• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ರಾಶಿ’ - ಕನ್ನಡದ ಅನನ್ಯ ವೈದ್ಯ-ವೇದಾಂತಿ-ಸಾಹಿತಿ

By Staff
|

ಶಿವರಾಂ ಬಿ.ಎ. ಪಾಸಾದಾಗ ಅವರಿಗೆ 19 ವರ್ಷ. ಇವರ ತಂದೆ ಇವರ ಮದುವೆ ಮಾಡಿಬಿಟ್ಟರು. ಹಾಸನದ ವಕೀಲ ಸೂರ್ಯನಾರಾಯಣರಾವ್‌ ಅವರ ಮಗಳು ವಧುವಾಗಿ ಬಂದಳು. ಅವಳ ವಯಸ್ಸು ಹನ್ನೊಂದು. ಶಿವರಾಂ ಅವರ ತಂದೆ ಎಂಟು ಮಕ್ಕಳ ತಂದೆಯಾಗಿದ್ದರೂ ಲೌಕಿಕದಲ್ಲಿ ಆಸಕ್ತಿ ಇರಲಿಲ್ಲ. ಮಗ ಎಮ್‌.ಬಿ.ಬಿ.ಎಸ್‌ ಸೇರುವವನಿದ್ದ ಕೊನೆಯ ದಿನ ಬಂದಿತ್ತು. ಆದರೆ ಫೀ ಕೊಡಲು ತನ್ನ ಬಳಿ ಹಣ ಇಲ್ಲ ಎಂದರು ತಂದೆ. ಆದರೆ ಅದೇ ದಿನ ಮಠದ ಸ್ವಾಮಿಗಳನ್ನು ಮನೆಗೆ ಕರೆಸಿ 108 ನಾಣ್ಯಗಳ ಕಾಣಿಕೆ ಇತ್ತು ವೈಭವದಿಂದ ಪಾದಪೂಜೆ ನಡೆಸಿದ್ದರು.

ಶಿವರಾಂ ಯಾರ್ಯಾರದೋ ಕಾಲು ಹಿಡಿದು ಫೀ ತುಂಬಿ ಬಂದರು. ಇದರ ಪರಿಣಾಮ ಶಿವರಾಂ ಅವರ ತಾಯಿಯ ಮೇಲೆ ಆಯ್ತು. ಶಿವರಾಂ ಎಮ್‌.ಬಿ.ಬಿ.ಎಸ್‌. ಮೂರನೆಯ ವರ್ಷದಲ್ಲಿ ಇದ್ದಾಗ ತಾಯಿ ಸೀತಮ್ಮಗೆ ‘ಸೆರಿಬ್ರಲ್‌ ಹೆಮರೇಜ್‌’ ಆಯಿತು. 40ನೆಯ ವಯಸ್ಸಿಗೆ ಆ ಮಹಾ ತಾಯಿ ಕೊನೆ ಉಸಿರೆಳೆದರು. ಆಗ ಎಂಟನೆಯ ಮಗು (ಕಿಟ್ಟು) ಒಂದೂವರೆ ವರ್ಷದ್ದು. ಶಿವರಾಂ ಅವರಿಗೆ 23 ವರ್ಷ.

ಸಾಯುವ ಮುಂಚೆ ಆ ತಾಯು ಹೇಳಿದ್ದರಂತೆ, ‘ಶಿವು ಎಲ್ಲ ಮಕ್ಕಳನ್ನು ನೋಡಿಕೊಳ್ಳುತ್ತಾನೆ’ ಎಂದು. ಅವರು ತಮ್ಮ ತಮ್ಮಂದಿರನ್ನು, ತಂಗಿಯರನ್ನು ಹೇಗೆ ಪಾಲಿಸಿದರು, ತಾಯಿಯ ಕೊನೆಯ ಆಸೆ ಹೇಗೆ ಪೂರೈಸಿದರು ಎಂಬುದೇ ಒಂದು ಕಾದಂಬರಿಯ ವಸ್ತುವಾಗಬಹುದು. ‘ಕೈಲಾಸಂ ಮತ್ತು ನಾನು’ ಎಂಬ ಕಿರು ಹೊತ್ತಿಗೆಯನ್ನು ಇಂಗ್ಲಿಷಿನಲ್ಲಿ ಶಿವರಾಂ ಬರೆದಿದ್ದಾರೆ. ಅದರಲ್ಲಿ ಅವರು ತಾಯಿಯನ್ನು ಕಳಕೊಂಡ ವರ್ಷದ ಬಗ್ಗೆ ಹೀಗೆ ಬರೆಯುತ್ತಾರೆ:

