ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾರಾಯಣನ ಆಲಿಂಗನದಲ್ಲಿ ಮಧ್ವರು!

By Staff
|
Google Oneindia Kannada News


ಗೀತೆ ತನಗೆ ಬಹಳ ಪ್ರಿಯವಾದದ್ದು ಎಂಬ ಮಾತು ಭಗವಂತನೇ ಹೇಳಿದ್ದಾನೆ. ಮಧ್ವಭಾಷ್ಯವೂ ಅವನಿಗೆ ಪ್ರಿಯವಾಗಿದೆ ಎಂದರೆ ಎಂತಹ ಭಾಗ್ಯ. ಗೀತೆಯನ್ನು ಕೇಳಿದವ ಅರ್ಜುನನಾಗಿದ್ದರೂ ಅದಕ್ಕೆ ಭಾಷ್ಯ ಬರೆಯುವ ಯೋಗ ಮಧ್ವರಿಗೆ ಲಭಿಸಿತ್ತು. ಈ ವಿಚಾರ ಒಳಗೊಂಡ ಡಾ. ಪ್ರಭಂಜನಾಚಾರ್ಯರ ‘ಶ್ರೀಪೂರ್ಣಪ್ರಜ್ಞ ದರ್ಶನ’ ಕೃತಿಯ ಇನ್ನಷ್ಟು ವಿವರಗಳನ್ನು ಈ ವಾರ ಅರಿಯೋಣ.

Vishnuಶ್ರೀಮಧ್ವರ ಗೀತಾಭಾಷ್ಯದ ಪ್ರಾರಂಭದಲ್ಲಿ ಮಂಗಲಶ್ಲೋಕ ಹೀಗಿತ್ತು :

‘‘ದೇವಂ ನಾರಾಯಣಂ ನತ್ವಾಸರ್ವದೋಷವಿವರ್ಜಿತಮ್‌ । ಪರಿಪೂರ್ಣಂ ಗುರೂಂಶ್ಚಾನ್‌ ಗೀತಾರ್ಥಂ ವಕ್ಷ್ಯಾಮಿ ಶಕ್ತಿತಃ।।’’

(ಸರ್ವ ದೋಷದೂರನೂ, ಗುಣಪರಿಪೂರ್ಣನೂ ಆದ ದೇವ ನಾರಾಯಣನನ್ನು ನಮಸ್ಕರಿಸಿ, ಗುರುಗಳಾದ ಶ್ರೀವೇದವ್ಯಾಸರನ್ನೂ ವಂದಿಸಿ, ಯಥಾಶಕ್ತಿ ಗೀತಾರ್ಥವನ್ನು ಹೇಳುವೆನು.)

ಪ್ರವಚನ ಮುಗಿದಾಗ ನಾರಾಯಣನ ವಾಣಿ ಕೇಳಿಸಿತು. ‘‘ನಿಮ್ಮ ಭಾಷ್ಯ ನನಗೆ ತುಂಬಾ ಮೆಚ್ಚಿಕೆಯದಾಯ್ತು. ನೀವು ‘ಗೀತಾರ್ಥಂ ವಕ್ಷ್ಯಾಮಿ ಶಕ್ತಿತಃ’ ಎಂದಿರುವಿರಿ. ಅದು ನಿಮ್ಮ ವಿನಯದ ಮಾತು. ನೀವು ಪೂರ್ಣಪ್ರಜ್ಞರು. ನೀವಿಲ್ಲಿ ಬರೆದಿರುವದು ನಿಮಗೆ ತಿಳಿದಿರುವದರ ಲೇಶಾಂಶವಷ್ಟೇ. ಆದ್ದರಿಂದ ‘ಶಕ್ತಿತಃ’ ಪದಕ್ಕೆ ಬದಲಾಗಿ ‘ಲೇಶತಃ’ ಶಬ್ದ ಬಳಸಿರಿ.’’ ಗ್ರಂಥಪ್ರತಿಪಾದ್ಯನಾದ ಶ್ರೀ ನಾರಾಯಣನೇ ಮೆಚ್ಚಿನುಡಿದ ಅನುಗ್ರಹ ವಚನಗಳಿವು.

