• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಧ್ವರ ಸೋಲಿಸಲು ವಿದ್ವಾಂಸರ ತಂತ್ರ-ಕುತಂತ್ರ!

By Staff
|

ಶ್ರೀಮಧ್ವರು ನುಡಿದರು, ‘‘ನಿಮಗೆ ವೈದಿಕ ಸಂಪ್ರದಾಯದ ಪರಿಜ್ಞಾನ ಸಾಲದು’’ ಎಂದು. ‘‘ಇದನ್ನು ಅರಿಯುವುದು ಹೇಗೆ?’’ ಎಂದು ಅವರು ಕೇಳಿದರು. ‘‘ಸ್ವಲ್ಪಹೊತ್ತಿನಲ್ಲೇ ಇಲ್ಲಿಗೆ ವೇದವಿದ್ವಾಂಸರೊಬ್ಬರು ಬರಲಿದ್ದಾರೆ. ಅವರನ್ನು ಕೇಳಿರಿ. ನಾವು ಹೇಳುವ ಅರ್ಥವನ್ನೇ ಅವರೂ ಹೇಳುವರು’’ ಎಂದರು ಶ್ರೀಮಧ್ವರು. ಅವರು ಹೇಳಿದಂತೆ ನಡೆಯಿತು. ಶ್ರೀಮಧ್ವರು ಜ್ಯೋತಿಃಶಾಸ್ತ್ರ ಮೊದಲಾದ ಸಕಲಶಾಸ್ತ್ರಗಳೂ ಬಲ್ಲ ಸರ್ವಜ್ಞರೆಂಬುದು ಸಿದ್ಧವಾಯಿತು. ಅಂದಿನಿಂದ ಅವರು ‘ಸರ್ವಜ್ಞ’ರೆಂದೇ ಪ್ರಸಿದ್ಧರಾದರು.

ವೇದವಿದ್ಯೆಗೆ ಬ್ರಹ್ಮಸೂತ್ರಗಳೇ ರಕ್ಷಾಕವಚ. ಅದರ ಮೇಲೆ ರಚಿತವಾದ ದುರ್ಭಾಷ್ಯಗಳನ್ನು ನಿರಾಕರಿಸುವುದರೊಂದಿಗೆ ಬಹ್ಮಸೂತ್ರಗಳ ನಿಜಭಾವವನ್ನು ಅನಾವರಣಗೊಳಿಸುವ ಭಾಷ್ಯವೊಂದನ್ನು ರಚಿಸುವ ಮುನ್ನ ಶ್ರೀವೇದವ್ಯಾಸರ ಅನುಮತಿ ಪಡೆಯಲು, ಅವರನ್ನು ಸಂದರ್ಶಿಸಲು ಬದರಿಗೆ ತೆರಳಲು ನಿಶ್ಚಯಿಸಿದರು. ಮಹಾಭಾರತ ವ್ಯಾಸರ ಮೇರುಕೃತಿ, ಅದರಲ್ಲಿ ಬರುವ ‘ಗೀತೆ’ ಅದರ ಸಾರಸರ್ವಸ್ವ. ಗೀತೆಯ ಮೇಲೆ ಭಾಷ್ಯ ಬರೆದು ವೇದವ್ಯಾಸರಿಗೆ ಕಾಣಿಕೆಯಾಗಿ ಕೊಡಲು ನಿಶ್ಚಯಿಸಿದರು.

ಬದರಿ ಯಾತ್ರೆಗೆ ಹೊರಡುವ ಮುನ್ನ ಗುರುಗಳಾದ ಅಚ್ಯುತಪ್ರೇಕ್ಷರಿಂದ ಅನುಮತಿ ಪಡೆಯಲು ಬಯಸಿದರು. ಗುರುಗಳಿಗೆ ತಮ್ಮ ಶಿಷ್ಯನನ್ನು ಬಿಟ್ಟಿರಲು ಮನಸ್ಸು ಇರಲಿಲ್ಲ. ಶಿಷ್ಯನ ಅಗಲಿಕೆಯ ವಿರಹ ಗುರುಗಳಿಗೆ ತಡೆಯಲು ಸಾಧ್ಯವಿರಲಿಲ್ಲ. ಬದರಿಯಾತ್ರೆ, ತತ್ತ್ವಪ್ರಸಾರ ಕಾರ್ಯಕ್ಕೆ ಅಡ್ಡಬರುವ ಮನಸ್ಸೂ ಅವರಿಗಿರಲಿಲ್ಲ.

