ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಮಗನಿಗೆ ದರ್ಶನ ಕೊಟ್ಟರು ಶ್ರೀ ಗುರುರಾಯರು!

By Super
|
Google Oneindia Kannada News

ನಲವತ್ತು ಬೆಡ್‌ಗಳು ಇದ್ದ ದೊಡ್ಡ ಕೋಣೆ. ಹೊಲಸು ಗಬ್ಬು ವಾಸನೆಯಿಂದ ತುಂಬಿತ್ತು. ಹಾಸಿಗೆಯ ಮೇಲೆ ನಮ್ಮ ಬೆಡ್‌ಶೀಟ್ ಹಾಕಿ ಮಲಗಿಸಿದೆವು. ತಗಣಿಗಳ ಸೈನ್ಯವೇ ಅಲ್ಲಿತ್ತು. ಅಷ್ಟು ತಗಣಿಗಳ ಪಡೆಯನ್ನು ನಾನೆಂದೂ ಎಲ್ಲಿಯೂ ಕಂಡಿರಲಿಲ್ಲ. ಮಗು ಒದ್ದಡಾತೊಡಗಿತು. ನನಗೊಂದು ಐಡಿಯಾ ತೋಚಿತು. ಕೆಳಗೆ ನೆಲದ ಮೇಲೆ ಚಾದರ ಹಾಸಿ ಮಗುವನ್ನು ಮಲಗಿಸಿದೆವು. ಸುತ್ತಲೂ ನೀರು ಸುರಿದೆವು. ತಗಣೆ ದಾಟಿಬರಲಿಲ್ಲ. ಮಗುವಿನ ಜೊತೆ ನಾನು ಮಲಗಿದೆ, ಕಾಳೆ ನೀರು ಸುರಿಯುತ್ತಿದ್ದರು. ಅವರು ಮಲಗಿದಾಗ ನಾನು ನೀರು ಸುರಿಯುತ್ತಿದ್ದೆ. ಬೆಳಗಾಯಿತು.

ಡಾಕ್ಟರರು ಮನೆಯಲ್ಲಿದ್ದರೆಂದು ತಿಳಿಯಿತು. ಅವರು ಹತ್ತು ಗಂಟೆಗೆ ಆಫೀಸಿಗೆ ಬಂದು ನಂತರ ಪೇಶಂಟ್ ನೋಡುತ್ತಾರೆ ಎಂದು ಅಲ್ಲಿಯ ನರ್ಸ್ ತಿಳಿಸಿದರು. ನಾನು ಮುಂಜಾನೆ ಅವರ ಮನೆಗೆ ಹೋದೆ. “ಎಮರ್ಜನ್ಸಿ ಕೇಸಿ ಇದ್ದಾಗಲೂ ನೀವು ಹೀಗೆ ಹತ್ತು ಗಂಟೆಗೆ ಬರುವುದೆಂದರೇನು?" ಎಂದು ಅರಚಿದೆ. ಆಗಿದ್ದ ಸ್ಥಿತಿಯನ್ನು ಅರುಹಿದೆ. ಅವರಿಗೆ ಕರುಣೆ ಬಂತು. ಕೂಡಲೇ ಬಂದರು. ಪರೀಕ್ಷಿಸಿದರು. ಒಂದು ತಿಂಗಳು ಇಲ್ಲಿರಬೇಕು ಅಂದರು. ನನಗೆ ಸಾಧ್ಯವಿಲ್ಲ ಎಂದೆ. “ಜೀವಕ್ಕೆ ಅಪಾಯ" ಅಂದರು. “ಮುಂಬೈವರೆಗೆ ಅವನನ್ನು ಸುರಕ್ಷಿತವಾಗಿ ಕಳಿಸುವ ವ್ಯವಸ್ಥೆ ಮಾಡಿರಿ, ಅಲ್ಲಿ ಮುಂದಿನದನ್ನು ನಾನು ನೋಡುತ್ತೇನೆ" ಅಂದೆ. “ಮೈತುಂಬೆಲ್ಲ ದೊಡ್ಡಗಾತ್ರದ ನೀರು ತುಂಬಿದ ಗುಳ್ಳೆಗಳನ್ನು ಒಡೆದು ಬ್ಯಾಂಡೇಜ್ ಮಾಡಿ ಕಳಿಸಿಬಹುದು. ಆದರೆ ಇದು ಹೀಲ್ ಆಗಲು ಐದು ತಿಂಗಳು ಬೇಕಾದೀತು. ಸ್ಕಿನ್ ಸುಟ್ಟಿದೆ. ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾದೀತು" ಎಂದರು. ನಂತರ ಇಡೀ ದೇಹ ಬ್ಯಾಂಡೇಜ್ ಮಾಡಿದರು.

