ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ವರ ಅವತಾರ... ಉಡುಪಿ ಕ್ಷೇತ್ರ...

By Staff
|
Google Oneindia Kannada News

ಡಾ। ಪ್ರಭಂಜನಾಚಾರ್ಯರ 'ಶ್ರೀಪೂರ್ಣಪ್ರಜ್ಞ ದರ್ಶನ" ಕೃತಿ ಪರಮಾರ್ಶೆಯ ಮುಂದುವರೆದ ಭಾಗಕ್ಕೆ ನಿಮಗೆಲ್ಲರಿಗೂ ಸ್ವಾಗತ... ಮಧ್ವರ ಜನನ ಮತ್ತು ಬಾಲಲೀಲೆಗಳನ್ನು ಈ ವಾರ ಅರಿಯೋಣವೇ?

ಡಾ।'ಜೀವಿ" ಕುಲಕರ್ಣಿ, ಮುಂಬಯಿ

Madhwacharya - founder of Dwaita Siddhantaದ್ವಾಪರದ ಕೊನೆಯ ಘಟ್ಟ ತತ್ತ್ವಜ್ಞಾನದ ಅವನತಿಯ ಕಾಲ. ಗೌತಮರ ಶಾಪದಿಂದ ತತ್ತ್ವಜ್ಞಾನ ಪ್ರಪಂಚದಲ್ಲಿ ಕತ್ತಲೆ ಕವಿದಿತ್ತು. ಆಗ ಭಗವಂತನು ವೇದವ್ಯಾಸ ರೂಪದಿಂದ ಅವತರಿಸಿ ವೇದಗಳನ್ನು ಉದ್ಧರಿಸಿದ, ವಿಭಾಗಿಸಿದ. ವೇದವ್ಯಾಸರ ಮಹಾಭಾರತಾದಿ ಕೃತಿಗಳು ವೇದಾರ್ಥನಿರ್ಣಯವನ್ನು ಸುಗಮಗೊಳಿಸಿದರೆ ಅವರ ಬ್ರಹ್ಮಸೂತ್ರಗಳು ಸಕಲಶಾಸ್ತ್ರಗಳ ಕೈಪಿಡಿಯಾದವು.

ಗೌತಮರ ಶಾಪ ವೇದಗಳನ್ನು ಮರೆಯಾಗಿಸಿದ್ದರೆ, ದುರ್ಭಾಷ್ಯಗಳ ಪ್ರಭಾವದಿಂದ ವೇದವ್ಯಾಸರ ಉಪದೇಶ ಮರೆಯಾಯಿತು. ಎಲ್ಲೆಡೆ ಕತ್ತಲೆ ಆವರಿಸಿದಾಗ, ಅಧ್ಯಾತ್ಮಪ್ರಪಂಚ ಕುರುಡರ ಸಂತೆಯಾದಾಗ, ಅಸತ್ಯ ಅಧರ್ಮಗಳು ಜೀವನದ ನಿತ್ಯವಿಧಿಗಳಾಗಿ ಎಲ್ಲೆಡೆ ಅಶಾಂತಿ ತಾಂಡವವಾಡತೊಡಗಿದಾಗ, ತಂತ್ರದ ಹೆಸರಿನಲ್ಲಿ ಪಶುಬಲಿ ನರಬಲಿ ಕಾಲಿಟ್ಟಾಗ, ಸದಾಚಾರ ವಾಮಚಾರವಾದಾಗ, ರಕ್ಷಕರೇ ಭಕ್ಷಕರಾದಾಗ, ಜ್ಞಾನಭಾಸ್ಕರ ಉದಯಿಸಿದ - ಅವನೇ ಶ್ರೀಮಧ್ವ.

ಪರಶುರಾಮ ಕ್ಷೇತ್ರ, ಉಡುಪಿ :

