ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರೂಪದ ಬೇಂದ್ರೆ ಅಭಿಮಾನಿ ದೇವೂ ಪತ್ತಾರ

By Staff
|
Google Oneindia Kannada News

ಅಪರೂಪದ ಬೇಂದ್ರೆ ಅಭಿಮಾನಿ ದೇವೂ ಪತ್ತಾರ
ದೇವೂ ಅವರ ಮನೆಯಲ್ಲಿ ಬೇಂದ್ರೆ ವಾತಾವರಣ ಕಂಡು ನನಗೆ ಅಲ್ಲಾವುದ್ದೀನನ ಮಾಯಾಪ್ರಪಂಚ ಕಂಡಷ್ಟೇ ಆನಂದವಾಯಿತು. ಮನೆಯಲ್ಲೆಲ್ಲ ಬೇಂದ್ರೆ ರೇಖಾಚಿತ್ರಗಳು, ವರ್ಣಚಿತ್ರಗಳು, ಅಪೂರ್ವ ಪ್ರತಿಮೆಗಳ ಪ್ರತಿಕೃತಿಗಳು. ಅವರ ಕಂಪ್ಯೂಟರ್‌ನಲ್ಲಿ ಮುಕ್ಕಾಲು ಭಾಗ ಅವಕಾಶ ಬೇಂದ್ರೆ ವ್ಯಾಪಿಸಿದ್ದರು.

Dr. G.V. Kulkarni ಡಾ।‘ಜೀವಿ’ ಕುಲಕರ್ಣಿ, ಮುಂಬಯಿ
[email protected]

ನಾನು ನಿವೃತ್ತನಾಗಿ ಒಂಭತ್ತು ವರ್ಷಗಳಾದವು. ಎಂ.ವಿ ಹಾಗೂ ಚೀನಾಯ್‌ ಕಾಲೇಜುಗಳಲ್ಲಿ 33 ವರ್ಷ ಕೆಲಸ ಮಾಡಿದೆ. ಅದಕ್ಕೆ ಮೊದಲು ಖಾಲ್ಸಾ ಹಾಗೂ ಡಾಣೂಕರ್‌ ಕಾಲೇಜುಗಳಲ್ಲಿ 4 ವರ್ಷ ದುಡಿದಿದ್ದೆ. 37 ವರ್ಷಗಳ ಹಲವಾರು ಲೇಖನಗಳನ್ನು, 9 ಪುಸ್ತಕಗಳನ್ನು ಪ್ರಕಟಿಸಿದ್ದೆ. ನಿವೃತ್ತಿಯ ನಂತರ ಯೋಗಾಭ್ಯಾಸದಲ್ಲಿ, ನಿಸರ್ಗ ಚಿಕಿತ್ಸೆಯಲ್ಲಿ, ನನ್ನನ್ನು ನಾನೇ ತೊಡಗಿಸಿಕೊಂಡೆ.

ಆ ಮಧ್ಯೆ ನಾನು ಸಾಹಿತ್ಯ ಕ್ಷೇತ್ರಕ್ಕೆ ವಿದಾಯ ಹೇಳಿದೆ ಎಂದು ಕೆಲವರು ಭಾವಿಸಿದರು. ಆದರೆ ಆದದ್ದೇ ಬೇರೆ. ಎಂಟು ವರ್ಷಗಳಲ್ಲಿ ಅಸಂಖ್ಯ ಲೇಖನಗಳನ್ನು ಬರೆದೆ, 11 ಪುಸ್ತಕ ಬರೆದು ಪ್ರಕಟಿಸಿದೆ (ಮೊದಲನೆಯ ಪುಸ್ತಕ ‘ನಾ ಕಂಡ ಬೇಂದ್ರೆ 1997ರಲ್ಲಿ ಪ್ರಕಟವಾಗಿತ್ತು, ಹನ್ನೊಂದನೆಯದು ಮಧುರಚೆನ್ನರ ‘ನನ್ನ ನಲ್ಲ’ದ ಇಂಗ್ಲಿಷ್‌ ಅನುವಾದ 2005ರಲ್ಲಿ ಪ್ರಕಟವಾಯ್ತು). ಹಿಂದೆ ಒಂದು ಸಲ ಭಾರತ ಪ್ರವಾಸ ಕೈಕೊಂಡಿದ್ದೆ. ನಿವೃತ್ತಿಯ ನಂತರ ನಾಲ್ಕು ಸಲ ಭಾರತ ಪರಿಭ್ರಮಣ ಕೈಕೊಂಡಿದ್ದರೆ, ಎರಡು ಸಲ ವಿದೇಶ ಸಂಚಾರ ಕೈಕೊಂಡೆ. ಈಗಂತೂ ಎರಡು ತಿಂಗಳಿಗೊಮ್ಮೆ ಕರ್ನಾಟಕ ಪ್ರಯಾಣ ನಡೆದಿದೆ. ಇದು ನನಗೆ ಬಾಳಿನಲ್ಲಿಯ ಶ್ರದ್ಧೆಯನ್ನು ಹೆಚ್ಚಿಸಿದೆ. ಹೊಸ ಪ್ರದೇಶ ನೋಡಿದ್ದೇನೆ. ಹೊಸ ಮಿತ್ರರನ್ನು ಪಡೆದಿದ್ದೇನೆ. ಒಬ್ಬ ಮಿತ್ರನನ್ನು ಪಡೆದಾಗ ಒಂದು ಹೊಸ ಪುಸ್ತಕ ಓದಿದಷ್ಟೇ ಸಂತಸ ನನಗೆ.

