ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ವರ ಸೋಲಿಸಲು ವಿದ್ವಾಂಸರ ತಂತ್ರ-ಕುತಂತ್ರ!

By Staff
|
Google Oneindia Kannada News


ಡಾ. ಪ್ರಭಂಜನಾಚಾರ್ಯರ ‘ಶ್ರೀಪೂರ್ಣಪ್ರಜ್ಞ ದರ್ಶನ’ ಕೃತಿ ಪರಿಚಯ ಈ ವಾರವೂ ಮುಂದುವರೆದಿದೆ... ಮಧ್ವರ ಪಾಂಡಿತ್ಯ ಮತ್ತು ವಿಚಾರಗಳು ಇಲ್ಲಿವೆ.

Madhwacharyaಪ್ರಧಾನ ವಿದ್ವಾಂಸರೊಬ್ಬರು ಐತರೇಯ ಸೂಕ್ತಕ್ಕೆ ತಮಗೆ ತಿಳಿದ ಅರ್ಥ ಹೇಳಿ ಅದರ ಬಗ್ಗೆ ಪ್ರಶ್ನಿಸಿದಾಗ ಶ್ರೀಮಧ್ವರು ಅವರಿಗೆ ನೀಡಿದ ಉತ್ತರ ಮಾರ್ಮಿಕವಾಗಿತ್ತು, ಅವರ ವಿದ್ವತ್ತಿಗೆ ಕನ್ನಡಿ ಹಿಡಿದಂತಿತ್ತು.

‘‘ಈ ಸೂಕ್ತಕ್ಕೆ ಆ ಅರ್ಥವೂ ಉಂಟು. ನಾವು ಹೇಳಿದ ಅರ್ಥವೂ ಉಂಟು. ಇವೆರಡಕ್ಕಿಂತ ಭಿನ್ನವಾದ ಮತ್ತೊಂದು ಅರ್ಥವೂ ಉಂಟು. ಇದುವೆ ವೈದಿಕ ಸಾಹಿತ್ಯದ ಹಿರಿಮೆ. ವೇದಕ್ಕೆ ಅತಿ ಕಡಿಮೆ ಅರ್ಥ ಮೂರು. ಮಹಾಭಾರತ ವೇದಕ್ಕಿಂತ ಮಿಗಿಲು. ಅಲ್ಲಿರುವ ಅರ್ಥ ಕನಿಷ್ಠ ಹತ್ತು. ಮಹಾಭಾರತದಲ್ಲಿ ಬರುವ ‘ವಿಷ್ಣುಸಹಸ್ರನಾಮ’ದ ಪ್ರತಿ ನಾಮಕ್ಕೂ ಇರುವ ಕನಿಷ್ಠ ಅರ್ಥ ನೂರು.’’ ಶ್ರೀ ಮಧ್ವರು ನೂರು ಅರ್ಥ ಹೇಳಿದರು.

ಅವರು ಆಯ್ದ ಶಬ್ದ ವಿಷ್ಣುಸಹಸ್ರನಾಮದ ಮೊದಲ ನಾಮ ‘ವಿಶ್ವಮ್‌’. ವಿಶ್ವ ಎಂದರೆ ವಾಯುದೇವರು, ವಾಯುದೇವರನ್ನು ಒಳಗೊಂಡ ಶ್ರೀ ವಿಷ್ಣು ಕೂಡ ‘ವಿಶ್ವ’ನೆ. ಭಗವಂತನ ವಿಶ್ವ, ತೈಜಸ, ಪ್ರಾಜ್ಞ, ತುರೀಯ ಎಂಬ ನಾಲ್ಕು ರೂಪಗಳಲ್ಲಿ ‘ವಿಶ್ವ’ ಮೊದಲನೆಯ ರೂಪ. ವ್ಯಾಕರಣ, ಶ್ರುತಿ, ಸ್ಮೃತಿ ಮೊದಲಾದ ಪ್ರಮಾಣ ನೀಡುತ್ತ ನೂರು ಅರ್ಥಹೇಳಿದರು. ‘ವಿಷ್ಣುಸಹಸ್ರನಾಮವೇ ಸರ್ವಶ್ರೇಷ್ಠವಾದ ಸಹಸ್ರನಾಮ. ಅದರಿಂದ ಪ್ರತಿಪಾದ್ಯನಾದ ವಿಷ್ಣುವೇ ಸರ್ವೋತ್ತಮನು’ ಎಂದು ಶ್ರೀ ಮಧ್ವರು ಹೇಳಿದಾಗ ಪಂಡಿತರೆಲ್ಲ ಪ್ರಭಾವಿತರಾಗಿ ಅತ್ಯಂತ ಭಕ್ತಿ ಹಾಗೂ ಶ್ರದ್ಧೆಯಿಂದ ಅವರನ್ನು ತಮ್ಮಲ್ಲಿ ಭಿಕ್ಷೆಗೆ ಬರಲು ಆಮಂತ್ರಿಸಿದರು.