ಪರಶುರಾಮನು ಭೂಮಂಡಲವನ್ನೆಲ್ಲ ಕ್ಷತ್ರಿಯರಿಂದ ಗೆದ್ದು ವಿಪ್ರರಿಗೆ ದಾನವಾಗಿ ಕೊಟ್ಟಮೇಲೆ, ತನ್ನ ವಾಸಕ್ಕೆ ಮತ್ತೊಂದು ಭೂಪ್ರದೇಶ ನಿರ್ಮಿಸಲಿಕ್ಕಾಗಿ ತನ್ನ ಕೊಡಲಿಯನ್ನು ಬಾಣದಂತೆ ಪ್ರಯೋಗಿಸಿದಾಗ ಪಶ್ಚಿಮ ಸಮುದ್ರ ಹಿಂದೆ ಸರಿಯಿತು, ಪರಶುರಾಮ ಕ್ಷೇತ್ರ ನಿರ್ಮಾಣಗೊಂಡಿತು. ರಜತಪೀಠ(ಉಡುಪಿ), ಕುಮಾರಾದ್ರಿ(ಸುಬ್ರಹ್ಮಣ್ಯ), ಕುಂಭಾಸಿ, ಕೋಟೀಶ್ವರ, ಕ್ರೋಡ(ಶಂಕರನಾರಾಯಣ), ಗೋಕರ್ಣ, ಮೂಕಾಂಬಿಕಾ(ಕೊಲ್ಲೂರು) - ಇವು ಪರಶುರಾಮ ಕ್ಷೇತ್ರದ ಸಪ್ತ ಮಹಾ ಕ್ಷೇತ್ರಗಳಾದವು.

ಕ್ಷೇತ್ರ ರಕ್ಷಣೆಗೆ ರಾಮಭೋಜನೆಂಬ ರಾಜನನ್ನು ಪರಶುರಾಮ ಸೃಷ್ಟಿಸಿದ. ಆ ರಾಜ ಯಜ್ಞಭೂಮಿಯ ಶುದ್ಧಿಗಾಗಿ ಚಿನ್ನದ ನೇಗಿಲಿನಿಂದ ಉಳತೊಡಗಿದಾಗ ಅದಕ್ಕೆ ಸಿಕ್ಕು ಒಂದು ಘಟಸರ್ಪ ಹತವಾಯಿತು. ಸರ್ಪಹತ್ಯಾದೋಷ ಪರಿಹಾರಕ್ಕೆ ಅವನು ರಜತಪೀಠ ನಿರ್ಮಿಸಿದ, ಮಧ್ಯದಲ್ಲಿ ಸುವರ್ಣಶೇಷಾಸನವನ್ನು ಇರಿಸಿದ. ಅನಂತಾಸನದ ಮೇಲೆ ಪರಶುರಾಮ ಲಿಂಗಾಕಾರದಿಂದ ಸನ್ನಿಹಿತನಾದ. ಅವನೇ ಅನಂತೇಶ್ವರ. ಈಶಾನ್ಯಕ್ಕೆ ಅನಂತಸರೋವರ ನಿರ್ಮಾಣವಾಯಿತು.

ದಕ್ಷಪ್ರಜಾಪತಿಯ ಕುಮಾರಿಯರಾದ ಅಶ್ವಿನಿ ಮೊದಲಾದ 27 ನಕ್ಷತ್ರಾಭಿಮಾನಿ ದೇವತೆಗಳು ಚಂದ್ರನನ್ನು ವರಿಸಿದ್ದರು. ಚಂದ್ರ ರೋಹಿಣಿಯ ಮೇಲೆ ವಿಶೇಷ ಪ್ರೀತಿಯನ್ನು ತೋರಿಸಿದ್ದರಿಂದ ಇತರರು ಅಸೂಯೆಗೊಂಡು ತಂದೆಯಲ್ಲಿ ದೂರಿದರು. ಕುಪಿತನಾದ ದಕ್ಷಪ್ರಜಾಪತಿಯ ಶಾಪದಿಂದ ಚಂದ್ರನ ತೇಜಸ್ಸು ಕ್ಷೀಣವಾಯ್ತು. ತನ್ನ ಕಳೆದ ತೇಜ ಮರಳಿ ಪಡೆಯಲು ಚಂದ್ರ ತಪವನ್ನಾಚರಿಸಲು ಆರಿಸಿದ ಕ್ಷೇತ್ರ ರಜತಪೀಠ. ಚಂದ್ರನಿಗೆ ವರ ನೀಡಿದವನು ಚಂದ್ರಮೌಳೀಶರ. ಚಂದ್ರನು ಶಾಪಕ್ಕೆ ಪರಿಹಾರ ಕಂಡ ಕ್ಷೇತ್ರಕ್ಕೆ ಉಡುಪಿ ಎಂಬ ಹೆಸರು. (ಉಡು=ನಕ್ಷತ್ರ, ಪ=ಅಧಿಪ ಚಂದ್ರ, ಅದರಿಂದಾಗಿ ಉಡುಪಿ).

