ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಂದ್ರೆ ಮತ್ತು ಯೋಗ- ಜೀವನದಲ್ಲೊಂದು ಯೋಗಾಯೋಗ!

By Staff
|
Google Oneindia Kannada News

ಬೇಂದ್ರೆ ಮತ್ತು ಯೋಗ- ಜೀವನದಲ್ಲೊಂದು ಯೋಗಾಯೋಗ!
‘ಬೇಂದ್ರೆ ಮತ್ತು ಯೋಗ’ ಇದೆಂತಹ ಸಂಯೋಗ(ಕಾಂಬಿನೇಶನ್‌) ಎಂದು ಕೆಲವರಿಗೆ ಅಚ್ಚರಿ. ಇದೊಂದು ಅಪರೂಪದ ಯೋಗಾಯೋಗವೆಂದೇ ಹೇಳಬೇಕು. ಬೇಂದ್ರೆಯವರ ಬಗ್ಗೆ ಮಾತನಾಡುವಾಗ ಯೋಗದ ಪ್ರಸ್ತಾಪ ಬರುತ್ತದೆ. ಯೋಗದ ಬಗ್ಗೆ ಮಾತಾಡುವಾಗ ಬೇಂದ್ರೆ ಬಂದುಬಿಡುತ್ತಾರೆ.

Dr. G.V. Kulkarni ಡಾ।‘ಜೀವಿ’ ಕುಲಕರ್ಣಿ, ಮುಂಬಯಿ
[email protected]

‘ಬೇಂದ್ರೆ ಮತ್ತು ಯೋಗ’ ಇದೆಂತಹ ಸಂಯೋಗ(ಕಾಂಬಿನೇಶನ್‌) ಎಂದು ಕೆಲವರಿಗೆ ಅಚ್ಚರಿ. ಇದೊಂದು ಅಪರೂಪದ ಯೋಗಾಯೋಗವೆಂದೇ ಹೇಳಬೇಕು. ನಾನು ಬೇಂದ್ರೆಯವರ ಬಗ್ಗೆ ಮಾತನಾಡಿದಾಗ ಯೋಗದ ಪ್ರಸ್ತಾಪ ಬರುತ್ತದೆ. ಯೋಗದ ಬಗ್ಗೆ ಮಾತಾಡುವಾಗ ಬೇಂದ್ರೆ ಬಂದುಬಿಡುತ್ತಾರೆ. ಅವರು ಯೋಗಿಗಳಾಗಿದ್ದರು, ಸಿದ್ಧಪುರುಷರಾಗಿದ್ದರು ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ನನಗೆ ಕಾವ್ಯಯೋಗದ ದೀಕ್ಷೆ ಕೊಟ್ಟವರೇ ಅವರು.

