• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಧ್ವರಿಂದ ಶಿಷ್ಯರಿಗೆ ಭೀಮಬಲದ ಪ್ರದರ್ಶನ

By Staff
|

ಮಹಾಭಾರತ ಯುದ್ಧವಾದ ಕುರುಕ್ಷೇತ್ರಕ್ಕೆ ತಮ್ಮ ಶಿಷ್ಯವರ್ಗವನ್ನು ಕರೆದೊಯ್ದ ಮಧ್ವಾಚಾರ್ಯರು ತಾವು ಭೀಮ ಆಗಿದ್ದಾಗ ಕೌರವರನ್ನು ಸಂಹರಿಸಲು ಬಳಸಿದ್ದ ಆಯುಧಗಳನ್ನು ಭೂಮಿಯಿಂದ ತೆಗೆಯಿಸಿ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದರು.

ಬ್ರಹ್ಮಸೂತ್ರಭಾಷ್ಯ ಬರೆದಂತೆ ಉಪನಿಷತ್ಪ್ರಸ್ಥಾನವನ್ನು ರಚಿಸಿ ವಿಶೇಷ ಬೆಳಕು ಚೆಲ್ಲಲು ಜಿಜ್ಞಾಸುವೃಂದ ಶ್ರೀಮಧ್ವರನ್ನು ಪ್ರಾರ್ಥಿಸಿದಾಗ, ಅವರ ಪ್ರಾರ್ಥನೆಯನ್ನು ಮನ್ನಿಸಿ ದಶೋಪನಿಷತ್ತುಗಳಿಗೆ ಭಾಷ್ಯ ರಚಿಸಿದರು. ಅವುಗಳಲ್ಲಿ ಐತರೇಯ ಭಾಷ್ಯವು ಗುರು ತೋಂಟತಿಲ್ಲಾಯರಿಗೆ ಗುರುದಕ್ಷಿಣೆಯ ರೂಪವಾಗಿ ಈ ಮೊದಲೇ ಆವಿಷ್ಕೃತವಾಗಿತ್ತು. ಇದು ಋಗ್ವೇದದ ಉಪನಿಷತ್ತು ಎಂದೆನ್ನಿಸಿದ್ದರ ಜೊತೆಗೆ ಉಪನಿಷತ್ತುಗಳಲ್ಲೇ ಅತ್ಯಂತ ಗಹನ ಎನ್ನಿಸಿದ್ದು ಅದರ ಹಿರಿಮೆಯಾಗಿತ್ತು. ಮುಂಚಿನವರು ಇದರ ಸ್ವರೂಪವನ್ನು ಗುರುತಿಸುವಲ್ಲಿ ವಿಫಲರಾಗಿದ್ದರು. ಇದರ ಭಾವವನ್ನು ಅನನ್ಯವಾಗಿ ಶ್ರೀಮಧ್ವರು ಸ್ಫುಟಪಡಿಸಿದರು. ಇದರಂತೆ ಇತರ ಒಂಭತ್ತು ಉಪನಿಷತ್ತುಗಳಿಗೆ ಭಾಷ್ಯ ಬರೆದು ಹೊಸ ಆಯಾಮ ನೀಡಿದರು. ಋಷಿ, ಛಂದಸ್ಸು, ದೇವತೆಗಳ ಪರಿಜ್ಞಾನವಿಲ್ಲದೆ ವೈದಿಕ ಸಾಹಿತ್ಯದ ಅಧ್ಯಯನ ಮಾಡುವುದು ಅನರ್ಥಸಾಧನ ಎಂದು ವೇದಗಳೇ ಸಾರಿವೆ. ಉಪನಿಷತ್ತುಗಳ ಅರ್ಥ ವಿವೇಚನೆಗೆ ಋಕ್ಸಂಹಿತಾ, ಯಜುಃಸಂಹಿತಾ, ಐತರೇಯಸಂಹಿತಾ, ಸಾಮಸಂಹಿತಾ ಮೊದಲಾದ ಪ್ರಾಚೀನ ವ್ಯಾಖ್ಯಾನ ಗ್ರಂಥಗಳನ್ನು, ಬ್ರಹ್ಮಾಂಡ ಮೊದಲಾದ ಪುರಾಣ ವಿವರಗಳನ್ನು, ಶಬ್ದನಿರ್ಣಯ, ವಾಕ್ಯವಿವೇಕ ಮೊದಲಾದ ವೇದಾರ್ಥ ನಿರ್ಣಾಯಕ ಕೋಶಗಳನ್ನು ವಿಪುಲವಾಗಿ ಉಪಯೋಗಿಸಿಕೊಂಡು ಭಾಷ್ಯಬರೆದ ಏಕಮಾತ್ರ ದಾರ್ಶನಿಕರೆಂದರೆ ಶ್ರೀಮಧ್ವರು ಎಂದರೆ ಅತಿಶಯೋಕ್ತಿಯಲ್ಲ.

