• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ಧರ್ಮ ಸಮ್ಮೇಲನದ ಫಲಶ್ರುತಿ, ಶಿಷ್ಯ ಅಳಸಿಂಗರ ಸಾಧನೆ

By Staff
|

ವಿಶ್ವ ಧರ್ಮ ಸಮ್ಮೇಲನದ ಫಲಶ್ರುತಿ, ಶಿಷ್ಯ ಅಳಸಿಂಗರ ಸಾಧನೆ
ವಿವೇಕಾನಂದರಿಗೆ ವಿಶ್ವ ಮಾನ್ಯತೆ, ವಿಶ್ವ ಪ್ರಸಿದ್ಧಿಯೇನೋ ಬಂತು ಆದರೆ ಅವರ ವಿರುದ್ಧ ಅಪಸ್ವರಗಳು ಇಲ್ಲದೆ ಇರಲಿಲ್ಲ. ಅವರ ಯಶವನ್ನು ಸಹಿಸಲಾಗದೇ ಕೆಲವರು ಅವರ ಮೇಲೆ ಟೀಕೆಯ ಪ್ರಹಾರ ಮಾಡಿದರು. ವಿದೇಶದಲ್ಲಿ ಅಷ್ಟೇ ಅಲ್ಲ ಭಾರತದಲ್ಲಿ ಕೂಡ.

Dr. G.V. Kulkarni ಡಾ।‘ಜೀವಿ’ ಕುಲಕರ್ಣಿ, ಮುಂಬಯಿ
jeevi65@gmail.com

ಭಾಗ ಎಂಟು

ಸ್ವಾಮಿ ವಿವೇಕಾನಂದರು ತಮ್ಮ ಪ್ರಬಂಧದ ಕೊನೆಗೆ ಕೆಲವು ತೂಕದ ಮಾತುಗಳನ್ನು ಹೇಳಿದ್ದರು.

‘ಇನ್ನೊಂದು ಮಹತ್ವದ ಮಾತು, ದೇವರನ್ನೇ ಕೇಂದ್ರವಾಗಿಸಿಕೊಂಡ ಹಿಂದೂಧರ್ಮ ಅಜ್ಞೇಯತಾವಾದವುಳ್ಳ(ಎಗ್ನಾಸ್ಟಿಕ್‌) ಬೌದ್ಧಮತವನ್ನು, ನಿರೀಶ್ವರವಾದವುಳ್ಳ(ಎಥೀಸ್ಟಿಕ್‌) ಜೈನಮತವನ್ನು ನಂಬುವುದು ಹೇಗೆ ಸಾಧ್ಯ? ಬೌದ್ಧರಾಗಲೀ, ಜೈನರಾಗಲೀ ದೇವರನ್ನು ಆಶ್ರಯಿಸುವುದಿಲ್ಲ. ಆದರೆ ಎಲ್ಲ ಧರ್ಮಗಳ ಲಕ್ಷ್ಯ ಒಂದೇ ಸತ್ಯದೆಡೆಗಿದೆ, ಅದುವೆ ಮಾನವನಲ್ಲಿ ದೈವತ್ವವನ್ನು ವಿಕಾಸಗೊಳಿಸುವುದು. ಅವರು ತಂದೆಯನ್ನು ನೋಡಿಲ್ಲ, ದೇವಪುತ್ರನನ್ನು ನೋಡಿದ್ದಾರೆ. ದೇವಪುತ್ರನನ್ನು ನೋಡಿದವರು ದೇವರನ್ನು ನೋಡಿದಂತೆಯೇ ಅಲ್ಲವೇ?

