ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾನ್ಯ ರೋಗಗಳು ಮತ್ತು ಪ್ರಕೃತಿ ಯೋಗ ಚಿಕಿತ್ಸೆ(2)ಮಲಬದ್ಧತೆ ತಪ್ಪಿಸಲು ಸುಲಭ ಮತ್ತು ಸರಳ ಉಪಾಯಗಳು

By Staff
|
Google Oneindia Kannada News


* ಕೆಲವರಿಗೆ ಮಲಬದ್ಧತೆ ಆಗಲು ಮೂಲಕಾರಣ ಅವರು ನೀರನ್ನು ಕಡಿಮೆ ಕುಡಿಯುವುದು. ಕೆಲವರು ಹೆಚ್ಚು ಚಹ ಕುಡಿಯುತ್ತಾರೆ. ಚಹ ನೀರಿಗೆ ಪರ್ಯಾಯವಲ್ಲ. ಒಂದುವರೆ ಲೀಟರ್ ನೀರು ಸೇವಿಸಬೇಕು. ಬೇಸಿಗೆಯಲ್ಲಿ ಎರಡುವರೆ ಲೀಟರ್ ನೀರು ಕುಡಿಯಬೇಕು. ಮುಂಜಾನೆ ಎದ್ದಾಗ ಉಷಃಪಾನ, ರಾತ್ರಿ ಮಲಗುವ ಮುನ್ನ ನೀರು ಸೇವಿಸಬೇಕು. ಊಟಮಾಡುವಾಗ ನೀರು ಸೇವಿಸಬಾರದು. ಊಟಕ್ಕೆ ಅರ್ಧಗಂಟೆ ಮೊದಲು, ಊಟವಾದ ಮೇಲೆ ಒಂದು ತಾಸಿನ ನಂತರ ನೀರು ಕುಡಿಯಬೇಕು. ಊಟದ ಜೊತೆಗೆ ಸ್ವಲ್ಪ ಮಜ್ಜಿಗೆ ಅಥವಾ ಸಾರು ಕುಡಿಯಬಹುದು, ಆದರೆ ನೀರನ್ನಲ್ಲ.

* ಆಹಾರವನ್ನು ಹಲ್ಲುಗಳಿಂದ ನಿಧಾನವಾಗಿ ಜಗಿದು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಬೇಕು. ಊಟಕ್ಕೆ ಅವಸರ, ತ್ವರೆ ಸಲ್ಲದು. ಆಹಾರವನ್ನು ಚೆನ್ನಾಗಿ ನುರಿಸಿ ತಿನ್ನದಿದ್ದರೆ, ಆ ಕೆಲಸ ಕರುಳು ಮಾಡಬೇಕಾಗುತ್ತದೆ. ಇದರಿಂದ ಕರುಳಿನ ಮೇಲೆ ಹೆಚ್ಚು ಭಾರ ಬೀಳುತ್ತದೆ, ಅದಕ್ಕೆ ಹೆಚ್ಚಿನ ಶ್ರಮವಾಗುತ್ತದೆ.

* ಮಲವನ್ನು ಹೊರಗೆ ಹಾಕುವ ಅಂಗವೇ ಕರುಳು. ಮಲಬದ್ಧತೆಯಿಂದ ಕರುಳು ಅಶಕ್ತವಾಗುತ್ತದೆ. ಕರುಳನ್ನು ಸಶಕ್ತಗೊಳಿಸುವ ಉತ್ತಮ ವ್ಯಾಯಮವೆಂದರೆ ನಡೆದಾಡುವುದು. ಬೆಳಿಗ್ಗೆ ಅಥವಾ ಸಾಯಂಕಾಲ ವಾಯುವಿಹಾರಕ್ಕೆ ಹೋಗುವ (ವಾಕಿಂಗ್) ಅಭ್ಯಾಸ ಒಳ್ಳೆಯದೆ. ಸೂರ್ಯೊದಯಕ್ಕಿಂತ ಮೊದಲು, ಗಿಡಮರಗಳಿದ್ದ ರಸ್ತೆಗುಂಟ ಆಡ್ಡಾಡುವುದು ಹೆಚ್ಚು ಒಳ್ಳೆಯದು. ಆಗ ಶುದ್ಧ ಹವೆ, ಆಕ್ಸಿಜನ್ (ಓಝೋನ್) ದೊರೆಯುತ್ತದೆ. ‘ನಡೆದಾಡುವುದೇ ಉತ್ತಮ ವ್ಯಾಯಮ, ನೀರು ಕುಡಿಯುವುದೇ ಉತ್ತಮ ಔಷಧಿ’. ಮನೆಯ ಸಮೀಪದಲ್ಲಿ ಉದ್ಯಾನ ಇದ್ದರೆ ಮುಂಜಾನೆ ಬರಿಗಾಲಲ್ಲಿ ಹುಲ್ಲುಹಾಸಿಗೆ(ಲಾನ್) ಮೇಲೆ ನಡೆದಾಡಬೇಕು. ಇಬ್ಬನ್ನಿಯಿಂದ ತೊಯ್ದ ಹುಲ್ಲು ಅಂಗಾಲಿಗೆ ಸುಖಕರ, ಕಣ್ಣಿಗೆ ಹಿತಕರ.

