• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾರಾಯಣನ ಆಲಿಂಗನದಲ್ಲಿ ಮಧ್ವರು!

By Staff
|

ದುರ್ಗಮ ಮಾರ್ಗ. ಹಿಮಾಲಯ ಪರ್ವತಶ್ರೇಣಿ. ಹಿಮರಾಶಿ. ಬಹುಬಗೆಯ ಸಸ್ಯಗಳು, ಪ್ರಾಣಿಸಂಕುಲ. ಹಗಲಲ್ಲೇ ರಾತ್ರಿಯ ವಾತಾವರಣ ತರುವ ಉತ್ತುಂಗ ಶಿಖರಗಳು. ಗುರುಗಳನ್ನು ಹಿಂಬಾಲಿಸುವ ಸತ್ಯತೀರ್ಥರ ತಲೆ ತಿರುಗುವಂತಾಯಿತು. ಗುರುಗಳನ್ನು ಹಿಂಬಾಲಿಸುವುದು ಅಸಾಧ್ಯವಾಯಿತು. ಗುರುಗಳನ್ನು ರಕ್ಷಣೆಗಾಗಿ ಪ್ರಾರ್ಥಿಸಿ ಮರಳಿದರು. ಒಂದು ಪವಾಡವೇ ಆಯಿತು. ಶ್ರೀಸತ್ಯತೀರ್ಥರು ಇಡೀದಿನ ಕ್ರಮಿಸಿದ ಮಾರ್ಗವನ್ನು ಕ್ಷಣಮಾತ್ರದಲ್ಲಿ ಕ್ರಮಿಸಿ ಪುನಃ ತಾವು ಹೊರಟಿದ್ದ ಸ್ಥಾನಕ್ಕೆ ತಲುಪಿದರು. ಗುರುಗಳ ಅಪಾರ ಕರುಣೆ ಅವರು ನೆನೆದರು. ಶ್ರೀಮಧ್ವರ ಪ್ರವಾಸ ವೈಭವವನ್ನು ಇತರ ಶಿಷ್ಯರಿಗೆ ತಿಳಿಸಿದರು.

ಶ್ರೀಸತ್ಯತೀರ್ಥರು ಮರಳಿದ ಮೇಲೆ ಶ್ರೀಮಧ್ವರ ಪ್ರಯಾಣವು ಹೆಚ್ಚಿನ ವೇಗ, ಹನುಮವೇಗ ಪಡೆಯುತು. ಬದರಿ ವೃಕ್ಷಗಳಿಂದ ತುಂಬಿದ ‘ಉತ್ತರ ಬದರಿ’ಯನ್ನು ತಲುಪಿದರು. ಪೂರ್ಣಪ್ರಜ್ಞರು ಕೊನೆಗೆ ವ್ಯಾಸಾಶ್ರಮ ತಲುಪಿದರು. ಅಲ್ಲಿ ತಪೋನಿರತರಾದ, ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ, ಅಪರೋಕ್ಷ ಜ್ಞಾನಿಗಳು ಇದ್ದರು. ಪೂರ್ಣಪ್ರಜ್ಞರ ತೇಜವನ್ನು ಕಂಡು, ಬ್ರಹ್ಮದೇವರಿಗೆ ಅವತಾರವಿಲ್ಲವಾದ್ದರಿಂದ, ಇವರು ವಾಯುದೇವರೇ ಇರಬೇಕೆಂದು ಖಚಿತಪಡಿಸಿಕೊಂಡರು. ಅಲ್ಲಿ ಸಾಕ್ಷಾತ್‌ ವೇದವ್ಯಾಸರು ಆಸೀನರಾಗಿದ್ದರು.

ವ್ಯಾಸರರೂಪದಲ್ಲಿ ಭಗವಂತನನ್ನು ಕಂಡ ಸಂಭ್ರಮ ಶ್ರೀಮಧ್ವರದಾಗಿದ್ದರೆ, ಭಕ್ತಶ್ರೇಷ್ಠನನ್ನು ಕಂಡ ಸಂಭ್ರಮ ವೇದವ್ಯಾಸರದಾಗಿತ್ತು. ಅವರಿಬ್ಬರ ಸಂಗಮ, ಶ್ರೀರಾಮ-ಹನುಮರ ಮಿಲನಕ್ಕೆ, ಶ್ರೀಕೃಷ್ಣ-ಭೀಮರ ಸಂಗಮಕ್ಕೆ ಸಾಟಿಯಾಗಿತ್ತು. ವ್ಯಾಸರು ಮಧ್ವರನ್ನು ಸ್ವಾಗತಿಸಿದರು. ಶ್ರೀವೇದವ್ಯಾಸ ಹಾಗೂ ಮಧ್ವರು ಸಾಕ್ಷಾತ್‌ ಹರಿ ವಾಯುಗಳಂತೆ, ಸರ್ವೋತ್ತಮ ಜೀವೋತ್ತಮರಂತೆ, ಜಗದೀಶ ಜಗದ್ಗುರುಗಳಂತೆ ಕಂಡರು.

