• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಸರ್ಗೋಪಚಾರ(ಭಾಗ -1)

By Staff
|

ನಿಸರ್ಗೋಪಚಾರ(ಭಾಗ -1)

ಪ್ರಕೃತಿ ಚಿಕಿತ್ಸೆಯ ಉಗಮ ಬೆಳವಣಿಗೆ : ಒಂದು ವಿಹಂಗಮ ನೋಟ

ಪ್ರತಿಯಾಂದು ಕಾಯಿಲೆಯನ್ನೂ ನಾವು ಔಷಧಿಯಿಲ್ಲದೆ ಗುಣಪಡಿಸಿಕೊಳ್ಳಬಹುದು. ನಿಸರ್ಗ ಚಿಕಿತ್ಸೆ ಮತ್ತು ಯೋಗಾಭ್ಯಾಸ ನಮಗೆ ವರದಾನವಾಗಿ ದೊರೆತಿವೆ. ನಮ್ಮೆದುರು ಎರಡು ದಾರಿಗಳಿವೆ ದುಡ್ಡು ವೆಚ್ಚಮಾಡಿ ಕಾಯಿಲೆಗಳನ್ನು ಆಹ್ವಾನಿಸುವುದು, ಏನೂ ವೆಚ್ಚಮಾಡದೆ ಅರೋಗ್ಯವನ್ನು ಪಡೆಯುವುದು. ಆಯ್ಕೆ ನಮ್ಮ ಕೈಯಲ್ಲಿದೆ. ‘ನಿಸರ್ಗೋಪಚಾರ’ದ ಮಹತ್ವ ಸಾರುವ ಸಾರ್ಥಕ ಲೇಖನ ಮಾಲೆ ದಟ್ಸ್‌ಕನ್ನಡದಲ್ಲಿ ಆರಂಭ. ಅದರ ಮೊದಲ ಕಂತು ನಿಮ್ಮ ಮುಂದಿದೆ.

Dr. G.V. Kulkarni ಡಾ।‘ಜೀವಿ’ ಕುಲಕರ್ಣಿ, ಮುಂಬಯಿ
ಪ್ರಕೃತಿ ಚಿಕಿತ್ಸೆಯ ವಿಧಾನ ಹೊಸತಲ್ಲ. ನ್ಯಾಚುರೋಪಥಿ’ (Naturopathy)ಅರ್ಥಾತ್‌ ನಿಸರ್ಗೋಪಚಾರ ಎಂಬ ಪದ ಇತ್ತೀಚಿನದಾದರೂ ನಿಸರ್ಗ ರೋಗವನ್ನು ನಿವಾರಿಸುತ್ತದೆ ಎಂಬ ತತ್ವ ಪೂರ್ವಜರಿಗೆ ತಿಳಿದಿತ್ತು. ಈಜಿಪ್ತ್‌, ಗ್ರೀಸ್‌ ಹಾಗೂ ರೋಮ್‌ಗಳಲ್ಲಿ ಇದನ್ನು ಅನುಸರಿಸಲಾಗುತ್ತಿತ್ತು. ವೈದ್ಯಶಾಸ್ತ್ರದ ಜನಕನೆಂದು ಪ್ರಸಿದ್ಧನಾದ ಗ್ರೀಕ್‌ ವೈದ್ಯ ಹಿಪೊಕ್ರೇಟಸ್‌ (Hippocrates) (ಕ್ರಿ.ಪೂ. 460-357)‘ಪ್ರಕೃತಿ ಗುಣಪಡಿಸುತ್ತದೆ, ವೈದ್ಯನಲ್ಲ.’(Nature cures, not the physician)ಎಂದು ಹೇಳಿದ್ದ. ಈ ಮುತ್ತಿನಂತಹ ಮಾತು ನಿಸರ್ಗೋಪಚಾರದ ಸೂತ್ರವಾಕ್ಯದಂತಿದೆ.

