• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೇತ್ರವೈದ್ಯ ಡಾ.ಜೋಶಿಯ ಸರಳತೆ, ನೈಪುಣ್ಯತೆ, ವಿಶೇಷತೆ ಬಗ್ಗೆ...

By Staff
|

ಪ್ರಾರಂಭದ ದಶಕದಲ್ಲಿ ಒಂದು ದೊಡ್ಡ ಆಸ್ಪತ್ರೆಯ ಕಣ್ಣಿನ ವಿಭಾಗದಲ್ಲಿ ನಡೆಯುವ ಕೆಲಸ ಡಾ. ಜೋಶಿಯವರೊಬ್ಬರೆ ನಿಬಾಯಿಸುತ್ತಿದ್ದರಂತೆ. ಅವರು ದಿನಕ್ಕೆ ಹದಿನಾರು ತಾಸು ದುಡಿಯುತ್ತಿದ್ದರು. ಆ ಕಾಲದಲ್ಲಿ ಕರ್ನಾಟಕದಲ್ಲಿ ಹೊಸತೆನಿಸಿದ ನಾಲ್ಕು ಬಗೆಯ ಶಸ್ತ್ರಕ್ರಿಯೆಗಳನ್ನು ಅವರು ಅನುಷ್ಠಾನಕ್ಕೆ ತಂದಿದ್ದರು.

  • ಡಾ।‘ಜೀವಿ’ ಕುಲಕರ್ಣಿ, ಮುಂಬಯಿ

jeevi65@gmail.com

Dr.M.M.Joshi, Famous Eye Specialistದೊಡ್ಡವರ ಜೀವನದಲ್ಲಿಯ ಕಿರಿಯ ಘಟನೆಗಳೂ ಕೆಲಸಲ ಅವರ ಹಿರಿಮೆಯ ಸ್ಮರಣಿಕೆಗಳಾಗುತ್ತವೆ. ಡಾ.ಜೋಶಿಯವರ ಚೊಚ್ಚಲು ಮಗಳ ಪ್ರಥಮ ಹುಟ್ಟುಹಬ್ಬದ ಸಂದರ್ಭ. ಅವಳಿಗಾಗಿ ಒಂದು ಚಿನ್ನದ ಸರ ತರಬೇಕೆಂಬುದು ಅವರ ಮಡದಿಯ ಆಸೆ. ಅದಕ್ಕಾಗಿ ತೆಗೆದಿಟ್ಟ ಹಣದಿಂದ ಜೋಶಿಯವರು ತಂದದ್ದೇನು? ಸುವರ್ಣದ ಹಾರವನ್ನಲ್ಲ, ಆಸ್ಪತ್ರೆಗೆ ಬೇಕಾದ ಒಂದು ಸರ್ಜಿಕಲ್ ಉಪಕರಣವನ್ನು.

ಬೇಂದ್ರೆಯವರ ಜೀವನದ ಒಂದು ಘಟನೆ ನೆನಪಾಗುತ್ತದೆ. ಅವರು ತಮ್ಮ ಮಡದಿಗೆ ಸೀರೆ ತರಲು ಮಾರುಕಟ್ಟೆಗೆ ಹೋದವರು ಒಂದು ಅಪೂರ್ವ ಪುಸ್ತಕವನ್ನು ಕೊಂಡು ಮನೆಗೆ ತಂದಿದ್ದರಂತೆ. ಇಬ್ಬರ ಮಡದಿಯರೂ ಕೋಪಿಸಿಕೊಳ್ಳಲಿಲ್ಲ, ಅದು ಅವರ ಹಿರಿಮೆ. ಅದಕ್ಕೆಂದೇ ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂದಿರಬೇಕು. ಭಾರತೀಯ ಸಂದರ್ಭದಲ್ಲಿ ಆ ಮಹಿಳೆ ಮಡದಿಯೇ ಆಗಿರುತ್ತಾಳೆ.