ನಾನು ಮೊದಲಸಲ ಅಮೇರಿಕೆಯ ಪ್ರಯಾಣ ಮಾಡಿದಾಗ(2000 ದಲ್ಲಿ, ಅಮೇರಿಕೆಯ ಹ್ಯೂಸ್ಟನ್‌ದಲ್ಲಿ ಆಯೋಜಿತವಾದ ಪ್ರಥಮ ವಿಶ್ವ ಕನ್ನಡ ಸಮ್ಮೇಲನದ ಕವಿಗೋಷ್ಠಿಯಲ್ಲಿ ಭಾಗವಹಿಸಲು ನಾನು ಅಲ್ಲಿಗೆ ಹೋದಾಗ) ಗೋಪೀನಾಥ ಬೋರೆ ಎಂಬ ಆರ್ಕಿಟೆಕ್ಟ್‌ರ ಪರಿಚಯವಾಯ್ತು. ಕನ್ನಡ ಕವಿಯೆಂದೂ ಬೇಂದ್ರೆಯವರ ಶಿಷ್ಯನೆಂದೂ ನನ್ನ ಬಗ್ಗೆ ಅವರಿಗೆ ಅಕ್ಕರೆ. ನನ್ನ ಹೆಸರು ಕುಲಕರ್ಣಿ ಇರೋದರಿಂದ ಅವರೊಂದು ಮಾಹಿತಿ ಕೇಳಿದರು. ‘‘ಕಳೆದ ವರ್ಷ ನಾನು ಬೆಂಗಳೂರಿಗೆ ಹೋದಾಗ ಅಲ್ಲಿ ಒಂದು ಅಪರೂಪದ ಪುಸ್ತಕ ಸಿಕ್ಕಿತು. ‘ವಾಯುಸ್ತುತಿ’ಯ ಇಂಗ್ಲಿಷ್‌ ಪದ್ಯಾನುವಾದ. ಅನಿವಾಸಿ ಕನ್ನಡಿಗರಿಗೆ ಇದು ಅಮೂಲ್ಯವಾಗಿದೆ. ಅದರ ಅನುವಾದಕರ ಹೆಸರು ಕುಲಕರ್ಣಿ. ನಿಮಗೆ ಅವರಾರು ಗೊತ್ತೇ?’’. ನಾನು, ‘‘ಗೊತ್ತು. ಈ ಸಮ್ಮೇಲನಕ್ಕೆ ಅವರು ಬಂದಿದ್ದಾರೆ’ ಎಂದೆ. ‘‘ನನಗೆ ಅವರನ್ನು ಕಾಣಬೇಕಲ್ಲ. ನೀವು ಅವರ ಪರಿಚಯ ನನಗೆ ಮಾಡಿಕೊಡಿ’’ ಎಂದರು.

G V Kulkarni demonstrating Jalaneti‘‘ಚಿಂತಿಸದಿರಿ, ಸಂಜೆ 6 ಗಂಟೆಯ ಒಳಗಾಗಿ ನಿಮಗೆ ಅವರ ಭೇಟಿ ಮಾಡಿಸುವೆ.’’ ಎಂದೆ. ಸಂಜೆಯವರೆಗೆ ಹಲವಾರು ಪ್ರಶ್ನೆಗಳನ್ನು ಅವರ ಬಗ್ಗೆ ಕೇಳಿದರು. ‘‘ನಿಮಗೆ ಭೇಟಿ ಮಾಡಿಸಿದಾಗ ನೀವೇ ಅವರನ್ನು ಕೇಳಿರಿ’’ ಎಂದೆ. ಸಂಜೆ ಅವರಿಗೆ ತಡೆದುಕೊಳ್ಳಲಾಗದೇ ‘‘6 ಗಂಟೆ ಆಗಲು ಬಂತಲ್ಲರೀ?’’ ಎಂದರು. ‘‘ಇನ್ನೂ ಹತ್ತು ನಿಮಿಷ ಇದೆಯಲ್ಲ?’’ ಎಂದೆ. ಕೊನೆಗೆ ಹೇಳಿದೆ, ‘‘ನೀವು ಯಾವ ವ್ಯಕ್ತಿಯನ್ನು ಕಾಣಲು ಆತುರರಾಗಿದ್ದೀರೋ ಅವರೊಂದಿಗೆ ಇಡೀ ದಿನ ಕಳೆದೂ ಅವರನ್ನು ಗುರುತಿಸಲಿಲ್ಲವಲ್ಲ!’’ ಎಂದೆ. ‘‘ಆ ವ್ಯಕ್ತಿ ನೀವೇನಾ?’’ ಎಂದು ಕಣ್ಣರಳಿಸಿದರು. ಅಕ್ಕರೆಯಿಂದ ತಬ್ಬಿಕೊಂಡರು. ಅದು ಬಹಳೇ ನಾಟಕೀಯ ಸನ್ನಿವೇಶವಾಗಿತ್ತು.

