ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಮಧ್ವರ ಪ್ರವಚನ ವೈಭವಸಾರ!

By Staff
|
Google Oneindia Kannada News


ಕುಡಿಲ್‌ ಎಂಬುದು ವಿಷ್ಣುಮಂಗಲದ ಸಮೀಪದ ಸ್ಥಳ. ಅಲ್ಲಿಯ ಜನರಿಗೆ ಶ್ರೀಮಧ್ವರ ಚಾತುರ್ಮಾಸ್ಯದ ವೈಭವದಲ್ಲಿ ಪ್ರವಚನ ಕೇಳುವ ಭಾಗ್ಯ ಲಭ್ಯವಾಗಿತ್ತು. ಅವರ ಒಂದು ಪ್ರವಚನದ ಸಾರ ಇಲ್ಲಿದೆ.

Sri Madhwacharya‘‘ನಾರಾಯಣನೇ ಪರದೈವ; ಅವನು ಅನಂತಾನಂತ ಕಲ್ಯಾಣ ಗುಣಪೂರ್ಣ; ಅದರಿಂದಾಗಿ ಅವನನ್ನು ಬ್ರಹ್ಮ ಎನ್ನುವರು. ಅವನೇ ಸಕಲ ವೇದಗಳಿಗೆ ಪ್ರತಿಪಾದ್ಯನಾದವನು. ಅವನೇ ಜಗತ್ತಿನ ಸೃಷ್ಟಿ, ಸ್ಥಿತಿ, ಲಯ, ನಿಯಮನ, ಜ್ಞಾನ, ಅಜ್ಞಾನ, ಬಂಧ ಮತ್ತು ಮೋಕ್ಷಗಳೆಂಬ ಸಕಲಕ್ಕೂ ಮುಖ್ಯ ಕಾರಣನು. ಅವನು ಸರ್ವಜ್ಞ, ಸರ್ವಶಕ್ತ, ಸರ್ವವ್ಯಾಪ್ತ ಹಾಗೂ ಸರ್ವತಂತ್ರಸ್ವತಂತ್ರ.

ವೇದಗಳಂತೆ ಮಹಾಭಾರತ ರಾಮಾಯಣಾದಿ ಸಕಲ ಶಾಸ್ತ್ರಗಳೂ ಅವನ ಸರ್ವೋತ್ತಮತ್ವವನ್ನೇ ಸಾರುವವು. ಶಾಸ್ತ್ರಶಬ್ದಗಳಂತೆ ಲೋಕಶಬ್ದಗಳೂ ಅವನ ಮಹಿಮೆಯನ್ನೇ ಹಾಡುವವು. ಅದೇಕೆ, ಅವನ ಮಹಿಮೆಯನ್ನು ಸಾರದ ಶಬ್ದವೇ ವಿಶ್ವದಲ್ಲಿಲ್ಲ. ಸಕಲ ವರ್ಣಾತ್ಮಕ ಶಬ್ದಗಳಂತೆ, ಭೇರಿನಾದ, ಸಮುದ್ರಘೋಷ, ಹಕ್ಕಿಗಳ ಚಿಲಿಪಿಲಿ ಮೊದಲಾದ ಸಕಲ ಧ್ವನ್ಯಾತ್ಮಕ ಶಬ್ದಗಳೂ ಅವನ ಹಿರಿಮೆಯನ್ನೇ ಪ್ರತಿಪಾದಿಸುವವು. ಅದಕ್ಕೆಂದೇ ಅವನ ಮಹಿಮೆ ಅತ್ಯಗಾಧವಾದುದು.

