ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಮಧ್ವರು ತೋರಿದ ಕೆಲವು ಪವಾಡಗಳು

By Staff
|
Google Oneindia Kannada News


ಓದುಗರೇ, ಡಾ. ಪ್ರಭಂಜನಾಚಾರ್ಯರ ‘ಶ್ರೀಪೂರ್ಣಪ್ರಜ್ಞ ದರ್ಶನ’ ಕೃತಿ ಪರಿಚಯ ಈ ವಾರ ಮುಕ್ತಾಯ.

Miracle...!ಶ್ರೀಮಧ್ವರು ತೋರಿದ ಪವಾಡಗಳಿಗೆ ಲೆಕ್ಕವಿಲ್ಲ. ಒಮ್ಮೆ ಶಿಷ್ಯರ ಪಾಠ ನಡೆದಾಗ ಗಾಳಿ ಬೀಸಿದ್ದರಿಂದ ದೀಪ ನಂದಿಹೋಯಿತು. ಪಾಠದಲ್ಲಿ ತನ್ಮಯರಾದ ಶಿಷ್ಯರಿಗೆ ದೀಪ ಮತ್ತೆ ಹೊತ್ತಿಸುವ ವರೆಗೆ ತಡೆಯುವ ತಾಳ್ಮೆಯಿರಲಿಲ್ಲ. ಜ್ಞಾನದ ದಾಹ ಅಷ್ಟೊಂದು ಪ್ರಬಲವಾಗಿತ್ತು. ಪುಸ್ತಕ ನೋಡಲು ಪ್ರಕಾಶವಿರಲಿಲ್ಲ. ಇದನ್ನರಿತ ಶ್ರೀಮಧ್ವರು ತಮ್ಮ ಪಾದದ ಹೆಬ್ಬೆರಳು ಸ್ವಲ್ಪ ಮುಂದೆ ಚಾಚಿದರು. ಅಲ್ಲಿಂದ ಪ್ರಕಾಶ ಹೊರಬೀಳತೊಡಗಿತು. ಇಡೀ ಪರಿಸರದಲ್ಲಿ ಬೆಳಕು ತುಂಬಿತು. ಶಿಷ್ಯರಿಗೆ ಗ್ರಂಥಾವಲೋಕನಕ್ಕೆ ಯಾವ ಅಡ್ಡಿಯೂ ಬರಲಿಲ್ಲ.

ಇಂಥದೇ ಇನ್ನೊಂದು ಪ್ರಸಂಗ. ಶ್ರೀ ಮಧ್ವರು ಎತ್ತಿದ ಭೀಮನಬಂಡೆಯ ಪ್ರಸಂಗ. ಶ್ರೀ ಮಧ್ವರು ಸಂಚಾರದಲ್ಲಿ ಭದ್ರಾನದೀ ತೀರದ ಕಳಸ ಎಂಬ ಗ್ರಾಮ ಸಂದರ್ಶಿಸಿದರು. ನದಿ ವೇಗವಾಗಿ ಹರಿಯುವ ರಮ್ಯ ತಾಣವದು. ನದೀತೀರದಲ್ಲಿ ಬೃಹದಾಕಾರದ ಬಂಡೆಗಲ್ಲೊಂದು ಇತ್ತು. ಆ ಕಲ್ಲು ಪ್ರವಾಹ ಮಧ್ಯದಲ್ಲಿದ್ದರೆ ಸ್ನಾನ ಮಾಡುವವರಿಗೆ ಅನುಕೂಲವಾಗುತ್ತಿತ್ತು ಎಂದು ಜನ ಶ್ರೀಮಧ್ವರ ಬೃಹದಾಕಾರದ ದೇಹದೆಡೆ ನೋಡುತ್ತ ನುಡಿದರು. ಅವರನ್ನು ಪ್ರಾರ್ಥಿಸಿದರು.

