ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಶುಕವಿತೆ - ಒಂದು ಹೊಸ ಅನುಭವ

By 'ಜೀವಿ' ಕುಲಕರ್ಣಿ, ಮುಂಬೈ
|
Google Oneindia Kannada News


ಇಪ್ಪತ್ತರ ಹರೆಯದಲ್ಲಿ ಸಾಕಷ್ಟು ಪ್ರಣಯ ಕವಿತೆಗಳನ್ನು ರಚಿಸಿದ್ದ ಲೇಖಕರಿಗೆ ಎಪ್ಪತ್ತರ ಹರೆಯದಲ್ಲಿ ಪ್ರೇಮ ಆಶುಕವಿತೆಗಳನ್ನು ರಚಿಸಲು ಪ್ರೀತಿಯ ಒತ್ತಾಯ ಬಂದರೆ ಹೇಗಿರುತ್ತೆ? ಹೀಗೊಂದು ಒದಗಿಬಂದ ಸಂದರ್ಭದ ಮೆಲುಕು.



To write or Not to write love poem at seventy! 'ಆಶುಕವಿತೆ' ಎಂದೊಡನೆ ನನ್ನ ಕಾಲೇಜು ದಿನಗಳು ನೆನಪಾಗುತ್ತವೆ. ಆಗ ನಾನು ಧಾರವಾಡದಲ್ಲಿದ್ದೆ. ವರಕವಿ ಬೇಂದ್ರೆ ಹಾಗೂ ಪ್ರಿನ್ಸಿಪಾಲ್ ವಿ.ಕೃ.ಗೋಕಾಕರ ಒಡನಾಟವಿತ್ತು. ಧಾರವಾಡದಲ್ಲಿ ಸಾಕಷ್ಟು ಕವಿಗಳಿದ್ದರು. ಈ ಮಾತು ನೆನೆಯುವಾಗ ಬಳ್ಳಾರಿ ಬೀಚಿಯವರ ಜೋಕು ನೆನಪಾಗುತ್ತದೆ. 1958ರಲ್ಲಿ ಒಂದು ಸಭೆಯಲ್ಲಿ ಬೀಚಿ ಮುಖ್ಯ ಅತಿಥಿಯಾಗಿದ್ದರು, ಬೇಂದ್ರೆ ಅಧ್ಯಕ್ಷತೆ ವಹಿಸಿದ್ದರು. ಬೀಚಿ ತಮ್ಮ ಭಾಷಣದಲ್ಲಿ ಅಂದಿದ್ದರು, ''ಲಂಡನ್ ಟಾವರ್ ಮೆಲೇ ನಿಂತು ಕಲ್ಲುಗಳನ್ನು ಎಸೆಯತೊಡಗಿದರೆ ಕನಿಷ್ಠ ಒಬ್ಬ ಕವಿಯ ತಲೆಗೆ ತಾಕುವದು ಎಂದು ಹೇಳಲಾಗುತ್ತದೆ. ಧಾರವಾಡದ ಗಾಂಧಿಚೌಕಿನ ಬದಿಯ ಟವರ್ ಮೇಲೆ ನಿಂತು ಕಲ್ಲೆಸೆದರೆ ಕನಿಷ್ಠ ಮೂರು ಕವಿಗಳ ತಲೆಗೆ ತಾಗುತ್ತದೆ!'' ಪ್ರೇಕ್ಷರಲ್ಲಿ ನಗೆಯ ಬುಗ್ಗೆ ಹರಿಯಿತು. ಬೇಂದ್ರೆಯವರು ಕೇಳಿ ಸುಮ್ಮನಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಬೀಚಿಯವರ ಮಾತನ್ನು ಮತ್ತೆ ಉದ್ಧರಿಸಿ, ''ಟಾವರ್ ಮೇಲಿಂದ ಕಲ್ಲೆಸೆದರೆ ಮೂರು ಯಾಕೆ ನೂರು ಜನರೆ ತಲೆಗೆ ತಾಗುತ್ತದೆ, ಮೂರು ಕವಿಗಳಿಗೆ ಗೊತ್ತಾಗುತ್ತದೆ. ಯಾಕಂದರೆ ಅವರಿಗೆ ತಲೆ ಇರುತ್ತದೆ!'' ಮತ್ತೆ ಪ್ರೇಕ್ಷಕರಿಂದ ಕರತಾಡನ, ನಗೆಯ ಬುಗ್ಗೆ.