ಬಾಂಧವರೇ, ಹಿಂದೂ ಧರ್ಮದ ವಿಚಾರಗಳ ಸಾರಂಶವಿದು. ಹಿಂದುಗಳು ತಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಯಶಸ್ವಿಯಾಗಿರಲಿಕ್ಕಿಲ್ಲ. ಆದರೆ ‘ವಿಶ್ವಧರ್ಮ’ ಎನ್ನುವುದು ಒಂದು ಇರುವುದಾದರೆ ಅದು ಕಾಲಾತೀತವಾಗಿರಬೇಕು, ದೇಶಾತೀತವಾಗಿರಬೇಕು. ಅದು ದೇವರಷ್ಟೇ ಅನಂತವಾಗಿರಬೇಕು. ಅದರ ಸೂರ್ಯಪ್ರಭೆ ಕೃಷ್ಣನ ಭಕ್ತರನ್ನು, ಏಸುವಿನ ಅನುಯಾಯಿಗಳನ್ನು- ಸಂತರನ್ನು, ಪಾಪಿಗಳನ್ನು ಕೂಡ, ಸಮಾನವಾಗಿ ಬೆಳಗುವಂತಿರಬೇಕು. ಅದು ಬ್ರಾಹ್ಮಣ್ಯ ಅಥವಾ ಬೌದ್ಧ, ಕ್ರಿಸ್ತೀಯ ಅಥವಾ ಮಹಮ್ಮದೀಯ ಆಗಿರದೇ, ಎಲ್ಲ ಧರ್ಮಗಳ ಒಟ್ಟು ಆಗಿರಬೇಕು, ಆದರೂ ವಿಕಾಸಕ್ಕೆ ಅದರಲ್ಲಿ ಅನಂತ ಅವಕಾಶವಿರಬೇಕು, ಅದರ ಸರ್ವವ್ಯಾಪಕತೆಯ ಅನಂತ ಬಾಹುಗಳು ಎಲ್ಲವನ್ನೂ ಆಲಿಂಗಿಸುವಂತಿರಬೇಕು, ಅಲ್ಲಿ ಅತ್ಯಂತ ಕೆಳಗಿನ ಕ್ಷುದ್ರನಿಗೂ, ತನ್ನ ಹೃದಯ ಬುದ್ಧಿಗಳ ಸದ್ಗುಣಗಳಿಂದಾಗಿ ಮಾನವಾತೀತ ಸ್ಥಿತಿಗೆ ಸೇರಿದ ಅತ್ಯುಚ್ಚನಾದ ಉತ್ತಮ ವ್ಯಕ್ತಿಗೂ ಅಲ್ಲಿ ಅವಕಾಶವಿರಬೇಕು. ಈ ವಿಶ್ವಧರ್ಮದ ವ್ಯವಹಾರದಲ್ಲಿ ದ್ವೇಷ, ಹಿಂಸೆ, ಅಸಹನೆ ಇರಬಾರದು. ಅದು ಪ್ರತಿವ್ಯಕ್ತಿಯಲ್ಲಿ, ಮಹಿಳೆಯಲ್ಲಿ, ದೈವತ್ವವನ್ನು ಗುರುತಿಸುವಂತಿರಬೇಕು. ಮಾನವತೆ ತನ್ನ ಸತ್ಯವಾದ ದಿವ್ಯ ಸ್ವಭಾವವನ್ನು ಅರಿಯುವಲ್ಲಿ ಸಹಕಾರ ನೀಡಲು ತನ್ನ ಶಕ್ತಿಯನ್ನು ವಿನಿಯೋಗಿಸುವಂತಹದಾಗಿರಬೇಕು.’

