ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವೇಕಾನಂದರಿಂದ ಹಲವಾರು ಪತ್ರ ಅಳಸಿಂಗರಿಗೆ

By Super
|
Google Oneindia Kannada News

ವಿವೇಕಾನಂದರಿಂದ ಹಲವಾರು ಪತ್ರ ಅಳಸಿಂಗರಿಗೆ ಶಿಷ್ಯ ಅಳಸಿಂಗ ಪೆರುಮಾಳ್‌ ಮತ್ತು ಗುರು ವಿವೇಕಾನಂದರ ಆತ್ಯೀಯತೆ ಮತ್ತು ನಂಟು ವಿವರಿಸುವ ಬರಹವನ್ನು ಕಳೆದ ವಾರ ಓದಿರುವಿರಿ. ಅದರ ಮುಂದಿನ ಭಾಗ ಈಗ ನಿಮ್ಮ ಮುಂದೆ.

ಭಾಗ ಮೂರು

ವಿವೇಕಾನಂದರ ಶಿಷ್ಯ ಅಳಸಿಂಗ ಪೆರುಮಾಳ್‌ ಮತ್ತು ಅವರ ಮಿತ್ರರೆಲ್ಲ ಸೇರಿ ಧನ ಸಂಗ್ರಹದ ಕಾರ್ಯದಲ್ಲಿ ತೊಡಗಿದ್ದರು. ವಿವೇಕಾನಂದರು ರಾಜಪುತಾನಾ ಸಂಸ್ಥಾನಗಳಲ್ಲಿ ಸಂಚರಿಸುತ್ತಿದ್ದಾಗ ಅಲ್ಲಿಯ ಖೇತ್ರಿ ಸಂಸ್ಥಾನದ ಮಹಾರಾಜ ಅಜಿತಸಿಂಗ್‌ ಸ್ವಾಮಿಗಳ ಆಪ್ತಶಿಷ್ಯನಾಗಿದ್ದ. ಅವನಿಗೆ ಮಕ್ಕಳಿರಲಿಲ್ಲ. ಸ್ವಾಮಿಗಳ ಅನುಗ್ರಹಕ್ಕಾಗಿ ಬೇಡಿಕೊಂಡ. ಅವನಿಗೆ ಪುತ್ರಭಾಗ್ಯ ದೊರೆಯಲಿ ಎಂದು ಸ್ವಾಮಿಗಳು ಹರಸಿದ್ದರು. ಆ ಹರಕೆ

ಫಲಿಸಿತ್ತು. ರಾಜನಿಗೆ ಉತ್ತರಾಧಿಕಾರಿಯಾಗಲು ಪುತ್ರನೊಬ್ಬ ಜನಿಸಿದ್ದ. ತನ್ನ ಮಗನ ನಾಮಕರಣಕ್ಕೆ ಸ್ವಾಮಿಗಳು ಉಪಸ್ಥಿತರಿರಬೇಕು ಎಂಬ ಹೆಬ್ಬಯಕೆ ರಾಜನಿಗೆ ಉಂಟಾಯಿತು. ತನ್ನ ಆಪ್ತ ಕಾರ್ಯದರ್ಶಿಯಾದ ಜಗಮೋಹನಲಾಲ್‌ನನ್ನು ಮದರಾಸಿಗೆ ಆಮಂತ್ರಣದೊಂದಿಗೆ ಕಳಿಸಿದ.

ಇತ್ತ ಸ್ವಾಮಿಗಳ ವಿದೇಶ ಪ್ರಯಾಣದ ತಯಾರಿ ಭರ್ಜರಿಯಿಂದ ನಡೆದಿತ್ತು. ವಿವೇಕಾನಂದರಿಗೆ ಖೇತ್ರಿಗೆ ಹೋಗಿ, ಮದ್ರಾಸಿಗೆ ಮರಳಿ ಬಂದು, ಮತ್ತೆ ಮುಂಬೈಗೆ ಹೋಗಲು ಅವಕಾಶವಿರಲಿಲ್ಲ. ಸ್ವಾಮಿಗಳಿಗೆ ಅಲ್ಲಿಗೆ ಹೋಗುವ ಮನಸ್ಸು ಇತ್ತು.

