• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೋಗಳೇಕರ್‌ ವಿಚಾರಗಳು ಮತ್ತು ಚಿಂತನೆಗಳು

By Staff
|

ಜೋಗಳೇಕರ್‌ ವಿಚಾರಗಳು ಮತ್ತು ಚಿಂತನೆಗಳು
ಜ್ಯೋತಿಷ್ಯಕ್ಕೆ ಘನತೆತಂದ ಎನ್‌.ಕೆ ಜೋಗಳೇಕರ್‌ರ ಬಗ್ಗೆ ಕಳೆದ ವಾರ ತಿಳಿದೆವು. ಅವರು ಶತಾಯುಗಳಾಗಲಿ ಎಂಬ ಹಾರೈಕೆಯಾಂದಿಗೆ, ಜ್ಯೋತಿಷ್ಯ ಶಾಸ್ತ್ರದ ಬಗೆಗಿನ ಅವರ ವಿಚಾರ ಮತ್ತು ಚಿಂತನೆಗಳನ್ನು ಅರಿಯೋಣ.

Dr. G.V. Kulkarni ಡಾ।‘ಜೀವಿ’ ಕುಲಕರ್ಣಿ, ಮುಂಬಯಿ
jeevi65@gmail.com

ವಿಚಾರವಾದಿ ಮತ್ತು ವಿಜ್ಞಾನಿಗಳಾದ ಡಾ। ಹೆಚ್‌.ನರಸಿಂಹಯ್ಯನವರು ಮಾರ್ಚಿ 12, 1978 ರ ‘ಇಲಸ್ಟ್ರೇಟೆಡ್‌ ವೀಕ್ಲಿ ಆಫ್‌ ಇಂಡಿಯಾ’ ಎಂಬ ಆಂಗ್ಲ ವಾರಪತ್ರಿಕೆಯಲ್ಲಿ ‘‘ಎಸ್ಟ್ರಾಲಜಿ ಸೈಯನ್ಸ್‌ ಆರ್‌ ನಾನ್‌ಸೈಯನ್ಸ್‌’’ ಎಂಬ ಲೇಖನವನ್ನು ಬರೆದಿದ್ದರು.

ಲೇಖನದಲ್ಲಿ ಅವರು ಹೇಳುತ್ತಾರೆ, ‘ಜ್ಯೋತಿಷ್ಯ ಶಾಸ್ತ್ರದ ಮೇರೆಗೆ ನವಗ್ರಹಗಳಿವೆ,(ರವಿ, ಚಂದ್ರ, ರಾಹು, ಕೇತು, ಬುಧ, ಗುರು, ಶುಕ್ರ, ಮಂಗಳ ಹಾಗೂ ಶನಿ). ಇದರಲ್ಲಿ ರವಿ ಹಾಗೂ ಚಂದ್ರ ಇವುಗಳು ಗ್ರಹಗಳೇ ಅಲ್ಲ. ರವಿಯು ಒಂದು ನಕ್ಷತ್ರ, ಚಂದ್ರ ಒಂದು ಉಪಗ್ರಹ(ಸೆಟಲೈಟ್‌). ರಾಹು, ಕೇತು ಅಸ್ತಿತ್ವದಲ್ಲೇ ಇಲ್ಲ, ಇವು ಕಾಲ್ಪನಿಕ. ಹೀಗಾಗಿ ಜ್ಯೋತಿಷ್ಯಶಾಸ್ತ್ರ ಹೇಳುವ ನವಗ್ರಹಗಳಲ್ಲಿ ನಾಲ್ಕು ಗ್ರಹಗಳೇ ಅಲ್ಲ. ಆದ್ದರಿಂದ ಈ ಶಾಸ್ತ್ರದ ಬುನಾದಿ ದುರ್ಬಲ ಮತ್ತು ದೋಷಯುಕ್ತವಾಗಿದೆ. ಇಂಥ ಶಾಸ್ತ್ರಕ್ಕೆ ವಿಜ್ಞಾನವೆಂದು ಪರಿಗಣಿಸುವುದು ಸಾಧ್ಯವಿಲ್ಲ.’

