• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಧ್ವರಂತಹ ಗುರು ಪಡೆದ ಶಿಷ್ಯಕೋಟಿಯೇ ಧನ್ಯ!

By Staff
|

ಕಅತ್ಯಾಧುನಿಕ ಪರಿಕಲ್ಪನೆಗಳಾದ ಉತ್ಖನನ, ಗ್ರಂಥ ಸಂಪಾದನೆ(ಸಂಗ್ರಹ), ಗ್ರಂಥಗಳ ಶುದ್ಧಪಾಠದ ನಿರ್ಣಯ, ಮುಂದಿನ ಪೀಳಿಗೆಗೆ ಜ್ಞಾನವನ್ನು ಹೂತಿಡುವ ಪ್ರಕಾರ ಮುಂತಾದವುಗಳನ್ನು ಶ್ರೀಮಧ್ವರು ತಮ್ಮ ಕಾಲದಲ್ಲೇ ಮಾಡಿದ್ದರು. ಓದುಗರೇ, ಡಾ. ಪ್ರಭಂಜನಾಚಾರ್ಯರ ‘ಶ್ರೀಪೂರ್ಣಪ್ರಜ್ಞ ದರ್ಶನ’ ಕೃತಿ ಪರಿಚಯ ಈ ವಾರವೂ ಮುಂದುವರೆದಿದೆ...

Sri Madhwacharyaಕಲಿಯುಗದ ಅತ್ಯಂತ ಸಾರ್ಥಕ ಮಾತಾಪಿತೃಗಳಾದ ಮಧ್ಯಗೇಹಭಟ್ಟರು ಹಾಗೂ ಅವರ ಪತ್ನಿ ವೈಕುಂಠವಾಸಿಗಳಾದ ಮೇಲೆ ಅವರ ಎರಡನೆಯ ಪುತ್ರಪಾಜಕದಲ್ಲೇ ನೆಲೆಸಿದ್ದರು. ಅನಿರೀಕ್ಷಿತವಾಗಿ ಬಂದೊದಗಿದ ವಿಪತ್ತಿನಿಂದಾಗಿ ಅವರು ತಮ್ಮ ಎಲ್ಲ ಐಶ್ವರ್ಯ ಕಳೆದುಕೊಂಡರು. ಆಗ ಅವರು ಸರ್ವಸಂಗ ಪರಿತ್ಯಾಗಿಯಾಗಬೇಕೆಂದೂ, ಸನ್ಯಾಸಿಯಾಗಬೇಕೆಂದೂ ಬಯಸಿದರು. ಅವರ ಮನಸ್ಸು ಇನ್ನಷ್ಟು ಪಕ್ವವಾಗಲಿ ಎಂದು ಮಧ್ವರು ಕೂಡಲೇ ಸನ್ಯಾಸ ನೀಡಲಿಲ್ಲ.

ಕೆಲಕಾಲದ ನಂತರ ಅವರಿಗೆ ಶ್ರೀಮಧ್ವರು ಸನ್ಯಾಸ ದೀಕ್ಷೆ ನೀಡಿ ಶ್ರೀವಿಷ್ಣುತೀರ್ಥರೆಂಬ ಹೆಸರನ್ನು ಇರಿಸಿದರು. ಶ್ರೀವಿಷ್ಣುತೀರ್ಥರು ಇತರ ಶಿಷ್ಯರೊಂದಿಗೆ ಬೆರೆತು ಗುರುಗಳಲ್ಲಿ ಸತ್ಶಾಸ್ತ್ರಶ್ರವಣದಲ್ಲಿ ಕಾಲಕಳೆದರು, ಸಾಧನೆಯನ್ನೂ ಮಾಡಿದರು. ಗುರುಗಳ ಆದೇಶದ ಮೇರೆಗೆ ಉತ್ತರ ದಿಕ್ಕಿನಲ್ಲಿ ತೀರ್ಥಯಾತ್ರೆ ಕೈಕೊಂಡರು. ಹರಿಶ್ಚಂದ್ರ ಪರ್ವತಕ್ಕೆ ತೆರಳಿ ಅಲ್ಲಿ ತಪೋನಿರತರಾದರು. ಕಠಿಣವ್ರತಾಚರಣೆ ಮಾಡಿ ವಿಶೇಷ ಸಿದ್ಧಿಯನ್ನು ಪಡೆದರು.