ಏನೂ ಆಯಾಸವಿಲ್ಲದೆ ಆ ಬಂಡೆಯನ್ನು ಶ್ರೀಮಧ್ವರು ಒಂದೆ ಕೈಯಿಂದ ಎತ್ತಿ ಇಟ್ಟು ತಮ್ಮ ಭೀಮಶಕ್ತಿಯ ಪ್ರದರ್ಶನ ಮಾಡಿದರು. ಇದಕ್ಕೆ ಸಾಕ್ಷಿಯಾಗಿ ಅಲ್ಲೊಂದು ಶಾಸನವಿದೆ. ‘‘ಶ್ರೀಮಧ್ವಾಚಾರ್ಯೈರೇಕಹಸ್ತೇನಾನೀಯ ಸ್ಥಾಪಿತ ಶಿಲಾ’’ ಎಂಬ ಸ್ಪಷ್ಟ ಉಲ್ಲೇಖವಿದೆ. ಲೂಯಿಸ್‌ ರೈಸ್‌ ಅವರು ಸಂಪಾದಿಸಿದ ಮೈಸೂರು ಗಝೇಟಿಯರ್ನಲ್ಲಿರುವ ದಾಖಲೆ ನೋಡಿದಾಗ ಮೈ ಪುಳಕಿತಗೊಳ್ಳುತ್ತದೆ.

ಇನ್ನೊಂದು ಪ್ರಸಂಗ. ಕಣ್ವತೀರ್ಥದ ಪರಿಸರದಲ್ಲಿ ಗ್ರಹಣಸ್ನಾನ ಮಾಡಲು ಶಿಷ್ಯರೆಲ್ಲ ಹೋದಾಗ, ಸಮುದ್ರದ ಭೋರ್ಗರೆಯುವ ಅಲೆಗಳ ಹೊಡೆತದಿಂದ ಭಕ್ತರೆಲ್ಲ ಗಾಬರಿಗೊಂಡಾಗ, ಶ್ರೀಮಧ್ವರು ತಮ್ಮ ಕಟಾಕ್ಷವನ್ನು ಸಮುದ್ರದತ್ತ ಬೀರಿದಾಗ ಸಮುದ್ರ ಶಾಂತವಾಗಿತ್ತು. ಇನ್ನೊಂದು ಪ್ರಸಂಗ. ಶ್ರೀಮಧ್ವರು ಒಂದು ಸಭೆಯಲ್ಲಿ ತತ್ತ್ವೋಪದೇಶ ನಡೆಸಿದ್ದರು.

ಇಬ್ಬರು ಜಟ್ಟಿಗಳು ಬಂದರು. ಒಬ್ಬ ಕಾಂತಾವರ ದೇವಸ್ಥಾನದ ಮುಂಭಾಗದಲ್ಲಿದ್ದ, ಮೂವತ್ತು ಜನರಿಗೂ ಕೂಡಿ ಎತ್ತಲು ಸಾಧ್ಯವಾಗದಂತಹ ಧ್ವಜಸ್ತಂಭವನ್ನು ಒಬ್ಬನೇ ಎತ್ತಿದ್ದ. ಇವರಿಬ್ಬರು ಜಟ್ಟಿಗಳು ಶ್ರೀಮಧ್ವರ ಬಲ ಪರೀಕ್ಷೆಮಾಡಲು ಬಂದಿದ್ದರು. ಗುರುಗಳು ಹಸನ್ಮುಖದಿಂದ ಒಪ್ಪಿದರು. ಇಬ್ಬರಿಗೂ ತಮ್ಮ ಕತ್ತನ್ನು ಒತ್ತಿ ತಮ್ಮ ಬಲಪರೀಕ್ಷಿಸಿಕೊಳ್ಳಲು ಹೇಳಿದರು. ಇಬ್ಬರೂ ಸೋತರು. ಮಧ್ವರು ಆಖಣಾಶ್ಮನಂತೆ ಕುಳಿತಿದ್ದರು. ವಾಯುದೇವರಿಗೆ ಆಖಣಾಶ್ಮ ಎಂಬ ಹೆಸರಿದೆ. ಅವರು ಬಂಡೆಗಲ್ಲಿದ್ದಂತೆ, ಇತರರು ಮಣ್ಣ ಹೆಂಟೆಯಂತೆ ಸತ್ವಹೀನರು.

