‘ಜಲನೇತಿ’ ಎಷ್ಟು ಸುಲಭ, ಎಂಥ ಅದ್ಭುತ ಪರಿಣಾಮ; ನಮಗೋ ಅಗಾಧ ಅಜ್ಞಾನ!
ಕೆಲವು ದಿನಗಳ ಮೇಲೆ ಭೆಟ್ಟಿಯಾದಾಗ, ‘ನಿಮ್ಮ ಶೀತ, ಕಟ್ಟಿದ ಮೂಗು ಈಗ ಹೇಗಿದೆ?’ ಎಂದು ಕೇಳಿದೆ. ‘ಏನೂ ಸುಧಾರಣೆಯಿಲ್ಲ, ತೊಂದರೆಯೆಲ್ಲ ಹಾಗೆಯೇ ಇದೆ’ ಅಂದರು. ‘ನೀವು ದಿನಾಲೂ ಜಲನೇತಿ ಮಾಡುತ್ತೀರಾ?’ ಎಂದು ಕೇಳಿದೆ. ಅವರು ‘ಪ್ರತಿ ನಿತ್ಯ ಎರಡು ಸಲ ಮಾಡುತ್ತೇನೆ.’ ಎಂದರು. ‘ನಿಮ್ಮ ಮೂಗಿನಿಂದ ನೀರು ಹೊರ ಬರುತ್ತದೆಯೇ?’ ಎಂದು ಕೇಳಿದೆ. ‘ಬರುತ್ತದೆ’ ಎಂದರು. ‘ನನಗೆ ನೀವು ಮಾಡುವ ವಿಧಾನದಲ್ಲಿ ಏನೋ ತಪ್ಪಿದೆ ಎನ್ನಿಸುತ್ತಿದೆ. ನನ್ನ ಎದುರಿಗೆ ನೀವು ಜಲನೇತಿ ಮಾಡಿರಿ.’ ಎಂದೆ. ಅವರು ಮಾಡಿ ತೋರಿಸಿದರು. ನಾನು ಪರೀಕ್ಷಿಸಿದೆ. ಅವರು ನೇತಿ-ಪಾಟ್ ಮೂಗಿನ ಹೊರಳೆಯ ಒಳಕ್ಕೆ ಸೇರಿಸುವ ಬದಲು ಸಡಿಲವಾಗಿ ಮುಂದೆ ಹಿಡಿಯುತ್ತಿದ್ದರು. ಹೀಗಾಗಿ ಸೇರಿಸಿದ ಹೊರಳೆಯಿಂದಲೇ ನೀರು ಹೊರಕ್ಕೆ ಬರುತ್ತಿತ್ತು. ‘ಇದು ತಪ್ಪು.’ ಎಂದೆ. ‘ಅದರ ನಾಝಲ್‌ನ್ನು ಪೂರ್ತಿ ಒಳಕ್ಕೆ ಸೇರಿಸಿರಿ. ಬಾಯಿ ತೆರೆದು ಉಸಿರಾಡಿಸಿರಿ. ತಪ್ಪಿ ಕೂಡ ಇನ್ನೊಂದು ಹೊರಳೆಯಿಂದ ಉಸಿರಾಡಿಸಬೇಡಿ’ ಎಂದೆ. ನಂತರ ಅವರು ಸರಿಯಾಗಿ ಮಾಡಲು ಕಲಿತರು.
‘ನೀವು ಹೀಗೆ ತಪ್ಪಾಗಿ ಕ್ರಿಯೆ ಮಾಡಿದರೆ, ದಿನಗಳೇಕೆ, ತಿಂಗಳುಗಳ ವರೆಗೆ ಮಾಡಿದರೂ ಉಪಶಮನ ದೊರೆಯುವುದಿಲ್ಲ. ಒಂದು ಉದಾಹರಣೆ ಕೊಡುವೆ. ಒಮ್ಮೆ ನಮ್ಮ ಮನೆಯಲ್ಲಿ ಅಕ್ವಾಗಾರ್ಡ್‌ನಿಂದ ಶುದ್ಧ ನೀರನ್ನು ಹೂಜೆಯಲ್ಲಿ ಶ್ರೀಮತಿ ತುಂಬುತ್ತಿದ್ದಳು. ಐದು ನಿಮಿಷಕ್ಕೆ ಅದು ತುಂಬುತ್ತದೆ. ಹತ್ತು ನಿಮಿಷಗಳಾದರೂ ಅದು ತುಂಬಲಿಲ್ಲ. ‘ಏನಾಗಿದೆ ನೋಡಿರಿ’ ಎಂದರು. ನಾನು ಕಂಡದ್ದೇನು ಅಂದರೆ, ಆ ಹೂಜಿಯ ಕೆಳಗೆ ಒಂದು ತೊಟ್ಟಿ ಇತ್ತು. ಅದು ಅರ್ಧ ತೆರೆದಿತ್ತು. ನಾನೆಂದೆ, ‘ಹೀಗೆ ನೀನು ನೀರು ತುಂಬಿದರೆ, ಇಡಿ ದಿನ ಅದು ತುಂಬುವದಿಲ್ಲ, ಕೆಳಗೆ ನೀರು ಸೋರುತ್ತಿದೆಯಲ್ಲ’ ಎಂದು. ಹಾಗೆಯೇ ಯಾವುದೇ ಕ್ರಿಯೆಯನ್ನು ತಪ್ಪು ಮಾಡಿದರೆ ಅದರಿಂದ ಫಲ ದೊರೆಯುವುದಿಲ್ಲ.
