• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಗೀತನಿಧಿ ಪಂಡಿತ ಗಣಪತಿ ಭಟ್ ಅವರ ನಾದಗ್ರಾಮ

By Staff
|

ಗಣಪತಿ ಭಟ್ ಅವರು ಇಂದು ಭಾರತದ ಎಲ್ಲ ಸಂಗೀತಪ್ರೇಮಿಗಳ ಕಣ್ಮಣಿಯಾಗಿದ್ದಾರೆ. ನಾಟಕ ಪ್ರೇಮಿಗಳನ್ನು ಸುಬ್ಬಣ್ಣ ಅವರ ಹೆಗ್ಗೋಡು ಆಕರ್ಷಿಸಿದಂತೆ, ಸಂಗೀತಪ್ರೇಮಿಗಳನ್ನು ಹಾಸಣಗಿ ಆಕರ್ಷಿಸುತ್ತಿದೆ.

  • ಡಾ।‘ಜೀವಿ’ ಕುಲಕರ್ಣಿ, ಮುಂಬಯಿ

jeevi65@gmail.com

Pundit Ganapati Bhat of Naadagramaಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಪ್ರಮುಖವಾದವುಗಳು ಉತ್ತರಾದಿ ಮತ್ತು ಕರ್ಣಾಟಕ (ದಕ್ಷಿಣಾದಿ) ಸಂಗೀತ ಪ್ರಕಾರಗಳು. ಕರ್ನಾಟಕದಲ್ಲಿ ಉತ್ತರಾದಿ ಸಂಗೀತದ ಶ್ರೇಷ್ಠ ಸಂಗೀತಜ್ಞರಿದ್ದಾರೆ. ಉತ್ತರಾದಿ ಸಂಗೀತದ ದಿಗ್ಗಜಗಳಾದ ಸವಾಯಿಗಂಧರ್ವ, ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ, ಕುಮಾರಗಂಧರ್ವ, ಬಸವರಾಜ ರಾಜಗುರು, ಪಂಚಾಕ್ಷರಿಗವಾಯಿಗಳನ್ನು ನಾವು ಮರೆಯುವಂತಿಲ್ಲ. ಪಂ. ಭೀಮಸೇನ ಜೋಶಿ ಎಂದೊಡನೆ ಅವರ ಶಿಷ್ಯ ಮಾಧವ ಗುಡಿ ನೆನಪಾಗುತ್ತದೆ, ಪಂ. ಬಸವರಾಜ ರಾಜಗುರು ಎಂದೊಡನೆ ಅವರ ಶಿಷ್ಯ ಗಣಪತಿ ಭಟ್ ಅವರ ನೆನಪಾಗುತ್ತದೆ.

ಉತ್ತರ ಕನ್ನಡದ ಮಲೆನಾಡ ಮಡಿಲಲ್ಲಿ, ಹಾಸಣಗಿ ಎಂಬ ಹಳ್ಳಿಯಲ್ಲಿ ನಾದಗ್ರಾಮವನ್ನು ಸೃಷ್ಟಿಸಿದ ಪಂ. ಗಣಪತಿ ಭಟ್ ಅವರು ಇಂದು ಭಾರತದ ಎಲ್ಲ ಸಂಗೀತಪ್ರೇಮಿಗಳ ಕಣ್ಮಣಿಯಾಗಿದ್ದಾರೆ. ನಾಟಕ ಪ್ರೇಮಿಗಳನ್ನು ಸುಬ್ಬಣ್ಣ ಅವರ ಹೆಗ್ಗೋಡು ಆಕರ್ಷಿಸಿದಂತೆ, ಸಂಗೀತಪ್ರೇಮಿಗಳನ್ನು ಹಾಸಣಗಿ ಆಕರ್ಷಿಸುತ್ತಿದೆ. ನಾದಗ್ರಾಮದ ಪ್ರಗತಿ ನೋಡಿದರೆ ಅದು ಅಂತಾರಾಷ್ಟ್ರೀಯ ಮನ್ನಣೆಯನ್ನು ಪಡೆಯುವ ದಾರಿಯಲ್ಲಿ ಸಾಗುತ್ತಿದೆ. ಉತ್ತರ ಕರ್ನಾಟಕದ ಸಿರಸಿ, ಸಿದ್ದಾಪುರ, ಕುಮಟ ಪ್ರದೇಶದಲ್ಲಿ ಶಾಸ್ತ್ರೀಯ ಸಂಗೀತದ ಹುಚ್ಚು ಹಿಡಿಸಿದವರು ಗಣಪತಿ ಭಟ್ ಅವರು. ಯಕ್ಷಗಾನದ ತಾಳಮದ್ದಳೆಯ ಧಿಮಿಕಿಟದ ಮಧ್ಯದಲ್ಲಿ ತಂಬೂರಿಯ ಶ್ರುತಿಗೆ, ಶಾಸ್ರ್ತೀಯ ಸಂಗೀತದ ಹಿತವಾದ ಆಲಾಪದ ವಿಲಂಬಿತ ಲಯಗತಿಗೆ, ಇಲ್ಲಿಯ ಜನರು ಕಿವಿಗೊಡುವಂತೆ, ತಲೆದೂಗುವಂತೆ ಮೋಡಿಮಾಡಿದವರು ಸಂಗೀತನಿಧಿ ಗಣಪತಿ ಭಟ್ ಅವರು.

