• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತುಂಬ ಬೆಳಗಿದ ಒಂದೇ ನಕ್ಷತ್ರ, ವಿವೇಕಾನಂದ!

By Super
|
Swami Vivekananda and Hindu Dharma
ಹದಿನೇಳು ದಿನಗಳ ಸಮ್ಮೇಲನದ ತುಂಬ ಬೆಳಗಿದ ಒಂದೇ ನಕ್ಷತ್ರ, ವಿವೇಕಾನಂದ! ಶಿಷ್ಯ ಅಳಸಿಂಗ ಪೆರುಮಾಳ್‌ ಮತ್ತು ಗುರು ವಿವೇಕಾನಂದರ ಬಂಧ ವಿವರಿಸುವ ಲೇಖನ ಮಾಲಿಕೆಯನ್ನು ಓದುಗರ ಅಪೇಕ್ಷೆ ಮೇರೆಗೆ ಮುಂದುವರೆಸಲಾಗಿದೆ. ವಿವೇಕಾನಂದರ ಚಿಂತನೆಗಳನ್ನು ಇನ್ನಷ್ಟು ಅರಿಯಿರಿ.

ಭಾಗ ಐದು
ವಿಶ್ವ ಧರ್ಮ ಸಮ್ಮೇಳನ ಹದಿನೇಳು ದಿನ ನಡೆಯಿತು. ಅಲ್ಲಿ ವಿವೇಕಾನಂದರು ಅನೇಕ ಭಾಷಣ ಮಾಡಿದರು, ಪ್ರಶ್ನೋತ್ತರ ಕಾಯಕ್ರಮಗಳಲ್ಲಿ ಭಾಗವಹಿಸಿದರು. ‘ಸಮ್ಮೇಳನದ ಜೀವನಾಡಿಯೇ ಆಗಿದ್ದರು ಸ್ವಾಮಿಗಳು’ ಎಂದು ಬರೆಯುತ್ತಾರೆ ಲ.ನ.ಶಾಸ್ತ್ರಿ.

ಸಭೆ ಬೆಳಿಗ್ಗೆ ಹತ್ತು ಗಂಟೆಗೆ ಆರಂಭವಾಗಿ ರಾತ್ರಿ ಹತ್ತು ಗಂಟೆಯ ವರೆಗೆ ನಡೆಯುತ್ತಿತ್ತು. ಈ ಸಮ್ಮೇಳನದ ವ್ಯವಸ್ಥಾಪಕರು, ಅನೇಕ ವೇಳೆ ಜನರು ಮಧ್ಯದಲ್ಲಿಯೇ ಎದ್ದುಹೋಗುತ್ತಿದ್ದುದನ್ನು ಗಮನಿಸಿ, ವಿವೇಕಾನಂದರ ಭಾಷಣವನ್ನು ದಿನದ ಕೊನೆಗೆ ಇಡುತ್ತಿದ್ದರಂತೆ. ಆ ಭಾಷಣ ಕೇಳಲು ಜನರು ಕೊನೆಯ ವರೆಗೆ ಕುಳಿತಿರುತ್ತಾರೆ ಎಂಬ ಭರವಸೆ ಅವರಿಗೆ ಇತ್ತಂತೆ. ಜನರು ಕೊನೆಯವರೆಗೆ ಕುಳಿತು ಸಂಘಟಕರ ಆ ಭರವಸೆಯನ್ನು ನಿರಾಶಗೊಳಿಸಲಿಲ್ಲವಂತೆ.

ಅನೇಕ ಪತ್ರಿಕೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ವಿದ್ಯಾವಂತರ ಸಮುದಾಯದಲ್ಲಿ ಸ್ವಾಮಿಗಳ ಪ್ರಶಂಸೆ ನಡೆಯುತ್ತಿತ್ತು. ಅಮೇರಿಕೆಯಂತಹ ಸಿರಿವಂತ ದೇಶದಲ್ಲಿ ಹಸಿವಿನಿಂದ, ಚಳಿಯಿಂದ ಒದ್ದಾಡುತ್ತಿದ್ದ ಸ್ವಾಮಿಗಳ ಪ್ರಾರಂಭದ ದಿನಗಳನ್ನು ಹೋಲಿಸಿದರೆ, ಸಮ್ಮೇಳನಪ್ರಾರಂಭವಾದ ಮೇಲೆ ಅನುದಿನ ಸ್ವಾಮಿಗಳ ಕೀರ್ತಿ ಉನ್ನತ ಶಿಖರಗಳನ್ನು ಏರತೊಡಗಿತ್ತು. ಸ್ವಾಮಿಗಳು ಸ್ಥಿತಪ್ರಜ್ಞರಾಗಿ ಎಲ್ಲವನ್ನೂ ಭಗವತ್‌ ಪ್ರಸಾದವೆಂದೇ ಸ್ವೀಕರಿಸಿದರು. ‘ಸುಖೇ ದುಃಖೇ ಸಮೇ ಕೃತ್ವಾ ಲಾಭಾ ಲಾಭೌ ಜಯಾ ಜಯೌ’ ಎಂಬ ಗೀತೆಯ ನುಡಿಯಂತೆ ನಡೆದು ತೋರಿದರು.