ಮಾಧ್ವರ ಪಾರಾಯಣ ಸ್ತೋತ್ರವಾದ ತ್ರಿವಿಕ್ರಮಪಂಡಿತಾಚಾರ್ಯರ ‘ವಾಯುಸ್ತುತಿ’ಯಲ್ಲದೆ ‘ನೃಸಿಂಹ ಸ್ತುತಿ’ಯನ್ನೂ ಅನುವಾದಿಸಿದ ವಿಷಯ ತಿಳಿಸಿ ಅದರ ಒಂದು ಪ್ರತಿಯನ್ನು ಗೋಪೀನಾಥರಿಗೆ ಕೊಟ್ಟೆ. ಸಮ್ಮೇಲನ ಮುಗಿದ ಮೇಲೆ ನಾನು ಮಿನಿಯಾಪೊಲಿಸ್‌ಗೆ ನನ್ನ ಮಗನ ಬಳಿಯಲ್ಲಿರಲು ಹೋದೆ. ಗೋಪೀನಾಥರು ನನ್ನನ್ನು ಸಂಪರ್ಕಿಸಿದರು, ಆಮಂತ್ರಿಸಿದರು, ಏರ್‌ಟಿಕೆಟ್‌ ಕಳಿಸಿದರು. ವಾಯುಸ್ತುತಿ, ನೃಸಿಂಹಸ್ತುತಿಯ ಬಗ್ಗೆ, ಬೇಂದ್ರೆಯವರ ಕಾವ್ಯದ ಬಗ್ಗೆ ಭಾಷಣ ಏರ್ಪಡಿಸಿದರು. ಬೇಂದ್ರೆಯವರ ಕಾವ್ಯದ ಬಗ್ಗೆ ಮಾತಾಡಿದ ಮೇಲೆ ನನಗೆ ಇನ್ನೊಂದು ಪ್ರೀತಿಯ ವಿಷಯವಿದೆ, ಅದು ಯೋಗ ಹಾಗೂ ನಿಸರ್ಗೋಪಚಾರ, ಇನ್ನೊಮ್ಮೆ ಅವಕಾಶವಿದ್ದಾಗ ಮಾತಾಡುವೆ ಅಂದೆ. ಯೋಗ ಅಂದೊಡನೆ ಅಮೇರಿಕೆಯಲ್ಲಿ ಎಲ್ಲಿಲ್ಲದ ಪ್ರೀತಿ. ರಾತ್ರಿ ತಡವಾಗಿದ್ದರೂ ನನಗೆ ಮಾತಾಡಲು ಹೇಳಿದರು. ನಾಲ್ಕು ದಿನ ಅವರ ಮನೆಯಲ್ಲಿ ಯೋಗಶಿಬಿರ ನಡೆಸಲು ಅನುಕೂಲ ಮಾಡಿದರು. ಅಂದಿನಿಂದ ಬೇಂದ್ರೆ ಹಾಗೂ ಯೋಗದ ಅನುಬಂಧ ಶುರುವಾಯಿತು.

ಬೀದರ್‌ನಲ್ಲೂ ಹಾಗೇ ಆಯಿತು. ಬೇಂದ್ರೆಯವರ ಬಗ್ಗೆ ಭಾಷಣವಾದ ಮೇಲೆ ಯೋಗದ ಬಗ್ಗೆ ಕೂಡ ಮಾತಾಡಲು ಡಾ। ಜಗನ್ನಾಥ ಹೆಬ್ಬಾಳೆ ಅವಕಾಶ ಕಲ್ಪಿಸಿಕೊಟ್ಟರು. ಮರುದಿನ(ಸೋಮವಾರ) ಮುಂಜಾನೆ ಕರ್ನಾಟಕ ಸಂಘದಲ್ಲೇ ಯೋಗಾಸಕ್ತರನ್ನು ಕಲೆಹಾಕಿದರು. ‘ನಿಮಗೆ ಆಸಕ್ತಿ ಇದ್ದರೆ, ನನ್ನ ಬಳಿ ಸಮಯವಿದೆ’ ಎಂದಿದ್ದೆ. ಆಸಕ್ತರಿಗೆ ಒಂದು ಲಿಟರ್‌ (ಸ್ವಲ್ಪಲವಣ ಮಿಶ್ರಿತ) ಬೆಚ್ಚನೆಯ ನೀರು ಹಾಗೂ ಹಾಸಲು ಒಂದು ಜಮಖಾನೆ ತರಲು ವಿನಂತಿಸಿದ್ದೆ. ಕರ್ನಾಟಕ ಸಂಘದ ಸಭಾಗೃಹ ಪ್ರಶಸ್ಥವಾಗಿತ್ತು. ಅದರ ಬದಿಯಲ್ಲೇ ದೊಡ್ಡ ಟೆರೇಸ್‌ ಇತ್ತು. ಅಲ್ಲಿ ಶುದ್ಧಿಕ್ರಿಯೆ (ಜಲನೇತಿ, ಜಲಧೌತಿ) ಕಲಿಸಲು ತೆರೆದ ಜಾಗೆ ಇತ್ತು. ನಾನು ಭಾಷಣದೊಂದಿಗೆ ಕ್ರಿಯೆ ಮಾಡಲು ಕಲಿಸುತ್ತಿದ್ದೆ. ಕನಿಷ್ಠ ದಿನಕ್ಕೆ 15ರಿಂದ 20 ನಿಮಿಷ ಯೋಗಾಭ್ಯಾಸ ಪ್ರತಿಯಾಬ್ಬರೂ ಮಾಡಲೇಬೇಕು ಎಂದು ಹೇಳಿದೆ.

