ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ರಾಶಿ’ - ಕನ್ನಡದ ಅನನ್ಯ ವೈದ್ಯ-ವೇದಾಂತಿ-ಸಾಹಿತಿ

By Staff
|
Google Oneindia Kannada News


ತಮ್ಮ ಜೀವಿತ ಕಾಲದಲ್ಲೇ ಐತಿಹ್ಯವಾಗಿದ್ದವರು ಡಾ.ಎಂ.ಶಿವರಾಂ. ‘ರಾಶಿ ’ ಎಂದೇ ನಾಡಿಗೆ ಪರಿಚಿತರಾಗಿದ್ದ ಅವರು, ಯಶಸ್ವಿ ವೈದ್ಯರು, ಬಡವರ ಬಂಧು, ಬಡ ವಿದ್ಯಾರ್ಥಿಗಳ ಪಾಲಿನ ದೇವರು, ಅಭಿಜಾತ ನಟ, ಸಂಪಾದಕ, ವೈದ್ಯವಿಜ್ಞಾನ ಸಾಹಿತಿ, ವೇದಾಂತಿ, ಹಾಸ್ಯ ಬರಹಗಾರ ಇತ್ಯಾದಿ ಇತ್ಯಾದಿ.

In the memory of Dr.M. Shivaram (Raashi), A Kannada Humoristಡಾ। ಶಿವರಾಂ ಅವರ ನಿಕಟ ಪರಿಚಯ ನನಗೆ ಲಭ್ಯವಾದದ್ದು ಅವರ ಮಗಳಾದ ಶ್ರೀಮತಿ ವಿಮಲಾ ಶೇಷಾದ್ರಿ ಅವರಿಂದ. ವಿಮಲಾ ಚಿತ್ರಕಲಾವಿದೆ, ಕವಯಿತ್ರಿ, ಸಮಾಜ ಕಾರ್ಯಕರ್ತೆ ಆಗಿದ್ದರು. ನನ್ನ ಮತ್ತು ವಿಮಲಾ ಅವರ ಸಂಬಂಧ ಎಷ್ಟು ಆತ್ಮೀಯವಾಗಿತ್ತು ಎಂಬುದಕ್ಕೆ ಒಂದು ಉದಾಹರಣೆ : ಒಮ್ಮೆ ಇನ್ನೊಬ್ಬರೊಡನೆ ಮಾತಾಡುತ್ತಿವಾಗ ನಾನು ಅಂದಿದ್ದೆ, ‘ನನಗೆ ಇಬ್ಬರು ತಮ್ಮಂದಿರು, ಇಬ್ಬರು ತಂಗಿಯರು’, ಆಗ ವಿಮಲಾ ಕೂಡಲೇ ಹೇಳಿದ್ದರು, ‘ಇದು ತಪ್ಪು, ನಿಮಗೊಬ್ಬ ಅಕ್ಕ ಇದ್ದಾಳೆ’. ನನಗೆ ಕೂಡಲೆ ತಿಳಿಯಲಿಲ್ಲ. ‘ನಾನು ನಿಮ್ಮ ಅಕ್ಕ ಅಲ್ಲವೇ?’ ಎಂದು ನಸುನಕ್ಕರು. ಅವರು ನನ್ನನ್ನು ಸ್ವಂತ ತಮ್ಮನಂತೆಯೇ ನೋಡಿಕೊಂಡರು. ಇಂದು, ಈ ಲೇಖನ ಪ್ರಕಟವಾಗುವಾಗ ಅವರಿಲ್ಲ.(26-12-2006 ರಂದು ಅವರು ಸ್ವರ್ಗಸ್ಥರಾದರು.) ಅವರ ಸ್ಮರಣೆಗೆ ರಾಶಿ ಬಗೆಗಿನ ಈ ಲೇಖನ ಅರ್ಪಿತ.