ನೀರು, ಗಾಳಿ, ಮಣ್ಣು, ಬಿಸಿಲು ಇವುಗಳಲ್ಲಿ ರೋಗ ನಿವಾರಕ ಶಕ್ತಿ ಇರುವುದರ ಬಗ್ಗೆ ಭಾರತೀಯ ಪವಿತ್ರ ಗ್ರಂಥಗಳಲ್ಲಿ ಉಲ್ಲೇಖ ದೊರೆಯುತ್ತದೆ. ಈ ದಿಶೆಯಲ್ಲಿ ಸಂಶೋಧನೆ ಮಾಡಬೇಕು. ವೈದಿಕರು ಮೃತ್ತಿಕಾ ಸ್ನಾನದ ಬಗ್ಗೆ ಬರೆಯುತ್ತಾರೆ. ಅದು ಕೇವಲ ತಂತ್ರವಾಗಿ(ಸಂಕೇತವಾಗಿ) ಉಳಿದಿದೆ. ಅದರಲ್ಲಿ ನಾವಿ ‘ಮಡ್‌-ಬಾಥ್‌’ನ ಮೂಲವನ್ನು ಹುಡುಕಬಹುದು. ಮಹೆಂಜೋದಾರೋದ ಅವಶೇಷಗಳಲ್ಲಿ, ಅಷ್ಟು ದೂರ ಏಕೆ, ವಿಜಯನಗರದ ಅರಮನೆಗಳಲ್ಲಿ ಸ್ನಾನಗೃಹಗಳನ್ನು ನೋಡಿದರೆ ಸ್ನಾನವನ್ನು ಆರೋಗ್ಯದ ದೃಷ್ಟಿಯಿಂದ ಹೇಗೆ ಬಳಸುತ್ತಿದ್ದರು ಎಂಬ ಕಲ್ಪನೆ ಬರುತ್ತದೆ.

ವಿಠ್ಠಲದಾಸ ಮೋದಿಯವರು ನಿಸರ್ಗೋಪಚಾರದ ಉಗಮ, ಬೆಳವಣಿಗೆಯ ಬಗ್ಗೆ ಬರೆಯುತ್ತಾರೆ. ಆಧುನಿಕ ಕಾಲದಲ್ಲಿ ಪ್ರಕೃತಿ ಚಿಕಿತ್ಸೆಯ ಆಂದೋಲನವನ್ನು ಜರ್ಮನಿಯ ವಿನ್‌ಸೆಂಜ್‌ ಪ್ರೆಸ್‌ನಿಜ್‌ (Vincez Priesnitz) ಎಂಬವನು 1822ರಲ್ಲಿ ಪ್ರಾರಂಭಿಸಿದ. ಇವನು ಗ್ರೆಫೆನ್‌ಬರ್ಗ್‌ನಲ್ಲಿ ಪ್ರಥಮ ನಿಸರ್ಗ ಚಿಕಿತ್ಸಾ ಕೇಂದ್ರವನ್ನು (1826) ತೆರೆದ. ಇವನಲ್ಲಿ ಸೂಕ್ಷ್ಮ ದೃಷ್ಟಿ, ಅಂತರ್‌ದೃಷ್ಟಿ ಇತ್ತು. ಇವನು ಮೊದಲು ತಾನೇ ಅಸ್ವಸ್ಥನಾದಾಗ, ಸ್ವಂತ ಪ್ರಯತ್ನದಿಂದ, ನಿಸರ್ಗದ ನಿಯಮಗಳನ್ನು ಪಾಲಿಸಿ ತನ್ನ ಸ್ವಾಸ್ಥ್ಯವನ್ನು ಮರಳಿ ಪಡೆದ.