ಶ್ರೀಮಧ್ವರು ಗೀತಾಭಾಷ್ಯ ರಚಿಸಿದಾಗ ಶ್ರೀವೇದವ್ಯಾಸರ ಆದೇಶದಂತೆ ‘ಶಕ್ತಿತಃ’ ಎಂಬ ಶಬ್ದದ ಬದಲು ‘ಲೇಶತಃ’ ಎಂಬ ಪದ ಬಳಸಿದ್ದರು. ಅದಕ್ಕೆ ಇನ್ನೊಂದು ಸಾಕ್ಷಿ ಎಂಬಂತೆ ಗೀತೆಯ ಮೇಲೆ ಇನ್ನೊಂದು ಕೃತಿ ನಿರ್ಮಿಸಿದರು. ಅದುವೆ ‘ಗೀತಾ ತಾತ್ಪರ್ಯನಿರ್ಣಯ’. ಗೀತೆಯ ಮೇಲೆ ಎರಡು ವ್ಯಾಖ್ಯಾನ ರಚಿಸಿದ ಏಕೈಕ ವೇದಾಂತ ಭಾಷ್ಯಕಾರರೆಂದರೆ ಶ್ರೀಮಧ್ವರು.

ಹಸ್ತಿನಾಪುರದಲ್ಲಿ ಚಾತುರ್ಮಾಸ್ಯ ಪೂರೈಸಿ ಕಾಶಿಯತ್ತ ಪಯಣಿಸಿದರು. ಇತಿಹಾಸ ಪುರಾಣಗಳಲ್ಲಿ ವರ್ಣಿತವಾದ ಪುಣ್ಯಕ್ಷೇತ್ರ ಕಾಶಿ. ಭಾರತೀದೇವಿ ಕಾಶೀರಾಜನ ಮಗಳಾಗಿ ಕಾಳಿ ಎಂಬ ಹೆಸರಿನಲ್ಲಿ ಇಲ್ಲೇ ಜನಿಸಿದ್ದರ ಉಲ್ಲೇಖ ಮಹಾಭಾರತದಲ್ಲಿದೆ. ಅವಳು ಸ್ವಯಂವರದಲ್ಲಿ ಭೀಮಸೇನದೇವರನ್ನು ವರಿಸಿದಳು. ಆಗ ಕುಪಿತಗೊಂಡ ಜರಾಸಂಧನು ಭೀಮನ ಮೇಲೆ ಕಾಳಗ ಹೂಡಿದ. ಸೋತಾಗ ಅವನ ದೇಹವನ್ನು ಭೀಮನು ಗಂಗಾನದಿಯಲ್ಲಿ ಎಸೆದಿದ್ದು ಕಾಶಿಯಲ್ಲೇ. ಅವನ ಹಸ್ತಕರಾದ ದುರ್ಯೋಧನಾದಿಗಳು ಪ್ರಾಣಭಯದಿಂದ ಪಲಾಯನ ಮಾಡಿದ್ದರು. ಈ ಜನ್ಮದಲ್ಲಿ ಮಿಥ್ಯಾಜ್ಞಾನದ ಜರಾಸಂಧರನ್ನು ಪರಾಭವಗೊಳಿಸಲು ಶಾಸ್ತ್ರಜ್ಞಾನದ ಅಸ್ತ್ರವನ್ನು ಶ್ರೀಮಧ್ವರು ಬಳಸಿದ್ದರು.