ಅನಂತ ಮಠವೆಂದರೆ ಬದರಿ ದೇವಸ್ಥಾನದ ಒಳಾಂಗಣವೇ ಆಗಿದೆ. ಅಲ್ಲಿ ಎಲ್ಲರೂ ಮಲಗಿದ್ದರು. ಆಗ ಶ್ರೀವೇದವ್ಯಾಸರೇ ಆಗಮಿಸಿದರು. ನೆಲವನ್ನು ಬಡಿದು ನುಡಿದರು, ‘‘ಪೂರ್ಣಪ್ರಜ್ಞರೇ! ನಿಮ್ಮ ಗೀತಾಭಾಷ್ಯದ ಪ್ರವಚನ ಮತ್ತೊಮ್ಮೆ ನಡೆಯಲಿ.’’ ಎಂದು. ಈ ಮಾತು ಮಲಗಿದ್ದ ಶಿಷ್ಯರಿಗೂ ಕೇಳಿಸಿತು. ಭೂಮಿಯ ಬಡಿತದಿಂದ ಎಚ್ಚತ್ತಿದ್ದ ಅರಿಗೆಲ್ಲ ಅದನ್ನು ಕೇಳುವ ಯೋಗ ಲಭಿಸಿತ್ತು. ಮತ್ತೊಮ್ಮೆ ಶಿಷ್ಯರಿಗೆ ಗೀತಾಪಾಠ ಹೇಳಿದರು. ಈ ಸಲ ಅವರು ಮಂಗಲಾಚರಣದಲ್ಲಿ ‘ಶಕ್ತಿತಃ’ ಶಬ್ದಕ್ಕೆ ಬದಲಾಗಿ ‘ಲೇಶತಃ’ ಶಬ್ದ ಬಳಸಿದ್ದರು.

ಗೀತೆ ತನಗೆ ಬಹಳ ಪ್ರಿಯವಾದದ್ದು ಎಂಬ ಮಾತು ಭಗವಂತನೇ ಹೇಳಿದ್ದಾನೆ. ಮಧ್ವಭಾಷ್ಯವೂ ಅವನಿಗೆ ಪ್ರಿಯವಾಗಿದೆ ಎಂದರೆ ಎಂತಹ ಭಾಗ್ಯ. ಗೀತೆಯನ್ನು ಕೇಳಿದವ ಅರ್ಜುನನಾಗಿದ್ದರೂ ಅದಕ್ಕೆ ಭಾಷ್ಯ ಬರೆಯುವ ಯೋಗ ಮಧ್ವರಿಗೆ ಲಭಿಸಿತ್ತು. ಗೀತೋಪದೇಶ ನಡೆದಾಗ ರಥದ ಮೇಲೆ ಧ್ವಜದಲ್ಲಿ ಕುಳಿತು ಕೇಳಿದವ ಹನುಮಂತ, ಬದಿಯಲ್ಲಿ ನಿಂತು ಕೇಳಿದವ ಭೀಮಸೇನ. ಮೂರನೆಯ ಅವತಾರದಲ್ಲಿ ಮಧ್ವನಾಗಿ ಗೀತೆಯನ್ನು ವ್ಯಾಖ್ಯಾನಿಸಿದ್ದು ಹೆಚ್ಚಿನ ಮಹತ್ವ ಪಡೆಯುತ್ತದೆ.

ನಿತ್ಯ ಪಾಠಪ್ರವಚನ ನಡೆದವು. ಪ್ರತಿನಿತ್ಯ ಅಲಕನಂದಾ ಸ್ನಾನ. ಆಗ ಮೂರುಸಲ ಆಘಮರ್ಷಣ ಸೂಕ್ತದ ಪಠನ. ನಂತರ ಆಹ್ನಿಕ, ದೇವತಾರ್ಚನೆ, ಪುನಃಪಾಠ. ಆದರೆ ಊಟವೇ ಇರಲಿಲ್ಲ. ಸಂಪೂರ್ಣ ನಿರಾಹಾರ. ಪಾಠವಿದ್ದಾಗ ಮಾತ್ರ ಬಾಯಿ ತೆರೆಯುವುದು. ಇಲ್ಲದಿದ್ದರೆ ಮೌನ. ನಿರಾಹಾರದ ಜೊತೆಗಿದ್ದ ಮೌನಕ್ಕೆ ‘ಕಾಷ್ಠಮೌನ’ ಎನ್ನುತ್ತಾರೆ. ಇದು ದೇಹಶುದ್ಧಿಯ ಮಾರ್ಗ. ಕಾಷ್ಠಮೌನದ 48 ದಿನಗಳು ಪೂರೈಸಿದವು. ಆಗ ಸ್ವತಃ ವೇದವ್ಯಾಸರೇ ಆಗಮಿಸಿದರು. ಆಗ ಎಲ್ಲೆಡೆ ಕಣ್ಣು ಕೋರೈಸುವ ಬೆಳಕು ಆವರಿಸಿತು.

