• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪರ್ಯಾಯ ಚಿಕಿತ್ಸೆ ಮತ್ತು ಹೋಮಿಯೋಪತಿ(1)

By Staff
|

ಪರ್ಯಾಯ ಔಷಧಿಗಳಲ್ಲಿ ಹೋಮಿಯೋಪಥಿ ಒಂದು. ಇದನ್ನು ಚೇಷ್ಟೆ ಮಾಡುವ ಹಿರಿಯ ಅಲೋಪಥಿ ಡಾಕ್ಟರರನ್ನು ನೋಡಿದ್ದೇನೆ. ಮಂಬೈಯಲ್ಲೆ ಹಲವಾರು ಎಂ.ಡಿ.ಪದವೀಧರ ಡಾಕ್ಟರರು ತಮ್ಮ ಅಲೋಪಥಿ ಮಾರ್ಗಕ್ಕೆ ತಿಲಾಂಜಲಿ ಕೊಟ್ಟು, ಹೋಮಿಯೋಪಥಿ ಅಭ್ಯಸಿಸಿ ಅದ್ಭುತ ಸಾಧನೆಯನ್ನು ತೋರಿಸಿದ್ದಾರೆ. ಹೋಮಿಯೋಪಥಿ ದೆಸೆಯಿಂದಲೇ ನನ್ನ ಮಗಳು ಬೋಡಿಯಾಗುವುದು ತಪ್ಪಿತು. ಹೋಮಿಯೋಪಥಿ ಬಗ್ಗೆ ಈ ವಾರ ತಿಳಿಯೋಣ ಬನ್ನಿ.

ಡಾ.'ಜೀವಿ"ಕುಲಕರ್ಣಿ, ಮುಂಬಯಿ

ಹೋಮಿಯೋಪಥಿ ಔಷಧಿಗಳು ಪ್ರಕೃತಿ-ಯೋಗ ಯೋಗಚಿಕಿತ್ಸೆಯಲ್ಲಿ ವಿಶೇಷ ಆಸಕ್ತಿ ವಹಿಸಿದ ನಾನು 'ಔಷಧಿಯಿಲ್ಲದೆ ಬದುಕಲು ಕಲಿಯಿರಿ" ಎಂಬ ಗ್ರಂಥವನ್ನು ರಚಿಸಿದೆ. ಈ ಪುಸ್ತಕ ಬಹಳ ಪ್ರಸಿದ್ಧಿ ಪಡೆಯಿತು. ನಾಲ್ಕು ಸಂಸ್ಕರಣಗಳನ್ನು ಪಡೆದಿರುವುದು ಅದರ ಜನಪ್ರಿಯತೆಯನ್ನು ತೋರುತ್ತದೆ. ಇಂದಿನ ದಿನಗಳಲ್ಲಿ ರೋಗವಿಲ್ಲದವರನ್ನು ಕಾಣುವುದು ಎಷ್ಟು ಅಪರೂಪವೋ, ಔಷಧಿಯಿಲ್ಲದೆ ಬದುಕುವವರನ್ನು ಕಾಣುವುದೂ ಅಷ್ಟೇ ಅಪರೂಪ.

ಅಲೋಪಥಿ ವೈದ್ಯಕೀಯ ಚಿಕ್ಕಿತ್ಸೆಯ ಕ್ಷೇತ್ರಗಳಲ್ಲಿ ಸಾಕಷ್ಟು ದೈತ್ಯ ಹೆಜ್ಜೆಯ ಸಂಶೋಧನೆಗಳು ನಡೆಯುತ್ತಿವೆ. ಹೊಸ ಔಷಧಿಗಳನ್ನು ಉತ್ಪಾದಿಸುವ ಕಂಪನಿಗಳೂ ಬೆಳೆಯುತ್ತಿವೆ, ಶ್ರೀಮಂತವಾಗುತ್ತಿವೆ. ಆದರೆ ಗಗನಕ್ಕೇರುವ ಬೆಲೆಗಳು, ಔಷಧಿಯ ಪಾರ್ಶ್ವ ಪರಿಣಾಮಗಳು ಅಷ್ಟೇ ಭಯಾನಕವಾಗಿವೆ. ಆಯುರ್ವೇದದಲ್ಲೂ ಸಾಕಷ್ಟು ಪ್ರಗತಿ ನಡೆದಿದೆ. ಆದರೂ ಎಲ್ಲ ರೋಗಗಳನ್ನು ಯಾರೂ ಸಮರ್ಥವಾಗಿ ಹೋಗಲಾಡಿಸಿಲ್ಲ. ಆದ್ದರಿಂದ ಪೂರಕ ಮತ್ತು ಪರ್ಯಾಯ ಚಿಕಿತ್ಸೆಗಳಿಗೆ ನಾವು ಶರಣಾಗದೆ ವಿಧಿ ಇಲ್ಲ.

