• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ನನ್ನ ಬದುಕಿನಲ್ಲಿ ಕನ್ನಡ ಸಂಸ್ಕೃತಿ’

By Staff
|

‘ಉದಯವಾಗಲಿ’ ಬರೆದ ಹುಯಿಲಗೋಳ ನಾರಾಯಣರಾಯರು ಕನ್ನಡ ನಾಡನ್ನು ಬಣ್ಣಿಸುವಾಗ ‘ಜಲಧಿಯನು ಲಂಘಿಸಿದ ಹನುಮನುಸಿದ ನಾಡು’ ಎನ್ನುತ್ತಾರೆ. ರಾಮ ಉತ್ತರದವ, ಸಾಕೇತದವ. ಹನುಮ ದಕ್ಷಿಣದವ, ಕಿಷ್ಕಿಂಧೆಯವ. ದಕ್ಷ ಸೇವಕರಾಗಿರುವುದನ್ನು ಹನುಮನಿಂದ ಕನ್ನಡಿಗರು ಕಲಿತರು. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಉದ್ಯಮದಲ್ಲಿ ಕನ್ನಡಿಗರು ದಕ್ಷ ಆಡಳಿತಗಾರರಾಗಿ ಕೆಲಸ ಮಾಡುತ್ತಿದ್ದಾರೆ.

ಹನುಮನ ಮೂರನೆಯ ಅವತಾರವಾದ ಶ್ರೀಮಧ್ವರು ಕನ್ನಡಿಗರು. ಕೋಹಂ ಸಂಶಯ ಬೇಡ, ಸೋಹಂ ಎಂಬ ಅಹಂಕಾರ ಬೇಡ, ದಾಸೋಹಂ ಎಂಬುದೇ ಜೀವನ ತಾರಕ ಮಂತ್ರವಾಗಿದೆ ಎಂದು ಸಾರಿದವರು ಅವರು. ಆಚಾರ್ಯತ್ರಯರಲ್ಲಿ ಶ್ರೀಮಧ್ವರೇ ಕೊನೆಯವರು, ಅವರ ನುಡಿಯೇ ಸಿದ್ಧಾಂತವಾಯಿತು. ಆಚಾರ್ಯತ್ರಯರ ಬಗ್ಗೆ ಹೇಳುವಾಗ ಒಂದು ಮಾತು ಗಮನಿಸಬೇಕು.

ಶ್ರೀಶಂಕರಾಚಾರ್ಯರು ಕೇರಳದವರಾಗಿದ್ದರೂ ಅವರ ಕಾರ್ಯಕ್ಷೇತ್ರ ಕರ್ನಾಟಕವಾಯಿತು(ಶೃಂಗೇರಿ). ಶ್ರೀರಾಮಾನುಜಾಚಾರ್ಯರು ತಮಿಳುನಾಡಿನವರು. ಅವರ ಕರ್ಮಭೂಮಿಯೂ ಕರ್ನಾಟಕವಾಯಿತು.(ಮೇಲುಕೋಟೆ). ವೀರಶೈವ ಶರಣರು ಆಡುಮಾತಿನಲ್ಲಿ ಅತ್ಯುಚ್ಚ ಅಧ್ಯಾತ್ಮಿಕ ಚಿಂತನೆಯನ್ನು ಸಾಮಾನ್ಯ ಜನರಿಗೆ ತಲುಪಿಸಿದರು. ಜೈನ ಧರ್ಮದ ಮಹತ್ವದ ಕಾರ್ಯ ಕರ್ನಾಟಕದಲ್ಲಿ ನಡೆಯಿತು. ಜಗತ್ತಿನಲ್ಲಿ ಅತ್ಯಂತ ಎತ್ತರವಾದ ಗೊಮ್ಮಟೇಶ್ವರ ವಿಗ್ರಹವೇ ಅದಕ್ಕೆ ಸಾಕ್ಷಿ. ಸರ್ವಧರ್ಮ ಸಮನ್ವಯವನ್ನು ನಾವು ಕರ್ನಾಟಕದಲ್ಲಿ ಕಾಣುತ್ತೇವೆ. ಸಹಿಷ್ಣುತೆ ಕನ್ನಡ ಸಂಸ್ಕೃತಿಯ ಹಿರಿಮೆಯಾಗಿದೆ.