ಪಂ. ಗಣಪತಿ ಭಟ್ ಅವರ ಹೆಸರು ಕೇಳಿದ್ದೆ. ಅವರ ನನ್ನ ಹಾಡುಗಳನ್ನೂ ಹಾಡುತ್ತಾರೆಂದೂ ಕೇಳಿದ್ದೆ. ಅವರ ಪರಿಚಯವಿರಲಿಲ್ಲ, ಅವರನ್ನು ಕಂಡಿರಲಿಲ್ಲ. ಎರಡು ದಶಕಗಳ ಹಿಂದೆ ಕನ್ನಡದ ಪ್ರಮುಖ ಡೈಜೆಸ್ಟ್ ಆದ ಕಸ್ತೂರಿಯಲ್ಲಿ ಗಣಪತಿ ಭಟ್ ಅವರ ಬಗ್ಗೆ ಒಂದು ಲೇಖನ ಓದಿದ ನೆನಪು. ಅದರ ಶೀರ್ಷಿಕೆ ನಿನ್ನ ಹುಸಿ ನಗೆಯ ಶಲ್ಯಗಳಿರಿತದಿ | ಸಾವಿರ ಸಲ ನಾ ಮಡಿದಿಹೆನು ಎಂಬ ಹಾಡಿನಿಂದ ಶ್ರೋತೃಗಳ ಮನವನ್ನು ಸೂರೆಗೊಂಡ ಕಲಾವಿದ ಎಂದು ಬರೆಯಲಾಗಿತ್ತು. ಅವರ ಹಾಡುವ ಶೈಲಿಯ ಭಾವಭಂಗಿಯ ಒಂದು ಫೋಟೋ ಕೂಡ ಇತ್ತು. ಈ ಲೇಖನ ನನ್ನನ್ನು ಆಕರ್ಷಿಸಲು ಇನ್ನೊಂದು ಕಾರಣವಿತ್ತು. ಇವು ನನ್ನ ಪ್ರಣಯಗೀತ ಸಂಕಲನ ಹುಚ್ಚ-ಹುಚ್ಚಿಯಲ್ಲಿಯ ಪದ್ಯ ಪ್ರಣಯ ಸಂಗ್ರಾಮ ಎಂಬ ಪದ್ಯದ ಪ್ರಾರಂಭದ ಸಾಲುಗಳು ಆಗಿದ್ದವು. ಏಳೆಂಟು ವರ್ಷಗಳ ಹಿಂದೆ ಮುಂಬೈ ಕಲಾವಿದ ಮಿತ್ರ ಗಜಾನನ ಯಾಜಿ ಚೇಂಬೂರಿನಲ್ಲಿ ನಡೆದ ಒಂದು ಸಂಗೀತ ಸಭೆಗೆ ನನ್ನನ್ನು ಕರೆದುಕೊಂಡು ಹೋದರು. ಅಲ್ಲಿಯ ಪ್ರಮುಖ ಗಾಯಕರು ಪಂ ಗಣಪತಿ ಭಟ್ ಆಗಿದ್ದರು. ಅವರನ್ನು ಪ್ರಥಮ ಬಾರಿ ಕಂಡ ಸಂತೋಷ ನನಗಾಗಿತ್ತು. ಆಗ ನಮಗೆ ಹಾಸಣಿಗಿಗೆ ಬರಲು ಆಮಂತ್ರಿಸಿದರು. ಅವರ ಮಗ ವಸಂತ ನನ್ನ ಕವನಗಳನ್ನು ಬಹಳ ಮೆಚ್ಚಿರುವುದಾಗಿ ಹೇಳಿದ್ದರು.

