• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿವರಾಂ ಸಾಹಿತ್ಯಓದಿ ನಗದವರ್ಯಾರು?

By Staff
|

‘ರಾಶಿ’ಯವರು ನಗೆ ಸಾಹಿತ್ಯದಲ್ಲಿ ನಿಸ್ಸೀಮರು. ಅವರು ಈ ವಿಷಯದಲ್ಲಿ ಹದಿಮೂರು ಕೃತಿಗಳನ್ನು ರಚಿಸಿದ್ದಾರೆ. ‘ತುಟಿ ಮೀರಿದುದು’, ‘ಕೆಣಕೋಣು ಬಾರಾ’ (ಬೇಂದ್ರೆಯವರ ‘ಕುಣಿಯೋಣು ಬಾರಾ’ ದಿಂದ ಪ್ರೇರಣೆ ಪಡೆದ ಅಣಕವಾಡುಗಳ ಸಂಗ್ರಹ). ‘ಕೊರವಂಜಿಯ ಪಡುವಣ ಯಾತ್ರೆ’, ‘ಕೊರವಂಜಿ ಕಂಡ ನಗು ಸಂಸಾರಗಳು’, ‘ಜೇಬುಗಳ್ಳ ಜಿಮ್ಮಿ’ ಮೊದಲಾದವು ನಗೆ ಸಾಹಿತ್ಯದ ಮಾದರಿಗಳು.

  • ಡಾ।‘ಜೀವಿ’ ಕುಲಕರ್ಣಿ, ಮುಂಬಯಿ

jeevi65@gmail.com

In the memory of Dr.M. Shivaram (Raashi), A Kannada Humoristಡಾ। ಶಿವರಾಂ ಅವರು ಎಷ್ಟು ಒಳ್ಳೆಯ ವೈದ್ಯರಾಗಿದ್ದರೋ ಅಷ್ಟೇ ಉತ್ತಮ ಸಾಹಿತಿಗಳೂ, ಚಿಂತಕರೂ, ವೈಜ್ಞಾನಿಕ ವಿಷಯದ ಬರಹಗಾರರೂ ಆಗಿದ್ದರು. ಅವರಿಗೆ ಸಾಹಿತ್ಯದಲ್ಲಿ ಬಾಲ್ಯದಿಂದಲೂ ಒಲವು ಇತ್ತು. ಇಂಗ್ಲಿಷ್‌ ಮ್ಯಾಗಜಿನ್‌ ‘ಪಂಚ್‌’ ಇವರ ಮೇಲೆ ಪ್ರಭಾವ ಬೀರಿತ್ತು. ಆ ಮಾದರಿಯ ಮಾಸ ಪತ್ರಿಕೆಯನ್ನು ಕನ್ನಡದಲ್ಲಿ ಪ್ರಾರಂಭಿಸಬೇಕೆಂದು ನಿಶ್ಚಯಿಸಿದರು. ಅದರ ಫಲವಾಗಿ 1942ರಲ್ಲಿ ಯುಗಾದಿಯ ದಿನ ‘ಕೊರವಂಜಿ’ ರೂಪ ತಳೆಯಿತು. ಪ್ರಕಾಶನದ ಜವಾಬ್ದಾರಿಯನ್ನು ಬಿ.ಎನ್‌.ಗುಪ್ತಾ ವಹಿಸಿಕೊಂಡರು.

‘ರಾಶಿ’ಯವರ ಹೊಣೆ ಪತ್ರಿಕೆಯನ್ನು ಸಂಪಾದಿಸುವುದಾಗಿತ್ತು. ಇವರಿಗೆ ತುಂಬು ಹೃದಯದ ಪ್ರೋತ್ಸಾಹ ದೊರೆತದ್ದು ಪ್ರೊ. ನಾ. ಕಸ್ತೂರಿಯವರಿಂದ. ಆರ್‌.ಕೆ.ಲಕ್ಷ್ಮಣ ಕಸ್ತೂರಿಯವರ ನೆಚ್ಚಿನ ವಿದ್ಯಾರ್ಥಿಯಾಗಿದ್ದ. ಅವನ ಚಿತ್ರಕಲಾ ಪ್ರತಿಭೆಯನ್ನು ಗುರುತಿಸಿದ ನಾ. ಕಸ್ತೂರಿಯವರು ಅವನಿಂದ ‘ಕೊರವಂಜಿ’ಯ ಅಂಕಗಳಿಗೆ ಮಾರ್ಮಿಕ ಚಿತ್ರಗಳನ್ನು ಬರೆಸಿದರು. ಅವನಿಗೆ ಪ್ರೋತ್ಸಾಹನಪರ ಸಂಭಾವನೆಯನ್ನೂ ಕೊಡಿಸುತ್ತಿದ್ದರು. ಪ್ರಾರಂಭದಲ್ಲಿ ಇದ್ದ ಲೇಖಕರು ಮೂವರು ಮಾತ್ರ, ‘ರಾಶಿ’, ನಾ. ಕಸ್ತೂರಿ ಹಾಗೂ ಶ್ರೀರಂಗರು( ಆದ್ಯ ರಂಗಾಚಾರ್ಯರು). ‘ರಾಶಿ’ ಮಕ್ಕಳ ಹೆಸರಿನಲ್ಲಿಯೂ ಲೇಖನ ಬರೆದು ಲೇಖನಗಳ ಕೊರತೆಯನ್ನು ನೀಗಿಸುತ್ತಿದ್ದರು.