ತಣ್ಣೀರನ್ನು ಬಳಸಿ ರೋಗ ನಿವಾರಿಸುವ ಕಲೆಯನ್ನು ಇವನು ಕಂಡುಹಿಡಿದಿದ್ದ. ಜಲಚಿಕಿತ್ಸೆಯಲ್ಲಿ ಇವನಿಗೆ ಅಪಾರ ವಿಶ್ವಾಸವಿತ್ತು. ಇವನು ಅನೇಕ ರೋಗಗಳನ್ನು ಗುಣಪಡಿಸಿದ. ಆಶ್ಚರ್ಯಕರ ಯಶಸ್ಸು ಇವನಿಗೆ ಲಭಿಸಿತು. ಇವನ ಸಫಲತೆ ಕಂಡು ಹಳೆಯ ಪದ್ಧತಿಯ ಡಾಕ್ಟರರೆಲ್ಲ ಇವನ ವಿರೋಧಿಗಳಾದರು. ಇವನನ್ನು ನಿಂದಿಸಿದರು, ಅಪಹಾಸ್ಯ ಮಾಡಿದರು, ದಾವೆ ಹೂಡಿ ಕೋರ್ಟಿಗೆಳೆದರು. ಆದರೆ ಇವನ ಚಿಕಿತ್ಸೆ ಪರಿಣಾಮಕಾರಿಯಾಗಿದ್ದರಿಂದ ವಿಜಯ ಇವನದಾಯಿತು. ಇವನು ತನ್ನ ಸಂಸ್ಥೆಯ ಎದುರು ಒಂದು ಕಲ್ಲು ನಿಲ್ಲಿಸಿ, ಅಲ್ಲಿ ಒಂದು ವಾಕ್ಯ ಕೆತ್ತಿಸಿದ್ದನಂತೆ, ‘‘ನೀವು ಧೈರ್ಯದಿಂದಿರಬೇಕಾಗುವುದು’’ ಎಂದು. ಈ ಚಿಕಿತ್ಸೆಗೆ ಸ್ವಲ್ಪ ವಿಳಂಬವಾದೀತು, ಆದ್ದರಿಂದ ಯಾರೂ ಧೈರ್ಯ ಕಳೆದುಕೊಳ್ಳಬಾರದು ಎಂಬುದು ಈ ವಾಕ್ಯದ ಒಳ ಅರ್ಥವಾಗಿತ್ತು.

ನಿಸರ್ಗ ಚಿಕಿತ್ಸೆಯ ಕ್ಷೇತ್ರದಲ್ಲಿ ಎರಡನೆಯ ಹೆಸರು ಜೋಹಾನ್ಸ್‌ ಸ್ಕೊೃಥ್‌ (Johannes Schroth) ಎಂಬವನದ್ದು. ಇವನು ಆಸ್ಟ್ರಿಯನ್‌ ಆಗಿದ್ದ. ಇವನು ಕೂಡ ಸ್ವಾನುಭವದಿಂದಲೇ ಪ್ರಕೃತಿ ಚಿಕಿತ್ಸೆಯಲ್ಲಿ ಪರಿಣತಿಯನ್ನು ಪಡೆದ. ಮೊದಲು ಇವನು ಪ್ರಾಣಿಗಳ ಚಿಕಿತ್ಸೆ ಮಾಡುತ್ತಿದ್ದ. ಗಾಯಗೊಂಡ ನಾಯಿಗಳ, ಕುದುರೆಗಳ ಚಿಕಿತ್ಸೆ ಮಾಡುತ್ತಿದ್ದ. ನಂತರ ಮನುಷ್ಯರನ್ನು ಚಿಕಿತ್ಸೆ ಮಾಡಿ ಪ್ರಸಿದ್ಧಿ ಪಡೆದ. ಝೆಕೊಸ್ಲೋವಾಕಿಯಾದ ಲಿಡೆವಿಲ್‌ ಎಂಬಲ್ಲಿ ‘ಸ್ವಾಸ್ಥ್ಯಗೃಹ’ವನ್ನು ತೆರೆದ. ಇವನೂ ಸಮಕಾಲೀನ ಡಾಕ್ಟರರ ವಿರೋಧ ಕಟ್ಟಿಕೊಳ್ಳಬೇಕಾಯ್ತು. ಇವನಿಗೆ ಕೆಲಕಾಲ ಜೈಲುವಾಸದ ಶಿಕ್ಷೆ ಕೂಡಾ ಆಯಿತು.