ನಾನು ಧಾರವಾಡದಲ್ಲಿ ಕವಿಮಿತ್ರರ ಸಹವಾಸದಲ್ಲಿ ಆಶುಕವಿತೆ ಬರೆಯುತ್ತಿದ್ದೆ, ವಾಸುದೇವ ಕನಕಾಪೂರ ಸ್ವರಸಂಯೋಜನೆ ಮಾಡುತ್ತಿದ್ದರು, ಮಾಧವ ಗುಡಿ ಹಾಡುತ್ತಿದ್ದರು. ನನ್ನ ಮೊದಲ ಕವನ ಸಂಗ್ರಹ 'ಮಧುಸಂಚಯ'ದಲ್ಲಿ(1959) ಆ ಕವಿತೆಗಳು ಪ್ರಕಟವಾಗಿವೆ. 2000ದಲ್ಲಿ ಹ್ಯೂಸ್ಟನ್‌ದಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋದಾಗ ಮಿತ್ರ ಮಾಧವ ಗುಡಿ ಅಲ್ಲಿ ಬಂದಿದ್ದರು. ಒಂದು ಸಭೆಯಲ್ಲಿ ನನ್ನ ಹಳೆಯ ಪದ್ಯಗಳನ್ನೆಲ್ಲ ಹಾಡಿದ್ದರು. (ವಿವರ 'ಜೀವಿ ಕಂಡ ಅಮೇರಿಕಾ' ಪುಸ್ತಕದಲ್ಲಿ ಬರೆದಿರುವೆ.) ಇಪ್ಪತ್ತರ ಹರೆಯದಲ್ಲಿ ಸಾಕಷ್ಟು ಪ್ರಣಯ ಗೀತ ಬರೆದೆ. 'ಹುಚ್ಚ-ಹುಚ್ಚಿ'ಯಲ್ಲಿ ಪ್ರಕಟಗೊಂಡವು. ಮಿತ್ರ ಕೃಷ್ಣ ಪೊದ್ದಾರ್ ಆ ಪುಸ್ತಕಕ್ಕೊಂದು ಅಪೂರ್ವವಾದ ಮುಖಚಿತ್ರ ಬರೆದುಕೊಟ್ಟರು. ಆ ಪುಸ್ತಕದ ಉದ್ಘಾಟನೆ ಮಾಡಿದ ಬೇಂದ್ರೆಯವರು ಹೇಳಿದ್ದರು, 'ಇದರ ಮುಖಪುಟ ಬಹಳ ಆಕರ್ಷಕವಾಗಿದೆ. ಒಂದೆಡೆ ಹುಚ್ಚ ಇನ್ನೊಂದೆಡೆ ಹುಚ್ಚಿ ನಿಂತಿದ್ದಾರೆ. ನಡುವೆ ಇದೆ ಮರವು.' ಒಂದು ಮರದ ಎರಡು ಬದಿಗೆ ಪ್ರಿಯಕರ-ಪ್ರೇಯಸಿಯರು ನಿಂತ ಚಿತ್ರವಿತ್ತು. ಬೇಂದ್ರೆಯವರು 'ಮರವು' ಶಬ್ದದಮೇಲೆ ಪನ್(ಶ್ಲೇಷ) ಮಾಡಿದ್ದರು. ಆ ಪುಸ್ತಕದ ವಿಮರ್ಶೆಯನ್ನು ಎಂ.ವಿ.ಕಾಮತರು 'ಟೈಮ್ಸ್ ಆಫ್ ಇಂಡಿಯಾ'ದಲ್ಲಿ ಮಾಡುತ್ತ, "The cover enhances the contents; it is a rare and happy marriage of poetry and art." ಎಂದು ಬರೆದಿದ್ದರು.

