ಜನ್ಮದಲ್ಲಿ ವೈದ್ಯನಾಗಿದ್ದ. ಪುನರ್ಜನ್ಮವನ್ನು ಒಪ್ಪಿದರೆ ಕ್ರೈಸ್ತ ಮತ್ತು ಅವನ ಉಪದೇಶವನ್ನು ಕಡೆಗಣಿಸಿದಂತಾಗುವುದಿಲ್ಲವೇ? ಎಂಬ ಪ್ರಶ್ನೆ ಕೇಸೀಯನ್ನು ಕಾಡಿತ್ತಂತೆ. ಅವನಿಗೆ ಸಮಾಧಾನ ನೀಡಿದವ ಲ್ಯಾಮರ್ಸ್.

1923ರಲ್ಲಿ ಲ್ಯಾಮರ್ಸ್ ಕೇಸೀಯ ಶಕ್ತಿಯನ್ನು ಪರೀಕ್ಷಿಸಿದನಂತೆ. ಸುಪ್ತಾವಸ್ಥೆಯಲ್ಲಿದ್ದ ಕೇಸೀ ಲ್ಯಾಮರ್ಸನ ಜಾತಕವನ್ನೇ ಹೇಳಿದನಂತೆ. ನೀನು ಹಿಂದೊಮ್ಮೆ ಸಸ್ಯಾಸಿಯಾಗಿದ್ದೆ' ಎಂದಿದ್ದನಂತೆ. ಕ್ರಿಸ್ತನ ಉಪದೇಶದಲ್ಲಿ ಪುನರ್ಜನ್ಮ ಹುದುಗಿದೆಯೆಂದೂ, ಅನಂತರ ಬಂದ ಧರ್ಮಗುರುಗಳು ಆ ವಿಚಾರಕ್ಕೆ ಪ್ರಾಶಸ್ತ್ಯವನ್ನು ನೀಡಲಿಲ್ಲವೆಂದೂ, ಪುನರ್ಜನ್ಮವೆಂದರೆ ಒಂದು ದೃಷ್ಟಿಯಿಂದ ವಿಕಾಸ' ಎಂದೂ ಲ್ಯಾಮರ್ಸ್ ವಿವರಿಸಿದನಂತೆ. ಜೀವಿಯು ದೇಹವನ್ನು ಬದಲಾಯಿಸುತ್ತಾನೆ ಎಂಬ ಮಾತನ್ನು ಪಶ್ಚಿಮದ ಪ್ರತಿಭಾಶಾಲಿಗಳಾದ ಪ್ಲೇಟೊ, ಗಯಟೇ, ಎಮರ್ಸನ್, ವಾಲ್ಟ ವಿಟ್‌ಮನ್ ಮೊದಲಾದವರು ನಂಬಿದ್ದರೆಂದು ಹೇಳಿ ಕೇಸೀಯನ್ನು ಸಮಾಧಾನಪಡಿಸಿದ್ದನಂತೆ.

