ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಗಮುಕ್ತ ಜಗತ್ತು : ಪತಂಜಲಿ ಯೋಗಪೀಠದ ಕನಸು

By Staff
|
Google Oneindia Kannada News


ಗುರುಕುಲಕ್ಕೆ ಸೀಮಿತವಾದ, ‘ಗುಹ್ಯವಿದ್ಯೆ’ ಎಂದೇ ಪ್ರಸಿದ್ಧಿ ಪಡೆದ ಯೋಗಶಿಕ್ಷಣವನ್ನು ಶ್ರೀಸಾಮಾನ್ಯನ ಮಟ್ಟಕ್ಕೆ ತಂದು, ಲಕ್ಷಾವಧಿ ಜನರ ಜೀವನದಲ್ಲಿ ಹೊಸ ಬೆಳಕನ್ನು ತರುತ್ತಿರುವ ಕೀರ್ತಿ ಸ್ವಾಮಿ ರಾಮದೇವ ಅವರದು. ಅವರ ಬಗ್ಗೆ ಮತ್ತು ಪತಂಜಲಿ ಯೋಗಪೀಠದ ಬಗ್ಗೆ ಈ ವಾರ ಇನ್ನಷ್ಟು ವಿಚಾರ.

Patanjali Yoga Peeta and Swami Ramadevaಸ್ವಾಮಿ ರಾಮದೇವ ಅವರು ಬಾಲ ಸನ್ಯಾಸಿಗಳು. ಸಂಸ್ಕೃತ ವ್ಯಾಕರಣ, ಆಯುರ್ವೇದ ಹಾಗೂ ವೈದಿಕ ತತ್ತ್ವಜ್ಞಾನವನ್ನು ಗುರುಕುಲದಲ್ಲಿದ್ದು ಅಭ್ಯಾಸ ಮಾಡಿದವರು. ಇವರ ವೈಶಿಷ್ಟ್ಯವೆಂದರೆ ಆಯುರ್ವೇದದ ಅಭ್ಯಾಸದ ಜೊತೆಗೆ, ಗೋಸಂಗೋಪನದಲ್ಲಿ ವಿಶೇಷ ಆಸಕ್ತಿ ವಹಿಸಿದರು. ಇವರು ‘ಗುಹ್ಯವಿದ್ಯಾ’ ಎಂಬ ಗುರುಕುಲದ ಮಡಿವಂತ ಯೋಗಾಭ್ಯಾಸವನ್ನು ಜನಸಾಮಾನ್ಯರ ಮಟ್ಟಕ್ಕೆ ತಂದು ಅದಕ್ಕೆ ಜಾಗತಿಕ ಮಟ್ಟದ ಹೈಪ್‌(ಪ್ರಚಾರ) ನೀಡಿದ್ದು. ಇವರು ಸ್ವಾಮಿ ಶಂಕರದೇವಜೀ ಅವರ ಶಿಷ್ಯರು. ಇವರು ಪರಂಪರಾಗತವಾದ ಗುರುಕುಲದಲ್ಲಿ ಅಷ್ಟಾಧ್ಯಾಯಿ, ಮಹಾಭಾಷ್ಯ, ಉಪನಿಷತ್ತುಗಳೊಂದಿಗೆ ಷಟ್‌ದರ್ಶನಗಳನ್ನು ಶಿಷ್ಯರಿಗೆ ಕಲಿಸಿದ್ದಾರೆ. ಆತ್ಮಸಾಕ್ಷಾತ್ಕಾರಕ್ಕಾಗಿ ಹಿಮಾಲಯದಲ್ಲಿ ಅಲೆದಾಡಿದ್ದಾರೆ. ಗಂಗೋತ್ರಿಯಲ್ಲಿ ಕೆಲಕಾಲ ವಾಸಿಸಿ ಕೆಲ ಸಿದ್ಧಿಗಳನ್ನು ಪಡೆದಿದ್ದಾರೆ.

