• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಗುರುಶ್ರೀಮಧ್ವರ ಪಾದ ಧೂಳಿ ನನ್ನನ್ನು ಸದಾ ಪಾಲಿಸಲಿ’

By Staff
|

ತ್ರಿವಿಕ್ರಮಪಂಡಿತಾಚಾರ್ಯರೆಂಬ ಮಹಾ ಮೇಧಾವಿಗಳು ಶ್ರೀಮಧ್ವರಿಂದ ಆಕರ್ಷಿತರಾದರು. ಸೋತು, ಶರಣಾಗತರಾಗಿ ಪರಮಶಿಷ್ಯರಾದರು. ಅವರ ಹಿನ್ನೆಲೆಯ ಬಗ್ಗೆ ಒಂದೆರಡು ಮಾತು. ಲಿಕುಚವಂಶ ಎಂಬುದು ಅಂದಿನ ವಿದ್ವಂದ್ರಂಗದಲ್ಲಿ ಪ್ರಸಿದ್ಧಿಪಡೆದ ಹೆಸರು. ಅಂಗಿರಸಗೋತ್ರದ ಆ ವಂಶದಲ್ಲಿ ಸುಬ್ರಹ್ಮಣ್ಯಪಂಡಿತರೆಂಬ ಜ್ಞಾನಿಗಳಿದ್ದರು. ಅವರಿಗೆ ಅನುರೂಪಳಾದ ಪತ್ನಿಯಿದ್ದಳು. ಹುಟ್ಟಿದ ಮಕ್ಕಳೆಲ್ಲ ಮೃತರಾಗುತ್ತಿದ್ದರು. ಆ ದಂಪತಿಗಳು ಸತ್‌ಪುತ್ರನನ್ನು ಪಡೆಯಲು ಹರಿಹರ(ಶಂಕರನಾರಾಯಣ)ರನ್ನು ಸೇವಿಸಿದರು.

ಶ್ರೀಹರಿ ಸರ್ವೋತ್ತಮನಾದರೆ ಹರ ಮನೋನಿಯಾಮಕನಾದ ವಿದ್ಯಾದೇವತೆ. ಪುತ್ರಸಂತಾನ ಪ್ರಾಪ್ತವಾದಾಗ ‘ತ್ರಿವಿಕ್ರಮ’ ಎಂಬ ಹೆಸರನ್ನಿಟ್ಟರು. ನಂತರ ಅವರಿಗೆ ದ್ವಿತೀಯ ಪುತ್ರನಾದ. ಅವನಿಗೆ ‘ಶಂಕರ’ ಎಂಬ ಹೆಸರನ್ನಿಟ್ಟರು. ಹರಿ-ಹರ ಭಕ್ತಿಯ ಫಲಗಳಾದ ಎರಡು ಪುತ್ರರನ್ನು ಪಡೆದ ಭಾಗ್ಯಶಾಲಿಗಳಾದರು. ಹಿರಿಯ ಮಗ ತ್ರಿವಿಕ್ರಮನಲ್ಲಿ ವಿಚಿತ್ರವಾದ ಕಾವ್ಯಪ್ರತಿಭೆಯಿತ್ತು.

‘ಉಷಾಹರಣ’ವೆಂಬ ಕಾವ್ಯವನ್ನು ಬರೆದು ಪಂಡಿತರ ಮನ್ನಣೆಯನ್ನು ಪಡೆದನು. ಕವಿತೆಯಂತೆ ವೇದಾಂತದಲ್ಲೂ ಅವನಿಗೆ ಅಗಾಧ ಪರಿಶ್ರಮವಿತ್ತು. ತರ್ಕಬದ್ಧವಾದ ಪ್ರಶ್ನೆಗಳಿಗೆ ಅವನ ಗುರುಗಳು ಗೊಂದಲಕ್ಕೀಡಾಗುತ್ತಿದ್ದ ಸಂದರ್ಭ. ಮಾಯಾವಾದದ ಎಲ್ಲ ಗ್ರಂಥಗಳಲ್ಲಿ ಅವನದು ಅಸಾಧಾರಣ ಪಾಂಡಿತ್ಯ. ತಾರುಣ್ಯದಲ್ಲಿಯೇ ‘ವಿದ್ವಚ್ಛೇಖರ’ ಎಂಬ ಗೌರವ ಪಡೆದ ಮಹಾಪಂಡಿತನಾತ. ಸೋದರ ಶಂಕರ ಶ್ರೀಮಧ್ವರಿಂದ ಪ್ರಭಾವಿತನಾಗಿ ಅವರ ಶಿಷ್ಯತ್ವವನ್ನು ವಹಿಸಿದ್ದ.