ಅಳಸಿಂಗರಿಗೆ ಬರೆದ ಒಂದು ಪತ್ರದಲ್ಲಿ ಸ್ವಾಮಿಗಳು ಹೀಗೆ ಬರೆಯುತ್ತಾರೆ: ‘‘ ದಿನೇದಿನೇ ಭಗವಂತನು ನನ್ನೊಡನೆ ಇರುವನೆಂಬ ಅನುಭವ ನನಗಾಗುತ್ತಿದೆ. ಆತನ ಸೂಚನೆಯನ್ನು ಅನುಸರಿಸಿ ಮುಂದುವರೆಯಲು ಪ್ರಯತ್ನಿಸುತ್ತೇನೆ. ಆತನ ಆಜ್ಞೆ ನೆರವೇರಲೇ ಬೇಕು. ನಾನು ಈ ಜಗತ್ತಿನಲ್ಲಿ ಜಗತ್ಕಲ್ಯಾಣಕ್ಕಾಗಿ ಮಹತ್ಕಾರ್ಯ ಸಾಧಿಸುತ್ತೇನೆ. ಕೀರ್ತಿಗಾಗಿ ಅಲ್ಲ, ಹೆಸರುಗಳಿಸುವುದಕ್ಕಾಗಿ ಅಲ್ಲ’’ ಎಂದು. ಇದು ಪ್ರವಾದಿಯ ನುಡಿಯಂತೆ ಸತ್ಯದ ಮುನ್ಸೂಚನೆಯಾಗಿತ್ತು ಎಂದು ಶಾಸ್ತ್ರಿಗಳು ಬರೆಯುತ್ತಾರೆ.

ಸಪ್ಟೆಂಬರ್‌ 16ರಂದು ಸ್ವಾಮಿಗಳು ‘ಸನಾತನ ಧರ್ಮ’ ಎಂಬ ವಿಷಯವನ್ನು ಕುರಿತು ಭಾಷಣ ಮಾಡಿದರು. ಆ ಭಾಷಣದಲ್ಲಿ ಆತ್ಮ, ಆತ್ಮನ ಧ್ಯೇಯ, ವೇದಾಂತದ ತತ್ವಗಳು, ಇವನ್ನು ವಿವರಿಸುತ್ತ, ‘ಆತ್ಮನು ಶುದ್ಧನೆಂದೂ, ಸ್ವತಂತ್ರನೆಂದೂ, ಪಂಚಮಹಾಭೂತಗಳಲ್ಲಿ ಪ್ರಕಟನಾದಾಗ, ಪರಿಮಿತನೂ ಬಹುರೂಪಿಯಾಗಿಯೂ ಕಾಣುತ್ತಾನೆ’ ಎಂದರು.

ಜೀವನದ ಗುರಿ ‘ಸರ್ವೈಕ್ಯತೆ’ ಎನ್ನುತ್ತ ‘ಆತ್ಮನನ್ನು ಯಾರೂ ಸೃಷ್ಟಿಸಿಲ್ಲ’ ಎಂದರು. ಹಿಂದೂ ಧರ್ಮದ ‘ಕರ್ಮಮೀಮಾಂಸೆ’ಯನ್ನು ವಿವರಿಸಿ, ಪೂರ್ವ ಕರ್ಮವು ಇಂದಿನ ಸ್ಥಿತಿಗೂ, ಇಂದಿನ ಕರ್ಮವು ಮುಂದಿನ ಸ್ಥಿತಿಗೂ ಹೇಗೆ ಕಾರಣವಾಗುವವು ಎಂಬ ಮಾತು ಮನದಟ್ಟಾಗುವಂತೆ ವಿವರಿಸಿದರು.