ಒಂದು ದಿನದ ಯೋಗಾಭ್ಯಾಸದಲ್ಲಿ ಇದರಲ್ಲಿ ಮೂರು ಭಾಗ ಇದೆ. 1) ಶುದ್ಧಿಕ್ರಿಯೆ, 2) ಆಸನ, 3) ಪ್ರಾಣಾಯಾಮ. 15ರಿಂದ 20 ನಿಮಿಷ ಸಾಕು.

ಶುದ್ಧಿಕ್ರಿಯೆಗಳು ಆರು ಇವೆ ಅದರಲ್ಲಿ ಜಲನೇತಿ, ಜಲಧೌತಿ, ತ್ರಾಟಕ ಈ ಮೂರನ್ನಾದರೂ ಮಾಡಲೇಬೇಕೆಂದು ಹೇಳಿದೆ.(ನಾಲ್ಕನೆಯದು ‘ಕಪಾಲಭಾತಿ’ , ಅದನ್ನು ಪ್ರಣಾಯಾಮದೊಂದಿಗೆ ಮಾಡಬೇಕು)

(1)ಜಲನೇತಿ: ಇದನ್ನು ನೇತಿ-ಪಾಟ್‌ ಬಳಸಿ, ತೀರ್ಥದ ಗಿಂಡಿಯಿಂದ, ಕಮಂಡಲದಿಂದ, ಮಂದಗತಿಯಲ್ಲಿ ನೀರು ಹರಿಯುವ ಪೈಪ್‌ ಬಳಸಿ ಕೂಡ ಮಾಡಬಹುದು. ಎಚ್ಚರಿಕೆ: ಬಾಯಿತೆರೆದಿಡಬೇಕು, ಬಾಯಿಯಿಂದಲೇ ಉಸಿರಾಡಿಸಬೇಕು. ‘‘ವಿಗತಘನನಿಶೀಥೆ ಪ್ರತರುತ್ಥಾಯ ನಿತ್ಯಂ । ಪಿಬತಿ ಖಲು ನರೋಯೋ ಘ್ರಾಣರಂಧ್ರೇಣ ವಾರೀಂ । ಸ್‌ ಭವತಿ ಮತಿಪೂರ್ಣಃ ಚಕ್ಷುಷಾ ತಾರ್ಕ್ಷ್ಯತುಲ್ಯೋ । ವಲಿಪಲಿತವಿಹೀನಃ ಸರ್ವರೋಗೈರ್ವಿಮುಕ್ತಃ ।।’’ ಶ್ಲೋಕ ಹೇಳಿ ವಿವರಿಸಿದೆ. ‘ಬಿಳಿಗ್ಗೆ ಎದ್ದು ಮೂಗಿನ ರಂಧ್ರದಿಂದ ನೀರು ಕುಡಿದವನ ಬುದ್ಧಿ ಚುರುಕಾಗುತ್ತದೆ, ಕಣ್ಣು ತೀಕ್ಷ್ಣವಾಗುತ್ತವೆ, ತ್ವಚೆ ಸುಕ್ಕುವುದಿಲ್ಲ, ಅಕಾಲಿಕವಾಗಿ ಕೂದಲು ನೆರೆಯುವುದಿಲ್ಲ, ಎಲ್ಲ ರೋಗಗಳಿಂದ ಮುಕ್ತಿ ದೊರೆಯುತ್ತದೆ’. ಅಷ್ಟೇ ಅಲ್ಲ ಸೈನಸ್‌ ಬಾಧೆ ತೊಲಗುತ್ತದೆ, ಶೀತದಿಂದ ಕಟ್ಟಿದ ಮೂಗು ಉಪಶಮನ ಪಡೆಯುತ್ತದೆ ಎಂಬುದು ಅನುಭವಕ್ಕೆ ಬರುತ್ತದೆ. ತಲೆಶೂಲೆ ಹಾಗೂ ಮೈಗ್ರೇನಿಗೆ ಇದು ಉಪಶಮನಕಾರಿ.