ಪ್ರಾರಂಭದ ದಶಕದಲ್ಲಿ ಒಂದು ದೊಡ್ಡ ಆಸ್ಪತ್ರೆಯ ಕಣ್ಣಿನ ವಿಭಾಗದಲ್ಲಿ ನಡೆಯುವ ಕೆಲಸ ಡಾ. ಜೋಶಿಯವರೊಬ್ಬರೆ ನಿಬಾಯಿಸುತ್ತಿದ್ದರಂತೆ. ಅವರು ದಿನಕ್ಕೆ ಹದಿನಾರು ತಾಸು ದುಡಿಯುತ್ತಿದ್ದರು. ಆ ಕಾಲದಲ್ಲಿ ಕರ್ನಾಟಕದಲ್ಲಿ ಹೊಸತೆನಿಸಿದ ನಾಲ್ಕು ಬಗೆಯ ಶಸ್ತ್ರಕ್ರಿಯೆಗಳನ್ನು ಅವರು ಅನುಷ್ಠಾನಕ್ಕೆ ತಂದಿದ್ದರು. 1.ಅಕ್ಷಿಪಟಲ ಕಳಚಿದುದನ್ನು ಸರಿಪಡಿಸುವುದು, 2.ಕ್ಲಿಷ್ಟ ವಕ್ರ ಕಣ್ಣುಗಳನ್ನು ಸರಿಯಾಗಿ ಹೊಂದಿಸುವುದು,3.ಮುಚ್ಚಿದ ರೆಪ್ಪೆಯನ್ನು ತೆರೆಯುವುದು, 4.ಕಣ್ಣಲ್ಲೆ ಕಸಿಮಾಡುವುದು. ಅವರು ವೃತ್ತಿ ಜೀವನದ ಹತ್ತು ವರ್ಷ ಪೂರೈಸುವುದರಲ್ಲಿ (1976-77ಅವರ ಹೆಸರು ಕರ್ನಾಟಕದಲ್ಲಿ ಮನೆಮಾತಾಗಿತ್ತು.

ಅದೇ ವೇಳೆಗೆ ಒಬ್ಬ ರೋಗಿ ಇವರ ಬಳಿ ತನ್ನ ಕಣ್ಣಿನ ಚಿಕಿತ್ಸೆಗಾಗಿ ಬಂದ. ಅವನು ಮುಂಬೈ ಮದ್ರಾಸುಗಳಲ್ಲಿ ಚಿಕಿತ್ಸೆ ದೊರೆಯದೇ ಇವರೆಡೆಗೆ ಬಂದಿದ್ದ. ಅವನಿಗೆ ಡಾ.ಜೋಶಿ ಹೇಳಿದರು, “ನೀನು ಚಿಕಿತ್ಸೆಗಾಗಿ ಇಂಗ್ಲೆಂಡಿಗೆ ಹೋಗಬೇಕಾಗುವುದು.” ಎಂದು.

ಅವನು ಯಾಕೆಂದು ಕೇಳಿದಾಗ ಅವರೆಂದರು, “ನಿನ್ನ ಚಿಕಿತ್ಸೆಗೆ ಸಿಲಿಕನ್ ಆಯಿಲ್ ಬೇಕಾಗುತ್ತದೆ. ನಿಮ್ಮಂತಹ ರೋಗಿಗಳ ಕಣ್ಣಿನಲ್ಲಿ ಸಿಲಿಕನ್ ಆಯಿಲ್ ಇಂಜೆಕ್ಟ್ ಮಾಡಿ ನಂತರ ಆಪರೇಶನ್ ಮಾಡಬೇಕಾಗುತ್ತದೆ. ಇದನ್ನು ಮಾರ್ಫೀಲ್ಡ್ ಆಸ್ಪತ್ರೆಯಲ್ಲಿ ಡಾ.ಸ್ಕಾಟ್ ಎಂಬವರು ಮಾತ್ರ ಮಾಡುತ್ತಾರೆ.” ಆ ರೋಗಿ ಅಷ್ಟಕ್ಕೆ ಬಿಡದೆ, “ನಾನು ಆ ಎಣ್ಣೆ ತರಿಸಿಕೊಟ್ಟರೆ ನೀವು ಚಿಕಿತ್ಸೆ ಮಾಡುತ್ತೀರಾ?” ಎಂದ. ಇವರು ‘ಸರಿ’ ಎಂದರು.

