• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಧ್ವರಿಂದ ಶಿಷ್ಯರಿಗೆ ಭೀಮಬಲದ ಪ್ರದರ್ಶನ

By Staff
|

ಮಹಾಭಾರತ ಯುದ್ಧವಾದ ಕುರುಕ್ಷೇತ್ರಕ್ಕೆ ತಮ್ಮ ಶಿಷ್ಯವರ್ಗವನ್ನು ಕರೆದೊಯ್ದ ಮಧ್ವಾಚಾರ್ಯರು ತಾವು ಭೀಮ ಆಗಿದ್ದಾಗ ಕೌರವರನ್ನು ಸಂಹರಿಸಲು ಬಳಸಿದ್ದ ಆಯುಧಗಳನ್ನು ಭೂಮಿಯಿಂದ ತೆಗೆಯಿಸಿ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದರು.

Madhwacharyaಶ್ರೀಮಧ್ವರು ಮತ್ತೊಮ್ಮೆ ಉತ್ತರ ಬದರಿಯ ತೀರ್ಥಯಾತ್ರೆ ಕೈಕೊಂಡರು. ಮೊದಲನೆಯ ಸಲ ಅವರು ಇಲ್ಲಿ ಬಂದಾಗ ಭಾಷ್ಯ ರಚನೆಗೆ ಶ್ರೀವ್ಯಾಸರಿಂದ ಅಪ್ಪಣೆ ಪಡೆದಿದ್ದರು. ಈ ಸಲ ಅವರು ಇಲ್ಲಿಗೆ ಬರುವ ಉದ್ದೇಶ ತಾವು ಬರೆದ ಭಾಷ್ಯವನ್ನು ಶ್ರೀಕೃಷ್ಣನಿಗೆ ಅರ್ಪಣೆ ಮಾಡುವುದೇ ಆಗಿತ್ತು. ಈ ಸಲ ಅವರೊಡನೆ ಸನ್ಯಾಸ ಸ್ವೀಕರಿಸಿದ ನಾಲ್ವರು ಬಾಲಬ್ರಹ್ಮಚಾರಿಗಳಾದ ಶ್ರೀಹೃೕಕೇಶತೀರ್ಥರು, ಶ್ರೀನರಸಿಂಹತೀರ್ಥರು, ಶ್ರೀ ಜನಾರ್ದನತೀರ್ಥರು, ಹಾಗೂ ಉಪೇಂದ್ರತೀರ್ಥರು ಬಂದಿದ್ದರು. ಜೊತೆಗೆ ಹಿಂದೆ ಅವರೊಡನೆ ಬಂದಿದ್ದ ಶ್ರೀಸತ್ಯತೀರ್ಥರೂ ಇದ್ದರು.

ಬದರಿ ಯಾತ್ರೆಯ ಪ್ರಾರಂಭದಲ್ಲಿಯೇ ಒಂದು ವಿಚಿತ್ರ ಪ್ರಸಂಗ ನಡೆಯಿತು. ಮಾರ್ಗದಲ್ಲಿ ಈಶ್ವರದೇವನೆಂಬ ಅರಸನ ರಾಜ್ಯ. ಅವನದೊಂದು ವಿಚಿತ್ರ ಕಾಯಿದೆ ಇತ್ತು. ತನ್ನ ರಾಜ್ಯದ ಗಡಿಯಲ್ಲಿ ಕಾಲಿರಿಸುವ ಪ್ರತಿಯಾಬ್ಬ ಯಾತ್ರಿಕನಿಗೂ, ತಾನು ತೋಡಿಸುತ್ತಿದ್ದ ಕೆರೆಯಲ್ಲಿ ಕಡ್ಡಾಯವಾಗಿ ನೆಲವನ್ನು ಅಗಿಯುವ ಕೆಲಸ ಮಾಡಲು ಹಚ್ಚುತ್ತಿದ್ದ. ಕಾಷಾಯವಸ್ತ್ರ ಧರಿಸಿದ ಸನ್ಯಾಸಿಗಳು ನೆಲ ಅಗಿಯುವಂತಿಲ್ಲ, ನೀರುಸೇದುವಂತಿಲ್ಲ, ತುಳಸಿಯನ್ನು