Devu Pattarಡಾ। ಎಂ.ಎಂ.ಕಲಬುರ್ಗಿಯವರು ಧಾರವಾಡದ ‘ಡಾ। ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌’ನ ಅಧ್ಯಕ್ಷರಾದಾಗಿನಿಂದ ನೂರಾರು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕರ್ನಾಟಕದ ಒಳಗೆ-ಹೊರಗೆ ಬೇಂದ್ರೆಯವರ ಬಗ್ಗೆ, ಅವರನ್ನು ಬಲ್ಲವರಿಂದ, ಉಪನ್ಯಾಸ ಏರ್ಪಡಿಸುತ್ತಿದ್ದಾರೆ. ಡಾ। ಜಗನ್ನಾಥ ಹೆಬ್ಬಾಳೆ ಅವರು ಬೀದರದಿಂದ ನನಗೆ ಫೋನ್‌ ಮಾಡಿ ಬೇಂದ್ರೆಯವರ ಬಗ್ಗೆ ಭಾಷಣ ಮಾಡಲು ಆಮಂತ್ರಿಸಿದರು. ಅವರು ಇದೇ ಜನವರಿಯಲ್ಲಿ ಅದ್ಧೂರಿಯಾಗಿ ಕನ್ನಡ ಸಾಹಿತ್ಯ ಸಮ್ಮೇಲನವನ್ನು ನಡೆಸಿದ್ದರೆಂಬುದನ್ನು ಅರಿತಿದ್ದೆ.

ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕ ಹಾಗೂ ರಾಷ್ಟ್ರೀಯ ಬೇಂದ್ರೆ ಸ್ಮಾರಕ ಇವುಗಳ ಜಂಟಿ ಆಶ್ರಯದಲ್ಲಿ ಈ ಭಾಷಣವಿದೆ ಎಂದೂ, ನನ್ನ ಹೆಸರನ್ನು ಡಾ। ಕಲಬುರ್ಗಿಯವರು ಸೂಚಿಸಿದ್ದಾರೆಂದೂ, ಅವರು ಹೇಳಿದಾಗ ನನಗೆ ಆನಂದವೇ ಆಯಿತು. ನಾನು ಬೀದರ ನೋಡಿರಲಿಲ್ಲ. ಈ ನಿಮಿತ್ತದಿಂದ ನೋಡಿದಂತಾಗುವದೆಂಬ ಸಂತಸವಿದ್ದುದರಿಂದ ನನ್ನ ಒಪ್ಪಿಗೆಯನ್ನು ತಿಳಿಸಿದೆ. ‘ಕನ್ನಡವೆಂದರೆ ಕುಣಿದಾಡುವುದೆನ್ನ ಮನ’ ಎಂದಂತೆ ನನ್ನ ಮನ ಬೇಂದ್ರೆ ಎಂದರೂ ಕುಣಿದಾಡುತ್ತದೆ. ಮನವು ಗಗನದಂಗಣದಲ್ಲಿ ರಿಂಗಣ ಹಾಕತೊಡಗುತ್ತದೆ. ಒಂದೆರಡು ದಿನ ಅಲ್ಲಿದ್ದು ಸ್ಥಳೀಯ ಕಾಲೇಜುಗಳಲ್ಲಿ ಉಪನ್ಯಾಸ ಮಾಡಲು ಡಾ। ಹೆಬ್ಬಾಳೆ ಕೇಳಿದರು. ‘ಹಾಗಾದರೆ ಎರಡು ದಿನ ಯೋಗ ಶಿಬಿರ ನಡೆಸಬಹುದಲ್ಲಾ!’ ಎಂದೆ. ಅವರು ಒಪ್ಪಿದರು. ಬೇಂದ್ರೆ ಮತ್ತು ಯೋಗ ನನ್ನ ನೆಚ್ಚಿನ ವಿಷಯಗಳು. ಇದೂ ಒಂದು ನನ್ನ ಜೀವನದ ಯೋಗಾಯೋಗ ಎಂದೇಭಾವಿಸಿದವ ನಾನು. ಸೆಪ್ಟೆಂಬರ್‌ 3ರಂದು ನನ್ನ ಭಾಷಣವಾಯ್ತು. ಡಾ। ಹೆಬ್ಬಾಳೆಯವರ ಆದರಾತಿಥ್ಯ ಅಸದೃಶವಾಗಿತ್ತು.