‘ನಾನು’, ‘ನನ್ನದು’ ಎಂಬ ಭಾವ ನಾಶವಾದಾಗ ದೈವತ್ವವು ಪ್ರಕಾಶವಾಗುವುದು ಎಂದು ಹೇಳಿದರು. ತಮ್ಮ ಭಾಷಣವನ್ನು ‘ಆನಂದದ ಮಕ್ಕಳೇ’ ಎಂದು ಆರಂಭಿಸಿ, ‘‘ಹಿಂದುವು ನಿಮ್ಮನ್ನು ಪಾಪಿಗಳು ಎಂದು ಕರೆಯಲು ಒಪ್ಪನು. ನಾವು ದೇವರ ಮಕ್ಕಳು. ಅಮೃತ ಸಮಾನವಾದ ಆನಂದಕ್ಕೆ ಭಾಗಿಗಳು, ಪವಿತ್ರಾತ್ಮರು ಮತ್ತು ಪರಿಪೂರ್ಣರು.

ಭೂಮಿಯಲ್ಲಿಯ ಶುದ್ಧಾತ್ಮರಾದ ನಾವು ಪಾಪಿಗಳೇನು? ಮಾನವನನ್ನು ಪಾಪಿ ಎಂದು ಕರೆಯುವುದೇ ಪಾಪ. ಸಿಂಹಗಳೇ ಎದ್ದೇಳಿ. ನೀವು ಕುರಿಗಳೆಂಬ ಭ್ರಾಂತಿಯನ್ನು ಹರಿದೊಗೆಯಿರಿ. ನೀವು ಅಮೃತಾತ್ಮರು ಸ್ವತಂತ್ರ ಶಕ್ತಿಗಳು.
ನಿತ್ಯನಿರಂಜನರು. ಪಂಚಭೂತಗಳು ನೀವಲ್ಲ. ಈ ಶರೀರಗಳೂ ನೀವಲ್ಲ. ಜಗತ್ತಿನ ಪ್ರತಿಯಾಂದು ಪರಮಾಣುವಿನಲ್ಲಿಯೂ ಪರಮಾತ್ಮನಿದ್ದಾನೆ. ಆತನ ಆಜ್ಞೆಯಿಂದ ಗಾಳಿ ಬೀಸುತ್ತದೆ, ಬೆಂಕಿ ಉರಿಯುತ್ತದೆ, ಮೋಡಗಳು ಮಳೆಗರೆಯುತ್ತವೆ. ಅವನು ಸರ್ವಾಂತರ್ಯಾಮಿಯಾಗಿದ್ದಾನೆ, ಶುದ್ಧನಾಗಿದ್ದಾನೆ, ನಿರಾಕಾರನಾಗಿದ್ದಾನೆ. ಸರ್ವಶಕ್ತನಾದ ಆತನು ಪರಮ ಕರುಣಾಳುವೂ ಆಗಿದ್ದಾನೆ.’’ ಎಂದು ಸನಾತನ ಧರ್ಮದ ದುಂದುಭಿಯನ್ನು ಮೊಳಗಿದರು

ಹಿಂದೂ ಧರ್ಮದ ಪ್ರಕಾರ ಮನುವಿನ ಸಂತಾನ ಮಾನವರು. ಕ್ರಿಸ್ತ ಧರ್ಮದ ಪ್ರಕಾರ ಆದಂ ಮತ್ತು ಈವ್‌ರ ಸಂತಾನ ಮಾನವಕುಲ. ಆದಿ ದಂಪತಿಗಳು ‘ಏಡನ್‌ ಗಾರ್ಡನ್‌’ದಲ್ಲಿ ಸುಖದಿಂದ ಇರುವಾಗ ದೇವರ ಆಜ್ಞೆಯನ್ನು ಮೀರಿ, ಸೈತಾನನ ಮಾತು ಕೇಳಿ, ನಿಷಿದ್ಧವಾದ ಹಣ್ಣನ್ನು ತಿಂದರು. ಆ ತಪ್ಪಿಗಾಗಿ ಶಪಿತರಾದರು, ಅವರ ಸಂತಾನ ಮೂಲಪಾಪ(ಒರಿಜಿನಲ್‌ ಸಿನ್‌)ದ ಫಲ. ಸಭಿಕರಲ್ಲಿ ತೊಂಬತ್ತು ಪಾಲು ಜನ ಕ್ರಿಸ್ತ ಧರ್ಮಾನುಯಾಯಿಗಳಾಗಿದ್ದರು. ಅಲ್ಲಿ ‘ಆನಂದದ ಮಕ್ಕಳೆ’ ಎಂದು ಸಂಬೋಧಿಸಲು, ‘ಮಾನವನನ್ನು ಪಾಪಿ ಎಂದು ಕರೆಯುವುದೇ ಪಾಪ’ ಎಂದು ಹೇಳಲು ಧೈರ್ಯ ಬೇಕಾಗುತ್ತದೆ, ಎಂಟೆದೆ ಬೇಕಾಗುತ್ತದೆ. ಆ ಸಾಹಸ ವಿವೇಕಾನಂದರು ಮಾಡಿದರು.