ವರಕವಿ ಬೇಂದ್ರೆಯವರ ೧೧೧ನೆಯ ಜನ್ಮದಿನಾಚರಣೆ ಧಾರವಾಡದಲ್ಲಿ, ಬೇಂದ್ರೆಭವನದಲ್ಲಿ ನಡೆಯಿತು.(೩೧-೧-೨೦೦೭). ನಮ್ಮ ಗುರುಗಳಾದ ಡಾ| ರಾಘವೇಂದ್ರರಾಯರಿಗೆ ಬೇಂದ್ರೆ ಪುರಸ್ಕಾರ ದೊರೆತಿತ್ತು. (ಬೇಂದ್ರೆಯವರ ಬಗ್ಗೆ ಇಂಗ್ಲೀಷಿನಲ್ಲಿ ಬರೆದುದಕ್ಕಾಗಿ ಮತ್ತು ಅವರ ಕವನಗಳನ್ನು ಆಂಗ್ಲಭಾಷೆಗೆ ಅನುವಾದಿಸಿದ್ದಕ್ಕಾಗಿ). ಡಾ| ಗೀತಾ ವಸಂತ ಅವರಿಗೆ ಬೇಂದ್ರೆಯವರ ಮೇಲೆ ಪ್ರಬಂಧ ಬರೆಯಲು ಸ್ಕಾಲರ್‌ಶಿಪ್ ಕೊಡಲಾಗಿತ್ತು. (ಬೇಂದ್ರೆ ಹಾಗೂ ಅವಧೂತ ಕಾವ್ಯ). ಗೀತಾ ಪಂ. ಗಣಪತಿ ಭಟ್ ಅವರ ಸೊಸೆ ಎಂದು ತಿಳಿದಾಗ ಹೆಚ್ಚಿನ ಆನಂದವಾಯಿತು. ಅವರ ಮಗ ವಸಂತ ಹಾಸಣಗಿಗೆ ಬರಲು ತಂದೆಯವರ ಪರವಾಗಿ ಮತ್ತೆ ಆಮಂತ್ರಿಸಿದ. ಮೇ ತಿಂಗಳಲ್ಲಿ ಒಂದು ಯೋಗ ಶಿಬಿರ ನಡೆಸಲು ಕೇಳಿಕೊಂಡ. ವಸಂತ ತಂದೆಯಂತೆ ಕರ್ನಾಟಕ ಕಾಲೇಜಿನ ವಿದ್ಯಾರ್ಥಿ. ಇಬ್ಬರ ಆಯ್ದ ವಿಷಯ ಆಂಗ್ಲ ಸಾಹಿತ್ಯ. ವಸಂತ ಮುಂದೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾನೆ. ಕೆಲಕಾಲ ಉಪನ್ಯಾಸಕನಾಗಿ, ಕೆಲಕಾಲ ಪತ್ರಿಕೋದ್ಯಮಿಯಾಗಿ ಕೆಲಸ ಮಾಡಿದ. ಈಗ ತಂದೆಯ ಬಳಿ ಸಂಗೀತ ಕಲಿಯುತ್ತಿದ್ದಾನೆ. ಮನೆಯ ತೋಟದಲ್ಲಿ ಬೇಸಾಯ ಮಾಡುತ್ತಿದ್ದಾನೆ. ಮಹತ್ವದ ವಿಷಯವೆಂದರೆ ಸಂಗೀತಶಾಸ್ತ್ರದಲ್ಲಿ ಡಾಕ್ಟರೇಟ್ ಮಾಡುತ್ತಿದ್ದಾನೆ. ಯೋಗಾಭ್ಯಾಸದಲ್ಲಿ ವಿಶೇಷ ಆಸಕ್ತಿಯನ್ನು ತೋರುತ್ತಿದ್ದಾನೆ. ನನ್ನನ್ನು ಹಾಸಣಗಿಗೆ ಎಳೆದೊಯ್ಯಲು ಬೇಂದ್ರೆ, ಸಂಗೀತ, ಕಾವ್ಯ ಮತ್ತು ಯೋಗ ಇವು ಪ್ರಮುಖ ಆಕರ್ಷಣೆಗಳಾದವು.

ಎಪ್ರಿಲ್ ತಿಂಗಳ ೨೪ಕ್ಕೆ ವಸಂತ ಬಂದು ನನ್ನನ್ನು ತಮ್ಮ ಊರಿಗೆ ಕರೆದೊಯ್ದನು. ಪಂ. ಗಣಪತಿ ಭಟ್ ಅವರನ್ನು ಕಂಡು ನನಗೆ ಬಹಳ ಸಂತೋಷವಾಯ್ತು. ಅವರು ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಹೇಳುತ್ತಿದ್ದರು.