ಕನ್ನಡ ಸಾಹಿತ್ಯಕ್ಕೆ ಸಾವಿರ ವರುಷಗಳ ಇತಿಹಾಸವಿದೆ. ಆದಿಕವಿ ಪಂಪ, ರೂಪಕಚಕ್ರವರ್ತಿ ನಾರಾಯಣಪ್ಪ, ಶ್ರಾವಣ ಕವಿ ಬೇಂದ್ರೆಯವರ ಹಿರಿಮೆಯನ್ನು ವಿಮರ್ಶಕ-ಕವಿ ಗೋಪಾಲಕೃಷ್ಣ ಅಡಿಗರು ಕೊಂಡಾಡಿದ್ದಾರೆ. ಏಳು ಜನ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಸಾಹಿತಿಗಳ ಸಾಧನೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಇಂದು ಕಾದಂಬರಿಕಾರ ಭೈರಪ್ಪನವರು ಅನುವಾದಗಳ ಮೂಲಕ ಬಹುಭಾಷೆಗಳಲ್ಲಿ ಮನ್ನಣೆ ಗಳಿಸುತ್ತಿರುವುದನ್ನು ನೋಡಿದರೆ ನಮಗೆ ಹೆಮ್ಮೆ ಎನಿಸುತ್ತದೆ.

ಸಂಗೀತ ಕ್ಷೇತ್ರದಲ್ಲಿ ಕನ್ನಡಿಗರ ಸಾಧನೆ ಕಡಿಮೆಯಿಲ್ಲ. ಕರ್ನಾಟಕ ಸಂಗೀತದ ಪಿತಾಮಹ ಪುರಂದರ ದಾಸರು ಕನ್ನಡ ನೆಲದವರು. ಅವರ ಹಾಡಿನ ಜೋಗುಳ ತಾಯಿಯಿಂದ ಕೇಳಿ ತ್ಯಾಗರಾಜರು ಬೆಳೆದರು ಎಂಬುದು ಇತಿಹಾಸ. ಉತ್ತರಾದಿ ಸಂಗೀತದಲ್ಲಿ ಹೆಸರು ಮಾಡಿದ ಪಂ. ಮಲ್ಲಿಕಾರ್ಜುನ ಮನ್ಸೂರ್‌, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್‌, ಕುಮಾರ ಗಂಧರ್ವ, ಬಸವರಾಜ ರಾಜಗುರು - ಇಂದಿಗೂ ಸಂಗೀತದ ಆಗಸದಲ್ಲಿ ಬೆಳಗುವ ನಕ್ಷತ್ರಗಳು.

ಶಿಲ್ಪಕಲೆಗೆ ಕರ್ನಾಟಕ ತವರೂರು. ಐಹೊಳೆ-ಪಟ್ಟದಕಲ್ಲು ಮಂದಿರಶಿಲ್ಪಕಲೆಯ ತೊಟ್ಟಿಲು ಎನ್ನಲಾಗುತ್ತಿದೆ. ಬಾದಾಮಿಯ ಮೇಣಬಸ್ತಿ, ಬೇಲೂರ ಶಿಲಾಬಾಲಿಕೆಯರನ್ನು, ಹಳೆಬೀಡಿನ ಕುಸುರಿನ ಶಿಲ್ಪವನ್ನು ಮರೆಯುವುದೆಂತು ಸಾಧ್ಯ? ಜಕ್ಕಣನ ಶಿಲ್ಪಕಲೆ ಮೆರೆದ ನಾಡಿದು. ಬಿಜಾಪುರದ ಗೋಲಗುಮ್ಮಟ ಮುಸ್ಲಿಂ ಶಿಲ್ಪದ ಮಹಾನ್‌ ಸಾಧನೆ. ಭಾರತದ ಆಧುನಿಕ ತಂತ್ರಶಿಲ್ಪಿ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಕೊಡುಗೆ ಅಸಾಧಾರಣ. ‘ಭಾರತರತ್ನ’ ಪಡೆದ ಪ್ರಥಮ ಕನ್ನಡಿಗರವರು.

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕನ್ನಡಿಗರ ಸಾಧನೆ ಅಗಾಧವಾಗಿದೆ. ಡಾ। ಟಿ.ಎಂ.ಎ.ಪೈ ಅವರು ನಮ್ಮ ದೇಶದ ದೊಡ್ಡ ರೋಗ ಬಡತನ ಎಂಬುದನ್ನರಿತು ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಪ್ರವೇಶಿಸಿದರು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಅಧಿಕ ಸಂಖ್ಯೆಯಲ್ಲಿರುವವು ಕರ್ನಾಟಕದ ಬ್ಯಾಂಕುಗಳು. ಹೊಟೆಲ್‌ ಉದ್ಯಮದಲ್ಲಿ ಕನ್ನಡಿಗರ ಸಾಧನೆ ಬಹಳ ದೊಡ್ದದು. ಇಂದು ಐಟಿ, ಬಿಟಿ ಕ್ಷೇತ್ರದಲ್ಲಿ ಕನ್ನಡಿಗರು ದೇಶದ ಮುಂಚೂಣಿಯಲ್ಲಿದ್ದಾರೆ.

