ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಷಾಹಾರ ಬಾಧೆಯಾದಾಗ ಜಲಧೌತಿ

By Staff
|
Google Oneindia Kannada News


ವಿಷಾಹಾರ ಬಾಧೆಯಾದಾಗ ಜಲಧೌತಿ(ವ್ಯಾಘ್ರಧೌತಿ) ನಮಗೆ ಅತ್ಯಂತ ಉಪಕಾರಿ! ಅದೇ ರೀತಿ ವಸ್ತ್ರಧೌತಿಯ ಅಭ್ಯಾಸದಿಂದ ಗುಲ್ಮ, ಜ್ವರ, ಪ್ಲೀಹ, ಕುಷ್ಠ, ಕಫ, ಪಿತ್ತ ವಿಕಾರಗಳಿಗೆ ಶಮನ.
ಇದಕ್ಕೆ ಸಂಬಂಧಿಸಿದ ಇನ್ನೊಂದು ಘಟನೆ ನೆನಪಾಗುತ್ತದೆ. 2002ರಲ್ಲಿ ನಾನು ಎರಡನೆಯ ಸಲ ಅಮೆರಿಕೆಗೆ ತೆರಳಿದಾಗ ಈ ಘಟನೆ ನಡೆಯಿತು. ಕ್ಯಾಲಿಫೋರ್ನಿಯಾದಲ್ಲಿ ನಾನು ಯೋಗ ಶಿಬಿರ ನಡೆಸಿದ್ದೆ. ನನ್ನ ಕ್ಲಾಸಿಗೆ ಬಂದವರಲ್ಲಿ ಕೆಲವರು ಅಮೆರಿಕೆಯಲ್ಲಿ ಯೋಗ ಕಲಿತಿದ್ದರು, ಸ್ವಲ್ಪ ಪರಿಣತಿ ಪಡೆದಿದ್ದರು. ನಾನೇನು ಕಲಿಸುತ್ತೇನೆ ಎಂಬ ಕುತೂಹಲದಿಂದ, ನೋಡೋಣ ಎಂದು ಬಂದಿದ್ದರು.

ನಾನು ಮೊದಲನೆಯ ದಿನ ಶುದ್ಧಿಕ್ರಿಯೆ ಕಲಿಸಿದೆ. ಅವರಲ್ಲಿ ಯಾರೂ ನೇತಿ-ಪಾಟ್‌ ನೋಡಿರಲಿಲ್ಲ. ಇದೊಂದು ಹೊಸ ಅನುಭವ ಅವರಿಗೆ. ನಂತರ 2-3 ಲೀಟರ್‌ ಬೆಚ್ಚನೆಯ ನೀರನ್ನು ಕುಡಿದು ಜಲಧೌತಿ ಮಾಡಿ ತೋರಿಸಿದೆ. ಜಲಧೌತಿ ಮಾಡುವವರು ನಾರ್ಮಲ್‌ ಆರೋಗ್ಯ ಪಡೆದಿರಬೇಕು ಎಂದು ಹೇಳಿದೆ. ಹರ್ನಿಯಾ, ಹೃದ್ರೋಗ, ಅಧಿಕ ರಕ್ತದೊತ್ತಡ ಇರುವವರು, ಹೊಟ್ಟೆಯಲ್ಲಿ, ಕರುಳಲ್ಲಿ ವ್ರಣ(ಅಲ್ಸರ್‌) ಇರುವವರು ಜಲಧೌತಿ ಪ್ರಯೋಗಿಸಬಾರದು ಎಂದೂ ಹೇಳಿದೆ. ವಿದ್ಯಾರ್ಥಿಗಳಿಂದ ಜಲಧೌತಿ ಕ್ರಿಯೆ ಮಾಡಿಸಿದೆ.

ಜಲಧೌತಿಯ ಬಗ್ಗೆ ನನ್ನ ಅನುಭವ, ಅಂದರೆ ಅಕಸ್ಮಾತ್ತಾಗಿ ವಿಷಮಿಶ್ರಿತ ಆಹಾರ ಸೇವಿಸುವ ಪ್ರಸಂಗ ಬಂದಾಗ, ಜಲಧೌತಿ ಮಾಡಿ ಪರಿಹಾರ ಪಡೆದ ಬಗ್ಗೆ ಹೇಳಿದೆ. ನಾನು ಜಲಧೌತಿ ಕಲಿಸಿದ ದಿನವೇ ನಮ್ಮ ವಿದ್ಯಾರ್ಥಿಯಾಗಿದ್ದ ಇಂಜಿನಿಯರನೊಬ್ಬ ಸಂಜೆ ಒಂದು ಪಾರ್ಟಿಗೆ ಹೋಗಿದ್ದ. ಅಲ್ಲಿ ‘ವಿಷಮಿಶ್ರಿತ ಆಹಾರದ ಸೇವನೆ’ಯ ಪ್ರಸಂಗ ಬಂತು. ಪಾರ್ಟಿಯಿಂದ ನೇರವಾಗಿ ತನ್ನ ಅಪಾರ್ಟ್‌ಮೆಂಟಿಗೆ ಬಂದು ನಾನು ಕಲಿಸಿದಂತೆ ಮನೆಯಲ್ಲಿ ಜಲಧೌತಿ ಮಾಡಿದ. ನೀರಿನೊಂದಿಗೆ ಆಹಾರವೂ ಹೊರಬಿದ್ದಿತ್ತು. ಮರುದಿನ ಅವನಿಗೆ ಬಹಳ ಸಂತೃಪ್ತಿಯಾಗಿತ್ತು. ನನಗೆ ಫೋನ್‌ ಮಾಡಿ ತನ್ನ ಸಂತಸವನ್ನು ಹಂಚಿಕೊಂಡ.

