• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀಮಧ್ವರ ಪ್ರವಚನ ವೈಭವಸಾರ!

By Staff
|

ಮುಕ್ತಿಗೆ ಕಾರಣವಾದ ಜ್ಞಾನಕರ್ಮಗಳ ಸ್ಥಾನಮಾನಗಳಲ್ಲೂ ವಿವಿಧ ದರ್ಶನಗಳಲ್ಲಿ ಭಿನ್ನ ಮತವಿದೆ. ಕೆಲವರಿಗೆ ಕೇವಲ ಕರ್ಮ ಮೋಕ್ಷಸಾಧನವಾದರೆ, ಮತ್ತೆ ಕೆಲವರಿಗೆ ಜ್ಞಾನ ಮೋಕ್ಷಸಾಧನ. ಕೆಲವರಿಗೆ ಜ್ಞಾನಮೋಕ್ಷಗಳೆರಡು ಜೊತೆಜೊತೆಯಾಗಿ ಮೋಕ್ಷಕ್ಕೆ ಸಾಧನ. ಕೆಲವರದು ಕರ್ಮತ್ಯಾಗವಾದ, ಇನ್ನು ಕೆಲವರದು ಜ್ಞಾನತ್ಯಾಗವಾದ. ಆದರೆ ಕರ್ಮವು ಜ್ಞಾನಕ್ಕೆ ಸಾಧನ, ಜ್ಞಾನ ಮೋಕ್ಷಕ್ಕೆ ಸಾಧನ. ಜ್ಞಾನದ ಅನಂತರದ ಕರ್ಮ ಮುಕ್ತಿಯಲ್ಲಿನ ಆನಂದಾತಿಶಯಕ್ಕೆ ಕಾರಣ ಎಂಬುದು ಸಿದ್ಧಾಂತ.

ಮುಕ್ತಿಯ ಕಲ್ಪನೆಯಲ್ಲೂ ಈ ದರ್ಶನಗಳಲ್ಲಿ ಒಮ್ಮತವಿಲ್ಲ. ಕೆಲವರಿಗೆ ದುಃಖಾಭಾವ ಮೋಕ್ಷ, ಮತ್ತೆ ಕೆಲವರಿಗೆ ಸುಖದುಃಖಗಳೆರಡರ ಅಭಾವ ಮೋಕ್ಷ, ಮತ್ತೆ ಕೆಲವರಿಗೆ ಆತ್ಮೈಕ್ಯವೇ ಮೋಕ್ಷ, ಇನ್ನೂ ಕೆಲವರಿಗೆ ಶೂನ್ಯಭಾವವೇ ಮೋಕ್ಷ. ಕೆಲವರಿಗೆ ಆನಂದ ಸಾಮ್ಯ ಮುಕ್ತಿಯಾದರೆ, ಮತ್ತೆ ಕೆಲವರಿಗೆ ಸತತ ಊರ್ಧ್ವಗಮನವೇ ಮುಕ್ತಿ. ‘ಮುಕ್ತಿಯಲ್ಲಿ ಅವರವರ ಸ್ವರೂಪೋಚಿತವಾದ ಆನಂದವು ಭಗವದನುಗ್ರಹದಿಂದ ಪೂರ್ಣವಾಗಿ ಅಭಿವ್ಯಕ್ತವಾಗುವುದು. ಅಲ್ಲಿಯೂ ತಾರತಮ್ಯ ಇದ್ದೇ ಇರುವುದು ಎಂಬುದು ನಿಜವಾದ ಮುಕ್ತಿಯ ಪರಿಕಲ್ಪನೆ.’

