• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುರುಗಳ ಮೀರಿಸಿದ ಪೂರ್ಣಪ್ರಜ್ಞರಿಗೆ ಒಲಿದ ಪೀಠ!

By Staff
|

ಗುರುಗಳ ತಪ್ಪುಗಳನ್ನು ಎತ್ತಿಹಿಡಿದು, ಜ್ಞಾನಸೂರ್ಯನಂತೆ ಪ್ರಜ್ವಲಿಸುತ್ತಿದ್ದ ಪೂರ್ಣಪ್ರಜ್ಞರ ವಿದ್ವತ್ತು, ವಾದ ಮತ್ತು ಬಲ ಅತ್ಯುದ್ಫುತ! -ಈ ಅಂಶಗಳನ್ನು ಒಳಗೊಂಡಿರುವ ಡಾ. ಪ್ರಭಂಜನಾಚಾರ್ಯರ ‘ಶ್ರೀಪೂರ್ಣಪ್ರಜ್ಞ ದರ್ಶನ’ ಕೃತಿ ಪರಿಚಯ ಈ ವಾರವೂ ಮುಂದುವರೆದಿದೆ...

  • ಡಾ।‘ಜೀವಿ’ ಕುಲಕರ್ಣಿ, ಮುಂಬಯಿ

jeevi65@gmail.com

Child Madhwacharya arguing with the Guruಶ್ರೀ ಪೂರ್ಣಪ್ರಜ್ಞರು ಸನ್ಯಾಸ ಸ್ವೀಕರಿಸಿ ನಲವತ್ತು ದಿನಗಳು ಕಳೆದಿರಲಿಲ್ಲ. ಆಗಲೇ ಅವರ ಕೀರ್ತಿ ದಶದಿಶೆಗಳಲ್ಲಿ ಪಸರಿಸಿತ್ತು. ಹತ್ತು ವರ್ಷ ತುಂಬಿದ ಬಾಲಕ ಪೂರ್ಣಪ್ರಜ್ಞನ ವಿದ್ವತ್ತು ಪರೀಕ್ಷಿಸಿನೋಡಬೇಕೆಂದು ಪಂಡಿತರ ತಂಡವೊಂದು ಸಿದ್ಧವಾಯಿತು. ಅವರ ನಾಯಕ ವಾಸುದೇವಪಂಡಿತನೆಂಬ ಖ್ಯಾತ ವಿದ್ವಾಂಸ. ಅವನು ಪೂರ್ಣಪ್ರಜ್ಞರನ್ನು ವಾದಕ್ಕೆ ಆಹ್ವಾನಿಸಿದ. ಆದರೆ ಬಂದ ದಾರಿಗೆ ಸುಂಕವಿಲ್ಲ ಎಂದು ಮರಳಿಹೋದ. ಜಯಪತ್ರವನ್ನೂ ಬರೆದು ಕೊಟ್ಟ. ಹುಲಿಯಂತೆ ಗದರುತ್ತ ಬಂದ , ನರಿಯಂತೆ ಬಾಲಮುದುರಿಸಿಕೊಂಡು ತೆರಳಿದ.

ಇದಾದ ಮೇಲೆ ಒಂದು ಪ್ರಸಂಗ. ಗುರುಗಳಾದ ಅಚ್ಯುತಪ್ರೇಕ್ಷರು ‘ಇಷ್ಟಸಿದ್ಧಿ’ ಎಂಬ ಗ್ರಂಥದ ಪಾಠ ಪ್ರಾರಂಭಿಸಿದ್ದರು. ಗ್ರಂಥಕಾರ ವಿಮುಕ್ತಾತ್ಮಾ ಎಂಬ ಯತಿ ( ಕ್ರಿ.ಶ. 950). ಆ ಗ್ರಂಥದಲ್ಲಿ ಜಗನ್ಮಿಥ್ಯಾದಿ ಅದ್ವೈತ ಮತದ ಅನೇಕ ಪ್ರಮೇಯಗಳ ನಿರೂಪಣೆ ಇತ್ತು. ಆರಂಭದ ಶ್ಲೋಕದಲ್ಲಿ 32 ಅಕ್ಷರಗಳಿದ್ದವು. ಅದರಲ್ಲಿ 32 ದೋಷಗಳನ್ನು ಶಿಷ್ಯ ಪೂರ್ಣಪ್ರಜ್ಞ ಕಂಡ.