ಅತ್ಯಾಧುನಿಕ ಪರಿಕಲ್ಪನೆಗಳಾದ ಉತ್ಖನನ, ಗ್ರಂಥ ಸಂಪಾದನೆ(ಸಂಗ್ರಹ), ಗ್ರಂಥಗಳ ಶುದ್ಧಪಾಠದ ನಿರ್ಣಯ, ಮುಂದಿನ ಪೀಳಿಗೆಗೆ ಜ್ಞಾನವನ್ನು ಹೂತಿಡುವ ಪ್ರಕಾರ ಮುಂತಾದವುಗಳನ್ನು ಶ್ರೀಮಧ್ವರು ತಮ್ಮ ಕಾಲದಲ್ಲೇ ಮಾಡಿದ್ದರು ಎಂಬುದು ಆಶ್ಚರ್ಯವನ್ನುಂಟುಮಾಡುತ್ತದೆ.

ಅವರ ವಿನೂತನತೆಗೆ ಇನ್ನೊಂದು ಉದಾಹರಣೆ ಎಂದರೆ ಅವರು ತಮ್ಮ ಸರ್ವಮೂಲ ಗ್ರಂಥಗಳನ್ನು ಮುಂದಿನ ಪೀಳಿಗೆಗಾಗಿ ಸುರಕ್ಷಿತವಾಗಿ ಇಟ್ಟ ಒಂದು ವಿಧಾನ. ತಮ್ಮ ಗ್ರಂಥಗಳನ್ನೆಲ್ಲ ತಾಮ್ರದ ತಗಡಿನಲ್ಲಿ ಬರೆಸಿದರು. ಸುಳ್ಯದ ಬಳಿಯಿರುವ ಕಟ್ತಿಲ ಎಂಬಲ್ಲಿ ಭೂಗತವಾಗಿ ಇರಿಸಿದರು. ಮುಂದೆ ಅವನ್ನು ಹೊರತೆಗೆದು ತತ್ತ್ವಪ್ರಸಾರ ಮಾಡುವ ಹೊಣೆಯನ್ನು ತಮ್ಮಂದಿರಾದ ಶ್ರೀವಿಷ್ಣುತೀರ್ಥರಿಗೆ ವಹಿಸಿದರು.

ವಿಷ್ಣುತೀರ್ಥರು ಹೆಚ್ಚಾಗಿ ಕುಮಾರಪರ್ವತದಲ್ಲಿ ವಾಸಮಾಡತೊಡಗಿದ್ದರು. ಅಲ್ಲಿ ಸಾಧನೆಯ ಶಿಖರವನ್ನೂ ಏರಿದ್ದರು. ಮುಂದೆ ಶ್ರೀಮಧ್ವರು ಅದೃಶ್ಯರಾಗಿ ಉತ್ತರ ಬದರಿಗೆ ತೆರಳಿದ ಮೇಲೆ ಮತ್ತೊಮ್ಮೆ ವಿಷ್ಣುತೀರ್ಥರು ಕುಮಾರ ಪರ್ವತವನ್ನೇರಿ ತಪನ್ನಾಚರಿಸಿದರಂತೆ. ಇಂದು ಕೂಡ ಅವರು ಅಲ್ಲಿಯೇ ತಪವನ್ನಾಚರಿಸುತ್ತಿದ್ದಾರೆ ಎಂಬ ಪ್ರತೀತಿ ಇದೆ. ಅವರು ಅಲ್ಲಿ ತೆರಳಿದ ದಿನ ಮಾರ್ಗಶೀರ್ಷಮಾಸದ ಶುಕ್ಲಪಕ್ಷ ಪೌರ್ಣಿಮೆಯಾಗಿತ್ತಂತೆ. (‘ಮಾರ್ಗಶೀರ್ಷೇ ಶುಕ್ಲಪಕ್ಷೇ ವಿಷ್ಣುತೀರ್ಥೋ ಮಹಾಮನಾಃ । ಗುಹಸ್ಯೈವ ಸಮೀಪೇತು ಹ್ಯಾರುಹತ್ಪೌರ್ಣಿಮೀ ದಿನೇ ।।’).