Swami Vivekanandaವಿಶ್ವ ಧರ್ಮ ಸಮ್ಮೇಲನದ ಕೊನೆಯ ದಿನ (27 ಸಪ್ಟೆಂಬರ್‌,1893) ಸ್ವಾಮಿ ವಿವೇಕಾನಂದರು ಸಮ್ಮೇಲನದ ಸಂಘಟಕರನ್ನು ಅಭಿನಂದಿಸಿದರು. ‘‘ಧಾರ್ಮಿಕ ಏಕತೆಯ ಬಗ್ಗೆ ಸಾಕಷ್ಟು ಮಾತುಗಳನ್ನು ಕೇಳಿದ್ದೀರಿ. ಇದರ ಬಗ್ಗೆ ಒಂದು ಹೊಸ ಸಿದ್ಧಾಂತವನ್ನು ನಾನೀಗ ಮಂಡಿಸುತ್ತಿಲ್ಲ. ಈ ಏಕತೆಯನ್ನು ಒಂದು ಧರ್ಮವು ಇತರ ಧರ್ಮಗಳನ್ನು ನಾಶಮಾಡಿ ವಿಜಯ ಸಾಧಿಸುವುದರ ಮೂಲಕ ಸಾಧ್ಯ ಎಂದು ಯಾರಾದರೂ ತಿಳಿದಿದ್ದರೆ, ಅವರಿಗೆ ನಾನು ಹೇಳುವೆ, ‘ಬಂಧುವೆ, ನಿನ್ನದು ಅಸಾಧ್ಯವಾದ ಆಸೆ’ ಎಂದು. ಕ್ರಿಸ್ತ ಧರ್ಮೀಯರು ಹಿಂದುಗಳಾಗಬೇಕೆಂದು ನಾನು ಬಯಸುವೆನೇ? ದೇವರಾಣೆಗೂ ಇಲ್ಲ. ಅದೇರೀತಿ ಹಿಂದುಗಳು ಅಥವಾ ಬೌದ್ಧರು ಕ್ರಿಸ್ತಧರ್ಮಿಯರಾಗಬೇಕಿಲ್ಲ. ಒಂದು ಬೀಜವನ್ನು ನೆಲದಲ್ಲಿ ಹೂಳುತ್ತಾರೆ. ಅದರ ಸುತ್ತಲೂ ಮಣ್ಣು, ಗಾಳಿ, ನೀರು ಹರಿಸುತ್ತಾರೆ. ಆ ಬೀಜ ಬೆಳೆದು ಮಣ್ಣು, ಗಾಳಿ ಅಥವಾ ನೀರಾಗುವುದೇ? ಇಲ್ಲ. ಅದು ಸಸಿಯಾಗಿ ಬೆಳೆಯುತ್ತದೆ. ಮಣ್ಣು, ಗಾಳಿ, ನೀರನ್ನು ಆತ್ಮಸಾತ್‌ ಮಾಡಿಕೊಂಡು ಬೆಳೆಯುತ್ತದೆ. ಅದೇ ಮಾತನ್ನು ಧರ್ಮಗಳ ಬಗ್ಗೆ ಹೇಳಬಹುದು. ಕ್ರಿಸ್ತರು ಹಿಂದು ಅಥವಾ ಬೌದ್ಧರಾಗಬೇಕಿಲ್ಲ, ಹಿಂದು ಅಥವಾ ಬೌದ್ಧ ಧರ್ಮೀಯರು ಕ್ರಿಸ್ತರಾಗಬೇಕಿಲ್ಲ. ... ಪ್ರತಿಯಾಂದು ಧರ್ಮದ ಧ್ವಜದ ಮೇಲೆ ಈ ಸಾಲುಗಳನ್ನು ಬರೆಯೋಣ: ‘ಸಹಕಾರ ನೀಡಿರಿ, ಹೊಡೆದಾಡಬೇಡಿರಿ’, ‘ಹೊಂದಿಕೊಳ್ಳಿರಿ, ನಾಶ ಮಾಡಬೇಡಿರಿ’, ‘ನಮಗೆ ಬೇಕಾದದ್ದು ಸಾಮರಸ್ಯ ಮತ್ತು ಶಾಂತಿ’’.

ವಿವೇಕಾನಂದರಿಗೆ ವಿಶ್ವ ಮಾನ್ಯತೆ, ವಿಶ್ವ ಪ್ರಸಿದ್ಧಿಯೇನೋ ಬಂತು ಆದರೆ ಅವರ ವಿರುದ್ಧ ಅಪಸ್ವರಗಳು ಇಲ್ಲದೆ ಇರಲಿಲ್ಲ. ಅವರ ಯಶವನ್ನು ಸಹಿಸಲಾಗದೇ ಕೆಲವರು ಅವರ ಮೇಲೆ ಟೀಕೆಯ ಪ್ರಹಾರ ಮಾಡಿದರು.