ಭಾರತ ದಾಸ್ಯದಲ್ಲಿತ್ತು. ಭಾರತದಲ್ಲಿಯ ಧರ್ಮ ಪ್ರಚಾರಕರು ಹಿಂದೂ ಧರ್ಮದ ದೂಷಣೆಯನ್ನು ಮಾಡುತ್ತಿದ್ದರು. ಅದಕ್ಕೆ ಉತ್ತರಿಸಲು, ಸನಾತನ ಧರ್ಮದ ಮೌಲ್ಯಗಳನ್ನು ಎತ್ತಿಹಿಡಿಯಲು, ಸ್ವಾಮಿಗಳಿಗೆ ಅಂತಾರಾಷ್ಟ್ರೀಯ ವೇದಿಕೆ ದೊರೆತಿತ್ತು. ಅದನ್ನವರು ಸಮರ್ಥವಾಗಿ ಬಳಸಿಕೊಂಡರು. ಮೂರ್ತಿಭಂಜಕರಿಗೆ ಉತ್ತರಿಸುತ್ತ ಅವರು ಹೇಳಿದರು, ‘‘ಮೂರ್ತಿಯು ಭಗವಂತನ ಸಂಕೇತವಾಗಿದೆ. ಸಂಕೇತಗಳು, ಪ್ರತಿಮೆಗಳು, ಪೂಜಾವಿಧಿಗಳು ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದವರಿಗೆ ಪ್ರಗತಿಯ ಮಜಲುಗಳನ್ನು ಏರಲು ಸಹಾಯಕವಾಗಿರುತ್ತವೆ. ಇವುಗಳ ಸಹಾಯದಿಂದ ಆಧ್ಯಾತ್ಮಿಕ ಶೈಶವದಿಂದ ಮಾನವ ಪೂರ್ಣತೆಯನ್ನು ಪಡೆಯುತ್ತಾನೆ. ಇದುವೆ ವೈವಿಧ್ಯದಲ್ಲಿಯ ಏಕತೆ’’ ಎಂದು.

ಸ್ವಾಮಿಗಳು ತಮ್ಮ ಭಾಷಣದ ಮುಕ್ತಾಯದಲ್ಲಿ ‘ವಿಶ್ವಧರ್ಮ’ದ ಸುಂದರ ಚಿತ್ರವನ್ನು ನೀಡಿದರು. ‘‘ಅದಕ್ಕೆ ದೇಶ ಕಾಲ ಮತ ಇವುಗಳ ಮಿತಿಯು ಇಲ್ಲ. ಅದು ಮಾನವರ ಎಲ್ಲ ಮನೋವೃತ್ತಿಗಳನ್ನು ಒಳಗೊಂಡು ಪ್ರತಿಯಾಬ್ಬನಿಗೂ ಮುಕ್ತಿಯ ಮಾರ್ಗವನ್ನು ತೋರುತ್ತದೆ’’ ಎಂಬ ದಿವ್ಯ ಸಂದೇಶವನ್ನು ಸಾರಿದರು.