(2) ಜಲಧೌತಿ: ಲವಣಮಿಶ್ರಿತ ಬೆಚ್ಚಗಿನ ನೀರು (1ರಿಂದ 3 ಲಿಟರ್‌) ಕುಡಿದು ವಾಂತಿ ಮಾಡಿಕೊಳ್ಳುವುದು. ಹದಿನೈದು ದಿನಕ್ಕೆ ಒಮ್ಮೆ ಮಾಡಿದರೆ ಸಾಕು. ಎದೆಯುರಿತ(ಎಸಿಡಿಟಿ) ಇದ್ದಾಗ 3-4 ದಿನ ಬಿಟ್ಟೂಬಿಡದೆ ಮಾಡಬೇಕು. ಇದರಲ್ಲಿ ಎರಡು ಪ್ರಕಾರ. ಅ) ಕುಂಜಾಲ ಧೌತಿ , ಬೆಳಿಗ್ಗೆ ಹೊಟ್ಟೇ ಖಾಲಿ ಇದ್ದಾಗ ಮಾಡುವುದು. ಬ) ವ್ಯಾಘ್ರ ಧೌತಿ: ಉಟವಾದ ಮೇಲೆ ಅಸುಖ ಎನಿಸಿದರೆ, ತಿನ್ನಬಾರದ್ದನ್ನು ತಿಂದು ಕಸವಿಸಿಯಾಗುತ್ತಿದ್ದರೆ ನೀರು ಕುಡಿದು ವಾಂತಿ ಮಾಡಿಕೊಳ್ಳುವುದು. (ಬೆಕ್ಕು, ಹುಲಿ ಹೀಗೆ ವಾಂತಿ ಮಾಡಿಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳುತ್ತವೆ.)

(3) ತ್ರಾಟಕ. ಕಣ್ಣು ದಿಟ್ಟಿಸಿ ದೀಪ ನೋಡುವುದು ಅಥವಾ ಮುಖಕ್ಕೆ ನೇರವಾಗಿ ಕೈ ಚಾಚಿ ಹೆಬ್ಬೆರಳ ಉಗುರನ್ನು ದಿಟ್ಟಿಸುವುದು. ಇದರಿಂದ ಕಣ್ಣಿಗೆ ಒಳ್ಳೆಯದು. (ಮಲ್ಲಾಡಿಹಳ್ಳಿ ಸ್ವಾಮಿಗಳು 105 ವರ್ಷವಾಗಿದ್ದರೂ ಕನ್ನಡಕ ಧರಿಸಿರಲಿಲ್ಲ, ಅವರಿಗೆ ಕೆಟರ್ಯಾಕ್ಟ್‌ ಬಾಧೆ ಇರಲಿಲ್ಲ. ಅದಕ್ಕೆ ಅವರು ತ್ರಾಟಕ ಕಾರಣ ಎನ್ನುತ್ತಿದ್ದರು.)