‘‘ಇಲ್ಲಿ ವಿಷ್ಣು ದೇವಾಲಯವಿಲ್ಲ. ಅಂತಹ ಸ್ಥಳದಲ್ಲಿ ಭಿಕ್ಷೆ ಸ್ವೀಕರಿಸದಿರುವುದೆ ನಮ್ಮ ವ್ರತ’’ ಎಂದರು ಮಧ್ವರು. ಎಲ್ಲರೂ ವಿಷ್ಣು ದೇವಾಲಯ ಸ್ಥಾಪಿಸಲು ಮುಂದಾದರು. ಈ ಘಟನೆಯ ನೆನಪಿಗೆ ಶ್ರೀ ವಿಷ್ಣು ದೇವಾಲಯ ಒಂದು ಶಾಶ್ವತ ಸ್ಮಾರಕವಾಗಿ ತಲೆಯೆತ್ತಿತು.

ಪಯಸ್ವಿನೀತೀರದ ಮತ್ತೊಂದು ದೇವಾಲಯ. ಅಲ್ಲಿ ಪೂರ್ಣಪ್ರಜ್ಞರ ಆಗಮನ. ಪಂಡಿತ ಪಾಮರರ ಸಮ್ಮೇಳನ. ಅವರು ಕೊಡುವ ಭಾರೀ ಸಂಭಾವನೆಯತ್ತ ವಿದ್ವಾಂಸರ ಆಕರ್ಷಣೆಯಿದ್ದರೂ ಪೂರ್ಣಪ್ರಜ್ಞರೊಂದಿಗೆ ನೇರವಾಗಿ ವಾದಕ್ಕಿಳಿಯುವ ಆತ್ಮವಿಶ್ವಾಸ ಅಲ್ಲಿಯ ಪಂಡಿತರಲ್ಲಿರಲಿಲ್ಲ. ಅವರೆಲ್ಲ ಒಂದು ಉಪಾಯ ಹೂಡಿದರು. ಬೇರೊಬ್ಬ ದೇಶದ ಪಂಡಿತನನ್ನು ವಾದಕ್ಕೆ ಅಣಿ ಮಾಡಿ ಕೂಡಿಸಿದರು. ಗೆದ್ದರೆ ಪ್ರಶಸ್ತಿ ತಮ್ಮದು, ಸೋತರೆ ಅಪಮಾನ ಬೇರೊಬ್ಬನದು. ಇದೊಂದು ಆ ಪಂಡಿತರ ಕುತಂತ್ರವೇ ಆಗಿತ್ತು.

ವಾದ ಪ್ರಾರಂಭವಾಯ್ತು. ಆಯ್ದ ಸೂಕ್ತ ಋಗ್ವೇದದ ‘ದಾನಸೂಕ್ತ’. ಅದರ ತಾತ್ಪರ್ಯ ದಾತೃವಿನ ಪ್ರಶಂಸೆ, ಅದಾತೃವಿನ ನಿಂದೆ. ಪೂರ್ಣಪ್ರಜ್ಞರು ಯತಿಗಳು. ಅವರಿಗೆ ವಿದ್ಯಾದಾನ, ಅಭಯದಾನ ಮುಖ್ಯ. ಆದ್ದರಿಂದ ಅವರಿಗೆ ದಾನಸೂಕ್ತದ ಪರಿಚಯವಿರಲಿಕ್ಕಿಲ್ಲ ಎಂದು ಭಾವಿಸಿದರು. ಗೆಲವು ತಮ್ಮದೆ ಎಂದೂ ಬಗೆದರು. ಪೂರ್ಣಪ್ರಜ್ಞರು ಆ ಸೂಕ್ತದ ಅರ್ಥವನ್ನು ತಮಗೆಲ್ಲ ತಿಳಿಸಬೇಕೆಂದು ಆಗ್ರಹ ಮಾಡಿದರು. ಅರ್ಥವಿವರಣೆಯ ಪ್ರಸಂಗದಲ್ಲಿ ‘‘ಅಲ್ಲಿಯ ‘ಪೃಣೀಯಾತ್‌’ ಎಂಬ ಕ್ರಿಯಾಪದ ‘ಪೃಣ್‌’ ಧಾತುವಿನಿಂದ ನಿಷ್ಪನ್ನ’’ ಎಂದರು.