ಆ ವ್ಯಕ್ತಿ ಇಂಗ್ಲಂಡಿನಲ್ಲಿ ಮಾತ್ರ ದೊರೆಯುತ್ತಿದ್ದ ‘ಮೆಡಿಕಲ್ ಗ್ರೇಡ್ ಸಿಲಿಕಾನ್ ಆಯಿಲ್’ ತರಿಸಿಕೊಟ್ಟ. ಅವನ ಸಂಬಂಧಿಕರೊಬ್ಬರು ಏರ್ ಇಂಡಿಯಾದಲ್ಲಿ ಪೈಲೆಟ್ ಆಗಿದ್ದರು, ಅವರ ಮುಖಾಂತರ ಎಣ್ಣೆ ತರಿಸಿದ್ದ. ಡಾ.ಜೋಶಿಯವರಿಗೆ ಇದು ಸತ್ವಪರೀಕ್ಷೆ ತಂದೊಡ್ಡಿತು. ಆ ಆಪರೇಶನ್ ಬಗ್ಗೆ ಓದಿದರು, ಅಭ್ಯಸಿಸಿದರು. ಆ ಎಣ್ಣೆ ದಟ್ಟವಾಗಿದ್ದುದರಿಂದ ಸಾಧಾರಣ ಸಿರಿಂಜ್ ಬಳಸುವಂತಿರಲಿಲ್ಲ. ಡೆಂಟಿಸ್ಟ್‌ರು ಬಳಸುವ ಸಿರಿಂಜ ಬಳಸಿ ಒಂದು ಪ್ರಯೋಗವನ್ನೇ ಮಾಡಿದರು, ಯಶಸ್ವಿ ಕೂಡಾ ಆದರು. ಅಲ್ಲಿಯ ವರೆಗೆ ಇಂತಹ ಆಪರೇಶನ್ ಭಾರತದಲ್ಲಿ ಯಾರೂ ಕೈಕೊಂಡಿರಲಿಲ್ಲ.

ಬೆಳಗಾವಿಯಲ್ಲಿ ನಂತರ ಮಣಿಪಾಲ್‌ನಲ್ಲಿ ನಡೆದ ನೇತ್ರಚಿಕಿತ್ಸಾ ತಜ್ಞರ ಸಮ್ಮೇಳನದಲ್ಲಿ ಇದರ ಬಗ್ಗೆ ಡಾ.ಜೋಶಿಯವರು ಮಾತಾಡಿದರು. ಉದಯಪುರದಲ್ಲಿ ನಡೆದ ಅಖಿಲ ಭಾರತ ನೇತ್ರತಜ್ಞರ ಸಮ್ಮೇಲನದಲ್ಲಿ, “ಸಿಲಿಕಾನ್ ಆಯಿಲ್ ಇಂಜೆಕ್ಷನ್ ಇನ್ ಕೇಸಿಸ್ ಆಫ್ ರಿಕಾಲ್ಸಿಟ್ರಂಟ್ ರೆಟಿನಲ್ ಡಿಟ್ಯಾಚ್‌ಮೆಂಟ್” ಎಂಬ ಪ್ರಬಂಧ ಮಂಡಿಸಿದರು. ಈ ವಿಷಯದಲ್ಲಿ ಭಾರತ ಮಟ್ಟದಲ್ಲಿ ಪ್ರಸ್ತುತಗೊಂಡ ಪ್ರಥಮ ಪ್ರಬಂಧ ಇದಾಗಿತ್ತು.