ಇನ್ನು ಒಂದು ದಿನದಲ್ಲಿ ಮುಖ್ಯ ಆಸನಗಳನ್ನು ಕಲಿಸಲು ಸಾಧ್ಯವಿಲ್ಲ. ಅದಕ್ಕೆ ಏಳು ದಿನಗಳ ಶಿಬಿರ ಬೇಕು. ಒಂದು ದಿನದಲ್ಲಿ ಸೂರ್ಯ ನಮಸ್ಕಾರ ಕಲಿಸಬಹುದು. ಇದರಲ್ಲಿ ಹತ್ತು ಆಸನಗಳಿವೆ. ಇದು ಮಾಸ್ಟರ್‌-ಕೀ ಇದ್ದಂತೆ. ಮಲಾಡಿಹಳ್ಳಿಯ ಯೋಗಾಚರ್ಯ ರಾಘವೇಂದ್ರಸ್ವಾಮಿಗಳು ಸೂರ್ಯ ನಮಸ್ಕಾರದ ಮೇಲೆ ಒತ್ತುಕೊಡುತ್ತಿದ್ದರು. ಮಕ್ಕಳು ಸೂರ್ಯನಮಸ್ಕಾರ ಹಾಕದೇ ಇದ್ದ ದಿನ ಅವರಿಗೆ ಮಧ್ಯಾಹ್ನದ ಉಟ ಕೊಡಬೇಡಿ ಎಂದು ತಾಯಂದಿರಿಗೆ ಹೇಳುತ್ತಿದ್ದರು. ಎಲ್ಲರೂ ಹನ್ನೆರಡು ಸೂರ್ಯನಮಸ್ಕಾರ ಕಡ್ಡಾಯವಾಗಿ ಹಾಕಲೇ ಬೇಕು. ತರುಣರು 24 ರಿಂದ 48 ಸಲ, ಯಥಾಶಕ್ತಿ ಮಾಡಬೇಕು. (ನಾನು ಯುವಕನಾಗಿದ್ದಾಗ ಪ್ರತಿದಿನ 108 ಸೂರ್ಯ ನಮಸ್ಕಾರ ಹಾಕುತ್ತಿದ್ದೆ ಎಂದು ಮಲಾಡಿಹಳ್ಳಿಯ ಸ್ವಾಮಿಗಳಿಗೆ ಹೇಳಿದಾಗ ಅವರು ಹೇಳಿದ್ದರು, ‘ನಾನು ತರುಣನಿದ್ದಾಗ 1008 ಸೂರ್ಯನಮಸ್ಕಾರ ಹಾಕುತ್ತಿದ್ದೆ’ ಎಂದು).

ಪ್ರಾಣಾಯಾಮ : ಇನ್ನು ಮೂರು ಸುಲಭವಾದ ಪ್ರಾಣಾಯಮ ಮಾಡಬೇಕು. ಹಿಂದೆ ಪ್ರಾಣಾಯಾಮ ಮಾಡುವುದನ್ನು ಸುಲಭವಾಗಿ ಕಲಿಸುತ್ತಿದ್ದಿಲ್ಲ. ಸರಿ ಮಾಡಿದಾಗ ಅದರಿಂದ ಲಾಭಗಳು ಇದ್ದಷ್ಟೇ ತಪ್ಪು ಮಾಡಿದರೆ ಹಾನಿಯೂ ಉಂಟಾಗುವ ಭಯವೂ ಇತ್ತು. ಅದನ್ನು ಸುಲಭಗೋಳಿಸಿ ಜನಸಾಮಾನ್ಯರಿಗೆ ತಲುಪುವಂತೆ ಮಾಡಿದವರು ಸ್ವಾಮಿ ರಾಮವೇವ. ಅವರು ಕುಂಭಕರಹಿತ ಪ್ರಾಣಾಯಾಮ ಮಾಡಲು ಹೇಳುತ್ತಾರೆ. ಅದು ಮಕ್ಕಳಿಗೆ ಮೂರುಗಾಲಿಯ ಸೈಕಲ್‌ ಕೊಟ್ಟಂತೆ ಸುಲಭ ಮತ್ತು ಸುರಕ್ಷಿತ.