ಅವನ ಪತ್ನಿ ಮಹಾಲಕ್ಷ್ಮಿ; ಗಗನ, ಜಡಪ್ರಕೃತಿ ಮೊದಲಾದವುಗಳಿಗೆ ಅಭಿಮಾನಿಯಾಗಿ, ದೇಶತಃ ಕಾಲತಃ ಅವನಿಗೆ ಸಮಳೆನ್ನಿಸಿರುವಳು; ಗುಣದಲ್ಲಿ ಅನಂತಾಂಶ ನ್ಯೂನಳು. ಬ್ರಹ್ಮವಾಯು ಮೊದಲಾದ ಅನಂತ ಋಜುಗಳು, ಗರುಡಶೇಷಾದಿ ಅನಂತಾನಂತ ಇತರ ಜೀವರು ಭಗವಂತನಾದ ಶ್ರೀಹರಿಯ ದಾಸಾನುದಾಸರು. ಅವನು ಮಾತ್ರ ಎಂದೆಂದಿಗೂ ಈಶನೇ. ಇತರರು ಸದಾ ಅಸ್ವತಂತ್ರರು. ಇತರ ದೇವತೆಗಳನ್ನು ಸ್ತುತಿಸುವ ವೇದಾದಿ ಶಾಸ್ತ್ರಗಳಲ್ಲಿನ ವಾಕ್ಯಗಳು ಮೂಲತಃ ಅವರ ಅಂತರ್ಯಾಮಿಯಾದ ಶ್ರೀಹರಿಯ ಸ್ತೋತ್ರಗಳೇ ಆಗಿವೆ. ಅವರೆಲ್ಲರಲ್ಲಿ ನಿಂತು ಅವರವರಿಗೆ ಉಚಿತವಾದ ಕಾರ್ಯಗಳನ್ನು ಮಾಡಿಸುವವನೂ ಅವನೇ ಆಗಿದ್ದಾನೆ. ಇತರ ದೇವತೆಗಳಲ್ಲಿ ತಾರತಮ್ಯವಿದೆ.

ದೇವತೆಗಳ ಹಾಗೂ ಗುರುಗಳ ತಾರತಮ್ಯವನ್ನು ತಿಳಿಯುವದು ತಾರಕವಾಗಿರುವಂತೆ, ತಿಳಿಯದಿರುವುದು ಅಥವಾ ತಪ್ಪಾಗಿ ತಿಳಿಯುವುದು ಮಾರಕವಾಗಿದೆ. ಸಮಸ್ತ ದೇವತೆಗಳನ್ನು, ಗುರುಗಳನ್ನೂ ಸಹ ಭಗವಂತನ ಪರಿವಾರವೆಂದು ತಾರತಮ್ಯಕ್ರಮದಲ್ಲಿ ಆರಾಧಿಸುವುದು ಮುಕ್ತಿಗೆ ಸಾಧನವಾಗಿದೆ.

ಕೆಲವರಿಗೆ ಜಗತ್ತೇ ಮಿಥ್ಯೆ, ಮತ್ತೆ ಕೆಲವರಿಗೆ ಜಗನ್ನಾಥ ಮಿಥ್ಯೆ; ಇನ್ನು ಕೆಲವರಿಗೆ ಎರಡೂ ಮಿಥ್ಯೆ. ಆದರೆ ಜಗತ್ತು ಸತ್ಯವೇ ಆಗಿದೆ. ಜಗನ್ನಾಥ ಅದರ ನಿಯಾಮಕನಾಗಿದ್ದಾನೆ. ಕೆಲವರಿಗೆ ಭಗವಂತನು ನಿರಾಕಾರ; ಮತ್ತೆ ಕೆಲವರಿಗೆ ಸಾಕಾರ. ಅವನು ಪ್ರಕೃತಾಕಾರ ರಹಿತನಾದ್ದರಿಂದ ನಿರಾಕಾರ, ಜ್ಞಾನನಂದಾದಿ ಅಪ್ರಕೃತ ಆಕಾರವುಳ್ಳವನಾದ್ದರಿಂದ ಸಾಕಾರ. ಕೆಲವರಿಗೆ ಬ್ರಹ್ಮ ಸಗುಣ, ಮತ್ತೆ ಕೆಲವರಿಗೆ ನಿರ್ಗುಣ. ಅವನು ಜ್ಞಾನಾನಂದಾದಿ ಅನಂತಾನಂತ ಕಲ್ಯಾಣಗುಣಪೂರ್ಣನಾಗಿದ್ದರಿಂದ ಸಗುಣ; ಸತ್ತ್ವ, ರಜಸ್‌, ತಮಸ್‌ ಎಂಬ ಪ್ರಕೃತಗುಣರಹಿತನಾಗಿದ್ದರಿಂದ ನಿರ್ಗುಣ.