ಖೇತ್ರಿಯ ದೊರೆಗೆ ನಿರಾಶೆ ಮಾಡುವ ಮನಸ್ಸು ಅವರಿಗೆ ಇರಲಿಲ್ಲ. ಇದನ್ನು ಅಳಸಿಂಗರು, ಸ್ವಾಮಿಗಳಿಗೆ ಖೇತ್ರಿಗೆ ಹೋಗಲು, ಮತ್ತೆ ಅಲ್ಲಿಂದ ನೇರವಾಗಿ ಮುಂಬೈಗೆ ಬರಲು ಸೂಚಿಸಿದರು. ತಾವು ಅವರ ಹಾಸಿಗೆ, ಪೆಟ್ಟಿಗೆ , ಪುಸ್ತಕಗಳನ್ನು ಮುಂಬೈಗೆ ತರುವುದಾಗಿಯೂ, ಅವರ ಪ್ರಯಾಣದ ಟಿಕೆಟ್‌ ಪಡೆಯುವುದಾಗಿಯೂ ಭರವಸೆ ನೀಡಿದರು. ಆದರೆ ನಿಶ್ಚಿತ ದಿನಕ್ಕಿಂತ ಒಂದೆರಡು ದಿನ ಮೊದಲೇ ಮುಂಬೈಗೆ ಆಗಮಿಸಲು ಕೇಳಿಕೊಂಡರು.

ಸ್ವಾಮಿಗಳು ಖೇತ್ರಿಗೆ ಹೋಗಿ ಸಮಾರಂಭದಲ್ಲಿ ಭಾಗವಹಿಸಿ ಅಲ್ಲಿಂದ ಪತ್ರ ಬರೆದು ತಾವು ಎರಡು ದಿನ ಮೊದಲೇ ಮುಂಬೈಗೆ ತಲುಪುವುದಾಗಿ ಅಳಸಿಂಗರಿಗೆ ಪತ್ರ ಬರೆದು ತಿಳಿಸಿದರು. ಮಹಾರಾಜ ಸ್ವಾಮಿಗಳನ್ನು ಬೀಳ್ಕೊಡಲು ಜೈಪುರದ ವರೆಗೆ ಬಂದ. ನಂತರ ತನ್ನ ಆಪ್ತ-ಕಾರ್ಯದರ್ಶಿ ಜಗಮೋಹನಲಾಲನನ್ನು ಮುಂಬೈ ವರೆಗೆ ಅವರ ಜೊತೆಯಲ್ಲಿ ಕಳಿಸಿದ. ಇತ್ತ ಅಳಸಿಂಗರು ಸ್ವಾಮಿಗಳ ಸಾಮಾನುಗಳನ್ನು ಮುಂಬೈಗೆ ಒಯ್ಯುವುದರ ಜೊತೆಗೆ ಅವರ ಪ್ರಯಾಣದ ವ್ಯವಸ್ಥೆಯನ್ನು ಮಾಡಿದರು. 'ಪೆನಿಸ್ಯುಲಾರ್‌ ಅಂಡ್‌ ಓರಿಯಂಟ್‌ ಕಂಪನಿ'ಯ ಆಫೀಸಿಗೆ ಹೋಗಿ ಹಡಗಿನ ಟಿಕೆಟ್‌ ಕೊಂಡು ಅವರ ಸ್ಥಳ ಕಾಯ್ದಿರಿಸಿದರು.

ಖೇತ್ರಿ ಮಹಾರಾಜನೇ ವಿವೇಕಾನಂದರ ಪ್ರಯಾಣದ ವೆಚ್ಚ ಭರಿಸಿದನೆಂದು ಬಹಳ ಜನರಲ್ಲಿ ತಪ್ಪು ಕಲ್ಪನೆ ಇದೆ. ಅವನು ಪ್ರಯಾಣಕ್ಕಾಗಿ ಏನೂ ಹಣ ಕೊಡಲಿಲ್ಲ. ಆದರೆ ವಿಶ್ವ ಸಮ್ಮೇಳನದಲ್ಲಿ ಸ್ವಾಮಿಗಳು ಧರಿಸಿದ್ದ ನಿಲುವಂಗಿ ಮತ್ತು ಪೇಟಾಗಳನ್ನು ಅವರಿಗೆ ಕಾಣಿಕೆಯಾಗಿ ಕೊಟ್ಟಿದ್ದ. ಅವರು ರಾಜಗುರುಗಳ ಪೋಷಾಕು ಧರಿಸಿ ವಿಶ್ವಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ಬೇಡಿಕೊಂಡಿದ್ದ.