ಆಗ ದಾರಿ ತಪ್ಪಿಸಲು ಪ್ರತಿವಾದಿಯು ಸಲ್ಲದ ವಾಕ್ಯಾರ್ಥ ಮಾಡುತ್ತ ನುಡಿದ, ‘‘ಈ ಕ್ರಿಯಾಪದದ ಧಾತು ‘ಪೃಣ್‌’’ ಅಲ್ಲ, ಅದು ‘ಪ್ರೀಙ್‌ೌ’ ಎಂಬ ಧಾತು’’ ಎಂದು. ಅವನ ಅಜ್ಞಾನವನ್ನು ಕಂಡ ಪೂರ್ಣಪ್ರಜ್ಞರು ಎಂದರು, ‘‘ಎಲವೊ ಮೂರ್ಖ! ‘ಪೃಣೀಯಾತ್‌’ ಎಂಬ ಕ್ರಿಯಾಪದಕ್ಕೆ ‘ಪ್ರೀಙ್‌ೌ’ ಧಾತು ಮೂಲವಾಗಲು ಹೇಗೆ ಸಾಧ್ಯ? ನಿನಗೆ ‘ಪ್ರ’, ‘ಪೃ’ ಮೊದಲಾದ ಅಕ್ಷರಗಳ ಪರಿಚಯವೇ ಇದ್ದಂತಿಲ್ಲ. ಇನ್ನು ಮೇಲೆ ನೀನು ಹೀಗೆ ಮಾಡು. ಮಣ್ಣಿನಲ್ಲಿ ‘ಪ್ರ, ‘ಪ್ರಾ’, ‘ಪ್ರಿ’, ‘ಪ್ರೀ’, ಎಂಬುದಾಗಿ ವರ್ಣಮಾಲೆ ಬರೆದು ಅಭ್ಯಾಸ ಮಾಡು.’’ ಎಂದು ಹೇಳಿ ನಕ್ಕರಂತೆ.

ಮತ್ತೊಂದು ಸಭೆ. ಅಲ್ಲಿ ಕೂಡ ಶ್ರೀಮಧ್ವವನ್ನು ಸೋಲಿಸುವ ಪ್ರಯತ್ನ ಇತರ ವಿದ್ವಾಂಸರದು. ಅವರು ಆಯ್ದುಕೊಂಡ ವೈದಿಕ ಸೂಕ್ತದಲ್ಲಿ ಅಪಾಲೆಯಾಬ್ಬಳು ಇಂದ್ರದೇವನನ್ನು ಆರಾಧಿಸಿ ಅವನಿಂದ ಅನುಗೃಹೀತಳಾಗಿ ಅಪೂರ್ವ ಶರೀರಕಾಂತಿಯನ್ನು ಪಡೆದ ವಿವರಗಳಿವೆ. ‘ಅಪಾಲಾ’ ಶಬ್ದಕ್ಕೆ ಶ್ರೀಮಧ್ವರು ‘ಅತಿತರುಣಿ’ (ನವಜವ್ವನೆ) ಎಂಬರ್ಥ ಹೇಳಿದರೆ, ವಿದ್ವದ್ವೃಂದ ಒಪ್ಪದೆ, ಅದಕ್ಕೆ ಅರ್ಥ ‘ಶ್ವಿತ್ರಿಣೀ’ (ಕುಷ್ಠರೋಗಿ) ಎಂದೇ ವಾದಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X