ನಂತರ ಅನೇಕ ಸಮ್ಮೇಳನಗಳಲ್ಲಿ ಕಣ್ಣಿನ ರೋಗ ಚಿಕಿತ್ಸೆಗೆ ಸಂಬಂಧಿಸಿದ ಪ್ರಬಂಧಗಳನ್ನು ಮಂಡಿಸಿದರು. ಅಮೆರಿಕೆಯ ಆಮಂತ್ರಣದ ಮೇರೆಗೆ ಅಲ್ಲಿಯ ಆಸ್ಪತ್ರೆಗಳನ್ನು ಸಂದರ್ಶಿಸಿ ಅಲ್ಲಿಯ ಚಿಕಿತ್ಸಾ ವಿಧಾನಗಳನ್ನು ಅಭ್ಯಸಿಸಿದರು. ಹಾಂಗಕಾಂಗ್, ಸಿಂಗಾಪುರ್, ಫಿಲಿಪೈನ್ಸ್, ಥೈಲ್ಯಾಂಡ್‌ಗಳಲ್ಲಿ ನಡೆದ ಆಫ್ರೋಏಶಿಯನ್ ಸಮ್ಮೇಲನಗಳಲ್ಲಿ ವಿದ್ವತ್‌ಪೂರ್ಣ ಪ್ರಬಂಧಗಳನ್ನು ಮಂಡಿಸಿದರು.

1971ರಲ್ಲಿ ಹುಬ್ಬಳ್ಳಿಯ ಲಾಯನ್ಸ್ ಕ್ಲಬ್‌ನ ಸಹಯೋಗದೊಂದಿಗೆ 584ಹೊರರೋಗಿಗಳನ್ನು ಪರೀಕ್ಷಿಸಿ 47ಜನರಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡಿದರು. ಇದು ಪ್ರಾರಂಭ ಮಾತ್ರ. ನಂತರ ಕರ್ನಾಟಕದಲ್ಲೆಲ್ಲ ಸಂಚರಿಸಿ 190ಕಡೆಗಳಲ್ಲಿ ಉಚಿತ ನೇತ್ರ ಶಿಬಿರ ನಡೆಸಿದರು, ಲಕ್ಷಕ್ಕಿಂತ ಹೆಚ್ಚು ಜನರಿಗೆ ಶಸ್ತ್ರಕ್ರಿಯೆ ಮಾಡಿದರು. ಗ್ರಾಮಾಂತರ ಜನರ ಸೇವೆಗಾಗಿ ‘ಶ್ರೀಗುರು ಮಹಿಪತಿರಾಜ ಧರ್ಮಸಂಸ್ಥೆ’ಯನ್ನು ಸ್ಥಾಪಿಸಿದರು.

ಸೋದರ ಮಾವ ಶ್ರಿ ಕೆ.ಆರ್.ಗಂಡಮಾಲಿ ಅವರ ಸಹಕಾರದಿಂದ ಸ್ವಂತದ ಕಟ್ಟಡಕ್ಕೆ ಆಸ್ಪತ್ರೆಯನ್ನು ಸ್ಥಳಾಂತರಿಸಿದರು. ನಾಲ್ಕು ಅಂತಸ್ತುಗಳ ಭವ್ಯ ಕಟ್ಟಡದಲ್ಲಿ ವೈದ್ಯಕೀಯ ಸೇವೆ ಜನರಿಗೆ ದೊರೆಯಲಾರಂಭಿಸಿತು. ಅಲ್ಲಿ ‘ಶ್ರೀಗುರು ಮಹಿಪತಿರಾಜ ಕಣ್ಣಿನ ಬ್ಯಾಂಕ್’ ಸ್ಥಾಪಿತವಾಯಿತು. (ಅದಕ್ಕೀಗ 28ವರ್ಷ.) ಇಂದು ‘ಪದ್ಮನಯನಾಲಯವು’ ಅಖಿಲ ಭಾರತ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಮಾನ್ಯತೆ ಪಡೆದ ಸ್ನಾತಕೋತ್ತರ ಶಿಕ್ಷಣ ಸಂಸ್ಥೆಯಾಗಿದೆ.(ಅದಕ್ಕೆ ನಲವತ್ತು ವರ್ಷ ಪೂರ್ಣಗೊಳಿಸಿದ ಸಂಭ್ರಮ.) ಅದಕ್ಕೆ ಅಂತಾರಾಷ್ಟ್ರೀಯ ಮನ್ನಣೆಯೂ ದೊರೆತಿದೆ.