ಸನ್ಯಾಸಿ ನರೇಂದ್ರರನ್ನು ಅವನು 'ಸ್ವಾಮಿ ವಿವೇಕಾನಂದ' ಎಂದು ಸಂಬೋಧಿಸಿ ಮೊದಲಿಗೆ ಕರೆದ ಹೆಗ್ಗಳಿಕೆ ಅವನದು. ನಂತರ ಆ ಹೆಸರೇ ಜಗದ್ವಿಖ್ಯಾತವಾಯಿತು, ಶಾಶ್ವತವಾಯಿತು.

ಪ್ರಯಾಣದ ದಿನ ಬಂತು. 1893, ಮೇ 31 ರಂದು ವಿವೇಕಾನಂದರು ತಮ್ಮ ಗುರು ಶ್ರೀ ರಾಮಕೃಷ್ಣ ಪರಮಹಂಸರನ್ನು ನೆನೆಯುತ್ತ, ಜಗನ್ಮಾತೆಯ ಲೀಲಾ ವಿಲಾಸಗಳನ್ನು ಸ್ಮರಿಸುತ್ತ, ಕಾಲಟಿಯಿಂದ ಭಾರತದ ದಿಗ್ವಿಜಯಕ್ಕೆ ಹೊರಟ ಶಂಕರಾಚಾರ್ಯರಂತೆ, ವಿಶ್ವ ವಿಜಯಕ್ಕಾಗಿ ವಿಶ್ವ ಪರ್ಯಟನೆಗೆ ಹೊರಟಿದ್ದರು. ಪರಿವ್ರಾಜಕ ಸನ್ಯಾಸಿಯಾಗಿ ಕೇವಲ ಒಂದು ದಂಡ. ಕಮಂಡಲ, ಒಂದೆರಡು ಬಟ್ಟೆ, ಹಲವಾರು ಪುಸ್ತಕ ಇವಿಷ್ಟೇ ತಮ್ಮ ಆಸ್ತಿಯಾಗಿ ಹೊಂದಿದ್ದ ವಿವೇಕಾನಂದರು ಈಗ ಸಮುದ್ರಯಾನದಲ್ಲಿ ಎಚ್ಚರದಿಂದ ಕಾಯ್ದುಕೊಳ್ಳಬೇಕಾದ

ಹಾಸಿಗೆ, ಪೆಟ್ಟಿಗೆ, ಬಟ್ಟೆಬರೆ ಮತ್ತು ಚೀಲಗಳನ್ನು ಅಳಸಿಂಗ ತಂದುಕೊಟ್ಟದ್ದನ್ನು ಕಂಡು ವಿಸ್ಮಿತರಾದರು. ಅಳಸಿಂಗ ಗುರುಗಳ ಟಿಕೆಟ್‌ನ್ನೂ ಜೊತೆಗೆ ಖರ್ಚಿಗೆ ಹಣ 187 ಪೌಂಡ್‌ಗಳನ್ನೂ ಕೊಟ್ಟರು. ಅದರಲ್ಲಿ ಒಂಭತ್ತು ಪೌಂಡ್‌ ಚಿಲ್ಲರೆ ನಾಣ್ಯಗಳಿದ್ದವು. ಹರ್ಷಪುಲಕಿತರಾದ ಸ್ವಾಮಿಗಳ ಕಂಠ ತುಂಬಿ ಬಂತು. ಅವರ ಬಾಯಿಯಿಂದ ಶಬ್ದಗಳು ಹೊರಡಲಿಲ್ಲ. ಅವರು ತ್ಯಾಗಭೂಮಿಯಿಂದ ಭೋಗಭೂಮಿಯ ಕಡೆಗೆ ಹೊರಟಿದ್ದರು. ಗುರು ಶಿಷ್ಯ ಇಬ್ಬರೂ ಮೌನದಿಂದಲೇ ಮಾತಾಡಿದರು. ಅದೇ ಹೆಚ್ಚು ಅರ್ಥಪೂರ್ಣವಾಗಿತ್ತು. ಹಡಗವನ್ನೇರುವ ಮೊದಲು ಅಳಸಿಂಗರು ಗುರುಗಳಿಗೆ ದೀರ್ಘದಂಡ ಸಾಷ್ಟಾಂಗ ನಮಸ್ಕಾರ ಮಾಡಿದರು.

