• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮದ್ದು ಕೊಡಬೇಕಾಗಿರುವುದು ರೋಗಕ್ಕಲ್ಲ ರೋಗಿಗೆ!

By Staff
|

An interview with Homeopathy specialist BT Rudreshರೋಗಿಗಳನ್ನು ಪರೀಕ್ಷಿಸುವಾಗ ವೈದ್ಯರು ಪತ್ತೆದಾರರಂತೆ ಕೆಲಸ ಮಾಡಬೇಕಾಗುತ್ತದೆ. ರೋಗವನ್ನು ಪ್ರತ್ಯೇಕವಾಗಿ ಪರಿಗಣಿಸದೇ ಅವನ ದೇಹ, ಮನ, ಬುದ್ಧಿಯನ್ನು ಒಟ್ಟಾರೆ ಪರಿಗಣಿಸಲಾಗುತ್ತದೆ ಎನ್ನುವ ಹೋಮಿಯೋಪತಿ ತಜ್ಞ ಡಾ. ಬಿಟಿ ರುದ್ರೇಶ್ ಅವರು ಹೋಮಿಯೋಪತಿ ಬಗೆಗಿನ ತಥ್ಯ ಅಲೋಪತಿ ಬಗೆಗಿನ ಮಿಥ್ಯಗಳನ್ನು 'ಜೀವಿ' ಕುಲಕರ್ಣಿ ಅವರಿಗೆ ನೀಡಿದ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ.

ಕರ್ನಾಟಕದಲ್ಲಿ ಹೋಮಿಯೋಪತಿ' ಎಂದರೆ ಡಾ| ರುದ್ರೇಶ್' ಎನ್ನುವಷ್ಟು ಅವರ ಹೆಸರು ಮನೆಮಾತಾಗಿದೆ. ಇದರ ಹಿಂದೆ ಅವರ ತಪಸ್ಸಿದೆ, ಪರಿಶ್ರಮವಿದೆ, ಸಂಶೋಧನೆ ಇದೆ, ಜನಸೇವೆಯಲ್ಲಿ ತೊಡಗಿರುವ ಆದರ್ಶವಿದೆ. ಎಲ್ಲ ಮಾಧ್ಯಮಗಳಲ್ಲಿ(ಪತ್ರಿಕೆ, ಬಾನುಲಿ, ದೂರದರ್ಶನಗಳಲ್ಲಿ) ಹೋಮಿಯೋಪತಿಯ ಹಿರಿಮೆಯ ಬಗ್ಗೆ, ಅದರ ಸಿದ್ಧಿ ಸಾಧನೆಗಳ ಬಗ್ಗೆ ಸ್ಪಂದಿಸಿದ ಹೋಮಿಯೋಪತಿ ಡಾಕ್ಟರ್ ಎಂದರೆ ರುದ್ರೇಶರಲ್ಲದೆ ಇನ್ನೊಬ್ಬರಿಲ್ಲ. ಅಲಂಕಾರಿಕವಾಗಿ ಹೇಳುವುದಾದರೆ ಇದು ಅತಿಶಯೋಕ್ತಿಯಲ್ಲ, ಸ್ವಭಾವೋಕ್ತಿ.

