ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುಗಳ ಮೀರಿಸಿದ ಪೂರ್ಣಪ್ರಜ್ಞರಿಗೆ ಒಲಿದ ಪೀಠ!

By Staff
|
Google Oneindia Kannada News


ಶಿಷ್ಯನ ಅಲೌಕಿಕ ಪ್ರತಿಭೆ ಕಂಡು ಗುರುಗಳನ್ನು ಕಾಡುತ್ತಿದ್ದ ಇನ್ನೊಂದು ಸಮಸ್ಯೆಗೆ ಪರಿಹಾರ ದೊರೆಯಿತು. ತಮ್ಮ ಪೀಠವನ್ನು ಯಾವ ಶಿಷ್ಯನಿಗೆ ಕೊಡಬೇಕೆಂಬ ಚಿಂತೆ ಅವರನ್ನು ಆವರಿಸಿತ್ತು. ‘ಸಕಲಗುಣಭರಿತನಾದ ಈ ಪೂರ್ಣಪ್ರಜ್ಞನೇ ತಮ್ಮ ಉತ್ತರಾಧಿಕಾರಿಯಾಗಲು ಯೋಗ್ಯನು’ ಎಂಬ ಖಚಿತ ಉತ್ತರ ಅವರಿಗೆ ದೊರೆಯಿತು.

ಗುರುಗಳು ತಡಮಾಡದೆ ಒಂದು ಶುಭ ಮುಹೂರ್ತವನ್ನು ಆರಿಸಿ ಶಿಷ್ಯನನ್ನು ವೇದಾಂತ ಪೀಠದಮೇಲೆ ಕುಳ್ಳಿರಿಸಿ, ಮಸ್ತಕದ ಮೇಲೆ ಸಾಲಿಗ್ರಾಮಗಳನ್ನಿಟ್ಟು, ಶಂಖದಲ್ಲಿ ನೀರು ತುಂಬಿಸಿ, ಪುರುಷಸೂಕ್ತಾದಿ ಮಂತ್ರಗಳನ್ನು ಪಠಿಸುತ್ತ ಅಭಿಷೇಕ ಮಾಡಿ, ‘ಆನಂದತೀರ್ಥ’ ಎಂಬ ನಾಮದಿಂದ ಕರೆದರು. ಪೂರ್ಣಪ್ರಜ್ಞ ಇದು ಆಶ್ರಮನಾಮವಾದರೆ, ಆನಂದತೀರ್ಥ ಇದು ಪೀಠನಾಮವಾಯ್ತು. ಮೊದಲನೆಯದು ದಶಪ್ರಮತಿ ಎಂಬ ವೈದಿಕ ನಾಮದ ಅರ್ಥವಾದರೆ, ಎರಡನೆಯದು ‘ಮಧ್ವ’ ಎಂಬುದರ ವ್ಯಾಖ್ಯಾನವಾಯಿತು.