ತಮಗಾಗಿ ಇಷ್ಟೆಲ್ಲ ಮಾಡಿದ ಶಿಷ್ಯನನ್ನು ಸ್ವಾಮಿಗಳು ಮೇಲಕ್ಕೆಬ್ಬಿಸಿ ತಮ್ಮ ವಿಶಾಲ ಬಾಹುಗಳಿಂದ ಅಪ್ಪಿಕೊಂಡರು. ರಾಮಾಯಣದಲ್ಲಿ ಶಿಷ್ಯ ಹನುಮಂತನನ್ನು ಕೃತಜ್ಞತೆಯಿಂದ ಆಲಿಂಗಿಸಿದ ಶ್ರೀರಾಮನ ಚಿತ್ರ ಪ್ರೇಕ್ಷಕರ ನೆನಪಿಗೆ ಬಂದಿರಬೇಕು. ವಿವೇಕಾನಂದರ ಸೇವೆಯನ್ನು ಹನುಮಂತನಂತೆ ಅಳಸಿಂಗ ಮಾಡಿದ್ದರು, ಇದರಲ್ಲಿ ಸಂಶಯವಿಲ್ಲ.

ವಿವೇಕಾನಂದರು ತಮ್ಮ ಪ್ರಯಾಣದ ತುಂಬ ಹಲವಾರು ಪತ್ರ ಅಳಸಿಂಗರಿಗೆ ಬರೆದರು. ಆ ಪತ್ರಗಳೆಲ್ಲ ದೊರೆತಿವೆ, ಆದರೆ ಅಳಸಿಂಗರು ವಿವೇಕಾನಂದರಿಗೆ ಬರೆದ ಪತ್ರಗಳು ದೊರೆತಿಲ್ಲ. ಹಡಗು ಮೊದಲು ಕೋಲಂಬೋ ತಲುಪಿತು. ಸ್ವಾಮಿಗಳು ಅಲ್ಲಿ ಇಳಿದು ಅಲ್ಲಿಯ ಸುಪ್ರಸಿದ್ಧ ಬೌದ್ಧ ದೇವಾಲಯ ಸಂದರ್ಶಿಸಿದರು. ಅನಂತಶಯನ ನಾರಾಯಣನಂತೆ ಮಲಗಿದ ಬುದ್ಧನ ಮೂರ್ತಿಗೆ ನಮಸ್ಕರಿಸಿದರು.

ಅವರ ಹಡಗು ಸಿಂಗಾಪೂರ್‌ ಮುಖಾಂತರ ಹಾಂಕಾಂಗ್‌ ತಲುಪಿತು. ಅಲ್ಲಿದ್ದ ಚೀಣರ ಬುದ್ಧ ದೇವಾಲಯ ಸಂದರ್ಶಿಸಿದರು. ನಂತರ ಜಪಾನ್‌ ತಲುಪಿದರು. ಅಲ್ಲಿಯ ಜನರ ದೇಶಭಕ್ತಿಯನ್ನು, ಕಾರ್ಯಶೀಲತೆಯನ್ನು ಮೆಚ್ಚಿ, ನಮ್ಮ ದೇಶದ ದುಃಸ್ಥಿತಿಯನ್ನು ನೆನೆದು ಸುದೀರ್ಘ ಪತ್ರವನ್ನು ಅಳಸಿಂಗರಿಗೆ ಬರೆದರು.