ವಸಂತ ನಂತರ ರಿಯಾಜು ಮಾಡುತ್ತ ಕುಳಿತ. ಪಂ. ಗಣಪತಿಯವರು ಹಾರ್ಮೋನಿಯಂ ಬಾರಿಸುತ್ತ ಕುಳಿತರು. ಯಾವ ಜನುಮದ ನಂಟೊ ಏನೊ | ಭಾವ ನಿನ್ನನೆ ಬರೆದಿದೆ ಹಾಡನ್ನು ಸುಶ್ರಾವ್ಯವಾಗಿ ಹಾಡಿದರು. ಇದು ನಿಮ್ಮದೇ ಹಾಡಲ್ಲವೇ? ಎಂದು ಕೇಳಿದರು. ಅವರ ಮುಖದಲ್ಲಿ ಒಂದು ತುಂಟ ನಗೆ ಇತ್ತು. ನಾನು ಅವರ ಪ್ರೀತಿಗೆ ಆಭಾರಿಯಾಗಿದ್ದೆ.

ನಮ್ಮ ನೆನಪುಗಳು ನನ್ನ ಕವಿತೆ ಪ್ರಣಯ ಸಂಗ್ರಾಮ ಕಡೆ ತಿರುಗಿದವು. ನಾನು ಆ ಕವನ ಬರೆದ ಹಿನ್ನೆಲೆ ವಿವರಿಸಿದೆ. ಪದ್ಯದ ಕೊನೆಯ ಚರಣದಲ್ಲಿ ಶೇಕ್ಸಪಿಯರ್‌ನ ಮಾತು ನೆನೆಯುತ್ತ, ಹುಚ್ಚ, ಪ್ರೇಮಿ ಮತ್ತು ಕವಿ ಒಂದೆ ಜಾತಿಯವರು ಎಂಬ ಅವನ ಉಕ್ತಿಗೆ ನನ್ನ ಸಾಲು ಸೇರಿಸಿದ್ದರ ಬಗ್ಗೆ ಹೇಳಿದೆ. ಅವರಲ್ಲಿ ಒಂದು ಸಮಾನ ಅಂಶವಿದೆ, ಅದುವೆ ಕಲ್ಲಿನೊಂದಿಗೆ ಅವರ ಸಂಬಂಧ ಎಂದೆ. ಹುಚ್ಚ ಕಲ್ಲೊಗೆಯುತ್ತಾನೆ. ಪ್ರೇಮಿ ಕಲ್ಲಾಗುತ್ತಾನೆ ಮತ್ತೆ ಕವಿ ಕಲ್ಲುಗಳೊಂದಿಗೆ ಮಾತಾಡುತ್ತಾನೆ. ಆ ಪದ್ಯ (ಪ್ರಣಯ ಸಂಗ್ರಾಮ) ಹೀಗಿದೆ:

ನಿನ್ನ ಹುಸಿನಗೆಯ ಶಲ್ಯಗಳಿರಿತದಿ

ಸಾವಿರ ಸಲ ನಾ ಮಡಿದಿಹೆನು

ಯಾಕೋ ಏನೋ, ನಿನಗೋಸುಗವೇ

ಇಂದಿಗು ಜೀವವ ಹಿಡಿದಿಹೆಸು.

ಸಂಗ್ರಾಮದಲೋ, ಮೊದಲಿದೆ ಯುದ್ಧ

ನಂತರ ಸೋಲೋ ಗೆಲವೊ ಇದೆ

ನಿನ್ನ ಒಲವಿನಲಿ ಮೊದಲೇ ಸೋತೆನು

ನಂತರ ಯುದ್ಧ ನಡೆಯುತಿದೆ.

ಸರಳ ದಂತಪಂಕ್ತಿಗಳೇ ಸರಳು

ನೋಟದ ಗುರಿ, ಕಚ್ಚಿದೆ ಬೆರಳು

ನಿನ್ನ ಕಂಡು ಹುಚ್ಚಾಯಿತು ಕಲ್ಲು

ಅರಿಯದಂತೆ ಆದೆನು ಮರಳು.

