• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಮೂಲವ್ಯಾಧಿ'ಗೆ ಯೋಗ ಮತ್ತು ನಿಸರ್ಗ ಚಿಕಿತ್ಸೆ(ಭಾಗ 2)

By Staff
|

ಶಸ್ತ್ರ ಚಿಕಿತ್ಸೆಗೆ ಒಳಗಾದರೂ, ಮೂಲವ್ಯಾಧಿ ಮತ್ತೆ ಬರುವುದಿಲ್ಲ ಎಂಬುದಕ್ಕೆ ಪುರಾವೆಗಳಿಲ್ಲ. ಹೀಗಾಗಿ ಯೋಗಾಭ್ಯಾಸ, ನಿಸರ್ಗತಜ್ಞರು ಸೂಚಿಸಿದ ಉಪವಾಸ, ಎನಿಮಾ, ಪಥ್ಯಾಹಾರ ಸೇವನೆಯಿಂದ ಮೂಲವ್ಯಾಧಿಗೆ ಗುಡ್ ಬೈ ಹೇಳಬಹುದು.

  • ಡಾ.'ಜೀವಿ"ಕುಲಕರ್ಣಿ, ಮುಂಬೈ

Surgery can be avoided through nature treatment for pilesನನ್ನ ಅರ್ಧಾಂಗಿಗೆ ಮೂಲವ್ಯಾಧಿಯ ಬಾಧೆಯು ವಿಪರೀತಕ್ಕೆ ತಲುಪಿದಾಗ ನಾವು ಒಬ್ಬ ಪ್ರಸಿದ್ಧ ಸರ್ಜನ್‌ರನ್ನು ಕಂಡೆವು. ಅವರು ಹಲವಾರು ಟೆಸ್ಟ್ ಮಾಡಿದರು. "ಅದು 'ಮೆಲಿಗ್ನಂಟ್" ಆಗಿದೆಯೇನು ಎಂಬುದನ್ನು ಪರೀಕ್ಷಿಸುವುದೂ ಅವಶ್ಯ" ಎಂದರು. ಸುದೈವದಿಂದ ಅದು 'ಮೆಲಿಗ್ನಂಟ್" ಆಗಿರಲಿಲ್ಲ. ಇದಕ್ಕೆ ಸರ್ಜರಿ ಒಂದೇ ಉಪಾಯ ಎಂದಾಗ, ನಾನು ಕೇಳಿದೆ, “ಪೂರ್ತಿ ಗುಣವಾಗುವುದೇ, ಮತ್ತೆ ಮರುಕಳಿಸುವುದಿಲ್ಲವೇ?" ಎಂದು. ಆಗ ಡಾಕ್ಟರರು ತಲೆ ಅಲ್ಲಾಡಿಸುತ್ತ ಅಂದರು, “ಉಪಶಮನ ದೊರೆಯುವುದು. ಆದರೆ ಮರಳಿ ಬರುವುದಿಲ್ಲ ಎಂದು ನಾವು ಹೇಳಲಾರೆವು."