ಅದರಲ್ಲಿಯ ಒಂದು ಸಾಲು ಹೀಗಿದೆ. '' ನಮ್ಮ ದೇಶದ ಹಲವಾರು ಜನ ಯುವಕರು ಪ್ರತಿ ವರ್ಷ ಜಪಾನಿಗೆ ಭೇಟಿ ಕೊಡಬೇಕೆಂಬುದು ನನ್ನ ಅಪೇಕ್ಷೆ. ಉತ್ತಮವೂ ಭವ್ಯವೂ ಆದ ಆದರ್ಶಗಳಿಗೆ ಭಾರತವು ತೌರೂರು ಎಂದು ಜಪಾನೀ ಜನರು ಭಾವಿಸುತ್ತಾರೆ. ಆದರೆ ನೀವೇನಾಗಿದ್ದೀರಿ? ಒಣಹರಟೆಯಲ್ಲಿ ಜೀವನವನ್ನೆಲ್ಲ ಕಳೆಯುತ್ತಿದ್ದೀರಿ. ಬರಿ ಮಾತಾಳಿಗಳು ನೀವು. ಬನ್ನಿ, ಈ ಜನಾಂಗ ನೋಡಿ, ನಿಮ್ಮ ದೇಶಕ್ಕೆ ಹೋಗಿ ನಾಚಿಕೆಯಿಂದ ತಲೆತಗ್ಗಿಸಿರಿ.... ನಿಮ್ಮ ಜೀವನದ ಗುರಿ ಏನು, ಗುಮಾಸ್ತಿಕೆ ಅಥವಾ ವಕೀಲಿಕೆ. ... ಮುಂದೆ ಬನ್ನಿರಿ , ಪುರುಷ ಸಿಂಹರಾಗಿರಿ... ಧೀರರಾಗಿರಿ.. ಸಣ್ಣ ಬಿಲದಿಂದ ಹೊರಬನ್ನಿರಿ. ಇತರ ಜನಾಂಗಗಳು ಹೇಗೆ ಮುಂದುವರಿಯುತ್ತಿದ್ದಾರೆ ಎಂಬುದನ್ನು ನೋಡಿರಿ... ಭರತ ಮಾತೆಗೆ ಕನಿಷ್ಠವೆಂದರೆ ಒಂದು ಸಾವಿರ ಯುವಕರ ಬಲಿಯಾಗಬೇಕು... ಸದ್ದು ಗದ್ದಲವಿಲ್ಲದೆ, ಶಾಂತಿಯಿಂದ, ಎಡೆಬಿಡದ ಕೆಲಸದಲ್ಲಿ ಮಗ್ನರಾಗಿರಿ... ಪತ್ರಿಕೆಗಳಲ್ಲಿಯ ಪ್ರಚಾರದ ಭ್ರಾಂತಿ ಬೇಡ. ಹೆಸರಿಗಾಗಿ ಕೀರ್ತಿಗಾಗಿ ಆಸೆಪಡಬೇಡಿರಿ. ಇದನ್ನು ಎಂದೆಂದಿಗೂ ನೆನಪಿನಲ್ಲಿಡಿರಿ.''

ಅಳಸಿಂಗರು ವಿವೇಕಾನಂದರ ಪತ್ರಗಳಲ್ಲಿ ಕಂಡ ಸಂದೇಶ 'ಸೇವೆ, ಸೇವೆ, ಸೇವೆ; ಕಾರ್ಯ, ಕಾರ್ಯ, ಕಾರ್ಯ'. ವಿವೇಕಾನಂದರು ಕೆನೆಡಾಕ್ಕೆ ಹೋಗಿ ಅಲ್ಲಿಂದ ರೇಲುಮಾರ್ಗ ಹಿಡಿದು ಚಿಕ್ಯಾಗೋ ತಲುಪಿದರಂತೆ. ಅಲ್ಲಿ ನಡೆದ ವಿಶ್ವ ಮೇಳ ಪ್ರತಿದಿನ ಸಂದರ್ಶಿಸಿದರಂತೆ. ಅಲ್ಲಿಂದ ದೀರ್ಘ ಪತ್ರ ಬರೆಯುತ್ತಾರೆ.