ನನ್ನ ಭಾಷಣ ಮುಗಿದ ಮೇಲೆ ದೇವೂ ಪತ್ತಾರ ಎಂಬುವವರು ನನ್ನನ್ನು ಕಾಣುವ ಬಯಕೆ ವ್ಯಕ್ತಪಡಿಸಿದರು. ನಾನಿಳಿದಿದ್ದ ಕರ್ನಾಟಕ ಸಂಘದ ರೂಮಿಗೆ ಬರಲು ಕರೆದೆ. ಆದರೆ ಅವರು ತಮ್ಮ ಮನೆಗೆ ಬರಲು ಬಲವಂತ ಮಾಡಿದರು. ಡಾ। ಹೆಬ್ಬಾಳೆಯವರ ಬಲಗೈಬಂಟನಂತಿದ್ದ ದೇವೇಂದ್ರ ಕರಂಜೆ(ರಿಸರ್ಚ್‌ ಸ್ಕಾಲರ್‌) ನನ್ನನ್ನು ದೇವೂ ಅವರ ಮನೆಗೆ ಕರೆದುಕೊಂಡು ಹೋಗಲು ಸಿದ್ಧರಾದರು. ‘ದಿ ಹಿಂದೂ’ದ ಪ್ರತಿನಿಧಿ ಋಷಿಕೇಶ ಬಹಾದೂರ ದೇಸಾಯಿ ಕೂಡ ನನ್ನನ್ನು ಕಾಣಲು ದೇವೂ ಅವರ ಮನೆಗೇ ಬಂದರು.

ದೇವೂ ಅವರ ಮನೆಯಲ್ಲಿ ಬೇಂದ್ರೆ ವಾತಾವರಣ ಕಂಡು ನನಗೆ ಅಲ್ಲಾವುದ್ದೀನನ ಮಾಯಾಪ್ರಪಂಚ ಕಂಡಷ್ಟೇ ಆನಂದವಾಯಿತು. ಮನೆಯಲ್ಲೆಲ್ಲ ಬೇಂದ್ರೆ ರೇಖಾಚಿತ್ರಗಳು, ವರ್ಣಚಿತ್ರಗಳು, ಅಪೂರ್ವ ಪ್ರತಿಮೆಗಳ ಪ್ರತಿಕೃತಿಗಳು. ಅವರ ಕಂಪ್ಯೂಟರ್‌ನಲ್ಲಿ ಮುಕ್ಕಾಲು ಭಾಗ ಅವಕಾಶ ಬೇಂದ್ರೆ ವ್ಯಾಪಿಸಿದ್ದರು. ಅವರ ಮನೆಯಲ್ಲಿಯ ಪುಸ್ತಕ ಭಂಡಾರ ಬೇಂದ್ರೆಯವರ, ಬೇಂದ್ರೆಯವರ ಮೇಲಿನ ಪುಸ್ತಕಗಳಿಂದ ತುಂಬಿತ್ತು. ಬೇಂದ್ರೆ ಅಭಿಮಾನಿಯಾದ ನನ್ನ ಹೃದಯ ತುಂಬಿ ಬಂತು. ‘‘ಬೀದರದಲ್ಲಿರುವ ಪ್ರೇಕ್ಷಣೀಯ ಸ್ಥಳ ಯಾವುದು ಎಂದು ಯಾರಾದರೂ ಕೇಳಿದರೆ, ‘ನಿಮ್ಮ ಮನೆಯ ಗ್ರಂಥಾಲಯ’ ಎಂದು ಹೇಳುತ್ತೇನೆ’’ ಎಂಬ ಉದ್ಗಾರ ನನ್ನಿಂದ ಬಂತು.