‘ರಾಶಿ’ಯವರ ಜೀವನವೇ ಒಂದು ರೋಚಕ ಸಾಹಸ ಗಾಥೆ

ಡಾ। ಎಂ. ಶಿವರಾಂ ಅವರದು ಆಪ್ತತೆ ತುಂಬಿದ ವ್ಯಕ್ತಿತ್ವ. ಯಶಸ್ವಿ ಡಾಕ್ಟರ್‌, ಬಡವರ ಬಂಧು, ಬಡ ವಿದ್ಯಾರ್ಥಿಗಳ ದೇವರು, ಅಭಿಜಾತ ನಟ, ಸಂಪಾದಕ, ವೈದ್ಯವಿಜ್ಞಾನ ಸಾಹಿತಿ, ವೇದಾಂತಿ, ಬಹುಶ್ರುತ ಮೇಧಾವಿ. ಬೆಂಗಳೂರಲ್ಲಿ ಎಂಟು ದಶಕಗಳ ಕಾಲ ಬಾಳಿ ಬೆಳೆದು ಬೆಳಗಿದ ಇವರು ತಮ್ಮ ಜೀವಿತ ಕಾಲದಲ್ಲೇ ಒಂದು ಐತಿಹ್ಯರಾಗಿದ್ದರು.

ಬೆಂಗಳೂರಲ್ಲಿ ಜನನ (10 ನವೆಂಬರ್‌, 1905). ತಂದೆ ರಾಮಸ್ವಾಮಿ, ತಾಯಿ ಸೀತಮ್ಮ. ತಂದೆ ಮದ್ರಾಸ್‌ ಪ್ರೆಸಿಡೆನ್ಸೀ ಕಾಲೇಜಿನ ವಿದ್ಯಾರ್ಥಿಯಾಗಿ ಇಂಗ್ಲಿಷ್‌ ಮೇಜರ್‌ ಆಯ್ದು ಪ್ರಥಮಶ್ರೇಣಿಯಲ್ಲಿ ಪಾಸಾಗಿದ್ದರು. ಮೈಸೂರಲ್ಲಿ ಸರಕಾರದಲ್ಲಿ ಸುಪರಿಂಟೆಂಡೆಟ್‌ ಆಗಿದ್ದರು. ಒಳ್ಳೆಯ ಹುದ್ದೆ, ಕೈತುಂಬ ಸಂಬಳ. ದಾನಧರ್ಮದಲ್ಲಿ ಹಣವನ್ನೆಲ್ಲ ಕಳಕೊಂಡರು.

ಬೆಳಗ್ಗೆ ನಾಲ್ಕುಗಂಟೆಗೆ ಎದ್ದು ತಣ್ಣಿರು ಸ್ನಾನಮಾಡಿ ಪೂಜೆ ಮುಗಿಯುವಾಗ ಹತ್ತು ಗಂಟೆ. ಮನೆಯ ಕಡೆಗೆ ಹೆಚ್ಚಿನ ಗಮನವಿರಲಿಲ್ಲ. ಇವರಿಗೆ ಎಂಟು ಮಕ್ಕಳು (ಆರು ಗಂಡು, ಒಂದು ಹೆಣ್ಣು). ಅವರಲ್ಲಿ ಶಿವರಾಂ ಹಿರಿಯ ಮಗ. ಶಿವರಾಂ ವಿದ್ಯಾರ್ಥಿ ದೆಸೆಯಲ್ಲಿ ಹೆಚ್ಚುಕಾಲ ಲೈಬ್ರರಿಯಲ್ಲಿ ಕಳೆಯುತ್ತಿದ್ದರು. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಲೈಬ್ರರಿಗೆ ಬರುತ್ತಿದ್ದ ‘ಪಂಚ್‌’ ಎಂಬ ಇಂಗ್ಲಿಷ್‌ ಹಾಸ್ಯ ಮತ್ತು ವಿಡಂಬನ ಸಾಹಿತ್ಯದ ಮಾಸ ಪತ್ರಿಕೆ ತಪ್ಪದೆ ಓದುತ್ತಿದ್ದರು.