The Miracles of Sri Raghavendra Swami(Part-2)

ನಾನು ಸ್ಟೇಶನ್ನಿಗೆ ಹೋಗಿ ಸಂಜೆಯ ಟ್ರೇನ್‌ಗೆ ಸೆಕೆಂಡ್ ಕ್ಲಾಸಿನಲ್ಲಿ ಸೀಟು ಬುಕ್ ಮಾಡಿದೆ. ಅಲ್ಲಿಂದ ಪೋಸ್ಟ್ ಆಫೀಸಿಗೆ ಹೋಗಿ ನಮ್ಮ ಫ್ಯಾಮಿಲಿ ಡಾಕ್ಟರರಿಗೆ ಒಂದು ಟೆಲಿಗ್ರಾಂ ಕೊಟ್ಟೆ. “ರಾಜು ಗಾಟ್ ಬರ್ನ ಇಂಜರೀಜ್. ರೀಚಿಂಗ ಬಾಂಬೇ ಬ್ಯಾ ಟ್ಯೂಸ್‌ಡೇ 1.30 ಪಿ.ಎಮ್." ಸಂಜೆಯ ವರೆಗೆ ನರಕ ಯಾತನೆ ಅನುಭವಿಸಿ ಸಂಜೆ 8ರ ಟ್ರೇನ್ ಹಿಡಿದೆವು.

ಮಗುವಿನ ಸ್ಥಿತಿ ನೋಡಿ ಸಹಪ್ರವಾಸಿಗರು ಮಗುವಿಗೆ ಮಲಗಲು ಅನುಕೂಲ ಮಾಡಿಕೊಟ್ಟರು. ಮುಂಬೈ ತಲುಪಿದಾಗ ಮಧ್ಯಾಹ್ನ 2.30ಆಗಿತ್ತು. ಟ್ಯಾಕ್ಸಿಯವ ಬಹಳ ವೇಗದಿಂದ ಬಂದ. 1.15ಕ್ಕೆ ಬೊರಿವಲಿ ತಲುಪಿದ್ದ. ನಮ್ಮ ಫ್ಯಾಮಿಲಿ ಡಾಕ್ಟರ್ (ಡಾ. ಮೋಹನ್ ಹಿಂದಳೇಕರ್) ಸಾಮಾನ್ಯವಾಗಿ 2.30ಕ್ಕೆ ಮನೆಗೆ ಹೋಗುತ್ತಿದ್ದರು. ನನಗಾಗಿ ಕಾಯುತ್ತ ಕುಳಿತಿದ್ದರು.

ಮಗುವಿನ ಬ್ಯಾಂಡೇಜ್ ಕತ್ತರಿಯಿಂದ ತುಂಡರಿಸಿ ತೆಗೆದರು. ರಕ್ತ ಸಿಡಿಯಲು ಪ್ರಾರಂಭಿಸಿತು. ಮಗು ರಕ್ತ ನೋಡಿ ಗಾಬರಿಗೊಂಡ. ಬೆನ್ನು, ಪೃಷ್ಠ, ಕಾಲಿನ ವರೆಗೆ ಸುಟ್ಟಿತ್ತು. ಸುದೈವದಿಂದ ಮುಂಭಾಗಕ್ಕೆ ಏನೂ ಬಾಧೆಯಾಗಿರಲಿಲ್ಲ. ಮಗುವಿನ ಮೈಮೇಲೆ ಹತ್ತಾರು ಟ್ಯೂಬ್ ಮುಲಾಮು ಬಳಿದು, ಬಿಳಿ ವಸ್ತ್ರ ಹೊದಿಸಿ, ನಗ್ನಾವಸ್ಥೆಯಲ್ಲಿಯೇ ತಮ್ಮ ಕಾರಿನಲ್ಲಿ ಕರೆದುಕೊಂಡು ನಮ್ಮ ಮನೆಗೆ ತಂದು ಬಿಟ್ಟರು.