ಎರಡನೆಯ ಸಲ ಬದರಿ ಯಾತ್ರೆ ಕೈಕೊಂಡಾಗ ಶ್ರೀ ಮಧ್ವರ ವಯಸ್ಸು ಐವತ್ತರ ಅಂಚಿನಲ್ಲಿತ್ತು. ಪ್ರವಾಸ ಸಾಹಸದಿಂದ ಕೂಡಿತ್ತು. ತರುಣ ಶಿಷ್ಯರು ತಾವು ತಮ್ಮ ಗುರುಗಳಿಗಿಂತ ಬಲಶಾಲಿ ಎಂಬ ಅಹಂಕಾರ ತೋರಿದಾಗ ಗುರುಮಧ್ವರು ಶಿಷ್ಯರನ್ನೆಲ್ಲ ಕರೆದು ‘ಗುರುಗಳೆಂಬುದನ್ನು ಮರೆತು ತಮ್ಮೊಡನೆ ಎಲ್ಲರೂ ಸೇರಿ ಹೋರಾಡಲು ಆಹ್ವಾನಿಸಿದರು’. ಈ ಕ್ರೀಡೆಯಲ್ಲಿ ತಮ್ಮ ನಿಜವಾದ ಶಕ್ತಿಯ ಪ್ರದರ್ಶನ ಮಾಡಿದರು. ಮಹಾಭಾರತದ ಭೀಮ ನಾರಾಯಣಾಸ್ತ್ರ, ಬ್ರಹ್ಮಶಿರೋಸ್ತ್ರಗಳಿಗೂ ಕೂದಲುಕೊಂಕದ ವಜ್ರದೇಹಿಯಾಗಿ ಮೆರೆದಿದ್ದ. ಶ್ರೀಮಧ್ವರು ಈ ಅವತಾರದಲ್ಲಿ ತಮ್ಮ ಭೀಮಶಕ್ತಿಯ ಪ್ರದರ್ಶನ ಹಲವುಬಾರಿ ಮಾಡಿತೋರಿಸಿದರು.

