• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಗುರುಶ್ರೀಮಧ್ವರ ಪಾದ ಧೂಳಿ ನನ್ನನ್ನು ಸದಾ ಪಾಲಿಸಲಿ’

By Staff
|

ತ್ರಿವಿಕ್ರಮಪಂಡಿತಾಚಾರ್ಯರೆಂಬ ಮಹಾ ಮೇಧಾವಿಗಳು ಶ್ರೀಮಧ್ವರಿಂದ ಆಕರ್ಷಿತರಾದರು. ಸೋತು, ಶರಣಾಗತರಾಗಿ ಪರಮಶಿಷ್ಯರಾದರು. ಅವರ ಹಿನ್ನೆಲೆಯ ಬಗ್ಗೆ ಒಂದೆರಡು ಮಾತು. ಓದುಗರೇ, ಡಾ. ಪ್ರಭಂಜನಾಚಾರ್ಯರ ‘ಶ್ರೀಪೂರ್ಣಪ್ರಜ್ಞ ದರ್ಶನ’ ಕೃತಿ ಪರಿಚಯ ಈ ವಾರವೂ ಮುಂದುವರೆದಿದೆ...

Sri Madhwacharyaಶ್ರೀಮಧ್ವರು ರಚಿಸಿದ ‘ಯಮಕಭಾರತ’ ಹಲವಾರು ದೃಷ್ಟಿಯಿಂದ ಮಹತ್ವದ ಕೃತಿಯಾಗಿ ರಾರಾಜಿಸುತ್ತಿದೆ. ಅಲಂಕಾರದ ಬೆಡಗಿನಿಂದ ಅದು ‘ಯಮಕಭಾರತ’ವೆನ್ನಿಸಿದರೆ, ವಿಷಯದ ದೃಷ್ಟಿಯಿಂದ ಅದು ಮಹಾಭಾರತದ ತಾತ್ಪರ್ಯವೇ ಆಗಿದೆ. ಯಮಲೋಕದ ಭಯವನ್ನು ಶಾಶ್ವತವಾಗಿ ಪರಿಹರಿಸುವುದೇ ಈ ಗ್ರಂಥದ ಪ್ರಮುಖ ಫಲಶ್ರುತಿಯಾಗಿದೆ.

ವಿದ್ವಾಂಸರಿಗೆ ಒಗಟಾದ ಅನೇಕ ಶ್ಲೋಕಗಳು ಇಲ್ಲಿವೆ. ಒಂದು ಶ್ಲೋಕ ಬರಿ ‘ಭಾ’ದಿಂದ ಕೂಡಿದೆ. ಪ್ರತಿ‘ಭಾ’ಕ್ಕೂ ಶ್ರೀಮಧ್ವರು ಹೊಸ ಅರ್ಥ ತಿಳಿಸುತ್ತಾ ಭಗವಂತನ ಗುಣವೈಭವವನ್ನು ತೆರೆದಿಟ್ಟರು. ಈ ಕಾವ್ಯಕ್ಕೆ ಹೃಷೀಕೇಶತೀರ್ಥರು ಗದ್ಯದಲ್ಲಿ ಟೀಕೆ ಬರೆದರೆ, ನರಹರಿತೀರ್ಥರು ಶ್ಲೋಕದಲ್ಲಿ ವಿವರಣೆ-ಟೀಕೆ ಬರೆದಿದ್ದಾರೆ.

ಪದ್ಮನಾಭತೀರ್ಥರ ಅನಂತರ ಶಿಷ್ಯತ್ವ ವಹಿಸಿದ ನರಹರಿತೀರ್ಥರಿಗೆ ಶ್ರೀಮಧ್ವಮತ ಪ್ರಸಾರಮಾಡುವ ಕಾತರವಿತ್ತು. ಅವರನ್ನು ಕಳಿಂಗಪ್ರಾಂತಕ್ಕೆ ತತ್ತ್ವಪ್ರಸಾರ ಮಾಡಲು ಗುರುಗಳು ಕಳಿಸಿದರು. ಮುಂದೆ ಭವಿಷ್ಯದಲ್ಲಿ ಆ ರಾಜ್ಯದಲ್ಲಿ ಉತ್ತರಾಧಿಕಾರಿಯ ಸಮಸ್ಯೆ ತಲೆದೋರುವುದನ್ನು ಮೊದಲೇ ತಿಳಿದಿದ್ದ ಶ್ರೀಮಧ್ವರು ತಮ್ಮ ಶಿಷ್ಯನಿಗೆ ಅಲ್ಲಿ ಹೋದ ಮೇಲೆ ಸನ್ಯಾಸಧರ್ಮದ ಜೊತೆಗೆ ರಾಜಭಾರವನ್ನು ವಹಿಸುವ ಪ್ರಸಂಗ ಬರಬಹುದೆಂದು ಹೇಳಿ, ಅಲ್ಲಿ ಯೋಗ್ಯ ಉತ್ತರಾಧಿಕಾರಿ ದೊರೆಯುವ ವರೆಗೆ ಆ ಕೆಲಸ ನಿರ್ವಹಿಸಬೇಕೆಂದೂ ಹೇಳಿಕಳಿಸಿದ್ದರು.

