• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಣ್ಣು ಕೊಟ್ಟು ನಡೆಸುವ ಡಾ. ಎಂ.ಎಂ. ಜೋಶಿಗೀಗ 70

By Staff
|

‘ಕೆಲವರು ಜನ್ಮತಃ ದೊಡ್ಡವರಾಗಿರುತ್ತಾರೆ, ಕೆಲವರು ದೊಡ್ಡತನವನ್ನು ಗಳಿಸುತ್ತಾರೆ, ಇನ್ನು ಕೆಲವರ ಮೇಲೆ ದೊಡ್ಡತನವನ್ನು ಹೇರಲಾಗುತ್ತದೆ’ ಎಂದು ಶೇಕ್ಸ್‌ಪಿಯರ್‌ ಮಹಾಕವಿ ಹೇಳಿದ್ದಾನೆ. ದೊಡ್ಡತನವನ್ನು ಗಳಿಸಿದವರ ಸಾಲಿನಲ್ಲಿ ರಾರಾಜಿಸುತ್ತಿರುವವರು ಡಾ। ಜೋಶಿಯವರು.

  • ಡಾ।‘ಜೀವಿ’ ಕುಲಕರ್ಣಿ, ಮುಂಬಯಿ

jeevi65@gmail.com

Dr.M.M.Joshi, Famous Eye Specialistನೇತ್ರಚಿಕಿತ್ಸೆಯ ಕ್ಷೇತ್ರದಲ್ಲಿ, ಕರ್ನಾಟಕದಲ್ಲಿ, ಅಷ್ಟೇ ಏಕೆ ಭಾರತದಲ್ಲೇ ಬಹಳ ದೊಡ್ಡ ಹೆಸರು ಗಳಿಸಿದವರು ಹುಬ್ಬಳ್ಳಿಯ ‘ಪದ್ಮನಯನಾಲಯ’ದ ಡಾ। ಎಂ.ಎಂ.ಜೋಶಿಯವರು. ಇವರಿಗೀಗ ಸಪ್ತತಿಯ ಸಂಭ್ರಮ.

ಈ ವ್ಯಕ್ತಿ ಶಕ್ತಿಯಾಗಿ, ಬೃಹತ್‌ ಸಂಸ್ಥೆಯಾಗಿ ಬೆಳೆದಿದ್ದಾರೆ. ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ಬರೆಯುವ ಮೊದಲು ಪೀಠಿಕೆಯ ರೂಪದಲ್ಲಿ, ನನ್ನ ಅವರ ಮೊದಲ ಭೆಟ್ಟಿ, ಪರಿಚಯ, ನಿಕಟ ಬಾಂಧವ್ಯದ ಬಗ್ಗೆ ಸ್ವಲ್ಪ ಆಪ್ತವಿವರಗಳನ್ನು ನೀಡುವೆ.

ಡಾ। ಎಂ.ಎಂ. ಜೋಶಿಯವರ ಹೆಸರು ಕೇಳಿದ್ದೆ. ಕಾಖಂಡಕಿಯ ಮಹಿಪತಿದಾಸರ ವಂಶಜರು ಎಂಬುದನ್ನೂ ಕೇಳಿದ್ದೆ, ಸಾಹಿತ್ಯ, ಸಂಗೀತ, ಸಮಾಜಕಾರ್ಯದಲ್ಲಿ ಇವರ ಆಸಕ್ತಿಯ ಬಗ್ಗೆ ಕೇಳಿದ್ದೆ. ಧಾರ್ಮಿಕ ಕಾರ್ಯಗಳಲ್ಲಿ ಕೂಡ ಉತ್ಸಾಹದಿಂದ ಭಾಗವಹಿಸುತ್ತಾರೆಂದು ಕೇಳಿದ್ದೆ. ಪರಿಚಯವಿರಲಿಲ್ಲ. ಅವರನ್ನು ಮೊದಲು ಕಂಡದ್ದು ಸುಮಾರು ಹತ್ತು ವರ್ಷಗಳ ಹಿಂದೆ. ದೊಂಬಿವಿಲಿಯಲ್ಲಿ ನಡೆದ ಒಂದು ಸಭೆಯಲ್ಲಿ.