ಕಾಶಿಯಲ್ಲಿ ಇಂದ್ರಪುರಿ ಎಂಬ ವಾದನಿಪುಣ ಸನ್ಯಾಸಿಯಾಬ್ಬ ಶ್ರೀಮಧ್ವರೊಡನೆ ವಾದದ ಕಣಕ್ಕಿಳಿದ. ಶ್ರೀಮಧ್ವರು ಪ್ರಸಂಗವಶಾತ್‌ ಒಂದು ಮಾತು ಹೆಳಿದ್ದರು. ‘‘ಜ್ಞಾನ ಮೋಕ್ಷಸಾಧನ, ಆದರೆ ಕರ್ಮ ಜ್ಞಾನಸಾಧನ. ಅಪರೋಕ್ಷಜ್ಞಾನಿಗೂ ಕರ್ಮ ವಿಹಿತ. ಅವನು ಮಾಡುವ ಕರ್ಮವು ಮೋಕ್ಷದಲ್ಲಿ ಆನಂದಾತಿಶಯಕ್ಕೆ ಕಾರಣವಾಗುವುದು.’’ ಈ ಮಾತನ್ನು ಎತ್ತಿ, ಸಾಧಿಸಿ ತೋರಿಸಲು ಸನ್ಯಾಸಿ ಕೇಳಿದಾಗ ಶ್ರೀಮಧ್ವರು ಕೃಷ್ಣಸಂಹಿತಾ ಮೊದಲಾದ ಗ್ರಂಥಗಳಿಂದ ವಾಕ್ಯಗಳನ್ನು ಉದಾಹರಿಸಿ ತಮ್ಮ ವಾದವನ್ನು ಸಮರ್ಥಿಸಿದರು. ಮೋಕ್ಷಸಾಧನೆಯಲ್ಲಿ ಕರ್ಮದ ಸ್ಥಾನಮಾನದ ಬಗ್ಗೆ ವಿವಿಧ ದರ್ಶನಗಳಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಮಾಯಾವಾದದಲ್ಲಿ ಕರ್ಮತ್ಯಾಗವೇ ಮುಮುಕ್ಷುವಿಗೆ ವಿಹಿತ ಎನ್ನಲಾಗಿದೆ. ಮೀಮಾಂಸಕರಿಗೆ ಕರ್ಮವೇ ತಾರಕ. ಕೆಲವರು ಜ್ಞಾನಕರ್ಮಸಮುಚ್ಚಯವನ್ನು ನಂಬಿದರೆ, ಇನ್ನು ಕೆಲವರು ಕರ್ಮಾಚರಣೆ ಕೇವಲ ಅಜ್ಞಾನಿಗಳಿಗೆ ಎನ್ನುವರು. ಇವೆಲ್ಲವನ್ನೂ ನಿರಾಕರಿಸಿ ಕರ್ಮದ ಬಗ್ಗೆ ಪ್ರಾಮಾಣಿಕ ನಿರೂಪಣೆ ಒದಗಿಸಿದವರು ಶ್ರೀಮಧ್ವರು. ಇದೇ ಮಧ್ವದರ್ಶನದ ಹಿರಿಮೆ. ಸೋಲೊಪ್ಪಲು ತಯಾರಿಲ್ಲದ ಇಂದ್ರಪುರಿ ದುರ್ಬುದ್ಧಿಯನ್ನು ಬಳಸಿ ಅಪ್ರಸ್ತುತ ಪ್ರಶ್ನೆಯನ್ನು ಕೇಳಿದ. ‘‘ಜ್ಞಾನ ಪದದ ಅರ್ಥ ವಿವರಿಸಿರಿ?’’ ಎಂದು. ಅವನ ವಾದ ಖಂಡಿಸಲು ಶ್ರೀಮಧ್ವರು ಹೀಗೆ ಉತ್ತರಿಸಿದರು: ‘‘ನೀನು ಜ್ಞಾನಿ ಯಾಗಿದ್ದಲ್ಲಿ ‘ಜ್ಞಾನ’ ಪದದ ಅರ್ಥ ನಿನಗೆ ತಿಳಿದೇ ಇರುತ್ತದೆ. ನೀನು ಅಜ್ಞಾನಿಯಾಗಿದ್ದರೆ ನಿನಗೆ ಆ ಪದದ ಅರ್ಥ ತಿಳಿಯುವ ಸಂಭವವಿಲ್ಲ. ಆದ್ದರಿಂದ ಈ ಪ್ರಶ್ನೆ ಅನುಚಿತ.’’ ಜರಾಸಂಧನಂತಿರುವ ಇಂದ್ರಪುರಿಯನ್ನು ಪರಾಭವಗೊಳಿಸಿ, ಕಾಶಿಯಲ್ಲಿ ವೈಷ್ಣವ ವೇದಾಂತದ ವಿಜಯ ಸ್ಥಾಪಿಸಿದರು.