ಡಾ.ಜೋಶಿಯವರ ಷಡ್ಡಕರ ಮಗ ಗುರುಪ್ರಸಾದ ಎಂಟ್ರನ್ಸ್ ಪರೀಕ್ಷೆಯಲ್ಲಿ ಉಚ್ಚ ರ್‍ಯಾಂಕ್ ಪಡೆದು ಐ.ಐ.ಟಿ.ಗೆ ಹೋಗುವ ಸನ್ನಾಹದಲ್ಲಿದ್ದಾಗ ಅವನಿಗೆ ವೈದ್ಯಕೀಯ ಕಾಲೇಜು ಸೇರಲು ಸ್ಫೂರ್ತಿ ನೀಡಿ, ಮೆಡಿಕಲ್ ಡಿಗ್ರಿ ದೊರೆತ ಮೇಲೆ ಅವನಿಗೆ ತಮ್ಮ ಆಸ್ಪತ್ರೆಯಲ್ಲಿ ಕೆಲಸ ಮಾಡಲು ವಿಶೇಷ ಅವಕಾಶ ಮಾಡಿಕೊಟ್ಟರು. ಮುಂದೆ ಅಲ್ಲಿ ಕೆಲಸ ಮಾಡುತ್ತಲೇ ಎಂ.ಎಸ್. ಡಿಗ್ರಿ ಪಡೆದು ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ಅಗಾಧ ಪರಿಣತಿ ತೋರಿಸಿದ. ಡಾ.ಜೋಶಿ ಮತ್ತು ಡಾ.ಗುರುಪ್ರಸಾದ ‘ಪದ್ಮನಯನಾಲಯ’ದ ಎರಡು ಕಣ್ಣುಗಳಾದರು. ಇವರ ಇಬ್ಬರು ಹೆಣ್ಣುಮಕ್ಕಳು ಮೆಡಿಕಲ್ ಶಿಕ್ಷಣ ಪಡೆದರು. (ಪದ್ಮಾ, ಸಂಗೀತಾ). ಅವರಿಗೆ ದೊರೆತ ಇಬ್ಬರು ಅಳಿಯಂದಿರೂ ನೇತ್ರಚಿಕಿತ್ಸೆಯಲ್ಲಿ ತಜ್ಞರಾಗಿರುವುದೂ ಒಂದು ಯೋಗಾಯೋಗ.

ಅವರ ಹಿರಿಯ ಅಳಿಯ ಡಾ. ಸತ್ಯಮೂರ್ತಿ ರ್‍ಯಾಂಕ್‌ಪಡೆದ ವಿದ್ಯಾರ್ಥಿ. ಅಪ್‌ಥಲ್ಮಾಲಜಿಯಲ್ಲಿ ನಿಷ್ಣಾತ. ಎರಡನೆಯ ಅಳಿಯ ಡಾ. ಕೃಷ್ಣಪ್ರಸಾದ ಅಖಿಲ ಭಾರತೀಯ ವೈದ್ಯವಿಜ್ಞಾನ ಮಹಾವಿದ್ಯಾಲಯದ ಸ್ನಾತಕೋತ್ತರ ಪದವೀಧರ. ಇಬ್ಬರು ಅಳಿಯಂದಿರು ಇವರ ಆಸ್ಪತ್ರೆಯ ಸೇವೆಯಲ್ಲಿ ತೊಡಗಿದಾಗಿನಿಂದ ಆಸ್ಪತ್ರೆಯ ಪ್ರಗತಿಗೆ ಹೆಚ್ಚಿನ ಗತಿ ದೊರೆಯಿತು. ಅವರ ಏಕಮಾತ್ರ ಪುತ್ರ ಶ್ರೀನಿವಾಸ ಎಂ.ಬಿ.ಬಿ.ಎಸ್. ಮುಗಿಸಿ ಇಂಟರ್ನ್‌ಶಿಪ್ ಮುಗಿಸಿದ್ದಾನೆ. ಅವನೂ ತಂದೆಯ ಮಾರ್ಗದಲ್ಲೇ ಮುನ್ನಡೆಯುತ್ತಿದ್ದಾನೆ.