ಕೂಡ ತೆಗೆಯುವಂತಿಲ್ಲ. ಇವೆಲ್ಲ ಸನ್ಯಾಸಿಗಳಿಗೆ ಶಾಸ್ತ್ರನಿದ್ಧ ಕ್ರಿಯೆಗಳು. ಇವರೆಲ್ಲರೂ ಯತಿಗಳೆಂದು ತಿಳಿದರೂ, ರಾಜನು ಇವರಿಗೆ ಕೆರೆಯಲ್ಲಿ ಖನನ ಮಾಡಲು ಆದೇಶವಿತ್ತ. ಶ್ರೀಮಧ್ವರು ಅವನಿಗೆ ಹೇಳಿದರು, ‘‘ನಾವು ಯತಿಗಳು. ಇಂಥ ಕೆಲಸ ಹೇಗೆ ಮಾಡಬೇಕು ನಮಗೆ ಗೊತ್ತಿಲ್ಲ. ನೀವು ತೋರಿಸಿದರೆ ನಾವು ಮಾಡುವೆವು.’’ ಎಂದು. ಅವನು ಉತ್ಸಾಹದಿಂದ ನೆಲ ಅಗಿಯಲು ಪ್ರಾರಂಭಿಸಿದ. ಇಡೀ ದಿನ ಅಗಿಯುತ್ತಲೇ ಇದ್ದ. ಇವರಿಗೆ ಮತ್ತೆ ಕೆಲಸ ಹೇಳುವುದನ್ನೇ ಮರೆತ. ಇಲ್ಲಿ ಯೋಗಸಿದ್ಧಿಯ ‘ವಶಿತ್ವ’ದ ಪ್ರಯೋಗವನ್ನು ಶ್ರೀಮಧ್ವರು ತೋರಿದ್ದರು.

ಮುಂದೆ ಗಂಗಾನದಿಯನ್ನು ದಾಟುವ ಪ್ರಸಂಗ ಬಂತು. ಸಮೀಪದಲ್ಲಿರುವ ಸುಲ್ತಾನನ ಭಯದಿಂದಾಗಿ ಅಲ್ಲಿ ಯಾವ ನೌಕೆಯೂ ಚಲಿಸುತ್ತಿರಲಿಲ್ಲ. ಗಂಗಾನದಿ ಯಾವಾಗಲೂ ತುಂಬಿ ಹರಿಯುತ್ತದೆ. ಮಳೆಗಾಲದಲ್ಲಿ ಮಳೆನೀರಿನಿಂದ ಗಂಗೆ ತುಂಬಿ ಹರಿದರೆ ಬೇಸಿಗೆಯಲ್ಲಿ ಹಿಮ ಕರಗಿ ನದಿಯು ತುಂಬಿ ಹರಿಯುತ್ತದೆ. ಇಲ್ಲಿ ಶ್ರೀ ಮಧ್ವರು ಜಲಸ್ಥಂಭನ ವಿದ್ಯೆ ಪ್ರಯೋಗಿಸಿ ತಾವು ನೀರನ್ನು ದಾಟಿದ್ದಲ್ಲದೆ ಶಿಷ್ಯರನ್ನೂ ದಾಟಿಸಿ ತಮ್ಮ ವೈಶಿಷ್ಟ್ಯ, ಮಹಿಮೆ ತೋರಿಸಿದರು. ಗಂಗೆಯನ್ನೇನೋ ದಾಟಿದ್ದಾಯಿತು. ನಂತರ ಇನ್ನೊಂದು ಸಮಸ್ಯೆ ಕಾದಿತ್ತು. ಸುಲ್ತಾನನ ಸಹಸ್ರಾರು ಸೈನಿಕರು ಇವರನ್ನು ವೈರಿಗಳೆಂದು ಬಗೆದು ತಮ್ಮ ಖಡ್ಗ ಝಳಪಿಸತೊಡಗಿದ್ದರು. ಶ್ರೀಮಧ್ವರು ಅವರನ್ನು ಎಚ್ಚರಿಸಿದರು, ‘‘ಮೂರ್ಖರೇ, ನಮ್ಮನ್ನು ಹೊಡೆಯಲು ಮುಂದೆ ಬಂದರೆ ಗಂಗೆಯಲ್ಲಿ ಮುಳುಗಿ ಸಾಯುವಿರಿ.’’ ಎಂದು. ಅವರ ಮಾತನ್ನು ಕೇಳಿದ್ದರಿಂದ ಅವರು ನೀರಿನಲ್ಲಿ ಮುಳುಗದೆ ಪಾರಾದರು.