ಭಕ್ತಿಯು ಮುಕ್ತಿಗೆ ಸಾಧನ. ಮಹಾತ್ಮ್ಯಜ್ಞಾನಪೂರ್ವಕವಾದ ಭಗವತ್ಪ್ರೀತಿಯೇ ನಿಜವಾದ ಭಕ್ತಿ. ಶಾಸ್ತ್ರಾಧ್ಯಯನದಿಂದ ಬ್ರಹ್ಮಜ್ಞಾನ. ವಿಹಿತ ಕರ್ಮಾನುಷ್ಠಾನವನ್ನು ಕಾಮ್ಯಫಲಗಳ ಅಪೇಕ್ಷೆಯನ್ನು ತೊರೆದು, ಭಗವತ್ಪ್ರೀತಿಗೋಸ್ಕರ ಭಕ್ತಿಯಿಂದ ಆಚರಿಸುವುದೇ ಬ್ರಹ್ಮಜ್ಞಾನಕ್ಕೆ ಪ್ರಮುಖ ಸಾಧನ. ಭಕ್ತಿಗೆ ಪ್ರಸನ್ನನ್ನಾಗುವ ಭಗವಂತ ಮೆಚ್ಚಿ ಮುಕ್ತಿಯನ್ನು ನೀಡಿ, ಅನುಗ್ರಹಿಸುವನು. ಏಕಾದಶ್ಯಾದಿ ವ್ರತಗಳು ಭಗವದಾರಧನೆಗೆ ಅತ್ಯಂತ ವಿಹಿತವಾದ ಸಾಧನ. ದ್ವೇಷಾದಿಗಳು ಮಾತ್ರ ಎಂದಿಗೂ ಮುಕ್ತಿಗೆ ಸಾಧನವಾಗಲಾರವು.’’

***

ಗ್ರಂಥವೈಭವ- ಅನುವ್ಯಾಖ್ಯಾನ ರಚನೆಗೆ ತ್ರಿವಿಕ್ರಮರ ಪ್ರಾರ್ಥನೆ

ಒಂದು ದಿನ ತ್ರಿವಿಕ್ರಮಪಂಡಿತರನ್ನು ಕುರಿತು ಶ್ರೀಮಧ್ವರು ಆದೇಶಿಸಿದರು. ‘‘ನೀವು ಭಾಷ್ಯಶ್ರವಣವನ್ನು ಪೂರೈಸಿರುವಿರಿ. ನಮ್ಮಿಂದ ಕೇಳಿದ ಅರ್ಥಗಳನ್ನೆಲ್ಲ ನೀವು ವ್ಯಾಖ್ಯಾನರೂಪದಲ್ಲಿ ಬರೆಯಿರಿ.’’ ತ್ರಿವಿಕ್ರಮರು ಅವಾಕ್ಕಾದರು. ತಮ್ಮೊಳಗೇ ವಿಚಾರಿಸತೊಡಗಿದರು. ಗುರುಗಳು ಪೂರ್ಣಪ್ರಜ್ಞರು, ತಾವೋ ಮಂದಮತಿಗಳು. ಅವರ ಗ್ರಂಥಗಳನ್ನು ಸಮಗ್ರವಾಗಿ ತಿಳಿದುಕೊಳ್ಳಲು ಅರ್ಹತೆ ಪಡೆಯದ ತಾವು ವ್ಯಾಖ್ಯಾನಿಸುವುದೆಂತು? ಆದರೆ ಗುರುವಿನ ಆಜ್ಞೆಯನ್ನು ಪಾಲಿಸಲೇಬೇಕಲ್ಲವೇ. ನಂತರ ಗುರುಗಳ ಗ್ರಂಥಗಳನ್ನು ಮುಕ್ತಮನದಿಂದ ಪ್ರಶಂಸಿಸತೊಡಗಿದರು.