ಈಗ ಪೂರಕ ಮತ್ತು ಪರ್ಯಾಯ ಔಷಧಿ-ಚಿಕಿತ್ಸೆಯ ಕ್ಷೇತ್ರದಲ್ಲಿ ಕೂಡ ಪ್ರಗತಿ ಆಗತೊಡಗಿದೆ. ಅಮೇರಿಕೆಯಲ್ಲಿ 'ನ್ಯಾಶನಲ್ ಸೆಂಟರ್ ಫಾರ್ ಕಾಂಪ್ಲಿಮೆಂಟರಿ ಅಂಡ್ ಆಲ್ಟರನೇಟಿವ್ ಮೆಡಿಸಿನ್ ದಂಥ ಸಂಸ್ಥೆಗಳು ತಲೆಯೆತ್ತಿವೆ. ಈ ದಿಶೆಯಲ್ಲಿ ಹೋಮಿಯೋಪಥಿ ಕೂಡ ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿದೆ. "ರೇಖಿ"ಯಿಂದ ಕೂಡ ಅನೇಕರಿಗೆ ಲಾಭವುಂಟಾಗಿದೆ. ಸಿದ್ಧಿಯಿದ್ದವರು ಮಂತ್ರಗಳಿಂದ ಕೂಡ ಅನೇಕ ಕಾಯಿಲೆ ವಾಸಿಮಾಡಿದ ಉದಾಹರಣೆಗಳುಂಟು. ಆದ್ದರಿಂದ 'ರೋಗವಿಲ್ಲದೆ ಬದುಕಲು ಕಲಿಯಿರಿ" ಎಂದು ಹೇಳುವ ದಿನಗಳು ಬಂದಿವೆ.

ಒಮ್ಮೆ ಜನರಲ್ ಕರಿಯಪ್ಪನವರಿಗೆ “ನಿಮ್ಮ ಪ್ರಕಾರ ಯಾವ ಯುದ್ಧನೀತಿ ಶ್ರೇಷ್ಠ?" ಎಂದು ಒಬ್ಬರು ಪ್ರಶ್ನೆ ಕೇಳಿದಾಗ ಅವರು ಉತ್ತರಿಸಿದ್ದರಂತೆ, “ಯಾವ ಯುದ್ಧನೀತಿಯಿಂದ ನಾವು ಯುದ್ಧದಲ್ಲಿ ಅಂತಿಮ ಜಯವನ್ನು ಗಳಿಸುತ್ತೇವೆಯೋ ಅದುವೆ ಉತ್ತಮ ಯುದ್ಧ ನೀತಿ" ಎಂದು. ಅದೇ ಮಾತನ್ನು ನಾವು ರೋಗಗಳ ಚಿಕಿತ್ಸೆಯ ಬಗ್ಗೆ ಕೂಡ ಹೇಳಬಹುದು. “ಯಾವ ಉಪಾಯದಿಂದ ನಾವು ಯಾವುದೇ ರೋಗವನ್ನು ನಿರ್ಮೂಲನಗೊಳಿಸಲು ಸಾಧ್ಯವೋ ಅದೇ ಶ್ರೇಷ್ಠವಾದ ಚಿಕಿತ್ಸೆ"ಎಂದು.

ನಾನು ಕೆಲಸಮಾಡುತ್ತಿದ್ದ ಕಾಲೇಜಿನಲ್ಲಿ ಒಬ್ಬರು ಕೆಮೆಸ್ಟ್ರೀ ಪ್ರೊಫೆಸರರು ಪ್ರಾಂಶುಪಾಲರಾದರು. ಅವರಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು. ಮಗ ಅಷ್ಟು ಜಾಣನಾಗಿರಲಿಲ್ಲ. ಇಂದಿನ ಸ್ಪರ್ಧಾತ್ಮಕ ಜಗದಲ್ಲಿ ಅವನ ಭವಿಷ್ಯದ ಬಗ್ಗೆ ತಾಯಿಗೆ ಚಿಂತೆಯಾಯಿತು. ಅದರಿಂದ ಅವಳಿಗೆ ವಿಚಿತ್ರ ಕಾಯಿಲೆ ಉಂಟಾಯಿತು. ಊಟ ದಕ್ಕುತ್ತಿರಲಿಲ್ಲ, ನಿದ್ರೆಬರುತ್ತಿರಲಿಲ್ಲ. ಸೊರಗತೊಡಗಿದಳು. ಬಾಂಬೇ ಹಾಸ್ಪಿಟಲ್‌ನಲ್ಲಿ ವಿಶ್ವವಿಖ್ಯಾತ ಡಾಕ್ಟರರಿಗೆ ತೋರಿಸಿದರು. ಅಲ್ಲಿ ಎಲ್ಲ ಬಗೆಯ ಅತ್ಯಾಧುನಿಕ ಟೆಸ್ಟ್‌ಗಳಾದವು. ಎಲ್ಲ ರಿಪೋರ್ಟು ನಾರ್ಮಲ್ ಎಂದೇ ಕಂಡು ಬಂತು. ನಲವತ್ತು ಸಾವಿರ ರೂಪಾಯಿ ನೀರುಪಾಲಾಯಿತು. ಗುಜರಾತದಿಂದ ಒಬ್ಬ ಸ್ವಾಮಿಗಳು ಅವರ ಮನೆಗೆ ಬಂದಿದ್ದರು. ಇವಳ ಸ್ಥಿತಿ ಕಂಡು ಜಪಿಸಲು ಒಂದು ಮಂತ್ರ ಬರೆದುಕೊಟ್ಟರು. ಅವಳ ಕಾಯಿಲೆ ಪೂರ್ತಿ ವಾಸಿಯಾಯಿತು. ಇದು ಅಂಧಶ್ರದ್ಧೆ ಎಂದು ಕೆಲವು ವಿಜ್ಞಾನಿಗಳು ಲೇವಡಿ ಮಾಡಿದರು. ಆದರೆ ಪೂರ್ತಿ ಗುಣವಾಯಿತಲ್ಲ, ಸಾಕು. ಅದೇ ಅಪೇಕ್ಷಿತ, ಉಳಿದ ಜೊಳ್ಳು ಮಾತು ಉಪೇಕ್ಷಿತ.