ಸುಲ್ತಾನನು ಯತಿವೃಂದ ಪಾರಾಗುವುದನ್ನು ನೋಡಿ ಅಚ್ಚರಿಗೊಂಡನು. ಇವರ ಸಾಹಸವನ್ನು ಮೆಚ್ಚಿದನು. ‘ನಿಮ್ಮ ಹಣೆಯಲ್ಲಿದ್ದ ಗುರುತೇನು?’ ಎಂದು ಕೇಳಿದಾಗ ಅವನಿಗೆ ದೊರೆತ ಉತ್ತರ, ‘ನೀವು ಕೈಯಲ್ಲಿ ಹಿಡಿದ ಗದೆ ನಮ್ಮ ಹಣೆಯಲ್ಲಿದೆ. ಅಂಗಾರ ಮತ್ತು ಅಕ್ಷಂತಿ ಗದೆಯ ಲಾಂಛನ’ ಎಂಬುದು. ನೌಕೆಯ ಸಹಾಯವಿಲ್ಲದೆ ಗಂಗಾಪ್ರವಾಹ ಎದುರಿಸಿ ದಾಟುವದನ್ನು ಮೆಚ್ಚಿ ಸುಲ್ತಾನನು ಇವರಿಗೆ ತನ್ನ ರಾಜ್ಯದಲ್ಲಿ ಬಂದಿರಲು ಆಮಂತ್ರಿಸಿದನು. ಅರ್ಧರಾಜ್ಯ ಕೊಡುವ ಆಮಿಷ ತೋರಿಸಿದನು. ಕಿರುನಗೆಯಿಂದ ಅವನ ಬೇಡಿಕೆಯನ್ನು ನಿರಾಕರಿಸಿ ಶ್ರೀಮಧ್ವರು ನಡೆದರು. ಮುಂದಿನ ಮಾರ್ಗ ಸುಗಮವಾಗಿರಲಿಲ್ಲ. ಚೋರಭಯ ವಿಪರೀತವಾಗಿತ್ತು. ಚಂಬಲ್‌ ಕಣಿವೆಯಲ್ಲಿ ಕಾಣಿಸುವಂತಹ ಡಕಾಯಿತರು ಮಾರ್ಗದ ಗೊಂಡಾರಣ್ಯದಲ್ಲಿದ್ದರು. ಕಳ್ಳರ ಗುಂಪೊಂದು ಇವರನ್ನು ಹಿಂಬಾಲಿಸಿತು. ಶ್ರೀಮಧ್ವರು ಹಸನ್ಮುಖಿಗಳಾಗಿಯೇ ಅವರನ್ನು ಎದುರಿಸಿದರು. ಇವರ ಕೈಯಲ್ಲಿರುವ ವಸ್ತ್ರದ ಗಂಟನ್ನು ಹಣದ ಗಂಟೆಂದು ಭಾವಿಸಿ ತಮ್ಮೊಳಗೆ ಕಾದಾಡತೊಡಗಿದರು. ಕಾಣಲಾರದ್ದನ್ನು ಕಾಣುವಂತೆ, ಕಾಣುವದನ್ನು ಕಾಣದಂತೆ ಮಾಡುವುದು ಯೋಗಸಿದ್ಧಿಗಳಲ್ಲೊಂದು. ಶ್ರೀಮಧ್ವರು ಬಾಲಕರಾಗಿದ್ದಾಗ ಸಾಲಗಾರನಿಗೆ ಕೊಟ್ಟ ಹುಣಿಸೆಯಬೀಜಗಳು ನಾಣ್ಯಗಳಂತೆ ಕಂಡದ್ದನ್ನಿಲ್ಲಿ ನೆನೆಯಬಹುದು.

