ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಸುದೇವನಿಂದ ಇನ್ನಷ್ಟು ಪವಾಡಗಳು!

By Staff
|
Google Oneindia Kannada News


ಡಾ. ಪ್ರಭಂಜನಾಚಾರ್ಯರ ‘ಶ್ರೀಪೂರ್ಣಪ್ರಜ್ಞ ದರ್ಶನ’ ಕೃತಿ ಪರಿಚಯ ಈ ವಾರವೂ ಮುಂದುವರೆದಿದೆ... ವಾಸುದೇವರ ಇನ್ನಷ್ಟು ಪವಾಡಗಳು, ಸನ್ಯಾಸ ಸೆಳೆತದ ಪರಿ ಇಲ್ಲಿದೆ...

Madhwacharya - founder of Dwaita Siddhantaವಾಸುದೇವ ಗುರುಕುಲದಲ್ಲಿ ಹಲವಾರು ಪವಾಡ ತೋರಿಸಿದ. ನೂರಾರು ವಿದ್ಯಾರ್ಥಿಗಳಿಗೆ ಅನ್ನ, ನೀರು, ವಸ್ತ್ರ ಕೊಟ್ಟು ವಿದ್ಯಾದಾನ ಮಾಡುವ ಗುರುಕುಲ ಅದಾಗಿತ್ತು. ಗುರುಕುಲದಲ್ಲಿ ನೀರಿನ ಕೊರತೆ ಇತ್ತು. ಇದನ್ನು ನಿವಾರಿಸಲು ವಾಸುದೇವ ಕೈಯಲ್ಲಿಯ ದಂಡದಿಂದ ಭೂಮಿಯನ್ನು ಅಪ್ಪಳಿಸಿದ. ನೆಲ ಬಿರಿಯಿತು, ನೀರಿನ ಧಾರೆ ಹರಿಯತೊಡಗಿತು, ಅದುವೆ ‘ದಂಡತೀರ್ಥ’ವೆಂದು ಪ್ರಸಿದ್ಧವಾಯಿತು.

ಗುರುಕುಲದಲ್ಲಿ ನಿತ್ಯ ಅಗ್ನಿಕಾರ್ಯ ನಡೆಯುತ್ತಿತ್ತು. ಅದಕ್ಕೆ ಬೇಕಾಗುವ ಸಮಿತ್ತನ್ನು ಕಾಡಿನಿಂದ ವಿದ್ಯಾರ್ಥಿಗಳೇ ತರಬೇಕಾಗುತ್ತಿತ್ತು. ಒಮ್ಮೆ ಸಮಿತ್ತನ್ನು ಆರಿಸುವಾಗ ಜೊತೆಗೆ ಗುರುಪುತ್ರನೂ ಬಂದಿದ್ದ. ಅವನಿಗೆ ವಿಪರೀತ ತಲೆನೋವುಂಟಾಗಿ, ಪ್ರಜ್ಞಾಹೀನನಾಗಿ ನೆಲಕ್ಕುರುಳಿದ. ಹುಟ್ಟಿದಾಗಿನಿಂದ ಅವನಿಗೊಂದು ವಿಚಿತ್ರವಾದ ವ್ಯಾಧಿ ಬಾಧಿಸುತ್ತಿತ್ತು.

ವಾಸುದೇವ ಗುರುಪುತ್ರನ ಕಿವಿಯಲ್ಲಿ ಬಾಯಿಯಿಟ್ಟು ವಾಯುವನ್ನು ಊದಿದ. ಅವನ ಕಾಯಿಲೆ ವಾಸಿಯಾಯಿತು, ಅಷ್ಟೇ ಅಲ್ಲ, ಅವನಿಗೆ ವಿಲಕ್ಷಣ ಜ್ಞಾಪಕ ಶಕ್ತಿ ಪ್ರಾಪ್ತವಾಯ್ತು. ಅನೇಕ ಜನ್ಮಗಳ ಸ್ಮೃತಿ ಲಭಿಸಿತು. ಅವನೊಬ್ಬ ಮೇಧಾವಿಯಾದ. ಗುರುಕುಲದಲ್ಲಿದ್ದಾಗ ಗುರುದಕ್ಷಿಣೆಯೆಂದು ಮೃತನಾಗಿದ್ದ ಗುರುಪುತ್ರನನ್ನು ಕರೆದುತಂದು ಗುರುಗಳಿಗೆ ಒಪ್ಪಿಸಿದ್ದ. ಅದೇ ರೀತಿ ವಾಸುದೇವ ಮೃತಪ್ರಾಯನಾದ ಗುರುಪುತ್ರನನ್ನು ಬದುಕಿಸಿ ಅವನ ಜನ್ಮಜಾತ ಕಾಯಿಲೆಯನ್ನು ಗುಣಪಡಿಸಿ ಗುರುದಕ್ಷಿಣೆ ಸಲ್ಲಿಸಿದ್ದ. ಇಂಥ ಶಿಷ್ಯ ದೊರೆತದ್ದು ತಮ್ಮ ಸುಕೃತದ ಫಲವೆಂದು ಗುರುಗಳಿಗೆ ಅನಿಸಿದ್ದರೆ ಆಶ್ಚರ್ಯವಿಲ್ಲ.

