ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿಯತ್ತ ಮಧ್ವರೂ, ಅವರಿಂದೆ ಕೃಷ್ಣನೂ...

By Staff
|
Google Oneindia Kannada News


ಕೃಷ್ಣನ ಮೂರ್ತಿಗೆ ಮಧ್ವಸರೋವರದಲ್ಲಿ ಮಜ್ಜನಮಾಡಿ, ಉಡುಪಿಯಲ್ಲಿ ಪ್ರತಿಷ್ಠಾಪಿಸಿದವರು ಶ್ರೀಮಧ್ವರು. (ಶಾಲಿವಾಹನ ಶಕೆ 1160, ಕ್ರಿ.ಶ. 1238, ವಿಳಂಬಿ ಸಂವತ್ಸರದ ಮಾಘ ಶುಕ್ಲ ತ್ರಿತೀಯಾ). ಪ್ರತಿಷ್ಠಾಪನೆಯ ನಂತರ ಯಜ್ಞವೂ ನಡೆಯಿತು. ಈ ವಿಚಾರ ಒಳಗೊಂಡ ಡಾ. ಪ್ರಭಂಜನಾಚಾರ್ಯರ ‘ಶ್ರೀಪೂರ್ಣಪ್ರಜ್ಞ ದರ್ಶನ’ ಕೃತಿಯ ಇನ್ನಷ್ಟು ವಿವರಗಳನ್ನು ಈ ವಾರ ಅರಿಯೋಣ.

ಬದರಿ ಪುಣ್ಯಕ್ಷೇತ್ರದಲ್ಲಿ ಶ್ರೀಮಧ್ವರು ವೇದವ್ಯಾಸರ ಬ್ರಹ್ಮಸೂತ್ರಗಳಿಗೆ ಭಾಷ್ಯವನ್ನು ರಚಿಸಿದರು. ಇವರು ತಮ್ಮ ಶ್ರೀಕಂಠದಿಂದ ಹೇಳುತ್ತಹೋದಂತೆ, ಮುಂದೆ ಕುಳಿತು (ಗಣೇಶನಂತೆ) ಬರೆದುಕೊಂಡವರು ಶ್ರೀಸತ್ಯತೀರ್ಥರು.

ಬ್ರಹ್ಮಸೂತ್ರಗಳನ್ನು ವೇದಾಂತ ಸಾಹಿತ್ಯದ ಗೌರೀಶಂಕರ ಎಂದು ಪರಿಗಣಿಸಲಾಗುತ್ತದೆ. ಇದರ ಸಿದ್ಧಿಯಷ್ಟೇ ಇದರ ಪ್ರಸಿದ್ಧಿಯೂ ಇದೆ. ಇದರಲ್ಲಿ ನಾಲ್ಕು ಅಧ್ಯಾಯಗಳಿವೆ. ಪ್ರತಿ ಅಧ್ಯಾಯದಲ್ಲಿ ನಾಲ್ಕು ಪಾದಗಳಿವೆ. ಇದರಲ್ಲಿರುವ ಒಟ್ಟು ಸೂತ್ರಗಳ ಸಂಖ್ಯೆ 564. ಗಾತ್ರದಲ್ಲಿ ಕಿರಿದು, ಮಹಿಮೆಯಲ್ಲಿ ಅಷ್ಟೇ ಹಿರಿದು. 700 ಶ್ಲೋಕಗಳಿರುವ ಭಗವದ್ಗೀತೆ ಎರಡುಲಕ್ಷ ಶ್ಲೋಕಗಳಿರುವ ಮಹಾಭಾರತದ ಸಾರವಾಗಿದ್ದರೆ, ಅದಕ್ಕಿಂತ ಕಿರಿದಾದ ಬ್ರಹ್ಮಸೂತ್ರ ಸಕಲ ವೇದಶಾಸ್ತ್ರಗಳ ಸಾರಸರ್ವಸ್ವ.