1846ರಲ್ಲಿ ಸ್ಥಳೀಯ ಡ್ಯೂಕನ ಕಾಲಿಗೆ ಗಾಯವಾಗಿತ್ತು. ಆ ಕಾಲದ ಪ್ರಸಿದ್ಧ ಡಾಕ್ಟರರೆಲ್ಲ ಗುಣಪಡಿಸಲು ಅಸಮರ್ಥರಾದರು. ಬದುಕಿ ಉಳಿಯಬೇಕಾದರೆ ‘ಆಂಪ್ಯೂಟ್‌’ ಮಾಡುವುದು, ಅರ್ಥಾತ್‌ ಕಾಲು ಕತ್ತರಿಸುವುದು, ಒಂದೇ ಉಪಾಯವೆಂದರು. ಅವನಿಗೆ ಬದುಕಬೇಕಾಗಿತ್ತು, ಕಾಲನ್ನೂ ಉಳಿಸಿಕೊಳ್ಳಬೇಕಾಗಿತ್ತು. ಆಗ ಅವನು ಯಾವ ದಾರಿಯೂ ತೋಚದೇ ಜೋಹಾನ್ಸನ ಬಳಿಗೆ ಬಂದ. ಕೆಲ ತಿಂಗಳ ಚಿಕೆತ್ಸೆ ಪಡೆದು ಪೂರ್ತಿ ವಾಸಿಗೊಂಡ. ತಾನು ವಾಸಿಯಾದ ಮೇಲೆ ತನ್ನ ಚಿಕಿತ್ಸೆಗೆ ಸಂಬಂಧಿಸಿದ ವಿವರಗಳನ್ನು ಒಂದು ಪುಸ್ತಿಕೆಯ ರೂಪದಲ್ಲಿ ಹೊರತಂದು ಸೈನಿಕರಿಗೆಲ್ಲ ಹಂಚಿದ. ಜೋಹಾನ್ಸನ ಕಳೆದುಹೋಗಿದ್ದ ಗೌರವ ಈ ಘಟನೆಯಿಂದಾಗಿ ಮರಳಿ ಬಂದಿತ್ತು.

ಇದೇ ಸಮಯದಲ್ಲಿ ಪ್ರಸಿದ್ಧಿ ಪಡೆದ ಫಾದರ್‌ ಸ್ನಾಯಿಪ್‌ ಎಂಬವ ‘ಜಲ-ಚಿಕಿತ್ಸಾ’ ಎಂಬ ಪುಸ್ತಕವನ್ನು ಬರೆದ. ಅದು ಬಹಳ ಪ್ರಸಿದ್ಧಿ ಪಡೆಯಿತು. ಆಸ್ಟ್ರಿಯಾದ ಇನ್ನೊಬ್ಬ ಆರ್ನಾಲ್ಡ್‌ ರಿಕ್ಲೀ (Arnold Rickli) ಎಂಬವ ಕೇನ್‌ ಪ್ರಾಂತದ ಟೆಲ್ಡಾಸ್‌ ಎಂಬಲ್ಲಿ ವಾಯು ಹಾಗೂ ಬಿಸಿಲಿನ ಚಿಕಿತ್ಸೆ ಪ್ರಾರಂಭಿಸಿದ. ಇನ್ನೊಬ್ಬ ಹೆನ್‌ರಿಚ್‌ ಲೆಮೆನ್‌ (Heinrich Lamann) ಎಂಬವ ಅಹಾರ ವಿಷಯದಲ್ಲಿ ತಜ್ಞನಾಗಿದ್ದ. ಆಹಾರ ವಿಜ್ಞಾನಕ್ಕೆ ಇವನಿಂದ ಸಹಾಯ ದೊರೆಯಿತು.