ಸಮಾಜದ ಉದ್ಧಾರಕ್ಕಾಗಿ ಏನಾದರೂ ಮಾಡಬೇಕೆಂದು ಸಂಕಲ್ಪಿಸಿದಾಗ ಇವರು ಆಯುರ್ವೇದ ಪಂಡಿತರಾದ ಆಚಾರ್ಯ ಬಾಲಕೃಷ್ಣಜೀ ಮಹಾರಾಜರೊಂದಿಗೆ ಸೇರಿ 1995ರಲ್ಲಿ ದಿವ್ಯ ಯೋಗ ಮಂದಿರ (ಟ್ರಸ್ಟ್‌)ನ್ನು ಹರಿದ್ವಾರದ ಬಳಿಯಲ್ಲಿರುವ ಕನ್‌ಖಲ್‌ನಲ್ಲಿ ಪ್ರಾರಂಭಿಸಿದರು. ಟಿ.ವಿ. ಮಾಧ್ಯಮಗಳ ಮೂಲಕ, ತಮ್ಮ ಯೋಗಶಿಬಿರಗಳ ಮೂಲಕ ಎರಡು ಕೋಟಿ ಐವತ್ತು ಲಕ್ಷ ಜನರಿಗೆ ಯೋಗ ಹಾಗೂ ಪ್ರಾಣಾಯಮ ಕಲಿಸಿದ್ದಾರೆ ಎನ್ನಲಾಗುತ್ತದೆ. ಪ್ರಶಿಕ್ಷಣ ನೀಡುತ್ತಿರುವಂತೆಯೇ ಇವರ ಕಾರ್ಯಕ್ರಮಗಳು ಹಲವಾರು ಟಿ.ವಿ.ಚೆನೆಲ್‌ಗಳಲ್ಲಿ ಸಜೀವ-ಪ್ರಕ್ಷೇಪಣ(ಲೈವ್‌ ಟೆಲಿಕಾಸ್ಟ್‌) ಪಡೆಯುತ್ತಿವೆ. ಯೋಗಪ್ರಶಿಕ್ಷಣ ಕ್ಷೇತ್ರದಲ್ಲಿ ಇದೊಂದು ವಿಕ್ರಮ, ಮಹತ್‌ ಸಾಧನೆ. ದಿನದಲ್ಲಿ ಹಲವಾರು ಗಂಟೆ ಸ್ವಾಮಿ ರಾಮದೇವ ಅವರನ್ನು ನಾವು ಆಸ್ಥಾ, ಆಸ್ಥಾ ಇಂಟರ್‌ನ್ಯಾಶನಲ್‌, ಸಹಾರಾ, ಇಂಡಿಯಾಟಿ.ವಿ. ಚೆನೆಲ್‌ಗಳಲ್ಲಿ ನೋಡಬಹುದಾಗಿದೆ.

ಇವರಲ್ಲಿ ಸ್ವಾಮಿ ವಿವೇಕಾನಂದರಲ್ಲಿ ಇದ್ದಂತಹ ಜ್ವಲಂತ ದೇಶಾಭಿಮಾನವಿದೆ, ಭಾರತೀಯ ಸಂಸ್ಕೃತಿಯ ಬಗ್ಗೆ ಅಚಲ ವಿಶ್ವಾಸವಿದೆ, ಜನಸಾಮಾನ್ಯರ (ದರಿದ್ರನಾರಾಯಣರ) ಜೀವನಮಟ್ಟ ಸುಧಾರಿಸುವ ಬಗ್ಗೆ ಕಳಕಳಿ ಇದೆ. ಯೋಗಾಭ್ಯಾಸ ಹಾಗೂ ಆಯುರ್ವೇದಗಳನ್ನು ಅತ್ಯಾಧುನಿಕ ವೈಜ್ಞಾನಿಕ ಪರೀಕ್ಷಣೆಗಳಿಗೆ ಒಳಪಡಿಸಿ ಆರೋಗ್ಯಪೂರ್ಣ ಸ್ವಸ್ಥ ಭಾರತದ ಕನಸನ್ನು ಕಾಣುವ ದಾರ್ಶನಿಕರು ಇವರಾಗಿದ್ದಾರೆ. ಇವರು ತುಳಿಯುವ ದಾರಿ, ಹೂವುಚೆಲ್ಲಿದ ದಾರಿಯಲ್ಲ, ಕಂಟಕಗಳಿಂದ ತುಂಬಿದ ದಾರಿ. ದೈತ್ಯಾಕಾರದಲ್ಲಿ ಬೆಳೆದು ನಿಂತ ಮಲ್ಟಿನ್ಯಾಶನಲ್‌ ಔಷಧ ಕಂಪನಿಗಳನ್ನು ಎದುರಿಸಿ, ಔಷಧಮುಕ್ತ ಸಮಾಜದ ಕನಸು ಕಾಣುವುದು ಪ್ರವಾಹದ ವಿರುದ್ಧ ಈಸಿದಂತೆ. ಆದರೆ ಇವರಲ್ಲಿ ಧೃಡತೆ, ಸಂಕಲ್ಪಶಕ್ತಿ ಹಾಗೂ ಆತ್ಮವಿಶ್ವಾಸ ಅದಮ್ಯವಾಗಿದೆ.