ಇನ್ನೊಂದು ಪ್ರಸಂಗ. ನೂರಕ್ಕೂ ಮಿಕ್ಕಿದ ದರೋಡೆಖೋರರು ಮುತ್ತಿದರು. ಅವರ ಉದ್ದೇಶ ಬರಿ ದರೋಡೆಯಾಗಿರಲಿಲ್ಲ, ಎಲ್ಲರನ್ನು ಕೊಂದುಬಿಡುವುದಾಗಿತ್ತು. ಶ್ರೀಮಧ್ವರು ಶಿಷ್ಯರಿಗೆ ಹೇಳಿದರು, ‘‘ನಿಮ್ಮಲ್ಲಿ ತುಂಬಾ ಧೈರ್ಯಶಾಲಿಯಾಗಿರುವವರು ಮುಂದೆ ಬನ್ನಿರಿ.’’ ಎಂದು. ಒಬ್ಬ ಶಿಷ್ಯರು ಮುಂದೆ ಬಂದರು. ಅವರೇ ಉಪೇಂದ್ರತೀರ್ಥರು. ‘‘ನೀನು ಮುಂದೆ ನುಗ್ಗಿ ಅವರನ್ನೆಲ್ಲ ಸೆದೆಬಡಿ’’ ಎಂದು ಗುರುಗಳು ಆದೇಶ ನೀಡಿದರು. ಅವರೆಲ್ಲ ಬಹುಸಂಖ್ಯೆಯಲ್ಲಿದ್ದವರು, ಶಸ್ತ್ರಧಾರಿಗಳು. ಇವರು ಏಕೈಕರು, ನಿಃಶಸ್ತ್ರರು. ಗುರುವಿನ ಆಜ್ಞೆಯೇ ರಕ್ಷೆ ಎಂದು ಮುನ್ನುಗ್ಗಿದರು. ‘ಬಲಂಭೀಮಾಭಿರಕ್ಷಿತಂ’ ಎಂಬಂತೆ ವಾಯುದೇವರ ರಕ್ಷೆ ಪಡೆದವರು. ಒಬ್ಬ ದರೋಡೆಖೋರನ ಕೈಯಲ್ಲಿದ್ದ ಕೊಡಲಿಯನ್ನು ಕಸಿದುಕೊಂಡರು, ಮೃತ್ಯುದೇವತೆಯಂತೆ ಆಕ್ರಮಿಸಿದರು. ಎಲ್ಲರೂ ಹೆದರಿ ಜೀವರಕ್ಷಣೆಗಾಗಿ ಓಡಿದರು.

ಇನ್ನೊಂದೆಡೆ ಚೋರರ ಪಡೆಯಾಂದು ಇವರ ಮೇಲೆ ಆಕ್ರಮಣಮಾಡಲು ಬಂತು. ಎಲ್ಲರೂ ಕಲ್ಲುಬಂಡೆಯಂತೆ ಕಂಡರು. ಮುಂದೆಹೋಗಿ ಮರಳಿ ನೋಡಿದರೆ ಎಲ್ಲರೂ ಮನುಷ್ಯರಂತೆ ಕಂಡರು. ಮರಳಿ ಬಂದರೆ ಎಲ್ಲರೂ ಬಂಡೆಗಲ್ಲುಗಳಂತೆ ಕಂಡರು. ಶ್ರೀಮಧ್ವರ ಶಕ್ತಿಯನ್ನು ಕಂಡು ಎಲ್ಲರೂ ಅವರ ಭಕ್ತರಾದರು. ಶಸ್ತ್ರದ ಶಕ್ತಿಗಿಂತ ಶಾಸ್ತ್ರದ ಮಹಿಮೆ ದೊಡ್ಡದು ಎಂದು ಅವರಿಗೆ ಮನದಟ್ಟಾಯಿತು. ಅವರೆಲ್ಲ ಗುರುಗಳ ಅನುಗ್ರಹಕ್ಕೆ ಪಾತ್ರರೂ ಆದರು. ಬದರಿ ಕ್ಷೇತ್ರ ಸಮೀಪಿಸಿದಾಗ ಅಲ್ಲಿ ಒಬ್ಬ ರಾಕ್ಷಸನು ಹುಲಿವೇಷದಿಂದ ಇವರನ್ನು ಹಿಂಬಾಲಿಸುತ್ತಿದ್ದ. ಇವರ ಮೇಲೆ ಆಕ್ರಮಣಮಾಡಲು