N.K.Joglekarತಮ್ಮ ವಾದ ಮುಂದುವರೆಸುವ ನರಸಿಂಹಯ್ಯ, ‘ಬಾಹ್ಯಾಕಾಶದ ಎಲ್ಲ ಗ್ರಹಗಳು ರವಿಯ ಭಾಗಗಳು. ಅದರಿಂದ ಅವು ಒಡೆದು ಸಿಡಿದು ಪ್ರತ್ಯೇಕ ಗ್ರಹಗಳು ಆದವು ಎಂದು ಹೇಳುತ್ತದೆ ವಿಜ್ಞಾನ. ಭೂಮಿಯಿಂದ ಲಕ್ಷಾಂತರ ಮೈಲು ದೂರದಲ್ಲಿರುವ ಗ್ರಹಗಳು ಮಾನವನ ದೈನಂದಿನ ಜೀವನದ ಮೇಲೆ ಹೇಗೆ ಪ್ರಭಾವ ಬೀರುವವು? ರಾಹುಕಾಲ, ಗುಳಿಕಕಾಲ ಹಾಗೂ ಯಮಗಂಡಕಾಲ ಇವು ಜ್ಯೋತಿಷ್ಯ ಶಾಸ್ತ್ರದಲ್ಲಿ ನುಡಿಯುವ ಶುಭಾಶುಭಗಳಿಗೆ ಬುನಾದಿಯಾಗಿವೆ. ರಾಹು ಕೇತು ಗ್ರಹಗಳ ಅಸ್ತಿತ್ವವೇ ಇಲ್ಲದಾಗ ರಾಹುಕಾಲದಲ್ಲಿ ಪ್ರಯಾಣ ಮಾಡಬಾರದು ಎಂಬುದಕ್ಕೆ ಅರ್ಥವಿಲ್ಲ. ದಿನದಲ್ಲಿ ಕ್ಷಣಕ್ಷಣಕ್ಕೆ ಸಹಸ್ರಾರು ವಿಮಾನ, ರೈಲು, ಬಸ್ಸುಗಳು ಓಡಾಡುವದು ಅಫಘಾತದಲ್ಲಿ ಪರ್ಯವಸಾನಗೊಳಬೇಕಾಗುವದು. ವಿಶ್ವ 90ರಷ್ಟು ಜನ ಜಾತಕವನ್ನು ಹೊಂದಿರುವದಿಲ್ಲ. ಜ್ಯೋತಿಷ್ಯಶಾಸ್ತ್ರವು ಒಂದು ಮೂಢನಂಬಿಕೆಯಾಗಿದ್ದು ಆತ್ಮವಿಶ್ವಾಸಕ್ಕೆ ಹಾನಿತರುತ್ತದೆ.’ ಎಂದು ಮುಂತಾಗಿ ಬರೆಯುತ್ತಾರೆ. ಕೊನೆಗೆ ಹೇಳುತ್ತಾರೆ, ‘ನಾನು ವಿಜ್ಞಾನದ ವಿದ್ಯಾರ್ಥಿ. ನನ್ನ ವಾದದಲ್ಲಿ ತಿರುಳಿಲ್ಲ ಎಂದು ಯಾರಾದರೂ ವೈಜ್ಞಾನಿಕವಾಗಿ ಸಿದ್ಧಪಡಿಸಿದರೆ ನನ್ನ ಅಭಿಪ್ರಾಯಗಳನ್ನು ತಿದ್ದಿಕೊಳ್ಳಲು ಸಿದ್ಧನಿದ್ದೇನೆ’ ಎಂದಿದ್ದಾರೆ.

1985ರಲ್ಲಿ ‘ದಿ ಸ್ಸ್ಕೆಪ್ಟಿಕಲ್‌ ಇನ್‌ಕ್ವಾಯರರ್‌’ ಪತ್ರಿಕೆಯಲ್ಲಿ ಪಾಲ್‌ ಕುರ್‌ಟ್ಜ್‌ ಹಾಗೂ ಆಂಡ್ರು ಫ್ರಾಕ್‌ನಾಯ್‌ ಇವರುಗಳು ಒಂದು ಲೇಖನ ಪ್ರಕಟಿಸಿ, ‘ಜ್ಯೋತಿಷ್ಯಶಾಸ್ತ್ರದ ವೈಜ್ಞಾನಿಕ ಪರೀಕ್ಷಣೆ ಅದರ ಹೆಗ್ಗಳಿಕೆಯನ್ನು ಸಮರ್ಥಿಸುವುದಿಲ್ಲ.’ ಎಂದಿದ್ದಾರೆ.