ಆಮೇಲೆ ವೈದ್ಯರು ಕೆಲವು ಗುಳಿಗೆ ಬರೆದುಕೊಟ್ಟರು, “ಎರಡು ವಾರದ ನಂತರ ಬಂದು ಭೇಟಿಯಾಗಿ ಶಸ್ತ್ರಚಿಕಿತ್ಸೆಗೆ ದಿನವನ್ನು ನಿಶ್ಚಯಿಸಿ ಹೋಗಿರಿ" ಎನ್ನುತ್ತ ಮತ್ತೆ ಬರಲು ಹೇಳಿದರು. ಈ ಪ್ರಕ್ರಿಯೆಯಲ್ಲಿ ಸಾವಿರಾರು ರೂಪಾಯಿ ವೆಚ್ಚವಾಯಿತು. ಇಲ್ಲಿ ಹಣದ ಪ್ರಶ್ನೆಗಿಂತ ಪೂರ್ತಿ ವಾಸಿಮಾಡುವ ಆಶ್ವಾಸನೆ ಬೇಕಿತ್ತು. ನನ್ನ ಮಡದಿಗೆ 'ಶಸ್ತ್ರಚಿಕಿತ್ಸೆ" ಎಂದರೆ ಒಂದು ರೀತಿಯ ಅಲರ್ಜಿ. “ನೀವೇ ಏನಾದರೂ ಉಪಾಯ ಮಾಡಿರಿ" ಎಂದಳು. ನಾನು ಆದಿನಗಳಲ್ಲಿ ಯೋಗ ಹಾಗೂ ನಿಸರ್ಗಚಿಕಿತ್ಸೆಯಲ್ಲಿ ತೊಡಗಿದ್ದೆ, ಹೆಚ್ಚಿನ ಆಸಕ್ತಿ ತಳೆದಿದ್ದೆ. “ಸರಿ. ನಾನು ಹೇಳಿದಂತೆ ಕೇಳಲು ನೀನು ಸಿದ್ಧಳಿದ್ದರೆ ಪ್ರಯತ್ನಿಸುವೆ" ಎಂದೆ. ಅವಳ ಕಾಯಿಲೆ 'ಮೆಲಿಗ್ನಂಟ್" ಆಗಿರಲಿಲ್ಲ ಅದೊಂದು ನಮಗೆ 'ದೈವೀ ಕೃಪೆಯಂತೆ" ಕಂಡಿತು. ಅಂತಾರಾಷ್ಟ್ರಿಯ ಖ್ಯಾತಿಯ ನಿಸರ್ಗ ತಜ್ಞರೂ ನನ್ನ ಗುರುಗಳೂ ಆಗಿದ್ದ ಡಾ. ಪದ್ಮನಾಭ ಬೋಳಾರ್ ಅವರ ಬೆಂಬಲ ನನಗಿತ್ತು. ಮಿತ್ರ ಡಾ. ಬಾಖ್ರು ಅವರ ಮಾರ್ಗದರ್ಶನವಿತ್ತು. ಡಾ.ವಿಠ್ಠಲದಾಸ ಮೋದಿಯವರ ಸಾಹಿತ್ಯ ನನ್ನ ಬಳಿಯಿತ್ತು. ಇದಕ್ಕೆ ಅತಿರಿಕ್ತವಾಗಿ ಗುರುಗಳಾದ ಹಠಯೋಗಿ ನಿಕಂ ಗುರೂಜಿ, ಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರರ ಶುಭಚಿಂತನೆಗಳು ಕೂಡ ನನ್ನ ಬೆಂಬಲವಾಗಿದ್ದವು.

ಮೂಲವ್ಯಾಧಿಗೆ ಮೂಲ ಕಾರಣ ಮಲಬದ್ಧತೆ. ಕೆಲವರಿಗೆ ಕರುಳಿನ ಶಕ್ತಿಹೀನತೆಯೂ ಕಾರಣವಾಗಿರುತ್ತದೆ. ಕೆಲವರು ಮಲಬದ್ಧತೆ ನಿವಾರಿಸಲು ಹಲವಾರು ಔಷಧಿ ಸೇವಿಸುತ್ತಾರೆ, ಅದರಿಂದ ಮಲದ್ವಾರ ಅಶಕ್ತವಾಗುವದು, ಸುತ್ತಲಿನ ನರಗಳು ಬಾಯುವವು, ಅದರಿಂದ ರಕ್ತಸ್ರಾವವಾಗುತ್ತದೆ. ಹೆಚ್ಚಾಗಿ ಗರ್ಭಿಣಿಯರಿಗೆ ಮೂಲವ್ಯಾಧಿ ಕಾಡುತ್ತದೆ. ದೀರ್ಘಕಾಲ ನಿಂತು ಇಲ್ಲವೆ ಕುಳಿತು ಕೆಲಸಮಾಡುವವರು ಮೂಲವ್ಯಾಧಿಗೆ ಬಲಿಯಾಗುತ್ತರೆ. ಕೆಲಸಲ ಮಾನಸಿಕ ಸ್ಥಿತಿಯು ಮೂಲವ್ಯಾಧಿಗೆ ಕಾರಣವಾಗುತ್ತದೆ. ಮಲವಿಸರ್ಜನೆಯ ಕಾಲದಲ್ಲಿ ತೋರುವ ಅವಸರ ಮಲದ್ವಾರದ ಸ್ನಾಯುಗಳ ಮೇಲೆ ವಿಪರೀತ ಪರಿಣಾಮ ಉಂಟು ಮಾಡುವುದರಿಂದ ಮೂಲವ್ಯಾಧಿ ಸಂಭವಿಸುತ್ತದೆ. ಇವುಗಳನ್ನೆಲ್ಲ ಪರಿಶೀಲಿಸಿದಾಗ ನನ್ನ ಮಡದಿಗೆ ಮೂಲಕಾರಣ ಮಲಬದ್ಧತೆ ಆಗಿತ್ತು, ಅದು ಅನುವಂಶಿಕವೂ ಆಗಿತ್ತು. ನಾನು ಚಿಕಿತ್ಸೆ ಪ್ರಾರಂಭಿಸಿದೆ.