ಹಾಸ್ಯರಸದ ರಸದೌತಣವನ್ನು ಉಂಡು ಹೆಚ್ಚಿನ ಲೇಖಕರು ಬರೆಯತೊಡಗಿದರು. ಅವರಲ್ಲಿ ಪ್ರಮುಖರೆಂದರೆ- ‘ಕೇಫ’ (ಡಾ। ಕೇಶವಮೂರ್ತಿ), ದಾಶರಥಿ ದೀಕ್ಷಿತ, ಅ.ರಾ.ಸೇ.(ಸೇತೂರಾಮರಾವ್‌). ಕಾರಂತರೂ ಆಗಾಗ ಲೇಖನ ಬರೆಯುತ್ತಿದ್ದರು. ಕೊರವಂಜಿಯ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಹಿರಿಯ ಸಾಹಿತಿಗಳೇ ನಾ. ಕಸ್ತೂರಿಯವರು. ಕೊರವಂಜಿಯ ಬೇರು, ಗಿಡ, ಫಲ ಆದವರು ನಾ ಕಸ್ತೂರಿಯವರು ಎಂದರೆ ಅತಿಶಯೋಕ್ತಿಯಲ್ಲ. ಅವರ ‘ಅನರ್ಥಕೋಶ ರೂಪ ತಾಳಿದ್ದು ಇಲ್ಲೇ. ಅದರ ಕೆಲವು ಉದಾಹರಣೆ ಹೀಗಿವೆ:

ದಂಪತಿ : ದಮ್ಮು ಹಿಡಿದು ದುಡಿಯುವ ಗಂಡು ಜೀವ.

ಏಕಾಂತ : ‘ಏನೂಂದ್ರೆ’, ‘ಹಲೋ ಪತಿ’ ಅನ್ನೋ ಪದಕ್ಕೂ ಇದೇ ಅರ್ಥ.

ಓಂ : ಅನಾದಿ ಭಾರತೀಯನ ಮೊದಲ ತೇಗು.

ಅಗಸ : ಕೇವಲ ಬಟ್ಟೆಗಳಿಂದಲೇ ಬಂಡೆಗಳನ್ನು ಪುಡಿಮಾಡಲು ಯತ್ನಿಸುವವ.

ಆರ್ಯಪುತ್ರ : ಮಾವನ ಮಗನೇ ಎಂದು ಭಾರತೀಯ ನಾರಿಯರು ಹಿಂದೆ ಕರೆಯುತ್ತಿದ್ದ ರೀತಿ. ಈಗ ಬರಿ ಮಗನೇ ಎನ್ನುತ್ತಾರೆ.

ಗಾಯಕ : ಗಾಯ ಪಡಿಸುವವನು.