‘‘ತಮ್ಮ ಗ್ರಂಥಗಳು ಅಮೋಘ, ಅತ್ಯದ್ಭುತ. ತಮ್ಮ ಭಾಷ್ಯ ರತ್ನಾಕರ, ಸಮುದ್ರ. ಅಲ್ಲಿಯ ಯುಕ್ತಿರತ್ನಗಳನ್ನು ಎಂತಹ ಶ್ರೇಷ್ಠಜ್ಞಾನಿಯೂ ಸಂಗ್ರಹಿಸಲಾರ. ತಮ್ಮ ದಶೋಪನಿಷದ್ಭಾಷ್ಯಗಳು ಅಲ್ಲಿಯ ಭಾವ ಅನಾವರಣಗೊಳಿಸುವುದು ಅನ್ಯಾದೃಶ. ಗೀತಾಭಾಷ್ಯ ತಾತ್ಪರ್ಯಗಳಂತೂ ತಮ್ಮ ಅಪ್ರತಿಮ ವಾಕ್ಕಿರಣಗಳಿಂದ, ಸೂರ್ಯಚಂದ್ರರಂತೆ, ಜಗವನ್ನು ಬೆಳಗುತ್ತಿವೆ. ಇತಿಹಾಸಪುರಾಣಗಳನ್ನು ಮಥಿಸಿ ಮಹಾಭಾರತ ತಾತ್ಪರ್ಯನಿರ್ಣಯ ಸುಧೆಯನ್ನು ನೀಡಿರುವಿರಿ. ನಿಮ್ಮ ತಂತ್ರಸಾರಸಂಗ್ರಹ ಪಠಿಸುವವರ ಪಾಲಿನ ಕಲ್ಪವೃಕ್ಷ.

ತತ್ತ್ವೋದ್ಯೋತಾದಿ ಪ್ರಕರಣ ಗ್ರಂಥಗಳು ಗಾತ್ರದಲ್ಲಿ ಚಿಕ್ಕವಾದರೂ ದುರ್ಮತಾರಣ್ಯವನ್ನು ದಹಿಸುವ ಕಿಡಿಗಳು, ಅಗ್ನಿಜ್ವಾಲೆಗಳು.’’ ಹೀಗೆ ಮುಂತಾಗಿ ಬಣ್ಣಿಸುತ್ತ ಅವರು ಗುರು ಶ್ರೀಮಧ್ವರಿಗೆ ಇನ್ನೊಂದು ಕೃತಿಯನ್ನು ರಚಿಸಲು ಕೇಳಿಕೊಂಡರು. ‘‘ತಾವು ರಚಿಸುವ ಕೃತಿ ತಮ್ಮ ಎಲ್ಲ ಗ್ರಂಥಗಳ ವಾದಸರಣಿಯನ್ನು ಒಂದೆಡೆ ನಿರೂಪಿಸುವ ವಾದವಿಶ್ವಕೋಶವಾಗಬೇಕು. ಅದರ ಬೆಳಕಿನಲ್ಲಿ ನಾನು ತಮ್ಮ ಭಾಷ್ಯಕ್ಕೆ ಟೀಕೆ ರಚಿಸುವ ಸಾಹಸಕ್ಕೆ ಯತ್ನಿಸುವೆ.’’ ಎಂದರು.

ತ್ರಿವಿಕ್ರಮರ ಪ್ರಾರ್ಥನೆಗೆ ಶ್ರೀಮಧ್ವರು ಸಮ್ಮತಿ ನೀಡಿದರು. ಅವರ ಪಾವಾಡಸದೃಶ ಹೊಸ ಕೃತಿಯ ರಚನೆ ವಿನೂತನ ರೀತಿಯಲ್ಲಿ ನಡೆಯಿತು. ನಾಲ್ವರು ಶಿಷ್ಯರನ್ನು ಮುಂದೆ ಕುಳ್ಳಿರಿಸಿಕೊಂಡು ಅವರಿಗೆ ಆದೇಶಿಸಿದರು, ‘‘ನಾನು ನಾಲ್ಕು ಅಧ್ಯಾಯಗಳ ಕೃತಿಯಾಂದನ್ನು ತ್ರಿವಿಕ್ರಮರ ಪ್ರಾರ್ಥನೆಯ ಮೇರೆಗೆ ರಚಿಸುತ್ತಿರುವೆ. ಒಬ್ಬೊಬ್ಬರಿಗೆ ಒಂದು ಅಧ್ಯಾಯದಂತೆ ನಾನು ಈಗ ಅದನ್ನು ಏಕಕಾಲದಲ್ಲಿ ಹೇಳುವೆ. ನೀವು ಬರೆಯುತ್ತಾಹೋಗಿರಿ.’’ ಶಿಷ್ಯರು ಸಿದ್ಧರಾದರು. ಆಗ ನಡೆದದ್ದು ಆಶ್ಚರ್ಯದ ಸಂಗತಿ.