ಪರ್ಯಾಯ ಔಷಧಿಗಳಲ್ಲಿ ಹೋಮಿಯೋಪಥಿ ಒಂದು. ಇದನ್ನು ಚೇಷ್ಟೆ ಮಾಡುವ ಹಿರಿಯ ಅಲೋಪಥಿ ಡಾಕ್ಟರರನ್ನು ನೋಡಿದ್ದೇನೆ. ಮಂಬೈಯಲ್ಲೆ ಹಲವಾರು ಎಂ.ಡಿ.ಪದವೀಧರ ಡಾಕ್ಟರರು ತಮ್ಮ ಅಲೋಪಥಿ ಮಾರ್ಗಕ್ಕೆ ತಿಲಾಂಜಲಿ ಕೊಟ್ಟು ಹೋಮಿಯೋಪಥಿ ಅಭ್ಯಸಿಸಿ ಅದ್ಭುತ ಸಾಧನೆಯನ್ನು ತೋರಿಸಿದ್ದಾರೆ. ಅವರನ್ನು ಕಾಣಬೇಕಾದರೆ ಒಂದು ತಿಂಗಳು ಕಾಯಬೇಕು. ನೂರರಿಂದ ಸಾವಿರ ರೂಪಾಯಿಗಳ ವರೆಗೆ ಅವರ ಫೀ ಇದೆ. ನಾನು ವಾಸಿಸುವ ಮುಂಬೈ ಉಪನಗರದಲ್ಲಿ ಒಬ್ಬ ಕನ್ನಡಿಗರು ಹತ್ತೇ ರೂಪಾಯಿ ಚಾರ್ಜ ಮಾಡಿ ಹೋಮಿಯೋಪಥಿ ಔಷಧಿ ಕೊಡುತ್ತಾರೆ. ದಿನಕ್ಕೆ ಕನಿಷ್ಠ ನೂರು ಜನ ಅವರನ್ನು ಕಾಣಲು ಬರುತ್ತಾರೆ.

ನನ್ನ ಸಂಪರ್ಕಕ್ಕೆ ಬಂದ ಒಬ್ಬ ಜೋತಿಷಿ-ಕಂ-ಹೋಮಿಯೋಪಥಿ ಡಾಕ್ಟರರ ಅಪೂರ್ವಸಾಧನೆಯನ್ನು ನಾನು ಕಣ್ಣಾರೆ ಕಂಡಿದ್ದೇನೆ, ಅನುಭವಿಸಿದ್ದೇನೆ. ಅವರ ಬಗ್ಗೆ ಬರೆಯುವ ಮೊದಲು ಹೋಮಿಯೋಪಥಿಯ ಬಗ್ಗೆ ಕೆಲವು ಅಂಶಗಳನ್ನು ವಿವರಿಸುವೆ.