ಕರ್ನಾಟಕದ ಪತ್ರಿಕೋದ್ಯಮದ ಭೀಷ್ಮರೆಂದೇ ಪ್ರಸಿದ್ಧಿ ಪಡೆದ ಮೊಹರೆ ಹನುಮಂತರಾಯರ ಸ್ಮರಣಾರ್ಥವಾಗಿ ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಒಂದು ಪ್ರಶಸ್ತಿಯನ್ನು ಕೊಡಲಾಗುತ್ತದೆ. ಆ ಸಮಿತಿಯ ಅಧ್ಯಕ್ಷರಾಗಿ, ದೊಂಬಿವಿಲಿಯಲ್ಲಿ ನಡೆದ ಒಂದು ಸಭೆಗೆ, ಡಾ। ಜೋಶಿ ಆಗಮಿಸಿದ್ದರು. ಬಹುಮಾನವನ್ನು ಕನ್ನಡದ ಅಪರೂಪದ ವ್ಯಂಗಚಿತ್ರಕಾರ ಆರ್‌.ಕೆ.ಲಕ್ಷ್ಮಣ್‌ ಅವರಿಗೆ ಕೊಡಲಾಗಿತ್ತು.

ಡಾ। ಜೋಶಿಯವರು ಮೊಹರೆಯವರ ಬಗ್ಗೆ ಮಾತಾಡಿದ್ದರು. ಅವರ ಮಾತಿನಿಂದ ಪ್ರಭಾವಿತನಾದ ನಾನು ಅವರನ್ನು ಅಭಿನಂದಿಸಿದೆ. ನನ್ನ ಪರಿಚಯ ಹೇಳಿದೆ. ಹುಬ್ಬಳ್ಳಿಯ ಕಡೆಗೆ ಬಂದಾಗ ತಮ್ಮನ್ನು ಕಾಣಲು ಆಮಂತ್ರಿಸಿದರು. ಅವರಿಗೆ ಸಾಹಿತ್ಯ ಸಂಗೀತ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿದ್ದ ಕಳಕಳಿ ನನ್ನನ್ನು ಅವರ ಅಯಸ್ಕಾಂತ ಸದೃಶ ವ್ಯಕ್ತಿತ್ವದತ್ತ ಇನ್ನಷ್ಟು ಸೆಳೆಯಿತು.

ಅವರ ಬಹಳ ಹತ್ತಿರದ ಸಂಪರ್ಕ ಬರಲು 2000ನೇ ಇಸವಿಯಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಒಂದು ಸಭೆ ಕಾರಣವಾಗಿತ್ತು. ಡಾ। ಕೆ.ಎಸ್‌.ಶರ್ಮಾ ಅವರ ವಿಶ್ವಶ್ರಮ ಚೇತನದಲ್ಲಿ ‘ವರಕವಿ ಬೇಂದ್ರೆಯವರ ಬೆಳದಿಂಗಳ ನೋಡ’ ಹಾಡಿನ ಕಾರ್ಯಕ್ರಮದ ಜೊತೆಗೆ ಮೂರು ದಿನಗಳ ಒಂದು ಯೋಗ ಶಿಬಿರದ ಉದ್ಘಾಟನೆಯೂ ನಡೆಯಿತು.(19, ಫೆಬ್ರುವರಿ,2000).

ಆಗಿನ ವಿದ್ಯಾಮಂತ್ರಿಗಳು ಉದ್ಘಾಟಕರಾಗಿ ಬಂದಿದ್ದರು. ಸಂಜೆಯ ಕಾರ್ಯಕ್ರಮ ಅದಾಗಿತ್ತು. ಬೆಳಗಾಗುವ ವರೆಗೆ ಬೇಂದ್ರೆ ಸಂಗೀತವಿತ್ತು. ಮರುದಿನ ಮುಂಜಾನೆಯಿಂದ ಯೋಗ ಶಿಬಿರ ನಡೆಯಲಿತ್ತು. ಶಿಬಿರಾರ್ಥಿಗಳು ಕೆ.ಎಲ್‌.ಇ.ಸೊಸೈಟಿಯ ಬಿ.ಎಡ್‌. ಕಾಲೇಜಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು (100+10ಜನರು). ನಾನು ಶಿಬಿರಾರ್ಥಿಗಳಿಗಾಗಿ ತಯಾರಿಸಿದ ‘ಯೋಗ ಶಿಬಿರ’ ಎಂಬ ಪುಸ್ತಿಕೆಯನ್ನು( ಇಂಗ್ಲಿಷಿನಲ್ಲಿ ಬರೆದ ವರ್ಕಶಾಪ್‌ ಮೆಟೀರಿಯಲ್‌) ಶಿಬಿರಾರ್ಥಿಗಳಿಗೆ ಉಚಿತವಾಗಿ ಹಂಚಿದ್ದೆ, ‘ಇದನ್ನೋದಿ ನಾಳೆ ಮುಂಜಾನೆಯ ಶಿಬಿರಕ್ಕೆ ಬನ್ನಿ’ ಎಂದು ಹೇಳಿದ್ದೆ.