ಶ್ರೀಮಧ್ವರ ಜನನ :

ಶ್ರೀಮಧ್ವರು ಜನಿಸಿದ ಪುಣ್ಯಕ್ಷೇತ್ರ ಉಡುಪಿಯ ಬಳಿಯಲ್ಲಿರುವ ಪಾಜಕ. ಅಲ್ಲಿ ನಾಲ್ದೆಸೆಯಲ್ಲಿ ಪರಶುತೀರ್ಥ, ಧನುತೀರ್ಥ, ಬಾಣತೀರ್ಥ, ಗದಾತೀರ್ಥ ಎಂಬ ನಾಲ್ಕು ತೀರ್ಥಗಳಿವೆ. ಪರಶುರಾಮನ ಪರಶು ಮೊದಲಾದ ಆಯುಧಗಳಿಂದ ಉದ್ಭವಿಸಿದ ತೀರ್ಥಗಳಿಂದಾಗಿ ಈ ಕ್ಷೇತ್ರಕ್ಕೆ ಪಾಜಕ ಎಂಬ ಹೆಸರು ಬಂತು. ಪರಶುರಾಮ ಜಗಜ್ಜನಕ, ದುರ್ಗಾದೇವಿ ಜಗನ್ಮಾತೆ. ಅವರ ನೆಲೆಯಾದ ಪಾಜಕ ಜಗದ್ಗುರು ಮಧ್ವರ ಜನ್ಮಭೂಮಿ.

ಮಧ್ವರ ತಂದೆ ಮಧ್ಯಗೇಹಭಟ್ಟರು, ತಾಯಿ ವೇದವತಿ. ಇವರ ಮನೆತನದ ಹೆಸರು 'ನಡಿಲ್ಲಾಯ". ಮಧ್ಯಗೇಹರು ಪ್ರತಿದಿನ ಉಡುಪಿಗೆ ಹೋಗಿ ಅಲ್ಲಿ ಅನಂತೇಶ್ವರನ ಸನ್ನಿಧಾನದಲ್ಲಿ ಪಾಠಪ್ರವಚನ ನಡೆಸುತ್ತಿದ್ದರು. ಈ ದಂಪತಿಗಳಿಗೆ ಮೊದಲಿನ ಎರಡು ಗಂಡುಮಕ್ಕಳು ಬಾಲ್ಯದಲ್ಲಿಯೇ ವಿಧಿವಶರಾಗಿದ್ದರು. ಒಬ್ಬ ಮಗಳಿದ್ದಳು. ವಂಶೋದ್ಧಾರಕ ಪುತ್ರನನ್ನು ಪಡೆಯಲು ವ್ರತಗಳನ್ನು ಆಚರಿಸಿದರು ನಂತರ ಅನಂತೇಶ್ವರನ ಸೇವೆ ಮಾಡಲು ಉಡುಪಿಗೆ ಬಂದರು. ಇವರು ಮೂಲದಲ್ಲಿ ಶಿವಳ್ಳಿಯವರು. ಪಾಜಕದಲ್ಲಿ ವಾಸಿಸುತ್ತಿದ್ದರು.

ಭಗವದನುಗ್ರಹದಿಂದ ವೇದವತಿ ಗರ್ಭಧರಿಸಿದಳು. ವಿಜಯದಶಿಮಿಯ ಶುಭದಿನದಂದು ಅಭಿಜಿನ್ಮುಹೂರ್ತದಲ್ಲಿ ಗಂಡುಮಗು ಜನಿಸಿತು. ಧರೆಗಿಳಿದ ಮುಖ್ಯಪ್ರಾಣ. ಕುಂತಿ ಹೆತ್ತ ಭೀಮನಂತೆ ಮಗು ಕಂಗೊಳಿಸುತ್ತಿತ್ತು. 'ವಾಸುದೇವ" ಎಂಬ ಹೆಸರನ್ನಿಟ್ಟರು. 'ವಾ ಅಸು(ಪ್ರಾಣ)ದೇವ" ಹೆಸರು ಸಾರ್ಥಕವಾಯಿತು. ಮಧ್ಯಗೇಹರಲ್ಲಿ ಅಧ್ಯಾತ್ಮಿಕ ಶ್ರೀಮಂತಿಕೆ ಇತ್ತು, ಆರ್ಥಿಕವಾಗಿ ಬಡತನವಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X