* ಕರುಳನ್ನು ಸಶಕ್ತಗೊಳಿಸಲು ಡಾ| ಮೋದಿಯವರು ಇನ್ನೊಂದು ಉಪಾಯ ಸೂಚಿಸುತ್ತಾರೆ. ಆರು ಇಂಚು ಅಗಲ, ಒಂದು ಅಡಿ ಉದ್ದ ಕಾಟನ್ ಬಟ್ಟೆಯನ್ನು ಒದ್ದೆಮಾಡಿ. ಕಿಪ್ಪೊಟ್ಟೆಯ ಮೇಲೆ ಕಾಲುಗಂಟೆ ಹಾಕಿಕೊಳ್ಳುವುದು ಲಾಭಪ್ರದ ಎನ್ನುತ್ತಾರೆ. ಅನುಕೂಲ ಇದ್ದವರಿಗೆ ಟಬ್‌ಬಾಥ್ ಒಳ್ಳೆಯದು.

* ಆರೋಗ್ಯವಂತರಿಗೆ ಬೆಳಿಗ್ಗೆ ಎದ್ದೊಡನೆ ಮಲವಿಸರ್ಜನೆಗೆ ಕರೆ ಬರುತ್ತದೆ. ಮಲಬದ್ಧತೆ ಇರುವವರಿಗೆ ಈ ಕರೆ ಬರುವುದೇ ಇಲ್ಲ. ಅದ್ದರಿಂದ ಅವರು ಬೆಳಿಗ್ಗೆ ಒಂದು ಸಮಯ ನಿಶ್ಚಿತಗೊಳಿಸಿ ಶೌಚಾಲಯದಲ್ಲಿ ಕುಳಿತುಕೊಳ್ಳಬೇಕು. ಅದಕ್ಕೆ ಮೊದಲು ಒಂದು ಲಿಟರ್ ನೀರು ಕುಡಿದು ಹತ್ತು ನಿಮಿಷ ಮನೆಯಲ್ಲೇ ಶತಪಥ ಅಡ್ಡಾಡಬೇಕು. ಮಲವಿಸರ್ಜನೆ ಆಗದಿದ್ದರೆ ಬೇಸರಗೊಳ್ಳಬಾರದು. ಕೆಲ ದಿನಗಳ ನಂತರ ಯಶಸ್ಸು ದೊರೆಯುತ್ತದೆ.

ಮಲಬದ್ಧತೆ ವಿಪರೀತವಾದಾಗ ಸ್ಮರಣಶಕ್ತಿ ಹ್ರಾಸಗೊಳ್ಳುತ್ತದೆ. ದಣಿವು, ನಿದ್ರಾಹೀನತೆ, ವಾತರೋಗ, ದಮ್ಮು, ತಲೆಶೂಲೆ, ಟೊಂಕಶೂಲೆಗಳು ಉಂಟಾಗುತ್ತವೆ. ಕಣ್ಣಿನ ಕೆಳಗೆ ಕಪ್ಪು ವರ್ತುಳ ಕಾಣುತ್ತದೆ, ಮುಖದಲ್ಲಿ ಮೊಡಮೆಗಳು ತೋರುತ್ತವೆ, ಬಾಯಿಯಲ್ಲಿ ಹುಣ್ಣಗುತ್ತವೆ. ಕಿಪ್ಪೊಟ್ಟೆ ಭಾರವಾಗುತ್ತದೆ. ಎದೆನೋವು, ಎದೆಯುರಿತ ಕೂಡ ಕಂಡುಬರಬಹುದು.

ದುರಭ್ಯಾಸಗಳಿಗೆ ಬಲಿಯಾಗದೆ ಸತ್‌ಸಂಗ, ಸದಭ್ಯಾಸ ರೂಢಿಸಿಕೊಳ್ಳಬೇಕು. ಯೋಗಾಭ್ಯಾಸ ಬಹಳ ಒಳ್ಳೆಯದು. ಯೋಗಾಭ್ಯಾಸ ಫ್ಯಾಶನ್ ಅಥವಾ ಫ್ಯಾಡ್ ಆಗದೇ ಅದು ಜೀವನದ ರೀತಿಯಾಗಬೇಕು. ಈ ಕಾಲದಲ್ಲಿ ಎಲ್ಲರೂ ಯೋಗದ ಬಗ್ಗೆ ಮಾತಾಡುತ್ತಾರೆ ಆದರೆ ಅನುಷ್ಠಾನಕ್ಕೆ ತರುವವರು ಕಡಿಮೆ.