ತಮ್ಮ ಅನುಗ್ರಹ ರಕ್ಷಾಕವಚ ಸದಾ ಅವರೊಂದಿಗೆ ಇರುವುದಾಗಿಯೂ ಮಧ್ವರು ಹೇಳಿದ್ದರು. ಯೋಗ್ಯ ಉತ್ತರಾಧಿಕಾರಿಗೆ ರಾಜ್ಯಭಾರ ಒಪ್ಪಿಸಿ ಮರಳುವಾಗ ಕೋಶಾಗಾರದಲ್ಲಿರುವ ಶ್ರೀಮೂಲರಾಮ ಹಾಗೂ ಸೀತೆಯ ಪ್ರತಿಮೆಗಳನ್ನು ತರಲು ಸೂಚಿಸಿದ್ದರು. ಆ ಅಪೂರ್ವ ವಿಗ್ರಹಗಳನ್ನು ತಾವು ಹಿಂದೆ ಹನುಮಂತ ಆಗಿದ್ದಾಗ ಪೂಜಿಸಿದ್ದರಂತೆ.

ಶ್ರೀಮಧ್ವರ ನುಡಿ ದಿಟವಾಯಿತು. ನರಹರಿತೀರ್ಥರು ಕಳಿಂಗದೇಶದಲ್ಲಿ ಸಂಚರಿಸುತ್ತಿದ್ದಾಗ ಅಲ್ಲಿಯ ದೊರೆ ಮೃತನಾದ. ಉತ್ತರಾಧಿಕಾರಿಯಿಲ್ಲದೆ ಅರಾಜಕತೆಯ ವಾತಾವರಣ ತಲೆದೋರಿತು. ರಾಜನ ಒಬ್ಬ ರಾಣಿ ಗರ್ಭಿಣಿಯಾಗಿದ್ದಳು. ಅವಳು ಪುತ್ರನನ್ನು ಪಡೆಯುವ ವರೆಗೆ ರಾಜ್ಯಭಾರ ನಡೆಸಲು ಯತಿಗಳಾದ ನರಹರಿತೀರ್ಥರನ್ನು ಆ ರಾಜ್ಯದ ಸಚಿವರೆಲ್ಲ ಬಿನ್ನಹಿಸಿದರು.

ಸಚಿವರ ಮಾತನ್ನು ಮನ್ನಿಸಿ ನರಹರಿತೀರ್ಥರು ಸನ್ಯಾಸಧರ್ಮದ ಜೊತೆಗೆ ರಾಜಧರ್ಮವನ್ನೂ ಸಮರ್ಥವಾಗಿ ನಿರ್ವಹಿಸಿದರು. ತಮ್ಮ ಗುರುಗಳ ಮಾತು ನಿಜವಾಗಿತ್ತು. ಸನ್ಯಾಸಿಯಾಗಿಯೂ ರಾಜ್ಯಭಾರ ಮಾಡಿದ ಅಪೂರ್ವ ಪ್ರಶಸ್ತಿ ಯತಿ ನರಹರಿತೀರ್ಥರ ಪಾಲಿಗೆ ಒದಗಿಬಂದಿತ್ತು.