ಪ್ರೇಕ್ಷಕರಲ್ಲಿ ಒಬ್ಬರಾಗಿದ್ದ ಡಾ। ಎಂ.ಎಂ.ಜೋಶಿಯವರು ನನ್ನನ್ನು ಕಂಡು, ‘ನಾನು ಶಿಬಿರಾರ್ಥಿಯಲ್ಲ, ಆದರೂ ನಿಮ್ಮ ಪುಸ್ತಕ ಓದುವ ಇಚ್ಛೆಯುಳ್ಳವನಾಗಿದ್ದೇನೆ’ ಎಂದಾಗ ಅವರಿಗೆ ಪುಸ್ತಿಕೆಯನ್ನು ಕೊಟ್ಟೆ. ಮರುದಿನ ನನಗೆ ಅಚ್ಚರಿಯೇ ಕಾಯ್ದಿತ್ತು. ಡಾ। ಜೋಶಿಯವರು ಶಿಬಿರ ನೋಡಲು ಬಂದರು, ‘ನಿಮ್ಮನ್ನು ಮುಂಬೈಗೆ ಬಿಡುವುದಿಲ್ಲ. ನಮ್ಮ ಆಸ್ಪತ್ರೆಯ ಸಭಾಭವನದಲ್ಲಿ ನಿಮ್ಮಿಂದ ಏಳು ದಿನಗಳ ಶಿಬಿರ ಏರ್ಪಡಿಸುವ ಯೋಚನೆ ಇದೆ. ನಿಮ್ಮ ಪುಸ್ತಿಕೆ ನೋಡಿ ನಾನು ಪ್ರಭಾವಿತನಾಗಿದ್ದೇನೆ’ ಅಂದರು.

‘ನಾವು ಮತ್ತೆ ಎಪ್ರಿಲ್‌ ತಿಂಗಳಲ್ಲಿ ಬರುತ್ತೇವೆ, ನಿಮ್ಮಲ್ಲಿ ಯೋಗ ಶಿಬಿರ ನಡೆಸುತ್ತೇವೆ’ ಎಂದು ಮಾತು ಕೊಟ್ಟೆ. ಬಿ.ಎಡ್‌. ಕಾಲೇಜಿನಲ್ಲಿ 40ರಷ್ಟು ವಿದ್ಯಾರ್ಥಿನಿಯರು ಇದ್ದುದರಿಂದ ಯೋಗ ಕಲಿಸಲು ನನ್ನ ಜೊತೆಗೆ ಶ್ರೀಮತಿಯವರನ್ನೂ ಕರೆದುಕೊಂಡು ಬಂದಿದ್ದೆ. ಡಾ। ಜೋಶಿಯವರ ಆಸ್ಪತ್ರೆಯಲ್ಲಿ ನಾವು ಏಳು ದಿನ ಹವಾನಿಯಂತ್ರಿತ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿ 15-20 ಜನ ಡಾಕ್ಟರರಿಗೆ ಮತ್ತು ಅವರ ಸಂಬಂಧಿಕರಿಗೆ ಯೋಗಪ್ರಶಿಕ್ಷಣ ನೀಡಿದೆವು. (20ರಿಂದ 27 ಏಪ್ರಿಲ್‌).