ವಿದೇಶದಲ್ಲಿ ಅಷ್ಟೇ ಅಲ್ಲ ಭಾರತದಲ್ಲಿ ಕೂಡ. ಅದರ ವಿವರ ಶಾಸ್ತ್ರಿಗಳು ತಮ್ಮ ಪುಸ್ತಕದಲ್ಲಿ ದಾಖಲಿಸುತ್ತಾರೆ. ಸ್ವಾಮಿಗಳಿಗೆ ವಿಶ್ವಧರ್ಮ ಸಮ್ಮೇಲನವು ಕೀರ್ತಿ ತಂದ ನಂತರ, ಅವರು ಬಹುಜನರ ಪ್ರೀತಿಗೆ ಪಾತ್ರರಾದರು. ಆದರೆ ಅದನ್ನು ಆ ಸಂಸ್ಥೆಯ ಜನರು ಸಹಿಸಲಿಲ್ಲ. ಕರುಬಿದರು. ಸ್ವಾಮಿಗಳಿಗೆ ಎಲ್ಲ ಕಡೆಗೂ ಅಡ್ಡಿ ಆತಂಕ ಒಡ್ಡಲು ಶುರುಮಾಡಿದರು. ತಮ್ಮ ಸಂಸ್ಥೆಯ ಸದಸ್ಯರೇನಾದರೂ ಸ್ವಾಮಿಗಳ ಉಪನ್ಯಾಸ ಕೇಳಿದರೆ ಬಹಿಷ್ಕಾರ ಹಾಕುವುದಾಗಿ ಬೆದರಿಸಿದರು. ಕಲಕತ್ತೆಯಲ್ಲಿ ಕೂಡ ಸ್ವಾಮಿಗಳನ್ನು ದ್ವೇಷಿಸುವವರು ಇದ್ದರು.

‘ಬಂಗವಾಸಿ’ ಎಂಬ ಪತ್ರಿಕೆ ‘ಸ್ವಾಮಿಗಳು ಸನ್ಯಾಸಕ್ಕೆ ಅರ್ಹರಲ್ಲ, ಸಮುದ್ರಯಾನ ಮಾಡಿದ್ದರಿಂದ ಧರ್ಮಭ್ರಷ್ಟರಾಗಿದ್ದರೆ’ ಎಂದು ಆಪಾದಿಸಿ ವಿಷಕಾರಿತ್ತು. ಈ ವಿಷಯವನ್ನು ಅಳಸಿಂಗರು ಪತ್ರ ಬರೆದು ಸ್ವಾಮಿಗಳಿಗೆ ತಿಳಿಸಿದಾದ ಅವರು ಉತ್ತರಿಸಿದ್ದರು, ‘‘ನನ್ನನ್ನು ದೂಷಿಸುವರಿಗೆಲ್ಲ ನಾನು ಕೊಡುವ ಉತ್ತರ ಏಕರೀತಿಯ ಮೌನವೆಂದು ನಿನ್ನ ಮಿತ್ರರಿಗೆ ಹೇಳು. ನಾನು ಅವರ ದೂಷಣೆಗೆ ಪ್ರತಿಯಾಗಿ ದೂಷಿಸಿದರೆ, ಅದು ನನ್ನನ್ನು ಅವರ ಮಟ್ಟಕ್ಕೆ, ಕೆಳಕ್ಕೇ ಎಳೆದು ತರುವದು. ... ನನಗಾಗಿ ನನ್ನ ಮಿತ್ರರು ಯಾರೊಡನೆಯೂ ಜಗಳಕ್ಕೆ ಹೋಗಕೂಡದೆಂದು ತಿಳಿಸು.’’

ದೀರ್ಘಕಾಲ ಅಮೇರಿಕೆಯಲ್ಲಿ ವಾಸ್ತವ್ಯ ಹೂಡಿದ್ದರು. ಹಿಂದೂಧರ್ಮದ ಬಗ್ಗೆ ಭಾಷಣ ಮಾಡಿದರು, ಪುಸ್ತಕಗಳನ್ನು ಬರೆದರು, ಅಸಂಖ್ಯ ಶಿಷ್ಯರನ್ನು, ಅನುಯಾಯಿಗಳನ್ನು ಪಡೆದರು. ಮೂರೂವರೆ ವರ್ಷಗಳ ತರುವಾಯ ಭಾರತಕ್ಕೆ ಮರಳಿದರು ( ಮದ್ರಾಸಿಗೆ ಬಂದದ್ದು 6-2-1897). ಅಲ್ಲಿಯ ವರೆಗೆ ಅವರ ಶಿಷ್ಯ ಅಳಸಿಂಗರು ಪತ್ರಮುಖೇನ ಮಾರ್ಗದರ್ಶನ ಪಡೆಯುತ್ತಿದ್ದರು.