“ಗುಣವಾಗಲು 4ರಿಂದ 5 ತಿಂಗಳು ಬೇಕಾದೀತು. ಪ್ಲಾಸ್ಟಿಕ್ ಸರ್ಜರಿ ಮಾಡಿ ಸ್ಕಿನ್ ಗ್ರಾಫ್ಟ್ ಮಾಡಬೇಕಾದೀತು" ಎಂದರು ಡಾಕ್ಟರರು. ಒಂದು ವಾರ ಮಗುವಿನ ಸ್ಥಿತಿ ಚಿಂತಾಜನಕವೇ ಇತ್ತು. ರವಿವಾರ 15ರಂದು ಮಧ್ಯಾಹ್ನ ನೋವು ತಾಳದೇ ಮಗು ತಾಯಿಗೆ ಹೇಳಿದ. “ಏನವ್ವ, ನೀನು ಪೂಜ್ಯಾಯ ಮಂತ್ರ ಹೇಳು ಅನ್ನುತ್ತೀ, ರಾಯರು ಗುಣ ಮಾಡ್ತಾರೆ ಅಂತೀ. ಎಲ್ಲಿದ್ದಾರೆ ನಿಮ್ಮ ರಾಯರು? ನಿಮ್ಮ ರಾಯರಿಗೆ ಕರುಣಾ ಇಲ್ಲ." ಮಗನ ಮಾತು ಕೇಳಿ, 'ಇವನ ಆಯುಷ್ಯ ತುಂಬಿತೇ?" ಎಂದು ಗಾಬರಿಯಾಗಿ ತಾಯಿ ಅಳಲು ಪ್ರಾರಂಭಿಸಿದಳು. ನಾನೇ ಸಾಂತ್ವನ ಹೇಳಿದೆ. ನಂತರ ಮಗನು ಮಲಗಿದ.

ಅರ್ಧಗಂಟೆಯ ಮೇಲೆ ಹುಡುಗ ಎದ್ದ. “ಅಜ್ಜ, ಎಲ್ಲಿದ್ದಾರ?" ಎಂದು ಕೇಳಿದ. ನಮಗೆಲ್ಲ ಆಶ್ಚರ್ಯ. ನನ್ನ ತಂದೆ ಧಾರವಾಡದಲ್ಲಿದ್ದರು. ಅವರು ಈ ಸುದ್ದಿ ಕೇಳಿ ಮೂರ್ಛೆಹೋಗಿದ್ದರು. ಅವರೇ ಇವನ ಸ್ವಪ್ನದಲ್ಲಿ ಬಂದಿರಬೇಕೆಂದು ಭಾವಿಸಿ, “ಧಾರವಾಡ ಅಜ್ಜನೇನು?" ಎಂದು ಕೇಳಿದೆ. “ಇಲ್ಲ. ಮಂತ್ರಾಲಯದ ಅಜ್ಜ ಬಂದಿದ್ದರು. ಕಾಲಾಗ ಕಟ್ಟಿಗೆಯ ಚಪ್ಪಲ ಹಾಕಿದ್ದರು. (ಪಾದುಕೆ ಎಂಬ ಶಬ್ದ ಮಗುವಿನ ಪದಕೋಶದಲ್ಲಿ ಇರಲಿಲ್ಲ). ನನ್ನ ನೋಡಿ, 'ಹೇಗಿದ್ದೀ" ಅಂತ ಕೇಳಿದರು. 'ಮೈಯೆಲ್ಲ ಉರೀತದ. ನನ್ನನ್ನ ಅರಾಮ ಮಾಡರಿ." ಅಂದೆ. 'ಬೆನ್ನಮೇಲೆ ಕೈ ಇಟ್ಟರು. ಐಸ್-ಕ್ರೀಂ ಇಟ್ಟಹಾಗೆ ತಂಪಾಯಿತು." 'ನಿನ್ನ ಅರಾಮ ಮಾಡೋದು ನಮ್ಮ ಜವಾಬ್ದಾರಿ" ಅಂತ ಅಂದ್ರು.".

ತಾಯಿಗೆ ಆನಂದ ಬಾಷ್ಪ. ನೋವೆಲ್ಲ ಮಾಯವಾಗಿತ್ತು. ದೇವರ ಮನೆಯಲ್ಲಿ ಅವಳು ತುಪ್ಪದ ದೀಪ ಹಚ್ಚಿದಳು. ಎಂಟು ದಿನದಲ್ಲಿ ಹೊಸ ತ್ವಚೆ ಬಂತು. ಡಾಕ್ಟರರು 'ಇದು ಮೆಡಿಕಲ್ ಮಿರ್‍ಯಾಕಲ್" ಅಂದರು. ರಾಯರ ಮಹಿಮೆಯ ಬಗ್ಗೆ ಅವರಿಗೆ ಹೇಳಿದೆವು. “ಒಂದು ಫೋಟೋ ಕೊಡಿ ನಮ್ಮ ದೇವರ ಮನೆಯಲ್ಲಿ ಇಡುವೆ." ಅಂದರು.