ಹುಚ್ಚ, ಪ್ರೇಮಿ, ಕವಿ, ಒಂದೆ ಜಾತಿಯವ-

ರೆಂಬ ಮಾತ ನಾ ನಂಬುವೆನು

ಹುಚ್ಚ ಕಲ್ಲೊಗೆಯೆ, ಪ್ರೇಮಿ ಕಲ್ಲಾಗೆ

ಕವಿಯು ಕಲ್ಲುಗಳ ನುಡಿಸುವನು.

ಈ ಕವಿತೆಯನ್ನು ನಾನು ಮಂತ್ರಾಲಯದಲ್ಲಿ ರಾಘವೇಂದ್ರಸ್ವಾಮಿಗಳ ಮಠದ ಆವರಣದಲ್ಲಿ ಕೇಳಿದ ಒಂದು ರೋಚಕ ಘಟನೆಯನ್ನು ಪಂ. ಗಣಪತಿ ಅವರಿಗೆ ಹೇಳಿದೆ. ಕೆಲವು ವರ್ಷಗಳ ಹಿಂದಿನ ಘಟನೆ. ನಾನು ಮತ್ತು ಗುರೂಜಿ ಪ್ರತಿ ವರ್ಷ ಏಳು ದಿನಗಳ ಸೇವೆ ಮಾಡಲು ಶ್ರಿ ರಾಘವೇಂದ್ರಸ್ವಾಮಿಗಳ ಮಂತ್ರಾಲಯಕ್ಕೆ ಹೋಗುವಂತೆ ಆ ವರ್ಷವೂ ಹೋಗಿದ್ದೆವು. ನಾವು ರಥೋತ್ಸವ ಮುಗಿಸಿ ರೂಮಿಗೆ ಮರಳುವಾಗ ದಾರಿಯಲ್ಲಿ ಒಂದು ರೂಮಿನಲ್ಲಿ ಒಬ್ಬ ವ್ಯಕ್ತಿ ತಂಬೂರಿ ಮಿಡಿಯುತ್ತ ಹಿಂದಿ, ಮರಾಠಿ, ಕನ್ನಡ ಭಜನೆ ಹಾಡುತ್ತಿದ್ದುದನ್ನು ಕಂಡೆವು. ಒಂದೆರಡು ದಿನ ನಾವೂ ಅಲ್ಲಿ ಹೋಗಿ ಕುಳಿತು ಹಾಡು ಆಲಿಸಿದೆವು. ಅವನ ಕತೆ ಕೇಳಿದಾಗ ಅವನೊಬ್ಬ ನಾಟಕ ಕಂಪನಿಯ ಕಲಾವಿದ ಎಂದು ತಿಳಿಯಿತು. ಸಾಲ ಬಹಳ ಆಗಿ ಅವನೊಮ್ಮೆ ಕೈಯಲ್ಲಿ ತಂಬೂರಿ ಹಿಡಿದು ಓಡಿಹೋದ. ಯಾವುದೋ ಬಸ್ ಹಿಡಿದ. ಕೊನೆಯ ಬಸ್ ಸ್ಟಾಪ್‌ಗೆ ಟಿಕೆಟ್ ಕೊಡಲು ಹೇಳಿದ. ಅದು ಕರ್ಮಧರ್ಮ ಸಂಯೋಗದಿಂದ ಮಂತ್ರಾಲಯದ ಬಸ್ ಆಗಿತ್ತು. ಇಲ್ಲಿ ಒಂದು ಗಿಡದ ಬುಡಕ್ಕೆ ಕುಳಿತು ತಂಬೂರಿ ಮಿಡಿಯುತ್ತ ಹಾಡುತ್ತಿರುವಾಗ, ಮಂತ್ರಾಲಯದ ಕೆಲವು ಎಳೆಯರು ಇವನಲ್ಲಿ ಹಾಡು ಕಲಿಯಲು ಬಯಸಿದರು. ರೂಮು ಕೊಡಿಸಿದರು. ಇವನು ನಟನೆಂದು ತಿಳಿದಾಗ ಅಲ್ಲಿಯ ಒಂದು ನಾಟಕ ಪ್ರಯೋಗಕ್ಕೆ ಇವನಿಂದ ಸಹಾಯ ಪಡೆದರು. ಇಷ್ಟು ಆಸಕ್ತಿಯಿಂದ ಅವನ ಹಾಡು ಕೇಳುವುದಲ್ಲದೆ, ಅವನ ಕತೆಯನ್ನು ವ್ಯಥೆಯನ್ನು ಕೇಳಿದ್ದಕ್ಕೆ ಆ ಕಲಾವಿದ, ಪ್ರತಿಯಾಗಿ, ನಿಮ್ಮ ಹೆಸರೇನು