ಯೋಗಪೀಠದ ಧ್ಯೇಯ ಹಾಗೂ ಉದ್ದೇಶಗಳು

* ಯೋಗ ಹಾಗೂ ಆಯುರ್ವೇದಗಳನ್ನು ವೈಜ್ಞಾನಿಕ ರೀತಿಯಿಂದ ನಿಜ ಜೀವನದಲ್ಲಿ ಅಳವಡಿಸಿ ಇಡಿ ವಿಶ್ವವನ್ನೇ ರೋಗಮುಕ್ತಗೊಳಿಸುವುದು.
* ಮಹರ್ಷಿ ಪತಂಜಲಿ, ಚರಕ ಹಾಗೂ ಸುಶ್ರುತರ ಜ್ಞಾನಗಂಗೆಯನ್ನು ಬಳಸಿ ಜಗತ್ತಿನಲ್ಲಿ ವಿನೂತನ ‘ವಿಶ್ವ ಆರೋಗ್ಯ ಸಂಸ್ಥೆ’ಯನ್ನು ಸ್ಥಾಪಿಸುವುದು.
* ಪ್ರಾಣಶಕ್ತಿಗೆ ವೈಜ್ಞಾನಿಕ ರೂಪಕೊಟ್ಟು, ಗುಣಪಡಿಸಬಲ್ಲ ಹಾಗೂ ಗುಣಪಡಿಸಲು ಅಸಾಧ್ಯವಾದ ರೋಗಗಳಿಗೆ ಚಿಕಿತ್ಸೆ ನೀಡುವುದು.
* ಪ್ರಾಣಾಯಾಮದ ಮುಖಾಂತರ ವಿಶ್ವದಲ್ಲಿ ಉಚಿತ ಚಿಕಿತ್ಸೆ ನೀಡುವುದು.
* ಔಷಧಿಗಳ ಮಾರಕ ಪಾರ್ಶ್ವ ಪರಿಣಾಮಗಳಿಂದ ಜಗತ್ತನ್ನು ಮುಕ್ತಗೊಳಿಸುವುದು.
* ಯಜ್ಞ, ಸಾವಯವ (ಆರ್ಗ್ಯಾನಿಕ್‌)ಕೃಷಿ, ಗೋಮೂತ್ರದ ಬಳಕೆಯಲ್ಲಿ ಸಂಶೋಧನೆ ಕೈಕೊಳ್ಳುವುದು.
* ರೋಗಿಗಳನ್ನು ರೋಗಮುಕ್ತಗೊಳಿಸಲು ಯೋಗ-ಆಯುರ್ವೇದವಲ್ಲದೆ, ಅಲೋಪತಿ, ಹೋಮಿಯೋಪತಿ, ಯುನಾನಿ, ಅಕುಪ್ರೆಶರ್‌ ಮೊದಲಾದ ಚಿಕಿತ್ಸಾ ವಿಧಾನಗಳಲ್ಲಿಯ ಉತ್ತಮಾಂಶಗಳನ್ನು ಸಂಶೋಧನೆಗಳಲ್ಲಿ ಅಳವಡಿಸುವುದು.
* ಯೋಗ ಹಾಗೂ ಆಯುರ್ವೇದದಲ್ಲಿ ಡಿಗ್ರಿ ಹಾಗೂ ಡಿಪ್ಲೊಮಾ ಕೊರ್ಸ್‌ಗಳನ್ನು ಪ್ರಾರಂಭಿಸುವುದು.
* ಅಧ್ಯಾತ್ಮ ಹಾಗೂ ರಾಷ್ಟ್ರೀಯಭಾವೈಕ್ಯದ ಆಧಾರದ ಮೇಲೆ ಜಾತಿ-ಮತ-ಕೋಮುಗಳ ಬಂಧನದಿಂದ ಮುಕ್ತವಾದ ಧರ್ಮವನ್ನು ರಾಷ್ಟ್ರದ ಬೆಳವಣಿಗೆಗಾಗಿ ರೂಪಿಸುವುದು.
* ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸೇನಾದಳ, ಆಡಳಿತ, ವ್ಯಾಪಾರೋದ್ಯಮಗಳಲ್ಲಿ ಯೋಗವನ್ನು ಅಳವಡಿಸುವಂತಹ ವಾತಾವರಣವನ್ನು ನಿರ್ಮಿಸುವುದು.
* ಆರ್ಥಿಕವಾಗಿ, ಹಾಗೂ ಸಾಂಸ್ಕೃತಿಕವಾಗಿ ಭಾರತವನ್ನು ಜಗದ ಬೃಹತ್‌ ಶಕ್ತಿಯಾಗಿ ಬೆಳೆಸಿ ಇಲ್ಲಿಯ ನಾಗರಿಕರು ಗರ್ವದಿಂದ ತಲೆಯೆತ್ತಿ ಬಾಳುವಂತೆ ಮಾಡುವುದು.
* ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾದವರಿಗೆ ಉಚಿತ ವಸತಿ, ಅನ್ನ ಹಾಗೂ ಚಿಕಿತ್ಸೆ ನೀಡುವುದು.