ಒಮ್ಮೆ ಎಲ್ಲ ‘ಪಂಚ್‌’ ಮ್ಯಾಗಜಿನ್‌ನ ಹಳೆಯ ಸಂಚಿಕೆಗಳನ್ನು ಹರಾಜು ಮಾಡಲು ಕಾಲೇಜಿನವರು ಮುಂದಾದಾಗ ಶಿವರಾಂ ತಾಯಿಯಿಂದ ಮೂರು ರೂಪಾಯಿ ಪಡೆದು ಹರಾಜಿನಲ್ಲಿ ಪಾಲ್ಗೊಂಡಿದ್ದರು. ಆದರೆ ಅವರ ಕಾಲೇಜಿನ ಪ್ರಿನ್ಸಿಪಾಲ್‌ ಪ್ರೊ. ಮೆಕ್‌ ಅಲ್ಪೈನ್‌ ಎಂಬವರು ನಾಲ್ಕು ರೂಪಾಯಿಗೆ ಹರಾಜು ಕೂಗಿ, ಎಲ್ಲ ಮ್ಯಾಗಜಿನ್‌ ಕೊಂಡುಬಿಟ್ಟರು. ಹೆಚ್ಚು ಹಣ ತೆತ್ತು ಕೊಳ್ಳುವ ಸ್ಥಿತಿಯಲ್ಲಿ ಶಿವರಾಂ ಇರಲಿಲ್ಲ. ಅವರು ಕಷ್ಟಪಟ್ಟು ತಂದಿದ್ದ ಮೂರು ರೂಪಾಯಿ ಆ ಕಾಲಕ್ಕೆ ದೊಡ್ಡ ಮೊತ್ತವಾಗಿತ್ತು.

ಮರುದಿನ ಪ್ರಿನ್ಸಿಪಾಲ್‌ ಇವರನ್ನು ತಮ್ಮ ಚೇಂಬರಿಗೆ ಬರ ಹೇಳಿದರು. ಮನದಲ್ಲಿ ಪ್ರಿನ್ಸಿಪಾಲನನ್ನು ಶಪಿಸುತ್ತ ಅವರ ಕಡೆ ಬಂದಾಗ ಇವರಿಗೆ ಅಚ್ಚರಿಯೇ ಕಾಯ್ದಿತ್ತು. ‘‘ಯಾವ ವಿದ್ಯಾರ್ಥಿಯೂ ಹರಾಜಿನಲ್ಲಿ ಪಾಲ್ಗೊಳ್ಳಲು ಮುಂದೆ ಬಂದಿರಲಿಲ್ಲ. ನಿನಗೆ ‘ಪಂಚ್‌’ ಮ್ಯಾಗಜಿನ್‌ ಮೇಲೆ ಅಷ್ಟೊಂದು ಪ್ರೀತಿಯೇ?’’ ಎಂದು ಕೇಳಿದಾಗ ಸಕಾರಾತ್ಮಕ ತಲೆ ಅಲ್ಲಾಡಿಸಿದಾಗ, ‘ನಿನಗೇ ಇವು ದೊರೆಯಲಿ ಎಂದೇ ನಾನು ಹೆಚ್ಚು ಹಣಕ್ಕೆ ಹರಾಜು ಕೂಗಿದೆ’ ಎನ್ನುತ್ತ ಎಲ್ಲ ಮ್ಯಾಗಜಿನ್‌ಗಳನ್ನು ಇವರಿಗೆ ಕಾಣಿಕೆಯಾಗಿ ಕೊಟ್ಟರಂತೆ.

ಶಿವರಾಂ ಅವರು ಬಿ.ಎ. ಪಾಸಾದ ಮೇಲೆ (1925)ಮುಂದೆ ಎಂ.ಎ. ಮಾಡಲು ಬಯಸಿದರು. ಆದರೆ ಇವರಿಗೆ ಎಂ.ಬಿ.ಬಿ.ಎಸ್‌. ಮಾಡಲು ಸಲಹೆ ನೀಡಿದವರು ಇವರ ಕುಟುಂಬದ ಹಿತೈಷಿಗಳಾದ ಬಿ.ಎಂ.ಶ್ರೀ. ಅವರು. ಅವರ ಸಲಹೆಯಿಂದ ಒಂದು ದೊಡ್ಡ ಲಾಭವಾಯಿತು. ಕನ್ನಡಕ್ಕೆ ಒಬ್ಬ ಒಳ್ಳೆಯ ಡಾಕ್ಟರರ ಜೊತೆ ಸಾಹಿತಿಯೂ ಲಭ್ಯನಾದ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X