ಮಾಯಾಮತದ ಪ್ರಕಾಂಡ ಪಂಡಿತರೆಲ್ಲ ಒಂದುಗೂಡಿ ತ್ರಿವಿಕ್ರಮಪಂಡಿತರನ್ನು ಕಂಡು ತಾವು ನಂಬಿದ ಮಾಯಾವಾದವನ್ನು ಖಂಡಿಸುತ್ತಿರುವ ಶ್ರೀಮಧ್ವರನ್ನು ಎದುರಿಸಿ ವಾದಮಾಡಲು ಕೇಳಿಕೊಂಡರು. ಶ್ರೀಮಧ್ವರೊಡನೆ ವಾದಕ್ಕಿಳಿಯುವುದಕ್ಕಿಂತ ಮೊದಲು ಅವರ ಗ್ರಂಥಗಳನ್ನೊಮ್ಮೆ ಪರಿಶೀಲಿಸಲು ತ್ರಿವಿಕ್ರಮಪಂಡಿತರು ನಿಶ್ಚಯಿಸಿದರು. ಕಳವಾದ ಗ್ರಂಥಗಳನ್ನೆಲ್ಲ ರಾಜನ ಮುಖಾಂತರ ಶ್ರೀಮಧ್ವರು ಪಡೆದಾಗ ಅವನ್ನೆಲ್ಲ ರಕ್ಷಿಸುವ ಜವಾಬ್ದಾರಿಯನ್ನು ಶಿಷ್ಯ ಶಂಕರಪಂಡಿತರಿಗೆ ಒಪ್ಪಿಸಿದ್ದರು.

ತಮ್ಮನಾದ ಶಂಕರಪಂಡಿತ ತಮ್ಮೊಡನೆ ಒಂದೆ ಮನೆಯಲ್ಲಿ ವಾಸಿಸಿದ್ದರಿಂದ ಅವನಿಂದ ಶ್ರೀಮಧ್ವರ ಗ್ರಂಥಗಳನ್ನು ಪಡೆದು ಓದುವುದು ಸುಲಭವಾಗಿತ್ತು. ತಲಸ್ಪರ್ಶಿಯಾಗಿ ಶ್ರೀಮಧ್ವರ ಗ್ರಂಥಗಳನ್ನು ಓದುತ್ತಿರುವಂತೆ ತ್ರಿವಿಕ್ರಮರ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆಯತೊಡಗಿತು. ಶ್ರೀಮಧ್ವರಲ್ಲಿ ಅಡಗಿದ್ದ ಅರ್ಥವೈಭವ, ನಿರೂಪಣೆಯ ಪೂರ್ಣತೆ, ಅರ್ಥಸ್ಪಷ್ಟತೆ, ನಿರಂತರ ಪ್ರಮಾಣೋದಾಹರಣೆ - ಒಂದೊಂದೂ ತ್ರಿವಿಕ್ರಮರ ಚಿಂತನಪ್ರಪಂಚಕ್ಕೆ ಹೊಸ ದಿಕ್ಕನ್ನೇ ತೋರಿದವು.

ಅಧ್ಯಾತ್ಮಿಕ ಬರವಣಿಗೆಯ ಭವ್ಯಸ್ವರೂಪ ಅವರ ಮುಂದೆ ಗೋಚರಿಸಿತು. ಅಲ್ಲಿ ಪ್ರತಿಯಾಂದು ವಾಕ್ಯದಲ್ಲಿ ಕಂಡುಬರುತ್ತಿದ್ದ ಭಗವತ್ತತ್ತ್ವ ಮಹಿಮೆ ಅವರ ಮನಸ್ಸನ್ನು ಸೆಳೆಯಿತು. ಶ್ರೀಮಧ್ವರ ವ್ಯಕ್ತಿತ್ವಕ್ಕೆ ಅವರ ಮನಸ್ಸು ಶಣಾಗುತ್ತಿತ್ತು. ಶ್ರೀಮಧ್ವರೇ ತಮ್ಮ ಸ್ವರೂಪೋದ್ಧಾರಕ ಗುರುಗಳು, ಅವರ ಶಿಷ್ಯತ್ವ ವಹಿಸುವುದೇ ತಮ್ಮ ಜೀವನದ ಪರಮಸಾರ್ಥಕ್ಯ ಎಂಬ ಭಾವ ಬರತೊಡಗಿತು.