ದಿವ್ಯ ಯೋಗ ಮಂದಿರದ ಮುಖಾಂತರ ದೇಶದಾದ್ಯಂತ ಯೋಗ ಶಿಬಿರಗಳನ್ನು ಸ್ವಾಮಿ ರಾಮದೇವ ನಡೆಸುತ್ತಿದ್ದಾರೆ. 20ರಿಂದ 80 ಸಾವಿರದ ಸಂಖ್ಯೆಯಲ್ಲಿ ಜನರು ಇಂಥ ಶಿಬಿರಗಳಲ್ಲಿ ಭಾಗವಹಿಸುತ್ತಾರೆ ಹಾಗೂ ಸ್ವಾಮೀಜಿಯವರ ಬೃಹತ್‌ ಯೋಜನೆಗಳಿಗೆ ಮುಕ್ತವಾಗಿ ದಾನ ಕೊಡುತ್ತಾರೆ. ಸ್ವಾಮಿ ರಾಮದೇವ ಹಾಗೂ ಆಚಾರ್ಯ ಬಾಲಕೃಷ್ಣಜಿ ಅವರು ಕೈಕೊಂಡಿರುವ ಯೋಗ ಹಾಗೂ ಆಯುರ್ವೇದ ಕ್ರಾಂತಿ, ಹಸಿರುಕ್ರಾಂತಿ ಹಾಗು ಶ್ವೇತ ಕ್ರಾಂತಿಗಳನ್ನು ಮೀರಿಸುತ್ತಿವೆ ಎನಿಸುತ್ತದೆ. ಉದ್ಯಾನಗಳಲ್ಲಿ ಜನ ಕುಳಿತು ಕಪಾಲಭಾತಿ ಮಾಡುವ ದೃಶ್ಯ ಸಾಮಾನ್ಯವಾಗಿದೆ. ಎಲ್ಲ ಜಾತಿ ಮತ ಪಂಥ ಧರ್ಮದ ಜನರು ಇವರ ಯೋಗಶಿಬಿರಗಳ ಲಾಭ ಪಡೆಯುತ್ತಿದ್ದಾರೆ. ಶುದ್ಧ ಮಾಂಸಾಹರಿಗಳಾದವರು ಶಾಖಾಹಾರದಲ್ಲಿ ಆಸಕ್ತಿ ತೋರುತ್ತಿದ್ದಾರೆ. ಇದನ್ನು ಕ್ರಾಂತಿ ಎಂದೇ ಕರೆಯಬೇಕು. ಇದು ರಾಷ್ಟ್ರ ಮಟ್ಟಕ್ಕೆ ನಿಲ್ಲದೆ ಜಗತ್ತಿಗೇ ಆರೋಗ್ಯಭಾಗ್ಯ ತಂದು ಕೊಡುವ ಉತ್ಕಾೃಂತಿಯಾಗಿ ಪರಿಣಮಿಸಲಿ.

ಚಿರಂತನ ಯೌವನ ನೀಡುವ ಚ್ಯವನಪ್ರಾಶ ವೈದಿಕ ಕಾಲದಿಂದ ಪ್ರಸಿದ್ಧವಾದ ಆಯುರ್ವೇದದ ಔಷಧಿ. ಇಲ್ಲಿ ರಿದ್ಧಿ, ವೃದ್ಧಿ, ಜೀವಕ, ಋಷ್ಯಕ, ಕಕೋಲಿ, ಕ್ಷಿರಕಕೋಲಿ, ಮೇಧ ಮತ್ತು ಮಹಾಮೇಧಾ ಎಂಬ ಔಷಧೀಯ ಸಸ್ಯಗಳ ಬಳಕೆಯಾಗುತ್ತದೆ. ಇವಕ್ಕೆ ಅಷ್ಟವರ್ಗ ಎಂದು ಕರೆಯಲಾಗುತ್ತದೆ. ಇವುಗಳ ಬಗ್ಗೆ ವಿವಿಧ ಗ್ರಂಥಗಳಲ್ಲಿ ವಿವಿಧ ವರ್ಣನೆ ಇರುವುದರಿಂದ ಇವನ್ನು ಸರಿಯಾಗಿ ಗುರುತಿಸುವುದು ಕಷ್ಟಕರ. ಆಚಾರ್ಯ ಬಾಲಕೃಷ್ಣಜಿ, ಸ್ವಾಮಿ ಮುಕ್ತಾನಂದಜಿ, ಹಾಗೂ ಡಾ। ಬಿ.ಡಿ.ಶರ್ಮಾ ಅವರುಗಳು ಕಷ್ಟಪಟ್ಟು ಈ ಸಸ್ಯಗಳನ್ನು ಕಂಡು ಹಿಡಿದಿದ್ದಾರಂತೆ. ಸಂಶೋಧನೆ ಮುಂದುವರಿಯುತ್ತಿದೆ.