ಉಡುಪಿಯಲ್ಲಿ ಶ್ರೀಮಧ್ವರು ತಾವು ಸ್ಥಾಪಿಸಿದ ಶ್ರೀಕೃಷ್ಣನ ಪೂಜೆಯ ಅಧಿಕಾರವನ್ನು ಅಷ್ಟಮಠಗಳಿಗೆ ನೀಡಿ, ಪರ್ಯಾಯಕ್ರಮದಲ್ಲಿ ಪೂಜೆ ನಿರ್ವಹಿಸುವಂತೆ ಆದೇಶಿಸಿದರು. ಶ್ರೀ ಹೃಶೀಕೇಶತೀರ್ಥರು, ಶ್ರೀನರಸಿಂಹತೀರ್ಥರು, ಶ್ರೀಜನಾರ್ದನತೀರ್ಥರು, ಶ್ರೀ ಉಪೇಂದ್ರತೀರ್ಥರು, ಶ್ರೀವಾಮನತೀರ್ಥರು, ಶ್ರೀವಿಷ್ಣುತೀರ್ಥರು, ಶ್ರೀರಾಮತೀರ್ಥರು ಮತ್ತೂ ಶ್ರೀಅಧೋಕ್ಷಜತೀರ್ಥರು- ಈ ಎಂಟು ಯತಿಗಳು ಮುಂದೆ ಕ್ರಮವಾಗಿ ಉಡುಪಿಯ ಪಲಿಮಾರು, ಅದಮಾರು, ಕೃಷ್ಣಾಪುರ, ಪುತ್ತಿಗೆ, ಶಿರೂರು, ಸೋದೆ, ಕಾಣೆಯೂರು, ಮತ್ತು ಪೇಜಾವರ ಮಠಗಳಿಗೆ ಪ್ರಥಮ ಮಠಾಧೀಶರೆನಿಸಿ ಮಾನ್ಯರಾದರು.

ಶ್ರೀಮಧ್ವರು ಒಮ್ಮೆ ಸಂಚಾರದಲ್ಲಿದ್ದಾಗ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ್ದರು. ಎಲ್ಲಿ ಹೋದಲ್ಲಿ ವಾದವಿವಾದ ನಡೆಸಿ ದುರ್ಮತದ ಹರಿಕಾರರನ್ನು ಸೋಲಿಸುವುದು, ಸದ್ಧರ್ಮವನ್ನು ಸ್ಥಾಪಿಸುವುದು, ಅವರ ಪದ್ಧತಿಯಾಗಿತ್ತು. ಆ ಕ್ಷೇತ್ರದಲ್ಲಿ ವಿರಾಜಮಾನನಾದ ಅದ್ವೈತ ಸಂಪ್ರದಾಯದ ಒಬ್ಬ ಯತಿಯನ್ನು ವಾದದಲ್ಲಿ ಸೋಲಿಸಿದರು. ಸೋತವರು ಗೆದ್ದವರಿಗೆ ತಮ್ಮ ಪೀಠವನ್ನು ಒಪ್ಪಿಸಿ ದೇಶಾಂತರ ತೆರಳುವುದು ವಾದದ ನಿಬಂಧನೆಯಾಗಿತ್ತು.

ಸೋತ ಯತಿ ಸುಬ್ರಹ್ಮಣ್ಯ ಮಠವನ್ನು ಶ್ರೀಮಧ್ವರಿಗೆ ಒಪ್ಪಿಸಿದರು, ತಾವು ಪೂಜಿಸುತ್ತಿದ್ದ ಶ್ರೀನರಸಿಂಹ ದೇವರ ಪ್ರತಿಮೆಯನ್ನೂ ಶ್ರೀಮಧ್ವರಿಗೆ ಕೊಟ್ಟು ದೇಶಾಂತರಕ್ಕೆ ತೆರಳಿದರು. ಅಂದಿನಿಂದ ಸುಬ್ರಹ್ಮಣ್ಯ ಮಠವು ಮಧ್ವಪೀಠವಾಯಿತು. ಸೋದೆಮಠದ ಆಧಿಪತ್ಯದೊಂದಿಗೆ ಈ ಮಠದ ಆಡಳಿತವನ್ನು ತಮ್ಮಂದಿರಾದ ಶ್ರೀವಿಷ್ಣುತೀರ್ಥರಿಗೆ ಶ್ರೀಮಧ್ವರು ಒಪ್ಪಿಸಿದರು, ಅಷ್ಟೇಅಲ್ಲ ತಾವು ವೇದವ್ಯಾಸರಿಂದ ಪಡೆದಿದ್ದ ವ್ಯಾಸಮುಷ್ಟಿಯಾಂದನ್ನು ಅಲ್ಲಿ ಸ್ಥಾಪಿಸಿದರು.