ಗುರುಗಳಿಗೆ ಕಾಣದ ದೋಷಗಳನ್ನು ಶಿಷ್ಯನು ಕಂಡಾಗ, ಸ್ವಾಭಾವಿಕವಾಗಿ ಗುರುಗಳ ಶ್ರದ್ಧೆಯ ಬೇರು ಅಲ್ಲಾಡಿದಂತಾಗಿತ್ತು. ಅವರು ಸೋಲನ್ನೊಪ್ಪಲಿಲ್ಲ. ಶಿಷ್ಯನೆತ್ತಿದ ಪ್ರಶ್ನೆಗಳಿಗೆ ‘ಮುಂದೆ ಗ್ರಂಥದಲ್ಲಿ ಪರಿಹಾರವಿದೆ’ ಎಂದರು. ಆದರೆ ಶಿಷ್ಯ ಸುಮ್ಮನಿರುತ್ತಾನೆಯೇ? ‘ಆ ಉತ್ತರ ಈಗಲೇ ಹೇಳಿ’ ಎಂದು ಪಟ್ಟು ಹಿಡಿದ. ಗುರುಗಳಿಗೆ ಇಕ್ಕಟ್ಟಿನ ಪರಿಸ್ಥಿತಿ, ಅವರಿಗೆ ಕೋಪ ಬಂತು.

‘ಶೇಷಂ ಕೋಪೇನ ಪೂರಯೇತ್‌’ ಎನ್ನುವ ಪ್ರಸಂಗ. ‘‘ಪೂರ್ಣಪ್ರಜ್ಞರೇ, ನಿಮ್ಮಂತಹರಿಗೆ ಪಾಠ ಹೇಳುವ ಯೋಗ್ಯತೆ ನನ್ನಲ್ಲಿಲ್ಲ’’ ಎಂದರು. ಅದು ಕೋಪದ ಮಾತಾಗಿದ್ದರು ಸತ್ಯವೇ ಆಗಿತ್ತು. ಗುರುಗಳು ಪಾಠ ಹೇಳುವುದನ್ನೇ ನಿಲ್ಲಿಸಿದರು.

ಶ್ರೀಮಠದಲ್ಲಿ ಪಾಠಪ್ರವಚನ ನಿರಂತರ ಸಾಗುತ್ತಿರಬೇಕು. ಅದುವೆ ಮಠಕ್ಕೆ ಶೋಭೆ. ಜ್ಞಾನಾರ್ಥಿಗಳಿಂದ ಪಾಠಪ್ರವಚನಕ್ಕಾಗಿ ಒತ್ತಡ ಬರತೊಡಗಿತು. ಆ ಹೊಣೆ ಹೊರಲು ಯಾರೂ ಮುಂದೆ ಬರಲಿಲ್ಲ. ಪೂರ್ಣಪ್ರಜ್ಞರೇ ಮುಂದೆ ಬಂದರು. ‘ಇಷ್ಟಸಿದ್ಧಿ’ಯಂತಹ ಮಾಯಾವಾದ ಗ್ರಂಥಗಳೇ ಬಳಕೆಯಲ್ಲಿದ್ದ ಕಾಲವದು. ಇವರು ಅಂಥ ಕೃತಿಯ ಪಾಠ ಹೇಳಲು ಪ್ರಾರಂಭಿಸಿದಾಗ ಎಲ್ಲರಿಗೂ ಅಚ್ಚರಿ. ಪಾಠ ಹೇಳಿದರು ‘ದಶಪ್ರಮತಿ’ ಎಂಬ ಖ್ಯಾತಿ ಪಡೆದರು. ಅಸಂಖ್ಯ ಜನ ಬಂದು ಅವರ ಪ್ರವಚನ ಕೇಳಿದರು.