ಕೊಕ್ಕಡ ಎಂಬ ಕ್ಷೇತ್ರದಲ್ಲಿ ನಾಯಕಮಣಿಯಾದ ಇಡೆಪತ್ತಾಯ ಎಂಬ ಯಾಜ್ಞಿಕರು ಶ್ರೀಮಧ್ವರಿಗೆ ಉದ್ಧಾರದ ದಾರಿ ತೋರಿಸಲು ಪ್ರಾರ್ಥಿಸಿದರು. ಅವರಿಗೆ ತತ್ತ್ವೋಪದೇಶ ನೀಡಲು ‘ಕೃಷ್ಣಾಮೃತಮಹಾರ್ಣವ’ ಎಂಬ ಕೃತಿಯನ್ನೇ ಶ್ರೀಮಧ್ವರು ರಚಿಸಿದರು. ಅರ್ಜುನನಿಗೆ ನೀಡಿದ ಉಪದೇಶ ಗೀತಾಮೃತವಾಗಿ ವಿಶ್ವಕ್ಕೇ ಆದರ್ಶವೆನಿಸಿದಂತೆ, ಇಡಿಪತ್ತಾಯರನ್ನು ನಿಮಿತ್ತ ಮಾಡಿಕೊಂಡು ಶ್ರೀಮಧ್ವರು ರಚಿಸಿದ ಕೃತಿ ಪಂಚಸಂಸ್ಕಾರದರ್ಪಣವೆನ್ನಿಸಿತು.

ದೇವಪೂಜೆ, ಗೋಪೀಚಂದನದ ಮಹಾತ್ಮ್ಯ ಮೊದಲಾದ ಅನೇಕ ವೈಷ್ಣವೋಪಯೋಗಿ ಸಂಸ್ಕಾರಗಳ ವಿವರಗಳು ಅದರಲ್ಲಿವೆ. ಏಕಾದಶೀವ್ರತದ ಮಹತ್ವ (ಇತಿಹಾಸ ಪುರಾಣೋಪೇತ ವಿವರಣೆ) ಅದರಲ್ಲಿದೆ.

ತ್ರಿವಿಕ್ರಮರಿಂದ ವಾಯುಸ್ತುತಿ :

ಉಡುಪಿಯಲ್ಲಿ ಅದೊಂದು ದಿನ ಶ್ರೀಮಧ್ವರು ಶ್ರೀಕೃಷ್ಣನ ಪೂಜೆಯಲ್ಲಿ ನಿರತರಾದಾಗ ತ್ರಿವಿಕ್ರಮ ಮೊದಲಾದ ಪ್ರಮುಖ ಶಿಷ್ಯರು ಪೂಜಾವೈಭವ ನೋಡುತ್ತಿದ್ದರು. ಮಧ್ಯದಲ್ಲಿ ಎಲ್ಲ ಶಿಷ್ಯರು ದ್ವಾದಶಸ್ತೋತ್ರ ಪಾರಾಯಣ ಶುರುಮಾಡಿದರು. ನೈವೇದ್ಯ ಪೂರೈಸುವುದು ನಿತ್ಯಕ್ರಮ. ಅದು ನಡೆಯಲಿಲ್ಲ. ಮತ್ತೊಮ್ಮೆ ಎಲ್ಲರೂ ಸ್ತೋತ್ರ ಪಠಿಸಿದರು. ನೈವೇದ್ಯ ಪೂರೈಸುವ ಸೂಚನೆ ಕಂಡುಬರುತ್ತಿರಲಿಲ್ಲ.