ಈ ಯುಗದಲ್ಲಿ, ಎಂದರೆ 19 ಮತ್ತು 20ನೆಯ ಶತಮಾನಗಳಲ್ಲಿ ಕಾಣಿಸಿಕೊಂಡ ಅನೇಕ ಹಿರಿಯ ವಿಜ್ಞಾನಿಗಳು, ಕ್ರಿ.ಪೂ. 9500 ವರ್ಷಗಳ ಹಿಂದೆ, ಈಗ ಅಟ್ಲಾಂಟಾ ಸಾಗರ ಇರುವ ಪ್ರದೇಶದಲ್ಲಿದ್ದ ಪುರಾತನ ಭೂಖಂಡದಲ್ಲಿನ ಅತ್ಯುನ್ನತ ಸಂಸ್ಕೃತಿಯ ಕಾಲದಲ್ಲಿದ್ದು, ಈಗ ಪುನರ್ಜನ್ಮವೆತ್ತಿ ಬಂದವರು.' ಎಂದು ಕೇಸೀ ಹೇಳುತ್ತಿದ್ದನಂತೆ. ಪಾಪ ಮತ್ತು ದುಃಖಗಳ ಕಾರ್ಯಕಾರಣ ತಿಳಿಸುವ ಪದವೇ ಕರ್ಮ' ಎಂದು ಕೇಸೀ ಹೇಳುತ್ತಿದ್ದ. ಅವನ ಹೇಳಿಕೆಯಲ್ಲಿ ಕರ್ಮ, ಕಾರ್ಮಿಕ ಮುಂತಾದ ಶಬ್ದಗಳು ಮತ್ತೆಮತ್ತೆ ಬರುತ್ತವೆ. ಹಿಂದಿನ ಜನ್ಮದಲ್ಲಿ ನಾವು ಮಾಡಿದ ಕೇಡು ಈ ಜನ್ಮದಲ್ಲಿ ನಮಗೆ ಅಹಿತ ಮಾಡುತ್ತದೆ. ಇದಕ್ಕೆ ಬೂಮರಾಂಗ್ ಕರ್ಮ' ಎಂಬ ಶಬ್ದವನ್ನು ಕೇಸೀ ಬಳಸುತ್ತಾನಂತೆ. ಅನೇಕ ಉದಾಹರಣೆಗಳನ್ನು ಕೇಸೀ ಕೊಡುತ್ತಾನಂತೆ.

ಪರರ ನರಳಾಟ ಕಂಡೂ ಕಾಣದಂತೆ ನಟಿಸುವುದೂ ದೋಷ ಅಥವಾ ಅಪರಾಧ ಎಂದು ಕೇಸೀ ಹೇಳುತ್ತಾನಂತೆ. ಮಾಡಬೇಕಾದ ಕಾರ್ಯ ಮಾಡದ ತಪ್ಪು, ಮಾಡಬಾರದ ಕೆಲಸ ಮಾಡಿದ ತಪ್ಪುಗಳ ಬಗ್ಗೆ ಕೇಸೀ ಹೇಳುತ್ತಾನಂತೆ. ಈ ಜನ್ಮದಲ್ಲಿ ಹುಟ್ಟುಕಿವುಡನಾಗಿರುವ ವ್ಯಕ್ತಿ ಹಿಂದಿನ ಜನ್ಮದಲ್ಲಿ ಸಹಾಯಕ್ಕಾಗಿ ಅಂಗಲಾಚಿದವರೊಡನೆ ಕಿವುಡನಂತೆ ವರ್ತಿಸಿದ್ದ. ತೀವ್ರ ಅಸ್ತಮಾದಿಂದ ಬಳಲುವ ವ್ಯಕ್ತಿ ಹಿಂದಿನ ಜನ್ಮದಲ್ಲಿ ಇನ್ನೊಬ್ಬರ ಬಾಳನ್ನು ಮೆಟ್ಟಿ ಬದುಕಿದ್ದ. ಹನ್ನೊಂದು ವರ್ಷದ ಮಗು ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದ್ದ. ಅವನನ್ನು ಕೇಸೀಗೆ ತೋರಿಸಿದಾಗ ಇವನು ಹಿಂದಿನ ಜನ್ಮದಲ್ಲಿ, ಪ್ಯುರಿಟನ್ನರ ಕಾಲದಲ್ಲಿ, ಫ್ರಾನ್ಸಿನಲ್ಲಿ ಆಸ್ಥಾನ ಮಂತ್ರಿಯಾಗಿದ್ದ. ಶಿಕ್ಷೆಗೆ ಒಳಗಾದವರನ್ನು ಕೊಳ್ಳಕ್ಕೆ ನೂಕಿ ಆನಂದ ಪಡುತ್ತಿದ್ದ. ಈ ಜನ್ಮದಲ್ಲಿ ತನ್ನ ಮೂತ್ರದ ಹೊಳೆಯಲ್ಲಿ ತಾನೇ ಬಿದ್ದುಕೊಳ್ಳುವ ಪರಿಸ್ಥಿತಿ ಬಂದಿದೆ.' ಎಂದನಂತೆ. ಮುಂದೆ ಅದಕ್ಕೆ ಪರಿಹಾರವನ್ನೂ ಸೂಚಿಸಿದನಂತೆ. ರಾತ್ರಿ ಮಲಗುವಾಗ ಹುಡುಗನ ಕಿವಿಯಲ್ಲಿ, ನೀನು ಒಳ್ಳೆಯವನು. ನೀನು ಎಂದಿಗೂ ಅಂತಹ ಅಸಹ್ಯ ತಪ್ಪುಗಳನ್ನು ಮಾಡಲಾರೆ. ನಿನ್ನಿಂದ ಒಳಿತನ್ನೇ ನಿನ್ನ ಹಿರಿಯರು ನಿರೀಕ್ಷಿಸುತ್ತಿದ್ದಾರೆ. ಅಜ್ಞಾನದಿಂದ ಉಂಟಾಗಿದ್ದ ದುಷ್ಕರ್ಮಕ್ಕಾಗಿ ನೀನು ನಿಜವಾಗಿಯೂ ಪಶ್ಚಾತ್ತಾಪ ಪಟ್ಟಿದ್ದಿ' ಎಂದು ಒಂದು ವಾರದ ವರೆಗೆ ಹೇಳಿದರು. ಬಳಿಕ ತಿಂಗಳಿಗೊಮ್ಮೆ ಆ ಮಾತು ಹೇಳುತ್ತಿದ್ದರಂತೆ. ಹುಡುಗ ಆ ದುರಭ್ಯಾಸದಿಂದ ಪಾರಾದನಂತೆ.