‘ಶ್ರೀಹರಿಯು ಅನಂತಗುಣಪೂರ್ಣ, ಸಕಲದೋಷದೂರ’- ಇದುವೆ ಇದರ ವಿಷಯ. ಜ್ಞಾನ, ಭಕ್ತಿ, ವೈರಾಗ್ಯಗಳನ್ನು ಕರುಣಿಸುವುದೇ ಇದರ ಸಿದ್ಧಿ. ಶ್ರೀಮಧ್ವರು ಹೇಳುವ ಪ್ರತಿಯಾಂದು ವಿಷಯಕ್ಕೂ ವೇದವಾಕ್ಯಗಳ ಸಂವಾದ, ಸ್ಮೃತಿವಾಕ್ಯಗಳ ವಿವರಣೆ ನೀಡಿದ್ದಾರೆ. ಸಾಮಾನ್ಯರಿಗೂ ತಿಳಿಯುವ ಸರಳತೆಯೂ, ವಿದ್ವಾಂಸರಿಗೂ ಎಟುಕದ ಗಾಂಭೀರ್ಯವೂ ಇಲ್ಲಿದೆ. ಇಪ್ಪತ್ತೊಂದು ಕುಭಾಷ್ಯಗಳಿಗೆ ಉತ್ತರ ನೀಡಿದ ಇಪ್ಪತ್ತೆರಡನೆಯ ಭಾಷ್ಯವಿದು.

ಗಂಗಾತೀರದಲ್ಲಿ ರಚಿತವಾದ ಈ ಭಾಷ್ಯ ಬೆಳಕು ಕಂಡದ್ದು ಗೋದಾವರೀ ತೀರದಲ್ಲಿ. ಭಾಷ್ಯದ ರಚನೆ ಪೂರ್ತಿಯಾದ ಮೇಲೆ ಶ್ರೀಮಧ್ವರು ನಾರಾಯಣನಿಗೆ ವಂದಿಸಿ ಗೋದಾವರಿಯ ಕಡೆಗೆ ಪ್ರಯಾಣ ಮಾಡಿದರು. ಗೋದಾವರಿ ತೀರದಲ್ಲೊಂದು ವಿದ್ವತ್‌ ಸಭೆ. ವೇದಗಳ ಅಷ್ಟಾದಶ ಶಾಖೆಗಳಲ್ಲಿ ನಿಪುಣರಾದ ವಿದ್ವಾಂಸರು, ಷಟ್‌ಶಾಸ್ತ್ರಗಳಲ್ಲಿ ನಿಪುಣರಾದ ದಾರ್ಶನಿಕರು ಅಲ್ಲಿದ್ದರು. ಆ ಸಭೆಯ ನೇತೃತ್ವ ವಹಿಸಿದ ಶೋಭನಭಟ್ಟರು ಚತುರ್ದಶ ವಿದ್ಯೆಗಳಲ್ಲಿ ಪಾರಂಗತರು. ಈ ಸಭೆಗೆ ಆನಂದತೀರ್ಥರು ಬಂದರು. ಎಲ್ಲ ಪಂಡಿತರ ಪ್ರಶ್ನ್ನೆಗಳ ಸುರಿಮಳೆಗೆ ಉತ್ತರಿಸಿದವರು ಪೂರ್ಣಪ್ರಜ್ಞರು, ಸರ್ವಜ್ಞರು.

ವೇದ, ಪುರಾಣ, ಮಹಾಭಾರತದಲ್ಲಿ, ವಿಶೇಷವಾಗಿ ತರ್ಕಶಾಸ್ತ್ರದಲ್ಲಿ ನಿಪುಣರಾದ, ಆ ಕಾಲದ ‘ವಾಗ್ದಂತಿ’ ಎಂದು ಪ್ರಸಿದ್ಧರಾದ’ ಶೋಭನಭಟ್ಟರು ಪರಾಭವಗೊಂಡರು. ಶ್ರೀಮಧ್ವರ ಶಿಷ್ಯರಾದರು. ಬ್ರಹ್ಮಸೂತ್ರಗಳಿಗೆ ಶ್ರೀಮಧ್ವರು ರಚಿಸಿದ ಭಾಷ್ಯವನ್ನು ಕೇಳುವ ಪ್ರಥಮ ಶ್ರೋತೃಗಳಾಗುವ ಭಾಗ್ಯ ಪಡೆದರು. ‘‘ಮಧ್ವಸಿದ್ಧಾಂತ ಬಲಮುರಿಶಂಖದಂತೆ, ಅದರಲ್ಲಿ ಭಗವಂತನ ವಿಶೇಷ ಸನ್ನಿಧಾನವಿದೆ’’ ಎಂದು ಹೇಳುತ್ತ ಮಧ್ವಸಿದ್ಧಾಂತದ ಪ್ರಚಾರ ಮಾಡಿದವರು ಶೋಭನಭಟ್ಟರು.