ಪ್ರತಿಯೊಬ್ಬ ಮನುಷ್ಯನಲ್ಲಿ ಆಂತರಿಕವಾದ ಜೀವಚೈತನ್ಯಶಕ್ತಿ(Vital Force) ಇದೆ. ಅದು ಸ್ವಂತಗುಣಪಡಿಸುವ (Self Healing) ಶಕ್ತಿಯನ್ನು ಪಡೆದಿದೆ. ಈ ಶಕ್ತಿ ಅಸಂತುಲಿತವಾದಾಗ ರೋಗಗಳ ಬಾಧೆಯಾಗುತ್ತದೆ. ಈ ಶಕ್ತಿಯನ್ನು ಉದ್ದೀಪನಗೊಳಿಸುವುದೇ ಹೋಮಿಯೋಪಥಿಯ ಕೆಲಸವಾಗಿದೆ. ಒಂದು ಮದ್ದನ್ನು ದೊಡ್ದಪ್ರಮಾಣದಲ್ಲಿ ಕೊಟ್ಟರೆ ಒಂದು ರೋಗ ಸಂಭವಿಸುವುದು. ಅದೇ ಮದ್ದನ್ನು ಚಿಕ್ಕ ಪ್ರಮಾಣದಲ್ಲಿ ಕೊಟ್ಟರೆ ರೋಗ ನಿವಾರಣೆಯಾಗುವುದು. ಇದೇ ಇದರ ವೈಶಿಷ್ಟ್ಯವಾಗಿದೆ. ಇದು ಮುಳ್ಳಿನಿಂದ ಮುಳ್ಳು ತೆಗೆಯುವಂತಹ ವಿಧಾನ.

'ಹೋಮಿಯೋಪಥಿ"(Homeopathy) ಶಬ್ದದಲ್ಲಿ ಎರಡು ಗ್ರೀಕ್ ಶಬ್ದಗಳು ಬೆರೆತಿವೆ. 'ಹೋಮಿಯೋ" (ಅದೇ ರೀತಿಯದು), 'ಪಥಿ"(ವೇದನೆ ಅಥವ ಕಾಯಿಲೆ). 'ಅದೇ ರೀತಿಯದು ಅದೇ ರೀತಿಯದನ್ನು ಗುಣಪಡಿಸುತ್ತದೆ." ಎಂಬ ತತ್ತ್ವ ಇದರ ಮೂಲಾಧಾರವಾಗಿದೆ. ಪರಂಪರಾಗತವಾದ ಔಷಧಪದ್ಧತಿಗೆ ತದ್ವಿರುದ್ಧವಾದ ಮಾರ್ಗವನ್ನು ಇದು ಅನುಸರಿಸುತ್ತದೆ. ಪ್ರತಿಯೊಬ್ಬನಿಗೂ ಪ್ರತ್ಯೇಕವಾದ ಔಷಧಿ ಕೊಡಲಾಗುತ್ತದೆ. ಪ್ರತಿ ರೋಗಿಯ ಮಾನಸಿಕ, ದೈಹಿಕ, ಅಧ್ಯಾತ್ಮಿಕ ಹಿನ್ನೆಲೆಯನ್ನು ಆಳವಾಗಿ ಅಭ್ಯಾಸಮಾಡಿ ಔಷಧಿ ಕೊಡಲಾಗುತ್ತದೆ.

ಹೋಮಿಯೋಪಥಿಯ ಜನಕ ಸ್ಯಾಮ್ಯುವೆಲ್ ಹನ್ನಿಮನ್(1755,1843) ಜರ್ಮನಿಯವ. 1779ರಲ್ಲಿ ಮೆಡಿಕಲ್ ಡಿಗ್ರಿ ಪಡೆದ. ತಾನು ನಡೆಸುವ ಚಿಕಿತ್ಸೆಯಲ್ಲಿ ಇವನು ಅಸಂತುಷ್ಟನಾದ. ತನ್ನ ಕೆಲಸ ನಿಲ್ಲಿಸಿ ಕೆಲಕಾಲ ಕೆಮಿಸ್ಟನಾಗಿ ಕೆಲಸ ಮಾಡಿದ, ವಿಲಿಯಮ್ ಕಲೆನ್ಸ್‌ರ 'ಮೆಟರಿಯಾ ಮೆಡಿಕಾ" ಜರ್ಮನ್ ಭಾಷೆಗೆ ತರ್ಜುಮೆ ಮಾಡಿದ. ಆಗ ಮಲೇರಿಯಾ ಜ್ವರವನ್ನು ಗುಣಪಡಿಸಲು ದಕ್ಷಿಣ ಅಮೇರಿಕೆಯ 'ಸಿಂಚೋನಾ" ಎಂಬ ಗಿಡದ ತೊಗಟೆಯನ್ನು ಬಳಸುತ್ತಿದ್ದರು. ಆ ತೊಗಟೆಯ ರಸವನ್ನು ಚುಚ್ಚಿದಾಗ ಅದೇ ರೋಗ ಲಕ್ಷಣಗಳು ಕಂಡುಬಂದವು. 'ಸಿಮಿಲಿಯ ಸಿಮಿಲಿಬಸ್ ಕ್ಯುರೆಂಟರ್" ಎಂಬ ಲ್ಯಾಟಿನ್ ಉಕ್ತಿ (ಸಮಾನಗುಣವುಳ್ಳದ್ದು ಸಮಾನಗುಣವುಳ್ಳದ್ದನ್ನು ಗುಣಪಡಿಸುತ್ತದೆ) ಹೋಮಿಯೋಪಥಿ ಚಿಕಿತ್ಸೆಯ ಬೀಜಮಂತ್ರವಾಯಿ. ಇದನ್ನೇ ವೈದ್ಯಶಾಸ್ತ್ರದ ಜನಕನೆಂಬ ಖ್ಯಾತಿಯ ಗ್ರೀಕ ವೈದ್ಯ ಹಿಪ್ಪೊಕ್ರೇಟಸ್ (Hippocrates, 460-378 B.C) ಪ್ರತಿಪಾದಿಸಿದ್ದ.