ನಾನು ಎರಡನೆಯ ಸಲ ಅಮೇರಿಕೆಗೆ ಹೋದಾಗ ಮತ್ತೊಮ್ಮೆ ವಾಷಿಂಗ್‌ಟನ್‌ಗೆ ಹೋಗಿದ್ದೆ. ಮೊದಲನೆಯ ಸಲ ಹೋದಾಗ ನನ್ನನ್ನು ವಾಶಿಂಗ್‌ಟನ್‌ಗೆ ಕರೆಸಿದವರು ಮಿತ್ರ ಗೋಪೀನಾಥ್ ಬೋರೆಯವರು. ನನ್ನಿಂದ ಭಾಷಣ ಮಾಡಿಸಿದ್ದರು, ಯೋಗ ಶಿಬಿರ ನಡೆಸಿದ್ದರು. ಅವರಿಗೂ ಸೈನಸ್ ಬಾಧೆಯಿತ್ತು. ಅವರೊಂದಿಗೆ ಮಾತಾಡುವಾಗ, ‘ನಿಮ್ಮ ಯೋಗಾಭ್ಯಾಸ ಹೇಗೆ ನಡೆದಿದೆ?’ ಎಂದು ಕೇಳಿದೆ. ‘ಚೆನ್ನಾಗಿದೆ. ಆದರೆ ನನ್ನ ಸೈನಸ್ ಬಾಧೆ ಮಾತ್ರ ಹಾಗೆಯೇ ಇದೆ.’ ಅಂದರು. ‘ಜಲನೇತಿ ಮಾಡುವುದಿಲ್ಲವೇ?’ ಎಂದು ಕೇಳಿದೆ. ‘ನನಗೆ ಬಹಳ ತೊಂದರೆಯಾಗುತ್ತಿತ್ತು. ಬಿಟ್ಟುಕೊಟ್ಟೆ’ ಅಂದರು.
ಅವರಿಗೆ ತಲೆಗೆ ನೀರು ಸೇರಿ ವಿಪರೀತ ಬಾಧೆಯಗುತ್ತಿತ್ತಂತೆ. ‘ನೀವು ಸರಿಯಾಗು ಮಾಡುತ್ತಿರಲಿಕ್ಕಿಲ್ಲ. ನನ್ನೆದುರಿಗೆ ಮಾಡಿರಿ ನೋಡೋಣ’ ಎಂದೆ. ‘ನೀವೇ ಮಾಡಿ ತೋರಿಸಿರಿ. ನನಗೇಕೋ ಭಯವಾಗುತ್ತದೆ.’ ಅಂದರು. ನಾನು ಮಾಡಿ ತೋರಿಸಿದೆ. ಅವರು ಮಾಡುವ ತಪ್ಪನ್ನು ತಿದ್ದಿದೆ. ಅವರು ಬಾಯಿಯನ್ನು ಗಟ್ಟಿಯಾಗಿ ಮುಚ್ಚಿ ಜಲನೇತಿ ಮಾಡುತ್ತಿದ್ದರು. ಮತ್ತೊಂದು ಮೂಗಿನಿಂದ ಉಸಿರಾಡಿಸುತ್ತಿದ್ದರು, ಅದರಿಂದಾಗಿ ನೀರು ನೆತ್ತಿಗೇರುತ್ತಿತ್ತು. ನನ್ನೆದುರಿಗೆ ಸರಿಯಾಗಿ ಮಾಡಿದರು. ಏನೂ ತೊಂದರೆಯಾಗಲಿಲ್ಲ. ‘ಸರಿಯಾಗಿ ಮಾಡಲು ಕಲಿಯಲು ನೀವು ಎರಡು ವರ್ಷ ಕಾಯಬೇಕಾಯಿತು’ ಎಂದೆ.