ವಿವೇಕಾನಂದ ಅನುಪಸ್ಥಿತಿಯಲ್ಲಿ ಕೂಡ ಭಾರತದಾದ್ಯಂತ ಅವರ ವಿಜಯವನ್ನು ಹಬ್ಬದಂತೆ ಆಚರಿಸಲಾಯಿತು. ಸ್ವಾಮಿಗಳ ವಿಜಯ ಭಾರತದಲ್ಲಿ ಮನೆಮಾತಾಗಿತ್ತು. ಜಾಗ್ರತಿಯ ಹೊಸ ಗಾಳಿ ದೇಶದಾದ್ಯಂತ ಬೀಸಿತು. ಸ್ವಾಮಿಗಳ ಅಭಿನಂದನ ಸಮಾರಂಭಗಳು ಏರ್ಪಟ್ಟವು. ಮದ್ರಾಸಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ನ್ಯಾಯಮೂರ್ತಿ ಸುಬ್ರಹ್ಮಣ್ಯ ಅಯ್ಯರ್‌, ಪ್ರೊ. ಎಂ. ರಂಗಾಚಾರ್ಯ, ಸರ್‌ ರಾಮಸ್ವಾಮಿ ಮೊದಲಿಯಾರ ಪಾಲುಗೊಂಡಿದ್ದರು. ಖೇತ್ರಿ ಮಹಾರಾಜ ವಿಶೇಷ ದರ್ಬಾರು ಕರೆದು ಸ್ವಾಮಿಗಳ ಗುಣಗಾನ ಮಾಡಿದ.

ಬೆಂಗಳೂರಲ್ಲಿ ಸೆಂಟ್ರಲ್‌ ಕಾಲೇಜಿನಲ್ಲಿ ಬೃಹತ್‌ ಸಭೆ ಸೇರಿತ್ತು. ಮೈಸೂರಿನ ದಿವಾನರಾಗಿದ್ದ ಸರ್‌ ಕೆ ಶೇಷಾದ್ರಿ ಐಯ್ಯರ್‌ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಮಹರಾಜರು ವಿಶೇಷ ಸಂದೇಶ ಕಳಿಸಿದ್ದರು. ಅವರ ಹುಟ್ಟೂರಾದ ಕಲಕತ್ತೆಯಲ್ಲಿಯೂ ಸಭೆಗಳು ನಡೆದವು. ನರೇಂದ್ರ, ವಿದಿಷಾನಂದ, ಸಚ್ಚಿದಾನಂದ ಮೊದಲಾದ ಹೆಸರಿನಲ್ಲಿ ಸಂಚರಿಸುತ್ತಿದ್ದ ತಮ್ಮ ನರೇಂದ್ರನೇ ವಿವೇಕಾನಂದ ಎಂದು ತಿಳಿದಾಗ ಕಲಕತ್ತೆಯ ಕೆಲವು ಅಭಿಮಾನಿಗಳಿಗೆ ಪರಮಾನಂದವಾಗಿತ್ತು.

ಸ್ವಾಮಿಗಳು ಅಳಸಿಂಗರಿಗೆ ಪತ್ರ ಬರೆಯುತ್ತಲೇ ಇದ್ದರು. ಅರ್ಜುನನನ್ನು ನಿಮಿತ್ತ ಮಾಡಿ ಶ್ರೀ ಕೃಷ್ಣ ಗೀತೋಪದೇಶ ಜಗತ್ತಿಗೆ ಮಾಡಿದಂತೆ ಅಳಸಿಂಗರನ್ನು ನಿಮಿತ್ತ ಮಾಡಿ ಸ್ವಾಮಿ ವಿವೇಕಾನಂದರು ಭಾರತದ ತರುಣರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಸ್ವಾಮಿಗಳು ಒಂದು ಪತ್ರದಲ್ಲಿ ಹೀಗೆಬರೆಯುತ್ತಾರೆ, ‘‘ಸುಶಿಕ್ಷಿತರಾದ ಯುವ ಜನರ ಮೇಲೆ ನಿನ್ನ ಪ್ರಭಾವ ಬೀರು. ಅವರೆಲ್ಲರನ್ನು ಒಟ್ಟಿಗೆ ಸೇರಿಸು. ಮಹಾ ಕಾಯಗಳು ಮಹಾ ತ್ಯಾಗದಿಂದ ಸಿದ್ಧಿಸುವವು. ಸ್ವಾರ್ಥ ಬೇಡ. ... ಹಲವು ಹುಲ್ಲಿನ ಎಳೆಗಳನ್ನು ಸೇರಿಸಿ ಹಗ್ಗ ಹೊಸೆದರೆ ಬಲಿಷ್ಠವಾದ ಆನೆಯನ್ನೂ ಕಟ್ಟಿಹಾಕಬಹುದು ಎಂಬುದನ್ನು ನೆನಪಿನಲ್ಲಿಡು.’’