ವಿವೇಕಾನಂದರ ಬಳಿಯಿದ್ದ ಹಣ ನೀರಿನಂತೆ ಖರ್ಚಾಯಿತು. ಹಣ ಕರಗಿದಂತೆ ಸ್ವಾಮಿಗಳ ಕನಸುಗಳೂ ಕರಗತೊಡಗಿದವು. ವಿಶ್ವ ಧರ್ಮ ಸಮ್ಮೇಳನದ ಏರ್ಪಾಡೆಲ್ಲ ಮುಗಿದಿತ್ತು. ಅದರಲ್ಲಿ ಭಾಗವಹಿಸುವುದು ಸ್ವಾಮಿಗಳಿಗೆ ಅಸಂಭವವಾಗಿತ್ತು. ಹೊಸ ಪ್ರತಿನಿಧಿಗಳನ್ನು ಸೇರಿಸಿಕೊಳ್ಳುವ ಕಾಲ ಮೀರಿಹೋಗಿತ್ತು. ಥಿಯಾಸೊಫಿ ಸಂಸ್ಥೆಯ ಅಧ್ಯಕ್ಷರನ್ನು ಭೇಟಿಮಾಡಿ ಒಂದು ಪರಿಚಯಪತ್ರವನ್ನು ಬರೆದುಕೊಡಲು ಕೇಳಿದರು. ಆದರೆ ಅಧ್ಯಕ್ಷರು ಸ್ವಾಮಿಗಳಿಗೆ ಥಿಯಾಸೊಫಿ ಸಂಸ್ಥೆಯ ಸದಸ್ಯರಾಗಲು ಪ್ರೇರೇಪಿಸಿದರು. 'ನಿಮ್ಮ ಅಭಿಪ್ರಾಯ ನಮ್ಮ ಅಭಿಪ್ರಾಯ ಹೊಂದಾಣಿಕೆಯಾಗುವುದಿಲ್ಲ, ನಾನು ನಿಮ್ಮ ಸಂಸ್ಥೆ ಹೇಗೆ ಸೇರಲಿ? ಸೇರಲಾರೆ.' ಎಂದಾಗ ಅವರು, 'ನಾನೂ ಯಾವ ಸಹಾಯ ಮಾಡಲಾರೆ' ಎಂದು ಉತ್ತರಿಸಿದ್ದರು. ನಂತರ ಅಲ್ಲಿಂದ ಸ್ವಾಮಿಗಳು ಬೋಸ್ಟನ್‌ಗೆ ತೆರಳಿದರು. ಅಲ್ಲಿಂದ ಒಂದು ಸುದೀರ್ಘ ಪತ್ರವನ್ನು ಅಳಸಿಂಗರಿಗೆ ಬರೆದರು.

ಸ್ವಾಮಿಗಳ ಪತ್ರ ಓದಿ ಅಳಸಿಂಗರಿಗೆ ದಿಗ್ಭ್ರಮೆ ಉಂಟಾಗಿತ್ತು.

ಕಡಿಮೆ ಖರ್ಚಿನ ಊರಾದ ಬಾಸ್ಟನ್‌ಗೆ ಸ್ವಾಮಿಗಳು ಬಂದಿದ್ದರು. ಅಲ್ಲಿಂದ ಮರಳಿ ಚಿಕ್ಯಾಗೋ ತಲುಪಲು ಅವರ ಬಳಿ ಹಣವಿರಲಿಲ್ಲ. ಅಲ್ಲಿಂದ ಬರೆದ ಪತ್ರದಲ್ಲಿ ಅವರು ಹೀಗೆನ್ನುತ್ತಾರೆ, ''ಹಸಿವಿನಿಂದ ಕಷ್ಟಪಡುತ್ತಿದ್ದೇನೆ. ಹಣವೆಲ್ಲ ಖರ್ಚಾಗಿಹೋಗಿದೆ. ಹಿಂದಕ್ಕೆ ಬರಲಾದರೂ ಹಣ ಕಳಿಸು.'' ಈ ಪತ್ರ ಕೇಬಲ್‌ ಮೂಲಕ ಬಂತು. ಸ್ವಾಮಿಗಳ ಅಮೇರಿಕೆಯ ಜೈತ್ರಯಾತ್ರೆಯ ಹೊಂಗನಸು ಕಾಣುತ್ತಿದ್ದ ಶಿಷ್ಯ ಅಳಸಿಂಗರಿಗರು ಈ ಪತ್ರ ಓದಿ ಬಹಳ ದುಃಖಿತರಾದರು.