ಶ್ರೀಮಧ್ವರಿಂದ ಸಂನ್ಯಾಸ ಸ್ವೀಕರಿಸಿ, ‘‘ಪದ್ಮನಾಭತೀರ್ಥ’’ ಎಂಬ ಹೆಸರಿನಿಂದ ಪ್ರಸಿದ್ಧರಾದರು. ತಮ್ಮ ಗುರುಗಳ ಬ್ರಹ್ಮಸೂತ್ರಭಾಷ್ಯಕ್ಕೆ ‘ಸತ್ತರ್ಕದೀಪಾವಲೀ’ ಎಂಬ ಟೀಕೆಯನ್ನು ಬರೆದು ‘ಪ್ರಥಮ ಮಧ್ವ ಟೀಕಾಕಾರ’ ಎಂಬ ಪ್ರಶಸ್ತಿಗೂ ಪಾತ್ರರಾದರು.

ಶ್ರೀಪೂರ್ಣಪ್ರಜ್ಞರ ಪ್ರಯಾಣ ಉಡುಪಿಯತ್ತ ಸಾಗಿತು. ಮಾರ್ಗದಲ್ಲಿ ಸಿದ್ಧಾಂತದ ಪ್ರಸಾರಕಾರ್ಯ ನಡೆದೇ ಇತ್ತು. ಅವರು ಉಡುಪಿ ತಲುಪುವ ಮೊದಲೇ ಅವರ ಭಾಷ್ಯದ ಪ್ರತಿ ಅಚ್ಯುತಪ್ರೇಕ್ಷರಿಗೆ ತಲುಪಿತ್ತು. ದುರ್ಭಾಷ್ಯ ಶ್ರವಣದಿಂದ ನೊಂದ ಅವರ ಮನಕ್ಕೆ ಇವರ ಭಾಷ್ಯ ಅಮೃತಸಿಂಚನದಂತಿತ್ತು. ಅವರ ಮನದಲ್ಲಿದ್ದ ಸಂಶಯಗಳನ್ನು ನಿವಾರಿಸಿ ಅವರ ಪ್ರಶ್ನೆಗಳಿಗೆಲ್ಲ ಶ್ರೀಮಧ್ವರು ಉತ್ತರಿಸಿದ್ದರು.

ಅಚ್ಯುತಪ್ರೇಕ್ಷರು ಶ್ರೀಮಧ್ವರ ವಿಚಾರಧಾರೆಗೆ ಮನಸೋತರು, ಅವರ ಆರಾಧಕರಾದರು. ಬ್ರಹ್ಮಸೂತ್ರಭಾಷ್ಯ ಅವರ ನಿತ್ಯಪಾರಾಯಣ ಗ್ರಂಥವಾಯಿತು. ಸಮಗ್ರ ಪಾರಾಯಣ ಮಾಡದೆ ಆಹಾರವನ್ನು ಸ್ವೀಕರಿಸಿದೇ ಇರುವದು ಅವರ ವ್ರತವಾಯಿತು. ಒಂದು ದಿನ ಸಾಧನಾ ದ್ವಾದಶಿಯ ದಿನ. ಸೂರ್ಯೋದಯವಾಗುತ್ತಿದ್ದಂತೆಯೇ ಪಾರಣೆ ಮಾಡಬೇಕಾದ ಪರ್ವಕಾಲ. ಪಾರಾಯಣ ಮಾಡದೆ ಪಾರಣೆ ಇಲ್ಲ. ಪಾರಣೆಯ ಮುನ್ನ ಪಾರಾಯಣ ಮಾಡಲು ವೇಳೆಯಿಲ್ಲ. ಅಚ್ಯುತಪ್ರೇಕ್ಷರು ಧರ್ಮಸಂಕಟದಲ್ಲಿ ಸಿಲುಕಿದರು.