ಸ್ವಾಮಿಗಳಿಂದ ಸ್ಫೂರ್ತಿ ಪಡೆದು ‘‘ಬ್ರಹ್ಮವಾದಿನ್‌’’ ಎಂಬ ವಾರ ಪತ್ರಿಕೆಯನ್ನು ಅಳಸಿಂಗ ಸಂಪಾದಿಸಿದರು, ಪ್ರಕಟಿಸಿದರು. ಸ್ವಾಮಿಗಳ ಸಂದೇಶ, ವಿಚಾರಧಾರೆಯನ್ನು ಪ್ರಕಟಿಸುತಿದ್ದರು. ಅವರು ಬರೆದ ಸಂಪಾದಕೀಯ ಓದಿ ಪ್ರಭಾವಿತರಾದ ಪ್ರೊ. ಮ್ಯಾಕ್ಸ್‌ ಮಿಲರ ಅವುಗಳ ಸಂಗ್ರಹಕ್ಕೆ ಒಂದು ಮುನ್ನುಡಿಯನ್ನು ಬರೆದುಕೊಟ್ಟರು. ಈ ಪತ್ರಿಕೆ ವಿದ್ವಾಂಸರಿಗಾಗಿ ಇತ್ತು. ಸಾಮಾನ್ಯ ಜನತೆಗಾಗಿ ಸುಲಭಶೈಲಿಯ ಪತ್ರಿಕೆಯಾಂದನ್ನು ಪ್ರಾರಂಭಿಸಿದರು. ಅದುವೆ ‘‘ಪ್ರಬುದ್ಧ ಭಾರತ’’. ಅದಲ್ಲದೆ ‘‘ಇಂಡಿಯಾ’’ ಎಂಬ ತಮಿಳು ರಾಷ್ಟ್ರೀಯ ಪತ್ರಿಕೆಯನ್ನೂ ಪ್ರಾರಂಭಿಸಿದರು. ಅದರ ಸಂಪಾದನ ಕಾರ್ಯ ಪ್ರಸಿದ್ಧ ತಮಿಳು ಕವಿ ಸುಬ್ರಹ್ಮಣ್ಯ ಭಾರತಿ ಅವರಿಗೆ ವಹಿಸಿಕೊಟ್ಟರು.

1897ರಲ್ಲಿ ಸ್ವಾಮಿ ವಿವೇಕಾನಂದ ಭಾರತಕ್ಕೆ ಮರಳಿದಾಗ ಅಭೂತಪೂರ್ವ ಸ್ವಾಗತವನ್ನು ಅಳಸಿಂಗರೇ ಆಯೋಜಿಸಿದ್ದರು. ಕುದುರೆಯ ಸಾರೋಟದಲ್ಲಿ ಸ್ವಾಮಿಗಳನ್ನು ಕುಳ್ಳಿರಿಸಿ ಮದರಾಸಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ತೆಗೆದರು. ದಾರಿಯುದ್ದಕ್ಕೂ ತಳಿರು ತೋರಣ ಹೂಮಾಲೆಯ ಅಲಂಕಾರವಿತ್ತು. ‘ವಿವೇಕಾನಂದ ಚಿರಾಯುವಾಗಲಿ’, ದೇವರ ಸೇವಕನಿಗೆ ಜಯವಾಗಲಿ’, ‘ಎಚ್ಚತ್ತ ಭಾರತಕ್ಕೆ ಹೃತ್ಪೂರ್ವಕ ಸ್ವಾಗತ’ ಮೊದಲಾದ ಘೋಷಗಳು ಮೊಳಗಿದವು. ಉತ್ಸಾಹದ ಅತಿರೇಕವಾದಾಗ ಕುದುರೆಗಳನ್ನು ಬದಿಗೆ ಸರಿಸಿ ಜನರೇ ತೇರಿನಂತೆ ಸಾರೋಟವನ್ನು ಎಳೆದು ಸಂತೋಷಿಸಿದರು. ವಿವೇಕಾನಂದರು ‘ಸಮರ ನೀತಿ’ ಎಂಬ ಭಾಷಣ ಮಾಡಿದರು. ತಾವು ಚಿಕಾಗೋ ಪ್ರಯಾಣ ಕೈಕೊಳ್ಳಲು ಕಾರಣರಾದ ಅಳಸಿಂಗರನ್ನು, ಅವರ ಮಿತ್ರರನ್ನು ಅಭಿನಂದಿಸಿದರು.