ತ್ರಿವಿಕ್ರಮರು ಕುತೂಹಲ ತಡೆಯಲಾಗದೇ ತೆರೆಯನ್ನು ಸರಿಸಿ ಶ್ರೀಮಧ್ವರು ಏನು ಮಾಡುತ್ತಿದ್ದಾರೆ ನೋಡಲು ಹೋದರು. ಏನಾಶ್ಚರ್ಯ. ಜನುಮಜನುಮದ ಭಾಗ್ಯ ಕೈಗೂಡುವ ದೃಶ್ಯ. ಹನುಮ, ಭೀಮ, ಮಧ್ವ ಎಂಬ ಮೂರು ರೂಪಗಳು ಭಗವಂತನನ್ನು ಆರಾಧಿಸುವ ದೃಶ್ಯವಲ್ಲಿತ್ತು. ಶ್ರೀಮಧ್ವರ ಇತರ ರೂಪಗಳೊಂದಿಗೆ ಭಗವದ್ರೂಪಗಳ ಸಾಕ್ಷಾತ್ಕಾರ ಅವರಿಗಾಯಿತು. ಅವರ ಮನದಲ್ಲಿ ಉಕ್ಕಿದ ಭಾವ ‘ವಾಯುಸ್ತುತಿ’ಯ ರೂಪ ಪಡೆಯಿತು. ಅದನ್ನು ಗುರು ಮಧ್ವರಿಗೆ ತೋರಿಸಿದಾಗ ಅವರೆಂದರು, ‘‘ತ್ರಿವಿಕ್ರಮರೇ! ನೀವು ಭಾಗ್ಯಶಾಲಿಗಳು. ನಮ್ಮ ರೂಪಗಳೊಂದಿಗೆ ಭಗವದ್ರೂಪಗಳನ್ನೂ ಸಾಕ್ಷಾತ್ಕರಿಸಿಕೊಂಡಿರುವಿರಿ. ನಿಮ್ಮ ಸ್ತುತಿ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಇದರೊಂದಿಗೆ ನಮ್ಮ ಆರಾಧ್ಯಮೂರ್ತಿಯನ್ನೂ ಸ್ತುತಿಸಿದರೆ ನಮಗೆ ತೃಪ್ತಿ. ಅದನ್ನು ನಾವೇ ಮಾಡುತ್ತೇವೆ.’’ ಎನ್ನುತ್ತ ‘ಪಾಂತಸ್ವಾನ್‌..’’ ನಖಸ್ತುತಿ ಎಂದು ಪ್ರಸಿದ್ಧವಾಗಿರುವ ಎರಡು ಶ್ಲೋಕಗಳನ್ನು ರಚಿಸಿದರು.

ಶ್ರೀಮಧ್ವರು ರಚಿಸಿದ ಶ್ರೀನೃಸಿಂಹಸ್ತುತಿಯ ಎರಡು ಶ್ಲೋಕಗಳು ಶ್ರೀಹರಿವಾಯುಸ್ತುತಿಯ ಅವಿಭಾಜ್ಯ ಅಂಗಗಳಾಗಿವೆ.

ಮೂಲರಾಮದೇವರ ಆಗಮನ : ಕಾರ್ತೀಕಮಾಸದ ಶುಕ್ಲಪಕ್ಷದ ದ್ವಾದಶಿ; ಉತ್ಥಾನದ್ವಾದಶಿ. ಭಗವಂತ ಚಾತುರ್ಮಾಸ್ಯದ ಯೋಗನಿದ್ರೆ ಪೂರೈಸಿ ಏಳುವ ಪವಿತ್ರದಿನ. ಶ್ರೀಮಧ್ವರು ಎಂದಿನಂತೆ ಪೂಜೆಮಾಡುತ್ತಿದ್ದರು. ‘‘ಇಂದು ಇಲ್ಲಿಗೆ ಮೂಲರಾಮ ಸೀತಾಸಮೇತ ಆಗಮಿಸುವರು.’’ ಎಂದರು. ನೆರೆದ ಎಲ್ಲ ಭಕ್ತರಿಗೂ ಆಶ್ಚರ್ಯ. ಅವರ ನುಡಿ ದಿಟವಾಯಿತು.