ಅತ್ಯಧಿಕ ಕೆಲಸಗಳಲ್ಲಿ ಏಕಕಾಲಕ್ಕೆ ಮಗ್ನರಾಗಿರುವ ಡಾ| ರುದ್ರೇಶರ ಸಂದರ್ಶನ ಪಡೆಯುವುದು ಸುಲಭದ ಕೆಲಸವಾಗಿರಲಿಲ್ಲ. ಅವರನ್ನು ಕಾಣುವ ಹೆಬ್ಬಯಕೆಯನ್ನು ತೋರಿದಾಗ ಒಂದು ಗಂಟೆ ನನಗಾಗಿ ಬಿಡುವು ಮಾಡಿಕೊಳ್ಳುವುದಾಗಿ ಹೇಳಿದರು. ನಾನು 9.30 ಅವರ ಮನೆಗೆ ತಲುಪಬೇಕಾಗಿತ್ತು. ಬೆಂಗಳೂರ ಟ್ರ್ಯಾಫಿಕ್‌ನಿಂದಾಗಿ ಅರ್ಧ ಗಂಟೆ ತಡವಾಗಿ ತಲುಪಿದೆ. ನಾನು ಕರೆಗಂಟೆ ಬಾರಿಸಿದಾಗ ಡಾಕ್ಟರರೇ ಬಾಗಿಲು ತೆರೆದರು. ನನ್ನ ಬರವಿಗಾಗಿ ಕಾಯುತ್ತಿದ್ದುದಾಗಿ ಹೇಳಿದರು. ಅವರು ಬ್ರೆಕ್‌ಫಾಸ್ಟ್ ಮಾಡಿರಲಿಲ್ಲ. ನಾನು ದ್ವಾದಸಿಯ ಊಟ ಮಾಡಿಕೊಂಡೆ ಹೊಗಿದ್ದೆ. ನೀವು ಬ್ರೆಕ್‌ಫಾಸ್ಟ್ ಮಾಡಿ' ಅಂದೆ. ಅದು ಇರಲಿ, ಎಂದು ಅವರು ತಿಂಡಿಗೆ ಬದಲು ಮೊದಲು ಕುಳಿತರು. ಹನ್ನೆರಡಕ್ಕೆ ಅವರು ಊಟ ಮಾಡಿ ಡಿಸ್ಪೆನ್ಸರಿಗೆ ಹೋಗಬೇಕಿತ್ತು. ಮಾತಿನ ಭರದಲ್ಲಿ ಹೇಗೆ ಸಮಯ ಕಳೆಯಿತು ನಮಗೆ ಗೊತ್ತಾಗಲೇ ಇಲ್ಲ. ನಾವು ಮೂರು ಗಂಟೆ ಸಂಭಾಷಣೆಯಲ್ಲಿ ತೊಡಗಿದ್ದೆವು. ಅವರ ಅರ್ಧಾಂಗಿ ಸ್ವರ್ಣಲತೆಯವರು ನೆನಪಿಸಿದ ಮೇಲೆ 1 ಗಂಟೆಯ ನಂತರ ಊಟದ ಶಾಸ್ತ್ರ' ಮುಗಿಸಿದರು. ಅವರು ಡೈನಿಂಗ್ ಟೇಬಲ್ ಮೇಲೆ ಕೂತಾಗ ಕೂಡ ನಮ್ಮ ಮಾತು ಮುಂದುವರಿದಿತ್ತು. ಅವರೊಂದಿಗೆ ಕಳೆದ ಸಮಯ ನನಗೆ ಅವಿಸ್ಮರಣಿಯವಾಗಿತ್ತು. ಕೆಲವು ಆಯ್ದ ಮಾತುಗಳನ್ನಿಲ್ಲಿ ಸಂಗ್ರಹಿಸುವೆ.

ಪ್ರ: ಹೋಮಿಯೋಪತಿ ಎಂದರೆ ಅಸಡ್ಡೆಯಿಂದ ಜನರು ಕಾಣುವ ದಿನಗಳಲ್ಲಿ ನೀವು ಅದರ ವ್ಯಾಸಂಗದಲ್ಲಿ ತೊಡಗಿದ ಕಾರಣವೇನು?