ಶ್ರೀಮಧ್ವಾಚಾರ್ಯರ ಶಿಷ್ಯರ, ಪ್ರಶಿಷ್ಯರ ಸಂಖ್ಯೆ ಬೆಳೆಯತೊಡಗಿತು. ಅವರು ಪಾದವಿಟ್ಟ ಭೂಮಿ ಪವಿತ್ರವಾಗುತ್ತಿತ್ತು. ಅವರಿಗೆ ಸನ್ಯಾಸಿ ಶಿಷ್ಯರಂತೆ ಗೃಹಸ್ಥಶಿಷ್ಯರೂ ಅಪಾರ ಸಂಖ್ಯೆಯಲ್ಲಿದ್ದರು. ಗ್ರಹಸ್ಥ ಶಿಷ್ಯರಲ್ಲಿ ಪ್ರಮುಖರು ತ್ರಿವಿಕ್ರಮಪಂಡಿತಾಚಾರ್ಯರು. ಅವರ ತಮ್ಮ ಶಂಕರಪಂಡಿತರು ಶ್ರೀಮಧ್ವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು. ಅವರು ಶ್ರೀಮಧ್ವರ ಗ್ರಂಥಾಲಯದ ಪಾಲಕರಾಗಿದ್ದರು. ಅವರು ಗ್ರಂಥಪಾಲನೆಯಾಂದಿಗೆ ಒಂದು ಅಪೂರ್ವ ಗ್ರಂಥವನ್ನೂ ರಚಿಸಿದರು, ಅದು ‘ಅನುವ್ಯಾಖ್ಯಾನನ್ಯಾಯವಿವರಣಸಂಬಂಧದೀಪಿಕಾ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.

ಸೂತ್ರಪ್ರಸ್ಥಾನ ವ್ಯಾಖ್ಯಾನ ಪರಂಪರೆಗೆ ಸಂದಿರುವ ಅಪೂರ್ವ ಕೊಡುಗೆಯಾಗಿದೆ ಈ ಗ್ರಂಥ. ತ್ರಿವಿಕ್ರಮಪಂಡಿತರ ಸೋದರಿ ಕಲ್ಯಾಣೀದೇವಿ ಮಹಿಳಾ ಸಾಧಕರಲ್ಲಿ ಅಗ್ರೇಸರಳಾಗಿದ್ದಳು. ಶ್ರೀಮಧ್ವರ ಪ್ರಮುಖ ಶಿಷ್ಯಳಾದ ಈಕೆ ಶ್ರೀಮಧ್ವರ ಮೇಲೆ ಸಂಸ್ಕೃತದಲ್ಲಿ ಒಂದು ಗೇಯಕೃತಿಯನ್ನು ರಚಿಸಿದಳು.

ವೇದಪ್ರಾಮಾಣ್ಯವನ್ನು ಅಲ್ಲಗಳೆಯುವ ದುರ್ವಾದಿಗಳನ್ನು ಸೋಲಿಸುವುದರಲ್ಲಿ ಶ್ರೀಮಧ್ವರು ನಿಸ್ಸೀಮರಾಗಿದ್ದರು. ಒಂದು ಅಪೂರ್ವ ಘಟನೆ ನಡೆಯಿತು. ದ್ವಾರಕೆಯ ಬಳಿಯಲ್ಲಿರುವ ಗೋಮತೀ ತೀರದಲ್ಲಿ ಸಂಚರಿಸುವಾಗ ಒಬ್ಬ ಶೂದ್ರ ರಾಜ ಶ್ರೀಮಧ್ವರನ್ನು ಸಂಧಿಸಿದ. ಅವನು ವೇದದ್ವೇಷಿಯಾಗಿದ್ದನು. ‘‘ಯಾ ಔಷಧೀಃ..’’ಎಂಬ ಸೂಕ್ತದ ಪಠನದಿಂದ ಬೀಜಗಳನ್ನು ಅಂಕುರಿಸಬಹುದು ಎಂದು ಅದರ ಫಲಶ್ರುತಿ ಇದೆ. ಆ ಶೂದ್ರರಾಜ ತನ್ನ ಕೈಯಲ್ಲಿ