ಡಾ.ಜೋಶಿಯವರ ಜೀವನದಲ್ಲಿಯ ಅವಿಸ್ಮರಣೀಯ ಘಟನೆ 2, ಡಿಸೆಂಬರ್ 2006ರಲ್ಲಿ ನಡೆಯಿತು. ಸಾರ್ವಜನಿಕವಾಗಿ ಇವರ ಸನ್ಮಾನವನ್ನು ಮಾಡಲು ಒಂದು ರಾಜ್ಯ ಮಟ್ಟದ ಬೃಹತ್ ಸಮಿತಿಯು ಸಿದ್ಧವಾಗಿತ್ತು. ಸರ್ವೋಚ್ಚನ್ಯಾಯಾಲಯದ ನಿವೃತ್ತ ಮುಖ್ಯನ್ಯಾಯಧೀಶ ಎಂ.ಎನ್.ವೆಂಕಟಾಚಲಯ್ಯ, ಲೋಕಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಗಾಂಧೀವಾದಿ ಹಾರನಹಳ್ಳಿ ರಾಮಸ್ವಾಮಿ, ಉದ್ಯಮಿ ಬಿ.ಎ.ದೇಸಾಯಿ, ಡಾ.ಬಿ.ಟಿ. ಮಸ್ಕಟಿ (ಟ್ರಸ್ಟೀಜ್), ಪದ್ಮಭೂಷಣ ಗಂಗೂಬಾಯಿ ಹಾನಗಲ್ (ಚೇರ್‌ಮನ್), ವಿರೋಧಿಪಕ್ಷದ ನಾಯಕ ಎಚ್.ಕೆ.ಪಾಟೀಲ (ವೈಸ್-ಚೇರ್‌ಮನ್), ಪದ್ಮಶ್ರೀ ಡಾ| ಆರ್.ಬಿ.ಪಾಟೀಲ (ಪ್ರೆಸಿಡೆಂಟ್), ನಾಡೋಜ ಪಾಟೀಲ ಪುಟ್ಟಪ್ಪ ಮತ್ತು ಚಂದ್ರಶೇಖರ ಶೆಟ್ಟಿ( ವೈಸ್-ಪ್ರೆಸಿಡೆಂಟ್ಸ್), ಲೋಕಸಭಾ ಸದಸ್ಯ ಪ್ರಹ್ಲಾದ ಜೋಶಿ, ರಾಜಾ ದೇಸಾಯಿ (ಕನ್‌ವೀನರ್‍ಸ್), ಡಾ .ಗೋವಿಂದ ಮಣ್ಣೂರ (ಸೆಕ್ರೆಟರಿ). ಡಾಕ್ಟರರು, ಸಾಹಿತಿಗಳು, ಕಲಾವಿದರು, ವಕೀಲರು, ಉದ್ಯಮಿಗಳು, ಪತ್ರಕರ್ತರು, ಗಣ್ಯ ನಾಗರಿಕರು ಆ ಸಮಿತಿಯ ಸದಸ್ಯರಾದರು.

ಕರ್ನಾಟಕದ ರಾಜ್ಯಪಾಲ ಶ್ರೀ ಟಿ.ಎನ್.ಚತುರ್ವೇದಿಯವರ ಹಿರಿತನದಲ್ಲಿ, ಲೋಕಶಿಕ್ಷಣ ಟ್ರಸ್ಟ್‌ನ ಮುಖ್ಯಸ್ಥರಾದ ಹಾರನಹಳ್ಳಿ ರಾಮಸ್ವಾಮಿಯವರ ಅಧ್ಯಕ್ಷತೆಯಲ್ಲಿ, ಹುಬ್ಬಳ್ಳಿಯ ಗೋಕುಲ ಗಾರ್ಡನ್‌ನಲ್ಲಿ ಇವರ ಸಾರ್ವಜನಿಕ ಸತ್ಕಾರ ನಡೆಯಿತು. ಶ್ರೀ ಚತುರ್ವೇದಿಯವರು ಶಾಲು ಹೊದಿಸಿ ಡಾ .ಜೋಶಿಯವರನ್ನು ಸತ್ಕರಿಸಿದರು.