ಮುಂಬೈ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ 'ಕರ್ನಾಟಕ ಸಂಘ'ವು 'ಕಲಾ ಸೌರಭ'ದ ಸಹಯೋಗದೊಂದಿಗೆ ಅಕ್ಟೋಬರ್ 6ರಂದು ಒಂದು ವಿನೂತನ ಕಾರ್ಯಕ್ರಮ ಏರ್ಪಡಿಸಿತ್ತು. ಹಾಡಲು ಬರುವಂತಹ ಗೀತ ರಚಿಸಲು, ಆಶುಕವನ ರಚಿಸಲು ತರುಣ ಕವಿಗಳಿಗೆ ಆಹ್ವಾನ ನೀಡಲಾಗಿತ್ತು. ಪದ್ಮನಾಭ ಸಹಿಸಿತ್ಲು ಅವರ ಸಹಕಾರದಿಂದ ಕವನಗಳನ್ನು ಪ್ರಸಿದ್ಧ ಕಲಾವಿದರಿಂದ ಹಾಡಿಸುವ ವ್ಯವಸ್ಥೆ ಮಾಡಲಾಗಿತ್ತು. ಇದು ಗೀತ-ಸಂಗೀತದ ಜುಗಲಬಂದಿಯಾಗಿತ್ತು.

ನಂತರ ನಾನು ಈ ಕಾರ್ಯಕ್ರಮದ ರೂವಾರಿ ಕಲಾವಿದ ಪದ್ಮನಾಭ ಸಸಿಹಿತ್ಲು ಅವರನ್ನು ಕೇಳಿದಾಗ ಇದರ ಪ್ರೇರಣೆಯ ಬಗ್ಗೆ ತಿಳಿಸಿದರು. ಇಂಥದೊಂದು ಕಾರ್ಯಕ್ರಮವನ್ನು ಅವರು ಮಂಗಳೂರಲ್ಲಿ ವೀಕ್ಷಿಸಿದ್ದರಂತೆ. ಅದನ್ನು ಪುಷ್ಕಲಕುಮಾರ ತೋನ್ಸೆಯವರು ಆಯೋಜಿಸಿದ್ದರಂತೆ. ಅಲ್ಲಿ ಕವಿಗಳಿಗೆ ಕವನ ಬರೆಯಲು ನಾಲ್ಕು ಗಂಟೆ ಸಮಯ ನೀಡಲಾಗಿತ್ತಂತೆ. ಹಾಡುವವರಿಗೂ ನಾಲ್ಕುಗಂಟೆ ಸ್ವರಸಂಯೋಜನೆ ಮಾಡಲು ಅವಕಾಶವಿತ್ತಂತೆ. ಆದರೆ ಮುಂಬೈಯಲ್ಲಿ ಅದು ಸಾಧ್ಯವಾಗಲಿಲ್ಲ. ಒಂದೇ ಗಂಟೆ ಅವಕಾಶ ಕವಿಗಳಿಗೆ ನೀಡಲಾಯ್ತು. ಇಲ್ಲಿ 21 ಕವಿಗಳು ಭಾಗವಹಿಸಿದರು. ಹಾಡಲು ಮಂಗಳೂರಿನ ಪ್ರಸಿದ್ಧ ಗಾಯಕ ಪುಷ್ಕಲಕುಮಾರ ತೋನ್ಸೆಯವರನ್ನು, ಶಿವಮೊಗ್ಗೆಯ ಗಾನವಿದುಷಿ ಸುರೇಖಾ ಹೆಗಡೆಯವರನ್ನು ಕರೆಸಿದ್ದರು. ಹಿನ್ನೆಲೆ ಸಂಗೀತವನ್ನು ಸ್ಥಳೀಯ ಕಲಾವಿದರಾದ ಶೇಖರ್ ಸಸಿಹಿತ್ಲು ಮತ್ತು ಸತೀಶ ಸುರತ್ಕಲ್ ನೀಡಿದರು.