ಪ್ರತ್ಯಕ್ಷ ಹಾಗೂ ಆಗಮ ಎರಡೂ ಸ್ವತಂತ್ರ ಪ್ರಮಾಣಗಳೇ. ಆದರೆ ಪ್ರತ್ಯಕ್ಷಪ್ರಮಾಣದ ವ್ಯಾಪ್ತಿ ಐಂದ್ರಿಯಕ ಪ್ರಪಂಚಕ್ಕೆ ಸೀಮಿತವಾದರೆ ಆಗಮಗಳ ವ್ಯಾಪ್ತಿ ಅತೀಂದ್ರಿಯ ಪ್ರಪಂಚಕ್ಕೆ ಸೀಮಿತವಾದುದು. ಎಂದರೆ ಅವೆರಡೂ ತಮ್ಮತಮ್ಮ ವಿಷಯಗಳಿಗೆ ಸಂಬಂಧಿಸಿದಂತೆ ಪರಮಪ್ರಮಾಣಗಳೇ. ಆದರೆ ಅವುಗಳಲ್ಲಿ ಪರಸ್ಪರ ವಿರೋಧ ಒದಗಿದಾಗ ಉಪಜೀವ್ಯ ಉಪಜೀವಕವೆಂಬ ವ್ಯವಸ್ಥೆಯ ಹಿನ್ನೆಲೆಯಲ್ಲಿ ಅವುಗಳನ್ನು ಅನ್ವಯಿಸಿಕೊಳ್ಳಬೇಕು. ಐಂದ್ರಿಯಕ ವಿಷಯಗಳಲ್ಲಿ ಪ್ರತ್ಯಕ್ಷ ಉಪಜೀವ್ಯವಾದರೆ, ಅತೀಂದ್ರಿಯ ವಿಷಯಗಳಲ್ಲಿ ಆಗಮವೇ ಉಪಜೀವ್ಯ. ಉಪಜೀವ್ಯಕ್ಕೆ ವಿರೋಧವಾಗದಂತೆ ಉಪಜೀವಕವನ್ನು ಅರ್ಥೈಸಿಕೊಳ್ಳುವುದು ಶಾಸ್ತ್ರ ವಿಧಿ.

ಆಗಮವು ಪೌರುಷೇಯ ಮತ್ತು ಅಪೌರುಷೇಯ ಎಂಬುದಾಗಿ ಎರಡು ಬಗೆ. ಪುರುಷ ಕರ್ತೃಕವಾದದ್ದು ಪೌರುಷೇಯವಾದರೆ, ಹಾಗಲ್ಲದಿದ್ದದ್ದು ಅಪೌರುಷೇಯ. ವೇದಗಳು ಅಪೌರುಷೇಯವಾದರೆ, ಮಹಾಭಾರತಾದಿಗಳು ಪೌರುಷೇಯ ಆಗಮಗಳು. ಮಹಾಭಾರತವು ಪೌರುಷೇಯವಾದರೂ, ಅಪೌರುಷೇಯವಾದ ವೇದಾದಿಗಳಿಗಿಂತಲೂ ಮಿಗಿಲು. ವೇದಪ್ರತಿಪಾದ್ಯನಾದ ಭಗವಂತನ ವಿಶಿಷ್ಟಕೃತಿಯಾಗಿರುವುದೇ ಅದಕ್ಕೆ ಕಾರಣ. ಮಹಾಭಾರತದಲ್ಲೂ ಭಗವದ್ಗೀತೆ, ವಿಷ್ಣುಸಹಸ್ರನಾಮಗಳು ಅತ್ಯಂತ ಶ್ರೇಷ್ಠಭಾಗಗಳು.