1. ಮೂರು ದಿನ ಪೂರ್ತಿ ಉಪವಾಸದಿಂದಿರಲು ಹೇಳಿದೆ. ಮುಂಜಾನೆ, ಮಧ್ಯಾಹ್ನ, ಮತ್ತು ಸಂಜೆಯ ಸಮಯದಲ್ಲಿ ಮೂರು ದೊಡ್ಡ ಗ್ಲಾಸ್ ನೀರು ಸೇವಿಸಲು ಕೊಟ್ಟೆ. ಅದರಲ್ಲಿ ಒಂದು ನಿಂಬೆಹಣ್ಣಿನ ರಸ ಹಾಗೂ ಒಂದು ಟೇಬಲ್ ಸ್ಪೂನ್ ಮಧುವನ್ನು ಬೆರೆಸಿದ್ದೆ.

2. ಬರಿ ನೀರೇ ಆಹಾರವಾದರೆ ಆಗ ಮೂರೂ ದಿನ ಎನಿಮಾ ಪ್ರಯೋಗ ಅನಿವಾರ್ಯವಾಗುತ್ತದೆ. ಎನಿಮಾದಿಂದ ಇನ್ನೊಂದು ಲಾಭವುಂಟು. ಹೊಟ್ಟೆಯಲ್ಲಿ ಉಳಿದಿರಬಹುದಾದ ಟಾಕ್ಸಿನ್ಸ್(ವಿಷಾಣುಗಳು) ಹೊರಬೀಳುತ್ತವೆ. ಕರುಳ ಮಾರ್ಗ ಸ್ವಚ್ಛಗೊಳ್ಳುತ್ತದೆ.

3. ಮೂರನೆಯ ದಿನದಿಂದ ಹಣ್ಣಿನ ರಸದ ಆಹಾರ ಪ್ರಾರಂಭವಾಯ್ತು. ಸೇಬು (ಎಪಲ್), ದ್ರಾಕ್ಷೆ(ಗ್ರೇಪ್ಸ್), ಮೋಸಂಬಿ(ಸ್ವೀಟ್ ಲೆಮನ್), ಕಿತ್ತಳೆ(ಸಂತ್ರ) ಮುಂತಾದ ಹಣ್ಣು ಮಾತ್ರ ಸೇವಿಸಲು ಕೊಟ್ಟೆ.