ಅಮೇರಿಕೆಗೆ ವಿಶ್ವಧರ್ಮಕ್ಕಾಗಿ ದುಡಿಯಲು ಕರೆ ಇತ್ತರು. ‘‘ಅಂತಹ ಧರ್ಮವೊಂದನ್ನು ನೀವು ಕೊಡಿ ಎಲ್ಲ ರಾಷ್ಟ್ರಗಳು ನಿಮ್ಮನ್ನು ಅನುಸರಿಸುತ್ತವೆ. ಭಗವಂತನು ಎಲ್ಲ ಧರ್ಮಗಳಲ್ಲಿಯೂ ಇದ್ದಾನೆ ಎಂದು ಸಾರುವ ಪವಿತ್ರ ಕಾರ್ಯ ಅಮೇರಿಕಾ ದೇಶದ್ದಾಗಿದೆ. ... ಭಾರತೀಯರ ಬ್ರಹ್ಮನೂ, ಜೊರಾಷ್ಟ್ರೀಯರ ಅಹುರಮಜ್ದನೂ, ಬೌದ್ಧರ ಬುದ್ಧನೂ, ಯಹೂದ್ಯರ ಜೆಹೋವನೂ, ಕ್ರೈಸ್ತರ ಸರ್ವಪಿತನೂ ಆದ ಭಗವಂತನು ನಿಮ್ಮ ಈ ಉತ್ಕೃಷ್ಟ ಧ್ಯೇಯವು ಈಡೇರುವಂತೆ ನಿಮ್ಮನ್ನು ಅನುಗ್ರಹಿಸಲಿ’’ ಎಂದು ತಮ್ಮ ಭಾಷಣದ ಮಂಗಲ ಹಾಡಿದರು.

ಸ್ವಾಮಿಗಳು ಸಪ್ಟೆಂಬರ್‌ 19ರಂದು ‘ಹಿಂದೂ ಧರ್ಮ’ ಎಂಬ ಭಾಷಣವನ್ನು ಮಂಡಿಸಿದರು. ಇದು ಬಹಳ ಮಹತ್ವದ್ದು ಆಗಿದ್ದರಿಂದ ಅದರ ಬಗ್ಗೆ ಪ್ರತ್ಯೇಕವಾಗಿ ಬರೆಯುವ ಅವಶ್ಯಕತೆ ಇದೆ. 20ರಂದು ‘ಇಂದಿನ ಭಾರತಕ್ಕೆ ಧರ್ಮದ ಎರವಲು ಬೇಡ’ ಎಂಬ ವಿಷಯದ ಬಗ್ಗೆ ಮಾತಾಡಿದರು. ‘ಭಾರತದಲ್ಲಿ ಹಸಿದ ಬಡ ಜನರಿಗೆ ಅನ್ನ ಬೇಕು, ನಿಮ್ಮ ಧರ್ಮವಲ್ಲ’ ಎಂದರು. 22ರಂದು ‘ಸನಾತನ ಧರ್ಮ ಮತ್ತು ವೇದಾಂತ’ವನ್ನು ಕುರಿತು ಮಾತಾಡಿದರು. 25ರಂದು ‘ಹಿಂದೂ ಧರ್ಮದ ಸಾರ’ ಎಂಬ ವಿಷಯದ ಬಗ್ಗೆ ಮಾತಾಡಿದರು.

ಸಪ್ಟೆಂಬರ್‌ 26ರಂದು ‘ಹಿಂದೂ ಧರ್ಮದ ಪರಿಪೂರ್ಣತೆ ಬೌದ್ಧ ಮತ’ ಎಂಬ ವಿಷಯ ಆರಿಸಿ ಪ್ರಭಾವಿಯಾದ ಭಾಷಣ ಮಾಡಿದರು. ‘‘ನಾನು ಬೌದ್ಧನಲ್ಲ. ಚೈನಾ, ಜಪಾನ್‌, ಸಿಲೋನ್‌ ಬುದ್ಧನ ತತ್ವಗಳನ್ನು ಅನುಸರಿಸುತ್ತ ಬಂದಿವೆ. ಆದರೆ ಭಾರತ ಬುದ್ಧನನ್ನು ದೇವರ ಅವತಾರವೆಂದು ಪೂಜಿಸುತ್ತಿದೆ. ಆದ್ದರಿಂದ ನಾನು ಬೌದ್ಧಮತವನ್ನು ಟೀಕಿಸುವುದಿಲ್ಲ. ಹಿಂದೂಧರ್ಮ ಮತ್ತು ಬೌದ್ಧ ಮತದ ಸಂಬಂಧಗಳು ಜುಡಾಯಿಸಂ ಮತ್ತು ಕ್ರಿಸ್ತ ಧರ್ಮಗಳ ನಡುವಿನ ಸಂಬಂಧದಂತೆ ಇವೆ. ಏಸೂ ಕ್ರಿಸ್ತ ಮೂಲತಃ ಜ್ಯೂ ಆಗಿದ್ದ. ಶಾಕ್ಯಮುನಿ (ಬುದ್ಧ) ಮೊದಲು ಹಿಂದುವೇ ಆಗಿದ್ದ. ಜ್ಯೂ ಜನರು ಕ್ರಿಸ್ತನನ್ನು ವಿರೋಧಿಸಿದರು, ಅವನನ್ನು ಶಿಲುಬೆಗೇರಿಸಿದರು. ಆದರೆ ಹಿಂದುಗಳು ಶಾಕ್ಯಮುನಿಯನ್ನು ಸ್ವೀಕರಿಸಿದರು, ದೇವರನ್ನು ಮಾಡಿ ಪೂಜಿಸಿದರು.