ಸ್ವಾಮಿ ರಾಮದೇವರು 7 ಬಗೆಯ ಪ್ರಣಾಯಾಮ ಶಿಫಾರಸು ಮಾಡುತ್ತಾರೆ. ಚಿಕ್ಕ ಮಕ್ಕಳು, ಮುದುಕರು, ಮಹಿಳೆಯರು ಕೂಡ ಮಾಡಬಹುದು. ಅದರಲ್ಲಿ, ಒದು ದಿನದ ಶಿಬಿರದಲ್ಲಿ ಮೂರನ್ನು ಕಲಿಸಬಹುದಾಗಿದೆ. ಅವೆಂದರೆ 1) ಕಪಾಲಭಾತಿ (ಹಾಗೆ ನೋಡಿದರೆ ಇದೂ ಒಂದು ಶುದ್ಧಿಕ್ರಿಯೆ. ಇದಕ್ಕೆ ಪ್ರಾಣಾಯಮದ ದರ್ಜೆಯನ್ನು ರಾಮದೇವ ನೀಡಿದ್ದಾರೆ. ಕೆಲವು ಸಂಸ್ಕೃತ ಗ್ರಂಥಗಳಲ್ಲಿ ಇದನ್ನು ಪ್ರಣಾಯಮದ ಅವಿಭಾಜ್ಯ ಅಂಗವೆಂದೇ ಬಣ್ಣಿಸಿದ್ದಾರೆ. (ಇದರಿಂದ ಯಕೃತ್ತು, ಗಾಲ್‌ ಬ್ಲಾಡರ್‌, ಕರುಳಿಗೆ ಸಂಬಧಿಸಿದ ಕಾಯಿಲೆ ಬರುವುದಿಲ್ಲ. ಮಲಬದ್ಧತೆಯೂ ಆಗುವುದಿಲ್ಲ.) 2) ಅನುಲೋಮ-ವಿಲೋಮ ಪ್ರಾಣಾಯಾಮ. (ರಕ್ತಶುದ್ಧಗೊಳ್ಳುತ್ತದೆ. ಹೃದಯದ ಜಾಡ್ಯಗಳು ಇದರಿಂದ ಬರುವುದಿಲ್ಲ.) 3) ಭ್ರಾಮರೀ ಪ್ರಾಣಾಯಮ.(ಇದು ತಲೆಗೆ ಒಳ್ಳೆಯದು. ಮಿದುಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಇದು ಪ್ರತಿಬಂಧಕವಾಗಿದೆ.)

ಒಬ್ಬ ನಿವೃತ್ತ ಇಂಗ್ಲಿಷ್‌ ಪ್ರಾಧ್ಯಾಪಕರು ಸೂರ್ಯ ನಮಸ್ಕಾರ ಹಾಕುವ ಸ್ಥಿತಿಯಲ್ಲಿ ಇರಲಿಲ್ಲ. ಅವರಿಗೆ ಶುದ್ಧಿಕ್ರಿಯೆ ಮತ್ತು ಪ್ರಾಣಾಯಮ ಮಾಡಲು ಹೇಳಿದೆ. ಅವರಿಗೆ ಅದು ಒಂದು ಹೊಸ ಅನುಭವ ನೀಡಿತ್ತು.

ಬೀದರದಲ್ಲಿಯ ಈ ಅನುಭವ ನನಗೆ ‘ಒಂದು ದಿನದ ಯೋಗ ಶಿಬಿರ ಅರ್ಥಾತ್‌ ಯೋಗ ಸಾಕ್ಷರತಾ ಅಭಿಯಾನ’ ಕೈಕೊಳ್ಳಲು, ಅದಕ್ಕೆ ಒಂದು ಒಂದು ಸ್ವರೂಪ ನೀಡಲು ಸ್ಫೂರ್ತಿಯನ್ನು ನೀಡಿತ್ತು.


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X