ಲೂಯಿ ಕುನೆ ಎಂಬವ ಈ ಕ್ಷೇತ್ರದಲ್ಲಿಯ ದೊಡ್ಡ ಆಚಾರ್ಯ ಪುರುಷನಾಗಿದ್ದ. 20ನೆಯ ವಯಸ್ಸಿಗೇ ಇವನ ಆರೋಗ್ಯ ಹಾಳಾಗಿತ್ತು. ಡಾಕ್ಟರರಿಂದ ಚಿಕಿತ್ಸೆ ಮಾಡಿಸಿಕೊಂಡು ಇವನ ತಂದೆತಾಯಿ ಮೃತರಾದರು. ಆದ್ದರಿಂದ ಇವನಿಗೆ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯ ಮೇಲಿನ ವಿಶ್ವಾಸವೇ ಕಳೆದುಹೋಗಿತ್ತು. ಇವನು ಪ್ರಕೃತಿ ಚಿಕಿತ್ಸೆಗೆ ಶರಣಾದ. ಇವನ ಪ್ರಕೃತಿ ಶೀಘ್ರದಲ್ಲಿ ಗುಣಮುಖವಾಯಿತು. ಇವನು ಈ ಚಿಕಿತ್ಸೆಯ ಆರಾಧಕನಾದ. ಹಲವಾರು ವರ್ಷ ಪ್ರಕೃತಿ ಚಿಕಿತ್ಸೆಯ ಅಧ್ಯಯನ ಮಾಡಿದ, 1883 ರಲ್ಲಿ ಇವನು ಲಿಪಜಿಗ್‌ ಎಂಬಲ್ಲಿ ಒಂದು ಸ್ವಾಸ್ಥ್ಯಗೃಹ ತೆರೆದ. ಬಿಸಿಲುಸ್ನಾನ, ಬಾಷ್ಪಸ್ನಾನ, ಕಟಿಸ್ನಾನ, ಮೂತ್ರಸ್ನಾನ ಶಿಫಾರಸು ಮಾಡುತ್ತಿದ್ದ. ರೋಗಿಯ ಮುಖಾವಲೋಕನ ಮಾತ್ರದಿಂದ ಅವನ ರೋಗ ಕಂಡುಹಿಡಿಯುವ ಕಲೆ ಇವನಿಗೆ ಕರಗತವಾಗಿತ್ತು. ಇವನು ಬರೆದ ಎರಡು ಪುಸ್ತಕಗಳು ಬಹಳ ಪ್ರಸಿದ್ಧವಾಗಿವೆ. ‘ದಿ ನ್ಯೂ ಸೈನ್ಸ್‌ ಆಫ್‌ ಹೀಲಿಂಗ್‌’ ಮತ್ತು ‘ದಿ ಸೈನ್ಸ್‌ ಆಫ್‌ ಫೇಸಿಯಲ್‌ ಎಕ್ಸ್‌ಪ್ರೆಶನ್‌’. ಇವು ಜಗತ್ತಿನ ಅನೇಕ ಭಾಷೆಗಳಲ್ಲಿ ಅನುವಾದಗೊಂಡಿವೆ.

ಅಡಾಲ್ಫ್‌ ಜಸ್ಟ್‌ (Adolf Just)ಎಂಬವ ಜರ್ಮನಿಯ ಹರ್ಜ್‌ ಪರ್ವತದ ಮೇಲೆ ಒಂದು ಸ್ಯಾನಿಟೋರಿಯಂ ಸ್ಥಾಪಿಸಿದ. ಇವನಿಗೆ ಮಣ್ಣಿನ ಚಿಕಿತ್ಸೆಯ ಜನಕ (ಫಾದರ್‌ ಆಫ್‌ ಮಡ್‌ ಥೆರಪಿ) ಎಂದು ಕರೆಯಲಾಗುತ್ತದೆ. ಇವನ ಜಗತ್ಪ್ರಸಿದ್ಧ ಪುಸ್ತಕ ‘ರಿಟರ್ನ್‌ ಟು ನೇಚರ್‌’ (ಮರಳಿ ಪ್ರಕೃತಿಯೆಡೆಗೆ) ಬಹಳ ಪ್ರಸಿದ್ಧಿ ಪಡೆಯಿತು. ಗಾಂಧೀಜಿಯವರ ಮೇಲೆ ಬಹಳ ಪ್ರಭಾವ ಬೀರಿದ ಪುಸ್ತಕವಿದು. ಇದನ್ನು ವಿಠ್ಠಲದಾಸ ಮೋದಿಯವರು ಹಿಂದಿಗೆ ಅನುವಾದಿಸಿದ್ದಾರೆ. ಇವನ ಪ್ರಕಾರ ಪ್ರಕೃತಿಯ ನಿಯಮೋಲ್ಲಂಘನೆಯೇ ರೋಗಕ್ಕೆ ಕಾರಣ.