25 ವರ್ಷಗಳ ತರುವಾಯ ‘ರಾಶಿ’ಯವರು ‘ಕೊರವಂಜಿ’ಯನ್ನು ಕಾಡಿಗೆ ಕಳಿಸಿದರು. (ನಿಲ್ಲಿಸಿದರು). ಪ್ರಕಟನೆ ನಿಲ್ಲಿಸಬಾರದೆಂದು ಸಾವಿರಾರು ಮನವಿ ಪತ್ರಗಳು ಬಂದವಂತೆ. ‘ರಾಶಿ’ಯವರ ಮಗ ಶ್ರೀ ಎಂ.ಶಿವಕುಮಾರ ಅವರ ಪ್ರಕಾರ ಗ್ರಾಹಕರ ಕೊರತೆ ಎಂಬ ಹಲವರ ಅನಿಸಿಕೆ ಕೆಲಮಟ್ಟಿಗೆ ನಿಜವಾಗಿದ್ದರೂ, ‘ರಾಶಿ’ಯವರ ಅಧ್ಯಾತ್ಮದಲ್ಲಿಯ ಹೆಚ್ಚಿನ ಆಸಕ್ತಿಯೂ ಒಂದು ಕಾರಣವಾಗಿತ್ತು. ‘ಕೊರವಂಜಿಯ ತುಂಬ ಹಾಸ್ಯವನ್ನು ಸೃಷ್ಟಿಸುವುದರಲ್ಲಿ ಖುಶಿ ಕಡಿಮೆಯಾಗುತ್ತ ಬಂತು’ ಎನ್ನುತ್ತಾರೆ. ಕೊರವಂಜಿ ಪ್ರಕಟನೆಯನ್ನು ನಿಲ್ಲಿಸುವಾಗ ಅದರ ಖಾತೆಯಲ್ಲಿದ್ದ ಹಣವನ್ನು ( ರೂ.6000) ಕನ್ನಡ ಸಾಹಿತ್ಯ ಪರಿಷತ್ತಿಗೆ ದತ್ತಿ ನಿಧಿಯಾಗಿ ಕೊಟ್ಟರಂತೆ.

ಡಾ। ಶಿವರಾಂ ಅವರು ತಮ್ಮ ವೈದ್ಯಕೀಯ ವ್ಯವಸಾಯದಲ್ಲಿ ಬಹುದೊಡ್ಡ ಹೆಸರನ್ನು ಗಳಿಸಿದ್ದರೂ, ಉತ್ಕೃಷ್ಟ ಪ್ರ್ಯಾಕ್ಟೀಸ್‌ ಇದ್ದ ಡಾಕ್ಟರರಾಗಿದ್ದರೂ, ಸೃಜನಶೀಲ ಸಾಹಿತ್ಯ ರಚನೆಗಾಗಿ ಸಮಯವನ್ನು ತೆಗೆದಿಡುತ್ತಿದ್ದರು. ಅವರು ನಲವತ್ತು ಕೃತಿಗಳನ್ನು ರಚಿಸಿದ್ದರೆಬುದನ್ನು ಗಮನಿಸಿದಾಗ ಯಾರಿಗಾದರೂ ಅಚ್ಚರಿಯಾಗುವುದು ಸಹಜ.

‘ರಾಶಿ’ಯವರು ನಗೆ ಸಾಹಿತ್ಯದಲ್ಲಿ ನಿಸ್ಸೀಮರು. ಅವರು ಈ ವಿಷಯದಲ್ಲಿ ಹದಿಮೂರು ಕೃತಿಗಳನ್ನು ರಚಿಸಿದ್ದಾರೆ. ‘ತುಟಿ ಮೀರಿದುದು’, ‘ಕೆಣಕೋಣು ಬಾರಾ’ (ಬೇಂದ್ರೆಯವರ ‘ಕುಣಿಯೋಣು ಬಾರಾ’ ದಿಂದ ಪ್ರೇರಣೆ ಪಡೆದ ಅಣಕವಾಡುಗಳ ಸಂಗ್ರಹ). ‘ಕೊರವಂಜಿಯ ಪಡುವಣ ಯಾತ್ರೆ’, ‘ಕೊರವಂಜಿ ಕಂಡ ನಗು ಸಂಸಾರಗಳು’, ‘ಜೇಬುಗಳ್ಳ ಜಿಮ್ಮಿ’ ಮೊದಲಾದವು ನಗೆ ಸಾಹಿತ್ಯದ ಮಾದರಿಗಳು. ಇವುಗಳಲ್ಲಿ ಕವಿತೆಗಳಿವೆ, ಅಣಕವಾಡುಗಳಿವೆ, ಯಾತ್ರೆಯ ಕಥನಗಳಿವೆ, ವ್ಯಕ್ತಿಚಿತ್ರಗಳಿವೆ.