ಸ್ವತಃ ವಿದ್ವಾಂಸರಾದವರೂ ಕೂಡ ಇದು ತಮಗೆ ಸಿಕ್ಕ ಭಾಗ್ಯವೆಂದು ಬಗೆದು ವಿಷಯ ಸಂಗ್ರಹಿಸತೊಡಗಿದರು. ಇದಾದ ಮೇಲೆ ಪಾಠ ನಿಲ್ಲಿಸಿದ್ದ ಗುರು ಅಚ್ಯುತಪ್ರೇಕ್ಷರು ಮತ್ತೆ ಪಾಠ ಪ್ರಾರಂಭಿಸಿದರು. ಭಾಗವತದ ಪಾಠ. ಶಿಷ್ಯವೃಂದದಲ್ಲಿ, ಅಗ್ರಸ್ಥಾನದಲ್ಲಿ, ಪೂರ್ಣಪ್ರಜ್ಞರು ಆಸೀನರಾಗಿದ್ದರು. ಒಂದೇ ಗ್ರಂಥದ ಹಲವಾರು ಪಾಠಗಳು ಅಲ್ಲಿದ್ದವು. ಇದರಲ್ಲಿ ಸರಿಯಾದ ಪಾಠ ಯಾವುದು ಎಂಬ ಪ್ರಶ್ನೆ ಉದ್ಭವಿಸಿತು. ಒಂದು ಪಾಠದ ಮೇಲೆ ಬೆರಳಿಡುತ್ತ, ‘‘ಇದು ಸರಿಯಾದ ಪಾಠ, ಉಳಿದವು ಲಿಪಿಕಾರರ ಪ್ರಮಾದಗಳು.’’ ಎಂದರು. ಇದು ಗುರುಗಳ ಸೋಲಾಗಿತ್ತು. ಅವರು ಸೋಲೊಪ್ಪಲಿಲ್ಲ, ಪ್ರಶ್ನಿಸಿದರು, ‘‘ಸಮಗ್ರ ಭಾಗವತದಲ್ಲಿ ವೇದವ್ಯಾಸ ಸಮ್ಮತ ಪಾಠ ನಿನಗೆ ತಿಳಿದಿದೆಯೇ?’’ ಎಂದು.

‘ವಿದ್ಯಾವತಾಂ ಭಾಗವತೇ ಪರೀಕ್ಷಾ’, ನಿಜ ವಿದ್ವತ್ತಿನ ಪರೀಕ್ಷೆ ಭಾಗವತದಲ್ಲಿದೆ. ಭಾಗವತದ ಪಂಚಮಸ್ಕಂದದ ಬಹುಭಾಗ ಗದ್ಯವಾಗಿದೆ. ಪದ್ಯಕ್ಕಿಂತ ಅರ್ಥಮಾಡಲು ಗದ್ಯವೇ ದುಸ್ತರ. ಪಂಚಮಸ್ಕಂದದ ಪಾಠ ಹೇಳಲು ಗುರುಗಳ ಆಜ್ಞೆಯಾಯಿತು. ಶಿಷ್ಯನ ಕೈಯಲ್ಲಿ ಪುಸ್ತಕವಿಲ್ಲ. ಆದರೆ ಪಾಠ ನಿರರ್ಗಳವಾಗಿ ಸಾಗಿತ್ತು. ಬಾಯಿಯಿಂದ ಹೊರಬಿದ್ದದ್ದು ಬರಿ ಶಬ್ದಗಳಲ್ಲ, ಜೊತೆಗೆ ಅರ್ಥಾನುಸಂಧಾನವೂ ಇತ್ತು. ಗುರುಗಳು ಶಿಷ್ಯನನ್ನು ಕೇಳಿದರು, ‘‘ ಈ ಜನ್ಮದಲ್ಲಿ ನೀವು ಭಾಗವತ ಓದಿದ್ದು ನಾನು ನೋಡಿಲ್ಲ. ನಿಮಗೆ ಪೂರ್ಣಜ್ಞಾನ ಹೇಗೆ ಬಂತು?’’ ಎಂದಾಗ ಶಿಷ್ಯ ಉತ್ತರಿಸಿದ,‘‘ ಇದೆಲ್ಲವನ್ನು ನಾನು ಹಿಂದಿನ ಜನ್ಮದಲ್ಲಿ ಓದಿದ್ದೆ. ಜೊತೆಗೆ ಇತರ ಗ್ರಂಥ, ಇತರ ಶಾಸ್ತ್ರ ಕೂಡ ಓದಿದ್ದೆ’’ ಎಂದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more