ಒಮ್ಮೆ ಒಬ್ಬ ಯೋಗಪಟುಗಳು ಮಾತಾಡುತ್ತಿರುವಾಗ ನೆರೆದವರಲ್ಲಿ ಇಬ್ಬರು ಸುಶಿಕ್ಷಿತರೂ ಮಾತಾಡಿದರು. ಮನೆಯ ಯಜಮಾನ ತನ್ನ ಮಿತ್ರರೂ ಯೋಗದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ ಎಂಬ ಉದ್ಗಾರ ತೆಗೆದ. ಆಗ ಯೋಗಪಟು ಅಂದರು, ‘ನಿಮ್ಮ ಮಿತ್ರರ ಜ್ಞಾನ ಪುಸ್ತಕೀಯವಾಗಿದೆ, ನನ್ನದು ಅನುಭವಗಮ್ಯ ಜ್ಞಾನ. ನಿಮ್ಮ ಮಿತ್ರರು ದಿನಾಲೂ ಎಷ್ಟು ಸಮಯ ಯೋಗಾಭ್ಯಾಸ ಮಾಡುತ್ತಾರೆ ಕೇಳಿರಿ’ ಅಂದಾಗ ಆ ಮಿತ್ರರ ಮುಖ ಕಪ್ಪಾಗಿತ್ತು.

ವಿಶ್ವ ವಿಖ್ಯಾತ ಯೋಗಪಟುಗಳಾದ ಗುರು ಶ್ರೀ ಬಿ.ಕೆ.ಎಸ್.ಅಯ್ಯಂಗಾರರು ತಮ್ಮ ‘ಯೋಗದೀಪಿಕೆ’ಯಲ್ಲಿ ಮಲಬದ್ಧತೆಯಿಂದ ಪೀಡಿತರಾದವರು ಅನುಸರಿಸಬೇಕಾದ ಆಸನಗಳ ಬಗ್ಗೆ ಬರೆದಿದ್ದಾರೆ. (ಶೀರ್ಷಾಸನ, ಸರ್ವಾಂಗಾಸನ, ನಿಂತು ಮಾಡುವ ಆಸನಗಳು, ಪಶ್ಚಿಮೋತ್ತಾನಾಸನ, ಉತ್ತಾನಾಸನ, ಜಠರಪರಿವರ್ತನಾಸನ, ನಾಡಿಶೋಧನ ಪ್ರಾಣಾಯಾಮ.)

ಸ್ವಾಮಿ ರಾಮದೇವ ಅವರ ‘ಪತಂಜಲಿ ಯೋಗ ಪೀಠ’ ಪ್ರಕಟಿಸಿದ ಪುಸ್ತಕ ಹಾಗೂ ಸಿ.ಡಿ.ಗಳಿವೆ. ಅವರು ಆಸ್ಥಾ ಚೆನಲ್‌ನಲ್ಲಿ ಯೋಗ ಪ್ರಾತ್ಯಕ್ಷಿಕೆ ನಿತ್ಯ ತೋರುತ್ತಾರೆ. ಅವನ್ನು ಅನುಸರಿಸಬಹುದು. ಒಬ್ಬ ಯೋಗಶಿಕ್ಷರ ಮಾರ್ಗದರ್ಶನ ಪಡೆಯುವುದು ವಿಹಿತ. ಮನೆಮನೆಗೆ ಬಂದು ಉಚಿತವಾಗಿ ಹೇಳಿಕೊಡುವ ಶಿಕ್ಷರು ಇನ್ನೂ ಭಾರತದಲ್ಲಿ ದೊರೆಯುತ್ತಾರೆ. ಪರಿಹಾರಕ್ಕೆ ಹಲವಾರು ಬಾಗಿಲುಗಳಿವೆ. ಅವು ಮುಚ್ಚಿದಂತೆ ತೋರುತ್ತವೆ. ಆದರೆ ನಿಮ್ಮ ಬೆರಳಿನ ಸ್ಪರ್ಶ ಸಾಕು, ಅವು ತೆರೆಯುತ್ತವೆ. ಅದಕ್ಕೆ ಜಿಜ್ಞಾಸೆ ಬೇಕು, ಸಾಧಿಸುವ ಛಲಬೇಕು. ನೈಸರ್ಗಿಕವಾಗಿ, ಸಹಜವಾಗಿ ಜೀವನ ವಿಧಾನ ಬದಲಿಸಬೇಕು. ಭೋಗಜೀವನ ಯೋಗಜೀವನವಾಗಬೇಕು.

ಮಲವಿಸರ್ಜನೆ ಕಸರತ್ತಗಬಾರದು, ಸ್ವಾಭಾವಿಕವಾಗಬೇಕು. ಆಗ ಅರೋಗ್ಯದ ಬಾಗಿಲು ತೆರೆಯುತ್ತದೆ.

ಮಲಬದ್ಧತೆಯಿಂದ ಬಳಲುವವರು ಅನುಸರಿಸಬೇಕಾದ ದೈನಂದಿನ ಕಾರ್ಯಕ್ರಮದ ಬಗ್ಗೆ ಮುಂದಿನ ವಾರ ತಿಳಿಯೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X