ಶ್ರೀಮಧ್ವರ ಸಂಚಾರ ಕುರುಕ್ಷೇತ್ರ ತಲುಪಿತು. ಭೀಮಸೇನದೇವರು ಇಲ್ಲೇ ಕುರುಕುಲವನ್ನು ಸಂಹರಿಸಿದ್ದರು. ಅಲ್ಲಿ ‘ಭೀಮಸೇನಸಮೋನಾಸ್ತಿ’ ಎನ್ನಿಸಿದ್ದರು. ಇಂದಿನ ಜ್ಞಾನಕುರುಕ್ಷೇತ್ರದಲ್ಲಿ ‘ನಚಮಧ್ವಸಮೋಗುರುಃ’ ಎಂಬ ಹಿರಿಮೆ ತೋರಿಸಿದರು. ಅಲ್ಲಿ ಸುತ್ತಾಡುವಾಗ ಶಿಷ್ಯರಿಗೆಲ್ಲ ಕುತೂಹಲ. ‘ನೀವು ಭೀಮ ಆಗಿದ್ದಾಗ ಬಳಸಿದ ಆಯುಧಗಳನ್ನು ಕಾಣುವ ಬಯಕೆ ನಮಗಿದೆ’ ಎಂದರು. ಆಗ ಅವರು ಅಲ್ಲಿ ಒಂದು ಜಾಗೆ ತೋರಿಸಿ ಅದನ್ನು ಅಗಿಯಲು ಹೇಳಿದರು. ಅಲ್ಲಿಯ ಉತ್ಖನನದಲ್ಲಿ ಕಂಡ ಆಯುಧಗಳು ಎಲ್ಲ ಶಿಷ್ಯರಿಗೆ ಆಶ್ಚರ್ಯವನ್ನೂಂಟುಮಾಡಿದ್ದವು. ಇದನ್ನೆಲ್ಲ ವಿಸ್ಮಯದಿಂದ ಸತ್ಯತೀರ್ಥರು ನೋಡುತ್ತಿದ್ದರು. ಅವರನ್ನುದ್ದೇಶಿಸಿ ಶ್ರೀಮಧ್ವರು ನುಡಿದರು, ‘‘ಆ ಯುದ್ಧದಲ್ಲಿ ಒಬ್ಬ ರಾಜನಾಗಿ ನೀನೂ ಪಾಲುಗೊಂಡಿದ್ದಿ.’’ ಆಗ ಸತ್ಯತೀರ್ಥರು ಕೇಳಿದರು, ‘‘ಆಗ ನಾನು ಬಳಸಿದ ಆಯುಧಗಳನ್ನು ಈಗ ನೋಡಬಹುದೇ?’’ ಎಂದು. ಗುರುಗಳು ಮತ್ತೊಂದು ಸ್ಥಳ ತೋರಿಸಿದರು. ಅಲ್ಲಿ ಅಗೆದಾಗ ಸತ್ಯತೀರ್ಥರು ಬಳಸಿದ ಆಯುಧಗಳು ಕಂಡವು, ಪೂರ್ಣಪ್ರಜ್ಞರು ಪೂರ್ಣತೆಯ ಪ್ರತೀಕ. ಇತಿಹಾಸವನ್ನು ವಿಮರ್ಶಿಸಲು ಇತರ ಪರಿಕರಗಳಂತೆ ಉತ್ಖನನ ಒಂದು ಶ್ರೇಷ್ಠ ಮಾರ್ಗ ಎಂಬುದನ್ನು ತೋರಿಸಿದರು.

ಇನ್ನೊಂದು ವಿಚಿತ್ರ ಪ್ರಸಂಗ ನಡೆಯಿತು. ಅಲ್ಲಿ ಒಬ್ಬ ವ್ಯಕ್ತಿ ತಪೋನಿರತನಾಗಿದ್ದ. ಅವನನ್ನು ಕಂಡು ಶಿಷ್ಯರೆಲ್ಲ ಅವನೊಬ್ಬ ಮಹಾತಪಸ್ವಿ ಎಂದು ಭಾವಿಸಿದರು. ಆಗ ಶ್ರೀಮಧ್ವರು ಅವರನ್ನು ಎಚ್ಚರಿಸಿ, ‘‘ಅವನೊಬ್ಬ ಕಪಟಿ, ಸ್ವರೂಪತಃ ದೈತ್ಯ. ಮುಂದಿನ ಜನ್ಮದಲ್ಲಿ ಮರೀಚನಾಗಿ ಜನಿಸಲು ತಪಸ್ಸು ನಡೆಸಿದ್ದಾನೆ’’ ಎಂದರು. ಇವನು ಮುಂದೆ ಮಾರೀಚನಾದಾಗ ಅವನಿಗೆ ವರಕೊಡುವ ಭಾವೀ ಬ್ರಹ್ಮರು ತಾವೇ ಎಂಬುದನ್ನೂ ಅರಿತಿದ್ದರು. ಈ ಘಟನೆಯಿಂದ ತಪಸ್ಸಿನ ಸೋಗಿನಲ್ಲಿ ಮೋಸಗಾರರೂ ಇರುವರೆಂದು ಎಲ್ಲರನ್ನು ಎಚ್ಚರಿಸಿದ್ದರು.

ಪ್ರವಾಸದುದ್ದಕ್ಕೂ ಶ್ರೀಮಧ್ವರ ಪ್ರವಚನ ನಡೆದೇ ಇತ್ತು. ನಂತರ ಅವರೆಲ್ಲ ಹೃಷೀಕೇಶವೆಂಬ ಪುಣ್ಯಕ್ಷೇತ್ರಕ್ಕೆ ಬಂದರು. ಒಬ್ಬ ವಿಪ್ರ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ತನ್ನ ಮನೆಗೆ ಭಿಕ್ಷೆಗೆ ಬರಲು ಕರೆದನು. ಅವರು ಸಮ್ಮತಿಸಿದರು. ಎಲ್ಲರೂ ನೋಡುತ್ತಿರುವಂತೆ ಆ ವಿಪ್ರ ಅದೃಶ್ಯನಾದ. ಎಲ್ಲರಿಗೂ ವಿಸ್ಮಯ. ನಂತರ ಶ್ರೀಮಧ್ವರು ಶಿಷ್ಯರಿಗೆ ಹೇಳಿದರು, ತಮ್ಮನ್ನು ಆಮಂತ್ರಿಸ ಬಂದವ ವಿಪ್ರವೇಷದಲ್ಲಿದ್ದ ರುದ್ರದೇವರೆಂದು.