‘‘1928 ನನ್ನ ಪಾಲಿಗೆ ದುರಾದೃಷ್ಟದ ವರ್ಷ. ವಿದ್ಯಾಭ್ಯಾಸದ ಮೂರು ವರ್ಷ ಮುಗಿದಿತ್ತು. ಇನ್ನೂ ಎರಡು ವರ್ಷ ಹೆಣಗಾಡಬೇಕಿತ್ತು. ಹಣಗಾಸಿನ ಮುಗ್ಗಟ್ಟಂತೂ ತೀವ್ರವಾಗಿತ್ತು. ವರ್ಷದಲ್ಲಿ ಎರಡು ಬಾರಿ ಗಡುವಿನ ಫೀ ಕೊಡುವದಂತೂ ಮಹಾಪ್ರಯಾಸವಾಗಿತ್ತು. ಫೀಜಿಗಾಗಿ ಸಾಲ ಎತ್ತಲು ಎಲ್ಲ ಬಗೆಯ ಸ್ವಪ್ರತಿಷ್ಠೆಯ ಶ್ರೀಮಂತ ಕತ್ತೆಗಳ ಮುಂದೆ ಹಲ್ಲು ಗಿಂಜುವುದು, ಅತಿ ದೈನ್ಯದಿಂದ ಬೇಡುವುದು ತುಂಬ ತಲೆತಗ್ಗಿಸುವಂಥ ಪ್ರಕ್ರಿಯೆಯಾಗಿತ್ತು.’’

ಅದೇ ವರ್ಷ ಭವನಾನಿ ಎಂಬ ಚಿತ್ರ ನಿರ್ದೇಶಕರೊಬ್ಬರು ‘ವಸಂತಸೇನಾ’ ಕಥೆಯನ್ನು ಆಧರಿಸಿ ಒಂದು ಸಿನೆಮಾ ತೆಗೆಯುತ್ತಿದ್ದರು. ಅವರು ಬೆಂಗಳೂರಿಗೆ ಆಗಮಿಸಿದ್ದರು. ತರುಣ ಕಲಾವಿದರ ಆಯ್ಕೆ ನಡೆಸಿದ್ದರು. ಶಿವರಾಂ ತಮ್ಮ ಫೋಟೋ ಕಳಿಸಿದ್ದರು, ತಮ್ಮ ಅಭಿನಯ ಕಲೆ ಪ್ರದರ್ಶಿಸಿ, ಸ್ಕಿೃೕನ್‌ ಟೆಸ್ಟ್‌ನಲ್ಲಿ ಯಶಸ್ವಿಯಾದರು. ತಿಂಗಳಿಗೆ 75 ರೂಪಾಯಿಯ ಸಂಬಳದ ಕೆಲಸ ದೊರೆಯಿತು. ಅದರಿಂದ ಮನೆಯ ಪರಿಸ್ಥಿತಿ ಸುಧಾರಿಸುವುದೆಂದು ತಿಳಿದು ತಮ್ಮ ಶಿಕ್ಷಣಕ್ಕೆ ತಿಲಾಂಜಲಿ ಇತ್ತು ಸಿನೆಮಾ ನಟನಾಗಲು ಹೊರಟರು.