ಕೊನೆಯದಾಗಿ, ಒಂದು ಪ್ರಸಂಗ ನೆನಪಾಗುತ್ತದೆ...

ಧಾರವಾಡದ ಕರ್ನಾಟಕ ಕಾಲೇಜಿನ ಅಮೃತಮಹೋತ್ಸವದ ಸಂದರ್ಭ. ಹೆಸರು ಗಳಿಸಿದ ಹಳೆಯ ವಿದ್ಯಾರ್ಥಿಗಳನ್ನು ಕರೆದು ಸನ್ಮಾನಿಸಲಾಯಿತು. ಅವರಲ್ಲಿ ಗಿರೀಶ ಕಾರ್ನಾಡ, ಅನಿಲ್‌ ಗೋಕಾಕ, ಜಾರ್ಜ ಮೆನೆಜಿಸ್‌ ಮೊದಲಾದವರಿದ್ದರು. ಅದರಲ್ಲಿ ಒಬ್ಬರು ಎರಡೇ ವರ್ಷ ವಿಜ್ಞಾನ ಓದಿ ಮುಂದೆ ಮುಂಬೈ ಐಐಟಿ ಸೇರಿದ್ದರು. ತಮ್ಮ ಐಟಿ ಕ್ಷೇತ್ರದಲ್ಲಿ ಮಹತ್‌ ಸಾಧನೆ ಮಾಡಿದ್ದರು.

ಸನ್ಮಾನದ ನಂತರ ಅವರು ಕೇಳಿದರು, ‘‘ನನ್ನಿಂದ ನಾನು ಕಲಿತ ಕಾಲೇಜಿಗೆ ಏನಾಗಬೇಕು?’’ ಎಂದು. ಆಗ ಪ್ರಾಂಶುಪಾಲರು ಹೇಳಿದ್ದರಂತೆ, ‘ಕಾಲೇಜಿಗೆ ಒಂದು ಉತ್ತಮ ಸಭಾಗೃಹವಿಲ್ಲ’ ಎಂದು. ಸರಿ, ಆ ವಿದ್ಯಾರ್ಥಿ ತನ್ನ ಅಜ್ಜ ಅಣ್ಣಜಿರಾವ ಶಿರೂರರ ನೆನಪಿನಲ್ಲಿ ಸುಮಾರು ನಾಲ್ಕು ಕೋಟಿ ವೆಚ್ಚದ ಅತ್ಯಧುನಿಕವಾದ ವಾತಾನುಕೂಲ ‘‘ಸೃಜನಾ ರಂಗಮಂದಿರ’’ ನಿರ್ಮಿಸಿ ಕೊಟ್ಟರು. ಆ ವಿದ್ಯಾರ್ಥಿ ಇನ್‌ಫೋಸಿಸ್‌ನ ನಂದನ್‌ ನಿಲೇಕಣಿ.

ಈ ಸಂದರ್ಭದಲ್ಲಿ ಅಮೆರಿಕೆಯ ಅಧ್ಯಕ್ಷನಾಗಿದ್ದ ಜಾನ್‌ ಕೆನಡಿಯ ಮಾತು ನೆನಪಾಗುತ್ತದೆ. ಆ ಶೈಲಿಯಲ್ಲಿ ಹೇಳುವುದಾದರೆ, ‘ಸುವರ್ಣ ಕರ್ನಾಟಕದ ವರ್ಷ, ಕನ್ನಡ ನಾಡು ನಮಗೇನು ಮಾಡಲಿದೆ? ಎಂದು ಕೇಳುವ ಬದಲು, ನಮ್ಮ ನಾಡಿಗೆ ನಾವೇನು ಮಾಡಬಲ್ಲೆವು?’ ಎಂದು ಕೇಳಿಕೊಳ್ಳುವುದು ಹೆಚ್ಚು ಅರ್ಥಪೂರ್ಣವಾದೀತು.’’ ಎಂದು ಮುಂತಾಗಿ ಮಾತಾಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more