ಹಾಗಾದರೆ ಈ ದೇವೂ ಯಾರು? ತಿಳಿದುಕೊಳ್ಳುವ ಕುತೂಹಲ ಯಾರಿಗಾದರೂ ಆದೀತು. ದೇವು ಪತ್ತಾರ (ಜನನ 1973)ಗುಲ್ಬರ್ಗಾದ ಬಳಿಯ ಶಹಾಪೂರಿನವರು. ತಂದೆ ಸ್ಕೂಲ್‌ ಅಧ್ಯಾಪಕರು. ಮನೆಯಲ್ಲಿ ಕನ್ನಡ ವಾತಾವರಣವಿತ್ತು. ‘ಬೇಂದ್ರೆಯವರ ಪರಿಚಯ ನಿಮಗೆ ಯಾವಾಗ ಆಯ್ತು?’ ಎಂದು ಕೇಳಿದರೆ ಅವರು ಹೇಳುತ್ತಾರೆ, ‘‘ನಾನಿನ್ನು ಎಂಟು ವರ್ಷದ ಬಾಲಕನಾಗಿದ್ದೆ. ಮನೆಯಲ್ಲಿ ದೀಪಾವಳಿಯ ಹಬ್ಬ. 26-101981(ನರಕ ಚತುರ್ದಶಿ). ಅಂದು ಮಧ್ಯಾಹ್ನ ಬೇಂದ್ರೆಯವರು ಮುಂಬೈಯಲ್ಲಿ ಹರಕಿಸನ್‌ದಾಸ ಆಸ್ಪತ್ರೆಯಲ್ಲಿ ಸ್ವರ್ಗಸ್ಥರಾದರು. ರೇಡಿಯೋದಲ್ಲಿ ಆ ಸುದ್ದಿ ಕೇಳಿದೆ. ಇಡೀ ದಿನ ಬೇಂದ್ರೆಯವರ ಬಗ್ಗೆ ಶೋಕ ಸಭೆ, ಬೇಂದ್ರೆ ಹಾಡುಗಳು, ಬೇಂದ್ರೆಯವರ ಧ್ವನಿ ಕೇಳುತ್ತ ತನ್ಮಯನಾದೆ. ಅಂದು ಉಂಟಾದ ಬೇಂದ್ರೆ ಪ್ರೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತ ನಡೆಯಿತು’’ಎಂದು.

ಕಾಲೇಜು ಶಿಕ್ಷಣಕ್ಕಾಗಿ ದೇವೂ ಧಾರವಾಡಕ್ಕೆ ಬಂದರು. ‘ಬಾರೋ ಸಾಧನಕೇರಿಗೆ । ಮರಳಿ ನಿನ್ನೀ ಊರಿಗೆ’. ಈ ಹಾಡು ಬಹುಶಃ ದೇವೂ ಅವರ ಕಿವಿಯಲ್ಲಿ ನಿನಾದಿಸತೊಡಗಿರಬೇಕು. ಬೇಂದ್ರೆಯವರನ್ನು ಯಾರು ಪ್ರೀತಿಸುತ್ತಾರೋ ಅವರ ಊರು ಧಾರವಾಡ ಆಗಿಬಿಡುತ್ತದೆ. ಧಾರವಾಡ ಊರಿಗೇ ಆ ಬಗೆಯ ವಿಲಕ್ಷಣ ಮಾಂತ್ರಿಕತೆ ಇದೆ. ಜನತಾ ಕಾಲೇಜು ಸೇರಿದರು. ಕವಿಯ ಮನೆಗೆ ಆಗಾಗ ಸಂದರ್ಶಿಸುತ್ತಿದ್ದರು. ದೇವೂ ಸ್ಕೂಲಿನಲ್ಲಿದ್ದಾಗ ಕೆಲವು ಪದ್ಯ ಅಚ್ಚಳಿಯದೇ ಅವರ ಮನದಲ್ಲಿ ಮನೆ ಮಾಡಿದ್ದವು. ‘ಯಾರು ನಿಂದವರಲ್ಲಿ , ತಾಯಿ ಎಂದೆ ... ಗಂಡಸಾದರೆ ನಿನ್ನ ಬಲಿಗೊಡುವಿ ಏನು?’, ‘ಮೂಡಲ ಮನೆಯಾ ಮುತ್ತಿನ ನೀರಿನ ಎರಕವ ಹೊಯ್ದಾ..’, ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ । ಚುಂಬಕ ಗಾಳಿಯು ಬೀಸುತಿದೆ । ’.