ಮುಂದೆ ಸಪ್ಟೆಂಬರ್‌ ತಿಂಗಳಲ್ಲಿ ಅಮೆರಿಕೆಯಲ್ಲಿ ಆಯೋಜಿತವಾದ ಪ್ರಥಮ ಕನ್ನಡ ವಿಶ್ವ ಸಮ್ಮೇಲನದಲ್ಲಿ ಭಾಗವಹಿಸಲು ಹೋದೆ. ಅಲ್ಲಿಯೂ ಯೋಗ ಶಿಬಿರಗಳನ್ನು ನಡೆಸಿದೆ. ಹುಬ್ಬಳ್ಳಿಯ ಅನುಭವ ನನಗೆ ಬಹಳ ಸಹಕಾರಿಯಾಯಿತು. ( ವಿವರ ‘ಜೀವಿ ಕಂಡ ಅಮೆರಿಕಾ’ ಪುಸ್ತಕದಲ್ಲಿ ಬರೆದಿದ್ದೇನೆ.)

ನಮ್ಮ ಯೋಗಶಿಬಿರದಲ್ಲಿ ಡಾ। ಜೋಶಿ, ಅವರ ಶ್ರೀಮತಿಯವರು (ಪ್ರಮೀಳಾ), ಮಗ ಶ್ರೀನಿವಾಸ, ಅಳಿಯಂದಿರಾದ ಡಾ। ಸತ್ಯಮೂರ್ತಿ, ಡಾ। ಕೃಷ್ಣಪ್ರಸಾದ, ಹೆಣ್ಣು ಮಕ್ಕಳಾದ ಡಾ। ಪದ್ಮಾ, ಡಾ। ಸಂಹಿತಾ, ಮತ್ತು ಭವಾನಿ ಭಾಗವಹಿಸಿದ್ದರು. ಅವರ ಸೋದರ ಮಾವ ಶ್ರೀ ಗಂಡಮಾಲಿಯವರು, ಅವರ ಮಗ ನಾಗರಾಜ, ಡಾ। ರವಿ ಕಲಘಟಗಿ, ಡಾ। ಕಲಮದಾನಿ ಅಲ್ಲದೆ ಮತ್ತೆ ಇತರ ಸಂಬಂಧಿಕರೂ ಭಾಗವಹಿಸಿದ್ದರು. ಡಾ। ಜೋಶಿ ದಂಪತಿಗಳು ನೀಡಿದ ಆದರಾತಿಥ್ಯವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ದಿನಗಳನ್ನು ನೆನೆದಾಗ, ‘ಎತ್ತಣದು ಮಾಮರ ಎತ್ತಣದು ಕೋಗಿಲೆ’ ವಚನ ನೆನಪಾಗುತ್ತದೆ.

ನನ್ನ ‘ಔಷಧಿಯಿಲ್ಲದೆ ಬದುಕಲು ಕಲಿಯಿರಿ’ ಪುಸ್ತಕ ಮೊದಲು ಪ್ರಕಟವಾದಾಗ (18, ಮೇ, 2001) ಡಾ। ಜೋಶಿಯವರು ಬಹಳ ಆಸಕ್ತಿ ವಹಿಸಿದರು. ಹಲವಾರು ಪ್ರತಿಗಳನ್ನು ಕೊಂಡು ತಮ್ಮ ಮಿತ್ರರಿಗೆಲ್ಲ ಹಂಚಿದ್ದರು. ಏಳು ತಿಂಗಳಲ್ಲೆ ಪ್ರಥಮ ಆವೃತಿಯ ಎಲ್ಲ ಪ್ರತಿಗಳು (2000 ಪ್ರತಿಗಳು) ಮಾರಾಟಗೊಂಡಿದ್ದವು. ಇದರ ಯಶಸ್ಸು ಡಾ। ಜೋಶಿಯವರಂತಹ ಮಿತ್ರರಿಗೇ ಸಲ್ಲುತ್ತದೆ.

