ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

30X40 ಸೈಟಲ್ಲಿ ಮನೆ, ಅದರ ಸುತ್ತಲೂ ಔಷಧಿವನ!

By Staff
|
Google Oneindia Kannada News


ತೋಟದಲ್ಲಿ ಮನೆ ಕಟ್ಟುವುದಕ್ಕಿಂತ ಸಣ್ಣ ಸೈಟಿನ ಮನೆ ಸುತ್ತ ತೋಟ ನಿರ್ಮಿಸಿಕೊಳ್ಳುವುದು ಜಾಣತನ. ಆ ತೋಟದಲ್ಲಿ ಚಿಗುರುವ ಎಲೆ ಬಳ್ಳಿಗಳು ನಿಮ್ಮ ಮನೆಮಂದಿಯ ಆರೋಗ್ಯ ವೃದ್ಧಿಸಲಿ.



amurutaballi“ಮನೆಯಂಗಳದಲ್ಲಿ ಔಷಧಿವನ”* ಎಂಬ ಅಪರೂಪದ ಪುಸ್ತಕವನ್ನು ಮಿತ್ರ ರಮೇಶ ಉಡುಪ ಅವರು ನನಗೆ ಕೊಟ್ಟರು. ಈ ಪುಸ್ತಕದ ವಿಶೇಷವೆಂದರೆ ಇಬ್ಬರು ಮಹಿಳಾ ವೈದ್ಯರ ನಡುವಿನ ಮತ್ತು ನಿಸರ್ಗಚಿಕಿತ್ಸೆ ಹಾಗೂ ಆಯುರ್ವೇದದ ನಡುವಣ ಜುಗಲಬಂದಿ !

ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ನಿಸರ್ಗ ನಮಗೆ ಎಷ್ಟೊಂದು ಸುಲಭೋಪಾಯ ತೋರಿಸಿದೆ. ಆದರೆ ನಾವು ಆಧುನಿಕ ಔಷಧಿಯ ಮೋಹದಲ್ಲಿ ಇವನ್ನು ಕಡೆಗಣಿಸಿದ್ದೇವೆ. ಇದಕ್ಕೆ ಮುಖ್ಯವಾದ ಕಾರಣ ನಮ್ಮ ಅಜ್ಞಾನ ಮತ್ತು ಆಲಸ್ಯ. ‘ಮನೆಯಂಗಳದಲ್ಲಿ ಔಷಧಿವನ ಪುಸ್ತಕವು ಇಬ್ಬರು ಮಹಿಳಾ ಡಾಕ್ಟರರ ಪರಿಶ್ರಮ, ಪರಿಣತಿ ಮತ್ತು ವ್ಯಾಸಂಗದ ಫಲವಾಗಿದೆ. ಒಬ್ಬರು ಕೃಷಿತಜ್ಞರು, ಇನ್ನೊಬ್ಬರು ಆಯುರ್ವೇದದಲ್ಲಿ ಪರಿಣತರು.

ಡಾ.ಎಂ.ವಸುಂಧರಾ ಅವರು ಬೆಂಗಳೂರಿನ ‘ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ(ಜಿ.ಕೆ.ವಿ.ಕೆ) ಪ್ರಾಧ್ಯಾಪಕರು. ಡಾ. ವಸುಂಧರಾ ಭೂಪತಿ ಅವರು ಪ್ರಸಿದ್ಧ ಆಯುರ್ವೇದ ತಜ್ಞರು. ಇವರು ಆಯುರ್ವೇದಶಾಸ್ತ್ರದಲ್ಲಿ ಅತ್ಯುಚ್ಚ ಪದವಿಗಳನ್ನು ಗಳಿಸಿರುವರಲ್ಲದೆ ‘ವೈದ್ಯಲೋಕ’ ಎಂಬ ಮಾಸ ಪತ್ರಿಕೆಯ ಸಂಪಾದಕರು, ‘ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು (ಬೆಂಗಳೂರು) ಇದರ ಅಧ್ಯಕ್ಷರು.