ಫ್ರೀ ವರ್ಸ್‌ ಮಾದರಿಯ ಕವನಗಳನ್ನು, ನವ್ಯ ಕವಿಗಳಿಗೆ ಸವಾಲು ನೀಡುವ ಕವನಗಳನ್ನೂ ಬರೆದಿದ್ದಾರೆ. ‘ಇಂದಾನೊಂದು ಕಾಲದಲ್ಲಿ’ ಪುಸ್ತಕವನ್ನು ಜಿ,ಪಿರಾಜರತ್ನಂ ಅವರ 60ನೆಯ ಹುಟ್ಟುಹಬ್ಬಕ್ಕೆ ಅರ್ಪಿಸಿದ ಕೃತಿ. ಈ ಕೃತಿಯಲ್ಲಿ ಮಕ್ಕಳಿಗಷ್ಟೇ ಅಲ್ಲ ಹಿರಿಯರಿಗೂ ಪ್ರಿಯವಾಗುವ ರೀತಿಯಲ್ಲಿ ಕಾಗಕ್ಕ, ಗುಬ್ಬಕ್ಕ, ನರಿರಾಯ, ಹುಂಜ್ಜಪ್ಪ ಇತ್ಯಾದಿ ಪ್ರಾಣಿಗಳ ಮೂಲಕ ಕತೆ ಹೇಳಿಸಿದ್ದಾರೆ.

‘ಕೊರವಂಜಿಯ ಪಡುವಣ ಯಾತ್ರೆ’. 1960 ರಲ್ಲಿ ಒಂದು ವೈದ್ಯರ ತಂಡದೊಡನೆ ‘ರಾಶಿ’’ಯವರು ಯುರೋಪ್‌ ಯಾತ್ರೆ ಕೈಕೊಂಡಿದ್ದರು. ಈ ಕೃತಿಯಲ್ಲಿ ಡಾ। ಶಿವರಾಂ ಜೊತೆ ಹಾಸ್ಯಗಾರ ‘ರಾಶಿ’ ಇದ್ದಾರೆ, ಆದ್ದರಿಂದ ಈ ಕೃತಿ ವಿಶಿಷ್ಟವಾಗುತ್ತದೆ. ಇದನ್ನು ಅವರು ‘ಪ್ರವಾಸಿಯ ದಿನಚರಿ’ ಎಂದು ಕರೆದಿದ್ದರೂ ಇದು ಉತ್ತಮ ಪ್ರವಾಸ ಬರವಣಿಗೆಯಾಗಿದೆ. ಅದರಲ್ಲಿ ಇವರು ಸಂದರ್ಶಿಸಿದ ತಾಷ್ಕೆಂಟ್‌, ಮಾಸ್ಕೋ, ಇಂಗ್ಲಂಡ್‌, ಜರ್ಮನಿ, ಪೋಪರ ವ್ಯಾಟಿಕನ್‌ ಸಿಟ್‌ ಬಗ್ಗೆ ಬರೆಯುತ್ತಾರೆ. ವೈಜ್ಞಾನಿಕ ವಿವರಗಳೊಡನೆ ಹಾಸ್ಯವೂ ಇದೆ.

‘ರಾಶಿ’ಯವರು ಕಥೆಗಳನ್ನಲ್ಲದೆ ಐತಿಹಾಸಿಕ ಅಹಾಗೂ ಸಾಮಾಜಿಕ ಕಾದಂಬರಿಗಳನ್ನೂ ಬರೆದಿದ್ದಾರೆ.

‘ಸಾಕ್ಷಿ ಸಂಕಲಿಕೆ’ ಇದು ‘ರಾಶಿ’ಯವರ ಕವನ ಸಂಗ್ರಹ. 1962ರಲ್ಲಿ ನನಗೆ ಡಾ। ಶಿವರಾಂ ಅವರ ಮಗಳಾದ ವಿಮಲಾ ಅವರ ಪರಿಚಯವಾಯ್ತು, ವರಕವಿ ಬೇಂದ್ರೆಯವರ ಮೂಲಕ. ಅವರು ಆಗ ಮಂಬೈಯಲ್ಲಿದ್ದರು, ಪತಿ ಶೇಷಾದ್ರಿಯವರೊಂದಿಗೆ. ಅವರು ಅಕ್ಕನಾಗಿ ತಮ್ಮನಂತೆ ನನ್ನನ್ನು ನೋಡಿಕೊಂಡರು. ಅವರೇ ತಂದೆ ಶಿವರಾಂ ಅವರ ಪರಿಚಯ ಮಾಡಿಕೊಟ್ಟರು. ನಾನು ಬೆಂಗಳೂರಿಗೆ ಹೋದಾಗಲೆಲ್ಲ ಡಾ। ಶಿವರಾಂ ಅವರನ್ನು ಕಾಣುತ್ತಿದ್ದೆ. ನನ್ನ ಮದುವೆಯಾದಾಗ (1964) ಶಿವರಾಂ ಅವರು ತಮ್ಮ ಕವನ ಸಂಗ್ರಹ ‘ಸಾಕ್ಷಿ ಸಂಕಲಿಕೆ’ ಕಳಿಸಿ ಜೊತೆಗೆ ಒಂದು ದೀರ್ಘ ಪತ್ರ ಬರೆದಿದ್ದರು. ಅದು ಹಾಸ್ಯರಸಾಯನವಾಗಿತ್ತು.