4. ಮತ್ತೆ ಮೂರು ದಿನಗಳ ನಂತರ ಘನ ಆಹಾರ ಪ್ರಾರಂಭವಾಯಿತು. ಕೊಬ್ಬು(ಫ್ಯಾಟ್ ಕಂಟೆಂಟ್) ಕಡಿಮೆ ಎಂದು ಆಕಳ ಹಾಲು, ಸ್ವಲ್ಪೇ ಅನ್ನ, ಚಪಾತಿ, ಹೆಚ್ಚು ಹಸಿರು ತರಕಾರಿ ಬಸಲೆ(ಪಾಲಕ್), ಮೆಂಥ್ಯ(ಮೇಥಿ), ಸೇವಿಸಲು ಹೇಳಿದೆ. ಅವರೆ ಹಾಗೂ ಚೆನ್ನಂಗಿ ಬೇಳಿಯಿಂದ ಮಲಬದ್ಧತೆ ಹೆಚ್ಚುತ್ತದೆ. ನಾವು ಸಾತ್ವಿಕ-ಶಾಖಾಹಾರಿ ಆಗಿದ್ದರಿಂದ ಹೆಚ್ಚಿನ ತೊಂದರೆಯಾಗಲಿಲ್ಲ. (ಮಾಂಸ, ಮೀನು, ಮೊಟ್ಟೆ ತಿನ್ನುವವರಿಗೆ ತೊಂದರೆ ಇರುವುದರಿಂದ ಅವನ್ನು ಅವರು ಬಿಡಬೇಕು).

5. ಈಗ ಎನಿಮಾ ಕೊಡುವುದಿಲ್ಲ. ಮಲವಿಸರ್ಜನೆ ಸುಲಭವಾಗಲು ಡ್ರೈಪ್ರುಟ್ಸ್ ಅಂದರೆ ೪ ಅಂಜೂರಿ, ೮ ಕರಿ ದ್ರಾಕ್ಷಿ ನೀರಲ್ಲಿ ರಾತ್ರಿ ನೆನೆಯಿಟ್ಟು ಬೆಳಿಗ್ಗೆ ಸೇವಿಸಲು ಹೇಳಿದೆ. ಇದರಿಂದ ಮಲವಿಸರ್ಜನೆ ಸುಲಭವಾಗಿ ಆಗುತ್ತದೆ. ಇದನ್ನು ಬೆಳಗಿನ ಚಹಾ ಕಾಫಿಗಿಂತ ಮೊದಲು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ನಾವಿಬ್ಬರೂ ಚಹಾ-ಕಾಫಿ ಸೇವಿಸುವುದಿಲ್ಲ, ಆದ್ದರಿಂದ ಆ ಸಮಸ್ಯೆ ನಮಗೆ ಇರಲಿಲ್ಲ. ಮಡಿ ಮಾಡುವವರು ಬೇಗ ಸ್ನಾನಮಾಡಿ ಸೇವಿಸಬೇಕು.

6. ಮಾವಿನ ಗೊರಟ ಸಂಗ್ರಹಿಸಿ ನೆರಳಲ್ಲಿ ಒಣಗಿಸಿ ಪುಡಿಮಾಡಿ ಇಡುತ್ತಾರೆ. ಈ ಪುಡಿ ಆಯುರ್ವೇದ ಅಂಗಡಿಯಲ್ಲೂ ಸಿಗುತ್ತದೆ. ಅದರ ಪೌಡರ ದಿನಕ್ಕೆ ಎರಡು ಚಮಚೆ ಮುಂಜಾನೆ ಸಂಜೆ ಜೇನಿನೊಡನೆ ಸೇವಿಸಲು ಹೇಳಿದೆ.

7. ರಕ್ತಸ್ರಾವವಿದ್ದ ಮೂಲವ್ಯಾಧಿಗೆ ನೀರಲ ಹಣ್ಣು ಬಹಳ ಒಳ್ಳೆಯದು. ಸುದೈವದಿಂದ ನಿರಲಹಣ್ಣು ಆಗ ಪೇಟೆಯಲ್ಲಿ ಲಭ್ಯವಾಗಿತ್ತು.