ಉ: ನಮ್ಮ ತಂದೆ ಕೃಷಿಕರು. ಅವರಿಗೆ ಒಂಭತ್ತು ಜನ ಮಕ್ಕಳು. ನಾನೇ ಹಿರಿಯ. ನಾನು ನೌಕರಿ ಮಾಡುವುದು ಅವರಿಗೆ ಸಮ್ಮತವಿರಲಿಲ್ಲ. ನಾನು ವಕೀಲನಾಗಿಯೋ, ವೈದ್ಯನಾಗಿಯೋ ಸ್ವತಂತ್ರ ಉದ್ಯೋಗ ಮಾಡಬೇಕೆಂಬುದು ಅವರ ಅಭಿಲಾಷೆಯಾಗಿತ್ತು. ನನಗೆ ವಕೀಲಿ ವೃತ್ತಿ ಇಷ್ಟವಿರಲಿಲ್ಲ. ಡಾಕ್ಟರನಾಗಲು ಬಯಸಿದೆ. ಮನೆಯಲ್ಲಿ ಬಡತನ. ಅಲೋಪತಿ ಶಿಕ್ಷಣ ಪಡೆಯಲು ಸಾಧ್ಯವಿರಲಿಲ್ಲ. ಆದ್ದರಿಂದ ಹೋಮಿಯೋಪತಿ ಕಾಲೇಜು ಸೇರಿದೆ. ಅಲ್ಲಿ ಕೂಡ ಆರ್ಥಿಕ ತೊಂದರೆ ಇತ್ತು. ಒಂದು ಪಾರ್ಟ್‌ಟೈಂ ನೌಕರಿ ಹುಡುಕಿದೆ. ಡಾ| ಕೃಷ್ಣಮೂರ್ತಿ ಎಂಬ ಹೋಮಿಯೋಪತಿ ಡಾಕ್ಟರ್ ಸಹಾಯಕನಾಗಿ ಕೆಲಸ ಮಾಡಿದೆ. ಈ ಪದ್ಧತಿಯ ಹಿರಿಮೆಯ ಬಗ್ಗೆ ನನ್ನಲ್ಲಿ ಅಲ್ಲಿ ವಿಶ್ವಾಸ ಮೂಡಿತು.

ಪ್ರ: ನಾನು ಕಂಡ ಹೆಚ್ಚಿನ ಹೋಮಿಯೋಪತಿ ಡಾಕ್ಟರರು ಮತಾಂತರಗೊಂಡು ಅಲೋಪತಿ ಪ್ರ್ಯಾಕ್ಟಿಸ್ ಶುರು ಮಾಡುತ್ತಾರೆ. ಇಂಜೆಕ್ಶನ್ ಕೊಟ್ಟು ಹೆಚ್ಚು ಹಣ ಗಳಿಸುವ ಮೋಹಕ್ಕೆ ಒಳಗಾಗುತ್ತಾರೆ. ಇದಕ್ಕೆ ಆಯುರ್ವೇದ ಡಾಕ್ಟರರೂ ಹೊರತಲ್ಲ. ನಿಮಗೂ ಅಲೋಪತಿಯ ಮೋಹ ಕಾಡಲಿಲ್ಲವೇ?