ಹನ್ಸ್ ಬರ್ಚ್ ಗ್ರ್ಯಾಮ್ ಎಂಬ ಬೋಸ್ಟನ್ ಮೂಲದ ಡಾಕ್ಟರ್ 1825ರಲ್ಲಿ ಹೋಮಿಯೋಪಥಿಯನ್ನು ಅಮೇರಿಕೆಗೆ ಪರಿಚಯಿಸಿದ. 1835ರಲ್ಲಿ ಪೆನ್ಸಿಲ್ವೇನಿಯಾ ರಾಜ್ಯದ ಎಲೆನ್‌ಟೌನ್ ಎಂಬಲ್ಲಿ ಪ್ರಥಮ ಹೋಮಿಯೋಪಥಿ ಕಾಲೇಜು ಪ್ರಾರಂಭವಾಯ್ತು. 20ನೆಯ ಶತಮಾನದ ಕೊನೆಗೆ ಅಮೇರಿಕೆಯಲ್ಲಿ 800ಜನ ಡಾಕ್ಟರರು ಹೋಮಿಯೋಪಥಿಗೆ ಶರಣಾದರು. 20ಕಾಲೇಜುಗಳು ಆವಿಷ್ಕರಿಸಿದವು. 100ಆಸ್ಪತ್ರೆಗಳನ್ನು ತೆರೆಯಲಾಯಿತು.

1960ರಲ್ಲಿ ಮತ್ತೊಮ್ಮೆ ಹೋಮಿಯೋಪಥಿಗೆ ಹೆಚ್ಚಿನ ಪ್ರಚಾರ ದೊರೆಯಿತು. 1999ರ ಸರ್ವೆಯ ಪ್ರಕಾರ 12ದಶಲಕ್ಷ ಅಮೇರಿಕನ್ನರು ಹೋಮಿಯೋಪಥಿಯ ಚಿಕಿತ್ಸೆ ಪಡೆದರು. ಇಂದು ಜಗತ್ತಿನಲ್ಲಿ ಹೆಚ್ಚು ಹೋಮಿಯೋಪಥಿ ಪ್ರಚಾರದಲ್ಲಿರುವ ದೇಶಗಳೆಂದರೆ ರಶಿಯಾ, ಭಾರತ, ಸ್ವಿಜರ್ಲಂಡ, ಮೆಕ್ಸಿಕೊ, ಜರ್ಮನಿ, ನೆದರ್‌ಲ್ಯಾಂಡ್, ಇಟಲಿ, ಇಂಗ್ಲಂಡ್, ಪಾಕಿಸ್ತಾನ, ಶ್ರೀಲಂಕಾ ಮತ್ತು ದಕ್ಷಿಣ ಅಮೇರಿಕಾ.

1976ರಲ್ಲಿ ನಡೆದ ಘಟನೆ ಇದು. ನನ್ನ ಮಗಳು ವೀಣಾಗೆ ಆಗ 8ವರ್ಷ. ಅವಳು ಆಡುವಾಗ ಬಿದ್ದ ನಿಮಿತ್ತದಿಂದ ತಲೆಯಲ್ಲಿ ಕಚ್ಚಾಗಿತ್ತು. ವೈರಲ್ ಇನ್‌ಫೆಕ್ಶೆನ್‌ದಿಂದಾಗಿ ಅಲ್ಲಿ ಕೂದಲು ಅದೃಶ್ಯವಾಗತೊಡಗಿದ್ದವು. ಪ್ರಾರಂಭದಲ್ಲಿ ಎಂಟಾಣೆಯಷ್ಟು ಜಾಗೆ ಬೋಳಾಗಿತ್ತು. ನಂತರ ಅದು ರೂಪಾಯಿಯಷ್ಟು ಅಗಲವಾಗಿ ಬೆಳೆಯಿತು. ಇದು ಹೀಗೆಯೇ ಮುಂದುವರಿದರೆ ಇಡೀ ತಲೆಯ ಕೂದಲು ಹೋಗುವ ಸಂಭವವಿತ್ತು. ನಾವು ಎಲ್ಲ ಪ್ರಯತ್ನ ಮಾಡಿದೆವು.