8. ಮೂಲಂಗಿಯನ್ನು ಹೆರೆದು ಮೊಸರಲ್ಲಿ ಕಲಸಿ ಸ್ವಲ್ಪ ಉಪ್ಪು ಹಾಗೂ ನಿಂಬೆರಸ ಬೆರೆಸಿ ಒಗ್ಗರಣೆ ಕೊಟ್ಟರೆ ಬಹಳ ರುಚಿಕರವಾಗಿರುತ್ತದೆ. ಅದು ಮೂಲವ್ಯಾಧಿಗೆ ಬಹಳ ಒಳ್ಳೆಯದು. ನನ್ನ ಮಡದಿಗೆ ಮೂಲಂಗಿಯ ವಾಸನೆ ಕಂಡರೆ ಆಗದು. ಇಷ್ಟೆಲ್ಲ ಒಳ್ಳೆಯ ಸಾಧನ ಇರುವಾಗ ಅದೊಂದು ಬಿಟ್ಟರೆ ನಡೆಯುತ್ತದೆ ಅಂದೆ.

9. ಹಾಲಿನಲ್ಲಿ ಬೆರಸಿ ಮೂಲಂಗಿಯನ್ನು ಅರೆದು ಪೇಸ್ಟ ಮಾಡಿ ಗುದದ್ವಾರದ ಸುತ್ತಲೂ ಹಚ್ಚಿದರೆ ಬಾವು ಕಡಿಮೆ ಆಗುತ್ತದೆ ಎಂದು ಓದಿದ್ದೆ. ಅದರ ಅವಶ್ಯಕತೆ ಬೀಳಲಿಲ್ಲ.

10.ಎಂಟು ಗ್ಲಾಸು ನೀರು ದಿನಕ್ಕೆ ಕುಡಿಯುವುದು ಕಡ್ಡಾಯ. ನೀರು ಕಡಿಮೆ ಕುಡಿಯುವವರಿಗೇ ಮಲಬದ್ಧತೆ ಆಗುತ್ತದೆ.

11.ಡೋಣಿಸ್ನಾನ (ಟಬ್ ಬಾಥ್) ಒಳ್ಳೆಯದು. ನಿಸರ್ಗ ಕೇಂದ್ರಗಳಲ್ಲಿರುವಂತಹ ಟಬ್ ಮನೆಯಲ್ಲಿ ಇಡಲು ಸಾಧ್ಯವೇ? ಬಟ್ಟೆಗಳನ್ನು ನೆನೆಯಿಡಲು ಪ್ಲ್ಯಾಸ್ಟಿಕ್ ಟಬ್ ದೊರೆಯುತ್ತವೆ. ನಿಮ್ಮ ದೇಹ ಸ್ಥೂಲವಾಗಿರದಿದ್ದರೆ ಅದರಲ್ಲಿ ಕುಳಿತುಕೊಳ್ಳಬಹುದು. ಅಂಥ ಟಬ್-ಬಾಥ್ ವ್ಯವಸ್ಥೆ ಶ್ರೀಮತಿಗಾಗಿ ಮಾಡಿದೆ. ತಣ್ಣೀರಲ್ಲಿ ಅರ್ಧಗಂಟೆ ಕೂಡುವುದು ಒಳ್ಳೆಯದು. ನೀರು ಹೊಕ್ಕಳ ವರೆಗೆ ಬರಬೇಕು. ದಿನಕ್ಕೆ ಎರಡು ಸಲ ಮಾಡಬಹುದು. ಇದರ ಮಹತ್ವ ತಿಳಿಯಬೇಕಾದರೆ ಗಾಂಧೀಜಿಯವರ ಪ್ರಕೃತಿಚಿಕಿತ್ಸಾ ಪ್ರಯೋಗಗಳ ಬಗ್ಗೆ ಓದಬೇಕು.

12.ಹೊಟ್ಟೆಗೆ ಮಡಪ್ಯಾಕ್ ಕೊಟ್ಟರೆ ಒಳ್ಳೆಯದು. ನಾವು ಹುಬ್ಬಳ್ಳಿಯ ಶರ್ಮಾ ನಿಸರ್ಗ ಚಿಕಿತ್ಸಾ ಕೇಂದ್ರದಿಂದ ಜೇಡಿಮಣ್ಣು ತಂದಿದ್ದೆವು. ಆ ಪ್ರಯೋಗವನ್ನೂ ಮಾಡಿದೆವು. ಅದು ಸಾಧ್ಯವಿಲ್ಲದಿದ್ದರೆ ಕಿಪ್ಪೊಟ್ಟೆಯ ಮೇಲೆ ಒದ್ದೆ ಬಟ್ಟೆ ಇಟ್ಟರೂ ಲಾಭವಾಗುತ್ತದೆ.