‘ರಾಶಿ’ಯವರಿಗೆ ಜಿ.ಪಿ.ರಾಜರತ್ನಂ ಅವರಂತೆ ಕೈಲಾಸಂ ಅವರೂ ಬಹಳ ಹತ್ತಿರದವರಾಗಿದ್ದರು. ‘ಕೈಲಾಸಂ ಮತ್ತು ನಾನು’ ಎಂಬ ಪುಸ್ತಕವನ್ನು ಇಂಗ್ಲೀಷಿನಲ್ಲಿ ಬರೆದಿದ್ದಾರೆ. ಆರು ತಿಂಗಳು ಕೈಲಾಸಂ ಇವರ ಮನೆಯಲ್ಲೇ ವಾಸ್ತ್ಯವ್ಯ ಹೂಡಿದ್ದರಂತೆ. ಡಾ। ಶಿವರಾಂ ಅವರಿಗೆ ಬಿಡುವು ದೊರೆಯುತ್ತಿರುವ ಸಮಯ ರಾತ್ರಿ ಮಾತ್ರ. ಆಗ ಜೊತೆಗೆ ಊಟ ಮಾಡಿ ತೃಪ್ತಿಯಾಗುವ ವರೆಗೆ ಹರಟೆಹೊಡೆಯುತ್ತಿದ್ದರಂತೆ.

ಒಂದು ದಿನ ಮಧ್ಯಾಹ್ನ ಅಪರೂಪಕ್ಕೆ ರಾಶಿ ಮತ್ತು ಅವರ ಹೆಂದತಿ ಊಟ ಮುಗಿಯುವ ವರೆಗೆ ತಾವು ಊಟ ಮಾಡುವುದಿಲ್ಲ ಎಂದು ಕೈಲಾಸಂ ಹಟ ಹಿಡಿದರಂತೆ. ನಂತರ ಊಟ ಮಾಡುವಾಗ ಕೈಲಾಸಂ ಹೇಳಿದರಂತೆ, ಅಂದು ಅವರ ತಾಯಿಯ ಶ್ರಾದ್ಧದ ದಿನ ಎಂದು. ಮತ್ತೈದೆಯ ಊಟವಾಗದೆ ತಾವು ಊಟ ಮಾಡುವುದು ಆ ದಿನ ಸರಿಯಲ್ಲ ಎಂದಿದ್ದರು. ಹಾಗೆ ನೋಡಿದರೆ ಸಂಪ್ರದಾಯಗಳ ಕಟ್ಟಳೆಗಳನ್ನು ಮುರಿದೇ ಕೆಲಸ ಮಾಡುವ ಪ್ರವೃತ್ತಿ ಕೈಲಾಸಂ ಅವರದು.

ವ್ರತಾಚರಣೆಗಳು ಅವರಿಗೆ ಅರ್ಥಹೀನ ಎನಿಸುತ್ತಿದ್ದವು. ಆದರೆ ತಾಯಿಯ ಬಗ್ಗೆ ಅಪಾರ ಗೌರವ ಅವರಿಗೆ ಇತ್ತು. ಶ್ರಾದ್ಧದ ದಿನ ತಾಯಿಯನ್ನು ನೆನಪು ಮಾಡಿಕೊಳ್ಳುವುದು, ಅವಳಿಗೆ ಗೌರವ ಸಲ್ಲಿಸುವುದು, ಅವರಿಗೆ ಅನುಚಿತವೆನಿಸಲಿಲ್ಲವಂತೆ. ಈ ಪ್ರಸಂಗವನ್ನು ಶಿವರಾಂ ನೆನೆಯುತ್ತಾರೆ.