ಪರೇಲ್‌ನಲ್ಲಿರುವ ಕೆ.ಇ.ಎಮ್. ಆಸ್ಪತ್ರೆಯ ಡೀನ್ ಡಾ. ದೇಶಪಾಂಡೆ ಕನ್ನಡಿಗರಾಗಿದ್ದರು. ಅವರ ಸ್ನೇಹವಿತ್ತು. ಅವರನ್ನು ಕಂಡೆವು. ಅವರು ಈ ಕೇಸಿನಲ್ಲಿ ಆಸಕ್ತಿ ವಹಿಸಿದ್ದರಿಂದ ಸರಕಾರಿ ಆಸ್ಪತ್ರೆಯ 'ರೆಡ್‌ಟೇಪ್"ನ ತೊಂದರೆ ನಮಗಾಗಲಿಲ್ಲ. ನನ್ನ ಮಗಳಿಗೆ ಶನಿವಾರ ಮತ್ತು ರವಿವಾರ ಶಾಲೆ ಇರಲಿಲ್ಲ. ವಾರದಲ್ಲಿ ಒಂದು ದಿನ ನಮಗೆ ಆಸ್ಪತ್ರೆಗೆ ವಿಶೇಷ ಚಿಕಿತ್ಸೆಗಾಗಿ ಹೋಗಬೇಕಾಗುತ್ತಿತ್ತು. (ಶನಿವಾರ ಆಸ್ಪತ್ರೆಯಲ್ಲಿ ಟ್ರೀಟ್‌ಮೆಂಟ್ ವ್ಯವಸ್ಥೆ ಇರಲಿಲ್ಲ. ನಮ್ಮ ಅನುಕೂಲತೆಗಾಗಿ ಅಂದು ವಿಶೇಷ ವ್ಯವಸ್ಥೆಯನ್ನು ಡಾ. ದೇಶಪಾಂಡೆ ಮಾಡಿದ್ದರು.) ನಮ್ಮದು ಮುಂಜಾನೆಯ ಕಾಲೇಜು. ಆಸ್ಪತ್ರೆಯಲ್ಲಿ ಮುಂಜಾನೆ 9ಕ್ಕೆ ಇರಬೇಕು. ಹೀಗಾಗಿ ಪ್ರತಿ ಶನಿವಾರ ನಾನು ರಜೆ ಪಡೆಯುವುದು ಅನಿವಾರ್ಯವಾಗಿತ್ತು. ಮೂರು ವಾರ ಕಳೆದವು.

ಪ್ರತಿವಾರ ನನ್ನ ಮಗಳ ತಲೆಯಲ್ಲಿ ಇಂಜೆಕ್ಶೆನ್ ಕೊಡಲಾಗುತ್ತಿತ್ತು. ನಮಗೆ ಚಿಕಿತ್ಸೆ ಮಾಡಿದ ಡಾಕ್ಟರ್ ಏಶಿಯದಲ್ಲೆ ಶ್ರೇಷ್ಠ ಡರ್ಮಿಟಾಲಜಿಸ್ಟ್ (ಚರ್ಮರೋಗತಜ್ಞ) ಎಂಬ ಹೆಸರು ಗಳಿಸಿದ್ದರು. “ಕೂದಲು ಹೋದ ಜಾಗೆಯಲ್ಲಿ ಮತ್ತೆ ಕೂದಲು ಬೆಳೆಯಬಹುದೇ?" ಎಂದು ನಾನು ಡಾಕ್ಟರರನ್ನು ಕೇಳಿದೆ. ಅವರು ಉತ್ತರಿಸುತ್ತ, “ಅದು ಸಾಧ್ಯವಿಲ್ಲ. ಇನ್ನು ಮುಂದೆ ಕೂದಲು ಉದುರದಂತೆ, ವಾಯ್‌ರಸ್‌ನಿಂದ ರಕ್ಷಣೆ ಒದಗಿಸಲು ಇಂಜೆಕ್ಶೆನ್ ಕೊಡಲಾಗುತ್ತದೆ." ಎಂದರು.

ಬೊರಿವಿಲಿಯಿಂದ ಎಲ್ಫಿನ್‌ಸ್ಟನ್‌ರೋಡ್ ಸ್ಟೇಶನ್‌ಗೆ ಮುಂಜಾನೆಯ ಗದ್ದಲದಲ್ಲಿ ಪ್ರವಾಸ ಮಾಡುವುದು, ಅಲ್ಲಿಂದ ಟ್ಯಾಕ್ಸಿಯಲ್ಲಿ ದವಾಖನೆ ಹೋಗುವದು. ಅಲ್ಲಿ ಎರಡು ಮೂರು ತಾಸು ಕಳೆಯುವುದು, ಇದೆಲ್ಲ ಘೋರ ಕೆಲಸವಾಗಿತ್ತು. ಕಾಲೇಜಿನಲ್ಲಿ ಒಂದು ಸಮಸ್ಯೆ ಇತ್ತು. ನನಗೆ ಕನ್ನಡ ವಿಭಾಗದಲ್ಲಿ ಕಡಿಮೆ ಕೆಲಸವಿತ್ತು. ನಾನು ಅದೇ ವರ್ಷ ಇಂಗ್ಲಿಷ್ ವಿಷಯ ಆಯ್ದು ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಡಿಗ್ರಿ ಪಡೆದಿದ್ದೆ. ಕನ್ನಡ ವಿಷಯ ಕಲಿಸಲು ನನಗೆ 10ಪೀರಿಯಡ್ ಮಾತ್ರ ಇದ್ದವು. ಇನ್ನು ಎಂಟು ಪೀರಿಯಡ್ ಇಂಗ್ಲಿಷ್ ಕಲಿಸಬೇಕಾಗುತ್ತಿತ್ತು.