ಜಯಸಿಂಹರಾಜನು ತನ್ನ ವಶದಲ್ಲಿಟ್ಟುಕೊಂಡು ಸಂರಕ್ಷಿಸಿದ್ದ ಶ್ರೀಮಧ್ವರ ಗ್ರಂಥಭಂಡಾರವನ್ನು ರಾಜಸಭೆಯಲ್ಲಿ ಗುರುಗಳಿಗೆ ಒಪ್ಪಿಸಿದ್ದು, ಶ್ರೀಮಧ್ವರ ಅಪ್ಪಣೆಯಂತೆ ಶಂಕರಪಂಡಿತರು ಆ ಗ್ರಂಥಭಂಡಾರವನ್ನು ಸ್ವೀಕರಿಸಿದ್ದು, ಶ್ರೀಮಧ್ವರ ದರ್ಶನ ಹಾಗೂ ಅವರ ಪ್ರವಚನ ಕೇಳುವ ಭಾಗ್ಯ ದೊರೆತದ್ದು ತ್ರಿವಿಕ್ರಮಪಂಡಿತರ ಬಾಳಿಗೆ ವಿಚಿತ್ರ ತಿರುವನ್ನು ತಂದಿತ್ತು.

ವಿಷ್ಣುಮಂಗಲದಲ್ಲಿ ಶ್ರೀಮಧ್ವರ ಚಾತುರ್ಮಾಸ್ಯ ವ್ರತವನ್ನು ಆಚರಿಸಬೇಕೆಂದು ಸಮಸ್ತ ಪ್ರಜೆಗಳ ಪರವಾಗಿ ಜಯಸಿಂಹರಾಜನು ಕೇಳಿಕೊಂಡಿದ್ದು ತ್ರಿವಿಕ್ರಮರಿಗೆ ಹೆಚ್ಚಿನ ಲಾಭಕರ ಪ್ರಸಂಗವಾಗಿ ಪರಿಣಮಿಸಿತು. ಲೋಕಗುರು ಶ್ರೀಮಧ್ವರ ನಿತ್ಯಾಹ್ನಿಕ, ದೇವಪೂಜೆ ನೋಡುವ ಭಾಗ್ಯ ಅವರಿಗೆ ಲಭಿಸಿತು. ಶ್ರೀಮಧ್ವರ ಮಹಾಪೂಜೆಯು ಮಹಾವೈಭವದಿಂದ ನಡೆಯುತ್ತಿತ್ತು. ಸ್ನಾನದ ನಂತರ ಅವರು ಧರಿಸುತ್ತಿದ್ದ ಊರ್ಧ್ವಪುಂಡ್ರ, ಚಕ್ರಾದಿಗಳು ಅವರ ದೇಹದಲ್ಲಿ ಗಗನದಲ್ಲಿನ ದ್ವಾದಶಾದಿತ್ಯರಂತೆ ಹೊಳೆಯುತ್ತಿದ್ದವು.

ಅವರು ಪೂಜೆಗೆ ಕುಳಿತಾಗ ಅವರ ಶಿಷ್ಯರು ಶುದ್ಧವಾದ ಅಗ್ರೋದಕವನ್ನು ಕಲಶದಲ್ಲಿ ಇರಿಸುತ್ತಿದ್ದ ದೃಶ್ಯ- ಗಂಧ, ತುಲಸೀ, ಪುಷ್ಪಗಳ ಸಮರ್ಪಣೀಯಾಂದಿಗೆ ಭಗವಂತನನ್ನು ಪೂಜಿಸುವ ದೃಶ್ಯ- ಪೂಜಾ ಕಾಲದಲ್ಲಿ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, ಶೌಚ, ತುಷ್ಟಿ ಮತ್ತು ಸರ್ವಸಮರ್ಪಣ ಎಂಬ ಅಷ್ಟ ಭಾವಪುಷ್ಪಗಳಿಂದ ಪೂಜಾಸಕ್ತರಾದ ದೃಶ್ಯ ಅವರ್ಣನೀಯ. ಭೋಜನಾನಂತರ ಸಭಾಮಂಟಪವನ್ನು ಅಲಂಕರಿಸಿ ವೇದಶಾಸ್ತ್ರ ವಿಚಾರ ವಿದ್ವಾಂಸರನ್ನು ತಣಿಸುವ ವ್ಯಾಖ್ಯಾನಗಳು ಅವಿಸ್ಮರಣೀಯ.