ಹೊಂಚುಹಾಕಿದ್ದ. ಶ್ರೀಮಧ್ವರ ಶಿಷ್ಯಾಗ್ರೇಸರರಲ್ಲಿ ಒಬ್ಬರಾದ ಶ್ರೀಸತ್ಯತೀರ್ಥರು ಶ್ರೀಮಧ್ವರ ಭಾಷ್ಯವನ್ನು ಪ್ರತಿಮಾಡಿದ ಪುಣ್ಯಶಾಲಿಗಳಾಗಿದ್ದರು. ಅವರ ಕೈಯಲ್ಲಿ ದೇವರ ಪೆಟ್ಟಿಗೆ ಇತ್ತು. ಎಲ್ಲರ ಮುಂದೆ ಅವರು ಸಾಗುತ್ತಿದ್ದರು. ಹಾಗೆ ದೇವರಪೆಟ್ಟಿಗೆಯನ್ನು ಕೈಯಲ್ಲಿ ಹಿಡಿದುಕೊಂಡು ಸಾಗುವುದೇ ಸುಖಪ್ರಯಾಣದ ಮರ್ಮ. ಆ ರಾಕ್ಷಸನು ಶ್ರೀಸತ್ಯತೀರ್ಥರ ಮೇಲೆ ಪ್ರಹಾರ ಮಾಡಲು ಮುಂದೆ ಜಿಗಿದ. ಈ ಹುಲಿಯ ತಲೆಗೆ ಶ್ರೀಮಧ್ವರ ಮ್ಟುಯ ಬಲವಾದ ಪೆಟ್ಟು ಬಿತ್ತು. ಹುಲಿರೂಪೀ ರಾಕ್ಷಸ ಹತನಾಗಿದ್ದ. ಶ್ರೀಸತ್ಯತೀರ್ಥರು ಸತ್ಯಧರ್ಮಗಳನ್ನು ಅನುಸರಿಸಿ ನಡೆಯುವ ಸಾತ್ವಿಕ ಜನರ ಸಂಕೇತ. ಸತ್ಯ ಮೀಮಾಂಸೆಯೂ ಅಹುದು. ಅದು ಶಾಸ್ತ್ರಾಧ್ಯಯನ ಮಾಡುವ ಜನರ ಸಂಕೇತ. ಕೈಯಲ್ಲಿದ್ದ ದೇವರಪೆಟ್ಟಿಗೆ ಅನುಷ್ಠಾನದ ಸಂಕೇತ. ಶ್ರೀಮಧ್ವರು ಬದರೀ ಕ್ಷೇತ್ರ ತಲುಪಿದರು. ಅವರು ತಮ್ಮ ಮೊದಲ ಪ್ರಯಾಣದಲ್ಲಿ ತಾವು ಬರೆದ ಗೀತಾಭಾಷ್ಯವನ್ನು ದಕ್ಷಿಣ ಬದರಿಯಲ್ಲಿ ಶ್ರೀನಾರಾಯಣನಿಗೆ ಸಮರ್ಪಿಸಿದ್ದರೆ, ಅವರು ತಮ್ಮ ಎರಡನೆಯ ಪ್ರಯಾಣದಲ್ಲಿ ತಮ್ಮ ದ್ವಿತೀಯ ಕೃತಿ ಬ್ರಹ್ಮಸೂತ್ರಭಾಷ್ಯವನ್ನು ಉತ್ತರ ಬದರಿಯಲ್ಲಿ ಶ್ರೀವ್ಯಾಸ-ನಾರಾಯಣರಿಗೆ ಸಮರ್ಪಿಸಿದರು. ಬ್ರಹ್ಮಸೂತ್ರಭಾಷ್ಯ ಅನನ್ಯವಾದ ರಚನೆ. ಅದರ ಅರ್ಪಣೆಯ ರೀತಿಯೂ ಅದ್ಭುತವಾಗಿತ್ತು. ಅಲ್ಲಿಂದ ಮತ್ತೆ ತತ್ತ್ವೋಪದೇಶಗಳ ಮೂಲಕ ಲೋಕೋದ್ಧಾರಕ್ಕೆಂದು ತೆರಳಲು ಶ್ರೀವೇದವ್ಯಾಸರು ಆದೇಶ ನೀಡಿದರು. ಆಗ ಶ್ರೀಮಧ್ವರು, ‘‘ಇಲ್ಲಿಯ ಗಂಗೆ ಮತ್ತು ಗಂಗಾಜನಕರಾದ ತಮ್ಮ ಸನ್ನಿಧಿಯನ್ನು ಬಿಟ್ಟಿರಲು ನನ್ನಿಂದ ಸಾಧ್ಯವಾಗುತ್ತಿಲ್ಲ.’’ ಎಂದರು. ಅದಕ್ಕೆ ಶ್ರೀವ್ಯಾಸರು ನೀಡಿದ ಉತ್ತರ ಇಡೀ ಜಗತ್ತಿಗೆ ನೀಡಿದ ಸಂದೇಶದಂತಿತ್ತು. ‘‘ಚಿಂತಿಸಬೇಡ, ನಿಮ್ಮ ಸ್ನಾನೋದಕದಲ್ಲಿ ಸದಾ ಗಂಗೆ ನೆಲೆಸುವಳು.’’ ಎನ್ನುತ್ತ ತಮ್ಮ ಎಂಟು ಶಿಲಾಪ್ರತಿಮೆಗಳನ್ನು ಶ್ರೀಮಧ್ವರಿಗೆ ನೀಡುತ್ತ ಹೇಳಿದರು. ‘‘ಇವುಗಳಲ್ಲಿ ರಮಾಸಮೇತನಾಗಿ ನಾನು ನಿತ್ಯ ಸನ್ನಿಹಿತನಾಗಿರುವೆ. ಇವನ್ನು ತೆಗೆದುಕೊಳ್ಳಿ. ನಮ್ಮನ್ನು ಬಿಟ್ಟಿರುವ ಪ್ರಶ್ನೆಯೇ ಬಾರದು.’’ ಎಂದು.

ಬದರಿ ಕ್ಷೇತ್ರದಿಂದ ಮರಳುವ ಮೊದಲು ಶ್ರೀವೇದವ್ಯಾಸರು ಮತ್ತೊಂದು ಆದೇಶ ನೀಡಿದರು. ಸೂತ್ರಭಾಷ್ಯದಿಂದ ವೇದ ಬಲ್ಲವರಿಗೆ ಮಾತ್ರ ಪ್ರಯೋಜನವಿದೆ. ಆದರೆ ವೇದಾಧಿಕಾರ ಇಲ್ಲದ ಜಿಜ್ಞಾಸುಗಳಿಗೆ ಅದರ ಲಾಭದೊರೆಯುವಂತಿಲ್ಲ. ತಾವು ರಚಿಸಿದ ಮಹಾಭಾರತವಿದೆ. ಅದರ ಅರ್ಥವೂ ಜನತೆಗೆ ತಿಳಿಯದಾಗಿದೆ. ಅದಕ್ಕೆ ತಾತ್ಪರ್ಯ ಬರೆಯಲು ಆದೇಶ ನೀಡಿದರು. ಇದಕ್ಕೆ ಕಾರಣ ಮಹಾಭಾರತದಲ್ಲಿರುವ ಜಟಿಲತೆಗಳು, ಮತ್ತು ಅದರ ಮೇಲೆ ಬಂದ ವಿಕೃತ ವಿಮರ್ಶೆಗಳು. ಇದರ ಪರಿಹಾರ ಶ್ರೀಮಧ್ವರಿಂದಲೇ ಆಗಬೇಕೆಂಬುದು ಶ್ರೀವ್ಯಾಸರ ಇಚ್ಛೆಯಾಗಿತ್ತು. ಶ್ರೀವ್ಯಾಸರ ಆದೇಶವು ಶ್ರೀಮಧ್ವರಿಗೆ ಶಿರಸಾ ಮಾನ್ಯವಾಗಿತ್ತು. ‘ಮಹಾಭಾರತ ತಾತ್ಪರ್ಯನಿರ್ಣಯ’ ಗ್ರಂಥ ಮಹೋನ್ನತ ಕೃತಿಯಾಯಿತು. ಮಹಾಭಾರತವನ್ನು ರಚಿಸಿದವರು ಶ್ರೀವೇದವ್ಯಾಸರಾದರೆ ಅದಕ್ಕೆ ನಿರ್ಣಯ ರಚಿಸಿದ ಶ್ರೀಮಧ್ವರು ಅಭಿನವವೇದವ್ಯಾಸರಾದರು. ಅವರು ಇವರ ಬಿಂಬರಾದ ಶ್ರೀಹರಿಯಾದರೆ, ಇವರು ಅವರ ಪ್ರತಿಬಿಂಬರಾದ ವಾಯುದೇವರೇ ಆಗಿರುವರು.