ಈ ಪುಸ್ತಕ ರಚನೆಯ ಹಿಂದಿನ ಸ್ಫೂರ್ತಿ ನವಕರ್ನಾಟಕ ಪಬ್ಲಿಕೇಶನ್‌ನ ನಿರ್ದೇಶಕರಾದ ಆರ್.ಎಸ್.ರಾಜಾರಾಮ ಅವರು. ಇವರಿಗೆ ತೋಟದಲ್ಲಿ ಮನೆಕಟ್ಟುವುದಕ್ಕಿಂತ ಮನೆಯಸುತ್ತಲೂ ತೋಟದ ವಾತಾವರಣ ನಿರ್ಮಿಸುವಲ್ಲಿ ಹೆಚ್ಚಿನ ಆಸಕ್ತಿ ಎಂದು ತೋರುತ್ತದೆ. ರಾಜಾರಾಮ್‌ ಅವರು ಒಮ್ಮೆ ಕೃಷಿ ವಿದ್ಯಾಲಯದ ತೋಟಗಾರಿಕೆ ವಿಭಾಗವನ್ನು ಸಂದರ್ಶಿಸಿದ್ದು ಒಂದು ಅಮೃತ ಗಳಿಗೆ ಎನ್ನಬಹುದು. ಅಮೃತಬಳ್ಳಿಯಂತಹ ಔಷಧೀಯ ಬಳ್ಳಿಗಳನ್ನು ಮನೆಯಂಗಳದಲ್ಲಿ ಬೆಳೆಯಬಹುದು. ಇವುಗಳ ಬಗ್ಗೆ ಒಂದು ಪುಸ್ತಕವನ್ನೇಕೆ ಬರೆಯಬಾರದು ಎಂದು ಡಾ. ಎಂ. ವಸುಂಧರಾ ಅವರನ್ನು ಕೇಳಿದಾಗ ಅವರು ಸಂತೋಷದಿಂದ ಒಪ್ಪಿದರು. ಅಷ್ಟೇ ಅಲ್ಲ ಡಾ. ವಸುಂಧರಾ ಭೂಪತಿಯವರ ಸಹಾಕಾರದಿಂದ ಒಂದು ಉತ್ತಮ ಗ್ರಂಥ ಸಿದ್ಧಪಡಿಸಿದರು.

‘30 ಬೈ 40’ ನಿವೇಶನದಲ್ಲಿ ದೊರೆಯುವ ಸ್ಥಳಾವಕಾಶದಲ್ಲೇ ಉಪಯುಕ್ತ ಗಿಡಬಳ್ಳಿಗಳನ್ನು ಯಾವರೀತಿ ಬೆಳೆಯಬೇಕು ಎಂಬುದನ್ನು ಈ ಕೃತಿ ತಿಳಿಸುತ್ತದೆ. ಅಪರೂಪದ ಔಷಧಿವನದ ವರ್ಣ ಛಾಯಾಚಿತ್ರಗಳನ್ನು ಡಾ| ಸತ್ಯನಾರಾಯಣ ಭಟ್ ಒದಗಿಸಿದ್ದಾರೆ, ಕೆಲವು ಸಸ್ಯಗಳ ಛಾಯಾಚಿತ್ರಗಳನ್ನು ಕೆ.ಪಿ.ಸ್ವಾಮಿಯವರು ಒದಗಿಸಿದ್ದಾರೆ. ಇವರೆಲ್ಲರನ್ನು ಒಂದೆಡೆ ತಂದು ಅಪೂರ್ವ ಪುಸ್ತಕ ವನ್ನು ಅನ್ವರ್ಥಕವಾಗಿ ಕೂಡ ಪ್ರಕಾಶಿಸಿದ ಶ್ರೇಯಸ್ಸು ರಾಜಾರಾಮ ಅವರದು. ಮನೆಮನೆಗಳನ್ನು ಅಲಂಕರಿಸಬೇಕಾದ ಪುಸ್ತಕ ‘ಮನೆಯಂಗಳದಲ್ಲಿ ಔಷಧಿವನ’.