ಕಳಿಂಗ ದೇಶದ ಗಜಪತಿಯ ಕೋಶಾಗಾರದಲ್ಲಿದ್ದ ಚತುರ್ಮುಖಬ್ರಹ್ಮಕರಾರ್ಚಿತ ಶ್ರೀಸೀತಾಸಮೇತ ಶ್ರೀರಾಮಚಂದ್ರದೇವರು ವಿಗ್ರಹವಿತ್ತು. ಅದನ್ನು ತರಲು ಶಿಷ್ಯ ಶ್ರೀನರಸಿಂಹತೀರ್ಥರಿಗೆ ಶ್ರೀಮಧ್ವಗುರುಗಳು ಹೇಳಿದ್ದರು. ಶ್ರೀಮಧ್ವರು ಮೊದಲೇ ಹೇಳಿದಂತೆ ಕಳಿಂದದೇಶದಲ್ಲಿ ಅರಾಜಕತೆ ಇತ್ತು. ಉತ್ತರಾಧಿಕಾರಿ ಬರುವವರೆಗೆ ರಾಜ್ಯಭಾರವನ್ನು ಶ್ರೀನರಸಿಂಹತೀರ್ಥರಿಗೆ ಒಪ್ಪಿಸಲಾಗಿತ್ತು. ಅಂಥಪ್ರಸಂಗ ಬಂದಾಗ ಮೂಲರಾಮದೇವರವಿಗ್ರಹ ತಂದುಕೊಡಲು ಗುರುಗಳು ಮೊದಲೇ ಹೇಳಿದ್ದರು. ಆ ಪವಿತ್ರದಿನ ವಿಗ್ರಹಗಳು ಶ್ರೀಮಧ್ವರೆಡೆಗೆ ಬಂದಿದ್ದವು.

ಶ್ರೀಮಧ್ವರ ಬದರೀ ನಿರ್ಗಮನ :

ಅಂದು ಮಾಘ ಶುದ್ಧ ನವಮೀ ತಿಥಿ. (ಈಶ್ವರ ಸಂವತ್ಸರ, ಶಾ.ಶ.1202, ಕ್ರಿ.ಶ.1280) ನವಮೀತಿಥಿಗೆ ಶ್ರೀ ವಾಯುದೇವರು ಅಭಿಮಾನೀ ದೇವತೆ. ಶ್ರೀ ಮಧ್ವರು ವಾಯುದೇವರೇ. ಅವರು ತಮ್ಮ (ಕೊನೆಯ) ಬದರಿ ಪ್ರವಾಸಕ್ಕೆ ಅದೇ ತಿಥಿಯನ್ನು ಆರಿಸಿದ್ದರು. ಭಕ್ತರಿಗೆಲ್ಲ ಒಂದು ಬಗೆಯ ಕಾತರ ಭಾವ ಆವರಿಸಿತ್ತು. ಅಂದು ಶ್ರೀಕೃಷ್ಣನ ಪೂಜೆಯು ವೈಭವದಿಂದ ನಡೆಯಿತು.

ಶ್ರೀಹೃಶೀಕೇಶ ಮೊದಲಾದ ಶಿಷ್ಯರನ್ನು ಕರೆದು, ‘‘ಇನ್ನು ಮುಂದೆ ಶ್ರೀಕೃಷ್ಣನ ಪೂಜೆ ಮಾಡುವುದು ನಿಮ್ಮೆಲ್ಲರ ಕರ್ತವ್ಯ’’ ಎಂದು ಹೇಳಿದರು. ಅಷ್ಟಮಠದ ಯತಿಗಳನ್ನೆಲ್ಲ ಕರೆದು ಅನುಕ್ರಮವಾಗಿ ಪೂಜಿಸಲು ವಿಗ್ರಹಗಳನ್ನು ಕೊಟ್ಟರು. ( 1.ಶ್ರೀಸೀತಾಲಕ್ಷ್ಮಣಸಮೇತ ಶ್ರೀರಾಮ, 2. ಚತುರ್ಭುಜಕಾಲಿಯಮರ್ದನ ಶ್ರೀಕೃಷ್ಣ, 3. ದ್ವಿಭುಜಕಾಲಿಯಮರ್ದನ ಶ್ರೀಕೃಷ್ಣ, 4. ಶ್ರೀವಿಟ್ಠಲ, 5. ಶ್ರೀವಿಟ್ಠಲ, 6. ಶ್ರೀಭೂವರಾಹ, 7. ಶ್ರೀನೃಸಿಂಹ, ಹಾಗೂ 8. ಶ್ರೀವಿಟ್ಠಲ.). ಒಲಿದು ಬಂದಿರುವ ಶ್ರೀಮೂಲರಾಮ ಸೀತಾರಾಮ ಪ್ರತಿಮೆಗಳನ್ನು ಪೂಜಿಸಲು ಶ್ರೀಪದ್ಮನಾಭತೀರ್ಥರಿಗೆ ಕೊಟ್ಟರು. ಎಲ್ಲ ಶಿಷ್ಯರಿಗೂ ಅವರವರ ಕರ್ತವ್ಯದ ಬಗ್ಗೆ ಸಂದೇಶ ನೀಡಿದರು. ‘ಪ್ರೀಣಯಾಮೋ ವಾಸುದೇವಂ’ ಎಂಬುದು ಎಲ್ಲರ ಬಾಳಿನ ಮಂತ್ರವಾಗಲಿ ಎಂಬ ಅಮರ ಸಂದೇಶ ನೀಡಿದರು.