‘‘ನೀವಿನ್ನು ಉತ್ತರ ಬದರಿಯ ನಮ್ಮ ಆಶ್ರಮಕ್ಕೆ ಬರಬೇಕು’’ ಎಂದು ಅವರು ಶ್ರೀಮಧ್ವರನ್ನು ಆಹ್ವಾನಿಸಿದರು. ಉಪಸ್ಥಿತ ಶಿಷ್ಯರಿಗೆ ಆ ಮಾತು ಕೇಳಿಸಲಿಲ್ಲ, ಆದರೆ ಬೆಳಕು ಕಂಡಿತ್ತು. ತಮ್ಮ ಅನುಭವ ಶಿಷ್ಯರಿಗೆ ತಿಳಿಸುವುದೆಂತು? ಮಧ್ವರಂತೂ ಮೌನವ್ರತದಲ್ಲಿದ್ದರು. ಆದ್ದರಿಂದ ಅವರು ತಮಗಾಗ ಆದ ಅನುಭವವನ್ನು ಬರೆದು ತಿಳಿಸಿದರು. ಅದು ಶ್ಲೋಕರೂಪದಲ್ಲಿದೆ.

‘‘ನೇದೃಶಂ ಸ್ಥಲಮಲಂ ಶಮಲಘ್ನಂ ನಾಸ್ಯ ತೀರ್ಥಸಲಿಲಸ್ಯ ಸಮಂ ವಾಃ । ನಾಸ್ತಿ ವಿಷ್ಣುಸದೃಶಂ ನನು ದೈವಂ ನಾಸ್ಮದುಕ್ತಿಸದೃಶಂ ಹಿತರೂಪಮ್‌ ।।’’ (‘ಬದರಿಯಂತಹ ಪಾಪನಾಶಕಕ್ಷೇತ್ರ ಮತ್ತೊಂದಿಲ್ಲ. ಈ ಗಂಗೆಯಂತಹ ಪಾವನತೀರ್ಥ ಬೇರೊಂದಿಲ್ಲ. ವಿಷ್ಣುವಿನಂತಹ ಪಾವನದೈವ ಇನ್ನೊಂದಿಲ್ಲ. ನಮ್ಮ ಮಾತಿನಂತಹ ಹಿತವಚನ ಮತ್ತೊಂದಿಲ್ಲ.’)

ತಾವು ವ್ಯಾಸ ಭಗವಾನರನ್ನು ಕಾಣಲು ಹೊರಡುವುದಾಗಿ ಶಿಷ್ಯರಿಗೆ ತಿಳಿಸಿ ಶ್ರೀಮಧ್ವರು ಹೊರಟರು. ಶಿಷ್ಯರಿಗೆ ಗುರುಗಳ ಅಗಲಿಕೆ ಸಹಿಸಲು ಸಾಧ್ಯವಾಗಲಿಲ್ಲ. ‘ನಮ್ಮನ್ನಿಲ್ಲಿ ಅನಾಥರನ್ನಾಗಿ ಬಿಟ್ಟು ತೆರಳದಿರಿ’ ಎಂಬ ಮಾತು ತುಟಿವರೆಗೆ ಬಂದಿದ್ದರೂ ಅದು ಹೊರಗೆ ಬರಲಿಲ್ಲ. ಗುರುಗಳ ಸಂಕಲ್ಪಕ್ಕೆ ವಿರುದ್ಧವಾಗಿ ಮಾತಾಡಲು ಅವರಿಗೆ ಸಾಧ್ಯವಿರಲಿಲ್ಲ. ಎಲ್ಲರೂ ಭಾರವಾದ ಕಣ್ಣುಗಳಿಂದ ಗುರುಗಳನ್ನು ಬೀಳ್ಕೊಟ್ಟರು. ಆದರೆ ಸಮೀಪದ ಶಿಷ್ಯರಾದ ಶ್ರೀಸತ್ಯತೀರ್ಥರು ಮಾತ್ರ ಗುರುಗಳನ್ನು ಹಿಂಬಾಲಿಸಿಯೇಬಿಟ್ಟರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X