ಗೀತೆ ಭಗವಂತನ ಉಪದೇಶವಾದರೆ, ವಿಷ್ಣುಸಹಸ್ರನಾಮ ಅವನ ಅಪೂರ್ವ ಸ್ತೋತ್ರ. ಆಗಮಗಳಲ್ಲಿ ಪರಸ್ಪರ ವಿರೋಧವಿಲ್ಲ. ಅವುಗಳನ್ನು ಉಪಕ್ರಮ, ಉಪಸಂಹಾರ ಮೊದಲಾದ ತಾತ್ಪರ್ಯನಿರ್ಣಾಯಕಲಿಂಗಗಳ ಹಿನ್ನೆಲೆಯಲ್ಲಿ ಸಮನ್ವಯಮಾಡಿಕೊಳ್ಳುವುದು ಸಹಾಯಕ. ಸಮಾಧಿ, ದರ್ಶನ, ಗುಹ್ಯ ಎಂಬ ಭಾಷಾತ್ರಯ ಮೊದಲಾದವುಗಳಿಂದ ಕೂಡಿದ ಅವುಗಳನ್ನು ಸರಿಯಾಗಿ ಅರ್ಥೈಸಿಕೊಂಡಲ್ಲಿ ಅವೆಲ್ಲವುಗಳಲ್ಲಿಯೂ ಏಕತೆಯೇ ಕಂಡುಬರುವುದು. ಅವೆಲ್ಲ ಸಾರುವುದು ಹರಿಸರ್ವೋತ್ತಮ ಪ್ರಮೇಯವನ್ನೇ. (‘‘ಅರ್ಥೋǚಯಮೇವನಿಖಿಲೈರಪಿ ವೇದವಾಕ್ಯೈ ರಾಮಾಯಣೈಃ ಸಹಿತಭಾರತಪಂಚರಾತ್ರೈಃ । ಅನ್ಯೈಶ್ಚಶಾಸ್ತ್ರವಚನೈಃ ಸಹತತ್ತ್ವಸೂತ್ರೈರ್ನಿರ್ಣೀಯತೇ ಸಹೃದಯಂ ಹರಿಣಾ ಸದೈವ ।। ಮ.ಭ.ತಾ.ನಿ.1-22).

ಚಾರ್ವಾಕರು ಪ್ರತ್ಯಕ್ಷವನ್ನು ಮಾತ್ರ ಒಪ್ಪುವರು. ಬೌದ್ಧ-ಜೈನರು ವೇದಗಳನ್ನು ಒಪ್ಪುವುದಿಲ್ಲ. ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕರು ವೇದಗಳನ್ನು ಒಪ್ಪಿದರೂ, ಅವುಗಳ ಪರಮಪ್ರಾಮಾಣ್ಯ ಒಪ್ಪುವುದಿಲ್ಲ. ನ್ಯಾಯ-ವೈಶೇಷಿಕರಿಗಂತೂ ಯುಕ್ತಿಯೇ ಪರಮಪ್ರಮಾಣ. ಆದರೆ ಯುಕ್ತಿಯು ಎಂದಿಗೂ ಸ್ವತಂತ್ರ ಪ್ರಮಾಣ ಎನ್ನಿಸದು. ಐಂದ್ರಿಯಕ ವಿಷಯಗಳ ಬಗ್ಗೆ ಪ್ರತ್ಯಕ್ಷವನ್ನೂ, ಅತೀಂದ್ರಿಯ ವಿಷಯಗಳ ಬಗ್ಗೆ ಆಗಮವನ್ನೂ ಆಧರಿಸದೆ ಅದಕ್ಕೆ ವಿಧಿಯಿಲ್ಲ. ಎಂದರೆ ಅದು ಎಂದಿಗೂ ಅದರ ಹೆಸರೇ ಹೇಳುವಂತೆ ಅನುಮಾನ, (‘ಅನು’ಮಾನ) ಇತರ ಪ್ರಮಾಣಗಳನ್ನು ಅವಲಂಬಿಸಿದ ಸಾಪೇಕ್ಷಪ್ರಮಾಣ.