ದೇವೂ ಬಿ.ಎ.(1996)ಮುಗಿಸಿದಾಗ ಬೇಂದ್ರೆ ಜನ್ಮಶತಮಾನೋತ್ಸವದ ಸಂಭ್ರಮವಿತ್ತು. ಕರ್ನಾಟಕ ವಿಶ್ವವಿದ್ಯಾಲಯ ಸೇರಿ, ಇಂಗ್ಲಿಷ್‌ ವಿಷಯ ಆಯ್ದು, ಎಂ.ಎ.ಡಿಗ್ರಿ ಪಡೆದರು(1998). ಧಾರವಾಡದಲ್ಲಿ, ಬೇಂದ್ರೆಯವರ ಊರಲ್ಲಿ, ಪ್ರಾಧ್ಯಾಪಕನಾಗಿ ಇರಬೇಕೆಂಬ ಆಸೆ ಇತ್ತು. ಪೂರ್ಣಾವಧಿ ಕೆಲಸ ದೊರೆಯಲಿಲ್ಲ. ‘ಕೆ.ಎ.ಎಸ್‌’ ಪ್ರವೇಶ ಪರೀಕ್ಷೆಯಲ್ಲಿ ಪಾಸಾದರೂ ಅಂತಿಮ ಪರೀಕ್ಷೆಯಲ್ಲಿ ಆಯ್ಕೆಯಾಗಲಿಲ್ಲ. ಪತ್ರಿಕೋದ್ಯಮಿಯಾಗಲು ಹೊರಟರು. ಪ್ರಜಾವಾಣಿಯಲ್ಲಿ ಕೆಲಸ ಸಿಕ್ಕಿತು, ಬೆಂಗಳೂರಿಗೆ ಹೋದರು. ಅಲ್ಲಿ ಕೂಡ ಬೇಂದ್ರೆ ವಿಚಾರ ಇವರನ್ನು ಬಿಡಲಿಲ್ಲ.

ಬೇಂದ್ರೆಯವರು ನಿರುದ್ಯೋಗಿಯಾಗಿದ್ದಾಗ, ಮಾಸ್ತಿ ಆರ್ಥಿಕ ನೆರವು ನೀಡಿದ್ದರು, ‘ಜೀವನ’ ಪತ್ರಿಕೆಯ ಸಂಪಾದಕತ್ವ ವಹಿಸಿಕೊಟ್ಟಿದ್ದರು. ಈ ವಿಷಯ ದೇವೂ ಅವರಿಗೆ ತಿಳಿದಿತ್ತು. ಅದಕ್ಕೆ ಅವರು ‘ಜೀವನ’ ಪತ್ರಿಕೆಯ ಹಳೆಯ ಸಂಚಿಕೆಗಳನ್ನೆಲ್ಲಾ ಓದಿ, ‘ಪತ್ರಕಾರ ಬೇಂದ್ರೆ’ ಎಂಬ ಲೇಖನ ಬರೆದು ‘ಮಯೂರ’ ಪತ್ರಿಕೆಯಲ್ಲಿ ಪ್ರಕಟಿಸಿದರು.