ಜಾನ ಮ್ಯುಕ್‌ ಗೆರ್‌ವೇ ಎಂಬ ಭೌತಶಾಸ್ತ್ರಜ್ಞನು 16,634 ವಿಜ್ಞಾನಿಗಳ ಹಾಗೂ 6,475 ರಾಜಕಾರಣಿಗಳ ಜಾತಕಗಳನ್ನು ಪರಿಶೀಲಿಸಿ, ಜ್ಯೋತಿಷಿಗಳ ವಿಶ್ಲೇಷಣೆಯಂತೆ ಇವರಿಗೆ ಗ್ರಹಬಲ ಇಲ್ಲ ಎಂದು ತೋರಿಸಿದ್ದಾರೆ.

ಡಾ। ಹೆಚ್‌. ನರಸಿಂಹಯ್ಯನವರ ಪ್ರಧಾನ ಸಂಪಾದಕತ್ವದಲ್ಲಿ ‘ದಿ ಬ್ಯಾಂಗಲೋರ್‌ ಸೈಯನ್ಸ್‌ ಫೋರಂ’ ಎಂಬ ಸಂಸ್ಥೆ ಒಂದು ಪುಸ್ತಕ ಪ್ರಕಟಿಸಿದೆ. ‘ಸೈಯನ್ಸ್‌ ನಾನ್‌ಸೈಯನ್ಸ್‌ ಅಂಡ್‌ ದಿ ಪ್ಯಾರಾನಾರ್ಮಲ್‌’ ಎಂಬ ಬೃಹತ್‌ ಗ್ರಂಥದಲ್ಲಿ ಹಲವಾರು ಆಕ್ಷೇಪಣೆಗಳು ಪ್ರಕಟವಾಗಿವೆ. ಅವುಗಳಿಗೆ ತಮ್ಮ ಪುಸ್ತಕ ‘ಅಧಿಕಾರಿ ಜ್ಯೋತಿಷಿ’ಯಲ್ಲಿ, ‘ಫಲಜ್ಯೋತಿಷ್ಯ ಮತ್ತು ಆಕ್ಷೇಪಗಳು’ ಎಂಬ ಅಧ್ಯಾಯದಲ್ಲಿ ಉತ್ತರಿಸಿರುವುದಾಗಿ ಜೋಗಳೇಕರ್‌ ಹೇಳುತ್ತಾರೆ.

ಜ್ಯೋತಿಷ್ಯ ಇದು ಶುದ್ಧಶಾಸ್ತ್ರವಲ್ಲ (ಪ್ಯುವರ್‌ ಸೈಯನ್ಸ್‌ ಅಲ್ಲ) ಇದು ಪ್ರಯೋಗಸಿದ್ಧಶಾಸ್ತ್ರ(ಅಪ್ಲಾಯಡ್‌ ಸೈಯನ್ಸ್‌), ಇದರಲ್ಲಿ ‘ಪಂಚಭವತಿ ಪಂಚ ನಭವತಿ’ ಎಂಬ ಆಕ್ಷೇಪಣೆಗಳೂ ಇವೆ. ವೈದ್ಯರು ಎಲ್ಲ ರೋಗಿಗಳನ್ನು ಎಲ್ಲಿ ಗುಣಪಡಿಸುತ್ತಾರೆ? ಎಂದು ಕೇಳುತ್ತಾರೆ. ದೈವಜ್ಞರಲ್ಲಿ ಮತಭೇದವೇಕೆ ಇದೆ? ಎಂಬ ಪ್ರಶ್ನೆಗೆ, ‘ವಿಜ್ಞಾನಿಗಳಲ್ಲೂ ಮತಭೇದವೇಕೆ ಇರುತ್ತದೆ? ಎಂಬ ಸವಾಲು ಹಾಕುತ್ತಾರೆ ಜೋಗಳೇಕರ್‌. ‘ಯೋಗ್ಯ ಜನ್ಮಪತ್ರಿಕೆ ಇಲ್ಲದವನ ಭವಿಷ್ಯ ಹೇಳುವುದೆಂದರೆ, ‘ದೀಪವಿಲ್ಲದನ ಮನೆಯಲ್ಲಿ ಕೋಣೆಗಳನ್ನು ಹುಡುಕಿದಂತೆ’ ಎನ್ನುತ್ತಾರೆ. ಜ್ಯೋತಿಷ್ಯವು ಕರ್ಣಪಿಶಾಚವಲ್ಲ, ಗಾರುಡಿವಿದ್ಯೆಯಲ್ಲ ಎನ್ನುತ್ತಾರೆ.