ಪ್ರಕೃತಿ ಚಿಕಿತ್ಸೆಯಲ್ಲಿ ಹೆಸರು ಮಾಡಿದ ಅಮೇರಿಕನ್‌ ಜೇಮ್ಸ್‌ ಸಿ ಜ್ಯಾಕ್‌ಸನ್‌ (James C Jackson)ಅಮೇರಿಕೆಯಲ್ಲಿ ಜಲಚಿಕಿತ್ಸೆ ಪ್ರಾರಂಭಿಸಿದ. ಇವನು ಮೆಡಿಕಲ್‌ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿದ್ದ. ನ್ಯೂಯಾರ್ಕನಲ್ಲಿ ಜ್ಯಾಕ್‌ಸನ್‌ ಸ್ಯಾನಿಟೋರಿಯಂ ಪ್ರಾರಂಭಿಸಿದ. ಅಲ್ಲಿ ಔಷಧಗಳ ಬಳಕೆಯನ್ನು ಬಹಿಷ್ಕರಿಸಿ ಜಲಚಿಕಿತ್ಸೆ, ವಿಶ್ರಾಂತಿ, ವೈಜ್ಞಾನಿಕ ವ್ಯಾಯಾಮ, ಅಹಾರ, ಮನೋವೈಜ್ಞಾನಿಕ ಉಪಚಾರ ಪ್ರಾರಂಭಿಸಿದ. ಪ್ರಕೃತಿ ಚಿಕಿತ್ಸೆಗೆ ಜೋರುಕೊಟ್ಟ. ಅಮೇರಿಕೆಯ ಇನ್ನೊಬ್ಬ ಪ್ರಕೃತಿ ಚಿಕಿತ್ಸಕ ಡಾ। ರಸೆಲ್‌ ಟಿ ಟ್ರಾಲ್‌ (Russel T Trall) ಪ್ರಾಕೃತಿಕ ಜೀವನ ಮತ್ತು ರೋಗೋಪಚಾರದ ಬಗ್ಗೆ ವಿಶ್ವ ವಿಖ್ಯಾತ ಪುಸ್ತಕ ಬರೆದ. ಇನ್ನೊಬ್ಬ ಅಮೇರಿಕನ್‌ ಡಾಕ್ಟರ್‌ ಜೆ.ಎಚ್‌. ಕೆಲಾಗ್‌ (J.H.Kellog) ಎಂಬವ ಜಲಚಿಕಿತ್ಸೆ, ಮಾಲಿಶ್‌, ಬಿಸಿಲು ಚಿಕಿತ್ಸೆಗಳ ಬಗ್ಗೆ ಪುಸ್ತಕ ಬರೆದ.

ಪ್ರಕೃತಿ ಚಿಕಿತ್ಸೆಯ ವಿಚಾರಧಾರೆಯ ಮೇಲೆ ನಿರ್ಣಾಯಕ ಪ್ರಭಾವ ಬೀರಿದ ಅಮೇರಿಕನ್‌ ಡಾಕ್ಟರ್‌ ಡಾ। ಹೆನ್ರಿ ಲಿಂಡಲ್‌ಹರ್‌ (Henry Lindlahr) ಎಂಬವನ ಸಿದ್ಧಾಂತವನ್ನು ಆಧುನಿಕ ಪ್ರಕೃತಿ ಚಿಕಿತ್ಸಕರು ಅನುಸರಿಸುತ್ತಾರೆ. ಅವನ ಪ್ರಕಾರ, ‘ಮನುಷ್ಯ ಅಧಿಕಾಧಿಕ ರೋಗಗಳಿಗೆ ಬಲಿಯಾಗುವುದಕ್ಕೆ ಕಾರಣ ಅವನು ರೋಗವನ್ನು ಹತ್ತಿಕ್ಕಲು ಔಷಧಿ ಹಾಗೂ ಸೂಜಿಮದ್ದು ಬಳಸುತ್ತಾನೆ. ಇದರ ಪರಿಣಾಮವಾಗಿ ಇನ್ನೂ ಹೆಚ್ಚಿನ ಭೀಕರ ಕಾಯಿಲೆಗಳಿಗೆ ತುತ್ತಾಗುತ್ತಾನೆ.’ ಪ್ರಕೃತಿ ಚಿಕಿತ್ಸೆಯ ಹಲವು ಮುಖಗಳಿಗೆ ಇವನು ಒಂದು ವೈಜ್ಞಾನಿಕ ರೂಪ ಕೊಡಲು ಪ್ರಯತ್ನಿಸಿದ. ‘ಚಕ್ಷು ವಿಜ್ಞಾನ’ದ ಮೇಲೊಂದು ಪುಸ್ತಕ ಬರೆದಿದ್ದಾನೆ. ‘ದಿ ಫಿಲಾಸಫಿ ಆ್ಯಂಡ್‌ ಪ್ರ್ಯಾಕ್ಟೀಸ್‌ ಆಫ್‌ ನ್ಯಾಚುರಲ್‌ ಥೆರಾಪೆಟಿಕ್‌’ (The Philosophy and Practice of Natural Therapeutic) ಎಂಬುದು ಅವನ ಇನ್ನೊಂದು ಪ್ರಸಿದ್ಧ ಪುಸ್ತಕ. ಇವನು ಮೊದಲು ಪರಂಪರಾಗತ ಚಿಕಿತ್ಸೆ ಅನುಸರಿಸುತ್ತ ಬಂದ ಡಾಕ್ಟರ್‌. ಒಮ್ಮೆ ಇವನಿಗೆ ಕಾಯಿಲೆಯಾದಾಗ ಕಟು ಅನುಭವ ಬಂತು. ಔಷಧ ವಿಜ್ಞಾನ, ಶಸ್ತ್ರಚಿಕಿತ್ಸೆ ಇವನ ಸಹಾಯಕ್ಕೆ ಬರಲಿಲ್ಲ, ಗುಣಪಡಿಸಲು ವಿಫಲಗೊಂಡವು. ಆಗ ಇವನು ಪ್ರಾಕೃತಿಕ ಚಿಕಿತ್ಸಾ ಸಿದ್ಧಾಂತಕ್ಕೆ ಮೊರೆ ಹೋದ. ಮುಂದೆ ಅದರ ಆರಾಧಕನಾದ. ಜೆ.ಎಚ್‌.ಟಿಲ್‌ಡೆನ್‌ (J.H.Tilden) ಎಂಬ ಡಾಕ್ಟರ್‌ ‘ಜೀವನ ರೀತಿ ಬದಲಿಸುವ ವಿಧಾನ ರೋಗನಿವಾರಣೆಯಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತದೆ’ ಎನ್ನುತ್ತಾನೆ. ‘ಇಂಪೇರ್ಡ್‌ ಹೆಲ್ಥ್‌’ (Impaired health) ಇವರ ಪ್ರಸಿದ್ಧ ಪುಸ್ತಕ.