ಗುರುಗಳು ಹೇಳುತ್ತ ಹೋದರು. ಪ್ರತಿಯಾಬ್ಬ ಶಿಷ್ಯನಿಗೆ ಕೇಳುತ್ತಿದ್ದುದು ತಾನು ಬರೆಯಬೇಕಾದ ಅಧ್ಯಾಯ ಮಾತ್ರ. ಅವರು ಏಕಕಾಲಕ್ಕೆ ನಾಲ್ಕು ಅಧ್ಯಾಯಗಳ ಗ್ರಂಥ ಬರೆಸಿದರು. ಇಡೀ ಜಗತ್ತಿನಲ್ಲಿ ಏಕಕಾಲಕ್ಕೆ ಗುರುವೊಬ್ಬ ನಾಲ್ಕು ಅಧ್ಯಾಯಗಳನ್ನು ಬರೆಸಿದ ಏಕಮಾತ್ರ ಕೃತಿ ಇದಾಗಿದೆ. ಇದರಿಂದ ತಾವು ಭಾವಿಚತುರ್ಮುಖರೆಂಬುದನ್ನು ತೋರಿಸಿದರು.

ಆ ಅದ್ಭುತ ಕೃತಿಯೇ ಅನುಭಾಷ್ಯ ಅಥವಾ ಅನುವ್ಯಾಖ್ಯಾನ. ಮೇಲ್ನೋಟಕ್ಕೆ ಅದು ಅವರ ಬ್ರಹ್ಮಸೂತ್ರಗಳ ಮೇಲಿನ ಭಾಷ್ಯವನ್ನು ವಿವರಿಸುವ ಕೃತಿ. ನಿಜವಾದ ಅರ್ಥದಲ್ಲಿ ಅದು ತ್ರಿವಿಕ್ರಮಪಂಡಿತರ ಪ್ರಾರ್ಥನೆಯಂತೆ ಅವರ ಸಮಗ್ರ ವಿಚಾರಸರಣಿ ಹಾಗೂ ವಾದಸರಣಿಗಳ ವಿಶ್ವಕೋಶ. ದ್ವೈತಸಿದ್ಧಾಂತದ ಸಮಸ್ತಸೂಕ್ಷ್ಮ ಪ್ರಮೇಯಗಳ ಆಳವಾದ ವಿಶ್ಲೇಷಣೆಯನ್ನು ಅದು ಬ್ರಹ್ಮಸೂತ್ರಗಳಿಗೆ ಅನ್ವಯಿಸುವಂತೆ ಒಂದೆಡೆ ನೀಡುತ್ತದೆ. ಅದರ ಮೇಲೆ ರಚಿತವಾದ ಶ್ರೀಜಯತೀರ್ಥರ ಟೀಕೆಯೇ ವ್ಯಾಖ್ಯಾನಪ್ರಪಂಚದ ಮೇರುಕೃತಿಯೆಂದು ವಿಶ್ವಮಾನ್ಯವಾಗಿರುವ ‘ಶ್ರೀಮನ್ಯಾಯಸುಧೆ’.

ಆ ಗ್ರಂಥದೊಂದಿಗೆ ಮತ್ತೊಂದು ಕೃತಿಯನ್ನು ಶ್ರೀಮಧ್ವರು ರಚಿಸಿದರು. ಅದೇ ‘ನ್ಯಾಯವಿವರಣೆ’. ಅನುಭಾಷ್ಯ ಅವರ ಸೂತ್ರದ ಭಾಷ್ಯದ ವಿವರಣೆಯಾಗಿ ಭಾಷ್ಯಟೀಕೆ ಎನ್ನಿಸಿದರೆ, ಇದು ಅನುಭಾಷ್ಯದ ವಿವರಣೆಯಾಗಿ ಭಾಷ್ಯದ ಟಿಪ್ಪಣಿ ಎನಿಸಿತು. ಹೀಗೆ ಭಾಷ್ಯದೊಂದಿಗೆ ಟೀಕಾ, ಟಿಪ್ಪಣಿಗಳ ಪರಿಕಲ್ಪನೆಯನ್ನು ನೀಡಿದ ಅನನ್ಯ ವೇದಾಂತಭಾಷ್ಯಕಾರರೆಂದರೆ ಶ್ರೀಮಧ್ವರು. ಅನುವ್ಯಾಖ್ಯಾನದಲ್ಲಿ ಪ್ರದರ್ಶಿತವಾದ ಟೀಕಾಶೈಲಿ ಮುಂದೆ ಶ್ರೀಜಯತೀರ್ಥ, ಶ್ರೀವ್ಯಾಸರಾಜ, ಶ್ರೀವಾದಿರಾಜ, ಶ್ರೀರಘೂತ್ತಮ ಹಗೂ ಶ್ರೀರಾಘವೇಂದ್ರರಂತಹರಿಗೆ ಆದರ್ಶವಾಯಿತು.