ಗುರುಗಳ ಮನದ ಗೊಂದಲವನ್ನು ತಿಳಿದ ಶ್ರೀಮಧ್ವರು ತಾವು ರಚಿಸಿದ ‘ಗೀತಾಭಾಷ್ಯ’ದ ಪ್ರತಿಯನ್ನು ಗುರುಗಳ ಕೈಯಲ್ಲಿತ್ತು, ‘‘ನಾವು ಬದರಿಯಿಂದ ಮರಳಿ ಬರುವ ವರೆಗೆ ಈ ಗ್ರಂಥದ ಅವಲೋಕನ ಮಾಡುತ್ತಿರಿ. ಇದು ನಿಮ್ಮ ಜೊತೆಯಲ್ಲಿದ್ದರೆ, ನಾನೇ ಇದ್ದಂತೆ.’’ಎಂದರು. ಗುರುಗಳು ಸಮ್ಮತಿ ನೀಡಿದರು. ‘‘ಪುರುಷೋತ್ತಮ ನಿಮಗೆ ಸದಾ ಬೆಂಗಾವಲಾಗಿರಲಿ’’ ಎಂದು ಹರಸಿದರು. ‘ಪುರುಷೋತ್ತಮತೀರ್ಥ’ ಎಂಬ ತಮ್ಮ ಇನ್ನೊಂದು ಹೆಸರು ಸಾರ್ಥಕಗೊಳಿಸಲು ಶ್ರೀಮಧ್ವರು ಬದರಿಗೆ ತೆರಳಿದರು.

ಶ್ರೀ ಪೂರ್ಣಪ್ರಜ್ಞರೊಂದಿಗೆ ಬದರಿಯಾತ್ರೆ! ಶಿಷ್ಯವೃಂದಕ್ಕೆ ಸುವರ್ಣಾವಕಾಶ. ಶ್ರೀ ಸತ್ಯತೀರ್ಥರು ಶ್ರೀ ಅಚ್ಯುತಪ್ರೇಕ್ಷರಿಂದ ಸಂನ್ಯಾಸ ಸ್ವೀಕರಿಸಿದ್ದರೂ, ಶ್ರೀಪೂರ್ಣಪ್ರಜ್ಞರ ಪದತಲದಲ್ಲೇ ಅಧ್ಯಯನ ನಡೆಸಿದ್ದರು. ಅವರೂ ಯಾತ್ರೆಗೆ ಸೇರಿದರು. ಆ ಕಾಲದಲ್ಲಿ ಸಂಚಾರ ದುಸ್ತರವಾಗಿತ್ತು. ತುಂಬಿಹರಿಯುವ ನದಿಗಳು, ಅಗಾಧವಾದ ಹಳ್ಳಕೊಳ್ಳಗಳು, ಅವ್ಯವಸ್ಥಿತ ದಾರಿಗಳು, ಅಡವಿಯಲ್ಲಿ ಕ್ರೂರ ಮೃಗಗಳು, ಮಾರ್ಗದಲ್ಲಿ ದರೋಡೆಕೋರರು ಮತ್ತು ಕಳ್ಳಕಾಕರು. ರಾಜಕೀಯ ಅಭದ್ರತೆ, ಸ್ವಾರ್ಥಿ ರಾಜರು, ಕುಟಿಲ ಅಮಾತ್ಯರು, ಭ್ರಷ್ಟ ಅಧಿಕಾರಿಗಳು, ವಿಷಯಲೋಲುಪ ಪ್ರಜೆಗಳು ಇವರೆಲ್ಲ ದೂರದ ಪ್ರಯಾಣದಲ್ಲಿ ಬರುವ ಅಡೆತಡೆಗಳು.