ಶ್ರೀಮಧ್ವರ ಉಪನ್ಯಾಸ ಸರಣಿಯ ಪ್ರತಿ ಅಕ್ಷರ, ಪ್ರತಿಪದಗಳನ್ನು ತ್ರಿವಿಕ್ರಮಪಂಡಿತರು ಶ್ರದ್ಧೆಯಿಂದ ಆಲಿಸುತ್ತಿದ್ದರು. ತಾತ್ವಕ ಬೆಳಕುಕಂಡು ಸಂಭ್ರಮಿಸುತ್ತಿದ್ದರು. ತಮಗೆ ಸ್ಪಷ್ಟೀಕರಣ ಬೇಕಿದ್ದ ವಿಚಾರಗಳ ಬಗ್ಗೆ ಪ್ರಶ್ನೆಗಳನ್ನು ಸಂಕೋಚವಿಲ್ಲದೆ ಮುಂದಿಟ್ಟರು, ಉತ್ತರ ಪಡೆದರು. ಅವರ ಪ್ರತಿಭಾಪಾಂಡಿತ್ಯಗಳ ಮುಂದೆ ತ್ರಿವಿಕ್ರಮರು ವಾಮನರಾದರು. ಅವರಿಬ್ಬರ ನಡುವೆ ಹದಿನೆಂಟು ದಿನ ಚರ್ಚೆ-ವಾದ ನಡೆಯಿತು. ತ್ರಿವಿಕ್ರಮರ ಸಕಲ ಪ್ರಶ್ನೆಗಳಿಗೂ ಉತ್ತರ ದೊರೆಯಿತು, ಪರಿಹಾರ ದೊರೆಯಿತು, ಪ್ರಶ್ನೆ ಉದ್ಗಾರದಲ್ಲಿ ಪರಿವರ್ತಿತವಾಯಿತು! ವೈದಿಕ ಸಿದ್ಧಾಂತದ ಸೂಕ್ಷಾತಿಸೂಕ್ಷ್ಮ ವಿಚಾರಗಳನ್ನೆಲ್ಲ ಶ್ರೀಮಧ್ವರಿಂದ ಸಾಕ್ಷಾತ್ತಾಗಿ ಅರಿಯುವ ಭಾಗ್ಯ ತ್ರಿವಿಕ್ರಮರದಾಯಿತು.

ತಮ್ಮ ಸೋಲಿನಲ್ಲೇ ಅವರಿಗೆ ನಿಜವಾದ ಗೆಲವು ಗೋಚರಿಸಿತು. ಪೂರ್ಣಪ್ರಜ್ಞರೊಂದಿಗೆ ವಾದಕ್ಕಿಳಿದ ತಮ್ಮ ಸಾಹಸದ ಬಗ್ಗೆ ಸಂಕೋಚವೆನಿಸಿತು, ವಿಷಾದ ಕವಿಯಿತು. ಸಾಷ್ಟಾಂಗ ನಮಸ್ಕಾರ ಮಾಡಿ ತಮ್ಮ ದುಸ್ಸಾಹಸವನ್ನು, ಅವಿವೇಕವನ್ನು ಮನ್ನಿಸಲು ಬೇಡಿಕೊಂಡರು. ‘‘ಗುರುಶ್ರೀಮಧ್ವರ ಪಾದ ಧೂಳಿ ನನ್ನನ್ನು ಸದಾ ಪಾಲಿಸಲಿ’’ ಎಂದು ಹೇಳಿ ಶ್ರೀಮಧ್ವರಿಗೆ ಶರಣರಾದರು.

ಜಗದ್ಗುರುವನ್ನು ವಾದದಲ್ಲಿ ಸೋಲಿಸಬೇಕೆಂಬ ಮೊಡ ಕರಗಿತ್ತು, ಗುರುಗಳ ಕೃಪಾವೃಷ್ಟಿ ಸುರಿದಿತ್ತು, ಎಲ್ಲಡೆ ಬೆಳಕಾಗಿತ್ತು. ಶಿಷ್ಯರಾಗಿ ಭಾಷ್ಯಾದಿ ಗ್ರಂಥಗಳನ್ನು ಉಪದೇಶರೂಪದಲ್ಲಿ ಆಲಿಸತೊಡಗಿದರು. ತ್ರಿವಿಕ್ರಮರು ಶ್ರೀಮಧ್ವರ ಪರಮಶಿಷ್ಯರ ಸ್ಥಾನವನ್ನು ಅಲಂಕರಿಸಿದ್ದು ಇತಿಹಾಸ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X