ವಸ್ತ್ರಧೌತಿ :

ಇದೊಂದು ಮಹತ್ವದ ಶುದ್ಧಿಕ್ರಿಯೆ. ಇದು ಕಠಿಣವಾಗಿರುವುದರಿಂದ ಇದನ್ನು ಗುರುಗಳ ಮಾರ್ಗದರ್ಶನದಲ್ಲಿ ಕಲಿಯಬೇಕು.

‘‘ಚತುರಂಗುಲವಿಸ್ತಾರಂ ಹಸ್ತಪಂಚದಶಾಯುತಮ್‌ ।
ಗುರೂಪದಿಷ್ಟ ಮಾರ್ಗೇಣ ಸಿಕ್ತಂ ವಸ್ತ್ರಂ ಶನೈರ್ಗ್ರಸೇತ್‌ ।
ಪುನಃ ಪ್ರತ್ಯಾಹರೇಚ್ಚೈತದುದಿತಂ ಧೌತಿ ಕರ್ಮ ತತ್‌ ।।

(ಹಠಯೋಗ ಪ್ರದೀಪಿಕಾ-24)

(ನಾಲ್ಕು ಅಂಗುಲ ಅಗಲವಾದ, ಹದಿನೈದು ಹಸ್ತ ಉದ್ದವಾದ ಒದ್ದೆ ಬಟ್ಟೆಯನ್ನು ಗುರುಗಳ ಮಾರ್ಗದರ್ಶನದಲ್ಲಿ ನಿಧಾನವಾಗಿ ನುಂಗಬೇಕು. ಇದುವೆ ಧೌತಿಕರ್ಮ.) ಇದು ಸಿಂಥೆಟಿಕ ಬಟ್ಟೆ ಇರಬಾರದು, ಶುದ್ಧ ಅರಳೆಯ ಬಟ್ಟೆಯಾಗಿರಬೇಕು.

‘‘ಚತುರಂಗುಲವಿಸ್ತಾರಂ ಸೂಕ್ಷ್ಮವಸ್ತ್ರಂ ಶನೈರ್ಗ್ರಸೇತ್‌ ।
ಪುನಃ ಪ್ರತ್ಯಾಹರೇದೆತತ್ಪ್ರೋಚ್ಚತೇ ಧೌತಿಕರ್ಮಕಮ್‌ ।40।
ಗುಲ್ಮ ಜ್ವರ ಪ್ಲೀಹ ಕುಷ್ಠ ಕಫ ಪಿತ್ತಂ ವಿನಶ್ಯತಿ ।
ಆರೋಗ್ಯಂ ಬಲಪುಷ್ಟಿಶ್ಚ ಭವೇತ್ತಸ್ಯ ದಿನೇದಿನೇ ।41।

(ಘೕರಂಡ ಸಂಹಿತಾ)

(ನಾಲ್ಕು ಅಂಗುಲ ಒದ್ದೆ ಬಟ್ಟೆಯನ್ನು ಸಾವಕಾಶವಾಗಿ ನುಂಗಬೇಕು. ನಂತರ ಇದನ್ನು ಸಾವಕಾಶವಾಗಿ ಹೊರಗೆಳೆಯಬೇಕು. ಈ ವಸ್ತ್ರಧೌತಿಯ ಅಭ್ಯಾಸದಿಂದ ಗುಲ್ಮ, ಜ್ವರ, ಪ್ಲೀಹ, ಕುಷ್ಠ, ಕಫ, ಪಿತ್ತ ವಿಕಾರಗಳಿಗೆ ಶಮನ ದೊರೆಯುತ್ತದೆ. ಇದರಿಂದ ದೇಹಕ್ಕೆ ಆರೋಗ್ಯ, ಬಲ, ಮತ್ತು ಪುಷ್ಟಿ ದಿನೇ ದಿನೇ ವರ್ಧಿಸುತ್ತದೆ.)

ನಾನು ಮೊದಲ ಸಲ ವಸ್ತ್ರಧೌತಿಯನ್ನು ಕಂಡದ್ದು 1959ರಲ್ಲಿ. ಆಗ ಮಾಲ್ಲಾಡಿಹಳ್ಳಿಯ ಯೋಗಾಚಾರ್ಯ ರಾಘವೇಂದ್ರಸ್ವಾಮಿಗಳು ಧಾರವಾಡದಲ್ಲಿ ಯೋಗದ ಬಗ್ಗೆ ಪ್ರವಚನ ಮತ್ತು ಪ್ರಾತ್ಯಕ್ಷಿಕೆ ನೀಡಿದ್ದರು. ಅವರಿಗಾಗ 65 ವರ್ಷವಾಗಿತ್ತು. ನೋಡಲು ನಲವತ್ತರ ಹರಯವಿತ್ತು. ಇವುಗಳನ್ನೆಲ್ಲ ಓದಿ ಅನುಸರಿಸಲು ಬರುವುದಿಲ್ಲ. ಗುರುಮುಖೇನ ಕಲಿಯಬೇಕು. ಇವುಗಳಿಂದಾಗುವ ಲಾಭಗಳು ಅನನ್ಯವಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X