ಕ್ರಿಸ್ತ ಜ್ಯೂ ಧರ್ಮವನ್ನು ನಾಶಮಾಡಲು ಹೊರಟಿರಲಿಲ್ಲ. ಅವನನ್ನು ಜ್ಯೂ ಜನ ಅರ್ಥಮಾಡಿಕೊಳ್ಳಲಿಲ್ಲ. ಶಾಕ್ಯಮುನಿ ಹಿಂದು ಧರ್ಮವನ್ನು ನಾಶಮಾಡಲು ಬರಲಿಲ್ಲ, ಅದನ್ನು ಸುಧಾರಿಸಲು ಬಂದ. ಅವನನ್ನು ಹಿಂದುಗಳು ಅರ್ಥಮಾಡಿಕೊಳ್ಳಲಿಲ್ಲ. ...ಬುದ್ಧನ ಅನುಯಾಯಿಗಳಲ್ಲಿ ಬ್ರಾಹ್ಮಣರೂ ಇದ್ದರು. ಬುದ್ಧನ ಕಾಲಕ್ಕೆ ಸಂಸ್ಕೃತ ಜನಸಾಮಾನ್ಯರ ಆಡುಭಾಷೆಯಾಗಿರಲಿಲ್ಲ. ಆದ್ದರಿಂದ ಅವನು ಜನರ ಭಾಷೆಯಲ್ಲಿ (ಪಾಲಿ) ಬೋಧಿಸಿದ. ಬುದ್ಧನ ಬ್ರಾಹ್ಮಣ ಶಿಷ್ಯರು ಅವನ ಸಂದೇಶವನ್ನು ಸಂಸ್ಕೃತದಲ್ಲಿ ಅನುವಾದಿಸಲು ಇಚ್ಛಿಸಿದಾಗ ಬುದ್ಧ ಬೇಡ ಎಂದ. ‘ನನ್ನ ಮಾತು ಬಡವರಿಗಾಗಿ ಇವೆ, ಸಾಮನ್ಯರಿಗಾಗಿ ಇವೆ, ಅವು ದೇಶೀ ಭಾಷೆಯಲ್ಲಿಯೇ ಇರಲಿ’ ಎಂದಿದ್ದ. ..ಒಬ್ಬ ಗ್ರೀಕ್‌ ಇತಿಹಾಸಜ್ಞ ಭಾರತದ ಬಗ್ಗೆ ಬರೆಯುತ್ತ ಹೇಳುತ್ತಾನೆ ‘ಅಸತ್ಯ ಮಾತಾಡುವ ಹಿಂದು (ಆ ಕಾಲದಲ್ಲಿ) ಇರಲಿಲ್ಲ, ಚರಿತ್ರಹೀನಳಾದ ಹಿಂದೂ ಸ್ತ್ರೀ ಇರಲಿಲ್ಲ’ ಎಂದು. ... ಬುದ್ಧಮತವಿಲ್ಲದೆ ಹಿಂದು ಧರ್ಮ ಬದುಕುವಂತಿಲ್ಲ, ಹಿಂದು ಧರ್ಮವಿಲ್ಲದೇ ಬೌದ್ಧ ಮತಕ್ಕೆ ಉಳಿಗಾಲವಿಲ್ಲ. .. ಇವೆರಡೂ ಬೇರೆಯಾದಾಗಲೇ ಭಾರತದ ಅವನತಿಯ ಕಾಲ ಆರಂಭಗೊಂಡಿತು. ಈ ಕಾರಣದಿಂದ ಭಾರತದಲ್ಲಿ ಮೂರುನೂರು ದಶಲಕ್ಷ ಭಿಕ್ಷುಕರಿದ್ದಾರೆ, ಭಾರತಕ್ಕೆ ದಾಸ್ಯ ಒದಗಿಬಂದಿದೆ...’’ ಎಂದಿದ್ದರು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dr.G.V.Kulakarni writes about the thoughts of Swami Vivekananda about the interdependence of Buddhism and Hinduism.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more