ಕವಿಗಳಿಗೆ ಒಂದು ಗಂಟೆ ಮೊದಲು ವಿಷಯ ಕೊಡಲಾಗಿತ್ತು. ಹೆಚ್ಚಿನವರ ಹಾಡುಗಳನ್ನು ಕಲಾವಿದರು ಸ್ವರಸಂಯೋಜನೆ ಮಾಡಿ ಹಾಡಿದರು. ನಾನು ಸ್ವಲ್ಪ ತಡವಾಗಿಯೋ ತಲುಪಿದೆ. ಮಿತ್ರ ಭರತಕುಮಾರ ಪೊಲಿಪು ಅವರು, ಸರ್ ನೀವು ಕೂಡ ಒಂದು ಆಶುಕವಿತೆ ಬರೆಯಬೇಕು. ತರುಣರಿಗೆ ನೀವು ದಾರಿ ತೋರಬೇಕು ಎಂದು ಬಲವಂತ ಮಾಡಿದರು. ನನಗೆ ಮೂರು ವಿಷಯ ಕೊಟ್ಟು ಒಂದನ್ನು ಆರಿಸಿ ಪದ್ಯ ಬರೆಯಲು ಹೇಳಿದರು. ಮೂರನೆಯ ವಿಷಯ 'ಅವಳ ನಗೆ ಗುಲಾಬಿ ಹೂವು' ಎಂದಿತ್ತು. ಇಪ್ಪತ್ತರ ಹರಯದಲ್ಲಿ ನಾನು ಸಾಕಷ್ಟು ಪ್ರಣಯ ಕವನ ರಚಿಸಿದ್ದೆ. ಈಗ ಎಪ್ಪತ್ತರ ಗಡಿ ದಾಟಿದ ಮೇಲೆ ಇಂಥ ಕವಿತೆ ಹೇಗೆ ಬರೆಯುವುದು ಎಂಬ ಗೊಂದಲದಲ್ಲಿದ್ದೆ. ಈ ಸಂದರ್ಭದಲ್ಲಿ ನನಗೆ ಒಂದು ಘಟನೆ ನೆನಪಾಗುತ್ತದೆ. ಕಳೆದ ವರ್ಷ ಚಂದನ-ಟಿವಿಯಲ್ಲಿ 'ಲೇಖಕರೊಂದಿಗೆ ಸಮಾಲೋಚನೆ' ಕಾರ್ಯಕ್ರಮದಲ್ಲಿ ವಿದ್ವಾನ್ ಶಿವಕುಮಾರಸ್ವಾಮಿ ನನ್ನನ್ನು ಸಂದರ್ಶಿಸಿದ್ದರು. ಆಗ ಹಲವಾರು ಜನ ನನಗೆ ಪ್ರಶ್ನೆ ಕೇಳಿದ್ದರು. ಆಗ ಒಬ್ಬ ಯುವತಿ (ಕಿರುತೆರೆಯ ಕಲಾವಿದೆ ಮೇಘಾ ನಾಡಿಗೇರ್) ನನಗೊಂದು ಪ್ರಶ್ನೆ ಕೇಳುತ್ತ, 'ಹುಚ್ಚ-ಹುಚ್ಚಿ'ಯಂತಹ ಇನ್ನೊಂದು ಪ್ರಣಗೀತಗಳ ಸಂಕಲನವನ್ನು ಹೊರತರಲು ಸೂಚಿಸಿದಳು. ಆಗ ನಾನು ಉತ್ತರಿಸಿದ್ದೆ 'ಈ ವಯಸ್ಸಿನಲ್ಲಿ ನಾನು ಮೊಮ್ಮಕ್ಕಳ ಮೇಲೆ ಪದ್ಯ ಬರೆಯುವುದು ಹೆಚ್ಚು ಸೂಕ್ತ' ಎಂದು.