ಬೀಜಗಳನ್ನು ಹಿಡಿದು ಆ ಮಂತ್ರ ಪಠಿಸುತ್ತಿದ್ದ. ಬೀಜ ಅಂಕುರಿಸುತ್ತಿರಲಿಲ್ಲ. ವೇದಮಂತ್ರಗಳೆಲ್ಲ ಅಪ್ರಮಾಣ್ಯ ಎಂದು ವಾದಿಸುತ್ತಿದ್ದ. ಶ್ರೀ ಮಧ್ವರ ಮುಂದೆ ಕೂಡ ತನ್ನ ಈ ಹಳೆಯ ತಂತ್ರ ಬಳಸಿ ಕೆಣಕಿದ, ವಾದಮಾಡಲು ಬಂದ. ಶ್ರೀಮಧ್ವರು ಅವನಿಗೆ ಅಂದರು, ‘‘ಎಲವೊ, ವೇದಗಳು ಪ್ರಮಾಣ ಎಂಬುವುದರಲ್ಲಿ ಯಾವ ಸಂಶಯವೂ ಇಲ್ಲ. ನಿನಗೆ ಫಲ ಕೊಡದಿದ್ದರೆ ಅವು ಅಪ್ರಮಾಣ ಎಂದು ಸಿದ್ಧವಾಗುವುದಿಲ್ಲ.’’ ಎಂದರು.

ಅರ್ಹತೆ ಇಲ್ಲದೆ ಮಾಡಿದ ವೇದಾಧ್ಯಯನವು ಸಫಲವಾಗುವುದಿಲ್ಲ, ಬಂಜರು ಭೂಮಿಯಲ್ಲಿ ಎಂತಹ ಉತ್ತಮ ಬೀಜ ನೆಟ್ಟರೂ ಅವು ಮೊಳೆಯುವುದಿಲ್ಲ. ಹೀಗೆ ಹೇಳುತ್ತ ತಮ್ಮ ಕೈಯನ್ನು ಮುಂದೆ ಚಾಚಿ ಆ ಬೀಜಗಳನ್ನು ಕೊಡಲು ಹೇಳಿದರು. ಆ ಬೀಜಗಳನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡು ಆ ಮಂತ್ರ ಪಠಿಸತೊಡಗಿದರು. ಆ ಬೀಜಗಳು ಅಂಕುರಿಸಿದವು ಅಷ್ಟೇ ಅಲ್ಲ ಅವುಗಳಲ್ಲಿ ಎಲೆಗಳೂ ಪುಷ್ಪ ಫಲಗಳು ಬಂದವು. ಕಿಕ್ಕಿರಿದು ನೆರೆದ ಜನಸ್ತೋಮಕ್ಕಾದ ಆನಂದ ವರ್ಣನಾತೀತ. ಶ್ರೀ ಮಧ್ವರು ತಮ್ಮ ಬ್ರಹ್ಮಸೂತ್ರಭಾಷ್ಯಕ್ಕೆ ಇಲ್ಲಿ ಪ್ರಾತ್ಯಕ್ಷಿಕೆ ಒದಗಿಸಿದ್ದರು.

ಭೂವೈಕುಂಠವೆಂದೇ ಪ್ರಸಿದ್ಧವಾದ ತಿರುಪತಿಯಲ್ಲಿ ಶ್ರೀಮಧ್ವರ ಚಾತುರ್ಮಾಸ್ಯ. ಅವರ ಪ್ರವಚನವೈಭವವೋ ವಿಶ್ವವಿಖ್ಯಾತವಾದುದು. ಪ್ರತಿನಿತ್ಯ ಅವರ ಪ್ರವಚನ ಕೇಳಲು ಅಸಂಖ್ಯ ಜನರು ಸೇರುತ್ತಿದ್ದರು. ಎಲ್ಲರ ಎದುರು ಒಬ್ಬ ಮುನಿ ಕುಳಿತುಕೊಳ್ಳುತ್ತಿದ್ದ. ಅವನು ತನ್ನ ಮುಖದ ಮೇಲಿನ ತೇಜಸ್ಸಿನಿಂದ ಎಲ್ಲರನ್ನೂ ಆಕರ್ಷಿಸಿದ್ದ. ಮುಂದೆ ಕುಳಿತು ಅತಿ ಶ್ರದ್ಧೆಯಿಂದ ಪ್ರತಿದಿನ, ನಾಲ್ಕೂ ತಿಂಗಳು ತಪ್ಪದೇ ಪ್ರವಚನ ಆಲಿಸುತ್ತಿದ್ದ.