ಗುರುಗಳ ಸ್ಥಿತಿಯನ್ನು ಕಂಡು ಶ್ರೀಮಧ್ವರು ತಮ್ಮ ಇನ್ನೊಂದು ಕೃತಿ ಅಣುಭಾಷ್ಯ ಪಠಿಸಲು ಸೂಚಿಸಿದರು. ‘ಸಂಗ್ರಹಭಾಷ್ಯ’ ಅಥವಾ ‘ಸಂಕ್ಷಿಪ್ತಭಾಷ್ಯ’ ಎಂಬುದು ಅಣುಭಾಷ್ಯದ ಮತ್ತೊಂದು ಹೆಸರು. ಕೇವಲ ಮೂವತ್ತೆರಡು ಶ್ಲೋಕಗಳಲ್ಲಿ ಬ್ರಹ್ಮಸೂತ್ರಭಾಷ್ಯವನ್ನು ಸಂಗ್ರಹಿಸಿದ ಅಪೂರ್ವ ಕೃತಿ ಇದು.

ವಿಚಾರ ಮತ್ತು ಆಚಾರ - ಇವು ಒಂದೇ ನಾಣ್ಯದ ಎರಡು ಮುಖಗಳು. ಇದು ಜ್ಞಾನಯೋಗ, ಕರ್ಮಯೋಗಗಳ ಸಂಗಮವಿದ್ದಂತೆ. ಶ್ರುತಿಮೂಲವಾದ ವಿಚಾರವನ್ನು ಮಂಡಿಸಿದಂತೆ ಶ್ರೀಮಧ್ವರು ಆಂತರಿಕ ಮತ್ತು ಬಾಹ್ಯ ಆಚರಣೆಗಳ ಬಗ್ಗೆ ಕೂಡ ಒತ್ತುಕೊಟ್ಟರು. ಶಮ-ದಮಾದಿಗಳು ಆಂತರಿಕ ಆಚಾರಗಳಾದರೆ, ಉರ್ಧ್ವಪುಂಡ್ರ ಧಾರಣೆ, ತಪ್ತಮುದ್ರಾಧಾರಣೆ ಬಾಹ್ಯ ಆಚಾರ.

ಊರ್ಧಪುಂಡ್ರಧಾರಣೆ ವೈಷ್ಣವರಿಗೆ ಕಡ್ಡಾಯವಾದ ನಿತ್ಯವಿಧಿಯಾದರೆ, ತಪ್ತಮುದ್ರಾಧಾರಣೆ ವಾರ್ಷಿಕ ವಿಧಿಯಾಯಿತು. ಪ್ರತಿ ಆಷಾಢ ಶುದ್ಧ ಏಕಾದಶಿ ಅದಕ್ಕೆ ಪ್ರಶಸ್ತ ಕಾಲ. ಶ್ರೀ ಮಧ್ವರು ‘ಸದಾಚಾರಸ್ಮೃತಿ’, ‘ಪ್ರಣವಕಲ್ಪ’ ಮತ್ತು ‘ಸಂನ್ಯಾಸ ಪದ್ಧತಿ’ ಎಂಬ ಮಹತ್ವದ ಕೃತಿಗಳನ್ನು ರಚಿಸಿದರು.