ಒಂದು ಮೂಲೆಯಲ್ಲಿ ಕುಳಿತು ಒಂದು ಪದ್ಯ ಬರೆದೆ. ಅದರಲ್ಲಿ ತಾಯಿ, ಪ್ರೇಯಸಿ, ಮಡದಿ, ಮಗಳು, ಮೊಮ್ಮಗಳ ಗುಲಾಬಿನಗೆ ನೆನಪಾಯ್ತು. ನನ್ನ ಪದ್ಯವನ್ನು ಶಿವಮೊಗ್ಗೆಯ ಸುರೇಖಾ ಹೆಗಡೆ ಸ್ವರಸಂಯೋಜನೆ ಮಾಡಿ ಹಾಡಿದರು. ಕಳೆದ ವರ್ಷ ಈ-ಟಿವಿ ನಡೆಸಿದ 'ಎದೆ ತುಂಬಿ ಹಾಡುವೆನು' ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ ಸುರೇಖಾ. ನನ್ನ ಕೆಲ ಮಿತ್ರರು, ಉಪಸ್ಥಿತ ಹಿರಿಯ ಕವಿಗಳು (ಕುರ್ಕಾಲ) ನನ್ನ ಪದ್ಯ ಮೆಚ್ಚಿದರು.

ಅವಳ ನಗೆ ಗುಲಾಬಿ ಹೂವು

1.
ಆಗ ನಾನು ಕಂದನಿದ್ದೆ
ತಾಯಿಯನ್ನು ಪ್ರೀತಿಸಿದ್ದೆ
ಅವಳ ನಗೆ ಗುಲಾಬಿ ಹೂವು
ಅದನು ಇಂದು ನೆನೆವೆನು
ಅದಕೆ ಸಾಟಿ ಕಾಣೆನು
2.
ನಾನು ಬೆಳೆದು ತರುಣನಾದೆ
'ಲತೆ'ಯನೊಂದು ಪ್ರೀತಿಸಿದ್ದೆ
ಅದುವೆ ತುಂಟುನಗೆ ಗುಲಾಬಿ
ಮುಳ್ಳಾಯಿತು ಕಳೆಯಿತು
ಮನಕೆ ನೋವು ನೀಡಿತು
3.
ದಾಂಪತ್ಯದ ರಥವನೇರಿ
'ಕಲಾ'ಜೀವಿಯಾದೆ ನಾನು
ಅವಳ ನಗೆ ಚೆಂಗುಲಾಬಿ
ನನ್ನ ಬಾಳು ತುಂಬಿತು
ದುಗುಡವೆಲ್ಲ ಕಳೆಯಿತು
4.
ಮುಗುಳು ಚಿಗಿತು ಮಗಳಾಯಿತು
'ವೀಣೆ'ಯಾಗಿ ನುಡಿಯುತಿತ್ತು
ಮಗಳ ಮುಖಗುಲಾಬಿ ಅರಳಿ
ವಾತ್ಸಲ್ಯವ ಹರಡಿತು
ಮನೆಯನ್ನೇ ಬೆಳಗಿತು
5.
ಇಂದು 'ಮೈತ್ರೇಯಿ' ಬಂದು
'ಅಜ್ಜ' ಎಂದು ಗಲ್ಲ ಹಿಂಡಿ
ಮುತ್ತು ನೀಡೆ ಆ ಗುಲಾಬಿ
ಬಾಳ ಹಿಗ್ಗು ಆಯಿತು
ಧರೆಗೆ ಸಗ್ಗ ತಂದಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X