ಬೇಂದ್ರೆಯವರ ಮೇಲಿನ ಪ್ರೀತಿ, ಹವ್ಯಾಸವಾಗಿ, ಭಕ್ತಿಯಾಗಿ, ಶ್ರದ್ಧೆಯಾಗಿ ದಿನೇ ದಿನೇ ಬೆಳೆಯತೊಡಗಿತು. ಬೇಂದ್ರೆಯವರ ಎಲ್ಲ ಧ್ವನಿಮುದ್ರಿಕೆಗಳನ್ನು ಸಂಗ್ರಹಿಸಿದರು, ಭಾವಗೀತ (ಭೀಮಸೇನ ಜೋಶಿ ಮೊದಲಾದವರು ಹಾಡಿದ ಭಾವಗೀತಗಳು), ಸಿನೆಮಾದಲ್ಲಿ ಬೇಂದ್ರೆಯವರ ಹಾಡುಗಳು, ರೇಡಿಯೋದಲ್ಲಿ ಬಿತ್ತರಗೊಂಡ ಬೇಂದ್ರೆ ಭಾವಗೀತಗಳು.. ಹೀಗೆ ಸಂಗ್ರಹ ಬೆಳೆಯತೊಡಗಿತು. ಬೇಂದ್ರೆಯವರ ಪದ್ಯಗಳನ್ನು ಆಧರಿಸಿ ಬರೆದ ರೇಖಾ ಚಿತ್ರಗಳು ( ಎನ್‌.ಸಿ. ದೇಸಾಯಿ ಮೊದಲಾದ ಕಲಾವಿದರು ಬಿಡಿಸಿದ ಚಿತ್ರಗಳು), ಬೇಂದ್ರೆ ಛಾಯಾಚಿತ್ರಗಳು, ಬೇಂದ್ರೆಯವರ ವರ್ಣಚಿತ್ರಗಳು, ಇವನ್ನೆಲ್ಲ ಸಂಗ್ರಹಿಸಲು ಪ್ರಾರಂಭಿಸಿದರು.

ಬೇಂದ್ರೆ ಬಗ್ಗೆ ಯಾವ ಪುಸ್ತಕದಲ್ಲೇ ಬಂದಿರಲಿ, ಇಲ್ಲವೇ ದೀಪಾವಳಿ ಸಂಚಿಕೆಯಲ್ಲೇ ಬಂದಿರಲಿ, ಅವು ಇವರ ಸಂಗ್ರಹ ಸೇರಿದವು. ಬೇಂದ್ರೆಯವರ ಬಗ್ಗೆ ‘ಎನ್ಕೆ’ ಕುಲಕರ್ಣಿ ಬರೆದ ಕಾದಂಬರಿ ‘ದತ್ತೂ ಮಾಸ್ತರ್‌’ ಪ್ರಜಾವಾಣಿಯಲ್ಲಿ ಧಾರಾವಾಹಿಯಾಗಿ ಬಂದಾಗ ಅದಕ್ಕೆ ತೆಗೆಯಲಾದ ಎಲ್ಲ ರೇಖಾ ಚಿತ್ರ ಇವರು ಸಂಗ್ರಹಿಸಿದರು. ಕಲಾವಿದ ನಾಯಡು ರಚಿಸಿದ ಬೇಂದ್ರೆ ಮೂರ್ತಿಯ ಪ್ರತಿಕೃತಿ ದೊರಕಿಸಿದರು. ತಾನು ಏನಾದರೂ ಮಾಡಬೇಕು, ಅದಕ್ಕೆ ಒಂದು ಸೂತ್ರಬದ್ಧತೆ ಬರಬೇಕಾದರೆ, ತಾನು ಪಿ.ಎಚ್‌.ಡಿ.ಗೆ ರಿಜಿಸ್ಟರ್‌ ಮಾಡಿಸಬೇಕು ಎಂದರು. ಗೈಡ್‌ ದೊರೆಯಬೇಕಲ್ಲ, ಅದಕ್ಕೆ ಶೋಧ ನಡೆಯಿತು.