ಶ್ರೀವ್ಯಾಸರ ಬಳಿಗೆ ಕುಳಿತ ಮಧ್ವರಿಗೆ ಮತ್ತೊಂದುಸಲ ಶಾಸ್ತ್ರಗಳ ಶ್ರವಣಯೋಗ ಲಭಿಸಿತು. ಶ್ರೀಪೂರ್ಣಪ್ರಜ್ಞರಿಗೆ ಎಲ್ಲವೂ ತಿಳಿದಿತ್ತು. ಆದರೂ ಪುನಃ ಶ್ರವಣಫಲ ದೊರೆತಿತ್ತು. ಅದಕ್ಕೆಂದೇ ‘ಆವೃತ್ತಿರಸಕೃದುಪದೇಶಾತ್‌’ ಎಂದು ಶಾಸ್ತ್ರಗಳ ಉಪದೇಶ. ಮಧ್ವರಿಗೆ ಹೊಸತಾಗಿ ತಿಳಿಯುವುದು ಏನೂ ಇರದಿದ್ದರೂ, ತಿಳಿದಿದ್ದಕ್ಕೆ ಹೊಸತನ ಲಭಿಸಿತು. ತಿಳಿದದ್ದನ್ನೇ ತನಗಿಂತ ಉತ್ತಮರು ತಿಳಿಸಿದಾಗ ಕೇಳಬೇಕು, ತಿಳಿದವರಿಗೂ ವಿಶೇಷವೆನ್ನಿಸುವಂತೆ ಹೇಳಬೇಕು- ಇದುವೆ ಶ್ರೀವ್ಯಾಸಮಧ್ವರ ಈ ಕಾರ್ಯದ ಹಿಂದಿರುವ ಸಂದೇಶ.

ಶ್ರೀವ್ಯಾಸರು ಮಧ್ವರನ್ನು ಮತ್ತೊಂದು ತಾಣಕ್ಕೆ ಕರೆದುಕೊಂಡು ಹೋದರು. ಇದು ವ್ಯಾಸಾಶ್ರಮವಾಗಿದ್ದರೆ ಅದು ನಾರಾಯಣಾಶ್ರಮವಾಗಿತ್ತು. ಅಲ್ಲಿ ಸಾಕ್ಷಾತ್‌ ನಾರಾಯಣನೇ ನೆಲೆಸಿದ್ದ. ಶ್ರೀಪೂರ್ಣಪ್ರಜ್ಞರು ಶ್ರೀವ್ಯಾಸರೊಂದಿಗೆ ಆ ರೀತಿ ನಾರಾಯಣನ ಬಳಿ ತೆರಳಿದ ಘಟನೆ, ವ್ಯಾಸರ ಗ್ರಂಥಗಳ ಮೂಲಕವೇ ನಾರಾಯಣ ಸ್ವರೂಪವನ್ನು ತಿಳಿಯಬೇಕು ಎಂಬ ತತ್ತ್ವದ ಸಂಕೇತದಂತೆ ಇತ್ತು. ಶ್ರೀನಾರಾಯಣನನ್ನು ಕಾಣುತ್ತಲೇ ಅವನ ಎಲ್ಲ ಅವತಾರಗಳು ಶ್ರೀಮಧ್ವರ ಮುಂದೆ ಸುಳಿದವು. ಮಧ್ವರ ಭಾಗ್ಯವೇ ಭಾಗ್ಯ.

ಶ್ರೀನಾರಾಯಣರು ಮಧ್ವರನ್ನು ಆಲಂಗಿಸಿ ಉಪಚರಿಸಿ ಅದೇಶ ನೀಡಿದರು. ‘‘ಇದು ರಹಸ್ಯಕಾರ್ಯ. ನಿಮ್ಮ ಅವತಾರದ ಮಹತ್ತರಕಾರ್ಯ. ಲೋಕದಲ್ಲಿ ಬ್ರಹ್ಮಸೂತ್ರಗಳ ಭಾವ ಮುಚ್ಚಿಹೋಗಿದೆ. ಅದಕ್ಕೆ ಮನಸ್ಸಿಗೆ ತೋಚಿದಂತೆ ಬರೆದ ದುರ್ಭಾಷ್ಯಗಳೇ ಕಾರಣ. ಅದರಿಂದ ತತ್ತ್ವಜ್ಞಾನ ಪೂರ್ಣ ಮರೆಯಾಗಿಬಿಟ್ಟಿದೆ. ದುರ್ಜನರ ಈ ಅಪಚಾರಕ್ಕೆ ಪ್ರತೀಕಾರವಾಗಬೇಕು. ಆ ಮೂಲಕ ಸಜ್ಜನರಿಗೆ ಮುಕ್ತಿಮಾರ್ಗ ಗೋಚರಿಸಬೇಕು. ಅದಕ್ಕೆಂದು ನೀವೀಗ ಬ್ರಹ್ಮಸೂತ್ರಗಳಿಗೆ ಭಾಷ್ಯವನ್ನು ರಚಿಸಬೇಕು.’’ ಎಂದರು.