ಕೊನೆಯದಿನ ಶ್ರೀ ಮಧ್ವರು ಆ ಮುನಿಯ ಪರಿಚಯವನ್ನು ಶ್ರೋತೃವೃಂದಕ್ಕೆ ಮಾಡಿಕೊಟ್ಟರು. ‘‘ಇವರು ಶುಕಮುನಿಗಳು. ರುದ್ರದೇವರ ಅವತಾರ. ಇವರ ವಾಸ ಪದ್ಮಸರೋವರದ ಬಳಿ ಇರುವ ಆಶ್ರಮ. ಬ್ರಹ್ಮಸೂತ್ರಗಳ ಅರ್ಥವಿಶೇಷವನ್ನು ತಿಳಿಯುವ ಉದ್ದೇಶದಿಂದ ಇವರು ಪ್ರತಿನಿತ್ಯ ಇಲ್ಲಿ ಆಗಮಿಸುತ್ತಿದ್ದಾರೆ.’’ ಈ ಮಾತನ್ನು ಕೇಳಿದಾಗ ಜನಸ್ತೋಮಕ್ಕೆ ಆದ ಆನಂದಾಶ್ಚರ್ಯಕ್ಕೆ ಪಾರವೇ ಇರಲಿಲ್ಲ.

ವೇದಾಧ್ಯಯನ ಮಾಡುವವರು ಅನೇಕರಿದ್ದಾರೆ ಆದರೆ ವೇದಮಂತ್ರಗಳ ಸಿದ್ಧಿ ಪಡೆದವರು ವಿರಳ. ಇತರ ಮತಾಚಾರ್ಯರು ವೇದಗಳನ್ನು ಜ್ಞಾನಕಾಂಡವೆಂದು ಪರಿಗಣಿಸಸಲಿಲ್ಲ, ಆದ್ದರಿಂದ ಶಿಷ್ಯವೃಂದ ಶ್ರೀಮಧ್ವರಿಗೆ ವೇದಗಳಿಗೆ ಭಾಷ್ಯ ಬರೆಯಲು ಕೇಳಿಕೊಂಡರು. ಶಿಷ್ಯರ ಪ್ರಾರ್ಥನೆಯನ್ನು ಮನ್ನಿಸಿ ಶ್ರೀಮಧ್ವರು ಋಗ್ಭಾಷ್ಯ ರಚಿಸಿದರು.

ಋಗ್ವೇದದ ಮೊದಲ ಮೂರು ಅಧ್ಯಾಯಗಳಿಗೆ, ಒಟ್ಟು ನಲವತ್ತು ಸೂಕ್ತಗಳಿಗೆ, ಶ್ಲೋಕರೂಪದಲ್ಲಿ ವ್ಯಾಖ್ಯಾನ ರಚಿಸಿದರು. ಈ ಅಮೂಲ್ಯ ಕೃತಿ ವೈದಿಕ ಸಾಹಿತ್ಯದ ಅಧ್ಯಯನಕ್ಕೆ ದಾರಿದೀಪವಾಗಿದೆ, ಅನನ್ಯ ಬೆಳಕು ಚೆಲ್ಲುತ್ತದೆ. ವೇದಮಂತ್ರಗಳ ಪ್ರತಿಪದವನ್ನು ಭಗವತ್ಪರವಾಗಿ ಅರ್ಥೈಸುವ ಶ್ರೀಮಧ್ವರ ಕೌಶಲ ವ್ಯಾಖ್ಯಾನ ಪರಂಪರೆಯಲ್ಲಿಯೇ ಅಸದೃಶವಾಗಿದೆ. ಅರವಿಂದಾಶ್ರಮದ ಕಾಪಾಲಿಶಾಸ್ತ್ರಿಗಳು ಶ್ರೀಮಧ್ವರ ಋಗ್ಭಾಷ್ಯವನ್ನು ಮೆಚ್ಚಿ ಬರೆದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more