ಎಂದು ಕೇಳಿದನು. ನಾನು ನನ್ನ ಹೆಸರು ಹೇಳಿದೆ. ಅವನು ಹುಚ್ಚ-ಹುಚ್ಚಿ ಕವನ ಸಂಗ್ರದ ಲೇಖಕ ನೀವೇನಾ? ಎಂದು ಪ್ರಶ್ನಿಸಿದ. ಅಹುದು ಎಂದಾಗ ಅವನು ತಂಬೂರಿ ಬದಿಗಿಟ್ಟು, ಎದ್ದು ಬಂದು ನನಗೆ ಸಷ್ಟಾಂಗ ನಮಸ್ಕಾರ ಹಾಕಿದ. ಯಾಕೆ? ಎಂದು ಕೇಳಿದಾಗ, ನನಗೆ ಮತ್ತೊಂದು ಅಚ್ಚರಿಯೇ ಕಾದಿತ್ತು. ಅವನೊಂದು ನಾಟಕದಲ್ಲಿ ಹೊಸತಾಗಿ ಮದುವೆಯಾದ ನಾಯಕನ ಪಾತ್ರದಲ್ಲಿ ರಂಗ ಪ್ರವೇಶಿಸಿ, ನಿನ್ನ ಹುಸಿನಗೆಯ.. ಹಾಡನ್ನು ಗಜಲ್‌ನಂತೆ ಹಾಡುತ್ತಿದ್ದನಂತೆ. ಜನರು ಮೆಚ್ಚಿ ಒನ್ಸ್ ಮೋರ್ ಎಂದು ಕೂಗುತ್ತಿದ್ದರಂತೆ. ಅವನು ಮತ್ತೆ ಹಾಡಿದಾಗ ಕಾಣಿಕೆಯಾಗಿ ಪ್ರೇಕ್ಷಕರು ಹಣ ಎಸೆಯುತ್ತಿದ್ದರಂತೆ. ಸ್ವಾಮೀ, ನಿಮ್ಮ ಹಾಡು ಹಾಡಿ ಸಾವಿರಾರು ರೂಪಾಯಿ ಗಳಿಸಿದ್ದೇನೆ. ಎಂದ. ಬದಿಯಲ್ಲಿದ್ದ ನನ್ನ ಮಡದಿಗೂ ಆಶ್ಚರ್ಯ, ಮತ್ತು ಸಂತೋಷ. ಇಲ್ಲಿ, ಮಠದ ಆವರಣದಲ್ಲಿ ನಾವು ಪ್ರಣಯಗೀತ ಹಾಡಬಾರದು. ಆದರೆ ನೀವು ಒಪ್ಪಿದರೆ ನಾನು ಹಾಡಿ ತೋರಿಸುವೆ. ಎಂದ. ನಾನು ಗುರೂಜಿಯವರ ಕಡೆಗೆ ಮುಖಮಾಡಿ ಪ್ರಶ್ನಿಸಿದೆ. ಅವರು ಆಗಬಹುದು ಎಂದು ತಲೆ ಅಲ್ಲಾಡಿಸಿದರು. ಆ ಕಲಾವಿದ ನನ್ನ ಹಾಡು ಹಾಡಿದ.

ಪಂ. ಗಣಪತಿಯವರ ಮನೆಯಲ್ಲಿ ರಾತ್ರಿ ಊಟದ ಸಂಭ್ರಮ. ಮತ್ತೆ ಆ ಹಾಡಿನ ನೆನಪು ಬಂತು. ಮುಂಬೈಯಲ್ಲಿ ಇತ್ತೀಚೆಗೆ ನಡೆದ ಒಂದು ಸಮಾರಂಭದಲ್ಲಿ ನನ್ನ ವಿದ್ಯಾರ್ಥಿನಿ, ಗಜಾನನ ಯಾಜಿಯವರ ಸುಪುತ್ರಿ, ಜ್ಯೋತಿ ಭಟ್ ಈ ಹಾಡನ್ನು ಗಜಲ್ ಧಾಟಿಯಲ್ಲಿ ಹಾಡಿದಳು. ನಾನು ಸಭೆಗೆ ಆ ಹಾಡು ಮುಗಿದ ಮೇಲೆ ಬಂದಿದ್ದೆ. ಹಲವರು ಆ ಹಾಡನ್ನು ಮೆಚ್ಚಿ ನನ್ನನ್ನು ಅಭಿನಂದಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more