ನಾನು ರಜೆ ಮಾಡಿದಾಗ ನನ್ನ ಕ್ಲಾಸಿನ ವಿದ್ಯಾರ್ಥಿಗಳು, ಅದೇ ತರಗತಿಯ ಅದೇ ವಿಷಯದ ಬೋಧನೆ ನಡೆದ ಬದಿಯ ಕ್ಲಾಸಿನಲ್ಲಿ ಹೋಗಿ ಕುಳಿತುಕೊಳ್ಳುತ್ತಿದ್ದರು. ನನ್ನ ಸಹ-ಅಧ್ಯಾಪಕಿ ಮಿಸೆಸ್ ಪಾಟಣಕರ್ ಎಂಬವರಿಗೆ 200ವಿದ್ಯಾರ್ಥಿಗಳನ್ನು ಎದುರಿಸುವುದು ಕಷ್ಟಕರವಾಗಿತ್ತು. ನಾನು ಪ್ರತಿ ಶನಿವಾರ ಯಾಕೆ ರಜೆಯಲ್ಲಿರುತ್ತೇನೆ ಎಂಬ ಕುತೂಹಲ ಅವರಿಗೆ. ನಾನು ವಿಷಯ ತಿಳಿಸಿದಾಗ ಅವರೆಂದರು, “ನೀವು ಅಲೋಪಥಿಗೆ ಕೈ ಮುಗಿಯಿರಿ, ಹೋಮಿಯೋಪಥಿ ಶುರುಮಾಡಿರಿ. ಕೂದಲು ಮತ್ತೆ ಬರುತ್ತವೆ." ಎಂದರು. ನಮ್ಮ ಕಾಲೇಜಿನ ಬಳಿಯಲ್ಲಿರುವ ಒಬ್ಬ ಹೋಮಿಯೋಪಥಿ ಡಾಕ್ಟರರ 'ಕೈಗುಣದ" ವರ್ಣನೆ ಮಾಡಿದರು.

“ನನಗೆ ಅವರ ಪರಿಚಯ ಮಾಡಿಕೊಡಿರಿ" ಎಂದೆ. “ಅವರ ಮಗ ನಿಮ್ಮ ವಿದ್ಯಾರ್ಥಿಯಾಗಿದ್ದಾನೆ. ಈಗ ಕೊನೆಯ ಪೀರಿಯಡ್ ಇದೆಯಲ್ಲಿ. ನೀವು ಹೋಗುವ ಇಂಗ್ಲಿಷ್ ತಗತಿಯಲ್ಲಿ ಅವನಿದ್ದಾನೆ. ನೀವು 'ಶ್ರೀಧರ್ ರಹಾಳಕರ್ ಯಾರು?" ಎಂದು ಕೇಳಿರಿ. ಅವನು ಎದ್ದು ನಿಲ್ಲುತ್ತಾನೆ. ಕ್ಲಾಸು ಮುಗಿದಮೇಲೆ ಭೆಟ್ಟಿಯಾಗಲು ಹೇಳಿರಿ. ನಿಮ್ಮನ್ನು ಬಂದು ಕಾಣುತ್ತಾನೆ. ನಿಮ್ಮ ತಂದೆಯನ್ನು ಕಾಣಬೇಕು ಎಂದು ಹೇಳಿರಿ. ಮನೆಗೆ ಕರೆದುಕೊಂಡು ಹೋಗುತ್ತಾನೆ. ನಿಮ್ಮ ಮಗಳ ಸಮಸ್ಯೆಯ ಬಗ್ಗೆ ಹೇಳಿರಿ. ಅವರು ಔಷಧಿ ಕೊಡುತ್ತಾರೆ. ನಿಮ್ಮ ಶನಿವಾರ ರಜೆ ಸಂಕಷ್ಟದಿಂದ ಮುಕ್ತರಾಗಿರಿ. ಸೋ ಸಿಂಪಲ್." ಎಂದು ಮಾತು ಮುಗಿಸಿದರು.