ಹಿಂದೆ ಪರಶುರಾಮನು ಸಮುದ್ರವನ್ನು ಹಿಂದೆ ಸರಿಸಲು ತನ್ನ ಕೊಡಲಿಯನ್ನು ಬಾಣದಂತೆ ಪ್ರಯೋಗಿಸಿದ್ದನು. ಅದೇ ಇಷುಪಾತವೆಂಬ ಪುಣ್ಯಕ್ಷೇತ್ರ. ಅಲ್ಲಿ ಬಂದಾಗ ಶ್ರೀಮಧ್ವರನ್ನು ಪರೀಕ್ಷಿಸಲು ಅರಸನಿಂದ ಕೊಡಲ್ಪಟ್ಟ ಒಂದು ಸಾವಿರ ರಾಜಕೇಲಿಫಲ ಸಮರ್ಪಿಸಲಾಯಿತು. ಎಲ್ಲವನ್ನೂ ತಾವೊಬ್ಬರೇ ತಿಂದು ತಮ್ಮ ಬಲ ಪ್ರದರ್ಶಿಸಿದರು. ಅಷ್ಟರಲ್ಲಿ ಶಂಕರ ಎಂಬ ಬ್ರಾಹ್ಮಣ ನಾಲ್ಕುಸಾವಿರ ಬಾಳೇಹಣ್ಣು ಮತ್ತು ಮೂವತ್ತು ಕೊಡ ಹಾಲು ಸಮರ್ಪಿಸಿದ. ಎಲ್ಲವನ್ನೂ ಶ್ರೀಮಧ್ವರು ಸೇವಿಸಿದರು. ಇಷ್ಟೆಲ್ಲ ತಿಂದರೂ ಅವರ ಉದರವು ಮೊದಲಿನಂತೆ ತೆಳುವಾಗಿಯೇ ಇತ್ತು. ಇದೊಂದು ಪವಾಡ.

ಶ್ರೀಮಧ್ವರು ಸಂಗೀತದಲ್ಲಿಯೂ ನಿಪುಣರಾಗಿದ್ದರು. ‘ಪಶುಮೆ’ ಎಂಬಲ್ಲಿಗೆ ತೆರಳಿದಾಗ ಅಲ್ಲಿಯ ಪುಗಾದಿವೃಕ್ಷಗಳಲ್ಲಿ ಫಲಪುಷ್ಪಗಳು ಉದಿಸುತ್ತಿರಲಿಲ್ಲ. ‘ನಿಮ್ಮ ಗಾನದಿಂದ ಆ ಕಾರ್ಯ ಮಾಡಿ ತೋರಿಸಿರಿ’ ಎಂದು ಕೇಳಿದಾಗ, ತಮ್ಮ ಆರಾಧ್ಯ ಶ್ರೀಕೃಷ್ಣನ ಗಾನಪ್ರಾವೀಣ್ಯವನ್ನು ನಿರೂಪಿಸುವ ಕಾರ್ಯ ಮಾಡಿದರು. ಶ್ರೀಮಧ್ವರು ‘ಗಾನಶಾಸ್ತ್ರ’ ಎಂಬ ಕೃತಿಯನ್ನು ರಚಿಸಿದ್ದರಂತೆ. ಅದು ಉಪಲಬ್ಧವಾಗಿಲ್ಲ. ಕರ್ನಾಟಕ ಸಂಗೀತ ಪಿತಾಮಹರೆಂಬ ಕೀರ್ತಿಹೊತ್ತ ಪುರಂದರದಾಸರು ಆ ಕೃತಿಯನ್ನು ನೋಡಿರಬೇಕೆಂದು ಊಹಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more