ಅಳಸಿಂಗರು ಶ್ರೀ ವೈಷ್ಣವರು. ವಿವೇಕಾನಂದರು ಬ್ರಹ್ಮಣೇತರ ಸನ್ಯಾಸಿಗಳು. ಕಾಯಸ್ಥರು, ಕ್ಷತ್ರಿಯರು. ಮೇಲೆ ಅದ್ವೈತ ಪಂಥಿಗಳು. ಅವರ ಹಿಂದೆ ಓಡಾಡುವ ಅಳಸಿಂಗರನ್ನು ಅವರ ಸಂಬಂಧಿಕರು ಮೊದಮೊದಲು ಮೆಚ್ಚಲಿಲ್ಲ. ಅವರ ಅಪಾರ ಗುರು ಪ್ರೇಮ, ಶ್ರದ್ಧೆಗಳನ್ನು ಕಂಡು ನಂತರ ಅವರ ಅಭಿಮಾನಿಗಳೇ ಆದರು. ಅಳಸಿಂಗರ ಮದುವೆ ಸಣ್ಣ ವಯಸ್ಸಿನಲ್ಲೇ ಆಗಿತ್ತು. ಪತ್ನಿ ರಂಗಮ್ಮ ಪತಿಯ ಕಾರ್ಯದಲ್ಲಿ ಅನುಕೂಲೆಯಾಗಿದ್ದರು. ಮನೆಯಲ್ಲಿ ಅತ್ತೆ, ಐದು ಜನ ಮಕ್ಕಳು, ಬಂಧು ಬಳಗ ಅಲ್ಲದೆ ಇಷ್ಟಮಿತ್ರರೂ ಇರುತ್ತಿದ್ದರು.

ರಂಗಮ್ಮ ತೀರಿಕೊಂಡಾಗ ಅಳಸಿಂಗರಿಗೆ ನಲವತ್ತು ವಯಸ್ಸು. ಮಕ್ಕಳನ್ನು ನೋಡಲು ಇನ್ನೊಂದು ಮದುವೆಗೆ ಆಗ್ರಹ ಬಂದರೂ ಅವರು ಮದುವೆಯಾಗಲಿಲ್ಲ. ಹಿರಿಯ ಮಗನಿಗೆ 14 ವಯಸ್ಸು. ಉಳಿದವರು ಚಿಕ್ಕ ಮಕ್ಕಳು. ‘ಬ್ರಹ್ಮವಾದಿನ್‌’ ಪತ್ರಿಕೆ ಮುದ್ರಣ ಮಾಡಲು ಒಂದು ಪ್ರೆಸ್‌ ಹಾಕಿದ್ದರು. ಅದಕ್ಕೆ ಸಾಲ ಮಾಡಿದ್ದರು. ಸಮಾಜ ಸೇವೆಯಲ್ಲಿ ಅಳಸಿಂಗರು ನಿಸ್ಸೀಮರಾಗಿದ್ದರು. ಅವರ ಆರ್ಥಿಕ ಸ್ಥಿತಿ ಸರಿ ಇರಲಿಲ್ಲ. ವಿವೇಕಾನಂದರು ತಮ್ಮ ಅಮೇರಿಕನ್‌ ಶಿಷ್ಯನೊಬ್ಬನಿಂದ ಒಂದು ಲಕ್ಷ ರೂಪಾಯಿ ಸಹಾಯ ಧನ ಸಿಸ್ಟರ್‌ ನಿವೇದಿತಾ ಅವರ ಮುಖಾಂತರ ಕೊಡಿಸಲು ಬಂದರೆ ಅಳಸಿಂಗರು ವಿನಮ್ರರಾಗಿ ಆ ಸಹಾಯ ನಿರಾಕರಿಸಿದರು. ಅವರು ತಮ್ಮ ಶಾಲೆಯಲ್ಲು ಅತ್ಯಂತ ಪ್ರಿಯರಾದ ವಿಜ್ಞಾನದ ಅಧ್ಯಾಪಕರಾಗಿದ್ದರು.