ಅಗಸ್ಟ್ 8ಕ್ಕೆ ಮಗನಿಗೆ ಅಪಘಾತವಾಗಿತ್ತು. 15ಕ್ಕೆ ಅವನಿಗೆ ಸ್ವಪ್ನದಲ್ಲಿ ರಾಯರ ದರ್ಶನವಾಯಿತು. 19ಕ್ಕೆ ಶಾಲೆಗೆ ಹೋಗಲು ಪ್ರಾರಂಭಿಸಿದ. 26ಕ್ಕೆ ಯೂನಿಟ್ ಟೆಸ್ಟ್ ಇತ್ತು. ಎಲ್ಲ ವಿಷಯಗಳಲ್ಲು ಪ್ರಥಮಸ್ಥಾನ ಪಡೆದ. ಅನೇಕ ಮಿತ್ರರು ಈ ವಿಷಯ ಪತ್ರಿಕೆಯಲ್ಲಿ ಕೊಡೋಣ ಅಂದರು. ನಮ್ಮ ಶ್ರೀಮತಿಯವರಿಗೆ ಮನಸ್ಸಿರಲಿಲ್ಲ. (ಈಗಲೂ ಇಲ್ಲ.) ಪೇಜಾವರ ಶ್ರೀಗಳು ಬಾಲಕನನ್ನು ನೋಡಲು ನಮ್ಮ ಮನೆಗೆ ಬಂದಿದ್ದರು. ಬೆನ್ನ ಮೇಲೆ ಸುಟ್ಟ ಗಾಯದ ಕಲೆ ಎಳ್ಳಷ್ಟೂ ಇರಲಿಲ್ಲ. “ರಾಯರ ಮಹಿಮೆ ಅಗಾಧವಾದುದು!" ಎಂಬ ಉದ್ಗಾರ ತೆಗೆದಿದ್ದರು. ನಾವೇ ಅಂದೆವು, 'ಯಾವುದೋ ಕುತ್ತ ಇರಬೇಕು. ಮಂತ್ರಾಲಯಕ್ಕೆ ಕರೆಸಿಕೊಂಡು, ರಾಯರು ಪಾರುಮಾಡಿದರು" ಎಂದು.

ಶ್ರೀರಾಯರು ಮಗುವಿನ ಸ್ವಪ್ನದಲ್ಲಿ ಇನ್ನೊಮ್ಮೆ ಕಾಣಿಸಿದರು. ಅವನನ್ನು ಮಂತ್ರಾಲಯಕ್ಕೆ ಕರೆದುಕೊಂಡು ಹೋಗಿ 'ರಾಮದೇವರ ಪೂಜೆ ನೋಡು" ಎಂದು ತೋರಿಸಿದರಂತೆ. 'ರಾಮದೇವರ ಮೂರ್ತಿ ಹೇಗಿತ್ತು?" ಎಂದು ನಾವು ಕೇಳಿದರೆ, 'ಮೂರ್ತಿ ಇರಲಿಲ್ಲ, ದೇವರೇ ನಿಂತಿದ್ದರು" ಎಂದಿದ್ದ ಬಾಲಕ.

ಒಂದು ವರ್ಷದ ತರುವಾಯ ನಮ್ಮ ಹರಕೆ ನೆರವೇರಿಸಲು ಮಂತ್ರಾಲಯಕ್ಕೆ ಹೋಗಿ ಕನಕಾಭಿಷೇಕ ಮಾಡಿಸಿದೆವು. ಆಗಿನ ಕಾಲದ ಸಣ್ಣ ಪಗಾರಕ್ಕೆ ಅದೇ ದೊಡ್ದ ಸೇವೆಯಾಗಿತ್ತು. ರಾಯರ ವೃಂದಾವನದ ಎದುರು ಹುಡುಗ ಕುಳಿತಾಗ ಅವನು ಧ್ಯಾನಾಸಕ್ತನಾಗಿದ್ದ. ಅವನಿಗೆ ಕೇಳಿದಾಗ, “ರಾಯರು ವೃಂದಾವನದಲ್ಲಿ ಕುಳಿತು ನನ್ನೊಡನೆ ಮಾತಾಡಿದರು. 'ಹೇಗಿದ್ದೀ?"ಎಂದು ಕೇಳಿದರು." ಅಂದ.

ನನ್ನ ಮಗ ಈಗ ಅಮೇರಿಕೆಯಲ್ಲಿ ಸಾಫ್ಟವೇರ್ ಇಂಜಿನಿಯರನಾಗಿದ್ದಾನೆ. ಇವತ್ತಿಗೂ ಆದಿನಗಳನ್ನು ನೆನೆದರೆ ರೋಮಾಂಚನವಾಗುತ್ತದೆ. 'ದೇವರೆಂದರೆ ತಿರುಪತಿಯ ತಿಮ್ಮಪ್ಪ, ಗುರುಗಳೆಂದರೆ ಮಂಚಾಲಿಯ ರಾಘಪ್ಪ" ಎಂಬ ಉಕ್ತಿ ಕಿವಿಯಲ್ಲಿ ನಿನಾದಿಸುತ್ತದೆ.

ರಾಘವೇಂದ್ರರ ಇನ್ನಷ್ಟು ಪವಾಡಗಳು

English summary
Sri Raghavendra Swami Aradhana will be celebrated throughout the world by the end of August. Dr.G.V.Kulakarni writes on Sri Ragahvendra swami.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X