ಉ: ಅಲೋಪತಿಯ ಮೋಹ, ಹೆಚ್ಚು ಹಣ ಗಳಿಸುವ ಮೋಹ, ನನ್ನನ್ನು ಕಾಡಿಲ್ಲ. ಹಾಗೆ ನೋಡಿದರೆ, ನಮ್ಮ ಹೋಮಿಯೋಪತಿಯ ಜನಕ ಸ್ಯಾಮ್ಯುವೆಲ್ ಹಾನಿಮನ್ ಮೂಲತಃ ಅಲೋಪತಿ ಡಾಕ್ಟರರೇ ಆಗಿದ್ದರು. ಇಂಗ್ಲಿಷ್ ಔಷಧ ಚಿಕಿತ್ಸಾ ಪದ್ಧತಿಗೆ ಅಲೋಪತಿ' ಎಂಬ ಹೆಸರು ಕೊಟ್ಟವರು ಹಾನಿಮನ್ ಎಂಬ ಸಂಗತಿ ಬಹಳ ಜನರಿಗೆ ಗೊತ್ತಿಲ್ಲ. 1779ರಲ್ಲಿ ಜರ್ಮನಿಯ ಉರಾಲ್ಡನ್ ವಿಶ್ವವಿದ್ಯಾಲಯದಿಂದ ಹಾನಿಮನ್ ವೈದ್ಯಕೀಯ ಪದವಿಯನ್ನು ಪಡೆದರು. ಗೋಮರ್ನ್ ನಗರದಲ್ಲಿ ವೈದ್ಯಕೀಯ ವೃತ್ತಿಯನ್ನು ಆರಂಭಿಸಿದರು. ಎಲ್ಲದಕ್ಕೂ ಒಂದೇ ಮಂತ್ರ ಎಂಬಂತೆ ಔಷಧಿ ಕೊಟ್ಟಾಗ ಒಂದು ಕಾಯಿಲೆ ವಾಸಿಯಾದಾಗ ಇನ್ನೊಂದು ಉತ್ಪನ್ನವಾಗುವುದನ್ನು ಕಂಡರು. ಈ ಪದ್ಧತಿಯ ಬಗ್ಗೆ ಅಸಮಾಧಾನ ತಾಳಿದರು. ಭ್ರಮನಿರಸನಗೊಂಡು ಹೊಸ ಪದ್ಧತಿಯ ಆವಿಷ್ಕಾರದ ಪಥದಲ್ಲಿ ಮುಂದುವರಿದು ಸಂಶೋಧನೆ ಕೈಕೊಂಡರು. ಹಾನಿಮನ್ ಅಲೋಪತಿ ಔಷಧಿಕೋಶ ಓದುತ್ತಿರುವಾಗ ಸಿಂಕೋನಾ ಸಸ್ಯದ ತೊಗಟೆಯಲ್ಲಿರುವ ಕಹಿ ಮಲೇರಿಯಾ ರೋಗವನ್ನು ಗುಣಪಡಿಸುತ್ತದೆ ಎಂಬ ವಿಷಯದ ಮೇಲೆ ಅವರ ಗಮನ ಹರಿಯಿತು. ಸಿಂಕೋನಾಕ್ಕಿಂತ ಕಹಿಯಾದ ಅನೇಕ ತೊಗಟೆಗಳಿದ್ದವು, ಅವುಗಳಿಂದ ಮಲೇರಿಯಾದ ಮೇಲೆ ಪರಿಣಾಮವಾಗುತ್ತಿರಲಿಲ್ಲ. ಸಿಂಕೋನಾದ ತೊಗಟೆಯ ಕಷಾಯ ಮಾತ್ರ ಏಕೆ ಮದ್ದಾಗಿದೆ ಎಂಬ ಪ್ರಶ್ನೆ ಅವರನ್ನು ಕಾಡತೊಡಗಿತು. ನಿರೋಗಿ ಮನುಷ್ಯನಿಗೆ ಆ ಕಷಾಯ ಕೊಟ್ಟಾಗ ಮಲೇರಿಯ ಲಕ್ಷಣಗಳು ಕಾಣತೊಡಗಿದವು. ಯಾವುದು ಉಂಟು ಮಾಡುತ್ತದೋ ಅದೇ ಗುಣಪಡಿಸುತ್ತದೆ'' ಎಂಬ ಹೋಮಿಯೋಪತಿಯ ಮೂಲಮಂತ್ರವನ್ನು ಆಗ ಕಂಡುಹಿಡಿದರು.

ಪ್ರ: ಅಲೋಪತಿ ಶಬ್ದದ ನಿಘಂಟುವಿನ ಅರ್ಥ ಹೀಗಿದೆ, ವ್ಯಾಧಿಕಾರಣವಾಗಿರುವ ದೇಹವ್ಯಾಪಾರಗಳಿಗೆ ಪ್ರತಿಯಾದ ವ್ಯಾಪಾರವನ್ನುಂಟು ಮಾಡಿ ವ್ಯಾಧಿಯನ್ನು ವಾಸಿಮಾಡುವ ವಿಧಾನ ಅಲೋಪತಿ.' ಇದು ವಿದೃಶ ಕ್ರಿಯಾಚಿಕಿತ್ಸೆ.'' ಆದರೆ ಹೋಮಿಯೋಪತಿ ಎಂದರೆ ಇದಕ್ಕೆ ವಿರುದ್ಧವಾದ ಪದ್ಧತಿ. ಇದು ಸದೃಶ ಕ್ರಿಯಾಚಿಕಿತ್ಸೆ'. ಇವೆರಡರ ಬಗ್ಗೆ ಸ್ವಲ್ಪ ಬೆಳಕು ಚೆಲ್ಲುವಿರಾ?