ಉತ್ತರ ಬದರಿಯಿಂದ ಮತ್ತೆ ದಕ್ಷಿಣ ಬದರಿಗೆ ಬಂದು ಅಲ್ಲಿಂದ ಉಡುಪಿಗೆ ಮರುಪ್ರಯಾಣ ಮಾಡಿದರು. ಬರುವಾಗ ಮತ್ತೆ ಗಂಗಾನದಿಯನ್ನು ದಾಟುವ ಪ್ರಸಂಗ ಬಂತು. ಶ್ರೀಮಧ್ವರು ಗಂಗೆಯ ಮೇಲೆ ನಡೆದುಬಿಟ್ಟರು. ಹಾಗೆ ನಡೆಯುವಾಗ ಅವರಿಗಾಗಲಿ ಅವರು ಧರಿಸಿದ ಬಟ್ಟೆಗಾಗಲೀ ನೀರು ಸೋಂಕಲಿಲ್ಲ. ಇಲ್ಲಿ ಜಲಸ್ಥಂಭನಶಕ್ತಿಯನ್ನು ಪ್ರಯೋಗಿಸಿದ್ದರು. ಮುಂದೆ ಶ್ರೀಮಧ್ವರು ಹಸ್ತಿನಾವತಿಗೆ ಬಂದರು. ಅಲ್ಲಿಯೇ ತಮ್ಮ ಚಾತುರ್ಮಾಸ್ಯ ದೀಕ್ಷೆಯನ್ನು ಕೈಕೊಂಡರು. ಅವರು ವಾಸ್ತವ್ಯ ಮಾಡಿದ ಮಠ ಗಂಗಾನದಿಯಿಂದ ಸ್ವಲ್ಪದೂರದಲ್ಲಿತ್ತು. ಅಲ್ಲಿ ಅಪೂರ್ವ ಜ್ಞಾನಕಾರ್ಯ ನಡೆಯಿತು. ಅಲ್ಲಿರುವ ಜನರಿಗೆಲ್ಲ ತಾವು ಸತ್ಯಲೋಕದಲ್ಲಿರುವ ಅನುಭವವಾಗುತ್ತಿತ್ತು. ಗಂಗಾದೇವಿಗೆ ಕೊರಗು, ತನ್ನಿಂದ ಮಠ ಸ್ವಲ್ಪದೂರ ಇದೆಯಲ್ಲಾ ಎಂದು. ಒಂದು ದಿನ ಗಂಗಾನದಿಯೇ ಹರಿದು ಮಠದೆಡೆ ಬಂತು. ಎಲ್ಲರೂ ನೋಡುತ್ತಿರುವಂತೆಯೇ ಗಂಗಾನದಿ ಸ್ತ್ರೀರೂಪ ಧರಿಸಿ ಶ್ರೀಮಧ್ವರು ಇರುವ ಕಡೆ ಬಂದಳು. ಕಾಶಿಯಿಂದ ಉಡುಪಿಯ ಮಧ್ವ ಸರೋವರಕ್ಕೆ ಧಾವಿಸಿದ ಗಂಗೆ ಅನತಿದೂರದಲ್ಲಿರುವ ಮಠದೆಡೆ ಬಂದಿರುವುದರಲ್ಲಿ ಯಾವ ಆಶ್ಚರ್ಯವೂ ಇರಲಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more