ತಾವು ಕೆಲಸಮಾಡುವ ಜಾಗ ಬೀದರ, ಅದೂ ಪ್ರಜಾವಾಣಿಯ ಪ್ರತಿನಿಧಿ. ಯಾವ ವಿಶ್ವ ವಿದ್ಯಾಲಯದಿಂದ ರಿಸರ್ಚ್‌ ನಡೆಸಬೇಕು ಎಂದು ಚಿಂತಿಸಿದರು. ಹಂಪಿ ವಿಶ್ವವಿದ್ಯಾಲಯದಲ್ಲಿ ಇವರಿಗೆ ಅನುಕೂಲತೆ ದೊರೆಯಿತು. ಡಾ। ಮಲ್ಲೇಪುರಂ ವೆಂಕಟೇಶ ಅವರು ಮಾರ್ಗದರ್ಶಕರಾಗಲು ಒಪ್ಪಿದರು. ಇದೊಂದು ಸಾಹಸ ಗಾಥೆ.

ಶಬ್ದಬ್ರಹ್ಮ ಬೇಂದ್ರೆಯವರಲ್ಲದೆ ನಾದಬ್ರಹ್ಮ ಮಲ್ಲಿಕಾರ್ಜುನ ಮನ್ಸೂರ, ಕುಂಚಬ್ರಹ್ಮ ಕಟ್ಟಂಗೇರಿ ಕೃಷ್ಣ ಹೆಬ್ಬಾರ, ಮೂವರನ್ನೂ ಕುರಿತು ಸಂಶೋಧನೆ ಮಾಡಿ ‘ಬಹುಶಾಸ್ತ್ರೀಯ’ (ಮಲ್ಟಿಡಿಸಿಪ್ಲಿನ್ಡ್‌) ಸಂಶೋಧನೆ ಮಾಡುವ ಮಹತ್ವಾಕಾಂಕ್ಷೆ ದೇವೂ ಅವರಿಗೆ ಇದೆ. ‘ಶಬ್ದ, ಚಿತ್ರ, ಸಂಗೀತ ತುಂಬಿದ ನಿಮ್ಮ ಥೀಸಿಸ್‌ ಪ್ರಕಟಿಸುವುದು ಹೇಗೆ?’ ಎಂದು ನಾನು ತಮಾಷೆ ಮಾಡಿದಾಗ ಮಿತ್ರ ಋಷಿಕೇಶ ಬಹಾದೂರ ದೇಸಾಯಿ, ‘‘ಅದು ಇಂಟರ್‌ನೆಟ್‌ನಲ್ಲಿ ಸಾಧ್ಯ, ಒಂದು ‘ವೆಬ್‌-ಸೈಟ್‌’ ತೆರೆಯಬೇಕಾಗುತ್ತದೆ’’ ಅಂದರು.

ರಾತ್ರಿ ಬಹಳ ಆಗಿತ್ತು. ನನಗೋ ಏಕಾದಶಿ ಇತ್ತು. ಇತರರು ಊಟ ಮಾಡಬೇಕಿತ್ತು. ನಾನು ಹೊರಡಲು ಸಿದ್ಧನಾದೆ. ‘‘ಗಿರೀಶ ಕಾರ್ನಾಡ್‌ ಒಂದು ಡಾಕ್ಯುಮೆಂಟರಿ ಚಿತ್ರ ಬೇಂದ್ರೆಯವರ ಮೇಲೆ ತೆಗೆದಿದ್ದಾರೆ. ಪ್ರೊ. ಕೀರ್ತಿನಾಥರು ಸ್ಕಿೃಪ್ಟ್‌ ಬರೆದಿದ್ದಾರೆ. ಅದು ನಿಮ್ಮಲ್ಲಿದೆಯೇ?’’ ಅಂದೆ. ದೇವು ಅಂದರು ‘‘ಇದೆ, ಕಂಪ್ಯೂಟರ್ನಲ್ಲಿ ಸಿ.ಡಿ. ಹಾಕ್ತೇನೆ, ನೋಡಿಹೋಗಿರಿ’’ ಅಂದರು. ‘‘ಅದಕ್ಕೀಗ ಸಮಯವಿಲ್ಲ’’ ಎಂದು ಹೇಳಿ ಹೊರಟೆ. ಮರುದಿನ ನನ್ನನ್ನು ಬೀಳ್ಕೊಡಲು ಬಂದ ದೇವು ನನಗೊಂದು ಕಾಣಿಕೆ ಕೊಟ್ಟರು. ಅದು ಬೇಂದ್ರೆ ಸಾಕ್ಷ್ಯಚಿತ್ರದ ಸಿ.ಡಿ. ಆಗಿತ್ತು.


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X