ಜ್ಯೋತಿಷ್ಯಶಾಸ್ತ್ರದ ವ್ಯುತ್ಪತ್ತಿಯ ಬಗ್ಗೆ ಹೇಳುತ್ತಾರೆ. ಇದರಲ್ಲಿಯ ಮೂರು ಪ್ರಕಾರಗಳ ಬಗ್ಗೆ ಹೇಳುತ್ತಾರೆ. (ಸಿದ್ಧಾಂತ, ಸಂಹಿತಾ, ಹೋರಾ). ಗ್ರಹಗಳ ಸ್ಥಿತಿಗತಿ, ಆಯನ, ಯೋಗ, ಗ್ರಹಣ ಮುತಾದ ಗಣಿತವನ್ನೊಳಗೊಂಡ ಭಾಗಕ್ಕೆ ಸಿದ್ಧಾಂತವೆನ್ನುತ್ತಾರೆ. ಗ್ರಹಲಾಘವ, ಕೇಸವಿ, ಕೇತಕಿ ಮುಂತಾದವು ಗಣಿತಪ್ರಕಾರಗಳು. ಪರ್ಜನ್ಯ, ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ಬರಗಾಲ, ರಾಜ್ಯಕ್ರಾಂತಿ, ಮಹಾಯುದ್ಧ ಮೊದಲಾದವು ಯಾವ ಪರಿಣಾಮ ಉಂಟುಮಾಡುತ್ತದೆ ಎಂಬುದನ್ನು ಸಂಹಿತೆಯಲ್ಲಿ ಹೇಳಿದೆ. ಮನುಷ್ಯನ ಆಯುಷ್ಯದಲ್ಲಿ ಸುಖಕಾಲ ಯಾವುದು, ಕಷ್ಟಕಾಲ ಯಾವುದು ಹೋರಾ ಹೇಳುತ್ತದೆ. ದ್ವಾದಶ ಭಾವ ವರ್ಣನೆ, ಕಾಲನಿರ್ಣಯ ಮತ್ತೆ ಅವುಗಳಲ್ಲಿ ಪ್ರಭೇದಗಳಿವೆ.

ಜ್ಯೋತಿಷಿ, ವೈದ್ಯ ಹಾಗೂ ಧರ್ಮಾಧಿಕಾರಿ ಇವರುಗಳು ಎಷ್ಟು ನಿಸ್ಪೃಹರಾಗಿರುತ್ತಾರೋ ಅಷ್ಟೇ ದೇಶಕ್ಕೆ ಕಲ್ಯಾಣವಾಗುತ್ತದೆ ಎಂದು ಎರಡನೆ ಭಾಗದ ಕೊನೆಯಲ್ಲಿ ಜೋಗಳೇಕರ್‌ ಹೇಳುತ್ತಾರೆ. ಜ್ಯೋತಿಷಿಯ ಕರ್ತವ್ಯದ ಬಗ್ಗೆ ಹೇಳುತ್ತಾರೆ. ಪ್ರಾಚೀನ ಕಾಲದಿಂದ ಋಷಿಮುನಿಗಳು, ಕವಿಗಳು ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾರಂಗತರಾಗಿದ್ದರು ಎನ್ನುತ್ತಾರೆ. ಈ ಶಾಸ್ತ್ರದ ಮಹತ್ವವನ್ನು ಹೇಳುತ್ತ ಒಂದು ಶ್ಲೋಕ ಉದ್ಧರಿಸುತ್ತಾರೆ, ‘ಅಪ್ರತ್ಯಕ್ಷಂ ತು ಶಾಸ್ತ್ರಾಣಿ ವಿವಾದಸ್ತೇಷು ಕೇವಲಂ । ಪ್ರತ್ಯಕ್ಷಂ ಜ್ಯೋತಿಷ್ಯಂ ಶಾಸ್ತ್ರಂ ಚಂದ್ರಾರ್ಕೌ ಯತ್ರ ಸಾಕ್ಷಿಣಃ ।।’