ದಾರಿಯಲ್ಲಿ ವಿವಿಧ ಕ್ಷೇತ್ರಗಳ ದರ್ಶನ ಮಾಡುತ್ತ ಶಿಷ್ಯವೃಂದ ನಡೆದರು. ದಾರಿಯಲ್ಲಿಯ ತೀರ್ಥಗಳು ಶ್ರೀಪೂರ್ಣಪ್ರಜ್ಞರ ಸ್ನಾನದಿಂದ ಅಧಿಕ ಪಾವನಗೊಂಡವು. ಪವನನಿಂದ ಪಾವನವಾದವು. ಸಂಚಾರದಲ್ಲಿ ಮಧ್ವರು ಅಪೂರ್ವ ಗ್ರಂಥಗಳನ್ನು ಸಂಗ್ರಹಿಸುತ್ತ ಸಾಗಿದರು. ತಪಸ್ಸಿನಲ್ಲಿ ವಾಙ್ಮಯ ತಪಸ್ಸಿಗೆ ಅವರು ಅಗ್ರಸ್ಥಾನ ನೀಡಿದ್ದರು.

ವೇದಗಳೇನೊ ಕಿವಿಯಿಂದ ಕಿವಿಗೆ, ಬಾಯಿಯಿಂದ ಬಾಯಿಗೆ ಪ್ರಸಾರಗೊಳ್ಳುತ್ತವೆ. ಆದರೆ ರಾಮಾಯಣ, ಮಹಾಭಾರತ, ಭಾಗವತಾದಿ ಗ್ರಂಥಗಳಿಗೆ ಲಿಖಿತ ರೂಪವೇ ಪ್ರಧಾನ. ಗ್ರಂಥಲೋಪ, ಪ್ರಕ್ಷೇಪ, ಪಾಠವ್ಯತ್ಯಾಸದಿಂದ ಮೂಲಗ್ರಂಥಗಳಿಗೆ ಅಪಚಾರವಾಗುತ್ತಿತ್ತು. ಅದಕ್ಕಾಗಿಯೇ ಗ್ರಂಥ ಸಂಗ್ರಹ ಕಾರ್ಯ ದಾರಿಯುದ್ದಕ್ಕೂ ನಡೆದಿತ್ತು. ಗ್ರಂಥಗಳು ತಾಡಪತ್ರ ರೂಪದಲ್ಲಿ, ವಿವಿಧ ಲಿಪಿಯಲ್ಲಿ ಇದ್ದವು. ದಕ್ಷಿಣ ಯಾತ್ರೆಯಲ್ಲಿಯೂ ಗ್ರಂಥ ಸಂಗ್ರಹಣೆ ನಡೆದಿತ್ತು. ಉತ್ತರ ಯಾತ್ರೆಯಲ್ಲಿ ಅದು ದ್ವಿಗುಣಿತವಾಯಿತು.

ಬದರಿಕ್ಷೇತ್ರ ಸಪ್ತಮಹಾಕ್ಷೇತ್ರಗಳಲ್ಲಿ ಒಂದು. (‘ಅಯೋಧ್ಯಾ ಮಥುರಾ ಮಾಯಾ ಕಾಶಿ ಕಾಂಚಿ ಅವಂತಿಕಾ । ಪುರೀ ದ್ವಾರಾವತೀಚೈವ ಸಪ್ತೈತೇ ಮೋಕ್ಷದಾಯಕಾಃ।।’). ಬದರಿಗೆ ಮಾಯಾಕ್ಷೇತ್ರವೆಂದು ಹೆಸರು. ವಿದುರ ಮೈತ್ರೇಯರ ಸಂವಾದ ಇಲ್ಲಿ ನಡೆಯಿತು. ಹರಿದ್ವಾರ ಋಷಿಕೇಶ ಮಾರ್ಗವಾಗಿ ಬದರಿಗೆ ಹೋಗಬೇಕು. ಇದನ್ನು ಅಧ್ಯಾತ್ಮಿಕ ರಾಜಧಾನಿಯನ್ನು ಭಾಗವತ ಬಣ್ಣಿಸಿದೆ.