ಶ್ರೀಮಧ್ವರ ಅನುವ್ಯಾಖ್ಯಾನ ತ್ರಿವಿಕ್ರಮಪಂಡಿತರ ಹಂಬಲನ್ನು ಪೂರೈಸಿತ್ತು. ಶ್ರೀಮಧ್ವರ ಸಮಗ್ರವಾದಸರಣಿ ಸೂತ್ರಪ್ರಸ್ಥಾನಕ್ಕೆ ಅನ್ವಯವಾಗುವ ಬಗೆಯನ್ನು ಅವರ ಅನುವ್ಯಾಖ್ಯಾನದಿಂದ ಕಂಡುಕೊಂಡರು. ಗುರುಗಳ ಆದೇಶವನ್ನು ಪೂರೈಸಲು ‘ತತ್ತ್ವಪ್ರದೀಪ’ ಅಥವಾ ‘ತತ್ತ್ವದೀಪಿಕಾ’ ಗ್ರಂಥ ರಚಿಸಿದರು. ಅವರು ತಮ್ಮ ಗ್ರಂಥದಲ್ಲಿ ಅನೇಕ ಕಡೆ ಅನುವ್ಯಾಖ್ಯಾನವನ್ನು ಉಲ್ಲೇಖಿಸುತ್ತಾ ಅದರ ಅಧ್ಯಯನ ಸೂತ್ರಾರ್ಥವನ್ನು ತೆರೆದಿಡುವ ಬಗೆಯನ್ನು ನಿರೂಪಿಸಿರುವರು.

ಈ ಕಾರ್ಯಕ್ಕಾಗಿ ಸುಪ್ರೀತರಾದ ಶ್ರೀಮಧ್ವರು ತ್ರಿವಿಕ್ರಮರನ್ನು ವಿಶೇಷ ರೀತಿಯಿಂದ ಅನುಗ್ರಹಿಸಿದರು. ಅವರಿಗೆ ತಮ್ಮ ಕರಾರ್ಚಿತವಾದ, ವಕ್ಷಃಸ್ಥಳದಲ್ಲಿ ಶ್ರೀಲಕ್ಷ್ಮಿಯ ಪೂರ್ಣಪ್ರತೀಕದಿಂದ ಶೋಭಿಸುವ ಅನುಪಮ ಶ್ರೀನಾರಾಯಣ ಪ್ರತಿಮೆಯನ್ನು ನೀಡಿ ಅವರ ಸಿದ್ಧಿಗೆ ನೆರವಾದರು. (ಈ ಸುಂದರ ಲಕ್ಷ್ಮೀನಾರಾಯಣಪ್ರತೀಕವನ್ನು ಶ್ರೀಕಾವುಮಠದ ಅವರ ಪರಂಪರೆಯವರ ಮನೆಯಲ್ಲಿ ಇಂದೂ ಕಾಣಬಹುದು.) ತ್ರಿವಿಕ್ರಮಪಂಡಿತರ ಮಗ ನಾರಾಯಣಪಂಡಿತರು ಮುಂದೆ ಶ್ರೀಮಧ್ವರ ದಿವ್ಯಕಥೆಯನ್ನು ತಮ್ಮ ಅಪ್ರತಿಮಕಾವ್ಯ ‘ಸುಮಧ್ವವಿಜಯ’ದಲ್ಲಿ ನಿರೂಪಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X