ಶಿವರಾಂ ಅವರಿಗೆ ಇಳಿವಯಸ್ಸಿನಲ್ಲಿ ಅಧ್ಯಾತ್ಮದಲ್ಲಿ ಅಪಾರ ಆಸಕ್ತಿಯುಂಟಾಯಿತು. ತಲಸ್ಪರ್ಶಿಯಾದ ಅಧ್ಯಯನವನ್ನು ಕೈಕೊಂಡರು. ಅದರ ಫಲವಾಗಿ ಎರಡು ಪುಸ್ತಕಗಳನ್ನು ಇಂಗ್ಲೀಷಿನಲ್ಲಿ ಬರೆದರು. (‘ಆನಂದ ಅಂಡ ಥ್ರೀ ಗ್ರೇಟ್‌ ಆಚಾರ್ಯಾಸ್‌’ ಮತ್ತು ‘ಡೆಥ್‌ ಅಂಡ್‌ ನಚಿಕೇತ’).

ಶಿವರಾಂ ಅವರಿಗೆ ತ್ರಿಮತಗಳ ಬಗ್ಗೆ, ಆಚಾರ್ಯತ್ರಯರ ಬಗ್ಗೆ, ವಿಶೇಷ ಆಸಕ್ತಿ ಮೂಡಿತ್ತು. ಮೂವರೂ ಆನಂದದ ಶೋಧದಲ್ಲಿದ್ದವರು. ‘ಆನಂದಂ ಬ್ರಹ್ಮೇತಿವ್ಯಜಾನಾತ್‌’ ಅಲ್ಲವೇ. ದ್ವೈತ, ಅದ್ವೈತ ಮತ್ತು ವಿಶಿಷ್ಟಾದ್ವೈತ- ಮೂರು ಮತಗಳ ಸ್ಥಾಪನಾಚಾರ್ಯರು ದಕ್ಷಿಣ ಭಾರತದವರು. ಅವರಿಗೆ ಜ್ಞಾನೋದಯವಾದದ್ದು ಉತ್ತರ ಭಾರತದಲ್ಲಿ. ಮೂವರ ಜೀವನ, ಅಂದಿನ ಸಾಮಾಜಿಕ ಮತ್ತು ಧಾರ್ಮಿಕ ಪರಿಸ್ಥಿತಿ, ಈ ಮೂವರೂ ನಮ್ಮ ಸಮಾಜಕ್ಕೆ ನೀಡಿದ ಕೊಡುಗೆಯ ಬಗ್ಗೆ ಬರೆಯುತ್ತಾರೆ.

ಕೇರಳದ ಕಾಲಟಿಯಲ್ಲಿ ಶಿವಗುರು ಮತ್ತು ಆರ್ಯಾಂಬೆಯ ಮಗನಾಗಿ ಜನಿಸಿದ ಶಂಕರರು ಐದನೆಯ ವರ್ಷ ಉಪನಯನದ ನಂತರ ಗುರುಕುಲ ಸೇರಿ ಎಂಟನೆಯ ವರ್ಷ ವಿದ್ಯಾಭ್ಯಾಸ ಮುಗಿಸಿ ಮನೆಗ ಹಿದಿರುಗಿ, ಮೊಸಳೆಯ ನೆಪದಲ್ಲಿ ಸನ್ಯಾಸಿಯಾಗಲು ಅಪ್ಪಣೆ ಪಡೆದು, ದೀಕ್ಷೆಗಾಗಿ ಗುರುವನ್ನು ಹುಡುಕಿ, ಗುರು ಗೋವಿಂದ ಭಗವತ್ಪಾದರಲ್ಲಿ ದೀಕ್ಷೆ ಪಡೆದರು.