ಈ ಪುಸ್ತಕದಲ್ಲಿ ಮನೆಗಳನ್ನು ಅಲಂಕರಿಸುವ 36 ಗಿಡಮರಬಳ್ಳಿ ಹೂವಿನ ಗಿಡಗಳ ವಿವರಗಳು ದೊರೆಯುತ್ತವೆ. ಈ ಗಿಡಬಳ್ಳಿಗಳು ಎಲ್ಲಿ ಲಭ್ಯವಾಗಿವೆ, ಅವುಗಳನ್ನು ಹೇಗೆ ಬೆಳೆಸಬೇಕು, ಎಲ್ಲಿ ಬೆಳಸಬೇಕು, ಯಾವ ಗೊಬ್ಬರ ಹಾಕಬೇಕು, ಯಾವ ಕೀಟಗಳ ಬಾಧೆ ಆಗುವ ಸಂಭವವಿದೆ, ನಿವಾರಣೆಯ ಉಪಾಯಗಳೇನು ಎಂಬ ವಿವರಗಳನ್ನು ಡಾ| ಎಂ.ವಸುಂಧರಾ ಅವರು ಒದಗಿಸಿದ್ದಾರೆ. ಈ ವಿವರಗಳಿಗೆ ಪೂರಕವಾಗಿ ಇವುಗಳಲ್ಲಿಯ ರಾಸಾಯನಿಕ ಅಂಶಗಳೇನು, ಪೋಷಕ ಸತ್ವಗಳೇನು, ಯಾವ ರೋಗಕ್ಕೆ ಇವುಗಳು ರಾಮಬಾಣದಂತೆ ಪರಿಣಾಮಕಾರಿಯಾಗಿವೆ, ಈ ವನಸ್ಪತಿಗಳ ಇತಿಹಾಸ, ಪ್ರಾಚೀನತೆ, ಗ್ರೀಕ ಮತ್ತು ವೈದಿಕ ವಾಙ್ಮಯದಲ್ಲಿ ಅವುಗಳ ಬಗ್ಗೆ ಬಂದಿರುವ ವರ್ಣನೆ, ಉಪಯೋಗದ ಬಗ್ಗೆ ಕೆಲವು ಉಪಕತೆಗಳನ್ನು, ಉದಾಹರಣೆಗಳನ್ನು ಡಾ| ವಸುಂಧರಾ ಭೂಪತಿ ನೀಡಿದ್ದಾರೆ. ಇವುಗಳನ್ನು ಅಡುಗೆಯಲ್ಲಿ ಬಳಸುವ ವಿಧಾನವನ್ನೂ ನೀಡಿದ್ದು ಅಧಿಕ ಆಕರ್ಷಣೆಯಾಗಿದೆ.

ಈ ಪುಸ್ತಕದಲ್ಲಿ ಅಮೃತಬಳ್ಳಿ, ಅಶ್ವಗಂಧ, ಅಡುಸೋಗೆ, ಒಂದೆಲಗ, ಕರಿಬೇವು, ಕೊತ್ತಂಬರಿ, ಗುಲಾಬಿ, ಚಕ್ರಮುಖಿ, ಜೀವಂತಿ, ಜೇಷ್ಠಮಧು, ತುಂಬೆ, ತುಳಸಿ, ದಾಸವಾಳ, ದೊಡ್ಡಪತ್ರೆ, ನಂದಿಬಟ್ಟಲು, ನಿಂಬೆಹುಲ್ಲು, ನುಗ್ಗೆ, ನೆಲನೆಲ್ಲಿ, ನೆಲಬೇವು, ಪಪ್ಪಾಯ, ಪಾರಿಜಾತ, ಪುಂಡಿಸೊಪ್ಪು, ಪುದೀನ, ಬಜೆ, ಬಸಳೆಸೊಪ್ಪು, ಬ್ರಾಹ್ಮಿ, ಬೇವು, ಭೃಂಗರಾಜ, ಮಧುನಾಶಿನಿ, ಮಲ್ಲಿಗೆ, ಮಂಗರವಳ್ಳಿ, ಮೆಂತ್ಯಸೊಪ್ಪು, ಲೋಳೆಸರ, ಸದಾಪುಷ್ಪಿ(ಕಣಿಗಿಲೆ), ಸ್ಟೀವಿಯ (ಮಧುವಂತ), ಹಿಪ್ಪಲಿ. ಇವುಗಳಲ್ಲಿ ಹೂಗಳಿವೆ, ತರಕಾರಿಗಳಿವೆ, ಹಣ್ಣುಗಳಿವೆ, ಗಿಡಮೂಲಿಕೆಗಳಿವೆ, ಅಲ್ಲದೆ ಸೊಪ್ಪುಗಳಿವೆ. ಇವುಗಳಲ್ಲಿ ಕೆಲವನ್ನು ಆಯ್ದು ಪರಿಚಯಿಸುವದು ನನಗೆ ಪ್ರಿಯವಾದ ಕೆಲಸ. ನಿಸರ್ಗ ಮತ್ತು ಆಯುರ್ವೇದ ನಿಮ್ಮ ಪ್ರಕೃತಿ ಸುಧಾರಿಸಲು ಸುಲಭವಾಗಿ ನಿಮ್ಮ ಅಂಗಳಕ್ಕೆ ಬಂದಿರುವಾಗ ದುಬಾರಿ ಔಷಧಿಗಳ ಬೆನ್ನು ಹತ್ತುವುದೇಕೆ?