ಗುರುಕುಲದಲ್ಲಿ ನಡೆದ ಇನ್ನೊಂದು ಅಚ್ಚರಿಯ ಪ್ರಸಂಗ

ಒಮ್ಮೆ ವಾಸುದೇವ ಗುರುಗಳನ್ನು ಏಕಾಂತದಲ್ಲಿ ಕರೆದು ಹೀಗೆಂದ, ‘‘ಗುರುಗಳೇ, ನಾನು ಐತರೇಯಶ್ರುತಿಯನ್ನು ಒಪ್ಪಿಸಬಯಸುತ್ತೇನೆ. ಅದರ ಅರ್ಥವನ್ನು ಸ್ವಲ್ಪ ಗಮನಿಸಿರಿ.’’ ಎಂದು. ಚರಣಚರಣಗಳನ್ನು ಅದ್ಭುತವಾಗಿ ಪಠಿಸುತ್ತ ಅದರಲ್ಲಿಯ ರಹಸ್ಯ ಹಾಗೂ ಸ್ವಾರಸ್ಯವನ್ನೇ ತೆರೆದಿಟ್ಟ. ಅದರ ಅರ್ಥಾನುಸಂಧಾನ ಶ್ರೀಹರಿಯ ಪಾರಮ್ಯವನ್ನು ತಿಳಿಸುವ ಅಪೂರ್ವ ಸಾಧನವಾಯ್ತು. ಗುರುಗಳಿಗೆ ಮೋಕ್ಷದ ದಾರಿ ತೆರೆದಂತಾಗಿತ್ತು.

ಇನ್ನು ಗುರುಕುಲದಿಂದ ತೆರಳಲು ಅಪ್ಪಣೆ ಕೊಡಬೇಕೆಂದು ಗುರುಗಳಲ್ಲಿ ಕೇಳಿದ. ಗುರುಕುಲ ಬಿಡುವ ಮುನ್ನ ಅವನು ಗುರುಗಳಿಗೆ ಇತ್ತ ಕಾಣಿಕೆ, ಗುರುದಕ್ಷಿಣೆ ಅದಾಗಿತ್ತು. ಜಗದ್ಗುರು ವಾಯುದೇವ ತೋಟಂತಿಲ್ಲಾಯರಿಗೆ ನೀಡಿದ ಜ್ಞಾನಸಂದೇಶ ಅದಾಗಿತ್ತು, ‘ದಕ್ಷಿಣಾ ಜ್ಞಾನಸಂದೇಶಃ’ ಎಂಬ ಭಾಗವತದ ಶ್ರೀಕೃಷ್ಣನ ಮಾತು ಗುರುಗಳ ಕಣ್ಮುಂದೆ ಸುಳಿದುಹೋಯಿತು. ಶಿಷ್ಯನ ಮಹಿಮೆ ಗುರುಗಳಿಗೆ ಒಗಟಾಗಿಯೇ ಉಳಿಯಿತು.

(ಶ್ರೀಮಧ್ವಾಚಾರ್ಯರು ಈ ರೀತಿಯಾಗಿ ಗುರುಗಳಿಗೆ ತಿಳಿಸಿದ ಐತರೇಯ ಶ್ರುತಿಯ ಮರ್ಮಕ್ಕೆ ಸಾಕ್ಷಿಯಾಗಿ ಇಂದೂ ಅವರ ದಶೋಪನಿಷತ್‌ ಭಾಷ್ಯಗಳಲ್ಲಿ ಒಂದಾದ ಐತರೇಯಭಾಷ್ಯ ಉಂಟು. ಅದರ ಅಧ್ಯಯನ ಉಪನಿಷತ್‌ ಪ್ರಪಂಚದ ರಹಸ್ಯವನ್ನು ತೆರೆದಿಡುವ ಪರಿಯು ವ್ಯಾಖ್ಯಾನ ಪ್ರಪಂಚದ ಅದ್ಭುತಗಳಲ್ಲೊಂದು.)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X