ಡಾ। ಜೋಶಿಯವರ ಆಸ್ಪತ್ರೆಯಲ್ಲಿ ಒಂದು ‘ಮಧುಮೇಹ ಮತ್ತು ನೇತ್ರರೋಗ’ಕ್ಕೆ ಸಂಬಂಧಿಸಿದ ಒಂದು ಶಿಬಿರವಿತ್ತು. ಸುಮಾರು 200 ಜನ ಅದರಲ್ಲಿ ಭಾಗವಹಿಸುವ ನಿರೀಕ್ಷೆ ಇತ್ತು. ನಾನಾಗ ಧಾರವಾಡದಲ್ಲಿದ್ದೆ. ಡಾ। ಜೋಶಿಯವರಿಗೆ ನಾನು ಬಂದ ವಿಷಯ ತಿಳಿಸಿ ಫೋನ್‌ ಮಾಡಿದೆ. ‘ನಾಳೆ ರವಿವಾರ ಮುಂಜಾನೆ ದ್ವಾದಶಿ ಇದೆ 8 ಗಂಟೆಗೆ ನಮ್ಮ ಮನೆಗೆ ಊಟಕ್ಕೆ ಬನ್ನಿರಿ’ ಎಂದರು. ‘ಏನು ವಿಶೇಷ?’ ಎಂದು ಕೇಳಿದಾಗ ಮುಂಜಾನೆ 9 ಗಂಟೆಗೆ ತಮ್ಮಲ್ಲಿ ನೇತ್ರಶಿಬಿರವಿದೆ ಎಂದೂ, ನನ್ನ ಪುಸ್ತಕದ 50 ಪ್ರತಿ ತರಲು ಹೇಳಿದರು. ಆ ಸಭೆಯಲ್ಲಿ ನನ್ನನ್ನು ಪರಿಚಯಿಸಿ ನನ್ನ ಪುಸ್ತಕದ ಬಗ್ಗೆ ಹೇಳಿದರು. ಅಲ್ಲಿ ಒಂದು ಟೇಬಲ್‌ ಇರಿಸಿ ಮಾರಾಟದ ವ್ಯವಸ್ಥೆ ಮಾಡಿದರು.

ನನ್ನ ಮಿತ್ರರೊಬ್ಬರ ಕಣ್ಣಿನ ಶಸ್ತ್ರ ಚಿಕಿತ್ಸೆ ಮುಂಬೈಯಲ್ಲಿ ನಡೆಯಿತು. ಇಲ್ಲಿಯ ಕಣ್ಣಿನ ಡಾಕ್ಟರರು ನನಗೆ ಬಹಳ ಪರಿಚಿತರು. ‘ನನ್ನ ಮಿತ್ರ ಗುರೂಜಿ ಎಂದೇ ಪ್ರಸಿದ್ಧರು. ದೇವರ ಕೆಲಸ ಮಾಡುತ್ತಾರೆ. ಶಸ್ತ್ರಕ್ರಿಯೆಯಲ್ಲಿ ಸ್ವಲ್ಪ ರಿಯಾಯಿತಿ ತೋರಿಸಬೇಕು ಎಂದು ಕೇಳಿಕೊಂಡೆ. ನನ್ನ ಡಾಕ್ಟರ್‌ ಮಿತ್ರ (ಲಂಡನ್‌ ರಿಟರ್ನ್ಡ್‌ ಡಾಕ್ಟರರು), ‘ನೀವೇ ಹೇಳಿ ಎಷ್ಟು ಚಾರ್ಜ ಮಾಡಲಿ. ಲೇಝರ್‌ ಆಪರೇಶನ್‌ ಇಂಪೋರ್ಟೆಡ್‌ ಲೆನ್ಸ್‌ ಹಾಕಿದರೆ ರೂ.20,000 ಆಗುತ್ತದೆ.’ ನಾನೆಂದೆ ಅರ್ಧ ಚಾರ್ಜ ಮಾಡಿ’ ಎಂದು. ‘ಸರಿ’ ಎಂದರು.