ಸಮಾಜ ಸೇವೆಯಲ್ಲಿ ತೊಡಗಿದ್ದರಿಂದ ಅವರು ತಮ್ಮ ಪಾಠಗಳನ್ನು ಮುಗಿಸಲು ಸ್ಪೆಶಲ್‌ ಕ್ಲಾಸ್‌ ಇಡಬೇಕಾಗುತ್ತಿತ್ತು. ಆ ಕ್ಲಾಸುಗಳಿಗೆ ಬೇರೆ ಶಾಲೆಯ ಮಕ್ಕಳೂ ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದರಂತೆ. ಇವರು ಜಾಮೀನಿನಿಂದ ಸಾಲ ಪಡೆದ ಒಬ್ಬ ವ್ಯಕ್ತಿ ಹಣ ತುಂಬದೇ ಇರಲು, ಇವರೇ ಹಣ ತುಂಬುವ ಪ್ರಸಂಗ ಬಂತು. ನಂತರ ಆ ಮೋಸಗಾರ ವ್ಯಕ್ತಿ ಇವರನ್ನು ಕಾಣಲು ಬಂದಾಗ, ಹಿಂದಿನದೆಲ್ಲ ಮರೆತು ಅವನಿಗೆ ಪ್ರೀತಿಯಿಂದ ಪಚರಿಸುತ್ತಿದ್ದುದನ್ನು ಕಂಡು ಅವರ ತಾಯಿ ಮಗನಿಗೆ ಬೈದಾಗ, ‘ಹೋಗಲಿ ಬಿಡಮ್ಮ, ಸಾಲು ಮುಟ್ಟಿತಲ್ಲ, ಯಾರು ತುಂಬಿದರೇನು?’ ಎಂದರಂತೆ. ಅಂತಹ ಮಹಾನುಭಾವರು ಅಳಸಿಂಗರು. ಅವರು ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿ 44ರ ಹರಯದಲ್ಲಿಯೇ ಮೃತರಾದರು. ಮಕ್ಕಳು ಚಿಕ್ಕವರು. ಆ ಸಂದರ್ಭದಲ್ಲಿ ಅಳಸಿಂಗರ ಮಿತ್ರವರ್ಗ ಇವರ ಮನೆತನದ ಸಹಾಯಕ್ಕೆ ಬಂದ ವಿಚಾರ ವಿವರವಾಗಿ ಶಾಸ್ತ್ರಿಗಳು ಬರೆಯುತ್ತಾರೆ.

ಕರ್ಮಯೋಗಿ ಅಳಸಿಂಗ ಪೆರುಮಾಳರ ಜೀವನದ ಬಗ್ಗೆ ಪುಸ್ತಕ ಬರೆದು, ಅದನ್ನು ಇಂಗ್ಲೀಷಿಗೆ ಅನುವಾದಿಸಿ, ಅಳಸಿಂಗರಿಗೆ ಬಂದ ಸ್ವಾಮಿ ವಿವೇಕಾನಂದರ ಪತ್ರಗಳನ್ನು ಸಂಗ್ರಹಿಸಿ ಅವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ ಶ್ರೀ ಲಕ್ಷ್ಮೀನರಸಿಂಹ ಶಾಸ್ತ್ರಿಗಳು ಅಭಿನಂದನಾರ್ಹರು.


ಹಿಂದಿನ ಪುಟ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more