ಸ್ವಾಮಿಗಳ ವರ್ತಮಾನ ತಿಳಿದು ಅಳಸಿಂಗರು ಕಣ್ಣೀರಿಟ್ಟರು. ಸ್ವಾಮಿಗಳಿಗೆ ಅಮೇರಿಕೆಗೆ ಹೋಗಲು ಹುರಿದುಂಬಿಸಿ ತಾನೇ ಅವರನ್ನು ಕಷ್ಟಕ್ಕೆ ಗುರಿಮಾಡಿದ್ದನ್ನು ನೆನೆದು ಅಳಸಿಂಗರು ಮಮ್ಮಲ ಮರುಗಿದರು. ಕಲ್ಯಾಣ ಕೃಷ್ಣ ಎಂಬ ಸಿರಿವಂತ ಮಿತ್ರರ ಬಳಿ ಸಾವಿರ ರೂಪಾಯಿ ಸಾಲ ಮಾಡಿದರು, ತಮ್ಮ ಸಂಬಳದ ಒಂದು ನೂರು ರೂಪಾಯಿ ಸೇರಿಸಿ ಕೇಬಲ್‌ನಿಂದ ಕಳಿಸಿದರು. ಚಿಕ್ಯಾಗೋದಲ್ಲಿದ್ದ ತಮ್ಮ ಮಿತ್ರ ವರದರಾವ್‌ ಅವರಿಗೆ ಪತ್ರ ಬರೆದು ಸ್ವಾಮಿಗಳಿಗೆ ಸಹಾಯ ಮಾಡಲು ಕೇಳಿಕೊಂಡರು.

ಯಾವುದೋ ದುರ್ಬಲ ಗಳಿಗೆಯಲ್ಲಿ ಸ್ವಾಮಿಗಳು ಅಳಸಿಂಗರಿಗೆ ಕೇಬಲ್‌ ಕಳಿಸಿದ್ದರಂತೆ. ಇದು ಬಹುಶಃ ಶಿಷ್ಯನ ಪರೀಕ್ಷೆಗಾಗಿಯೇ ಇರಬೇಕು. ಶಿಷ್ಯ ಅಳಸಿಂಗ ತೇರ್ಗಡೆ ಹೊಂದಿದ್ದರು. ಬೋಸ್ಟನ್‌ ಬಳಿಯಲ್ಲಿದ್ದ ಓರ್ವ ವೃದ್ಧ ಮಹಿಳೆ ವಿವೇಕಾನಂದರನ್ನು ಕರೆದು ತನ್ನ ಮನೆಯಲ್ಲಿ ಇರಲು ಅವಕಾಶ ಕಲ್ಪಿಸಿದಳಂತೆ. ಹಲವಾರು ಸ್ಥಳೀಯರು ಸ್ವಾಮಿಗಳನ್ನು ಅವಳ ಮನೆಯಲ್ಲಿ ಬಂದು ನೋಡಿದರು. ಸ್ವಾಮಿಗಳು ಮೊದಲು ಅಲ್ಲಿಯ ಜನರಿಗೆ ಪ್ರದರ್ಶನದ ವಸ್ತುವಾಗಿ ಕಂಡಿದ್ದರು. ನಂತರ ಸ್ಥಿತಿ ಬದಲಾಯಿತು. ಹಾರ್ವರ್ಡ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ರೌಟ್‌ ಎಂಬವರು ಸ್ವಾಮಿಗಳ ಪ್ರತಿಭೆ ಕಂಡು ಅಪ್ರತಿಭರಾದರು, ಮಂತ್ರಮುಗ್ಧರಾದರು. ವಿಶ್ವ ಧರ್ಮ ಸಮ್ಮೇಳನದ ಸಂಚಾಲಕರಿಗೆ ಇವರ ಬಗ್ಗೆ ಪತ್ರ ಬರೆದು ಸಮ್ಮೇಲನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಟ್ಟರು.