ಜೋಗಳೇಕರರು ತಮ್ಮ ಭಾಷಣದ ಮೂರನೆಯ ಭಾಗದಲ್ಲಿ ‘ಜ್ಯೋತಿಷ್ಯಶಾಸ್ತ್ರ: ಮುಂದೇನು?’ ಎಂಬ ವಿಷಯ ಚರ್ಚಿಸುತ್ತಾರೆ. ಹತ್ತು ಮಹತ್ವದ ಚಿಂತನ ಬಿಂದುಗಳನ್ನು ಮುಂದಿಡುತ್ತಾರೆ. ಈ ಮಾತುಗಳು ಜ್ಯೋತಿಷ್ಯವನ್ನು ತಮ್ಮ ಜೀವನದ ವೃತ್ತಿಯನ್ನಾಗಿ ಅನುಸರಿಸುವರಿಗೆ ಮಹತ್ವದ ಕಿವಿಮಾತುಗಳು. ಸೂತ್ರವತ್ತಾಗಿ ಅವರ ಮಾತುಗಳನ್ನು ಚಿಕ್ಕ ವಾಕ್ಯದಲ್ಲಿ ಸಂಗ್ರಹಿಸುವೆ:

* ಜ್ಯೋತಿಷ್ಯಶಾಸ್ತ್ರವನ್ನು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ವಿಷಯವಾಗಿ ಕಲಿಸಲ್ಪಡಬೇಕು.
* ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು ‘ಸೈಯನ್ಸ್‌ ಕಾಂಗ್ರೆಸ್‌’ ಜರುಗಿಸುವಂತೆ ಜ್ಯೋತಿಷಿಗಳೂ ಸಂಘಟಿಸುವುದು ಅವಶ್ಯವಾಗಿದೆ.
* ರಾಜ್ಯಮಟ್ಟದಲ್ಲಿ ರಾಷ್ಟ್ರಮಟ್ಟದಲ್ಲಿ ಸಂಘಗಳ ಒಕ್ಕೂಟಗಳ ಅವಶ್ಯಕತೆ ಇದೆ.
* ಪಂಚಾಂಗಕರ್ತರ ಒಂದು ಸಂಯುಕ್ತ ವೇದಿಕೆಯ ಅವಶ್ಯಕತೆ ಇದೆ.
* ರಾಜಕೀಯ ಮೊದಲಾದ ಭವಿಷ್ಯ ಹೇಳುವಾಗ ಒಂದು ತಜ್ಞಸಮಿತಿ ರಚಿಸುವುದು ಅವಶ್ಯ.
* ಸಂಸ್ಕೃತ ಪಾಠಶಾಲೆಗಳಲ್ಲಿ ಜ್ಯೋತಿಷ್ಯಶಾಸ್ತ್ರದ ಅಧ್ಯಯನಕ್ಕೆ ಒತ್ತು ಕೊಡುವ ಅವಶ್ಯಕತೆ ಇದೆ.
* ಎಂಜಿನಿಯರ್‌ ಡಾಕ್ಟರ್‌ಗಳಿಗೆ ವಿದ್ಯಾರ್ಹತೆ ಅವಶ್ಯಕವಾಗಿರುವಂತೆ ಜ್ಯೋತಿಷಿಗಳಿಗೂ ಪದವಿಗಳು ಅವಶ್ಯ. ಇದರಿಂದ ‘ಕ್ವ್ಯಾಕ್‌’ ಜ್ಯೋತಿಷಿಗಳನ್ನು ನಿಯಂತ್ರಿಸಲು ಬರುವುದು.
* ಜ್ಯೋತಿಷ್ಯ ಶಾಸ್ತ್ರ ಅಕೆಡೆಮಿ ಸ್ಥಾಪಿಸಲು ರಾಜ್ಯ ಸರಕಾರಕ್ಕೆ ಒತ್ತಾಯಿಸಬೇಕು.
* ಹೊಸತಾಗಿ ಸೇರ್ಪಡೆಯಾದ ಗ್ರಹಗಳನ್ನು (ಯುರೇನಸ್‌. ನೆಪ್‌ಚೂನ್‌, ಪ್ಲೂಟೋ ಇವುಗಳನ್ನು) ಜಾತಕದಲ್ಲಿ ಅಳವಡಿಸಲು ಸಾಧ್ಯವೇ? ಈ ವಿಷಯದಲ್ಲಿ ವ್ಯಾಪಕ ಸಂಶೋಧನೆ ಅವಶ್ಯವಾಗಿದೆ.