ಡಾ। ಬೆನೆಡಿಕ್ಟ್‌ ಲಸ್ಟ್‌ (Benedict Lust) (1872-1945), ಇವನ ಹೆಸರನ್ನು ನೆನೆಯದಿದ್ದರೆ ಪ್ರಕೃತಿ ಚಿಕಿತ್ಸೆಯ ಇತಿಹಾಸ ಅಪೂರ್ಣವಾಗುತ್ತದೆ ಎಂದು ಮೋದಿ ಬರೆಯುತ್ತಾರೆ. ಇವನು ಅಮೇರಿಕೆಯ ಅಗ್ರಗಣ್ಯ ನ್ಯಾಚುರೋಪಥಿ ಕಾಲೇಜಿನ ಮುಖ್ಯಸ್ಥನಾಗಿದ್ದ. ಈ ಕ್ಷೇತ್ರದಲ್ಲಿಯ ಜ್ಞಾನವನ್ನು ಸಂಗ್ರಹಿಸಿ, ‘ನ್ಯಾಚುರೋಪತಿ’ ಎಂಬ ಹೆಸರಿನಲ್ಲಿ ಪ್ರಕಟಿಸಲಾಯಿತು. ಈ ಚಿಕಿತ್ಸಾ ಪದ್ಧತಿಗೆ ‘ನ್ಯಾಚುರೋಪತಿ’ ಎಂದು ನಾಮಕರಣ ಮಾಡಿದವ ಬೆನಿಡಿಕ್ಟ್‌ ಲಸ್ಟ್‌. ಆದ್ದರಿಂದ ಇವನಿಗೆ ‘ನಿಸರ್ಗ ಚಿಕಿತ್ಸೆಯ ಜನಕ’ ಎಂದು ಕರೆಯಲಾಗುತ್ತದೆ ಎಂದು ಡಾ। ಎಚ್‌.ಕೆ ಬಾಖ್ರು ಅವರು ಬರೆಯುತ್ತಾರೆ.