ಗೀನಾ ಸೆರ್ಮಿನಾರಾ ಬರೆದ ಮೆನಿ ಮ್ಯಾನ್ಶನ್ಸ್' ಎಂಬ ಗ್ರಂಥವನ್ನು, ಜನ್ಮಾಂತರ ಹಾಗೂ ಕರ್ಮದಲ್ಲಿ ವಿಶ್ವಾಸವಿಲ್ಲದವರು ತಪ್ಪದೇ ಓದಬೇಕೆಂದು ಲೇಖಕರು ಬರೆಯುತ್ತಾರೆ.

ಜೀವನದಲ್ಲಿ ಎಲ್ಲಿಯೋ ಲೆಕ್ಕ ತಪ್ಪುತ್ತಿದೆ' ಎಂದು ಎನಿಸುತ್ತಿದೆ.
ಆಯವ್ಯಯದ ಪಟ್ಟಿ ಮಾಡಿದಾಗ ಲಾಭನಷ್ಟದ ಕೋಷ್ಟಕ ಹೊಂದುತ್ತಿಲ್ಲ.
ಜೀವನದ ಲೆಕ್ಕಕ್ಕೆ ಸರಿಯಾದ ಉತ್ತರ ಪಡೆಯಲು ನಂಬಿಕೆ ಮುಖ್ಯ.
ಕರ್ಮಸಿದ್ಧಾಂತ ನಂಬಿದರೆ, ಇಂದಿನ ಸ್ಥಿತಿಯೆ ಪೂರ್ವಕರ್ಮದ ಫಲವು.
ಇಂದಿನ ಸತ್ಕರ್ಮ ನಾಳೆ ಬರಲಿರುವ ಜನ್ಮಕ್ಕೆ ನಾವೆ ಕಟ್ಟಿಟ್ಟ ಬುತ್ತಿಯು.
(ಜೀವಿ" ವಚನ 58-1)

ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಭಾಗ-5
ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಭಾಗ-4
ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಭಾಗ-3
ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಭಾಗ-2
ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಭಾಗ-1

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X