ಇವರು ಕೆಲಸಕ್ಕೆ ಹಾಜರಾಗುವ ದಿನ ಅಲ್ಲಿ ಕೈಲಾಸಂ ಇವರನ್ನು ನೋಡಿದರು. ವಿಷಯ ತಿಳಿದ ಮೇಲೆ ಅವರು ಡೈರೆಕ್ಟರರಿಗೆ ಬದಿಗೆ ಕರೆದು ಹೇಳಿದರು, ‘ಈ ತರುಣನಿಗೆ ಕೆಲಸ ಕೊಟ್ಟರೆ ನಾನು ನಿಮ್ಮ ಚಿತ್ರದಲ್ಲಿ ಕೆಲಸ ಮಾಡುವುದಿಲ್ಲ.’ ಎಂದು. ಕೈಲಾಸಂ ಅವರನ್ನು ಬಹು ಮಹತ್ವದ ಪಾತ್ರಕ್ಕಾಗಿ ಆಯ್ಕೆ ಮಾಡಲಾಗಿತ್ತು (ಶಕಾರನ ಪಾತ್ರಕ್ಕೆ), ಅವರನ್ನು ಡೈರೆಕ್ಟರರು ಬಿಡುವಂತಿರಲಿಲ್ಲ. ಶಿವರಾಂ ಅವರಿಗೆ ಡೈರಕ್ಟರ್‌ ಹೇಳಿದರಂತೆ. ‘ನಿನಗೆ ನಮ್ಮಲ್ಲಿ ಕೆಲಸವಿಲ್ಲ. ನೀನು ನಿರುದ್ಯೋಗಿ ಪದವೀಧರ ಎಂದು ಭಾವಿಸಿದ್ದೆ. ನೀನು ಮೆಡಿಕಲ್‌ ವಿದ್ಯಾರ್ಥಿ ಎಂದು ನನಗೆ ತಿಳಿದಿರಲಿಲ್ಲ.’ ಎನ್ನುತ್ತ ಕೆಲಸವನ್ನು ನಿರಾಕರಿಸಿದರು. ಆಗ ಕೈಲಾಸಂ ಹೇಳಿದರು, ‘‘ನೀನು ಕಾಲೇಜಿಗೆ ಹೋಗು. ನಿನಗೆ ಸಹಾಯ ಮಾಡಲು ನಾವು ಏನಾದರೂ ಮಾರ್ಗೋಪಾಯ ಹುಡುಕುತ್ತೇವೆ’’ ಎಂದು.

ವಿಷಮ ಪರಿಸ್ಥಿತಿಯಲ್ಲಿ ಹೋರಾಡಿ ಶಿವರಾಂ ಎಮ್‌.ಬಿ.ಬಿ.ಎಸ್‌. ಪಾಸಾದರು(1930). ಅವರಿಗೆ ಸರಕಾರಿ ಕೆಲಸ ದೊರೆಯಲಿಲ್ಲ. ವೈದ್ಯ ಮಿತ್ರ ಡಾ। ಎಸ್‌.ಸುಬ್ಬರಾಯರ ಜೊತೆ ಸೇರಿ ‘ದಿ ಸಿಟಿ ಡಿಸ್ಪೆನ್ಸರಿ ಅಂಡ್‌ ಲ್ಯಾಬೋರೆಟರಿ’ ಆರಂಭಿಸಿದರು(1931). ಆ ಕಾಲದಲ್ಲಿ ಪ್ರಕಟವಾಗುತ್ತಿದ್ದ ಎಲ್ಲ ಮೆಡಿಕಲ್‌ ಜರ್ನಲ್ಸ್‌ ತರಿಸುತ್ತಿದ್ದರು. ಅವರ ಓದು ಅಗಾಧವಾಗಿತ್ತು. ಅವರ ಕೈಗುಣವೂ ಚೆನ್ನಾಗಿತ್ತು. ಬಡವರ ಬಂಧುವೆಂದೇ ಪ್ರಸಿದ್ಧಿ ಪಡೆದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X