ಉ: ಅಲೋಪತಿಯಲ್ಲಿ ರೋಗ ಹೋಗಲಾಡಿಸಲು ಮದ್ದು ಕೊಡುತ್ತಾರೆ. ಒಂದು ರೋಗ ವಾಸಿಯಾದಾಗ ಮತ್ತೊಂದು ರೋಗ ಉಂಟಾಗುವ, ಇಲ್ಲವೆ ಪಾರ್ಶ್ವ ಪರಿಣಾಮ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೋಮಿಯೋಪತಿ ಔಷಧಿ ಪ್ರಯೋಗಿಸಿದಾಗ ಪಾರ್ಶ್ವ ಪರಿಣಾಮದ ಭಯವಿರುವುದಿಲ್ಲ. ನಾವು ರೋಗಿಯ ಮೇಲೆ ಔಷಧಿ ಕೊಡುತ್ತೇವೆ, ರೋಗಕ್ಕಲ್ಲ. ಇಲ್ಲಿ ಇಡೀ ದೇಹದ ಆರೋಗ್ಯ ಮರಳಿ ಪಡೆಯುವುದರಲ್ಲಿ ಹೆಚ್ಚಿನ ಲಕ್ಷ್ಯವಿರುತ್ತದೆ. ನಾವು ರೋಗಿಗಳನ್ನು ಪರೀಕ್ಷಿಸುವಾಗ ಪತ್ತೇದಾರರಂತೆ ಕೆಲಸ ಮಾಡುತ್ತೇವೆ. ದೇಹ ಮನ ಬುದ್ಧಿ ಇವುಗಳಿಂದಾದ ಮಾನವನನ್ನು ಒಟ್ಟಾರೆಯಾಗಿ ಪರೀಕ್ಷಿಸುತ್ತೇವೆ. ಬಂಗಾರದ ಕೀಲಿಕೈಯಿಂದ ಯಾವುದೇ ಬೀಗವನ್ನು ತೆರೆಯಲು ಬಾರದು. ರೋಗವೆಂಬ ಬೀಗಕ್ಕೆ ಔಷಧಿಯೆಂಬ ತಕ್ಕ ಕೀಲಿಕೈ ಬೇಕು. ಸಾವಿರಾರು ಔಷಧಿಗಳಲ್ಲಿ ಒಂದು ಮಾತ್ರ ಒಬ್ಬ ವ್ಯಕ್ತಿಗೆ ಯೋಗ್ಯವಾಗಿರುತ್ತದೆ. ಅದನ್ನು ಕಂಡುಹಿಡಿಯುವುದೇ ಒಳ್ಳೆಯ ಹೋಮಿಯೋಪತಿ ಡಾಕ್ಟರನ ಕೆಲಸ. ಸಾಮಾನ್ಯವಾದ ರೋಗವನ್ನು ವಿಭಜಿಸಿ ಒಂದೇ ಔಷಧಿ ನಾವು ಅಲೋಪತಿಯವರಂತೆ ಕೊಡುವುದಿಲ್ಲ. ಅವಳಿ ಮಕ್ಕಳಿಗೆ ಕೂಡ ಒಂದೆ ಕಾಯಿಲೆ ಆದಾಗ ಭಿನ್ನ ಔಷಧಿ ಕೊಡಬೇಕಾಗುತ್ತದೆ. ಹೋಮಿಯೋಪತಿಯ ಬೀಜ ಮಂತ್ರ ಲಾ ಆಫ್ ಸಿಮಿಲರ್ಸ್'. ಇದು ಪುರಾತನ ಭಾರತೀಯರಿಗೆ, ಗ್ರೀಕರಿಗೆ, ರೋಮನ್ನರಿಗೆ ತಿಳಿದಿತ್ತು. ವಿಷಸ್ಯ ವಿಷಮೌಷಧಂ', ಉಷ್ಣಂ ಉಷ್ಣೇನ ಶಮ್ಯತಿ' ಎನ್ನಲಾಗುತ್ತದೆ. ಈ ತತ್ವವನ್ನು ಆಧಾರವಾಗಿಟ್ಟುಕೊಂಡು ಹೊಸ ಔಷಧ ಪದ್ಧತಿಯನ್ನು 170 ವರ್ಷಗಳ ಹಿಂದೆ ರೂಪಿಸಿದ ಕೀರ್ತಿ ಡಾ| ಹಾನಿಮನ್ ಅವರಿಗೆ ಸಲ್ಲುತ್ತದೆ.

ಸಂದರ್ಶನದ ಮುಂದಿನ ಭಾಗ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more