ಎರಡನೆಯ ಕಣ್ಣಿನ ಆಪರೇಶನ್‌ ಆಗಬೇಕಿತ್ತು. ನಾವು ಆಗ ಹುಬ್ಬಳ್ಳಿಯಲ್ಲಿದ್ದೆವು. ಡಾ। ಜೋಶಿಯವರಿಗೆ ತೋರಿಸಿದರು. ಅವರು ಉಚಿತವಾಗಿ ಶಸ್ತ್ರಕ್ರಿಯೆ ಮಾಡಿದರಲ್ಲದೆ ಗುರೂಜಿ ದಂಪತಿಗಳಿಗೆ ವಸ್ತ್ರ ಸೀರೆ ಕೊಟ್ಟು ಸನ್ಮಾನಿಸಿದರು. ಅವರು ಉಚಿತವಾಗಿ ಮಾಡಿದ ಶಸ್ತ್ರಕ್ರಿಯೆಗಳು ಅಸಂಖ್ಯ. ‘ಡಾಕ್ಟರರೇ ನೀವು ಇಂಪೋರ್ಟೆಡ್‌ ಲೆನ್ಸ್‌ ಹಾಕಿದ್ದೀರಿ. ಅದರ ಬೆಲೆ 4-5 ಸಾವಿರ ಆಗುತ್ತದೆ. ಅದರ ಹಣವನ್ನಾದರು ತೊಗೊಳ್ಳಬೇಕು’ ಅಂದಾಗ, ‘ಅಷ್ಟು ಹಣ ನಾನು ಕೈಯಿಂದ ಹಾಕಿದರೆ ನಾನು ಬಡವನಾಗುವುದಿಲ್ಲ!’ ಎಂದಿದ್ದರು. ಅವರ ಮನದ ಶ್ರೀಮಂತಿಕೆ ಕಂಡೂ ನಾನು ಮೂಕವಿಸ್ಮಿತನಾಗಿದ್ದೆ.

ಡಾ। ಎಂ.ಎಂ. ಜೋಶಿಯವರ ಜೀವನ ಗಾಥೆ ರಸವತ್ತಾಗಿದೆ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ ತಮ್ಮ ಧೀಶಕ್ತಿ ಹಾಗೂ ಸಂಕಲ್ಪದ ಬಲದಿಂದ ಉಚ್ಚ ಶಿಕ್ಷಣ ಪಡೆದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಶೋಧನ ಪ್ರಬಂಧಗಳನ್ನು ಮಂಡಿಸಿ, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಹುಬ್ಬಳ್ಳಿಯಲ್ಲಿ ಪ್ರಥಮ ಹೈ-ಟೆಕ್‌ ಆಸ್ಪತ್ರೆಯನ್ನು ಸ್ಥಾಪಿಸುವದಲ್ಲದೆ ಲಕ್ಷಾವಧಿ ಜನರಿಗೆ ಉಚಿತ ನೇತ್ರಚಿಕಿತ್ಸೆ ನಡೆಸಿದ ಕೀರ್ತಿ ಇವರದಾಗಿದೆ.

ಊರು ಮಹಿಪತಿದಾಸರಿಂದ ಪ್ರಸಿದ್ಧಿ ಪಡೆದ ಕಾಖಂಡಕಿ, ಹುಟ್ಟಿದ್ದು ವಿಜಾಪುರ ಜಿಲ್ಲೆಯ ನಿಂಬಾಳ, ಬೆಳೆದದ್ದು, ಶಾಲೆ ಕಾಲೇಜು ಶಿಕ್ಷಣ ಪಡೆದದ್ದು ವಿಜಾಪುರ, ಧಾರವಾಡಗಳಲ್ಲಿ, ಮೆಡಿಕಲ್‌ ಶಿಕ್ಷಣ ಬರೋಡಾದಲ್ಲಿ ಮತ್ತೆ ಮುಂಬೈಯಲ್ಲಿ. ಮೆಡಿಕಲ್‌ ಪ್ರ್ಯಾಕ್ಟಿಸ್‌ ಶುರು ಮಾಡಿದ್ದು ಹುಬ್ಬಳ್ಳಿಯಲ್ಲಿ.

ಡಾಕ್ಟರರು ಗುಜರಾತಿ, ಮರಾಠಿ ಚೆನ್ನಾಗಿ ಮಾತಾಡಬಲ್ಲರು ಇದು ವೈದ್ಯಕೀಯ ವ್ಯವಸಾಯಕ್ಕೆ ಹೆಚ್ಚು ಸಹಾಯಕ. ಅವರ ಜೀವನದಲ್ಲಿ ದೈವ ಅವರಿಗೆ ಸರಿ ಮಾರ್ಗದಲ್ಲಿ ತಿರುವು ಕೊಟ್ಟಿತು. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಿತು. ‘ರಾಜ್ಯೋತ್ಸವ’ ಮೊದಲಾದ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದವು. ಅವರ ಯಶದ ಹಿಂದೆ ಒಂದು ದೈವೀ ಅನುಗ್ರಹದ ಕೈವಾಡವಿದೆ ಎಂಬುದರಲ್ಲಿ ಅವರಿಗೆ ಪೂರ್ಣ ವಿಶ್ವಾಸವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X