ಕೇವಲ ಯುಕ್ತಿಯಿಂದ ವಾದಿಸಿದಲ್ಲಿ ಕುಂಬಳಕಾಯಿ ಬಿಡುವ ಬಳ್ಳಿ ಮಾವಿನಹಣ್ಣು ಬಿಡುವ ವೃಕ್ಷಕ್ಕಿಂತ ಬಹುದೊಡ್ಡ ವೃಕ್ಷವಾಗಬೇಕಾದೀತು! ಎತ್ತು ಮೊದಲಾದ ಪ್ರಾಣಿಗಳಂತೆ ಮನುಷ್ಯನೂ ಪ್ರಾಣಿಯಾಗಿರುವುದರಿಂದ, ಅವನಿಗೂ ಅವುಗಳಿಗಿರುವಂತೆ ಕೋಡುಗಳಿರಬೇಕಾದೀತು! ... ಪೂರ್ವಮೀಮಾಂಸಕರು ವೇದಗಳ ಪರಮಪ್ರಾಮಾಣ್ಯವನ್ನು ಒಪ್ಪಿದರೂ ದೇವರನ್ನೇ ಒಪ್ಪದ ನಾಸ್ತಿಕರು. ಮಾಯಾವಾದಿಗಳು ಹಾಗೂ ವಿಶಿಷ್ಟಾದ್ವೈತಿಗಳು ವೇದವನ್ನು ಒಪ್ಪಿದರೂ, ಅವುಗಳ ಉಪನಿಷದ್ಭಾಗಗಳನ್ನು ಮಾತ್ರ ಜ್ಞಾನಕಾಂಡವೆಂದು ಒಪ್ಪಿ, ಇತರ ಭಾಗಗಳನ್ನು ಕರ್ಮಕಾಡವೆಂದು ಗೌಣವಾಗಿ ಕಾಣುವರು. ಇವರಾರೂ ಬ್ರಹ್ಮಸೂತ್ರಗಳ ಪರಮಪ್ರಾಮಾಣ್ಯದ ಕಲ್ಪನೆಯೇ ಇಲ್ಲದವರು. ವೇದಾದಿಶಾಸ್ತ್ರಗಳೆಲ್ಲ ಪ್ರಮಾಣವಾಗಿದ್ದು ಅವುಗಳಲ್ಲಿ ನಿರ್ಣಾಯಕವಾದ ಬ್ರಹ್ಮಸೂತ್ರಗಳಿಗೇ ಪಾರಮ್ಯವೆಂಬುದು ಮಹರ್ಷಿವ್ಯಾಸರ ಸಿದ್ಧಾಂತ.

‘ಜೀವ’ನ ಸ್ವರೂಪ ವಿಚಾರದಲ್ಲೂ ಇತರ ದಾರ್ಶನಿಕರ ವಿಚಾರ ಗ್ರಾಹ್ಯವಾದುದಲ್ಲ. ಕೆಲವು ದರ್ಶನಗಳಲ್ಲಿ ಸರ್ವವೂ ಶೂನ್ಯ; ಮತ್ತೆ ಕೆಲವು ದರ್ಶನಗಳಲ್ಲಿ ಚೇತನವೊಂದೇ ಸತ್ಯ, ಜಡವು ಮಿಥ್ಯೆ. ಇನ್ನು ಕೆಲವು ದರ್ಶನಗಳಲ್ಲಿ ಜಡವೊಂದೇ ಸತ್ಯ, ಚೇತನ ಮಿಥ್ಯೆ. ಕೆಲವರು ಪರಮಾತ್ಮನನ್ನು ಮಾತ್ರ ಒಪ್ಪಿ ಉಳಿದವರನ್ನು ಅವನಿಂದ ಅಭಿನ್ನ ಎನ್ನುವರು. ಕೆಲವರು ಆತ್ಮನನ್ನು ಅಣು ಎಂದರೆ, ಮತ್ತೆ ಕೆಲವರು ಅವನನ್ನು ವ್ಯಾಪ್ತ ಎನ್ನುವರು. ಅವನ ಪರಿಮಾಣ ದೇಹಗಳಿಗೆ ತಕ್ಕಂತೆ ಬದಲಾಗುವಂತಹದು ಎಂದು ಮತ್ತೆ ಕೆಲವರ ವಾದ. ಆದರೆ ಜೀವಾತ್ಮರು ಅಣುಗಳು, ಆದರೆ ಅವರಿಂದ ಭಿನ್ನರಾದ ಪರಮಾತ್ಮ ಹಾಗೂ ಮಹಾಲಕ್ಷ್ಮಿ ವ್ಯಾಪ್ತರು ಎಂಬುದು ನಿಜವಾದ ಸಿದ್ಧಾಂತ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X