ಶ್ರೀನಾರಾಯಣನಿಂದ ಆದೇಶವನ್ನು ಪಡೆದ ಮಧ್ವರು ಶ್ರೀನಾರಾಯಣನಿಗೆ ನಮಸ್ಕರಿಸಿ, ಶ್ರೀವ್ಯಾಸರೊಂದಿಗೆ ವ್ಯಾಸಾಶ್ರಮಕ್ಕೆ ಮರಳಿದರು. ಅಲ್ಲಿ ಕೆಲದಿನ ಇದ್ದು ವಿಶಾಲ ಬದರಿಗೆ ಮರಳಿದರು. ಬದರಿಯ ಅನಂತಮಠದಲ್ಲಿ ಶ್ರೀಸತ್ಯತೀರ್ಥರ ನೇತೃತ್ವದಲ್ಲಿ ಅವರ ಶಿಷ್ಯವೃಂದ ಅವರ ಬರವನ್ನೇ ನಿರೀಕ್ಷಿಸುತ್ತಿತ್ತು. ಅವರೆಲ್ಲ ಸಂಭ್ರಮದಿಂದ ಗುರುಗಳನ್ನು ಸ್ವಾಗತಿಸಿದರು.

ಬದರಿಯಲ್ಲಿ ಅಗ್ನಿಶರ್ಮ ಮೊದಲಾದ ವಿಪ್ರಗೃಹಗಳಿದ್ದವು. ಅವರೆಲ್ಲರಿಗೆ ಶ್ರೀಮಧ್ವರನ್ನು ತಮ್ಮ ಮನೆಗೆ ಕರೆಸಿ ಭಿಕ್ಷೆಮಾಡಿಸಿ ಕೃತಾರ್ಥರಾಗುವ ಬಯಕೆ ಇತ್ತು. ಶ್ರೀಮಧ್ವರು ಅದೇ ಕಾಷ್ಠಮೌನವ್ರತವನ್ನು ಮುಗಿಸಿದ್ದರು. ಅವರು ಬೇಗ ಅಲ್ಲಿಂದ ಮರಳುವವರಿದ್ದರು. ಅವರನ್ನೆಲ್ಲ ಅನುಗ್ರಹಿಸಲು ಹೇಳಿದರು,‘‘ ನಿಮ್ಮಲ್ಲಿ ಪ್ರತಿಯಾಬ್ಬರೂ ನಮಗೂ ನಮ್ಮ ಪರಿವಾರಕ್ಕೂ ಸಾಕಾಗುವಷ್ಟು ಆಹಾರ ಸಿದ್ಧಪಡಿಸಿಕೊಂಡು ತನ್ನಿರಿ. ನಾವು ಶ್ರೀಹರಿಗೆ ಸಮರ್ಪಿಸಿ, ಅದನ್ನೆಲ್ಲ ಸ್ವೀಕರಿಸುವೆವು.’’ಎಂದು.

ಅವರೆಲ್ಲ ಅದರಂತೆ ಭಾರಿ ಪ್ರಮಾಣದ ಆಹಾರವನ್ನು ಸಿದ್ಧಪಡಿಸಿ ಶ್ರದ್ಧೆಭಕ್ತಿಗಳಿಂದ ಮುಂದಿಟ್ಟರು. ಶ್ರೀಮಧ್ವರು ಅದನ್ನು ಭಗವಂತನಿಗೆ ನಿವೇದಿಸಿ, ಶಿಷ್ಯರಿಗೆ ಸಾಕಾಗುವಷ್ಟನ್ನು ಮಾತ್ರ ಉಳಿಸಿ, ಉಳಿದೆಲ್ಲವನ್ನು ಒಬ್ಬರೇ ಸ್ವಿಕರಿಸಿಬಿಟ್ಟರು. ಅವರು ಬಾಲ್ಯದಲ್ಲಿ ಹುರುಳಿ ತಿಂದದ್ದನ್ನು, ಯೌವನದಲ್ಲಿ ನೂರಾರು ಬಾಳೆಹಣ್ಣು ತಿಂದದ್ದನ್ನು ನೆನೆಸುವಂತಾಯಿತು. ಉಳಿದವರಿಗೆ ಹಾಗೆ ತಿಂದರೆ ರೋಗ, ಇವರದು ಮಾತ್ರ ನಿಜವಾದ ಯೋಗ. ವೇದಗಳು ಇಂಥ ಮಹಿಮೆಯನ್ನು ‘ಪಿತುಮಾನ್‌’ ಎಂದು ಕೊಂಡಾಡಿವೆ. ಶ್ರೀವಾದಿರಾಜರು ‘ಪಿತುಮಾನ್‌’ ಶಬ್ದಕ್ಕೆ ‘ಬಹ್ವನ್ನಭೋಕ್ತಾ’ ಎಂದು ಕರೆಯುತ್ತಾರೆ. ಇಲ್ಲಿ ಶ್ರೀಮಧ್ವರು ತೋರಿಸಿದ ಮಹಿಮೆ ‘ವೃಕೋದರನ ಭಿಕ್ಷಾವೈಭವ’ವಾಗಿ ಕಂಡಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more