ಬದರಿಗೆ ಹೋದರೆ ಶ್ರೀಮಧ್ವರು ಮರಳಿ ಬರುವುದಿಲ್ಲ, ಅವರ ಅವತಾರ ಕಾರ್ಯ ಇಲ್ಲಿಗೆ ಮುಕ್ತಾಯವಾಗುತ್ತದೆ ಎಂಬುದು ಎಲ್ಲ ಶಿಷ್ಯರಿಗೆ ಗೊತ್ತಿತ್ತು. ಕೊನೆಗೆ ಶ್ರೀಮಧ್ವರು ಐತರೇಯಶ್ರುತಿಯ ಪ್ರವಚನ ಪ್ರಾರಂಭಿಸಿದರು. ತಮಗೆ ಅತ್ಯಂತ ಪ್ರಿಯವೆನಿಸಿದ ಆ ಉಪನಿಷತ್ತಿನ ಮರ್ಮವನ್ನು ಬಗೆಬಗೆಯಾಗಿ ತೆರೆದಿಟ್ಟರು. ಅದನ್ನು ಕೇಳಿ ಸುರವೃಂದ ಪುಷ್ಪವೃಷ್ಟಿ ಮಾಡಿತು. ಮಂದಾರ ಮೊದಲಾದ ದೇವಪುಷ್ಪಗಳ ಮಳೆಯಾಯಿತು. ಜನಸ್ತೋಮಕ್ಕೆ ತಾವು ಸ್ವರ್ಗದಲ್ಲಿರುವಂತೆ ಭಾಸವಾಯ್ತು. ಶ್ರೀಮಧ್ವರು ಪುಷ್ಪರಾಶಿಯಲ್ಲಿ ಮುಳುಗಿದರು.

ಪುಷ್ಪಗಳನ್ನು ಸರಿಸಿ ನೋಡಿದರೆ ಶ್ರೀಮಧ್ವರು ಅದೃಶ್ಯರಾಗಿದ್ದರು, ಬದರಿಯತ್ತ ತೆರಳಿದ್ದರು. ಶಿಷ್ಯರಿಗೆ ‘ಪ್ರಾಣ’ಹೋದ ಅನುಭವ. ‘ವಾಯುತತ್ತ್ವ ಅದೃಶ್ಯವೇ ಅಲ್ಲವೇ?’ ಕೊನೆಗೆ ಶಿಷ್ಯರಿಗೆ ಗುರುವಾಣಿ ಜ್ಞಾಪಕಕ್ಕೆ ಬಂತು- ‘‘ನಾವು ಬದರಿಗೆ ತೆರಳಿದ ಅನಂತರವೂ ಸಹ ಅದೃಶ್ಯರೂಪದಿಂದ ಇಲ್ಲೂ ಇರುವೆವು’’. ಈ ವಾಣಿ ಅವರ ಕರ್ಣಗಳನ್ನು ನಿನಾದಿಸಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X