ಬದರಿಕಾಶ್ರಮದಲ್ಲಿ ಸತ್‌-ಚಿತ್‌-ಆನಂದ ಜ್ಞಾನಬೋಧೆಯಾಯ್ತು. ‘ತತ್‌ ತ್ವಮ್‌ ಅಸಿ’ ಬೋಧೆಯಾಯ್ತು. ಆ ಕಾಲದಲ್ಲಿ ಪ್ರಚುರವಾಗಿದ್ದ ಬೌದ್ಧ ಧರ್ಮ ವೇದಗಳನ್ನು ಒಪ್ಪುತ್ತಿರಲಿಲ್ಲ, ವಾಮ ಪಂಥೀಯ ಕಾಪಾಲಿಕರೂ ವೇದಗಳನ್ನು ನಂಬುತ್ತಿರಲಿಲ್ಲ. ಶಂಕರರು ವೇದೋಪನಿಷತ್ತುಗಳಿಗೆ ಭಾಷ್ಯ ಬರೆದರು. ಜನರನ್ನು ವೈದಿಕ ಧರ್ಮದತ್ತ ಆಕರ್ಷಿತರಾಗುವಂತೆ ಮಾಡಿದರು. ಇಡೀ ಭಾರತ ಸಂಚಾರ ಮಾಡಿ ನಾಲ್ಕು ದಿಕ್ಕಿಗೆ ನಾಲ್ಕು ಮಠಗಳನ್ನು ಕಟ್ಟಿದರು. ‘ಅಹಂಬ್ರಹ್ಮಾಸ್ಮಿ’, ‘ತತ್ವಮಸಿ’, ಜೀವಾತ್ಮ-ಪರಮಾತ್ಮ ಹರಿ-ಹರ ಅಭೇದ ತತ್ವವನ್ನು ಪ್ರತಿಪಾದಿಸಿದರು, ಅಧ್ವೈತ ಮತ ಸ್ಥಾಪಿಸಿದರು. ಭರತಖಂಡವನ್ನೆಲ್ಲ ವ್ಯಾಪಿಸಿದರು.

ಹೀಗೆಯೇ ರಾಮಾನುಜರ ಜೀವನ ಹಾಗೂ ಸಾಧನೆಯ ಬಗ್ಗೆ ಬರೆಯುತ್ತಾರೆ. ವಿವಾಹಿತರಾಗಿದ್ದ ರಾಮಾನುಜರು ಬಾಲ್ಯದಲ್ಲಿ ಕಾಂಚೀಪೂರ್ಣರ ಪ್ರಭಾವಕ್ಕೆ ಒಳಗಾಗಿ, ನಂತರ ಯಾದವಪ್ರಕಾಶರ ಶಿಷ್ಯರಾದರು. ಕಾಶ್ಮೀರದಲ್ಲಿ ಆನಂದಾನುಭವ ಪಡೆದು, ‘ಪ್ರಪತ್ತಿ’ ಮಾರ್ಗವನ್ನು ಅನುಸರಿಸಿದರು. ಭಗವಂತನಲ್ಲಿ ಶರಣಾಗತಿಯೇ ರಾಮಾನುಜರು ರೂಪಿಸಿದ ವಿಹಿಷ್ಟಾದ್ವೈತ ಅಥವಾ ಶ್ರೀ ವೈಷ್ಣವ ಧರ್ಮ ಎನ್ನುತ್ತಾರೆ.

ಶಿವರಾಂ ಅವರು ಹೀಗೆಯೇ ಮಧ್ವಾಚಾರ್ಯರ ಬಗ್ಗೆ, ಅವರ ಜೀವನ ಮತ್ತು ಸಾಧನೆಯ ಬಗ್ಗೆ ಬರೆಯುತ್ತಾರೆ. ಉಡುಪಿಗೆ ಸಮೀಪದ ಪಾಜಕದಲ್ಲಿ ಮಧ್ಯಗೇಹಭಟ್ಟ ಮತ್ತು ವೇದವತಿಯರ ಮಗನಾಗಿ ಜನಿಸಿದ ವಾಸುದೇವ ಹನ್ನೊಂದನೆಯ ವಯಸ್ಸಿಗೆ ಸನ್ಯಾಸ ಸ್ವೀಕರಿಸಿ ‘ಪೂರ್ಣಪ್ರಜ್ಞ’ ಎನಿಸಿಕೊಂಡರು. ಬದರಿಯಲ್ಲಿ ವ್ಯಾಸಾಶ್ರಮದಲ್ಲಿ ಜ್ಞಾನಬೋಧೆಯಾಯಿತು.

ತ್ರಿಮತಾಚಾರ್ಯರ ತೌಲನಿಕ ಅಧ್ಯಯನಕ್ಕೆ ಬೇಕಾಗುವ ಮಾಹಿತಿಯನ್ನು ಶಿವರಾಂ ಒದಗಿಸುತ್ತಾರೆ. ಈ ಮೂವರಿಗೂ ಆದ ಆನಂದಾನುಭವ, ಆಕಾಲದ ಅತ್ಯಲ್ಪ ಪ್ರಮಾಣದ ಸೌಕರ್ಯಗಳು, ಸಾಮಾಜಿಕ ಅಸಮತೆ, ಮತ್ತು ಅವರ ಸಾಧನೆಗಳ ಬಗ್ಗೆ ಬರೆಯುತ್ತಾರೆ.