ಮಾಧ್ವರ ಪಾರಾಯಣ ಸ್ತೋತ್ರಗಳಲ್ಲಿ ‘ದ್ವಾದಶಸ್ತೋತ್ರ’ಕ್ಕೆ ಬಹಳ ಮಹತ್ವದ ಸ್ಥಾನವಿದೆ. ದ್ವಾದಶಸ್ತೋತ್ರವು ಸ್ತೋತ್ರವಾಙ್ಮಯದ ಒಂದು ಅದ್ಭುತ. ‘ವಿಷ್ಣುಸಹಸ್ರನಾಮದ ಅನಂತರ ಅಷ್ಟು ಅರ್ಥವೈಭವದ ಮತ್ತೊಂದು ಕೃತಿಯನ್ನು ಸಂಸ್ಕೃತ ವಾಙ್ಮಯ ಕಂಡಿಲ್ಲ’ ಎಂಬ ಹೆಗ್ಗಳಿಕೆ ಈ ಸ್ತೋತ್ರಕ್ಕೆ. ಶ್ರೀಮಧ್ವರು ಸಮುದ್ರಸ್ನಾನವನ್ನು ಪೂರೈಸಿ ಧ್ಯಾನಾಸಕ್ತರಾದಾಗ ದ್ವಾದಶಸ್ತೋತ್ರದ ಐದು ಅಧ್ಯಾಯ ಬರೆದರು.

ದಶಾವತಾರಸ್ತವನರೂಪವಾದ ಆರನೆಯ ಅಧ್ಯಾಯ ಇನ್ನು ಪ್ರಾರಂಭಗೊಳ್ಳುವುದಿತ್ತು. ಆಗ ಸಮುದ್ರದಲ್ಲಿ ದಡದತ್ತ ಸಾಗಿ ಬರುವ ಒಂದು ಸರಕು ತುಂಬಿದ ನೌಕೆಯನ್ನು ಕಂಡರು. ಬಿರುಗಾಳಿಗೆ ಸಿಲುಕಿ ನೌಕೆ ಮುಳುಗುವ ಸ್ಥಿತಿಯಲ್ಲಿತ್ತು. ನೌಕೆಯ ಒಡೆಯ ಪೂರ್ಣಪ್ರಜ್ಞರನ್ನು ನೆನೆಸಿದ. ಮಧ್ವರು ತಾವು ಹೊದೆದ ಕಾವಿ ಶಾಟಿಯನ್ನು ಬೀಸಿದರು. ನೌಕೆ ಸುರಕ್ಷಿತವಾಗಿ ದಡವನ್ನು ಸೇರಿತು. ಅದರ ಒಡೆಯ ಪೂರ್ಣಪ್ರಜ್ಞರ ಪಾದಕ್ಕೆರಗಿದ. ಅವರು ಬಯಸಿದ್ದನ್ನು ಕೊಡುವ ಹಂಬಲು ವ್ಯಕ್ತಪಡಿಸಿದ. ಅವರು ಕೇಳಿದ್ದು ಹಡಗದಲ್ಲಿರುವ ಗೋಪೀಚಂದನದ ಗಡ್ಡೆಯನ್ನು. ಅದರೊಳಗೆ ಶ್ರೀಕೃಷ್ಣನ ಮೂರ್ತಿ ಇದ್ದುದನ್ನು ಕಂಡು ಜನರಿಗೆಲ್ಲ ಪರಮಾಶ್ಚರ್ಯವಾಯಿತು.

ಈ ಪ್ರಸಂಗದ ಹಿಂದೆ ಒಂದು ಅಧ್ಯಾತ್ಮಿಕ ಸಂಕೇತವಿದೆ. ನಾವಿಕ ಸಂಸಾರ ಸಮುದ್ರದಲ್ಲಿ ತೇಲುವ ಜೀವ. ನೌಕೆ ಅವನ ಶರೀರ. ವಿಷಯಸುಖಗಳ ಸೆಳೆತವೇ ಬಿರುಗಾಳಿ. ಜೀವನು ಸ್ವಂತಶಕ್ತಿಯಿಂದ ಸಂಸಾರ ಸಾಗರದಿಂದ ಪಾರಾಗಲಾರ. ಅವನಿಗೆ ವಾಯುದೇವರ, ಮುಖ್ಯಪ್ರಾಣರ ಸಹಾಯ ಬೇಕು.