ಧರ್ಮಪುತ್ರನಾಗಿ ಅವತರಿಸಿದ ನಾರಾಯಣ ರೂಪದ ಶ್ರೀಹರಿಯು ಲೋಕಶಿಕ್ಷಣಕ್ಕಾಗಿ ಇಲ್ಲಿ ತಪವನ್ನು ಆಚರಿಸಿದ. ಆದ್ದರಿಂದ ಇದು ನಾರಾಯಣ ಕ್ಷೇತ್ರವೆನಿಸಿದೆ. ಇಲ್ಲಿ ನರಪರ್ವತವಿದೆ, ನಾರಾಯಣಪರ್ವತವಿದೆ. ಬಲಭಾಗದಲ್ಲಿ ಊರ್ವಶೀಪರ್ವತವಿದೆ. ನಾರಾಯಣನ ತಪೋಭಂಗಮಾಡಲು ಇಂದ್ರನು ಅಪ್ಸರೆಯರನ್ನು ಕಳಿಸಿದಾಗ, ನಸುನಕ್ಕ ನಾರಾಯಣ ತೊಡೆಯನ್ನು ಸ್ಪರ್ಶಿಸಿ ಅಸಂಖ್ಯ ಅಪ್ಸರೆಯರನ್ನು ಸೃಷ್ಟಿಸಿದ. ಅದರಲ್ಲಿ ಒಬ್ಬಳು ಲೋಕೋತ್ತರ ಸುಂದರಿ ಊರ್ವಶೀ.

ಬದರಿಯಲ್ಲಿ ಅಲಕನಂದಾ ಹರಿಯುತ್ತಾಳೆ. ಧ್ರುವ, ಪೃಥು ಮೊದಲಾದವರು ಅಂತ್ಯಕಾಲದಲ್ಲಿ ತಪವನ್ನು ಆಚರಿಸಿದ ಸ್ಥಳವಿದು. ಕರ್ಣ ಮತ್ತು ಘಂಟಾಕರ್ಣ ಎಂಬ ಪಿಶಾಚಿಗಳಿಗೆ ಶ್ರೀಕೃಷ್ಣ ಮುಕ್ತಿ ಕರುಣಿಸಿದ ಸ್ಥಾನವಿದು. ಯುಧಿಷ್ಟಿರ ಭೀಮಾದಿ ಪಾಂಡವರು ಜನಿಸಿದ್ದು ಇಲ್ಲೇ. ಭೀಮನ ಪಾದಸ್ಪರ್ಶದಿಂದ ನೂರುಭಾಗವಾಗಿ ಸೀಳಿದ ಶತಶೃಂಗ ಪರ್ವತ ಇಲ್ಲೇ ಇದೆ. ವ್ಯಾಸರ ಗುಹೆ ಇಲ್ಲಿದೆ. ಭಾಗವತ ರಚನೆಯ ಪವಿತ್ರಸ್ಥಾನವಿದು. ಭಾರತವನ್ನು ಗಣೇಶ ಇಲ್ಲೇ ಬರೆದುಕೊಂಡ. ಇಲ್ಲಿ ನಾರದರು ನೆಲೆಸಿದರು. ಇಲ್ಲಿಯ ನಾರಾಯಣಮೂರ್ತಿ ಭರತಖಂಡದ ಪ್ರಧಾನ ದೇವತೆ.

ಶ್ರೀ ಮಧ್ವರು ಬದರಿಕ್ಷೇತ್ರ ತಲುಪಿದ ಮೇಲೆ, ಅನಂತಮಠದಲ್ಲಿ ಶ್ರೀ ನಾರಾಯಣನಿಗೆ ತಮ್ಮ ‘ಗೀತಾಭಾಷ್ಯ’ ಕಾಣಿಕೆಯಾಗಿ ಸಲ್ಲಿಸಿದರು. ಇಲ್ಲಿ ಪ್ರವಚನ ಮಾಡಿದರು. ಗೀತಾಭಾಷ್ಯ ಮೊದಲೇ ರಚಿಸಿದ್ದರು, ಅದು ಪ್ರವಚನ ರೂಪದಲ್ಲಿ ಪ್ರಕಾಶನಗೊಂಡದ್ದು ಬದರಿಯಲ್ಲಿ. ‘ತೀರ್ಥ’ವೆಂದರೆ ಶಾಸ್ತ್ರ, ಅದರ ಅವಲೋಕನವೇ ನಿಜವಾದ ‘ತೀರ್ಥಯಾತ್ರೆ!’

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X