ಅಮೃತಬಳ್ಳಿ: ಇದರ ಉತ್ಪತ್ತಿಯ ಬಗ್ಗೆ ಒಂದು ರೋಚಕ ಕತೆ ಇದೆ. ದೇವತೆಗಳಿಗೆ ಕಂಟಕನಾಗಿದ್ದ ರಾವಣನನ್ನು ರಾಮಚಂದ್ರ ವಾನರಸೇನೆಯ ಸಹಾಯದಿಂದ ಸೋಲಿಸಿದ, ವಧಿಸಿದ. ಈ ಯುದ್ಧದಲ್ಲಿ ಸಹಸ್ರಾರು ವಾನರರು ಮೃತರಾದರು. ವಾನರರ ಸಾಹಸದಿಂದ ಸಂತಸಗೊಂಡ ದೇವೇಂದ್ರ ಅಮೃತಧಾರೆಯನ್ನು ಹರಿಸಿ ವಾನರರನ್ನು ಬದುಕಿಸಿದನಂತೆ. ಅಮೃತಧಾರೆಯಿಂದ ಮತ್ತೆ ಸಜೀವರಾದ ವಾನರರ ದೇಹದಿಂದ ಅಮೃತ ಬಿಂದುಗಳು ಎಲ್ಲೆಲ್ಲಿ ಬಿದ್ದವೋ ಅಲ್ಲಲ್ಲಿ ಅಮೃತಬಳ್ಳಿ ಹುಟ್ಟಿಕೊಂಡಿತಂತೆ. ಅಮೃತಬಳ್ಳಿಯ ವೈಜ್ಞಾನಿಕ ಹೆಸರು ‘ಟಿನೊಸ್ಪೊರಾ ಕಾರ್ಡಿಫೋಲಿಯಾ’ (Tinospora Cardifolia). ಅಮೃತಬಳ್ಳಿಯ ಕಾಂಡ, ಎಲೆ, ಬೇರು ಎಲ್ಲವೂ ಔಷಧಿಗುಣ ಹೊಂದಿದೆ. ಇದನ್ನು ಎಲ್ಲ ಪ್ರದೇಶಗಳಲ್ಲೂ, ಎಲ್ಲ ಋತುಗಳಲ್ಲಿಯೂ ಬೆಳೆಸಬಹುದಾಗಿದೆ. ಕಾಲಕಾಲಕ್ಕೆ ನೀರು ಮತ್ತು ಗೊಬ್ಬರ ಇದಕ್ಕೆ ಅವಶ್ಯಕವಾಗುತ್ತದೆ. ಆರು ಅಂಗುಲ ಬಳ್ಳಿಯ ತುಂಡುಗಳನ್ನು ಕುಂಡಗಳ ಮಿಶ್ರಣವನ್ನು ತುಂಬಿದ ಪಾಲಿಥೀನ ಚೀಲದಲ್ಲಿ ನಾಟಿ ಮಾಡಿ ಬೆಳೆಸಬಹುದು. ಅಮೃತಬಳ್ಳಿಗೆ ‘ಇಂಡಿಯನ್ ಕ್ವಿನೈನ್’ ಎಂಬ ಹೆಸರು ಇದೆ.

ಹೀಗೆ, ಔಷಧ ಗಿಡ ಬೆಳೆಯುವ, ಅದರ ಔಷಧೀಯ ಗುಣಗಳ ಪ್ರಯೋಜನ ಪಡೆಯುವ ಅನೇಕ ಉದಾಹರಣೆಗಳನ್ನು ಪುಸ್ತಿಕೆಯಲ್ಲಿ ಕೊಡಲಾಗಿದೆ. ಕನ್ನಡಿಗರು ಆ ಕೃತಿಯ ಸತ್‌ಪ್ರಯೋಜನ ಪಡೆಯುವರೆಂಬ ಆಸೆ ನನ್ನದು.

(* ‘ಮನೆಯಂಗಳದಲ್ಲಿ ಔಷಧಿವನ’, ಡಾ.ಎಂ.ವಸುಂಧರಾ ಮತ್ತು ಡಾ.ವಸುಂಧರಾ ಭೂಪತಿ, ನವಕರ್ನಾಟಕ ಪ್ರಕಾಶನ, ಕ್ರಿಸೆಂಟ್ ರಸ್ತೆ, ಬೆಂಗಳೂರು-1, ಬೆಲೆ ರೂ.150, ಪುಟ.200)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X