ಗಾನಸಾಮ್ರಾಜ್ಞಿ ಗಂಗೂಬಾಯಿ ಹಾನಗಲ್ ಅವರು ಶ್ರೀಮತಿ ಪ್ರಮೀಳಾ ಜೋಶಿಯವರನ್ನು ಗೌರವಿಸಿದರು. ರಾಜ್ಯಪಾಲ ಶ್ರೀ ಟಿ.ಎನ್.ಚತುರ್ವೇದಿಯವರು ಡಾ.ಜೋಶಿಯವರ ಸಾಧನೆಯನ್ನು ಮೆಚ್ಚಿ ಮಾತನಾಡಿದರು. ನ್ಯಾಯಮೂರ್ತಿ ವೆಂಕಟಾಚಲಯ್ಯ ಮಾತನಾಡುತ್ತ ನೇತ್ರವಿಜ್ಞಾನ ಕ್ಷೇತ್ರದಲ್ಲಿಯ ಅತ್ಯಾಧುನಿಕ ಸಂಶೋಧನೆಗಳನ್ನು ತಮ್ಮಸಂಸ್ಥೆಯಲ್ಲಿ ಅಳವಡಿಸಿಕೊಂಡು ಸಾಮಾನ್ಯ ಜನರಿಗೆ ಅದರ ಲಾಭ ತಲುಪುವಂತೆ ಮಾಡಿದ್ದನ್ನು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ ಗಾಂಧೀವಾದಿ ಹಾರನಹಳ್ಳಿ ರಾಮಸ್ವಾಮಿಯವರು ಡಾ .ಜೋಶಿಯವರ ಪ್ರಾಮಾಣಿಕತೆ, ಪ್ರಾವೀಣ್ಯ, ಹಾಗೂ ಪ್ರತಿಬದ್ಧತೆಗಳನ್ನು ಕೊಂಡಾಡಿದರು. ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ವಿ.ಎಸ್.ಆಚಾರ್ಯ ಅವರು ಮಾತನಾಡುತ್ತ, ‘10 ಲಕ್ಷ ಜನರ ನೇತ್ರ ತಪಾಸಣೆ, ಒಂದು ಲಕ್ಷ ಜನರಿಗೆ ಉಚಿತ ನೇತ್ರ ಚಿಕಿತ್ಸೆ ಮಾಡಿದ ಡಾ.ಜೋಶಿಯವರ ಸಾಧನೆ ಅನುಪಮವಾಗಿದೆ’ ಎಂದರು.

ಕಂದಾಯ ಸಚಿವ ಜಗದೀಶ ಶೆಟ್ಟರ್, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ, ನಾಡೋಜ ಪಾಟೀಲ ಪುಟ್ಟಪ್ಪ, ವಿರೋಧಿ ಪಕ್ಷದ ಧುರೀಣ ಎಚ್.ಕೆ. ಪಾಟೀಲ, ಲೋಕ ಸಭಾಸದಸ್ಯ ಪ್ರಹ್ಲಾದ ಜೋಶಿ ಮೊದಲಾದ ಗಣ್ಯರು ಮಾತಾಡಿದರು.

ಗಾನವಿದುಷಿ ಗಂಗೂಬಾಯಿ ಹಾನಗಲ್ ಅವರು ಮಾತನಾಡುತ್ತ ತಮ್ಮ ಕಣ್ಣಿನ ಕಾಳಜಿ ಡಾಕ್ಟರರಿಗೆ ಒಪ್ಪಿಸಿದ್ದಾಗಿ ಹೇಳಿದರು. ತಾವು ಮಹಿಪತಿದಾಸರ ಪಾದುಕೆ ಬಂದಾಗಲೆಲ್ಲ ಸಂಗೀತ ಸೇವೆ ಸಲ್ಲಿಸಿದ ಬಗ್ಗೆ ನೆನಪಿಸಿಕೊಂಡರು. ಶತಾಯುಷಿ ಹಿರಿಯ ಉದ್ಯಮಿ ಬಿ.ಎ.ದೇಸಾಯಿಯವರು ಡಾ .ಜೋಶಿಯವರನ್ನು ಅಭಿನಂದಿಸಲು ಬಂದ ಗಣ್ಯರಲ್ಲಿ ಅತ್ಯಂತ ಹಿರಿಯರಾಗಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more