ದಿವ್ಯ ಯೋಗ ಮಂದಿರ (ಟ್ರಸ್ಟ್‌)ದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಸಾಕಾರಗೊಳಿಸಲು ‘ದಿವ್ಯ ಫಾರ್ಮಸಿ’ ಕಟಿಬದ್ಧವಾಗಿದೆ. ಉತ್ತರಾಂಚಲದ ಮುಖ್ಯ ಮಂತ್ರಿ ನಾರಾಯಣದತ್ತ ತಿವಾರಿ ಅವರು ಡಿಸೆಂಬರ್‌ 13, 2005ರಂದು ಎಲ್ಲ ಬಗೆಯ ಅತ್ಯಾಧುನಿಕ ಸಂಶೋಧನೆಯ ಸಹಾಯ ಪಡೆಯುವಂತೆ ದಿವ್ಯ ಫಾರ್ಮಸಿಗೆ ಸಹಾಯ ಮಾಡಿದ್ದಾರೆ. ದಿವ್ಯ ಫಾರ್ಮಸಿ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದೆ ಎನ್ನಲಾಗುತ್ತದೆ.

ಹಲವಾರು ಗುಣಪಡಿಸಲು ಅಸಾಧ್ಯವಾದ ರೋಗಗಳ ಚಿಕಿತ್ಸೆಗಾಗಿ ಇಲ್ಲಿ ವಿಶೇಷ ಅಧ್ಯಯನ ನಡೆಯುತ್ತಿದೆ. ಕಣ್ಣು, ಕಿಡ್ನಿ, ಕ್ಯಾನ್ಸರ್‌ ರೋಗಗಳ ಚಿಕಿತ್ಸೆಯಲ್ಲಿ ಹೊಸ ದಾರಿ ತುಳಿಯಲಾಗುತ್ತಿದೆ. ‘ಮಸ್ಕ್ಯುಲರ್‌ ಡಿಸ್ಟ್ರಾಫಿ’ಯಂಥ ರೋಗಗಳನ್ನು ಪ್ರತಿಬಂಧಿಸಲು ಕೆಲಮಟ್ಟಿನ ಯಶ ದೊರೆತಿದೆಯಂತೆ. ಯಜ್ಞಗಳ ಪ್ರಯೋಗ ನಡೆಯುತ್ತಿದೆ. ಗಿಡಮೂಲಿಕೆಗಳನ್ನು ಬೆಳೆಯುವ ತೋಟಗಳು ಅಭಿವೃದ್ಧಿಗೊಳ್ಳುತ್ತಿವೆ. ಪತಂಜಲಿ ಯೋಗ ಪೀಠ ತ್ವರಿತಗತಿಯಿಂದ ಬೆಳೆಯುತ್ತಿದೆ. ಇದರ ಸದಸ್ಯರಾದವರಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತದೆ.

ಗುರುಕುಲಕ್ಕೆ ಸೀಮಿತವಾದ, ‘ಗುಹ್ಯವಿದ್ಯೆ’ ಎಂದೇ ಪ್ರಸಿದ್ಧಿ ಪಡೆದ ಯೋಗಶಿಕ್ಷಣವನ್ನು ಶ್ರೀಸಾಮಾನ್ಯನ ಮಟ್ಟಕ್ಕೆ ತಂದು, ಲಕ್ಷಾವಧಿ ಜನರ ಜೀವನದಲ್ಲಿ ಹೊಸ ಬೆಳಕನ್ನು ತರುತ್ತಿರುವ ಕೀರ್ತಿ ಸ್ವಾಮಿ ರಾಮದೇವ ಅವರದಾಗಿದೆ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X