ಶ್ರೀಕೃಷ್ಣನ ವಿಗ್ರಹದ ಆಗಮನವು ಶ್ರೀಮಧ್ವರ ದಿವ್ಯ ದೃಷ್ಟಿಗೆ ತಿಳಿದಿತ್ತು. ಅದಕ್ಕೆಂದೇ ಅವರು ದ್ವಾದಶಸ್ತೋತ್ರ ಪಠಿಸುತ್ತ ಸ್ವಾಗತಿಸಲು ಬಂದಿದ್ದರು. ಬಾಲಕೃಷ್ಣನ ವಿಗ್ರಹವನ್ನು ವಿಶ್ವಕರ್ಮ ನಿರ್ಮಿಸಿದ್ದ. ಅದನ್ನು ರುಕ್ಮಿಣೀದೇವಿ ಪೂಜಿಸಿದ್ದಳು. ಶ್ರೀ ಕೃಷ್ಣ ಪರಂಧಾಮಕ್ಕೆ ತೆರಳಿದ ನಂತರ ಅರ್ಜುನನು ಆ ವಿಗ್ರಹವನ್ನು ಒಯ್ದು ರುಕ್ಮಿಣೀವನದಲ್ಲಿ ಸ್ಥಾಪಿಸಿದನಂತೆ.

ಕೃಷ್ಣನ ಮೂರ್ತಿಗೆ ಮಧ್ವಸರೋವರದಲ್ಲಿ ಮಜ್ಜನಮಾಡಿಸಿ ಉಡುಪಿಯಲ್ಲಿ ಪ್ರತಿಷ್ಠಾಪಿಸಿದವರು ಶ್ರೀಮಧ್ವರು. (ಶಾಲಿವಾಹನ ಶಕೆ 1160, ಕ್ರಿ.ಶ. 1238, ವಿಳಂಬಿ ಸಂವತ್ಸರದ ಮಾಘ ಶುಕ್ಲ ತ್ರಿತೀಯಾ). ಪ್ರತಿಷ್ಠಾಪನೆಯ ನಂತರ ಯಜ್ಞವೂ ನಡೆಯಿತು.

ಶ್ರೀಕೃಷ್ಣ ಮೂರ್ತಿಯ ಪ್ರತಿಷ್ಠಾಪನೆಯ ಸಮಯದಲ್ಲಿ ಮರಡಿತ್ತಾಯ ಎಂಬವನು ಎತ್ತಿದ ಆಕ್ಷೇಪ ಉತ್ತರಿಸಲು ಶ್ರೀಮಧ್ವರ ‘ತಂತ್ರಸಾರಸಂಗ್ರಹ’ವೆಂಬ ಆಚಾರ ಸಂಹಿತೆಯನ್ನು ರಚಿಸಿದರು. ಇದು ತಂತ್ರಶಾಸ್ತ್ರದ ವಿಶ್ವರೂಪವನ್ನು ತೆರೆದಿಡುವ ಮಹೋನ್ನತ ಕೃತಿಯಾಗಿದೆ.

ಅಷ್ಟಮಹಾಮಂತ್ರಗಳು, ಅವುಗಳ ಜಪದ ವಿಧಿವಿಧಾನಗಳು, ದೇವಪೂಜೆಯ ವಿವರಗಳು, ಹೋಮಹವನದ ಬಗ್ಗೆ ಮಾಹಿತಿ, ಪ್ರತಿಮಾ ನಿರ್ಮಾಣ, ದೇವಾಲಯ ನಿರ್ಮಾಣ, ಪ್ರತಿಷ್ಠಾಪದ್ಧತಿ, ಜೀರ್ಣೋದ್ಧಾರ, ಸಂಪ್ರೋಕ್ಷಣ, ತತ್ತ್ವನ್ಯಾಸ, ಮಾತೃಕಾನ್ಯಾಸ ಮೊದಲಾದ ತಂತ್ರಶಾಸ್ತ್ರದ ಸಕಲ ವಿವರಗಳನ್ನೂ ವಿವರವಾಗಿ ನಿರೂಪಿಸುವ ಅಪೂರ್ವ ತಂತ್ರಗ್ರಂಥವೇ ‘ತಂತ್ರಸಾರಸಂಗ್ರಹ’

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X