ಕಳವಾಗಿದ್ದ ಶ್ರೀಮಧ್ವರ ಗ್ರಂಥಭಂಡಾರ ಜಯಸಿಂಹರಾಜನ ಬಳಿಯಲ್ಲಿತ್ತು. ಅದನ್ನು ಶ್ರೀಮಧ್ವರಿಗೆ ಒಪ್ಪಿಸುವ ಪೂರ್ವದಲ್ಲಿ ರಾಜನು ತನ್ನ ರಾಯಭಾರಿಯನ್ನು ಕಳಿಸಿ ಶ್ರೀಮಧ್ವರನ್ನು ಆಹ್ವಾನಿಸಿದ. ಅವನ ಪ್ರಾರ್ಥನೆಯನ್ನು ಮನ್ನಿಸಿದ ಶ್ರೀಮಧ್ವರು ಕಾಸರಗೋಡಿನತ್ತ ಪ್ರಯಾಣ ಬೆಳೆಸಿದರು. ಮೊದಲು ಮಧೂರು ಎಂಬಲ್ಲಿನ ಮದನೇಶ್ವರ ದೇವಾಲಯದಲ್ಲಿ ತಂಗಿದರು. ಜಯಸಿಂಹರಾಜನು ಅವರನ್ನು ಎದುರುಗೊಳ್ಳಲು ಬಂದನು. ವಾಹನದಿಂದ ಇಳಿದು, ಬರಿಗಾಲಿನಲ್ಲಿ ನಡೆದುಕೊಂಡು ಹೋಗಿ, ಶ್ರೀಮಧ್ವರನ್ನು ಕಂಡು, ಸಾಷ್ಟಾಂಗ ನಮಸ್ಕಾರಮಾಡಿ ಅಭಿವಂದಿಸಿದನು.

ಗಜತುರಗ ಸಮಸ್ತ ವೈಭವದಿಂದ ಮೆರವಣಿಗೆಯಲ್ಲಿ ಶ್ರೀಮಧ್ವರನ್ನು ವಿಷ್ಣುಮಂಗಲ ದೇವಸ್ಥಾನಕ್ಕೆ ಕರೆದೊಯ್ದನು. ಅಲ್ಲಿ ಶ್ರೀಮಧ್ವರ ದರ್ಶನಕ್ಕೆ ಜನಸಾಗರವೇ ನೆರೆದಿತ್ತು. ಶ್ರೀಮಧ್ವರ ಭವ್ಯ ಆಕೃತಿಯ ದರ್ಶನ ಜನರು ಪಡೆದರು. ಅಲ್ಲಿ ಜನರ ನೂಕುನುಗ್ಗಲಿನಲ್ಲಿ ಶ್ರೀಮಧ್ವರ ಸಮೀಪ ಬರಲು ಎಲ್ಲರಿಗೂ ಸಾಧ್ಯವಾಗುತ್ತಿರಲಿಲ್ಲ. ಶ್ರೀಮಧ್ವರು ಸರ್ವಜ್ಞರು. ಅವರಿಗೆ ಜನರ ಇಂಗಿತ ತಿಳಿದು, ತಮ್ಮ ವಿಶಿಷ್ಟ ಯೋಗಶಕ್ತಿಯನ್ನು ಪ್ರದರ್ಶಿಸಿದರು, ಪ್ರತಿಯಾಬ್ಬರ ಎದುರಿನಲ್ಲೆ ಇರುವಂತೆ ಕಾಣಿಸತೊಡಗಿದರು.

ಅಲ್ಲಿಯ ಪ್ರಧಾನ ಕಾರ್ಯಕ್ರಮ ಶ್ರೀಮಧ್ವರ ಭಾಗವತ ಪ್ರವಚನ. ಶ್ರೀಮಧ್ವರದು ಅಪೂರ್ವ ಶೈಲಿ. ಅಧ್ಯಾತ್ಮಕ್ಕೂ ಕಥೆಯ ರಮ್ಯತೆ. ಕತೆಗಳಲ್ಲಿ ತತ್ತ್ವದ ಶ್ರೀಮಂತಿಕೆ. ಸರಳತೆಯಲ್ಲಿ ಗಹನತೆ. ದರ್ಶನದೊಂದಿಗೆ ನಿದರ್ಶನ. ಸಂಮೋಹನದಲ್ಲಿ ಬೋಧನ. ಅವರ ಸರಳತೆ ಪಾಮರರಿಗೆ ಮೆಚ್ಚುಗೆಯದಾದರೆ, ಗಾಂಭೀರ್ಯ ವಿದ್ವಾಂಸರನ್ನು ತಲೆದೂಗಿಸಿತ್ತು. ಅವರ ಪ್ರವಚನ ಆಲಿಸುತ್ತಿದ್ದ ಜಿಜ್ಞಾಸು ವೃಂದ ಪುರಾಣಪ್ರಪಂಚಕ್ಕೆ ಭಾಷ್ಯ ನೀಡಲು ಶ್ರೀಮಧ್ವರನ್ನು ಪ್ರಾರ್ಥಿಸಿತು. ಅದರ ಫಲವಾಗಿ ಭಾಗವತ ತಾತ್ಪರ್ಯನಿರ್ಣಯವನ್ನು ಶ್ರೀಮಧ್ವರು ರಚಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more