ಶ್ರೀ ಮಧ್ವರು ಪೀಠವನ್ನೇರಿದ ಹೊಸತರಲ್ಲಿ ಅಚ್ಯುತಪ್ರೇಕ್ಷರ ಯತಿಮಿತ್ರನೊಬ್ಬ ತನ್ನ ಶಿಷ್ಯರೊಂದಿಗೆ ಬಂದ, ಪೂರ್ಣಪ್ರಜ್ಞರನ್ನು ವಾದಿಸಿ ಗೆಲ್ಲಲು ಬಯಸಿದ. ತರ್ಕವನ್ನು ಸಾಧಕ ಬಾಧಕವಾಗಿ ಬಳಸಬಹುದು ಎಂಬ ಆಶಯದಿಂದ ಯುಕ್ತಿಯಾಂದನ್ನು ಮುಂದಿಟ್ಟ. ‘‘ಈ ಜಗತ್ತು ಮಿಥ್ಯೆ, ದೃಶ್ಯವಾಗಿರುವುದರಿಂದ, ಶುಕ್ತಿರಜತದಂತೆ.’’ ಇದನ್ನು ಮಧ್ವರು ನಿರಾಕರಿಸುತ್ತ, ‘‘ ಇದು ಸರಿಯಲ್ಲ. ಕಂಡದ್ದೆಲ್ಲಾ ಮಿಥ್ಯೆ ಎಲ್ಲಾಗಿದೆ? ಶುಕ್ತಿಯು ರಜತದಂತೆ ತೋರಿದ್ದು ಮಿಥ್ಯೆ ಇರಬಹುದು. ಶುಕ್ತಿಯಾಗಿಯೇ ತೋರುವ ಶುಕ್ತಿ ಹಾಗೂ ರಜತವಾಗಿಯೇ ತೋರುವ ರಜತ ಸತ್ಯವೇ ಅಲ್ಲವೇ? ಸರಿಯಾಗಿ ತೋರಿದ್ದು ಸತ್ಯವಾಗುವುದೇ ಹೊರತು ಮಿಥ್ಯೆಯಾಗುವುದಿಲ್ಲ. ಮಿಥ್ಯೆಯಾದದ್ದು ಸರಿಯಾಗಿ ತೋರುವುದೂ ಇಲ್ಲ. ಆದ್ದರಿದ ತೋರಿದ್ದು ಮಿಥ್ಯೆ ಎಂಬ ವಾದವೇ ಮಿಥ್ಯೆ’’ ಎಂದರು.

ತರ್ಕವೇನೇ ಇದ್ದರೂ ಸ್ವತಂತ್ರ ಪ್ರಮಾಣ ಎನ್ನಿಸದು. ಐಂದ್ರಿಯಕ ವಿಷಯಗಳಲ್ಲಿ ಪ್ರತ್ಯಕ್ಷದ ಆಸರೆ ಬೇಕು, ಅತೀಂದ್ರಿಯ ವಿಷಯಗಳಲ್ಲಿ ಆಗಮದ ನೆರವು ಅನಿವಾರ್ಯ. ತರ್ಕ ಕುತರ್ಕ ಆಗುವ ಸಾಧ್ಯತೆ ಇದೆ. ಅನುಮಾನ ಹೆಸರೇ ಸೂಚಿಸುವಂತೆ ‘ಅನುಮಾನ’. ಅದು ಪ್ರತ್ಯಕ್ಷ, ಆಗಮಗಳಂತೆ ಎಂದೂ ಸ್ವತಂತ್ರ ಪ್ರಮಾಣ ಎನಿಸದು. ಮಧ್ವರು ಅನುಮಾನದ ಬಗ್ಗೆ ನೀಡಿದ ವ್ಯಾಖ್ಯೆ ಪ್ರಮಾಣ ಪ್ರಕ್ರಿಯೆಯ ಬಗ್ಗೆ ಹೊಸಬೆಳಕನ್ನು ಚೆಲ್ಲಿತ್ತು. ಇವರ ಚಿಂತನ ಸರಣಿಯಿಂದ ಪ್ರಭಾವಿತರಾದವರು ಮಧ್ವರಿಗೆ ‘ಅನುಮಾನತೀರ್ಥ’ ಎಂದೂ ಕರೆದರು.

ಬೌದ್ಧಮತದ ಅನುಯಾಯಿಯಾದ ಬುದ್ಧಿಸಾಗರ ಎಂಬವ ತನ್ನ ಶಿಷ್ಯ ವಾದಿಸಿಂಹನೊಡನೆ ಉಡುಪಿಗೆ ಬಂದನು. ಇಬ್ಬರೂ ಮಧ್ವರೊಡನೆ ವಾದಮಾಡಿದರು. ಇಬ್ಬರೂ ಸೋತರು. ವಾದಿಸಿಂಹ ಗ್ರಾಮಸಿಂಹನಾದರೆ, ಜ್ಞಾನಸಾಗರ ಜ್ಞಾನಸೂರ್ಯನಂತಿರುವ ಪೂರ್ಣಪ್ರಜ್ಞರ ಪ್ರಖರತೇಜ ತಡೆಯದೆ ಬತ್ತಿಹೋದ. ‘ಇಂದು ವಾದ ಸಾಕು, ನಾಳೆ ಮತ್ತೆ ಬರುವೆವು’ ಎಂದವರು ನಾಪತ್ತೆ, ಊರುಬಿಟ್ಟೇ ಹೋಗಿದ್ದರು.