ಬಾಸ್ಟನ್‌ದಿಂದ ಸ್ವಾಮಿಗಳು ಅಳಸಿಂಗರಿಗೆ ಸುದೀರ್ಗ ಪತ್ರಗಳ್ನು ಬರೆದರು. ಈ ಪತ್ರಗಳು ಅಳಸಿಂಗರಿಗೆ ಬರೆದವು ಆಗಿದ್ದರೂ ಭಾರತದ ಯುವ ಜನಾಂಗವನ್ನು ಉದ್ದೇಶಿಸಿ ಬರೆದ ಬೋಧನಪರ ಸಂದೇಶವನ್ನು ಅವು ಹೊಂದಿದ್ದವು. ಶ್ರೀ ಕೃಷ್ಣ ಗೀತೋಪದೇಶವನ್ನು ಪಾರ್ಥನಿಗೆ ಮಾಡಿದ್ದರು ಅವುಗಳು ಇಡೀ ಮಾನವಕುಲಕ್ಕೇ ಸಂಬೋಧಿಸುತ್ತಿರುವಂತೆ ಈ ಪತ್ರಗಳ ಧಾಟಿಯೂ ಇತ್ತು. ಅಲ್ಲಿಯ ಕೆಲ ಸಾಲು ನೋಡಬಹುದು.

''ಸ್ವಾಭಾವಿಕವಾಗಿ ಪರಿಪೂರ್ಣತೆಯನ್ನು ಹೊಂದಿರುವ ಹಿಂದೂ ಧರ್ಮವೇ ಬೌದ್ಧ ಧರ್ಮ. ಆ ಧರ್ಮದ ಅನುಕಂಪ ಕರುಣೆಗಳನ್ನು ಸ್ವೀಕರಿಸಿಕೊಂಡು ಹಿಂದೂ ಧರ್ಮ ಉದಾತ್ತ ಉಪದೇಶಗಳನ್ನು ಅನುಷ್ಟಾನಕ್ಕೆ ತರಬೇಕು.''...

''ಈಗ, ಈ ಕ್ಷಣದಲ್ಲಿ, ಪಾರ್ಥಸಾರಥಿ ದೇವಾಲಯಕ್ಕೆ ಹೋಗು. ದೀನರೂ ಆರ್ತರೂ ಆದ ಗೋಕುಲದ ಗೋವಳರ ಬಂಧು ಆತ. ರಾಮಾವತಾರದಲ್ಲಿ ಬೇಡರವನಾದ ಗುಹನನ್ನು ಆಲಿಂಗಿಸಲು ಹಿಂಜರಿಯದ, ರಾಜಪುತ್ರರ ಆಹ್ವಾನವನ್ನು ನಿರಾಕರಿಸಿ ಸಮಾಜದಲ್ಲಿ ಅತಿ ಹೀನಳೆಂದು ಪರಿಗಣಿಸಲ್ಪಟ್ಟ ವೇಶ್ಯೆಯ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿದ, ಬುದ್ಧಾವತಾರದಲ್ಲಿ ಅವರನ್ನು ಉದ್ಧರಿಸಿದ, ಪಾರ್ಥಸಾರಥಿಯ ಮುಂದೆ ಸಾಷ್ಟಾಂಗವೆರಗಿ ಪ್ರಮಾಣ ಮಾಡು - ಸರ್ವ ತ್ಯಾಗಕ್ಕೂ ಬದ್ಧಕಂಕಣನಾಗು. ಯಾರಿಗಾಗಿ ಭಗವಂತ ಅವತರಿಸುತ್ತಾನೋ, ಯಾರನ್ನು ಅವನು ಅತ್ಯಂತ ಪ್ರೀತಿಯಿಂದ ಕಾಣುತ್ತಾನೆಯೋ, ಅವರ ಉದ್ಧಾರಕ್ಕಾಗಿ ನಿನ್ನ ಜೀವನವನ್ನು ಮುಡುಪಾಗಿಡು.''

'ವಿವೇಕಾನಂದರ ಈ ಸಾಲುಗಳನ್ನು ಮದರಾಸಿನ ಪಾರ್ಥಸಾರಥಿ ದೇವಾಲಯದಲ್ಲಿ ಶಿಲಾ ಶಾಸನದಂತೆ ಕೆತ್ತಲ್ಪಟ್ಟಿರುವುದನ್ನು ಇಂದಿಗೂ ಕಾಣಬಹುದು' ಎಂದು ಶಾಸ್ತ್ರಿ ಬರೆಯುತ್ತಾರೆ.

(ಇನ್ನೂ ಇದೆ)

English summary
Guru-Shishya : Swami Vivekananda and Alasinga Perumal. Dr G V Kulkarni writes about the Life and Literature of H L N Shastri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X