ಕೊನೆಯದಾಗಿ ನಾವು ಯೋಗಾಚಾರ್ಯ ಬಿ.ಕೆ.ಎಸ್ ಅಯ್ಯಂಗಾರರ 'ಯೋಗದೀಪಿಕೆ"ಯಲ್ಲಿ ಹೇಳಿದ ಆಸನಗಳನ್ನು ಅನುಸರಿಸಿದೆವು. ಶೀರ್ಷಾಸನ, ಸರ್ವಾಂಗಾಸನ, ಜಠರ-ಪರಿವರ್ತನಾಸನ, ಸುಪ್ತಪಾದಾಂಗುಷ್ಠಾಸನ, ಮತ್ಸ್ಯಾಸನ, ಸಿಂಹಾಸನ, ಶಲಭಾಸನ, ಧನುರಾಸನ, ಊರ್ಧ್ವಧನುರಾಸನ, ದ್ವಿಪಾದವಿಪರೀತ ದಂಡಾಸನ, ಶಲಭಾಸನ. ಇನ್ನು ಪ್ರಾಣಾಯಮದಲ್ಲಿ, ಉಜ್ಜಾಯಿ, ನಾಡಿಶೋಧನ ಪ್ರಾಣಾಯಮ ಅಲ್ಲದೆ ಶವಾಸನವನ್ನೂ ಶಿಫಾರಸು ಮಾಡಿದ್ದಾರೆ. ನನ್ನ ಮಡದಿ ಅಂಬಿಕಾ ಯೋಗ ಕುಟೀರದಲ್ಲಿ ಹೆಚ್ಚಿನ ಆಸನಗಳನ್ನು ಕಲಿತಿದ್ದಳು. ಶೀರ್ಷಾಸನವನ್ನು ನಾನೇ ಕಲಿಸಿದೆ. ಶೀರ್ಷಾಸನದಲ್ಲಿ ಪದ್ಮಾಸನ ಹಾಕುವಷ್ಟು ಪರಿಣತಿ ಪಡೆದಿದ್ದಳು. ಶುದ್ಧಿಕ್ರಿಯೆಗಳಾದ ಜಲನೇತಿ, ಜಲಧೌತಿ ಕೂಡ ಮಾಡುತ್ತಿದ್ದಳು. ಇವೆಲ್ಲ ಸಹಕಾರಿಯಾದವು.

ಮೂರು ತಿಂಗಳಲ್ಲಿ ಮೂಲವ್ಯಾಧಿಗೆ ಗುಡ್‌ಬೈ ಹೇಳಿದ್ದಾಯಿತು. ಯೋಗಾಭ್ಯಾಸದಿಂದ, ನಿಸರ್ಗತಜ್ಞರು ಸೂಚಿಸಿದ ಉಪವಾಸ, ಎನಿಮಾ, ಪಥ್ಯಾಹಾರ ಸೇವನೆಯಿಂದ ಮೂಲವ್ಯಾಧಿಯಿಂದ ಮುಕ್ತಿ ಪಡೆಯಬಹುದು.

ಯೋಗ, ಪ್ರಕೃತಿ ಸಂಬಂಧಿ ಪ್ರಶ್ನಗಳಿದ್ದರೆ ಲೇಖಕರನ್ನು ಸಂಪರ್ಕಿಸಬಹುದು

ಪೂರಕ ಓದಿಗೆ-

'ಮೂಲವ್ಯಾಧಿ'ಗೆ ಯೋಗ ಮತ್ತು ನಿಸರ್ಗ ಚಿಕಿತ್ಸೆ(ಭಾಗ 1)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X