ಈ ಕೃತಿಯ ಕೊನೆಯ ಭಾಗದಲ್ಲಿ ಒಂದು ಮಹತ್ವದ ಮಾತು ಹೇಳುತ್ತಾರೆ. ‘‘ಬಹು ದೀರ್ಘಕಾಲ ವಿಠ್ಠಲನು ಮಹಾರಾಷ್ಟ್ರ ಮತ್ತು ಕರ್ನಾಟಕದ ಜನರನ್ನು ಒಂದುಗೂಡಿಸಿದ್ದ, ನಂತರ ಬಂದ ರಾಜಕಾರಣಿಗಳು ಎರಡೂ ರಾಜ್ಯಗಳ ಜನರನ್ನು ಒಡೆದುಬಿಟ್ಟರು.’’ ಎನ್ನುತ್ತಾರೆ.

ಛಾಂದೋಗ್ಯ ಉಪನಿಷತ್ತಿನಲ್ಲಿ ಬರುವ ನಚಿಕೇತನ ಕಥೆ ಶಿವರಾಂ ಅವರ ಮೇಲೆ ಬಹಳ ಪ್ರಭಾವ ಬೀರಿತ್ತು.

‘‘ಈ ಕೃತಿಯು ಕೇವಲ ಪರಿಚಯಾತ್ಮಕವಲ್ಲ, ಇದರಲ್ಲಿ ನಚಿಕೇತನಂತೆಯೇ, ಸಾವಿನ ಬಗ್ಗೆ ಡಾ। ಶಿವರಾಂ ಅವರು ಕೇಳಿಕೊಂಡಿರುವ ಪ್ರಶ್ನೆಗಳಿವೆ. ವೈದ್ಯರಾದ ಶಿವರಾಂ ಅವರಿಗೆ ಸಾವು ವಿಸ್ಮಯವಲ್ಲ, ಅದೊಂದು ಪ್ರಕ್ರಿಯೆ.’’

‘‘ಮೊದಲ ಭಾಗದಲ್ಲಿ ಸಾವಿಗೆ ಸಂಬಂಧಿಸಿದ ಕಠೋಪನಿಷತ್ತಿನಲ್ಲಿ ಪ್ರಸ್ತಾಪಿತವಾಗಿರುವ ವಿಷಯಗಳನ್ನು ತಿಳಿಸಿ, ಕೆಲವು ಸಾವುಗಳ ಅಂದರೆ ಸಾವಿನ ಪ್ರಸಂಗಗಳ ಪರಿಚಯ ಮಾಡಿ, ನಚಿಕೇತನಿಗೆ ಕಾಡಿದ ಪ್ರಶ್ನೆಗಳನ್ನು ವೈದ್ಯಕೀಯ ವಿಜ್ಞಾನದ ಹಿನ್ನೆಲೆಯಲ್ಲಿ ಪರಿಶೀಲಿಸುವ ಪ್ರಯತ್ನ ಮಾಡಿದ್ದಾರೆ. ಎರಡನೆಯ ಭಾಗದಲ್ಲಿ ದೀರ್ಘಕಾಲದಿಂದ ನಮ್ಮನ್ನು ಸುತ್ತುವರಿದಿರುವ ಸಾವು ಮತ್ತು ಅದನ್ನು ಗೆಲ್ಲಲು- ಅಂದರೆ ಚಿರಂಜೀವಿಯಾಗಲು- ಮನುಷ್ಯ ನಡೆಸಿದ ಪ್ರಯತ್ನಗಳ ಬಗ್ಗೆ ವಿವರಗಳನ್ನು ನೀಡುತ್ತಾ ಸಮಾಧಿ ಸ್ಥಿತಿಯಲ್ಲೆ ಸಾವನ್ನು ಬರಮಾಡಿಕೊಂಡ ರಮಣ ಮಹರ್ಷಿಗಳ ಉದಾಹರಣೆಯಾಂದಿಗೆ ಸಾವು ಮತ್ತು ಶಾಂತಿ ಅಥವಾ ಸಮಾಧಾನಗಳಿಗಿರುವ ಸಹ ಸಂಬಂಧದ ವಿವರಣೆ ನೀಡುತ್ತಾರೆ.’’ ಎನ್ನುತ್ತಾರೆ ಡಾ। ಎಚ್‌.ಎಸ್‌.ಗೋಪಾಲರಾವ್‌. (‘ರಾಶಿ’, ನವಕರ್ನಾಟಕ ಸಾಹಿತ್ಯ ಸಂಪದ, ಪು.96)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more