ಅವರು ಹೇಳಿದಂತೆ ನಾನು ಡಾ. ರಹಾಳಕರ್‌ರನ್ನು ಕಂಡೆ. ಒಂದು ಸಣ್ಣ ಬಾಟಲಿಯಲ್ಲಿ ಬಿಳಿಯ ಸಕ್ಕರೆ ಗುಳಿಗೆ ಕೊಟ್ಟರು. “ನಿಮಗೆ ತೋರಿಸಲು ನನ್ನ ಮಗಳನ್ನು ಕರೆದುಕೊಂಡು ಬರಬೇಕೇ?" ಎಂದೆ. “ಕಾರಣವಿಲ್ಲ" ಎಂದರು. “ ಒಬ್ಬ ನನ್ನೆಡೆ ಬಂದಿದ್ದ. ಸಲೂನಿನಲ್ಲಿ ಅವನಿಗೆ ವೈರಸ್ ಇನ್‌ಫೆಕ್ಷೆನ್ ಆಗಿ ಕೂದಲು ಉದುರತೊಡಗಿತ್ತು. ತಲೆ ಪೂರ್ಣ ಬೋಳಾಗಿತ್ತು ಕೇರಂಬೋರ್ಡಿನಂತೆ. ಒಂದು ತಿಂಗಳಲ್ಲಿ ತೋಟದಲ್ಲಿ ಹುಲ್ಲು ಬೆಳೆದಂತೆ ಕೂದಲು ಬೆಳೆದವು." ಎನ್ನುತ್ತ ನಕ್ಕರು.

“ಈ ಔಷಧಿಗೆ ನಾನು ಎಷ್ಟು ಹಣ ಕೊಡಲಿ?" ಎಂದು ಕೇಳಿದೆ. “ನೀವು ನನ್ನ ಮಗ ಶ್ರೀಧರನ ಗುರುಗಳು. ನಿಮ್ಮಿಂದ ನಾನು ಹಣ ಸ್ವೀಕರಿಸುವುದಿಲ್ಲ". ನಾಲ್ಕು ಗುಳಿಗೆ ದಿನದಲ್ಲಿ ಮೂರು ಸಲ ಕೊಡಲು ಹೇಳಿದರು. ಬೋಳಾದ ತಲೆಯ ಭಾಗದಲ್ಲಿ ಬಿಳಿಯ ದಾಸವಾಳ ಹೂವಿನ ರಸ ಹಚ್ಚಲು ಹೇಳಿದರು. ಹತ್ತನೆಯ ದಿನ ನನ್ನ ಮಗಳ ತಲೆಯ ಮೇಲಿನ ಬೋಳಾದ ಭಾಗದಲ್ಲಿ ಕಪ್ಪು ಚುಕ್ಕೆಗಳು ಕಾಣತೊಡಗಿದವು. ಹದಿನೈದನೆಯ ದಿನ ಕೂದಲ ಮೊಳಿಕೆ ಕಂಡೆ. 'ಯುರೇಕಾ" ಎನ್ನುತ್ತ ಕುಣಿದಾಡಿದ ವಿಜ್ಞಾನಿಯ ಆನಂದ ನನ್ನದಾಗಿತ್ತು! (ಸಂಪರ್ಕ ಸಂಖ್ಯೆ : 9324242172)

ಕೂದಲುದುರುವಿಕೆ ಬಗ್ಗೆ ಟಿಪ್ಪಣಿ : ಒಂದು ಭಾಗ ಬಿಳಿದಾಸವಾಳ ಹೂವಿನ ರಸವನ್ನು, ಒಂದು ಭಾಗ ಎಳ್ಳೆಣ್ಣೆ ಇಲ್ಲವೆ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಕಾಯಿಸಿ ತೈಲ ತಯಾರಿಸಿಕೊಂಡು, ಪ್ರತಿದಿನ ತಲೆಕೂದಲಿಗೆ ಹಚ್ಚಿಕೊಳ್ಳುತ್ತಿದ್ದರೆ ಕೂದಲುದುರುವುದು ನಿಲ್ಲುವುದಲ್ಲದೇ ಕೂದಲು ಆರೋಗ್ಯಕರವಾಗಿ ಕಾಂತಿಯುಕ್ತವಾಗಿರುತ್ತದೆ. ವಾರಕ್ಕೊಮ್ಮೆ ಇಲ್ಲವೇ ಎರಡು ಬಾರಿ ದಾಸವಾಳದ ಹೂ ಅಥವಾ ಎಲೆಯನ್ನು ಜಜ್ಜಿ ಆ ರಸವನ್ನು ಕೂದಲಿನ ಬುಡಕ್ಕೆ ಹಚ್ಚಿ ಅರ್ಧಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ಕೂದಲುದುರುವುದು ನಿಂತು ಕೂದಲು ಸೊಂಪಾಗಿ ಬೆಳೆಯುತ್ತದೆ. ಬಿಳಿದಾಸವಾಳ ಸಿಗದಿರುವಾಗ ಕೆಂಪುದಾಸವಾಳವನ್ನೂ ಬಳಸಬಹುದು." ("ಮನೆಯಂಗಳದಲ್ಲಿ ಔಷಧಿವನ", ಡಾ.ವಸುಂಧರಾ, ನವಕರ್ನಾಟಕ, ಪುಟ 72)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X