ಪಾಠಪ್ರವಚನದಲ್ಲಿ ಶಂಕರಭಾಷ್ಯದ ಪ್ರಬಲದೋಷಗಳನ್ನು ಪೂರ್ಣಪ್ರಜ್ಞರು ತೋರಿಸಿದಾಗ ಶ್ರೋತೃಗಳಲ್ಲಿ ತತ್ತ್ವಜಿಜ್ಞಾಸೆ ಮೂಡಿತು. ‘ದೋಷವೇನೋ ತೋರಿಸಿದಿರಿ, ನಿಜವಾದ ಅಭಿಪ್ರಾಯ ಮಂಡಿಸಲಿಲ್ಲ’ ಎಂದಾಗ ಅವರು ವಿವರಿಸಿದ ವ್ಯಾಸ ಸಮ್ಮತ ವಿವರಣೆಯೇ ಅವರು ರಚಿಸಲಿದ್ದ ಬ್ರಹ್ಮಸೂತ್ರ ಭಾಷ್ಯಕ್ಕೆ ಪೂರ್ವರಂಗವಾಯಿತು. ತಂದೆಯಾದ ಮಧ್ಯಗೇಹರಿಗೆ ಮಧ್ವದರ್ಶನವಾಯ್ತು. ‘ವೈಷ್ಣವ ಮತವನ್ನು ಸ್ಥಾಪಿಸುವೆ’ ಎಂದು ಹೇಳುತ್ತ ಕೈಯಲ್ಲಿ ಹಿಡಿದ ಕೋಲನ್ನು ನೆಲದಲ್ಲಿ ನೆಟ್ಟು ಚಿಗುರಿಸಿ ಸಸಿ ಮಾಡಿದ ಮಗನ ಪವಾಡ ನೆನಪಿಗೆ ಬಂತು. ಅದು ಸತ್ಯವಾಗುವುದನ್ನು ಕಣ್ಣಾರೆ ಕಾಣತೊಡಗಿದರು.

ಅಚ್ಯುತಪ್ರೇಕ್ಷರೊಂದಿಗೆ ಸಂಚರಿಸುವಾಗ ವಿಷ್ಣುಮಂಗಲ ಕ್ಷೇತ್ರದಲ್ಲಿ ಒಂದು ಮನೆಯಲ್ಲಿ ಭಿಕ್ಷೆ ನಡೆದಾಗ ಶ್ರೀ ಮಧ್ವರನ್ನು ಪರೀಕ್ಷಿಸಲು, ಭೋಜನವಾದ ನಂತರ ಎರಡುನೂರು ಬಾಳೆಯ ಹಣ್ಣುಗಳನ್ನು ಯಜಮಾನ ತಂದಿಟ್ಟು ಸ್ವೀಕರಿಸಲು ಬಿನ್ನವಿಸಿದಾಗ, ಎಲ್ಲ ಬಾಳೆಹಣ್ಣುಗಳನ್ನು ಅವರು ಭಕ್ಷಿಸಿದರು. ನಂತರ ಕೂಡ ಅವರ ಹೊಟ್ಟೆ ಮುಂಚಿನಂತೆ ತೆಳ್ಳಗೆ ಇತ್ತು. ಇದರ ರಹಸ್ಯವೇನೆಂದು ಕೇಳಿದಾಗ ಪೂರ್ಣಪ್ರಜ್ಞರು ಮಂದಹಾಸದಿಂದ, ತಮ್ಮ ‘ಉದರದಲ್ಲಿ ಜ್ವಲಿಸುವ ಅಗ್ನಿ ಹೆಬ್ಬೆರಳು ಗಾತ್ರದ್ದು’ ಎಂದು ಹೇಳಿದ್ದರಂತೆ. ಅಂತಹ ಶಕ್ತಿ ಇದ್ದ ಭೀಮಸೇನನಂತೆ ಇವರೂ ವೃಕೋದರರಾಗಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X