ಕೊನೆಯದಾಗಿ ಇನ್ನೊಂದು ಉದಾಹರಣೆ ಕೊಡುವೆ. ನನ್ನ ವಿದ್ಯಾರ್ಥಿಯೋರ್ವ ಒಂದು ರಾಷ್ಟ್ರೀಯ ಬ್ಯಾಂಕಿನಲ್ಲಿ ಅಸಿಸ್ಟಂಟ್ ಜನರಲ್ ಮೆನೆಜರ್ ಆಗಿ ಬಡತಿ ಪಡೆದು ಮುಂಬೈಗೆ ಬಂದಿದ್ದ. ಆ ದಿನಗಳಲ್ಲಿ ನಾನು ‘ಗುಡ್ ಬಾಯ್ ಡಾಕ್ಟರ್’ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದೆ. ಅದಕ್ಕೆ ಅವನು ಜಾಹೀರಾತು ಕೊಡಿಸಿ ಸಹಾಯ ಮಾಡಿದ್ದ. ಅವನದು ಪೂರ್ತಿಯಾಗಿ ಏರ್ ಕಂಡೀಷನ್ಡ್ ಆಫೀಸಾಗಿತ್ತು. ಅವನಿಗೆ ವಿಪರೀತ ಶೀತ, ಮೂಗು ಕಟ್ಟುತ್ತಿತ್ತು, ತಲೆ ಭಾರವಾಗುತ್ತಿತ್ತು. ಒಮ್ಮೆ ಅವನು ನನಗೆ ಹೇಳಿದ, ‘‘ಸರ್, ನನಗೆ ಪ್ರಮೋಷನ್ ಬೇಡ ಎಂದು ಬರೆದು ಕೊಟ್ಟು, ಏರ್ ಕಂಡೀಷನ್ ಇಲ್ಲದ ಯಾವುದಾದರೂ ಬೇರೆ ಬ್ರಾಂಚಿಗೆ ಸೀನಿಯರ್ ಮ್ಯಾನೇಜರ್ ಅಂತ ಹೋಗಲಿಚ್ಛಿಸುವೆ.’’ ನಾನೆಂದೆ, ‘‘ಜಲನೇತಿ ಮಾಡು, ನಿನ್ನ ತೊಂದರೆಗಳೆಲ್ಲ ಮಾಯವಾಗುತ್ತವೆ ’’ ಎಂದು. ರವಿವಾರ ಮನೆಗೆ ಬರಲು ಒಪ್ಪಿದ.
ಆದರೆ ಅವನು ಬರಲಿಲ್ಲ. ನನಗೆ ಬೇರೆ ಏನೋ ಕೆಲಸ ಫೋರ್ಟ ಏರಿಯಾದಲ್ಲಿತ್ತು. ಅವನ ಆಫೀಸಿಗೆ ನಾನೇ ಹೋದೆ. ಅವನಿಗೆ ಅಚ್ಚರಿ. ‘‘ನನಗೆ ತಮ್ಮ ಮನೆಗೆ ಬರಲು ಆಗಲಿಲ್ಲ, ಕ್ಷಮಿಸಿ.’’ ಎಂದ. ‘‘ಅದಿರಲಿ ನಿನ್ನ ಆಫೀಸಿನಲ್ಲಿಯೇ ನಾನು ನಿನಗೆ ಜಲನೇತಿ ಕಲಿಸುವೆ.‘’ ಎಂದೆ. ಕ್ಯಾಂಟೀನ್ ಹುಡುಗನನ್ನು ಕರೆಸಿ ಬೆಚ್ಚನೆಯ ನೀರು, ಸ್ವಲ್ಪ ಉಪ್ಪು ತರಿಸಿದೆವು. ಅವನ ರೂಮಿನಲ್ಲಿದ್ದ ವಿಶೇಷ ವಾಷ್-ಬೇಸಿನ್ ಬಳಸಿ ಜಲನೇತಿ ಕಲಿಸಿದೆ. ಕೆಲವು ದಿನಗಳ ಮೇಲೆ ಅವನು ನನ್ನ ಮನೆಗೆ ಬಂದ. ‘‘ಸರ್, ನನ್ನ ತೊಂದರೆಗಳೆಲ್ಲ ಇಲ್ಲವಾಗಿವೆ. ಥ್ಯಾಂಕ್ಸ್! ಈಗ ನನಗೆ ಎರಡು ನೇತಿ-ಪಾಟ್ ಬೇಕಾಗಿತ್ತು.’’ ಅಂದ. ಅವನ ತಂಗಿ ಅಮೇರಿಕೆಯಿಂದ ಬಂದಿದ್ದಳು. ಅವಳಿಗೆ ನೇತಿ-ಪಾಟ್ ಬೇಕಾಗಿತ್ತಂತೆ. ಅವನೀಗ ಜಲನೇತಿಯ ಆರಾಧಕನಾಗಿದ್ದಾನೆ, ಪ್ರಚಾರಕನೂ ಆಗಿದ್ದಾನೆ.
ಸೂತ್ರನೇತಿ ಎಂಬ ಪ್ರಕಾರವೂ ಇದೆ. ಇದು ಕಠಿಣವಾಗಿರುವುದರಿಂದ ಯೋಗ್ಯ ಶಿಕ್ಷಕರ ಬಳಿಯಲ್ಲಿ ಕಲಿಯುವುದು ವಿಹಿತ. ಮೂಗಿನಲ್ಲಿ ದುರ್ಮಾಂಸ ಬೆಳೆದಿದ್ದರೆ ಶಸ್ತ್ರಕ್ರಿಯೆ ಮಾಡಲಾಗುತ್ತದೆ. ಇಂಥ ತೊಂದರೆ ಸೂತ್ರನೇತಿಯಿಂದ ಗುಣವಾಗುವುದುಂಟು.