ಭಾರತದಲ್ಲಿ ಯತಿಮುನಿಗಳಿಂದ ಹಿಡಿದು ಜ್ಯೋತಿಷ್ಯ ಅಭ್ಯಾಸದ ಒಂದು ಪರಂಪರೆಯೇ ಇದೆ. ಎಲ್ಲ ಅವತಾರಿ ಪುರುಷರ ಜಾತಕಗಳು ನಮ್ಮ ದೇಶದ ಪರಂಪರೆಯಲ್ಲಿ ಲಭ್ಯವಾಗಿವೆ. ನಮ್ಮ ಶಾಸ್ತ್ರಜ್ಞರು, ತತ್ವವೇತ್ತರು, ಋಷಿಗಳು, ಮಹಾಕವಿಗಳು ಜ್ಯೋತಿಷ್ಯ ಬಲ್ಲವರಾಗಿದ್ದರು. ಇದರ ಬಗ್ಗೆ ಹೆಚ್ಚಿನ ವಿವರ ಜೋಗಳೇಕರರು ತಮ್ಮ ಭಾಷಣದಲ್ಲಿ ಕೊಡಬಹುದಾಗಿತ್ತು. ಅದರ ಬದಲು ದೋಷರೋಪಣೆ ಮಾಡುವ ವಿದ್ವಾಂಸರ ಹೇಳಿಕೆಗಳನ್ನು ಇಲ್ಲಿ ಕಲೆಹಾಕಿದ್ದಾರೆ. ಇದಕ್ಕೆ ಕಾರಣ ಸ್ಪಷ್ಟವಿದೆ. ಅವರ ಭಾಷಣ ಜ್ಯೋತಿಷಿ ಬಾಂಧವರನ್ನು ಉದ್ದೇಶಿಸಿದ್ದಾಗಿತ್ತು. ಅವರಿಗೆ ತಮ್ಮ ದೋಷ ತೋರಿಸುವವರ ಬಗ್ಗೆ ಗೊತ್ತಿರಲಿ ಎಂಬುದೇ ಅವರ ಉದ್ದೇಶವಾಗಿದೆ. ಅವರಲ್ಲಿ ತಲೆಯೆತ್ತಿರುವ ಮೂಢನಂಬಿಕೆಗಳನ್ನು ಬಿಟ್ಟು ವೈಜ್ಞಾನಿಕವಾಗಿ ಅಭ್ಯಾಸ ಮಾಡುವ ಬಗ್ಗೆ ಕಳಕಳಿಯಿದ ಸಲಹೆ ನೀಡುತ್ತಾರೆ. ಹೇಗೆ ಯೋಗಾಭ್ಯಾಸ, ಆಯುರ್ವೇದಶಾಸ್ತ್ರ ಜಗತ್ತಿನ ಒಳಿತಿಗೆ ಇವೆಯೋ ಹಾಗೆಯೇ ಜ್ಯೋತಿಷ್ಯಶಾಸ್ತ್ರ ಕೂಡ ಇದೆ. ಇದನ್ನು ಮನವರಿಕೆ ಮಾಡಿಕೊಡಲು ಪ್ರಾಮಾಣಿಕ, ನಿಷ್ಟಾವಂತ ವಿದ್ವಾಂಸರು ಮುಂದೆ ಬರಬೇಕಾಗಿದೆ.

ಎನ್‌.ಕೆ.ಜೋಗಳೇಕರರು ಶತಾಯುಗಳಾಗಲಿ. ಹೆಚ್ಚು ವಿದ್ವಾಂಸರನ್ನು ತರಬೇತುಗೊಳಿಸಲಿ ಎಂದು ಹಾರೈಸುವೆವು.


ಜ್ಯೋತಿಷ್ಯಕ್ಕೆ ಘನತೆ ತಂದ ಎನ್‌.ಕೆ ಜೋಗಳೇಕರ್‌ಗೀಗ 75!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more