ಮೇಲಿನ ಸಂಗತಿಗಳನ್ನು ತಿಳಿದುಕೊಂಡ ಮೇಲೆ ಕೆಲವು ಸತ್ಯ ಸಂಗತಿಗಳು ಮನದಟ್ಟಾಗುತ್ತವೆ. ಆಕಾಶದಿಂದ ಮೋಡಗಳ ಮುಖಾಂತರ ಮಳೆಯಾಗಿ ಸುರಿಯುವ ನೀರು ಶುದ್ಧವಾಗಿಯೇ ಇರುತ್ತದೆ. ಆದರೆ ಸಮುದ್ರದಲ್ಲಿ ಬಿದ್ದಾಗ ಅದು ಉಪ್ಪು ನೀರಾಗುತ್ತದೆ, ನದಿಯಲ್ಲಿ ಹರಿದಾಗ ಅದು ಸಿಹಿ ನೀರಾಗಿರುತ್ತದೆ, ಗುಡ್ಡ ಪರ್ವತಗಳಲ್ಲಿ ಸುರಿದ ನೀರು ಹರಿದು ಬರುವಾಗ ಖನಿಜದ್ರವ್ಯಗಳೊಡನೆ ಬೆರೆತು ಒಳ್ಳೆಯ ಔಷಧಿಸತ್ವ ಪಡೆಯುತ್ತದೆ. ಮನುಷ್ಯ ಆರೋಗ್ಯವಂತನಾಗಿಯೇ ಹುಟ್ಟುತ್ತಾನೆ. ಅವನು ಹೇಗೆ ಬೆಳೆಯುತ್ತಾನೆ ನೋಡಬೇಕು. ಮನುಷ್ಯ ಪ್ರಕೃತಿಗೆ ಸರಿಹೊಂದಿ ನೈಸರ್ಗಿಕವಾಗಿ ಬೆಳೆಯಬೇಕು.

ಪ್ರಕೃತಿಯಿಂದ (ನಿಸರ್ಗದಿಂದ) ದೂರ ಸರಿದಷ್ಟು ಅವನ ಪ್ರಕೃತಿ ಕೆಡುತ್ತದೆ. ಪ್ರಾಣಿಗಳು ಪ್ರಕೃತಿಗೆ(ನಿಸರ್ಗಕ್ಕೆ) ಹೊಂದಿಕೊಂಡು ಬಾಳುವುದರಿಂದ ಅವುಗಳ ಆರೋಗ್ಯ ಚೆನ್ನಾಗಿರುತ್ತದೆ. ಆದರೆ ಸಾಕುಪ್ರಣಿಗಳು ಮನುಷ್ಯನಂತೆ ಅನೈಸರ್ಗಿಕ ಜೀವನ ಪದ್ಧತಿ ಅನುಸರಿಸುವುದರಿಂದ ಅವುಗಳಿಗೆ ಮನುಷ್ಯನಂತೆ ಕಾಯಿಲೆಗಳ ಕಾಟವಿರುತ್ತದೆ, ಪಶುವೈದ್ಯರೆಡೆ ನಿಯಮಿತವಾಗಿ ಹೋಗಬೇಕಾಗುತ್ತದೆ. ಸಾಕಿದ ಗೋರಿಲ್ಲಾಕ್ಕೆ ಸಿಗಾರೆಟ್‌ ಸೇದಲು ಕಲಿಸಿದರು, ಅದಕ್ಕೆ ಮುಂದೆ ಕ್ಯಾನ್ಸರ್‌ ರೋಗದ ಬಾಧೆಯಾಯಿತಂತೆ.

ಪ್ರತಿಯಾಂದು ಕಾಯಿಲೆಯನ್ನೂ ನಾವು ಔಷಧಿಯಿಲ್ಲದೆ ಗುಣಪಡಿಸಿಕೊಳ್ಳಬಹುದು. ನಿಸರ್ಗ ಚಿಕಿತ್ಸೆ ಮತ್ತು ಯೋಗಾಭ್ಯಾಸ ನಮಗೆ ವರದಾನವಾಗಿ ದೊರೆತಿವೆ. ನಮ್ಮೆದುರು ಎರಡು ದಾರಿಗಳಿವೆ ದುಡ್ಡು ವೆಚ್ಚಮಾಡಿ ಕಾಯಿಲೆಗಳಿಗೆ ಆಹ್ವಾನಿಸುವುದು, ಏನೂ ವೆಚ್ಚಮಾಡದೆ ಅರೋಗ್ಯವನ್ನು ಪಡೆಯುವುದು. ಆಯ್ಕೆ ನಮ್ಮ ಕೈಯಲ್ಲಿದೆ.

ಇದನ್ನೂ ಓದಿ :

ನಿಸರ್ಗೋಪಚಾರ ತಜ್ಞ ವಿಠ್ಠಲದಾಸ ಮೋದಿ- ಒಂದು ಪರಿಚಯ

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more